ತಲೆದಿಂಬಿನ ಬಗ್ಗೆ

– ಶ್ಯಾಮಲಶ್ರೀ.ಕೆ.ಎಸ್.

ಹಸಿವು, ಬಾಯಾರಿಕೆ, ನಿದ್ದೆ ಇವೆಲ್ಲವು ಮಾನವನೂ ಸೇರಿದಂತೆ ಎಲ್ಲಾ ಜೀವಿಗಳಿಗೂ ಪ್ರಕ್ರುತಿ ದತ್ತವಾಗಿ ಬಂದಿರುವ ಮೂಲಬೂತ ಅಗತ್ಯತೆಗಳು. ನಿದ್ದೆ ಬಂದರೆ ಮೆತ್ತನೆಯ ತಲೆದಿಂಬಿನ ಮೇಲೆ ತಲೆಹಾಕಿ ಮಲಗುವುದು ಸಾಮಾನ್ಯವಾಗಿ ಎಲ್ಲರಿಗೂ ಇರುವ ಅಬ್ಯಾಸ. ಈಗಿನ ಜಂಜಾಟದ ಬದುಕಿನಲ್ಲಿ ನಿದ್ದೆ ಬಂದರೆ ಸಾಕು ಎಂದು ಪರಿತಪಿಸುವಂತಹ ಅನೇಕ ಮಂದಿ ಇದ್ದಾರೆ. ಇನ್ನೂ ಕೆಲ ಮಂದಿಗೆ ಮೆತ್ತನೆಯ ತಲೆದಿಂಬನ್ನು ತಲೆಯಡಿ ಹಾಕಿಕೊಂಡು ಮಲಗಿದರೆ ಸಾಕು ನಿದ್ರಾದೇವಿ ಆವರಿಸಿ ಬಿಡುವಳು. ತಲೆದಿಂಬು ಇಲ್ಲದಿದ್ದರೂ ಮಲಗಬಹುದೇನೋ ಆದರೆ ತಲೆದಿಂಬೊಂದು ಇದ್ದರೆ ಸಾಕು ಬೇಗನೇ ನಿದ್ದೆಗೆ ಜಾರಿಸಿ ಹಾಯೆನಿಸುವುದು. ಒಳ್ಳೆಯ ನಿದ್ದೆ ಉತ್ತಮ ಆರೋಗ್ಯದ ಒಂದು ಮೂಲ. ಇದರಿಂದ ಬಹಳಶ್ಟು ಮಟ್ಟಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ತಿತಿಯಲ್ಲಿಡಬಹುದು.

ಗ್ರಾಮೀಣ ಬಾಗಗಳಲ್ಲಿ ಮೊದಲೆಲ್ಲಾ ಹತ್ತಿಯ ದಿಂಬುಗಳಿಗೆ ಬದಲಾಗಿ ಅಕ್ಕಿ ಹೊಟ್ಟು, ರಾಗಿ ಹೊಟ್ಟುಗಳನ್ನು ಬಳಸಿ ದಿಂಬುಗಳನ್ನು ತಾವೇ ಸಿದ್ದಪಡಿಸಿಕೊಳ್ಳುತ್ತಿದ್ದರು. ದಿಂಬಿಗಿರುವ ಪರ‍್ಯಾಯ ನಾಮ ಮೂಡೆ ಎಂಬುದು. ಹತ್ತಿಯ ಬಳಕೆಗೂ ಮುಂಚೆ ತೆಂಗಿನ ನಾರಿನಿಂದ ತಯಾರಾದ ಹಾಸಿಗೆ,  ದಿಂಬುಗಳು ತುಂಬಾ ಬಳಕೆಯಲ್ಲಿದ್ದವು.

ತಲೆದಿಂಬಿನ ಬಳಕೆ ಯಾವಾಗ ಶುರುವಾಯಿತು ಎನ್ನುವ ಪ್ರಶ್ನೆ ಮೂಡದೇ ಇರದು. ಅದ್ಯಯನದ ಪ್ರಕಾರ ಸುಮಾರು ಕ್ರಿಸ್ತಪೂರ‍್ವ 7000 ವರ‍್ಶಗಳ ಹಿಂದೆ ಮೆಸಪಟೋಮಿಯ ನಾಗರೀಕತೆಯ ವೇಳೆ ದೊಡ್ಡ ದೊಡ್ಡ ಕಲ್ಲುಗಳನ್ನು ದಿಂಬುಗಳಾಗಿ ಬಳಸುವ ಮೂಲಕ ಇದರ ಪರಿಕಲ್ಪನೆ ಆರಂಬವಾಯಿತು. ನೆಲದಲ್ಲಿ ಓಡಾಡುವ ಹುಳು ಉಪ್ಪಟೆಗಳು ಮುಕದ ಮೇಲೆ ಹರಿದಾಡಿ ಕಿವಿ, ಬಾಯಿ, ಮೂಗಿಗೆ ನುಗ್ಗಿ ಬರುವುವು ಎಂಬ ಕಾರಣಕ್ಕೆ ನುಣುಪಾದ ಆಯತಾಕಾರದ ಕಲ್ಲುಗಳ ಮೇಲೆ ಮೆಸಪಟೋಮಿಯನ್ನರು ತಲೆಹಾಕಿ ಮಲಗುತ್ತಿದ್ದರಂತೆ. ಪ್ರಾಚೀನ ಈಜಿಪ್ಟ್ ಜನರು ಶರೀರದ ಎತ್ತರ ಬಾಗದಲ್ಲಿರುವ ಕತ್ತನ್ನು ಪೂಜ್ಯ ಬಾವದಿಂದ ನೋಡುತ್ತಿದ್ದರು. ಹಾಗೆಯೇ ಅವರು ಸಹ ಕಲ್ಲಿನಿಂದ ಮಾಡಿದ ದಿಂಬುಗಳನ್ನು ಬಳಸುತ್ತಿದ್ದರಂತೆ. ಈ ಕಲ್ಲುಗಳ ಮೇಲೆ ಚಿತ್ರಕಲೆಗಳನ್ನು ಬಿಡಿಸುತ್ತಿದ್ದರು. ಇದರೊಟ್ಟಿಗೆ ಅಮ್ರುತ ಶಿಲೆ, ಮರದ ದಿಂಬು, ದಂತದ ದಿಂಬುಗಳನ್ನು ಉಪಯೋಗಿಸುತ್ತಿದ್ದರಂತೆ. ಪ್ರಾಚೀನ ಚೀನಿಯರಿಗೆ ಮೆತ್ತನೆಯ ದಿಂಬುಗಳ ಬಗ್ಗೆ ಅರಿವಿದ್ದರೂ ಕೂಡ ಆರೋಗ್ಯ ನಿಮಿತ್ತ ಮತ್ತು ನೆನಪಿನ ಶಕ್ತಿಯ ವ್ರುದ್ದಿಗಾಗಿ ಕಲ್ಲಿನ ದಿಂಬುಗಳನ್ನೇ ಉಪಯೋಗಿಸುತ್ತಿದ್ದರಂತೆ. ಇವರು ಬಳಸುತ್ತಿದ್ದ ಕಲ್ಲು, ಮರ, ಕಂಚು, ಪಿಂಗಾಣಿ ದಿಂಬುಗಳ ಮೇಲೆ ಮನುಶ್ಯ, ಪ್ರಾಣಿ, ಮರ, ಗಿಡಗಳ ಚಿತ್ರವನ್ನು ಬಿಡಿಸುತ್ತಿದ್ದರಂತೆ. ಜೇಡ್ ಎನ್ನುವ ಗಟ್ಟಿ ಕಲ್ಲಿನ ದಿಂಬುಗಳು ಇವರಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿತ್ತಂತೆ. ಪ್ರಾಚೀನ ಗ್ರೀಕರಲ್ಲಿ ಮಾತ್ರ ಗಟ್ಟಿ ಕಲ್ಲಿನ ದಿಂಬುಗಳ ಪರಿಕಲ್ಪನೆ ಇರಲಿಲ್ಲವಂತೆ. ಬದಲಿಗೆ ಹೆಚ್ಚು ಕಡಿಮೆ ನಾವು ಇಂದು ಬಳಸುವಂತಹ ಮೆತ್ತನೆಯ ದಿಂಬುಗಳು ಬಳಕೆಯಲ್ಲಿದ್ದವಂತೆ. ಮದ್ಯ ಯುಗದ ಯುರೋಪಿನ್ನರಿಗೆ ಮೆತ್ತನೆಯ ದಿಂಬುಗಳು ಶ್ರೀಮಂತರ ಸ್ವತ್ತಾಗಿತ್ತು. ಸಾಮಾನ್ಯ ಜನರಿಗೆ ಇದು ಕೈಗೆಟಕುವಂತಿರಲಿಲ್ಲ.

ದಿಂಬುಗಳ ತಯಾರಿಕೆಯಲ್ಲಿ ಪುರಾತನ ರೋಮನ್ನರು ಸ್ವಲ್ಪ ಪರಿಣತಿಯನ್ನು ಸಾದಿಸಿದ್ದರೆನ್ನಬಹುದು. ಆದುನಿಕ ರೀತಿಯ ಮೆತ್ತನೆಯ ದಿಂಬುಗಳನ್ನು ಮೊದಲಿಗೆ ತಯಾರಿಸಿದ ಕೀರ‍್ತಿ ರೋಮನ್ನರಿಗೆ ಸಲ್ಲುತ್ತದೆ. ಇವುಗಳ ತಯಾರಿಕೆಯಲ್ಲಿ ಇವರು ಜೊಂಡು ಹುಲ್ಲು, ಹಕ್ಕಿಯ ಗರಿಗಳು ಮತ್ತು ಒಣಹುಲ್ಲನ್ನು ಬಳಸುತ್ತಿದ್ದರೆನ್ನಲಾಗುತ್ತದೆ. ನಮ್ಮ ಬಾರತದಲ್ಲಿ ಸಸ್ಯದ ಉತ್ಪನ್ನಗಳಿಂದ ತಯಾರಾದ ದಿಂಬುಗಳಿಗೆ ಮನ್ನಣೆ ನೀಡುತ್ತಿದ್ದರು. 19ನೇ ಶತಮಾನದ ನಂತರ ದಿಂಬುಗಳ ಕೈಗಾರಿಕೆಗಳ ಸಂಕ್ಯೆ ಏರಿಕೆಯಾಗಿ, ಈಗ ಎಲ್ಲರ ಮನೆಗಳಲ್ಲೂ ತರಾವರಿ ಮೆತ್ತನೆಯ ಹತ್ತಿಯ ದಿಂಬುಗಳ ಬಳಕೆ ಸಾಮಾನ್ಯವಾಗಿದೆ. ಕೇವಲ ಮಲಗಲಶ್ಟೇ ಅಲ್ಲದೇ ಮನೆಗಳಲ್ಲಿ, ಅಲಂಕಾರಕ್ಕೂ ವಿವಿದ ಆಕಾರಗಳ ದಿಂಬುಗಳ ಬಳಕೆ ಇರುವುದನ್ನು ಕಾಣಬಹುದಾಗಿದೆ. ಹಾಸಿಗೆ ದಿಂಬುಗಳು, ಮೂಳೆ ದಿಂಬುಗಳು, ಅಲಂಕಾರಿಕ ದಿಂಬುಗಳು ಹೀಗೆ ನಾನಾ ರೀತಿಯ ದಿಂಬುಗಳನ್ನು ನೋಡಬಹುದು. ಕಲ್ಲಿನಿಂದ ಶುರುವಾದ ದಿಂಬುಗಳು ಈಗ ಎಲ್ಲೆಡೆ ಅನೇಕ ರೂಪಗಳಲ್ಲಿ ಮೆತ್ತನೆಯ ದಿಂಬುಗಳಾಗಿ ಮಾರ‍್ಪಾಡಾಗಿರುವುದು ಅಚ್ಚರಿಯ ಸಂಗತಿ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks