ಕವಿತೆ: ಬದುಕಿನ ಬಂಡಿ

.

ವಯಸಾದ ಬಡ ದಂಪತಿಗಳು, aged couple

ಬದುಕು ಜೋಡೆತ್ತಿನ
ಬಂಡಿ.. ಉರುಳದಿದ್ದರೆ
ಚಕ್ರಕೆ ಗತಿ ಸಿಗುವುದಿಲ್ಲ
ಬದುಕಿಗೆ

ನಿತ್ಯ ಬದುಕಿನ ಹಾದಿಯ
ಸವೆಸಲು ಹಸಿದ ಹೊಟ್ಟೆಗೆ
ಕೂಳನರಸಲು… ಮುಂಜಾನೆ
ಏಳಬೇಕು ತಿಳಿದ ದಾರಿಯತ್ತ
ಜೋಡೆತ್ತುಗಳು ಹೆಜ್ಜೆ ಹಾಕಬೇಕು

ಗಳಿಸಿ ಉಣ್ಣಲು ರಟ್ಟೆಯಲಿ
ಕಸುವಿಲ್ಲ ತಲೆಯಲ್ಲಿ
ವಿದ್ಯೆಯಿಲ್ಲ, ಇರಲು
ಒಂದೂರೆಂಬುದು ಇಲ್ಲ
ಜೋಡೆತ್ತುಗಳ ಹೂಡಿ
ಉತ್ತಿ ಬೆಳೆಯಲು ತುಂಡು
ಬೂಮಿಯಿಲ್ಲ

ಮತ್ತ್ಯಾವುದರ ಹಂಗು
ತಿಳಿದದ್ದೆ ಊರು
ನಡೆದದ್ದೆ ದಾರಿ
ಇಕ್ಕುವವರು ನಮ್ಮವರೆ
ಇಡದವರು ನಮ್ಮ ಬಂದುಗಳೆ
ಸಿಕ್ಜಶ್ಟೆ ನಮ್ಮ ಪಾಲು
ಅರೆ ಹೊಟ್ಟೆಯೊ.. ಹೊಟ್ಟೆ
ತುಂಬ ಊಟವೋ ಸಿಕ್ಕಶ್ಟೆ
ನಮ್ಮ ರುಣ

ಮತ್ತೆ ಬದುಕಲು ಮಂದಿ
ಕರುಣಿಸಿದರೆ ಈ ಊರು
ಕರುಣಿಸದಿದ್ದರೆ ಮುಂದಿನೂರು
ಹುಟ್ಟಿನಿಂದ ಸಾಯುವವರೆಗೂ
ಮುಗಿಯದೀ ಪಯಣ

ಕಾಲ ಚೆನ್ನಾಗಿದ್ದು
ಕಾಲು ಗಟ್ಟಿ ಇರುವವರೆಗೆ
ನಡೆಯುತ್ತೇವೆ ಮತ್ತು
ಬದುಕಿನ ಬಂಡಿಯನು
ಸವೆಸುತ್ತೇವೆ

ಕಾಲ ಕಸುವು ಹೋದ ಮೇಲೆ
ನಮ್ಮ ಅಂತಿಮ ಪಯಣಕ್ಕೆ
ಎದ್ದು ನಿಲ್ಲುತ್ತೇವೆ ಮತ್ಯಾವ
ಆಸೆಗಳು ಹೊಂದದೇ
ಮತ್ಯಾವ ಆಸೆಯೂ
ಹೊಂದದೇ…!

(ಚಿತ್ರ ಸೆಲೆ : momochalousamba.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: