ಕುಮಾರವ್ಯಾಸ ಬಾರತ ಓದು – ಆದಿಪರ‍್ವ – ದ್ರುಪದನ ಮಾನಹಾನಿ – ನೋಟ – 16

– ಸಿ. ಪಿ. ನಾಗರಾಜ.

ದ್ರುಪದನ ಮಾನಹಾನಿ

(ಆದಿಪರ್ವ: ಸಂಧಿ: 7 ಪದ್ಯ: 59 ರಿಂದ 69)

ಪಾತ್ರಗಳು:

ದ್ರೋಣ: ಹಸ್ತಿನಾವತಿಯಲ್ಲಿ ಕೌರವರಿಗೆ ಮತ್ತು ಪಾಂಡವರಿಗೆ ಶಸ್ತ್ರ ವಿದ್ಯೆ ಮತ್ತು ಶಾಸ್ತ್ರ ವಿದ್ಯೆಯನ್ನು

ಹೇಳಿಕೊಡುತ್ತಿರುವ ಗುರು.

ದ್ರುಪದ: ಪಾಂಚಾಲ ದೇಶದ ರಾಜ. ಚಿಕ್ಕಂದಿನಲ್ಲಿ ದ್ರೋಣ ಮತ್ತು ದ್ರುಪದ-ಇಬ್ಬರೂ ಒಂದೇ

ಗುರುಕುಲದಲ್ಲಿ ವಿದ್ಯೆಯನ್ನು ಕಲಿತಿದ್ದರು.

ಪಾಂಡವರು: ಧರ್ಮರಾಯ—ಭೀಮ—ಅರ್ಜುನ—ನಕುಲ—ಸಹದೇವ.

ಕೌರವರು: ದುರ್ಯೋಧನ ಮತ್ತು ತಮ್ಮಂದಿರು.

*** ದ್ರುಪದನ ಮಾನಹಾನಿ ***

ಬಳಿಕಲಾ ಮರುದಿವಸದಲಿ ಗುರು ಗರುಡಿಯ ನಿಳಯದಲಿ ಕುಳ್ಳಿರ್ದು… ಮಕ್ಕಳುಗಳೆಲ್ಲರ ಕರೆಸಿ… ಕುಮಾರರಿಗೆ ನುಡಿದನು.

ದ್ರೋಣ: ಏನಿರೈ ಕುರುವಂಶ ನಳಿನೀ ಭಾನುಗಳಿರ… ವಿದಗ್ಧ ಜನ ಸುರಧೇನುಗಳಿರಾ… ಆವು ಇಂದು

ನಿಮ್ಮಲಿ ದಕ್ಷಿಣಾರ್ಥಿಗಳು… ಏನನು ಈವಿರಿ… ನಮಗೆ ಕೊಡಲು ಸಘಾನರೈ… ಕೊಡಲಾಪ

ಸತ್ವ ನಿಧಾನವುಂಟೇ ಹೇಳಿ.

(ಎಂದನು ದ್ರೋಣನು ಅನಿಬರಿಗೆ…)

ಕುಮಾರಕರು: ಆವುದನು ಬಯಸುವಿರಿ… ನಿಮ್ಮಡಿ ಯಾವ ಕಾರ್ಯವ ಬೆಸಸಿದುದ ತಂದು

ಈವೆವು… ಇದಕೆ ವಿಚಾರವೇನು.

(ಎಂದರು… ಮುನಿಗೆ ತೀವಿದ ಅಗ್ಗದ ಹರುಷರಸದಲಿ ಭಾವ ನೆನೆದುದು… ವರ

ಶಿಷ್ಯಾವಳಿಗೆ ನಿಜಾಭಿಪ್ರಾಯ ಸಂಗತಿಯ ನುಡಿದನು.)

ದ್ರೋಣ: ಕೇಳಿ ಬಲ್ಲಿರೆ… ಗಂಗೆಯ ಉತ್ತರ ಕೂಲದಲಿ ಪಾಂಚಾಲದೇಶ… ಅಲ್ಲಿಗೆ ದ್ರುಪದನು ಎಂಬವನು

ನೃಪಾಲನು… ಅತುಳ ಭುಜಬಲನು… ಆಳುತನದ ಅಂಗದಲಿ ಪರರಿಗೆ ಸೋಲನು… ಅವನ

ಒಟ್ಟೈಸಿ… ದ್ರುಪದ ನೃಪಾಲಕನ ಪಿಡಿದು ಒಪ್ಪಿಸಿದರೆ… ಎಮಗೆ ಪರಿತೋಷವಹುದು.

ಕೌರವರು: ಐಸಲೇ… ಗುರುದಕ್ಷಿಣಾರ್ಥವಿದು ಏಸು ಘನ… ತಂದು ಈವೆವು.

(ಎಂದು ಕೌರವರು ಉಪಹಾಸದಲಿ ಕೈ ವೊಯ್ದು ತಮ್ಮೊಳು ನಗುತ… ಆ ಸುಯೋಧನ

ಕರ್ಣಸಹಿತ ಮಹೀಶ ತನುಜರು ಬೀಳುಕೊಂಡರು… ಪಾಂಡುಸುತ ಕೌರವ ಕುಮಾರರಿಗೆ

ವಾಸಿ ಬಿದ್ದುದು… ರಾಯದಳ ಪಾಂಚಾಲದೇಶಕೆ ಧಾಳಿಯಿಟ್ಟುದು… ಊರನು ಉರವಣಿಸಿ

ಚೂಳಿಕೆಯಲಿ ಮುಂದೆ ಹೊಕ್ಕುದು… ಸುಯೋಧನಾದಿಗಳು ಧೂಳಿಗೋಟೆಯ

ಕೊಂಡು… ಇವರು ರಾಜಾಲಯಕೆ ಬರೆ… ದ್ರುಪದನ ಅನುಜರು ಕೌರವೇಂದ್ರನ ಬಲವ

ಬರಿಕೈದು ಸೋಲಿಸಿದರೈ… ಪುರದ ಹೊರ ಬಾಹೆಯಲಿ ಗುರುಸಹಿತಲು ತಾವು ಐವರು

ಮಹಾ ಸನ್ನಾಹ ಚಾಪಸ್ಫುರಿತ ತೂಣೀಬದ್ಧ ಕಂಪಿತ ಖಡ್ಗ ಪಾಣಿಗಳು ಇವರಿದ್ದರು… ಇತ್ತಲು

ಪುರಜನಂಗಳ ಮುಸಲ ಹತಿಯಲಿ ಕೌರವೇಂದ್ರನ ದಳ ವಿಘಾತಿಯಲಿ ಮುರಿದು

ಬಂದುದು… ಪಾಂಡುಸುತರು ಅಭಿಜಾತ ಸಮರವನು ಆತುಕೊಂಡರು.)

ಪಾಂಡವರು: ಇವರ ಕೈಯಲಿ ಮಾತು ಹಲವಿಲ್ಲ.

(ಎನುತ ಹೊಕ್ಕರು.)

ಪಾಂಡವರು: ಘಾತಿಗೆ ಆನುವರಿಲ್ಲ ದೊರೆ…

(ಎನುತ… ಕೊಂದು ಪರಬಲವ…  ಆತನನು ಮುತ್ತಿದರು.)

ಪಾಂಡವರು: ಗುರುಗಳಿಗೆ ಈತನೇ ದಕ್ಷಿಣೆ…

(ಎನುತ ಮಹೀಪತಿಯ ಹಿಡಿದರು… ಕೊಂಡು ಬಂದರು… ದ್ರೋಣನ ಇದಿರಲಿ

ದಿಂಡುಗೆಡಹಿದರು… ಈತನನು ಕೈಕೊಂಡನು.)

ದ್ರೋಣ; ಎಲವೋ, ದ್ರುಪದ ಸಖ… ಪೂರ್ವವನು ನೆನೆ.

(ಎನುತ… ಪಾಂಡು ಕುಮಾರ ಕಡೆಗೆ ತಿರುಗಿ ನೋಡುತ್ತ…)

ಭಂಡನು ಇವನನು ಸಾಕು ಬಿಡಿ… ಸಲೆ ಚಂಡಿಯಾದನು… ದರ್ಪವಿಷ ಮುಂಕೊಂಡ

ಮೂರ್ಛಿತನ ಏನ ಮಾಡುವೆನು.

(ಎಂದನಾ ದ್ರೋಣ… ಈಗ ಸೆರೆಯಾಳಾಗಿರುವ ದ್ರುಪದನನ್ನು ಉದ್ದೇಶಿಸಿ…)

ಎಲವೊ ಜೀವದಾನವನು ಕೊಟ್ಟೆನು… ಅಳಲು ನಿನಗೇಕೆ… ಇನಿತು ಸಾಹಸದ ಅಳವಿಯಲಿ

ನೀ ಹಗೆಯನು ನೆರಹು… ಕಳೆದು ಕೊಟ್ಟೆನು..ಭಂಡ ಹೋಗು… ನಿನ್ನ ರಾಜ್ಯದ

ನೆಲದೊಳು ಅರ್ಧವನು ಇತ್ತು ನೀ ನಡೆ.

(ಎಂದು ಒಡಬಡಿಸಿ ಬಳಿಕಲು… ಆ ದ್ರೋಣ ದ್ರುಪದನ ಬಿಟ್ಟನು… ಅರಸ ಕೇಳೈ,

ದ್ರುಪದನು ಈ ಪರಿ ಪರಿಭವಕೆ ಗುರಿಯಾಗಿ ತನ್ನಯ ಪುರವ ಹೊಗದೆ… ಗಂಗಾತೀರ

ದೇಶದಲಿ ಐತಂದು…  ಪುತ್ರಕಾಮ್ಯಾಧ್ವರವ ವಿರಚಿಸಲು… ಆಗ ನಾನಾ ಅಗ್ರಹಾರದಲಿ

ಸತ್ವೋತ್ಕರುಷವಂತರನು ಅರಸಿದನು.)

 

ಪದ ವಿಂಗಡಣೆ ಮತ್ತು ಪದಗಳ ತಿರುಳು

ಬಳಿಕಲ್+ಆ; ಗರುಡಿಯ ನಿಳಯ=ಗರುಡಿ ಮನೆ/ಶಸ್ತ್ರಾಸ್ತ್ರಗಳ ಪ್ರಯೋಗದ ವಿದ್ಯೆಯನ್ನು ಕಲಿಸುವ ಮತ್ತು ಕುಸ್ತಿ ಮುಂತಾದ ಕಾದಾಟದ ತರಬೇತಿಯನ್ನು ಕೊಡುವ ನೆಲೆ; ಏನಿರೈ=ಏನ್ರಪ್ಪಾ… ಇತರರನ್ನು ಕುರಿತು ಮಾತನಾಡಿಸುವಾಗ ಬಳಸುವ ಪದ; ನಳಿನೀ=ತಾವರೆ; ಭಾನು=ಸೂರ್‍ಯ; ಕುರುವಂಶ ನಳಿನೀ ಭಾನುಗಳಿರ=ಕುರುವಂಶದ ತಾವರೆಯನ್ನು ಅರಳಿಸುವಂತಹ ಸೂರ್‍ಯರೇ/ಕುರುವಂಶಕ್ಕೆ ಒಳ್ಳೆಯ ಹೆಸರನ್ನು ತರುವಂತಹ ವ್ಯಕ್ತಿಗಳೇ; ವಿದಗ್ಧ=ತೊಂದರೆಗೆ ಒಳಗಾದ/ನೋವಿಗೆ ಗುರಿಯಾದ; ವಿದಗ್ಧ ಜನ=ಕಶ್ಟಕ್ಕೆ ಸಿಲುಕಿದವರು/ನೊಂದವರು; ಸುರ=ದೇವತೆ; ಧೇನು=ಹಸು; ಸುರಧೇನು=ದೇವಲೋಕದ ದೇವೇಂದ್ರನ ಅಮರಾವತಿಯಲ್ಲಿರುವ ಒಂದು ಹಸು. ಇದು ಯಾಚಕರು ಬಯಸಿದ್ದೆಲ್ಲವನ್ನೂ ನೀಡುವುದು ಎಂಬ ಒಂದು ಕಲ್ಪನೆ ಜನಮನದಲ್ಲಿದೆ; ವಿದಗ್ಧ ಜನ ಸುರಧೇನುಗಳಿರಾ=ನೊಂದವರ ಸಂಕಟಗಳನ್ನೆಲ್ಲಾ ಪರಿಹರಿಸಿ, ಅವರ ಬಯಕೆಗಳನ್ನು ಈಡೇರಿಸುವ ಸುರದೇನುಗಳಿರಾ;

ಆವು=ನಾವು; ದಕ್ಷಿಣಾ+ಅರ್ಥಿಗಳು; ದಕ್ಷಿಣೆ=ಗುರುಹಿರಿಯರಿಗೆ ನೀಡುವ ಕಾಣಿಕೆ; ಅರ್ಥಿ=ಬೇಡುವವನು/ಯಾಚಕ; ಈವಿರಿ=ಕೊಡುವಿರಿ; ಸಘಾನ=ಹಿರಿಮೆ/ಉನ್ನತಿ ; ಕೊಡಲ್+ಆಪ; ಸತ್ವ=ಶಕ್ತಿ/ಬಲ/ಕೆಚ್ಚು; ನಿಧಾನ+ಉಂಟೇ; ನಿಧಾನ=ದ್ರುಡ ಸಂಕಲ್ಪ/ನಿಶ್ಚಯದ ನಿಲುವು; ಅನಿಬರಿಗೆ=ಅವರೆಲ್ಲರಿಗೆ; ಬೆಸಸು=ಅಪ್ಪಣೆ ಮಾಡು; ಈವೆವು=ಕೊಡುವೆವು/ನೆರವೇರಿಸುವೆವು; ತೀವು=ತುಂಬು ; ಅಗ್ಗ=ಹೆಚ್ಚು; ಕೂಲ=ದಡ ; ಅತುಳ=ಹೋಲಿಕೆಯಿಲ್ಲದ/ಅಸಮಾನವಾದ; ಅಂಗ=ರೀತಿ; ಒಟ್ಟೈಸು=ಮುತ್ತು/ಆಕ್ರಮಣ ಮಾಡು; ಪರಿತೋಷ=ಹೆಚ್ಚಿನ ಆನಂದ ; ಐಸಲೇ=ಅಶ್ಟೇ ತಾನೆ/ಅಲ್ಲವೇ ; ಉಪಹಾಸ=ತಿರಸ್ಕಾರ/ಅಲ್ಲಗಳೆಯುವುದು ; ವಾಸಿ=ಹುರುಡು/ಪಯ್ಪೋಟಿ/ಮೇಲಾಟ; ವಾಸಿಬೀಳು=ಇಬ್ಬರ ಇಲ್ಲವೇ ಎರಡು ಪಂಗಡಗಳ ನಡುವಣ ಪಯ್ಪೋಟಿ;

ಉರವಣಿಸು=ಅತಿಕ್ರಮಿಸು/ವೇಗವಾಗಿ ಮುಂದೆ ನುಗ್ಗು; ಚೂಳಿಕೆ=ಮುಂದಿನ ಬಾಗ/ಮುಂಬದಿ; ಧೂಳಿಗೋಟೆ=ಪುಡಿಪುಡಿಯಾದ ಕೋಟೆ/ನಾಶವಾದ ಕೋಟೆ; ಬರಿಕೈದು=ನಾಶಮಾಡಿ; ಬಾಹೆ=ಹೊರ ವಲಯ/ಹೊರ ಬಾಗ; ಚಾಪ=ಬಿಲ್ಲು; ಸ್ಫುರಿತ=ಹೊಳೆಯುವ/ಪ್ರಕಾಶಿಸುವ; ತೂಣಿ=ಬತ್ತಳಿಕೆ; ತೂಣೀಬದ್ಧ=ಬಾಣಗಳಿಂದ ತುಂಬಿದ ಬತ್ತಳಿಕೆ; ಮುಸಲ=ಗದೆ; ಹತಿ=ಪೆಟ್ಟು/ಹೊಡೆತ; ವಿಘಾತಿ=ಹೊಡೆತ/ಪ್ರಹಾರ; ಅಭಿಜಾತ ಸಮರ=ಹೊಸಬಗೆಯ ಕಾಳಗ; ಆತುಕೊಳ್ಳು=ಕಯ್ಗೊಳ್ಳುವುದು/ಮಾಡಲುತೊಡಗುವುದು ; ಘಾತಿ=ಹೊಡೆತ/ಏಟು ; ಆನುವರು=ಎದುರಿಸುವವರು/ಪ್ರತಿಬಟಿಸುವವರು; ದಿಂಡುಗೆಡೆ=ಅಡ್ಡಬೀಳು/ಉರುಳಿಬೀಳು; ಸಖ=ಗೆಳೆಯ; ಸಲೆ=ಸಂಪೂರ್ಣವಾಗಿ; ಚಂಡಿ=ಹಟಮಾರಿತನ/ಚಲ; ದರ್ಪವಿಷ ಮುಂಕೊಂಡ ಮೂರ್ಛಿತನು=ಸೊಕ್ಕಿನ ವಿಶವನ್ನು ಕುಡಿದು ಅರಿವನ್ನು ಕಳೆದುಕೊಂಡವನು. ಇದು ಒಂದು ರೂಪಕ. ಸೊಕ್ಕಿನಿಂದ ಮೆರೆದು ವಿವೇಕವಿಲ್ಲದವನಾಗಿದ್ದಾನೆ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ; ಅಳಲು=ಸಂಕಟ; ಅಳವು=ಶಕ್ತಿ; ನೆರಹು=ಈಡೇರಿಸು/ನೆರವೇರಿಸು; ಒಡಬಡಿಸಿ=ಒಪ್ಪುವಂತೆ ಮಾಡಿ; ಪರಿ=ರೀತಿ; ಪರಿಭವ=ಅಪಮಾನ; ಹೊಗು=ಪ್ರವೇಶಿಸು ; ಪುತ್ರ+ಕಾಮ್ಯ+ಅಧ್ವರ; ಕಾಮ್ಯ=ಬಯಕೆ; ಅಧ್ವರ=ಯಾಗ; ವಿರಚಿಸು=ಆಚರಿಸು; ಅಗ್ರಹಾರ=ಬ್ರಾಹ್ಮಣರು ವಾಸ ಮಾಡುವ ಊರು/ಕೇರಿ; ಸತ್ವ=ಬಲ/ಶಕ್ತಿ; ಉತ್ಕರ್ಷ=ಹೆಚ್ಚಳ/ಹಿರಿಮೆ; ಸತ್ವೋತ್ಕರುಷವಂತರು=ಹೆಚ್ಚಿನ ಶಕ್ತಿ ಮತ್ತು ಹಿರಿಮೆಯುಳ್ಳವರು; ಅರಸು=ಹುಡುಕು ;

ಹೊಸಗನ್ನಡ ಗದ್ಯ 

ಅನಂತರ ಮಾರನೆಯ ದಿವಸ… ದ್ರೋಣಾಚಾರ್‍ಯನು ಗರುಡಿಯ ಮನೆಯಲ್ಲಿ ಕುಳಿತು, ಮಕ್ಕಳೆಲ್ಲರನ್ನೂ ಕರೆಸಿ, ಕುಮಾರರನ್ನು ಕುರಿತು ಈ ರೀತಿ ನುಡಿದನು. ಏನಿರಯ್ಯಾ?… ಕುರುವಂಶವೆಂಬ ಕಮಲಕ್ಕೆ ಸೂರ್ಯಗಳಿರಾಪಂಡಿತ ಜನರ ಕಾಮಧೇನುಗಳಿರಾನಾವು ಇಂದು ನಿಮ್ಮಲ್ಲಿ ಗುರುಕಾಣಿಕೆಯನ್ನು ಬಯಸುವವರಿದ್ದೇವೆನಮಗೆ ಏನು ಕೊಡುತ್ತೀರಿ?… ಕೊಡುವುದಕ್ಕೆ ನೀವು ಶಕ್ತರು ಹಾಗೂ ಹಿರಿಮೆಯುಳ್ಳವರುನನಗೆ ಗುರುಕಾಣಿಕೆಯನ್ನು ಕೊಡುವುದಕ್ಕೆ ಬೇಕಾದ ಮನೋಬಲ ನಿಮಲ್ಲಿ ಇದೆಯೆ?” ಎಂದು ದ್ರೋಣನು ಅವರೆಲ್ಲರನ್ನೂ ಕೇಳಿದನು.

“ಯಾವುದನ್ನು ಬಯಸುತ್ತೀರಿ ?… ನೀವು ಯಾವ ಕೆಲಸವನ್ನು ಅಪ್ಪಣೆ ಕೊಡಿಸಿದರೂ… ಅದನ್ನು ನೆರವೇರಿಸುತ್ತೇವೆ… ಇದಕ್ಕೆ ಆಗುತ್ತದೆಯೇ ಇಲ್ಲವೇ ಎಂಬ ಮಾತೇಕೆ ?” ಎಂದು ಶಿಶ್ಯರು ಗುರುವಿಗೆ ಹೇಳಿದರು. ದ್ರೋಣನಿಗೆ ಶಿಶ್ಯರ ಮಾತು ಕೇಳಿ ಆನಂದ ತುಂಬಿ ಬಂದಿತು. ಶಿಶ್ಯರನ್ನು ತನ್ನ ಮನದಲ್ಲಿ ಮೆಚ್ಚಿಕೊಂಡು, ಶಿಶ್ಯರಿಗೆ ತನಗೆ ದ್ರುಪದನಿಂದ ಆಗಿದ್ದ ಅಪಮಾನದ ಸಂಗತಿಯನ್ನು ನುಡಿಯತೊಡಗಿದನು.

“ಗಂಗಾನದಿಯ ಉತ್ತರ ದಡದಲ್ಲಿ ಪಾಂಚಾಲ ದೇಶವಿರುವುದನ್ನು ನೀವು ಕೇಳಿದ್ದೀರಾ?… ಅಲ್ಲಿಗೆ ದ್ರುಪದನೆಂಬುವನು ರಾಜ… ಅವನು ಬಹಳ ಪರಾಕ್ರಮಿ… ಪರಾಕ್ರಮದಲ್ಲಿ ಇತರರಿಗೆ ಸೋಲುವವನಲ್ಲ…
ನೀವೆಲ್ಲ ಒಂದಾಗಿ ದ್ರುಪದ ಮಹಾರಾಜನನ್ನು ಹಿಡಿದು ತಂದು ಒಪ್ಪಿಸಿದರೆ… ನನಗೆ ಹೆಚ್ಚಿನ ಆನಂದವಾಗುತ್ತದೆ”ಎಂದು ದ್ರೋಣನು ಹೇಳಿದನು.

ಇಶ್ಟೇ ಅಲ್ಲವೇ, ಗುರುಕಾಣಿಕೆಯ ಬಯಕೆ?…  ಇದೇನು ದೊಡ್ಡದು ?…  ತಂದು ಒಪ್ಪಿಸುತ್ತೇವೆ” ಎಂದು ಹಗುರವಾಗಿ ಮಾತನಾಡುತ್ತ… ಚಪ್ಪಾಳೆ ತಟ್ಟುತ್ತ… ತಮ್ಮ ತಮ್ಮಲ್ಲೇ ನಗುತ್ತ…  ದುರ್‍ಯೋದನ ಮತ್ತು ಕರ್‍ಣನೊಂದಿಗೆ ದ್ರುತರಾಶ್ಟ್ರನ ಮಕ್ಕಳೆಲ್ಲರೂ ಹೊರಟರು. ಹೀಗೆ ದ್ರುತರಾಶ್ಟ್ರನ ಮಕ್ಕಳಿಗೂ ಪಾಂಡುಸುತರಿಗೂ ಗುರುಕಾಣಿಕೆಯ ಪ್ರಸಂಗದಲ್ಲಿ ಪಯ್ಪೋಟಿಯುಂಟಾಯಿತು.

ದುರ್‍ಯೋದನ ಸೇನೆಯು ಪಾಂಚಾಲ ದೇಶಕ್ಕೆ ಮುತ್ತಿಗೆ ಹಾಕಿತು… ಮುಂದೆ ದುರ್‍ಯೋದನಾದಿಗಳು ವೇಗವಾಗಿ ಮುನ್ನುಗ್ಗಿ ಕೋಟೆಯನ್ನು ಧ್ವಂಸ ಮಾಡಿ… ದ್ರುಪದ ರಾಜನ ಅರಮನೆಗೆ ಬರಲುದ್ರುಪದನ ತಮ್ಮಂದಿರು ದುರ್‍ಯೋದನನ ಸೇನೆಯನ್ನು ಸದೆಬಡಿದು ಸೋಲಿಸಿ ಹಿಮ್ಮೆಟ್ಟಿಸಿದರು.

ನಗರದ ಹೊರವಲಯದಲ್ಲಿ ಪಾಂಡವರು ಮಹತ್ವದ ಸಿದ್ದತೆಯಲ್ಲಿ ತೊಡಗಿದ್ದರು. ಪ್ರಕಾಶಮಾನವಾಗಿ ಹೊಳೆಯುತ್ತಿರುವ ಬಿಲ್ಲು… ಬಾಣಗಳಿಂದ ತುಂಬಿದ ಬತ್ತಳಿಕೆ… ಹಗೆಗಳನ್ನು ನಡುಗಿಸುವಂತಹ ಕತ್ತಿಯನ್ನು ಕಯ್ಯಲ್ಲಿ ಹಿಡಿದು ಗುರುವಿನೊಂದಿಗೆ ಕಾಯುತ್ತಿದ್ದರು.

ಇತ್ತ ಕಡೆ ದುರ್‍ಯೋದನನ ಸೇನೆಯು ದ್ರುಪದನ ಪಟ್ಟಣದ ಜನರ ಒನಕೆಯಂತಹ ದೊಣ್ಣೆಯ ಪೆಟ್ಟಿನ ಹೊಡೆತ ತಿಂದು ಹಿಂತಿರುಗಿ ಬಂದಿತು… ಆಗ ಪಾಂಡವರು ದೊಡ್ಡ ಸಮರವನ್ನು ಕಯ್ಗೊಂಡರು…  ಹಗೆಗಳ ಜೊತೆ ಹೆಚ್ಚು ಮಾತೇಕೆ” ಎನ್ನುತ್ತ ದ್ರುಪದ ರಾಜನ ಸೇನೆಯ ಮೇಲೆ ಬಿದ್ದು ಅವರನ್ನು ಕೊಂದು… ಪುರವನ್ನು ಪ್ರವೇಶಿಸಿದರು…  ಹೊಡೆತವನ್ನು ತಡೆಗಟ್ಟಿ ಎದುರಿಸುವ ಸರಿಸಮಾನರಿಲ್ಲ” ಎಂದು ಹಗೆಯ ಸೇನಾಬಲವನ್ನು ಮುರಿದು ದ್ರುಪದನನ್ನು ಮುತ್ತಿದರು. “ಗುರುಗಳಿಗೆ ಈತನೇ ಕಾಣಿಕೆ” ಎಂದು ದ್ರುಪದರಾಜನನ್ನು ಸೆರೆಹಿಡಿದು ತಂದು ದ್ರೋಣನ ಮುಂದೆ ಅಡ್ಡ ಬೀಳಿಸಿದರು.

ಶಿಶ್ಯರೊಪ್ಪಿಸಿದ ಕಾಣಿಕೆಯನ್ನು ಗುರು ಕಯ್ಗೊಂಡನು. ಈಗ ಹೆಡೆಮುರಿಕಟ್ಟಿಸಿಕೊಂಡು ತನ್ನ ಕಾಲಬಳಿ ಬಿದ್ದಿರುವ ದ್ರುಪದನನ್ನು ಕುರಿತು ದ್ರೋಣನು ಎಲವೋ ದ್ರುಪದನೆಂಬ ಗೆಳಯನೇ, ಅಂದು ನಿನ್ನ ಅರಮನೆಗೆ ನಾನು ಬಂದಿದ್ದಾಗ, ನನಗೆ ಮಾಡಿದ ಅಪಮಾನವನ್ನು ಮತ್ತು ಅಂದು ನಾನು ಮಾಡಿದ ಪ್ರತಿಜ್ನೆಯನ್ನು ಇಂದು ನೆನೆದುಕೊ ಎಂದು ಹೇಳಿ, ಆ ಮೇಲೆ ಶಿಶ್ಯರ ಕಡೆ ತಿರುಗಿ ಇವನು ಲಜ್ಜೆಗೇಡಿ… ಇವನನ್ನು ಬಿಟ್ಟು ಬಿಡಿ…  ಬಹಳ ಹಟಮಾರಿತನದಿಂದ ಈ ದುರಂತಕ್ಕೆ ಒಳಗಾದನು…  ಸೊಕ್ಕಿನ ವಿಶವನ್ನು ಕುಡಿದು ಅರಿವನ್ನು ಕಳೆದುಕೊಂಡಿರುವ ಇವನನ್ನು ಏನು ಮಾಡಲಿ? ಎಂದು ನುಡಿದು… ಮತ್ತೆ ದ್ರುಪದನಿಗೆ ದ್ರೋಣನು ಎಲವೊ ನಿನಗೆ ಜೀವದಾನವನ್ನು ಕೊಟ್ಟಿದ್ದೇನೆನಿನಗೆ ಸಂಕಟವೇಕೆ… ಅಂದು ನನ್ನನ್ನು ನೀನು ಅಪಮಾನಿಸಿದ್ದೆ… ಇಂದು ನೀನು ನನ್ನ ಶಿಶ್ಯರಿಂದಲೇ ಅಪಮಾನಕ್ಕೆ ಗುರಿಯಾಗಿದ್ದೀಯೆ ?… ನಿನಗೆ ಸಾದ್ಯವಾದರೆ ಹಗೆಯಾದ ನನ್ನ ಮೇಲೆ ಸೇಡನ್ನು ತೀರಿಸಿಕೊ… ಸೆರೆಯಿಂದ ಬಿಟ್ಟಿದ್ದೇನೆ…  ಮರ್ಯಾದೆಯಿಲ್ಲದವನೇ ಹೋಗುನಿನ್ನ ರಾಜ್ಯದಲ್ಲಿ ಅರ್ದವನ್ನು ನನಗೆ ಕೊಟ್ಟುಆಮೇಲೆ ನೀನು ಹೊರಡು ಎಂದು ಅವನನ್ನು ಒಪ್ಪಿಸಿ ದ್ರುಪದನನ್ನು ಬಿಟ್ಟನು.

ಜನಮೇಜಯ ಮಹಾರಾಜನೇ ಕೇಳು, ಈ ರೀತಿ ದ್ರುಪದನು ಅವಮಾನಕ್ಕೆ ಗುರಿಯಾಗಿ… ತನ್ನ ಪುರವನ್ನು ಪ್ರವೇಶಿಸದೆ…  ಬ್ರಾಹ್ಮಣರ ಮೂಲಕ ಪುತ್ರಕಾಮೇಶ್ಟಿಯನ್ನು ಮಾಡಬೇಕೆಂದು ಸಂಕಲ್ಪಿಸಿ … ಗಂಗಾ ತೀರ ಪ್ರದೇಶಕ್ಕೆ ಬಂದು… ಅನೇಕ ಅಗ್ರಹಾರಗಳಲ್ಲಿ ವೇದಗಳನ್ನು ಬಲ್ಲ ಬ್ರಾಹ್ಮಣರನ್ನು ಹುಡುಕತೊಡಗಿದನು.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *