ನಲವತ್ತು ವರುಶಕ್ಕೊಮ್ಮೆ ದರ್‍ಶನ ನೀಡುವ ದೇವರು

– .


ಈ ದೇವಾಲಯದಲ್ಲಿ ಮೂಲ ವಿಗ್ರಹವನ್ನು ನೋಡಿ ಕಣ್ತುಂಬಿಸಿಕೊಳ್ಳಲು ದಶಕಗಳೇ ಕಾಯಬೇಕು. ಏಕೆಂದರೆ ಆ ಮೂಲ ವಿಗ್ರಹವನ್ನು ನಲವತ್ತು ವರ‍್ಶಗಳಿಗೊಮ್ಮೆ ದೇವಾಲಯದ ಪುಶ್ಕರಣಿಯಿಂದ ಹೊರ ತೆಗೆದು, ನಲವತ್ತೆಂಟು ದಿನಗಳ ಕಾಲ ಸಾರ‍್ವಜನಿಕ ದರ‍್ಶನಕ್ಕೆ ಮುಕ್ತವಾಗಿಡಲಾಗುತ್ತದೆ. ಆ ಮೂಲ ವಿಗ್ರಹವೇ ಬಗವಾನ್ ವರದರಾಜ ಸ್ವಾಮಿಯ ಮರದ ವಿಗ್ರಹ.

ತಮಿಳುನಾಡಿನ ಕಾಂಚೀಪುರಂ ದೇವಾಲಯದಲ್ಲಿರುವ ಅತ್ತಿ ವರದರಾಜರ ವಿಗ್ರಹದ ದರ‍್ಶನ ಬಹುಶಹ ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗಲು ಸಾದ್ಯ. ಇತ್ತೀಚೆಗೆ, 2019ರಲ್ಲಿ ಇದು ಸಾರ‍್ವಜನಿಕರ ದರ‍್ಶನಕ್ಕೆ ಲಬ್ಯವಾಗಿತ್ತು. ಬಗವಾನ್ ವರದರಾಜಸ್ವಾಮಿಯ ದರ‍್ಶನ ಪಡೆಯಲು ವಿಶ್ವದ ಮೂಲೆ ಮೂಲೆಯಿಂದಲೂ ಲಕ್ಶಾಂತರ ಬಕ್ತರು ಕಿಕ್ಕಿರಿದು ನೆರೆದು ಸ್ವಾಮಿಯ ದರ‍್ಶನ ಪಡೆದು ಪುನೀತರಾಗಿದ್ದರು.

ನಲವತ್ತು ವರ‍್ಶಕ್ಕೊಮ್ಮೆ ಮಾತ್ರ ಬಗವಾನ್ ಅತ್ತಿ ವರದರಾಜ ಸ್ವಾಮಿಯ ದರ‍್ಶನ ಬಾಗ್ಯದ ಹಿಂದಿರುವ ಕಾರಣವೇನು? ಅಶ್ಟು ದೀರ‍್ಗಾವದಿಯ ಕಾಲ ಅಂಜೂರ ಮರದಿಂದ ಕೆತ್ತಲಾದ ಈ ವಿಗ್ರಹವನ್ನು ಎಲ್ಲಿ ಅಡಗಿಸಿ ಇಡಲಾಗುತ್ತದೆ. ಅದಕ್ಕೆ ಅನುಸರಿಸುವ ವಿದಾನಗಳೇನು? ಎಂದು ಹುಡುಕ ಹೊರಟರೆ ಸಿಗುವ ಉತ್ತರ, ಬ್ರಹ್ಮ ದೇವರಿಂದ ಪೂಜಿಸಲ್ಪಟ್ಟ ನಾಲ್ಕು ದೇವರುಗಳಲ್ಲಿ ಬಗವಾನ್ ವರದರಾಜ ದೇವರೂ ಒಬ್ಬರು. ಸತ್ಯ ಯುಗದಲ್ಲಿ ಮಹಾ ಶಿಲ್ಪಿ ವಿಶ್ವಕರ‍್ಮನು ಅಂಜೂರ ಮರದ ಕಾಂಡದಲ್ಲಿ ಬಗವಾನ್ ವರದರಾಜ ದೇವರ ವಿಗ್ರಹವನ್ನು ಕೆತ್ತಿದನು. ಈ ವಿಗ್ರಹವು ಕಂಚಿ ವರದರಾಜ ಪೆರುಮಾಳ್ ದೇವಾಲಯದ ಗರ‍್ಬಗುಡಿಯಲ್ಲಿ ಹದಿನಾರನೇ ಶತಮಾನದ ಆರಂಬದವರೆವಿಗೂ ಪೂಜಿಸಲ್ಪಡುತ್ತಿದ್ದ ಮೂಲ ವಿಗ್ರಹವಾಗಿತ್ತು. ಅನ್ಯ ಮತೀಯರ ದಾಳಿಯಿಂದ ಗರ‍್ಬಗುಡಿಯಲ್ಲಿದ್ದ ಬಗವಾನ್ ವರದರಾಜ ಸ್ವಾಮಿಯ ವಿಗ್ರಹವನ್ನು ಕಾಪಾಡುವ ಸಲುವಾಗಿ, ಅದನ್ನು ದೇವಾಲಯದ ಪವಿತ್ರ ಪುಶ್ಟರಣಿಯಲ್ಲಿ ರಹಸ್ಯವಾಗಿ ರಕ್ಶಿಸಿಡಲಾಯಿತು. ಈ ರಹಸ್ಯ ದೇವಾಲಯದ ದಾತಾಚಾರ‍್ಯರ ಕುಟುಂಬಕ್ಕೆ ಮಾತ್ರ ತಿಳಿದಿತ್ತು. ಇದಾದ ನಂತರ, ನಲವತ್ತು ವರ‍್ಶಗಳ ಕಾಲ ಈ ದೇವಾಲಯದ ಗರ‍್ಬಗುಡಿಯಲ್ಲಿ ದೇವರ ಮೂರ‍್ತಿ ಇಲ್ಲದ ಕಾರಣ ಯಾವುದೇ ಪೂಜಾ ಕೈಂಕರ‍್ಯ ನಡೆಯಲಿಲ್ಲ. ಈ ಅವದಿಯಲ್ಲಿ ಮೂಲ ವಿಗ್ರಹದ ರಹಸ್ಯ ತಿಳಿದಿದ್ದ ದಾತಾಚಾರ‍್ಯರ ಕುಟುಂಬದವರು ವಿದಿವಶರಾಗಿದ್ದರು. ಅವರೊಡನೆ ಮೂಲ ವಿಗ್ರಹವಿದ್ದ ಸ್ತಳ ಸಹ ಶಾಶ್ವತ ರಹಸ್ಯವಾಗಿ ಉಳಿದು ಹೋಯಿತು. ಅದೇ ಕುಟುಂಬದ ಕುಡಿಗಳು ಕಾಂಚೀಪುರದ ದೇವಾಲಯದಲ್ಲಿ ವಿಗ್ರಹವನ್ನು ಮರುಸ್ತಾಪಿಸಿ ಪೂಜಾ ಕೈಂಕರ‍್ಯವನ್ನು ಪುನಹ ಪ್ರಾರಂಬಿಸಲು ಸಾದ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಕೊನೆಯಲ್ಲಿ ಮಾದ್ವ ಬಕ್ತರೊಬ್ಬರು ಉದಯರ್ ಪಾಳಯಂ ಕಾಡಿನಿಂದ ಉತ್ಸವ ಮೂರ‍್ತಿಯನ್ನು ತಂದು ಉತ್ಸವ ಪೂಜೆಯನ್ನು ಪ್ರಾರಂಬಿಸಿದರು. ಬಗವಾನ್ ವರದರಾಜರ ಮೂಲ ವಿಗ್ರಹವನ್ನು ಪತ್ತೆ ಹಚ್ಚಲು ಮಾಡಿದ ಎಲ್ಲಾ ಪ್ರಯತ್ನಗಳೂ ವಿಪಲವಾದವು. ತದನಂತರ ದೇವಾಲಯದ ಅದಿಕಾರಿಗಳು ಕಲ್ಲಿನಲ್ಲಿ ಕೆತ್ತಿದ ವಿಗ್ರಹವನ್ನು ಪ್ರತಿಶ್ಟಾಪಿಸಲು ನಿರ‍್ದರಿಸಿದರು. ಅದರಂತೆ ಕಾಂಚೀಪುರಂನಿಂದ ಸುಮಾರು ಮೂವತ್ತು ಮೈಲಿ ದೂರದಲ್ಲಿರುವ ಪಜಯಸೀವರಂನಲ್ಲಿರುವ ಪದ್ಮ ಗಿರಿಯಿಂದ ಕಲ್ಲಿನಲ್ಲಿ ಕೆತ್ತಿದ ದೇವರನ್ನು ತಂದರು. ದೇವರಾಜ ಪೆರುಮಾಳ್ ಎಂದು ಕರೆಯಲ್ಪಡುವ ಈ ದೇವರನ್ನು ತಂದು ಪೂಜಿಸಲು ಪ್ರಾರಂಬಿಸಿದರು. ಪಜಯಸೀವರಂ, ಪಯಸ್ವಿನಿ, ವೇಗಾವತಿ ಮತ್ತು ಬಹುಬದಿಯ ಸಂಗಮದಲ್ಲಿದೆ.

1709ರ ಸುಮಾರಿನಲ್ಲಿ ದೇವಾಲಯದ ಪುಶ್ಕರಿಣಿಯಲ್ಲಿನ ನೀರಿನ ಮಟ್ಟ ಬಹಳವಾಗಿ ಕುಸಿಯಿತು. ಇದೇ ಸೂಕ್ತ ಸಮಯವೆಂದು ಪರಿಗಣಿಸಿ ಪುಶ್ಕರಣಿಯನ್ನು ಸ್ವಚ್ಚಗೊಳಿಸಲು ದೇವಾಲಯದ ಮೇಲ್ವಿಚಾರಕರು ತೀರ‍್ಮಾನಿಸಿ ಕ್ರಮ ಜರುಗಿಸಿದರು. ಪುಶ್ಕರಣಿಯ ತಳ ಬಾಗಕ್ಕೆ ಬರುತ್ತಿದ್ದಂತೆ ಬಗವಾನ್ ಅತ್ತಿ ವರದರಾಜರ ವಿಗ್ರಹದ ದರ‍್ಶನವಾಯಿತು. ಅಶ್ಟು ಹೊತ್ತಿಗಾಗಲೇ ಈ ವಿಗ್ರಹ ಕಾಣೆಯಾಗಿ ನಲವತ್ತು ವರ‍್ಶಗಳು ಗತಿಸಿದ್ದವು. ದೇವಾಲಯದ ಅದಿಕಾರಿಗಳು ಇದನ್ನೇ ಆದಾರವಾಗಿ ಇಟ್ಟುಕೊಂಡು, ಬಗವಾನ್ ವರದರ ವಿಗ್ರಹವನ್ನು ಕೇವಲ 48 ದಿನಗಳ ಕಾಲ ಸಾರ‍್ವಜನಿಕ ದರ‍್ಶನಕ್ಕಿಟ್ಟು, ಮತ್ತೆ ಅದನ್ನು ಯತಾಸ್ತಿತಿಯಲ್ಲಿ ಪುಶ್ಕರಣಿಯಲ್ಲಿಡಲು ತೀರ‍್ಮಾನಿಸಿದರು. ಈ ನಲವತ್ತೆಂಟು ದಿನಗಳನ್ನು ಒಂದು ಮಂಡಲ ಎನ್ನುತ್ತಾರೆ. ಇದರಲ್ಲಿ ಎರಡು ಪೌರ‍್ಣಮಿ ಮತ್ತು ಎರಡು ಅಮಾವಾಸ್ಯೆಗಳಿರುತ್ತವೆ.

ವರದರಾಜ ಸ್ವಾಮಿಯ ವಿಗ್ರಹವನ್ನು ಸಾರ‍್ವಜನಿಕರಿಗೆ ತೆರೆದ ಮೊದಲ 24 ದಿನಗಳ ಕಾಲ ಅದು ನಿದ್ರಾ ಸ್ತಿತಿಯಲ್ಲೂ ನಂತರದ 24 ದಿನ ನಿಂತ ಬಂಗಿಯಲ್ಲೂ ಇರಿಸಲಾಗುತ್ತದೆ. ಇದರ ಹಿಂದೆ ಯಾವುದೇ ಕಟ್ಟುಪಾಡು ಇರುವ ಬಗ್ಗೆ ಮಾಹಿತಿಯಿಲ್ಲ. ದೇವಾಲಯದ ಪುಶ್ಕರಣಿಯಿಂದ ಹೊರ ತೆಗೆದ ವರದರಾಜರ ವಿಗ್ರಹವು ಪಾಚಿ ಮತ್ತು ಕೊಳಕಿನಿಂದ ಮುಚ್ಚಿಹೋಗಿರುತ್ತದೆ. ಮೇಲಾಗಿ ಈ ವಿಗ್ರಹ ಮರದಲ್ಲಿ ಕೆತ್ತಿರುವುದು. ನಲವತ್ತು ವರ‍್ಶಗಳ ಕಾಲ ಈ ಮರದಲ್ಲಿ ಕೆತ್ತಿರುವ ವಿಗ್ರಹವನ್ನು ನೀರಿನಲ್ಲಿ ಯಾವ ರೀತಿಯಲ್ಲಿ ಸಂರಕ್ಶಿಸಿ ಇಡಲಾಗಿದೆ ಎಂಬುದೇ ನಿಜವಾದ ಪವಾಡ. 2019ರಲ್ಲಿ ಈ ವಿಗ್ರಹವನ್ನು ಹೊರ ತೆಗೆದು ಸ್ವಚ್ಚಗೊಳಿಸುವ ಮುನ್ನ ಅದಕ್ಕಂಟಿದ ಪಾಚಿ ಮತ್ತು ಕೊಳಕನ್ನು ಬಕ್ತಾದಿಗಳು ಮಹಾ ಪ್ರಸಾದವೆಂದು ಸ್ವೀಕರಿಸಿದರು ಎಂಬ ಮಾಹಿತಿ ಇದೆ. ನಲವತ್ತೆಂಟು ದಿನಗಳ ನಂತರ ಮತ್ತೆ ಈ ವಿಗ್ರಹವನ್ನು ಪುಶ್ಕರಣಿಯಲ್ಲಿ ಪುನರ್ ಸ್ತಾಪಿಸಲು ಕೊಳದ ಮೇಲಿನಿಂದ 12 ಮೆಟ್ಟಲುಗಳನ್ನು ಇಳಿಯಬೇಕಾಗುತ್ತದೆ. ಅಲ್ಲಿ ನೀರು ತುಂಬಿದ ಒಂಬತ್ತು ಅಡಿಯ ಸ್ನಾನದ ತೊಟ್ಟಿ ಕಾಣುತ್ತದೆ. ಈ ತೊಟ್ಟಿಯ ತಳದಲ್ಲಿ ವರದರಾಜರ ವಿಗ್ರಹವನ್ನು ಸಂಪೂರ‍್ಣ ನಿದ್ರಾ ಸ್ತಿತಿಯಲ್ಲಿ ತುಂಬಿಡಬಹುದು. ಈ ತೊಟ್ಟಿಯ ನಾಲ್ಕೂ ಮೂಲೆಗಳಲ್ಲಿ ʼನಾಗಬಾಸಮ್‌ʼ ಗಳು ಇವೆ. ವರದರಾಜರ ಮರದ ವಿಗ್ರಹ ನೀರಿನಿಂದ ಮೇಲೆಕ್ಕೆ ಬರದಂತೆ ಈ ನಾಗಬಾಸಮ್‌ (ಕ್ಲಾಂಪ್‌ ರೀತಿಯ ವಸ್ತು) ತಡೆಗಳು ತಡೆಯುತ್ತವೆ. ವರದರಾಜರ ವಿಗ್ರಹವನ್ನು ನೀರಿನಲ್ಲಿ ಮತ್ತೆ ಇಡುವ ಮುನ್ನ ಅದು ಕೆಡದಂತೆ ಕಾಪಾಡಲು ಯಾವುದೇ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ ಎಂಬುದು ಇಲ್ಲಿನವರ ಅಂಬೋಣ. ಹಾಗಾದಲ್ಲಿ ಅಂಜೂರ ಮರದಿಂದ ತಯಾರಾದ ಈ ವಿಗ್ರಹ ನಲವತ್ತು ವರ‍್ಶಗಳ ಕಾಲ ನೀರಿನಲ್ಲೇ ಹಾಳಾಗದಂತೆ ಇರಲು ದೈವಾನುಗ್ರಹವೇ ಕಾರಣವೇ? ಅತವಾ ಬೇರಾವುದಾದರೂ ಅತೀಂದ್ರಿಯ ಶಕ್ತಿ ಇದನ್ನು ಕಾಪಾಡುತ್ತಿದೆಯೇ? ದೇವರೇ ಬಲ್ಲ. ಮತ್ತೆ ಅತ್ತಿ ವರದರಾಜರ ವಿಗ್ರಹ ದರ‍್ಶನಕ್ಕೆ ಪ್ರಾಪ್ತಿಯಾಗುವುದು 2059ರಲ್ಲಿ. ಅದನ್ನು ನೋಡುವ ಬಾಗ್ಯ ಎಶ್ಟು ಮಂದಿಗಿದೆಯೋ ಕಾಲವೇ ತಿಳಿಸಬೇಕು.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, templetiming.com, tirthayatra.org, swarajyamag.com, thehindu.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks