ಎಲ್ಲರಕನ್ನಡ

ಏನಿದು ‘ಎಲ್ಲರಕನ್ನಡ’?

ಕನ್ನಡವನ್ನು ಹೊಸದೊಂದು ರೀತಿಯಲ್ಲಿ ಬರೆಯುವ ಅಲೆಯೊಂದು ಎದ್ದಿದೆ. ಇದು ಹೆಚ್ಚು-ಕಡಿಮೆ ಕನ್ನಡದಲ್ಲಿ ಬರೆಯುವವರೆಲ್ಲರ ಗಮನಕ್ಕೂ ಬಂದಿದೆ. ಈ ಚಳುವಳಿಯನ್ನು ‘ಎಲ್ಲರಕನ್ನಡ’ದ ಚಳುವಳಿಯೆನ್ನಬಹುದು. ಎಲ್ಲರಕನ್ನಡದಲ್ಲಿ ಬರೆಯುವಾಗ ಆದಶ್ಟೂ ಹೆಚ್ಚು (ನೂರಕ್ಕೆ ನೂರಲ್ಲ!) ಅಚ್ಚಗನ್ನಡದ ಪದಗಳನ್ನು ಬಳಸಿ ಬರೆಯುವ ಮೊಗಸು ಬರಹಗಾರನದಾಗಿರುತ್ತದೆ (ಬರಹಗಾರ‍್ತಿಯದಾಗಿರುತ್ತದೆ). ಜೊತೆಗೆ, ಹೆಚ್ಚಿನ ಕನ್ನಡಿಗರು ಉಲಿಯದ ಬರಿಗೆಗಳಾದ ಮಹಾಪ್ರಾಣಗಳು, ಋ, ಷ  ಇವುಗಳ ಬದಲಾಗಿ ಓರಣವಾಗಿ ಅಲ್ಪಪ್ರಾಣಗಳು, ರು, ಶ  ಇವುಗಳನ್ನು ಬಳಸಲಾಗುತ್ತದೆ. ಹಾಗೆಯೇ ಬರಿಗೆಮಣೆಯಲ್ಲಿ ಯಾವ ವಿಶೇಶವಾದ ಕೆಲಸವನ್ನೂ ಮಾಡದ ಅರ‍್ಕಾವೊತ್ತಿನ ಬದಲಾಗಿ ರಕಾರಕ್ಕೆ ಒತ್ತನ್ನು ಬಳಸಲಾಗುತ್ತದೆ. ಎತ್ತುಗೆಗೆ: ಸುಖ > ಸುಕ, ಕೃಷಿ > ಕ್ರುಶಿ, ಕಷ್ಟ > ಕಶ್ಟ,  ಕರ್ನಾಟಕ > ಕರ‍್ನಾಟಕ.

ಏಕೀ ‘ಎಲ್ಲರಕನ್ನಡ’?

ಕನ್ನಡದ ಬರವಣಿಗೆ ಇಲ್ಲಿಯವರೆಗೆ ಬೆಳೆದುಕೊಂಡು ಬಂದ ಬಗೆಯಲ್ಲಿ ಎಲ್ಲ ಕನ್ನಡಿಗರೂ ಬರೆಯಬೇಕೆಂಬುದಿರಲಿಲ್ಲ. ಕೆಲವರು ಬರೆದರೆ ಸಾಕು ಎಂಬಂತೆ ಅದು ಬೆಳೆದು ಬಂದಿದ್ದು, ಆರ‍್ಯ ನುಡಿಗಳನ್ನು (ಮುಕ್ಯವಾಗಿ ಸಂಸ್ಕ್ರುತವನ್ನು) ಚೆನ್ನಾಗಿ ಬಲ್ಲವರು ಇಲ್ಲವೇ ಅವರ ಪಯ್ಕಿಯವರು ಬರೆಯುವಂತೆ ಬರೆಯುವುದೇ ಒಳ್ಳೆಯ ಕನ್ನಡವೆಂದು ಏರ‍್ಪಟ್ಟಿದೆ. ತೊಂದರೆಯೇನೆಂದರೆ, ಇಂತಹ ಮಂದಿ ಬಹಳ ಕಡಿಮೆಯಿದ್ದಾರೆ.

ಬಡಗಣ ಬಾರತದಿಂದ ಕನ್ನಡನಾಡಿಗೆ ಗುಳೆ ಬಂದ ಆರ‍್ಯರೇ ಕನ್ನಡದಲ್ಲಿ ಬರವಣಿಗೆಯನ್ನು ಮೊದಮೊದಲು ಮಾಡಿದರೆಂಬುದು ಇತಿಹಾಸದ ಪುರಾವೆಗಳಿಂದ ತೀರ‍್ಮಾನವಾಗಿದೆ. ಮೊದಲಿನಿಂದ ಕನ್ನಡನಾಡಿನಲ್ಲೇ ವಾಸವಾಗಿದ್ದ ನೆಲಸಿಗರು ಕನ್ನಡವನ್ನು ಬರೆಯಲು ಕಯ್ಹಾಕಿದ್ದ ಪುರಾವೆಗಳಿಲ್ಲ. ಆದರೆ ಆರ‍್ಯ ವಲಸಿಗರು ಕಯ್ಹಾಕಿ ಕನ್ನಡವನ್ನು ಬರವಣಿಗೆಗೆ ಇಳಿಸಿ ಕನ್ನಡಕ್ಕೆ ತಮ್ಮ ಕೊಡುಗೆಯನ್ನು ಕೊಟ್ಟರು, ತಾವೂ ಕನ್ನಡಿಗರೇ ಆದರೆಂದು ಇತಿಹಾಸವಿದೆ. ಆ ಕೊಡುಗೆಗಾಗಿ ನಾವು ಅವರಿಗೆ ಎಂದೆಂದಿಗೂ ರುಣಿಗಳಾಗಿರಬೇಕು.

ಆದರೆ ಆ ವಲಸಿಗರು ತಮಗೆ ಬೇಕಾದಂತೆ ಮತ್ತು ಸುಲಬವಾಗುವಂತೆ ಲಿಪಿಯನ್ನು ಕಟ್ಟಿಕೊಂಡಿದ್ದರೇ ಹೊರತು ನೆಲಸಿಗರಿಗೆ ಬೇಕಾದಂತಲ್ಲ, ಸುಲಬವಾಗುವಂತಲ್ಲ. ನಿಜಕ್ಕೂ ಅವರು ಎಲ್ಲರಿಗೂ ಬೇಕಾದಂತೆ ಮತ್ತು ಸುಲಬವಾಗುವಂತೆ ಲಿಪಿಯನ್ನು ಕಟ್ಟುವ ಸಾದ್ಯತೆಯಾಗಲಿ ಅವಶ್ಯಕತೆಯಾಗಲಿ ಇರಲಿಲ್ಲ. ವಲಸೆಯೆಂದರೇ ಹೀಗೆ: ವಲಸಿಗರು ನೆಲಸಿಗರನ್ನು ತೀರ ಹತ್ತಿರದಿಂದ ಅರಿತುಕೊಳ್ಳುವ ಮತ್ತು ಅವರಿಗೆ ತೀರ ನೆರವಾಗುವಂತೆ ನಡೆದುಕೊಳ್ಳುವ ಸಾದ್ಯತೆ ಎಲ್ಲೂ ಇರುವುದಿಲ್ಲ. ಅಲ್ಲದೆ, ಬರಹೇತರ ವಲಯಗಳಲ್ಲೂ ಆರ‍್ಯ ವಲಸಿಗರು ನೆಲಸಿಗರಿಂದ ತಮ್ಮ ದೂರವನ್ನು ತಾವು ಕಾಪಾಡಿಕೊಂಡದ್ದರಿಂದ, ಮತ್ತು ಜಾತಿಯೇರ‍್ಪಾಡು ಕೂಡ ಹುಟ್ಟಿಕೊಂಡದ್ದರಿಂದ, ಬರವಣಿಗೆಯೆಂಬುದು ಕೆಲವರ (ಎಂದರೆ ಮೇಲುಜಾತಿಯವರ ಮತ್ತು ಬಹಳ ಹಣ ಇಲ್ಲವೇ ಅದಿಕಾರವುಳ್ಳ ಇತರರ) ಸೊತ್ತಾಗಿಯೇ ಉಳಿಯಿತು. ಇದು ಇಂದಿನ ವರೆಗೂ ನಡೆದುಕೊಂಡು ಬಂದಿದೆ, ಮತ್ತು ಈ ಕಾರಣದಿಂದ ಇವತ್ತಿಗೂ ಕನ್ನಡನಾಡಿನಲ್ಲಿ ಬರವಣಿಗೆಯೆಂಬುದು ತಾರತಮ್ಯದ ಬೀಜವಾಗಿಯೇ ಉಳಿದಿದೆ, ಎಲ್ಲರದಾಗದೆಯೇ ಉಳಿದಿದೆ.

ಇದೆಲ್ಲದರ ಎದುರಾಗಿ ನಿಂತು, ಇದೆಲ್ಲವನ್ನೂ ಮಾರ‍್ಪಡಿಸಲೆಂದೇ ‘ಎಲ್ಲರಕನ್ನಡ’ ಹುಟ್ಟಿಕೊಂಡಿರುವುದು. ‘ಎಲ್ಲರಕನ್ನಡ’ದ ಗುರಿಯೇ ಬರವಣಿಗೆಯು ಮುಂದುವರೆಸುತ್ತಿರುವ ಕೂಡಣದ ತಾರತಮ್ಯಗಳನ್ನು – ಮುಕ್ಯವಾಗಿ ಜಾತಿಯೇರ‍್ಪಾಡನ್ನು – ಕಡಿದುಹಾಕುವುದಾಗಿದೆ. ಮೇಲೆ ತಿಳಿಸಿದಂತೆ, ಬೇಡದ ಬರಿಗೆ (ಅಕ್ಶರ)ಗಳನ್ನು ಬರಿಗೆಮಣೆಯಿಂದ ಕಯ್ಬಿಡುವುದು, ಕನ್ನಡದಲ್ಲೇ ಪದಗಳನ್ನು ಕಟ್ಟುವ ಅಳವಿಗೆ ಮತ್ತೊಮ್ಮೆ ಜೀವ ತುಂಬುವುದು, ಕನ್ನಡದ ಸೊಲ್ಲರಿಮೆಯ ಸರಿಯಾದ ಅರಕೆ ನಡೆಸುವುದು. ಕನ್ನಡವನ್ನು ಅರಿವಿನ ಒಯ್ಯುಗನುಡಿಯಾಗಿ ಮಾರ‍್ಪಡಿಸುವುದು, ಅರಿವಿನ ‘ಮಾಡುಗ’ ನುಡಿಯಾಗಿ ಮಾರ್‍ಪಡಿಸುವುದು, ಕನ್ನಡಿಗನ ‘ಮಾಡುಗತನ’ವನ್ನು ಅವನಿಗೆ ಹಿಂತಿರುಗಿಸುವುದು: ಇದೆಲ್ಲವೂ ‘ಎಲ್ಲರಕನ್ನಡ’ ಚಳುವಳಿಯಲ್ಲಿ ಈಗಾಗಲೇ ನಡೆಯುತ್ತಿರುವ ಕೆಲಸಗಳು. ಈ ಚಳುವಳಿಯು ಕನ್ನಡಿಗರ ಒಟ್ಟಾರೆ ಏಳಿಗೆಯ ಚಳುವಳಿಯಲ್ಲಿ ಬಹಳ ಮುಕ್ಯವಾದ ಪಾತ್ರವನ್ನು ಪಡೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ.