‘ಹೊನಲು’: ಏಕೆ, ಏನು, ಎತ್ತ?
ಕನ್ನಡದ ಬರವಣಿಗೆಗೆ ಮತ್ತೆ ಜೀವ ಬರಬೇಕಿದೆ. ಅದು ಹಿಂದೆಂದಿಗೂ ಹರಿಯದ ಹಾದಿಗಳಲ್ಲಿ ಹರಿಯಬೇಕಿದೆ; ಹಿಂದೆಂದಿಗೂ ಅದನ್ನು ಬಳಸದವರ ಮಾಡುಗತನದಿಂದ ಮೆರೆದು ಬೆಳೆಯಬೇಕಿದೆ. ಕನ್ನಡದಲ್ಲಿ ‘ಅದಾಗುವುದಿಲ್ಲ, ಇದಾಗುವುದಿಲ್ಲ’ ಎನ್ನುವವರ ಎಣಿಕೆ ಹೆಚ್ಚುತ್ತಿರುವುದು ಬಹಳ ಆತಂಕದ ಸಂಗತಿ. ಏಕೆಂದರೆ, ನಿಜಕ್ಕೂ ಆ ಅನಿಸಿಕೆಯ ಹಿಂದಿರುವುದು ನಮ್ಮೆಲ್ಲರ ಅಳವಿನ ಬಗ್ಗೆ ನಮಗೇ ಇಲ್ಲವಾಗುತ್ತಿರುವ ನಂಬಿಕೆ, ಹಾಗೂ ನಮ್ಮೆಲ್ಲರ ಒಳಿತಿನ ಬಗ್ಗೆ ನಮಗೇ ಇಲ್ಲದಿರುವ ಕಾಳಜಿ. ನಿಜಕ್ಕೂ ಕನ್ನಡಿಗರೆಲ್ಲರೂ ಸೇರಿ ಕನ್ನಡವನ್ನು ಬೆಳೆಸಿದರೆ ಅದರಲ್ಲಿ ಆಗದಿರುವುದೇನೂ ಇಲ್ಲ.
ಹಿಂದೆ ಕನ್ನಡದ ಬರವಣಿಗೆಯೆಂಬುದನ್ನು ಕೂಡಣದಲ್ಲಿ ಕೆಲವರನ್ನು ಅದ್ಯಾತ್ಮ ಮತ್ತು ದರ್ಮಗಳ ಕಲಿಕೆಗೆ ಸಜ್ಜುಗೊಳಿಸುವ ಒಂದು ಸಲಕರಣೆಯಾಗಿ ಕಾಣಲಾಗುತ್ತಿತ್ತು. ಹೆಚ್ಚೆಣಿಕೆಯ ಬೇರೆಯವರೆಲ್ಲರೂ ಬರವಣಿಗೆ ಮಾಡದೆಯೇ ತಮ್ಮ ಬಾಳುವೆಯನ್ನು ನಡೆಸುತ್ತಿದ್ದರು. ಆದರೆ ಈಗ ಕಾಲ ಬಹಳ ಬದಲಾಗಿದೆ. ಈಗ ಬರವಣಿಗೆ ಮೊಟ್ಟಮೊದಲಿಗೆ ಇಹಲೋಕದ ಅರಿಮೆಗಳಿಗೆ ಕೆಲವರನ್ನಲ್ಲ, ಎಲ್ಲ ಕನ್ನಡಿಗರನ್ನೂ ಸಜ್ಜುಗೊಳಿಸುವ ಸಲಕರಣೆಯಾಗಬೇಕಿದೆ. ಬದಲಾದ ಕಾಲದೊಡನೆ ಬರವಣಿಗೆಯೂ ಬದಲಾಗಬೇಕು ಎಂಬುದನ್ನು ನಾವು ಮರೆತರೆ ಕಾಲವೂ ನಮ್ಮನ್ನು ಮರೆತೀತು.
ಕೆಲವೇ ಕೆಲವರ ಮಾಡುಗತನದ ಬರವಣಿಗೆಯ ಪರಂಪರೆಯಿಂದ ಕನ್ನಡನಾಡು ಸಾಕಶ್ಟು ಪಡೆದಿದೆ. ಆ ಪರಂಪರೆಯ ಹಿರಿಯರ ಕೊಡುಗೆಗಳು ಇನ್ನು ಮುಂದೆಯೂ ನಮ್ಮ ಬದುಕನ್ನು ಬೆಳಗುತ್ತವೆ. ಆದರೆ ಬರವಣಿಗೆಯನ್ನು ಹಿಂದಿನವರನ್ನು ಮತ್ತು ಹಿಂದಿನದನ್ನು ಕೊಂಡಾಡುವಶ್ಟಕ್ಕೇ ಸೀಮಿತವಾಗಿ ಇಟ್ಟುಕೊಳ್ಳುವುದು ಯಾವ ನುಡಿಜನಾಂಗಕ್ಕೂ ಒಳ್ಳೆಯದಲ್ಲ. ಹಾಗೆಯೇ, ಹಳಮೆಯನ್ನು ಮುನ್ನಡೆಗೆ ಅಡ್ಡಿಯಾಗುವ ಹೊರೆಯಾಗಿ ಮಾಡಿಕೊಳ್ಳುವುದು ಕೂಡ ಒಳ್ಳೆಯದಲ್ಲ.
ಕನ್ನಡಿಗರಿಗೆ ನಾಳೆಯೆಂಬುದೂ ಇದೆ – ನಮಗೆ ಬೇಕಾದರೆ, ಮತ್ತು ನಾವು ಆ ನಾಳೆಯನ್ನು ಕಟ್ಟಲು ಮುಂದಾಗುವುದಾದರೆ. ಆ ನಾಳೆಯಲ್ಲಿ ಕೂಡಣದ ಎಲ್ಲ ಸೀಳುಗಳಿಂದಲೂ ನಾವು ಹೊರಹೊಮ್ಮಿ, ಅರಿವಿನ ಎಲ್ಲ ವಲಯಗಳಲ್ಲೂ ನಮ್ಮ ಮಾಡುಗತನವನ್ನು ಎರಕ ಹೊಯ್ಯಬಹುದಾದ ಒಂದು ಸಾದ್ಯತೆಯೂ ಇದೆ. ಆ ಎಲ್ಲರ ಮಾಡುಗತನದ ಹೊನಲಿನಲ್ಲಿ ಮಿಂದ ನಾಳೆಯಲ್ಲಿ ಕೂಡಣದ ಸೀಳುಗಳು ಮುಚ್ಚಿಹೋಗುವ ಸಾದ್ಯತೆಯೂ ಇದೆ.
ಈ ಕನಸನ್ನು ನನಸಾಗಿಸಲು ಈವರೆಗಿನ ಕನ್ನಡದ ಬರವಣಿಗೆಯ ಪರಂಪರೆಗೆ ಆಗದೆಂದೂ, ನನಸಾಗಬೇಕಾದರೆ ಅದು ಈಗ ನಿದಾನವಾಗಿ ನೆಲೆನಿಲ್ಲುತ್ತಿರುವ ಎಲ್ಲರಕನ್ನಡದಲ್ಲಿ ಮಾತ್ರ ಆಗಬಲ್ಲುದೆಂಬ ಗಟ್ಟಿಯಾದ ನಂಬಿಕೆಯಿಂದ ಶುರುವಾಗಿರುವ ಮಿಂಬಾಗಿಲು ‘ಹೊನಲು’. ಇಲ್ಲಿ ಬೆಳಕೂ ಇದೆ, ಕತ್ತಲೆಯೂ ಇದೆ, ಇವೆರಡಕ್ಕಿಂತ ಮಿಗಿಲಾಗಿ ಬೆಳಕು-ಕತ್ತಲೆಗಳಾಚೆಯಿರುವುದೂ ಇದೆ. ಬನ್ನಿ, ಪಾಲ್ಗೊಳ್ಳಿ, ನಿಮ್ಮ ಮಾಡುಗತನವನ್ನು ತನ್ನಿ, ಹಳಮೆಯ ಬೊಕ್ಕಸದಿಂದ ಮುನ್ನಡೆಯಲು ಬೇಕಾಗುವಶ್ಟನ್ನು ತನ್ನಿ, ಮಿಕ್ಕಿದುದನ್ನು ಬಿಟ್ಟು ಬನ್ನಿ. ಹರಿಯಲಿ ಅರಿವಿನ ಹೊನಲು! ಹರಿಯಲಿ ನಡೆ-ನುಡಿಯ ಹೊನಲು! ಹರಿಯಲಿ ನಲ್ಬರಹದ ಹೊನಲು! ಹರಿಯಲಿ ನಾಡಿನ ಕಾಳಜಿಯ ಹೊನಲು!
ನಿಲುವುಗಳು ಬರಹಗಾರರದು
‘ಹೊನಲಿ’ನಲ್ಲಿ ಮೂಡಿಬರುವ ಬರಹಗಳಲ್ಲಿ ಬರಹಗಾರರು ತಂತಮ್ಮದೇ ಆದ ನಿಲುವುಗಳನ್ನು ಬೆಳಕಿಗೆ ತರಬಹುದು. ಆದುದರಿಂದ ಆ ನಿಲುವುಗಳು ಅವರದೇ ಹೊರತು ಈ ಮಿಂಬಾಗಿಲಿನ ನಡೆಸುಗರ ಒಮ್ಮತದ ನಿಲುವಾಗಿರಬೇಕಿಲ್ಲ. ನಡೆಸುಗರನ್ನೂ ಸೇರಿದಂತೆ ಎಲ್ಲ ಬರಹಗಾರರ ನಿಲುವುಗಳಿಗೂ ’ಹೊನಲು’ ಒಂದು ವೇದಿಕೆಯಶ್ಟೇ.
ನಡೆಸುಗರ ತಂಡ
‘ಹೊನಲು’ ಹಮ್ಮುಗೆಯನ್ನು ನಡೆಸುತ್ತಿರುವ ತಂಡದಲ್ಲಿ ಕೆಳಕಂಡ ನಾವಿದ್ದೇವೆ (ಆದರೆ ಬರಹಗಾರರು ನಾವಶ್ಟೇ ಅಲ್ಲ. ನಿಮ್ಮ ಬರವಣಿಗೆಯಿಂದಲೇ ‘ಹೊನಲು’ ಬೆಳೆಯುವುದು!). ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಚಿತ್ರಗಳ ಮೇಲೆ ಒತ್ತಿ ನಮ್ಮ facebook ಪುಟಗಳಿಗೆ ಬೇಟಿ ಕೊಡಿ.
ಇತ್ತೀಚಿನ ಅನಿಸಿಕೆಗಳು