ಕುಮಾರವ್ಯಾಸ ಬಾರತ ಓದು: ಆದಿಪರ‍್ವ – ಹಸ್ತಿನಾವತಿಗೆ ಕುಂತಿ ಮತ್ತು ಪಾಂಡವರನ್ನು ಕರೆತಂದಿದ್ದು – ನೋಟ – 13

ಹಸ್ತಿನಾವತಿಗೆ ಕುಂತಿ ಮತ್ತು ಪಾಂಡವರನ್ನು ಕರೆತಂದಿದ್ದು
(ಆದಿಪರ್ವ: ಸಂಧಿ: 5 ಪದ್ಯ: 26 ರಿಂದ 32)
ಪಾತ್ರಗಳು
ಮುನಿಗಳು: ಶತಶ್ರುಂಗ ಪರ್ವತ ಪ್ರಾಂತ್ಯದ ಆಶ್ರಮವಾಸಿಗಳು
ವ್ಯಾಸ: ಪರಾಶರ ಮುನಿ ಮತ್ತು ಯೋಜನಗಂದಿಯ ಮಗ.
ಯೋಜನಗಂದಿ: ಶಂತನು ಮಹಾರಾಜನ ಹೆಂಡತಿ. ವ್ಯಾಸನ ತಾಯಿ
*** ಹಸ್ತಿನಾವತಿಗೆ ಕುಂತಿ ಮತ್ತು ಪಾಂಡವರನ್ನು ಕರೆತಂದಿದ್ದು ***
ಮುನಿಗಳು: (ತಮ್ಮ ತಮ್ಮಲ್ಲಿಯೇ)
ಅರಸನು ಅಪಗತನಾದನು… ಆ ನೃಪನ ಅರಸಿ ಬಾಲಕಿ… ಮಕ್ಕಳೈವರು ಭರತ
ಕುಲಜರು… ನಾವು ತಪಸಿಗಳು ಇರ್ಪುದು ಅರಣ್ಯ… ಆ ರಾಕ್ಷಸರು ಅರಿಗಳು… ನಾವು
ಇನ್ನು ಇರಿಸುವುದು ಮತವಲ್ಲ… ಹಸ್ತಿನಪುರದೊಳು ಒಪ್ಪಿಸಿಬಹುದು ಮತ.
(ಎಂದುದು ಮುನಿಸ್ತೋಮ… ಕುಂತೀದೇವಿ ಸಹಿತ ಆ ನಂದನರನು ಐವರನು
ಮುನಿಗಳು ಇಭಪುರಿಗಾಗಿ ತಂದರು… ಭೀಷ್ಮಾದಿಗಳಿಗೆ ಈ ಹದನ ಮುಂದೆ
ಸೂಚಿಸಲು… ಉತ್ಸವದಿ ಅನಿಬರು ಇದಿರ್ವಂದರು… ಅಂದು ಭೀಷ್ಮ
ಶುಭಮುಹೂರ್ತದೊಳು ನಗರಿಯ ಪರಿತೋಷದಲಿ ಹೊಗಿಸಿದನು… ತಪೋಧನ
ನಿವಹ ಇವರ ಜನನ ಕ್ರಮವನು… ಆ ಪಾಂಡುವಿನ ವಿಕ್ರಮವನು ಕೊಂಡಾಡಿದುದು…
ಅವರಿಗೆ ಬಳಿಕಿನ ಮರಣ ಸಂಗತಿಯ… ಅವನಿಪನ ಸಂಸ್ಕಾರ… ಮಾದ್ರೀ ಯುವತಿ
ಸಹಗಮನ… ಊರ್ಧ್ವ ದೇಹಿಕ ವಿವಿಧ ಕೃತ್ಯವನು… ಈ ಪ್ರಪಂಚವನು ಅರುಹಿದರು…
ಮುನಿ… ಬಳಿಕ ತಜ್ಜನಪ ವೃತ್ತಾಂತವನು ಜನಜನಿತ ವಿವರಿಸೆ, ಶೋಕರಸ ಜಲಧಿ
ಉಬ್ಬಿ ಹರಿದುದು… ಜನಪ ಧೃತರಾಷ್ಟ್ರಾದಿ ಬಾಂಧವಜನ ಪುನಃ ಸಂಸ್ಕಾರದಲಿ
ಭೂಪನನು ದಹಿಸಿದರು… ಅಲ್ಲಿ ಮಗುಳು ಊರ್ಧ್ವ ದೇಹಿಕವಾಯ್ತು.
ಅರಸ ಕೇಳೈ, ಪಾರಾಶರವ್ರತಿಪ ಭೀಷ್ಮ ಧೃತರಾಷ್ಟ್ರರನು ಬೋಧಿಸಿ ಬಹಳ ಶೋಕ
ಜ್ವರಕೆ ಬಿಡುಗಡೆ ಮಾಡಿದನು… ಯೋಜನಗಂಧಿಯನು ಕರೆದು…)
ವ್ಯಾಸ: ತಾಯೆ, ನೀವು ಇರಲು ಬೇಡೌ… ನಿಮ್ಮ ಈ ಭರತವಂಶದೊಳು ಒಗೆದ ಕಿಚ್ಚು… ನೃಪಕುಲವ
ಉರುಹುವುದು… ಹೇಳಬಾರದು ಮುಂದಣದು ದುಷ್ಕಾಲವು… ಇಂದಿಗೆ ನಾಳೆ…
ನಾಳೆಗೆ… ನಾಳೆ ಬೆಟ್ಟಿತು… ಕಾಲ ವಿಷಮವು… ವರ್ಣಧರ್ಮಾಶ್ರಮದ ನೆಲೆಹೋಯ್ತು… ಕೌರವ
ಕ್ಷಿತಿಪಾಲ ಪಾಂಡು ಕುಮಾರರಲಿ ಕೈಮೇಳವಿಸುವುದು… ತಾಯೆ, ನೀವು ಬಿಜಯಂಗೈಯಿ.
(ಎಂದ. ಎನಲು ಯೋಜನಗಂಧಿ…)
ಯೋಜನಗಂಧಿ: ನಿಜ ನಂದನನ ನುಡಿಯೇ ವೇದಸಿದ್ಧವಿದು.
(ಎನುತ ಸೊಸೆಯರು ಸಹಿತ ವರ ತಪೋವನಕೆ ನಡೆದಳು… ಅತ್ತಲು ಮುನಿಪನು
ಬದರಿಕಾ ನಂದನಕೆ ಮರಳಿದನು… ಇತ್ತ ಗಂಗಾತನುಜ ಅಖಿಳ ಪಾಂಡವ ಕೌರವ
ವ್ರಜವ ಸಲಹಿದನು.)
ಪದ ವಿಂಗಡಣೆ ಮತ್ತು ತಿರುಳು
ಅಪಗತ=ಸಾವಿಗೀಡಾದ/ತೀರಿಹೋದ; ಇಭಪುರಿ=ಹಸ್ತಿನಾವತಿ; ಹದನ=ಸ್ತಿತಿ/ಅವಸ್ತೆ/ರೀತಿ; ಪರಿತೋಷ=ಸಮಾದಾನ ; ಹೊಗಿಸು=ಪ್ರವೇಶಿಸು/ಒಳಸೇರು ; ತಪೋಧನ=ತಪಸ್ಸನ್ನೇ ಸಂಪತ್ತನ್ನಾಗಿ ಹೊಂದಿರುವ ಮುನಿ ; ನಿವಹ=ಸಮೂಹ/ಗುಂಪು ; ಊರ್ಧ್ವ=ಮೇಲುಗಡೆ/ಮೇಲಿನ ಬಾಗ;
ಊರ್ಧ್ವ ದೇಹಿಕ ವಿವಿಧ ಕೃತ್ಯ=ಸತ್ತ ವ್ಯಕ್ತಿಯ ಶವಸಂಸ್ಕಾರವನ್ನು ಸಂಪ್ರದಾಯಕ್ಕೆ ಅನುಗುಣವಾಗಿ ಬಹುಬಗೆಯ ಆಚರಣೆಗಳಿಂದ ಮಾಡಿ, ಅವನ/ಅವಳ ಆತ್ಮವನ್ನು ಬೂಮಿಯ ಮೇಲಿರುವ ದೇವಲೋಕಕ್ಕೆ ಕಳುಹಿಸಿಕೊಡುವ ಕ್ರಿಯೆ. ಇಂತಹ ನಂಬಿಕೆಯು ಜನಮನದಲ್ಲಿದೆ ; ಜನಜನಿತ=ಜನರೆಲ್ಲರಿಗೂ ತಿಳಿಯುವಂತೆ ; ಜಲಧಿ=ಕಡಲು/ಸಮುದ್ರ ;
ಈ ಪ್ರಪಂಚವನು ಅರುಹಿದರು=ಆಶ್ರಮದಲ್ಲಿ ಪಾಂಡುರಾಜನಿಗೆ ಆದ ದುರಂತದ ಸಂಗತಿಗಳೆಲ್ಲವನ್ನೂ ಹಸ್ತಿನಾವತಿಯಲ್ಲಿದ್ದ ರಾಜ ಮನೆತನದವರು ಮತ್ತು ಪ್ರಜೆಗಳು ತಿಳಿಯುವಂತೆ ಮುನಿಗಳು ಸವಿಸ್ತಾರವಾಗಿ ಹೇಳಿದರು; ವ್ರತಿಪ=ವ್ರತವನ್ನು ಪಾಲಿಸುವವನು/ಮುನಿ;
ಪಾರಾಶರವ್ರತಿಪ=ಪರಾಶರ ಮುನಿ ಮತ್ತು ಮತ್ಸ್ಯಗಂದಿಯ ಮಗನಾದ ವೇದವ್ಯಾಸ; ಒಗೆ=ಹುಟ್ಟು ; ಉರುಹು=ಸುಡು; ಬೆಟ್ಟಿತು=ಕ್ರೂರವಾದುದು/ಉಗ್ರವಾದುದು; ವರ‍್ಣದರ‍್ಮ+ಆಶ್ರಮ;
ವರ್ಣಧರ್ಮ=ಸಮಾಜದಲ್ಲಿರು ಜನ ಸಮುದಾಯವು “ಬ್ರಾಹ್ಮಣ – ಕ್ಶತ್ರಿಯ – ವೈಶ್ಯ – ಶೂದ್ರ” ಎಂಬ ನಾಲ್ಕು ಬಗೆಗಳಲ್ಲಿ ವಿಂಗಡಣೆಗೊಂಡು, ಆಯಾಯ ವರ‍್ಣದವರು ತಮ್ಮ ಪಾಲಿನ ಕೆಲಸಗಳನ್ನು ಆಚರಿಸುತ್ತಿರುವುದು ; ಆಶ್ರಮಧರ್ಮ=ಬ್ರಹ್ಮಚರ‍್ಯ – ಗ್ರುಹಸ್ತ – ವಾನಪ್ರಸ್ತ – ಸನ್ಯಾಸ ಎಂಬ ನಾಲ್ಕು ಬಗೆಯ ಜೀವನದ ಹಂತಗಳು; ಕ್ಷಿತಿಪಾಲ=ಬೂಮಿಯನ್ನು ಪಾಲಿಸುವ ರಾಜ ; ಕೈಮೇಳವಿಸು=ಹೋರಾಡು/ ಕಾಳೆಗ ಮಾಡು ; ಬಿಜಯಂಗೈಯಿ=ಇಲ್ಲಿಂದ ಹೊರಡಿ ; ವ್ರಜ=ಸಮೂಹ/ಗುಂಪು;
ಹೊಸಗನ್ನಡ ಗದ್ಯರೂಪ
ಒಂದು ದಿನ ಆಶ್ರಮದ ಮುನಿಗಳು ಒಟ್ಟುಗೂಡಿ ಆಲೋಚಿಸಿದರು. “ಅರಸನು ತೀರಿಹೋದನು. ಆತನ ಅರಸಿ ಚಿಕ್ಕವಳು. ಅಯ್ದು ಮಕ್ಕಳು ಬರತವಂಶಕ್ಕೆ ಸೇರಿದವರು. ತಪಸ್ವಿಗಳಾದ ನಾವು ಇರುವ ನೆಲೆ ಕಾಡು. ರಕ್ಕಸರು ಹಗೆಗಳು. ನಾವು ಇವರನ್ನು ಇಲ್ಲಿ ಇರಿಸಿಕೊಳ್ಳುವುದು ಸರಿಯಲ್ಲ. ಹಸ್ತಿನಾಪುರಕ್ಕೆ ಕರೆದುಕೊಂಡು ಹೋಗಿ ಒಪ್ಪಿಸುವುದು ಸರಿ” ಎಂದು ಮುನಿಗಳ ಸಮೂಹ ನಿಶ್ಚಿಯಿಸಿತು.
ಹೀಗೆ ನಿಶ್ಚಯ ಮಾಡಿ, ಕುಂತೀದೇವಿ ಸಹಿತ ಆ ಅಯ್ದು ಮಂದಿ ಮಕ್ಕಳನ್ನು ಮುನಿಗಳು ಹಸ್ತಿನಾಪುರಕ್ಕೆ ಕರೆದುಕೊಂಡು ಬಂದರು. ಬೀಶ್ಮರೇ ಮೊದಲಾದವರಿಗೆ ಮುಂಚಿತವಾಗಿ ತಾವು ಬರುತ್ತಿರುವ ಸೂಚನೆಯನ್ನು ಕೊಡಲು, ಅವರೆಲ್ಲರೂ “ಕಾಡಿಗೆ ಹೋಗಿದ್ದ ಪಾಂಡು ಕುಟುಂಬ ಬರುತ್ತಿದೆ“ ಎಂದುಕೊಂಡು ಆನಂದದಿಂದ ಎದುರುಗೊಳ್ಳಲು ಬಂದರು. ಬೀಶ್ಮನು ಸಡಗರದಿಂದ ಒಳ್ಳೆಯ ಮುಹೂರ‍್ತದಲ್ಲಿ ಹಸ್ತಿನಾವತಿಯ ಪಟ್ಟಣಕ್ಕೆ ಅವರೆಲ್ಲರನ್ನೂ ಪ್ರವೇಶ ಮಾಡಿಸಿದನು.
ಈ ಮಕ್ಕಳ ಹುಟ್ಟಿನ ರೀತಿಯನ್ನು… ಪಾಂಡುರಾಜನ ಪರಾಕ್ರಮವನ್ನು ರಿಸಿಗಳ ಸಮೂಹ ಹೊಗಳಿತು. ಅನಂತರ ಪಾಂಡುರಾಜನಿಗೆ ಬಂದ ಮರಣದ ಸಂಗತಿಯನ್ನು… ಪಾಂಡು ಮಹಾರಾಜನ ಶವಸಂಸ್ಕಾರ… ಮಾದ್ರಿಯ ಸಹಗಮನ… ಉತ್ತರಕ್ರಿಯೆಗಳನ್ನು ಮಾಡಿದ ಸಂಗತಿಯನ್ನು ವಿವರವಾಗಿ ರಾಜನಿಗೆ ಮತ್ತು ಗುರುಹಿರಿಯರಿಗೆ ಮುನಿಗಳು ವರದಿಮಾಡಿದರು.
ಎಲ್ಲವನ್ನೂ ತಿಳಿಸಿ, ಅವರ ವಶಕ್ಕೆ ಕುಂತಿ ಮಕ್ಕಳನ್ನು ಒಪ್ಪಿಸಿ, ಮರುಗಳಿಗೆಯಲ್ಲಿಯೇ ಮುನಿಗಳು ಆಶ್ರಮಕ್ಕೆ ಮರಳಿದರು. ಪಾಂಡು ಮಹಾರಾಜನ ಮರಣದ ಸುದ್ದಿಯು ಜನತೆಗೆಲ್ಲ ತಿಳಿದು ಜನಮನದಲ್ಲಿ ಶೋಕದ ಕಡಲು ಉಕ್ಕಿಹರಿಯಿತು. ದ್ರುತರಾಶ್ಟ್ರ ಮಹಾರಾಜ ಮೊದಲಾದ ರಕ್ತಸಂಬಂದಿಗಳೆಲ್ಲರೂ ಮತ್ತೊಮ್ಮೆ ಪಾಂಡುರಾಜನ ಹೆಸರಿನಲ್ಲಿ ಉತ್ತರಕ್ರಿಯಾದಿಗಳನ್ನು ಮಾಡಿದರು.
ಜನಮೇಜಯ ಮಹಾರಾಜನೇ ಕೇಳು, ವ್ಯಾಸ ಮುನಿಯು ಅಲ್ಲಿಗೆ ಬಂದು ಬೀಶ್ಮ ದ್ರುತರಾಶ್ಟ್ರರಿಗೆ ತಿಳಿಯ ಹೇಳಿ, ಅವರ ಶೋಕಜ್ವರವನ್ನು ನಿವಾರಣೆ ಮಾಡಿದನು. ಬಳಿಕ ತಾಯಿ ಯೋಜನಗಂದಿಯನ್ನು ವ್ಯಾಸನು ಕರೆದು “ತಾಯೇ, ನಿಮ್ಮ ಈ ಬರತವಂಶದಲ್ಲಿ ಹುಟ್ಟಿದ ಕಿಚ್ಚು ರಾಜಕುಲವನ್ನೇ ಸುಡುವುದು… ಏನೇನಾಗುತ್ತದೆಂದು ಹೇಳಬಾರದು… ಮುಂದಿನದು ಕೆಟ್ಟ ಕಾಲ… ಇಂದಿಗೆ ನಾಳೆ… ನಾಳೆಗೆ ನಾಳೆ ಕ್ರೂರವಾಗುತ್ತದೆ… ವರ‍್ಣದರ‍್ಮ… ಆಶ್ರಮದರ‍್ಮಗಳ ಆಚರಣೆಗಳೆಲ್ಲವೂ ಇಲ್ಲವಾದವು… ದ್ರುತರಾಶ್ಟ್ರನ ಮಕ್ಕಳು ಮತ್ತು ಪಾಂಡುವಿನ ಮಕ್ಕಳ ನಡುವೆ ಕಾದಾಟ ಉಂಟಾಗುವುದು… ತಾಯೇ, ನೀವು ಹಸ್ತಿನಾವತಿಯಲ್ಲಿರುವುದು ಬೇಡ… ನೀವು ಇಲ್ಲಿಂದ ಹೊರಡಿ“ ಎಂದನು.
ಆ ಮಾತು ಕೇಳಿದ ಯೋಜನಗಂದಿಯು “ತನ್ನ ಮಗನ ನುಡಿಯೇ ವೇದವಾಕ್ಯ” ಎಂದು ನುಡಿದು, ತನ್ನ ಇಬ್ಬರು ಸೊಸೆಯರ ಸಹಿತ ತಪೋವನಕ್ಕೆ ನಡೆದಳು. ಅತ್ತ ವ್ಯಾಸಮುನಿ ಬದರಿಕಾಶ್ರಮಕ್ಕೆ ಹಿಂತಿರುಗಿದನು. ಇತ್ತ ಗಂಗಾಪುತ್ರನಾದ ಬೀಶ್ಮನು ಸಮಸ್ತ ಪಾಂಡವ ಹಾಗೂ ಕೌರವ ಸಮೂಹದ ಹೊಣೆಯನ್ನು ಹೊತ್ತು ಸಲಹತೊಡಗಿದನು.
(ಚಿತ್ರ ಸೆಲೆ: quoracdn.net)

ಇತ್ತೀಚಿನ ಅನಿಸಿಕೆಗಳು