ಕುಮಾರವ್ಯಾಸ ಬಾರತ ಓದು – ಆದಿಪರ‍್ವ – ಕರ‍್ಣನಿಗೆ ಅಂಗರಾಜ್ಯದ ಪಟ್ಟ – ನೋಟ-14

– ಸಿ. ಪಿ. ನಾಗರಾಜ.

ಪ್ರಸಂಗ-15
ಕರ್ಣನಿಗೆ ಅಂಗರಾಜ್ಯದ ಪಟ್ಟ

( ಆದಿಪರ್ವ: ಏಳನೆಯ ಸಂಧಿ: ಪದ್ಯ 38 ರಿಂದ 58 )

ಪಾತ್ರಗಳು:

ಅರ್ಜುನ: ಪಾಂಡುರಾಜ ಮತ್ತು ಕುಂತಿಯ ಮಗ. ದೇವೇಂದ್ರನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ಕರ್ಣ: ಕುಂತಿಯ ಹಿರಿಯ ಮಗ. ಸೂರ್ಯದೇವನ ಅನುಗ್ರಹದಿಂದ ಹುಟ್ಟಿದವನು.
ಕೃಪ: ಕೌರವರ ಮತ್ತು ಪಾಂಡವರ ವಿದ್ಯಾಗುರು.
ದ್ರೋಣ: ಕೌರವರ ಮತ್ತು ಪಾಂಡವರ ವಿದ್ಯಾಗುರು.
ಧೃತರಾಷ್ಟ್ರ: ಹಸ್ತಿನಾವತಿಯ ರಾಜ.
ಕುಂತಿ: ಕರ್ಣ ಮತ್ತು ಪಾಂಡವರ ತಾಯಿ.
ದುರ್ಯೋಧನ: ಧೃತರಾಷ್ಟ್ರ ಮತ್ತು ಗಾಂಧಾರಿಯ ಮಗ.
ಪುರಜನರು: ಹಸ್ತಿನಾವತಿಯ ಪ್ರಜೆಗಳು.

***ಕರ್ಣನಿಗೆ ಅಂಗರಾಜ್ಯದ ಪಟ್ಟ***

ಘುಳುಘುಳಿಸಿದ ಅಂಬುಧಿಯವೋಲ್… ಜನಜಲಧಿ ಜಾತ ಕ್ಷೋಭೆಯಲಿ… ಅಗ್ಗದ ಸಾಧು ವಾದವಿವಾದ ರಭಸದಲಿ ವೆಗ್ಗಳಿಸಿತು… ಕಲ್ಪಾಂತ ಮೇಘಾವಳಿಯ ಗುರುವೆನೆ… ವಾದ್ಯತತಿ ಕಳಕಳದೊಳು ಮೊಳಗಿದವು… ಮುನಿಯ ಸನ್ನೆಯಲಿ ಅರ್ಜುನ ದೇವನು ಎದ್ದನು.

ಪುರಜನರು: ಈತನಾರು ಆರ್ಜುನನೆ… ಹೋ… ಹೋ…ಮಾತು ಮಾಣಲಿ… ಮಾಣಲಿ…

(ಎಂಬ ಈ ಮಾತು ಹಿಂಚಿತು… ಮುನ್ನ ಆಸ್ಥಾನ ಮೌನದೊಳಿರ್ದುದು… ಭೀತ
ಕಳಕಳರಂಗದಲಿ ಪುರುಹೂತಸುತ ಮೈದೋರಿದನು…ಜನವು ಈತನನು
ಕೊಂಡಾಡುತಿರ್ದುದು ರಾಯ ಕೇಳೆಂದ… ದ್ರೋಣ ಕೃಪ ಮೊದಲಾದ ಮಾನ್ಯ
ಶ್ರೇಣಿಗೆ ಎರಗಿದನು… ಅಮರ ನಿಕರಕೆ ಲಲಾಟದಲಿ ಕರಪುಟವನು ಇಟ್ಟು ಗೋಣನು
ಎತ್ತಿದನು.)

ಪುರಜನರು: ಪ್ರಾಣ ಪಣವಿದು… ನಿಖಿಳ ವಿದ್ಯದ ಜಾಣತನವಿದು… ಇದು ವಿನಯ.

( ಎಂದು ನೆರವಿ ಧನಂಜಯನ ಕೇಣವಿಲ್ಲದೆ ನೆರೆ ಹೊಗಳಿತು… ನಿಲುವಿನಲ್ಲಿ…
ಸ್ವಸ್ಥಾನದಲಿ… ಕೈಚಳಕದಲಿ… ಭಂಗಿಯಲಿ… ಭರದಲಿ… ಲುಳಿಯಲಿ…
ಒಯ್ಯಾರದಲಿ… ಮೋಡಾಮೋಡಿಯ ಅಂದದಲಿ… ಅಳವಿಯಲಿ… ಪರಿವಿಡಿಯಲಿ….
ಊಹಾಬಲದಲಿ… ಅವಧಾನದಲಿ ಶಸ್ತ್ರಾವಳಿಯ ಸಾಂಗೋಪಾಂಗ ಶ್ರಮವನು
ಪಾರ್ಥ ತೋರಿದನು.)

ಪುರಜನರು: ತುರಗಚಯ ರೇವಂತ… ಮದ ಕುಂಜರ ಮಹಾ ದಿವಿಜೇಂದ್ರ…ಪಥ ಸಂಚರಣ ವರ ಮಾರ್ತಾಂಡ…

( ಎಂದು ಜನ ನಿಕರ ಅಬ್ಬರಿಸೆ… ತುರಗ ಗಜ ರಥ ವಿವಿಧ ಶಿಕ್ಷಾಪರಿಣತಿಯ
ತೋರಿದನು…ಗುರು ಕೃಪ ಸುರನದೀಜರು ಪುಳಕಾಂಬು ಪೂರದಲಿ ಮುಳುಗಿದರು…
ಮತ್ತೆ ಧನುವ ಕೊಂಡನು.)

ಅರ್ಜುನ: ನೆರವಿಯನು ಅತ್ತ ಹೊಯ್ ಹೊಯ್ ಹೋಗ ಹೇಳು…ದುರ್ವೃತ್ತರ ಎದೆ ಜರ್ಝರಿತವಾಗಲು ತೋರಬೇಕು…

( ಎನುತ ಬತ್ತಳಿಕೆಯಿಂದ ಉಗಿದು ಹೂಡಿ ವಿಯತ್ತಳಕೆ ಹಾಯ್ಸಿದನು… ಆಗ್ನೇಯಾಸ್ತ್ರ
ಧಾರೆಯಲಿ ಕರ್ಬೊಗೆ ಸುತ್ತಿ ದಳ್ಳುರಿ ಸುರಿದುದು… ಧನುವಿಂದೆ ವಾರುಣವನು
ಉಗಿಸಿದನು… ಶಿಖಿಶರವ ತೆಗೆಸಿದನು… ಅದ್ಭುತ ವಾರಿ ಅಭ್ರವ ಮೊಗೆದುದು…
ಉಪಸಂಹರಿಸಿದನು… ವಿಗಡ ತಿಮಿರಾಸ್ತ್ರದಲಿ ಹಗಲನು ಒಂದೇ ತುತ್ತು ಮಾಡಿದ…
ಸುರನಿಕರ ಬೆರಗಾಗೆ ಸೂರ್ಯಾಸ್ತ್ರದಲಿ ಮರಳಿ ತಿಮಿರವ ತೆಗೆಸಿದನು… ಗಿರಿಶರದಲಿ
ಅದ್ರಿಗಳ… ಮೇಘದ ಶರದಿನ್ ಅಭ್ರವನು… ಉರಗ ಬಾಣದಿ ನೂರು ಭುಜಂಗವನು…
ಅನಿಲ ಶರದಲಿ ತೀವ್ರ ಮಾರುತನ ಪರುಠವವ ತೋರಿದನು… ಜನ ಅಡಿಗಡಿಗೆ
ನುಡಿಯ ನಾಟಕ ಹರ್ಷ ಭಾರದಲಿ ಉಬ್ಬರಿಸಲು ಅಂಧ ಭೂಪನ ಕೊರಳು
ಕುಸಿದುದು… ಇವರ ಗಂಗಾಭವ ಕೃಪ ದ್ರೋಣಾದಿಗಳ ಮುಖ ಅರಳಿದವು… ಬಳಿಕ
ಅವರ ಧೃತರಾಷ್ಟ್ರಾದಿ ಕೌರವರ ತಲೆವಾಗಿದವು… ಇವರ ಜನನಿಯ ಮುಖದ
ಸುಮ್ಮಾನವನು… ದುರ್ಯೋಧನನ ಜನನಿಯ ಜವಳಿ ದುಮ್ಮಾನವನು ಬಣ್ಣಿಸಲು
ಅರಿಯೆ ನಾನೆಂದ. )

ಕರ್ಣ: ಫಲುಗುಣನ ಹೊಗಳುವ ನಾಯಿಗಳನು ಬಾಯ ಹೊಯ್… ಕೌತುಕವಾಯಕೆ ಏನಾಯ್ತು…
ಇವದಿರ ಪಕ್ಷಪಾತವ ನೋಡು ನೋಡು.

( ಎನುತ ಸಾಯಕವ ತಿರುಹುತ್ತಲು ಕರ್ಣ… ಆ ಕರ್ಣಾಯತಾಂಬಕನು ಎಡಬಲದ
ಕುರುರಾಯನ ಅನುಜರ ಮೇಳದಲಿ ಹೊರವಂಟನು… ಗುರುಗಳಿಗೆ ಕೈಮುಗಿದು… ತರಣಿ
ಮಂಡಲಕೆ ಶಿರದಲಿ ಎರಗಿ… ನೋಡುವ ನೆರವಿಗೆ “ಇವನಾರು… ಈತನಾರು ” ಎಂಬ
ಅದ್ಭುತವ ಬೀರಿ… ಅರಸ ಕೇಳೈ, ಕರಿ ತುರಗ ರಥವಾಹನದ ಶಿಕ್ಷಾ ವಿದ್ಯಗಳು ಸಹಿತ
ವಿವಿಧ ಶಸ್ತ್ರೋತ್ಕರದ ಶ್ರಮವನು ತೋರಿದನು… ಆವ ವಿಧದಲಿ ಪಾರ್ಥ ತೋರಿದನು…
ಆವ ದಿವ್ಯಾಸ್ತ್ರ ಪ್ರಪಂಚವ ಪಾವಕ ಅನಿಲ ವಾರುಣಾದಿಯನು ಐದೆ ವಿರಚಿಸಿದ… ಆ
ವಿಧಾನದಲಿ… ಆ ವಿಹಾರದಲಿ… ಆ ವಿಬಂಧದಲಿ ಅರ್ಜುನನ ಬಾಣಾವಳಿಯ
ಬಿನ್ನಾಣವನು… ಕಲಿಕರ್ಣ ತೋರಿದನು.)

ಕರ್ಣ: ಸೆಣಸುವಡೆ ಬಾ…
( ಎಂದು ಪಾರ್ಥನ ಕೆಣಕಿದನು… ಘನರೋಷ ಶಿಖಿಯಲಿ ಇಬ್ಬರ ಮೀಸೆ ಕುಣಿದವು… ಕಂಗಳೊಳು
ಒಗುವ ಕೆಂಪಿನಲಿ… ಕಣಿ ಕಣಿಗಳಾಟದಲಿ… ಶರ ಖಂಡಣೆಯ ಕೋಲಾಟದಲಿ… ಖಣಿ ಖಣಿ
ಖಣಿಲು ಖಣಿ ಖಣಿ ಮಸಗಲು ಚಳಕದಲಿ ಎಚ್ಚಾಡಿದರು. ರಾಯ ಸಭೆ ಕಳವಳಿಸೆ.. )
ಕೃಪ ಮತ್ತು ಇತರರು: ಹೋ.. ಹೋ.. ಹೋ ಇದು ಏನೇನು…

( ಎನುತ ವಾಯುಸುತ.. ಕೃಪ.. ಗುರುಜ.. ದ್ರೋಣಾದ್ಯರು ಧನಂಜಯನ
ಹಿಡಿದರು… ಕೃಪನು ಖಾತಿಯಲಿ… )

ಕೃಪ: ಆಯಿತು… ಎಲವೋ ಕರ್ಣ, ನೃಪಹಾರದಲಿ ನೀನು ಅನುನಾಯಕನೊ… ಮೇಣ್… ನಾಯಕನೊ … ನೀನು ಆವನು.
( ಎಂದನು.)

ಧೃತರಾಷ್ಟ್ರ: ( ತನ್ನ ಮನದಲ್ಲಿ )

ಕರ್ಣನು ಎಂಬವನು… ಈತನಾವನು… ಈತನು ಅರ್ಜುನನೊಡನೆ ತಾ ಮಾರಾತು
ಕೈಮಾಡಿದನು… ಧನಂಜಯನ ಕೈಕೊಳ್ಳನು… ಈತ ತಪ್ಪಲ್ಲ.

( ಎನುತ ಧೃತರಾಷ್ಟ್ರನು ಮಿಗೆ ಮೈಯಾತನು… ಈತನ ಮಾತೆ ಕುಂತಿ ಕಂಡಳು…
ಪೂರ್ವ ಸಂಗತಿಯ ನೆನೆದಳು.)

ಕುಂತಿ: ( ತನ್ನ ಮನದಲ್ಲಿ )
ಎನ್ನ ಮಗನು ಎನೆ ಬಂದುದಿಲ್ಲ… ಅದು ತನ್ನ ವಶವೇ…ವಿಷ್ಣು ಮಾಯೆಯ ಬಿನ್ನಣವಲೇ…

( ಮಾತು ಬಿಗಿದುದು…ಮನವನು ಒಳಗಿಕ್ಕಿ…ತನ್ನ ತಾನೇ ಮರುಗಿ ಕುಂತಿಯಿತ್ತಲು
ಮೂರ್ಛಾಪನ್ನೆಯಾದಳು…ಇತ್ತಲು ಕರ್ಣ ಕೃಪನ ನುಡಿಯಲಿ ದುಗುಡ ಮಿಗೆ
ಖಿನ್ನನಾದನು.)

ದುರ್ಯೋಧನ: ಈತನು ಅರಸಲ್ಲ ಎಂದು ಕೃಪ ಪಳಿವಾತನೇ…ತಪ್ಪೇನು…ರಾಜ್ಯದೊಳು ಈತನ
ಅರಸು ಎನಿಸುವೆನು…ನಮ್ಮಯ ಪುರೋಹಿತರ ಕರೆ…ಶಾತ ಕುಂಭಾಸನವ
ಮಂಗಳಜಾತ ವಸ್ತುವ ತರಿಸು ತರಿಸು.

( ಎಂದು ಆ ತತುಕ್ಷಣದಲಿ ಸುಯೋಧನನು ರಭಸದಲಿ ಎದ್ದ…ತರಿಸಿ
ಭದ್ರಾಸನದೊಳು…ಈತಂಗೆ ಅರಸು ಪದವಿಯೊಳು ಅಂಗ ದೇಶದ
ಸಿರಿಯನಿತ್ತನು…ಮೂರ್ಧಾಭಿಷೇಚನವ ರಚಿಸಿದನು…ಅಖಿಳ ಭೂಮೀಶ್ವರರು
ದರುಶನವನಿತ್ತು ಕಂಡರು…ಪೂರ್ವ ಶೈಲದ ತರಣಿಯಂತಿರೆ ಕರ್ಣನು
ರಾಜತೇಜದಲಿ ಎಸೆದನು…ಈತನ ಉತ್ಸವ ತನ್ನದೆಂದೇ ಪ್ರೀತಿಯಿಂದ ಆ
ಸೂತನು ಐತರಲು…ಈತನು ಇಳಿದು ಪದದಲಿ ಎರಗಿದನು…ಬಳಿಕ “ ಇವನು
ಸೂತ ಸುತನು ” ಎಂದು ಜನಜನಿತ ಭುವನ ಖ್ಯಾತವಾದುದು…ಬಳಿಕ ಆ ಭೀಮ
ನಸುನಗುತ…ಈತನನು ಕುಲವೆತ್ತಿ ಭಂಗಿಸಿ ನುಡಿದನು. ಭೀಮನ ನುಡಿಯನ್ನು
ಕೇಳಿ ಕೋಪದಿಂದ ಕೆರಳಿದ ದುರ್ಯೋಧನನು ಈ ರೀತಿ ನುಡಿಯುತ್ತಾನೆ.)

ದುರ್ಯೋಧನ: ಇವನ ತಂದೆ ಅದಾರು…ಪಾಂಡುವೊ ಪವನನೋ…ಕೃಪ ನಿಮ್ಮ ಜನ್ಮವನು ಎವಗೆ
ಹೇಳಿರೆ…ಹಿರಿಯ ಗುರುಗಳ ತಾಯಿ ಅದಾವವಳೊ…ಅವಘಡಿಸದಿರಿ…ನಿಮಗೆ
ಹಿರಿಯತನಕೆ ಅಂಜುವೆನು.

( ಎನುತ ಕೌರವ ಮಹೀಪತಿ ಗುರು ಕೃಪಾದಿಗಳ ಅಡಿಗಡಿಗೆ ಜರಿದು ನುಡಿದನು…
ಒಳಗೆ ಗಜಬಜವಾಯ್ತು…ಅಲ್ಲಿಯದಲ್ಲಿ ಕೈದುವ ಸೆಳೆದುದು…ಗುರು ಕೃಪರ
ಉಲುಹ ಕೇಳುವರಿಲ್ಲ…ಕಳನೊಳಗೆ ಕೈದೊಳಸಾಯ್ತು…ಭೀಷ್ಮಾದಿಗಳು ಇಳಿದು
ತಮ್ಮಯ ನಿಳಯಕೆ ಐದಿದರು…ಎರಡು ಬಲ ತಮ್ಮೊಳಗೆ ತಾವೇ ಹಣಿದು
ಹರಿದುದು…ರಾಯ ಕೇಳೆಂದ…ಕೆಲವರು ಭೀಮನನ ಅರ್ಜುನನ…ಕೆಲಕೆಲರು
ಕರ್ಣನ…ಕೆಲರು ಕೌರವೇಂದ್ರನ ಹೊಗಳುತ ಬಂದು ಹಸ್ತಿನಾಪುರವ ಹೊಕ್ಕರು.)

ಪದ ವಿಂಗಡಣೆ ಮತ್ತು ತಿರುಳು

ಘುಳುಘುಳಿಸು= ಗುಳುಗುಳು ಎಂಬ ಅನುಕರಣ ಶಬ್ದ; ಅಂಬುಧಿಯ+ವೋಲ್; ಅಂಬುಧಿ= ಕಡಲು; ವೋಲ್= ಅಂತೆ/ಹಾಗೆ; ಘುಳುಘುಳಿಸಿದ ಅಂಬುಧಿಯವೋಲ್= ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಕಡಲಿನ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವಾಗ ಉಂಟಾಗುವ ಶಬ್ದದಂತೆ; ಜಲಧಿ= ಕಡಲು/ಸಾಗರ; ಜನಜಲಧಿ= ಜನಸಮೂಹ; ಜಾತ= ಉಂಟಾದ;

ಕ್ಷೋಭೆ= ಗದ್ದಲ/ಗಲಾಟೆ; ಅಗ್ಗ= ಹೆಚ್ಚಿನ ಬಲವುಳ್ಳ; ಸಾಧು= ಒಪ್ಪಿಗೆಯನ್ನು ಇಲ್ಲವೇ ಮೆಚ್ಚುಗೆಯನ್ನು ಸೂಚಿಸುವಾಗ ಹೊರಹೊಮ್ಮುವ ಉದ್ಗಾರದ ಪದ; ವೆಗ್ಗಳಿಸಿತು= ಜೋರಾಯಿತು/ಅತಿಯಾಯಿತು;  ಕಲ್ಪಾಂತ= ಪ್ರಳಯ ಕಾಲ; ಮೇಘ+ಆವಳಿ; ಮೇಘ= ಮೋಡ; ಆವಳಿ= ಗುಂಪು; ಗುರು+ಎನೆ; ಗುರು= ಅತಿಶಯವಾದುದು/ದೊಡ್ಡದಾದುದು;

ಎನೆ= ಎನ್ನುವಂತೆ; ತತಿ= ಸಮೂಹ; ಕಳಕಳ= ಇಂಪಾದ ದನಿಗಳ ಬೆರಕೆ/ಬಹುಬಗೆಯ ನಾದಗಳ ಬೆರಕೆ; ಮೊಳಗು= ವಾದ್ಯಗಳಿಂದ ಹೊರಹೊಮ್ಮುವ ದನಿ;  ಸನ್ನೆ= ಸೂಚನೆ; ಮಾಣ್= ನಿಲ್ಲಿಸು/ನಿಲ್ಲು/ ಸುಮ್ಮನಿರು; ಹಿಂಚಿತು= ಹಿಮ್ಮೆಟ್ಟಿತು/ಹಿಂದಕ್ಕೆ ಸರಿಯಿತು; ಆಸ್ಥಾನ+ಮೌನದೊಳು+ಇರ್ದುದು; ಆಸ್ಥಾನ= ಆಟದ ಬಯಲಿನಲ್ಲಿ ನೆರೆದಿದ್ದ ಜನಸಮೂಹ;  ಭೀತ= ಹಿಂಜರಿದ/ಹೆದರಿದ; ಕಳಕಳರಂಗ= ಶಸ್ತ್ರಾಸ್ತ್ರಗಳ ವಿದ್ಯೆಯನ್ನು ಪ್ರದರ್ಶನ ಮಾಡುತ್ತಿದ್ದ ಬಯಲು;

ಪುರುಹೂತ= ಇಂದ್ರ; ಸುತ= ಮಗ; ಪುರುಹೂತಸುತ= ಅರ್ಜುನ/ಇಂದ್ರನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದ ಮಗ; ಮೈದೋರಿದನು= ಕಂಡುಬಂದನು;  ಕೊಂಡಾಡುತ+ಇರ್ದುದು; ರಾಯ ಕೇಳು+ಎಂದ; ರಾಯ= ಜನಮೇಜಯ ರಾಜ; ರಾಯ ಕೇಳು= ಜನಮೇಜಯ ರಾಜನಿಗೆ ವೈಶಂಪಾಯನ ಮುನಿಯು ವ್ಯಾಸ ರಚಿಸಿದ್ದ ಮಹಾಬಾರತದ ಕತೆಯನ್ನು ಹೇಳುತ್ತಿದ್ದಾನೆ;  ಮಾನ್ಯ= ಮನ್ನಣೆಗೆ ಪಾತ್ರರಾದವರು; ಶ್ರೇಣಿ= ಸಾಲು/ಗುಂಪು;

ಎರಗು= ನಮಸ್ಕರಿಸು; ಅಮರ= ದೇವತೆ; ನಿಕರ= ಸಮೂಹ/ಗುಂಪು; ಲಲಾಟ= ಹಣೆ; ಕರಪುಟ= ಬೊಗಸೆ ಕಯ್/ಹಸ್ತಗಳೆರಡನ್ನು ಜೋಡಿಸುವುದು; ಗೋಣು= ಕೊರಳು/ ಕುತ್ತಿಗೆ; ಪುರಜನರು= ಹಸ್ತಿನಾವತಿಯ ಪ್ರಜೆಗಳು; ಪಣ= ಪಂದ್ಯಕ್ಕೆ ಒಡ್ಡಿದ ವಸ್ತು; ನಿಖಿಳ= ಸಮಸ್ತ/ಎಲ್ಲ; ನೆರವಿ= ಸಮೂಹ; ಧನಂಜಯ= ಅರ್ಜುನ; ಕೇಣ+ಇಲ್ಲದೆ; ಕೇಣ= ಹೊಟ್ಟೆಕಿಚ್ಚು/ಮತ್ಸರ;

ಕೇಣವಿಲ್ಲದೆ= ಮನದಲ್ಲಿ ಕಿಂಚಿತ್ತಾದರೂ ಕೆಟ್ಟ ಬಾವನೆಯಿಲ್ಲದೆ/ಒಳ್ಳೆಯ ಮನಸ್ಸಿನಿಂದ; ನೆರೆ= ಚೆನ್ನಾಗಿ/ಅತಿಶಯವಾಗಿ;  ನಿಲುವು= ನೆಟ್ಟಗೆ ನಿಲ್ಲು; ಸ್ವಸ್ಥಾನ= ತನ್ನ ಜಾಗ; ಕೈಚಳಕ= ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುವ ನಿಪುಣತೆ; ಭಂಗಿ= ಗತ್ತು; ಭರ= ವೇಗ; ಲುಳಿ= ಚುರುಕುತನ/ಲವಲವಿಕೆ; ಮೋಡಾಮೋಡಿ= ಚತುರತೆ; ಅಳವಿ= ಶಕ್ತಿ/ಯೋಗ್ಯತೆ;

ಪರಿವಿಡಿ= ಅಚ್ಚುಕಟ್ಟು/ಓರಣ; ಅವಧಾನ= ಗುರಿ/ನಿಶ್ಚಲವಾದ ಮನಸ್ಸು; ಶಸ್ತ್ರ+ಆವಳಿ; ಆವಳಿ= ಗುಂಪು/ಸಮೂಹ; ಸಾಂಗೋಪಾಂಗ= ಪೂರ್ಣವಾದುದು/ಎಲ್ಲವನ್ನು ಒಳಗೊಂಡುದು; ಶ್ರಮ= ಆಯುದಗಳನ್ನು ಪ್ರಯೋಗ ಮಾಡುವ ಪರಿಶ್ರಮ; ಪಾರ್ಥ= ಅರ್ಜುನ; ತುರಗ= ಕುದುರೆ; ಚಯ= ಗುಂಪು; ರೇವಂತ= ಒಬ್ಬ ರಾಜನ ಹೆಸರು;

ಕುಂಜರ= ಆನೆ; ಮಹಾ+ದಿವಿಜ+ಇಂದ್ರ; ದಿವಿಜ= ದೇವತೆ;  ಇಂದ್ರ= ಒಡೆಯ;  ಪಥ= ದಾರಿ; ಸಂಚರಣ= ಸಂಚರಿಸುವ; ಮಾರ್ತಾಂಡ= ಸೂರ್ಯ; ನಿಕರ= ಸಮೂಹ/ಗುಂಪು; ಅಬ್ಬರಿಸು= ದೊಡ್ಡ ದನಿಯಲ್ಲಿ ಕೂಗುವುದು; ಶಿಕ್ಷಾಪರಿಣತಿ= ಕಲಿತ ವಿದ್ಯೆಯ ಪ್ರದರ್ಶನ; ಸುರುನದೀಜ= ದೇವಗಂಗೆಯ ಮಗ/ಬೀಶ್ಮ; ಪುಳಕ+ಅಂಬು; ಪುಳಕ= ರೋಮಾಂಚನ; ಅಂಬು= ನೀರು;

ಪುಳಕಾಂಬ= ರೋಮಾಂಚನ ಉಂಟಾದಾಗ ಮೂಡುವ ಬೆವರಹನಿಗಳು; ಪೂರ= ಪ್ರವಾಹ/ ಬಹಳವಾಗಿ; ಧನು= ಬಿಲ್ಲು; ನೆರವಿ= ಗುಂಪು/ಸಮೂಹ; ದುರ್ವೃತ್ತ= ಕೆಟ್ಟ ನಡೆನುಡಿಯ ವ್ಯಕ್ತಿಗಳು; ಜರ್ಝರಿತ= ಒಡೆದುದು; ಬತ್ತಳಿಕೆ= ಬಾಣಗಳನ್ನು ಇಡುವ ಕವಚ; ಉಗಿ= ಹೊರಕ್ಕೆ ತೆಗೆ/ಎಳೆ; ವಿಯತ್ತಳ= ಗಗನ ಮಂಡಲ/ಆಕಾಶ ಪ್ರದೇಶ;

ಆಗ್ನೇಯಾಸ್ತ್ರ= ಅಗ್ನಿದೇವತೆಯ ಹೆಸರನ್ನು ಉಚ್ಚರಿಸುತ್ತ ಪ್ರಯೋಗಿಸುವ ಬಾಣ; ಕರಿದು+ ಪೊಗೆ= ಕರ್ಬೊಗೆ= ಕಪ್ಪನೆಯ ಹೊಗೆ; ದಳ್ಳುರಿ= ದೊಡ್ಡ ಮಟ್ಟದ ಉರಿ; ವಾರುಣ= ವರುಣ ದೇವತೆಯ ಹೆಸರನ್ನು ಉಚ್ಚರಿಸಿ ಬಿಡುವ ಬಾಣ; ವರುಣ= ನೀರು; ಉಗಿ= ಚೆಲ್ಲು;  ಶಿಖಿ= ಬೆಂಕಿ/ಅಗ್ನಿ; ವಾರಿ=ನೀರು; ಅಭ್ರ= ಮೋಡ; ಮೊಗೆ= ತುಂಬಿಕೊಳ್ಳು; ಉಪಸಂಹರಿಸು= ಬಿಟ್ಟ ಬಾಣವನ್ನು ಹಿಂದಕ್ಕೆ ತೆಗೆದುಕೊಳ್ಳುವುದು;

ವಿಗಡ= ಉಗ್ರವಾದ/ಬಲವುಳ್ಳ; ತಿಮಿರ+ಅಸ್ತ್ರ; ತಿಮಿರ= ಕತ್ತಲೆ; ಒಂದೇ ತುತ್ತು ಮಾಡು=ಒಂದೇ ಬಾರಿಗೆ ನುಂಗ/ಕಬಳಿಸು; ಗಿರಿ= ಬೆಟ್ಟ/ಪರ್ವತ; ಅದ್ರಿ= ಬೆಟ್ಟ/ಪರ್ವತ; ಮೇಘ= ಮೋಡ; ಉರಗ= ಹಾವು; ಭುಜಂಗ= ಹಾವು; ಅನಿಲ= ಗಾಳಿ/ವಾಯು; ಮಾರುತ= ಗಾಳಿ/ವಾಯುದೇವತೆ; ಪರುಠವ= ವಿಸ್ತಾರ/ ಹರಹು/ಹೆಚ್ಚಳ; ಅಡಿಗಡಿಗೆ= ಪದೇಪದೇ/ಮತ್ತೆಮತ್ತೆ;

ಉಬ್ಬರಿಸು= ಹಿಗ್ಗುತ್ತಿರಲು/ಆನಂದದಿಂದ ಕುಣಿದಾಡುತ್ತಿರಲು; ಅಂಧ= ಕುರುಡ; ಅಂಧ ನೃಪ= ಕುರುಡನಾಗಿದ್ದ  ದ್ರುತರಾಶ್ಟ್ರ ರಾಜ; ಗಂಗಾಭವ= ಗಂಗೆಯ ಮಗನಾದ ಬೀಶ್ಮ; ಸುಮ್ಮಾನ= ಹಿಗ್ಗು/ ಆನಂದ; ಜನನಿ= ತಾಯಿ; ಜವಳಿ= ಎರಡು/ಇಮ್ಮಡಿ; ದುಮ್ಮಾನ= ಸಂಕಟ/ದುಕ್ಕ; ಫಲುಗುಣ= ಅರ‍್ಜುನ; ಕೌತುಕ+ವಾಯ; ಕೌತುಕ= ಬಹು ಅಚ್ಚರಿಯನ್ನುಂಟು ಮಾಡುವ ಸಂಗತಿ; ವಾಯ= ಕಾರಣ; ಕೌತುಕವಾಯ= ಬಹಳ ಅಚ್ಚರಿ/ಹೆಚ್ಚಿನ ಆನಂದ; ಸಾಯಕ= ಬಾಣ; ಕರ್ಣ+ಆಯತ+ಅಂಬಕ; ಕರ್ಣ= ಕಿವಿ; ಆಯತ= ವಿಶಾಲವಾದ; ಅಂಬಕ= ಕಣ್ಣು; ಅನುಜರು= ತಮ್ಮಂದಿರು; ಮೇಳ= ಗುಂಪು/ಜತೆ; ತರಣಿ= ಸೂರ್ಯ; ಮಂಡಲ= ಗುಂಡಾಗಿರುವುದು; ಕರಿ= ಆನೆ; ತುರಗ= ಕುದುರೆ; ಶಿಕ್ಷಾವಿದ್ಯ= ಕಲಿತಿರುವ ವಿದ್ಯೆ; ಶಸ್ತ್ರ+ಉತ್ಕರ; ಉತ್ಕರ=ಸಮೂಹ; ಶ್ರಮ= ಆಯುದವನ್ನು ಪ್ರಯೋಗಿಸುವುದರಲ್ಲಿ ಕಲಿತಿರುವ ವಿದ್ಯೆ; ಪಾವಕ= ಬೆಂಕಿ; ಅನಿಲ= ಗಾಳಿ; ವಾರುಣ+ಆದಿಯನು; ವಾರುಣ=ನೀರು;

ಆದಿಯನು= ಮೊದಲಾದುವನ್ನು; ಐದೆ= ಚೆನ್ನಾಗಿ; ವಿರಚಿಸು=ಮಾಡಿ ತೋರಿಸು; ಸೆಣಸು= ಕಾದಾಡು/ ಹೋರಾಡು; ಶಿಖಿ= ಬೆಂಕಿ; ಒಗು= ಹೊರಹೊಮ್ಮುವುದು/ಕಾರುವುದು; ಕಣೆ= ಬಾಣ; ಶರ= ಬಾಣ; ಖಂಡಣಿ= ಕತ್ತರಿಸು/ಮುರಿಯುವುದು; ಕೋಲು=ಬಾಣ; ಕೋಲಾಟ= ಬಾಣಗಳನ್ನು ಪರಸ್ಪರ ಎದುರಾಗಿ ಒಬ್ಬರಿಗೊಬ್ಬರು ಪ್ರಯೋಗಿಸುವುದು; ಖಣಿ= ಬಾಣಗಳು ಡಿಕ್ಕಿ ಹೊಡೆದಾಗ ಉಂಟಾಗುವ ಶಬ್ದ; ಮಸಗು= ಹೆಚ್ಚಾಗು; ಚಳಕ= ವೇಗ/ಚತುರತೆ; ಎಚ್ಚು+ಆಡಿದರು; ಎಚ್ಚು= ಬಾಣ ಪ್ರಯೋಗ ಮಾಡುವುದು;

ವಾಯುಸುತ= ಬೀಮ; ದ್ರೋಣ+ಆದ್ಯರು; ಆದ್ಯರು= ಮೊದಲಾದವರು; ಖಾತಿ= ಕೋಪ; ನೃಪಹಾರ= ರಾಜರ ಸಾಲು/ರಾಜರ ಗುಂಪು; ಅನುನಾಯಕ= ರಾಜನನ್ನು ಅನುಸರಿಸುವವನು/ರಾಜನ ಹಿಂಬಾಲಕ/ರಾಜನ ನಂತರದವನು; ಮೇಣ್= ಇಲ್ಲವೇ; ಈತನು+ಆವನು; ಮಾರಾತು= ಎದುರಿಸು; ಕೈಮಾಡು=ಆಯುದವನ್ನು ಜಳಪಿಸು; ಕೈಕೊಳ್=ಲೆಕ್ಕಿಸು/ಪರಿಗಣಿಸು;

ಮಿಗೆ=ಹೆಚ್ಚಾಗಿ/ಬಹಳವಾಗಿ; ಮೈಯಾತನು/ಮುಯ್ಯಾತನು=ಹೆಮ್ಮೆಪಟ್ಟನು;  ಬಿನ್ನಣ=ಹೆಚ್ಚುಗಾರಿಕೆ/ಅತಿಶಯ; ಮೂರ್ಛಾ+ಆಪನ್ನೆಯಾದಳು; ಆಪನ್ನ=ಹೊಂದಿದ; ದುಗುಡ= ಆತಂಕ/ಉಮ್ಮಳ; ಮಿಗೆ= ಹೆಚ್ಚಾಗಲು; ಖಿನ್ನನಾದನು= ಸಂಕಟಕ್ಕೆ ಒಳಗಾದನು/ನೋವಿಗೆ ಗುರಿಯಾದನು; ಪಳಿವಾತು= ಪಳಿ+ಮಾತು; ಪಳಿ= ನಿಂದೆ/ಕೆಟ್ಟ ಆರೋಪ;

ಪಳಿವಾತು= ನಿಂದನೆಯ ನುಡಿ/ಅನ್ಯಾಯದ ಆರೋಪ; ಶಾತಕುಂಭ+ಆಸನ; ಶಾತಕುಂಭ= ಚಿನ್ನ/ ಹೊನ್ನು; ಆಸನ= ಕುರ್ಚಿ/ಪೀಟ; ಜಾತ= ಹುಟ್ಟಿದುದು/ಉತ್ಪನ್ನವಾದುದು; ಭದ್ರಾಸನ= ಸಿಂಹಾಸನ; ಸಿರಿಯನ್+ಇತ್ತನು; ಮೂರ್ಧ+ಅಭಿಷೇಚನ; ಮೂರ್ಧ= ತಲೆ;

ಅಭಿಷೇಚನ= ಕಿರೀಟವನ್ನು ತೊಡಿಸುವುದು; ಶೈಲ= ಬೆಟ್ಟ; ತರಣಿ+ಅಂತಿರೆ; ತರಣಿ= ಸೂರ್ಯ; ಎಸೆದನು= ಕಂಗೊಳಿಸಿದನು; ಸೂತ= ತೇರನ್ನು ನಡೆಸುವ ಕಸುಬು ಮಾಡುವವನು/ಸಾರತಿ/ಬೆಸ್ತ; ಸೂತ= ಕರ್ಣನ ಸಾಕು ತಂದೆ; ಐತರಲು= ಆಗಮಿಸಲು/ಅಲ್ಲಿಗೆ ಬರಲು; ಪದ= ಪಾದ; ಎರಗು= ನಮಸ್ಕರಿಸು; ಜನಜನಿತ= ಜನರೆಲ್ಲರಿಗೂ ತಿಳಿದಿರುವ ಸಂಗತಿ/ಜನರಲ್ಲಿ ಹಬ್ಬಿರುವ ಸುದ್ದಿ; ಭುವನ= ಲೋಕ/ಪ್ರಪಂಚ; ಭಂಗಿಸು= ಅಪಮಾನಗೊಳಿಸು; ಅದು+ಆರು;

ಪವನ= ವಾಯುದೇವ; ಎವಗೆ= ನಮಗೆ; ಅವಘಡಿಸು= ಕಡೆಗಣಿಸು/ಹೀಯಾಳಿಸು; ಗಜಬಜ= ಗದ್ದಲ/ಗಲಾಟೆ/ಕೋಲಾಹಲ; ಕೈದು= ಆಯುದ/ಶಸ್ತ್ರ; ಸೆಳೆ= ಹೊರತೆಗೆ; ಉಲುಹು= ಮಾತು; ಕಳ= ಪ್ರದರ್ಶನದ ಬಯಲು/ಆಟದ ಬಯಲು; ಕೈದೊಳಸು+ಆಯ್ತು; ಕೈದೊಳಸು= ಕಯ್ ಕಯ್ ಮಿಲಾಯಿಸಿ ಗುದ್ದಾಡುವುದು; ಹಣಿ= ಹೊಡೆ/ಬಡಿ ; ಹರಿ= ನಡೆ/ಸಾಗು ;

ಹೊಸಗನ್ನಡ ಗದ್ಯ

ಅಲ್ಲೋಲಕಲ್ಲೋಲವಾದ ಸಮುದ್ರದಂತೆ ಜನಸಾಗರದಲ್ಲಿ ಹುಟ್ಟಿದ ಉದ್ವೇಗದಲ್ಲಿ ಒಳ್ಳೆಯ ನುಡಿಯಿಂದ ಕೂಡಿದ ವಾಗ್ವಾದಗಳು ಹೆಚ್ಚಾದವು. ಪ್ರಳಯಕಾಲದ ಮೋಡಗಳಿಗೆ ಪಾಟ ಹೇಳುತ್ತಿರುವುವೋ ಎನ್ನುವಂತೆ ವಾದ್ಯಗಳು ಶಬ್ದ ಮಾಡಿದವು. ಈ ಶಬ್ದದ ಗಜಬಜದ ನಡುವೆ ಗುರುವಿನ ಸಂಕೇತದ ಅನುಸಾರ ಅರ‍್ಜುನನು ಎದ್ದನು. “ಇವನಾರು…ಅರ‍್ಜುನನೇ…ಸಾಕು..ಮಾತು ನಿಲ್ಲಿಸಿ..ನಿಲ್ಲಿಸಿ ” ಎಂದು ಹೇಳುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿದ್ದವರೆಲ್ಲರೂ ಸುಮ್ಮನಾದರು. ಬಯಗೊಂಡ ವಾತಾವರಣದ ರಂಗದ ಮೇಲೆ ಅರ‍್ಜುನನು ಕಾಣಿಸಿಕೊಂಡನು. ಜನವು ಈತನನ್ನು ಕೊಂಡಾಡುತ್ತಿತ್ತು.

ದ್ರೋಣ ಕ್ರುಪ ಮೊದಲಾದ ಪೂಜ್ಯರಿಗೆ ಅರ‍್ಜುನನು ನಮಸ್ಕರಿಸಿದನು. ಕತ್ತೆತ್ತಿ ದೇವತೆಗಳ ಸಮೂಹಕ್ಕೆ ಹಣೆಯಲ್ಲಿ ಮೇಲೆ ಕಯ್ಯನ್ನು ಇಟ್ಟು ನಮಸ್ಕರಿಸಿದನು. “ ಪಾಣವನ್ನೇ ಒಡ್ಡಿದ ಪ್ರದರ‍್ಶನವಿದು. ಎಲ್ಲಾ ವಿದ್ಯೆಗಳನ್ನು ಕಲಿತ ಜಾಣತನಕ್ಕೆ ತಕ್ಕ ವಿನಯವಿದು.” ಎಂದು ಮತ್ಸರವಿಲ್ಲದೆ ಅಲ್ಲಿದ್ದವರೆಲ್ಲ ಅರ‍್ಜುನನ್ನು ಹೊಗಳಿದರು. ತಾನು ಅಚಲವಾಗಿ ನಿಲ್ಲುವುದರಲ್ಲಿ, ಕಯ್ ಚಳಕದಲ್ಲಿ, ಬಂಗಿಯಲ್ಲಿ, ವೇಗದಲ್ಲಿ, ಚಾಕಚಕ್ಯತೆಯಲ್ಲಿ, ಆಕರ‍್ಶಣೆಯಲ್ಲಿ, ಪರಾಕ್ರಮದಲ್ಲಿ, ಕ್ರಮದಲ್ಲಿ, ಕಲ್ಪನಾಶಕ್ತಿಯಲ್ಲಿ, ಮನಸ್ಸಿನ ಏಕಾಗ್ರತೆಯಲ್ಲಿ…ಶಸ್ತ್ರಪ್ರಯೋಗದ ಎಲ್ಲ ಅಂಗಗಳಿಂದ ಕೂಡಿದ ತನ್ನ ಸಾದನೆಯನ್ನು ಅರ‍್ಜುನನು ತೋರಿಸಿದನು.

ಜನಸಮೂಹ “ ಕುದುರೆಗಳ ಸಮೂಹದ ರೇವಂತ…ಮದಿಸಿದ ಆನೆಯ ಮಹಾ ದೇವೇಂದ್ರ…ಆಕಾಶ ಸಂಚರಣದಲ್ಲಿ ಉತ್ತಮನಾದ ಸೂರ‍್ಯ ” ಎಂದು ಗಟ್ಟಿಯಾಗಿ ಕೂಗಲು, ಕುದುರೆ ಆನೆ ತೇರು ಮೊದಲಾದವುಗಳಲ್ಲಿ ತನ್ನ ಕಲಿಕೆಯ ನಿಪುಣತೆಯನ್ನು ಅರ‍್ಜುನನು ತೋರಿಸಿದನು. ಗುರು, ಕ್ರುಪ, ಬೀಶ್ಮರು ರೋಮಾಂಚನಗೊಂಡು ಆನಂದಾಶ್ರುಗಳಲ್ಲಿ ಮುಳುಗಿದರು. ಕೆಟ್ಟವರಿಗೆ ಹೆದರಿಕೆಯಾಗುವಂತೆ ತನ್ನ ಶಕ್ತಿಯನ್ನು ತೋರಿಸಬೇಕೆಂದು ಮತ್ತೆ ಬಿಲ್ಲನ್ನು ಕೈಗೆತ್ತಿಕೊಂಡನು. ಗುಂಪನ್ನು “ ಅತ್ತ ಕಡೆ ಹೊಡೆ..ಹೊಡೆ…ಹೋಗ ಹೇಳು ” ಎಂದು ಹೇಳುತ್ತ ಬತ್ತಳಿಕೆಯಿಂದ ಬಾಣವನ್ನು ಹೊರತೆಗೆದು, ಬಿಲ್ಲಿನಲ್ಲಿ ಹೂಡಿ ಆಕಾಶಕ್ಕೆ ಬಿಟ್ಟನು. ಆಗ್ನೇಯಾಸ್ತ್ರದ ಬೆಂಕಿಯ ಕೆನ್ನಾಲಿಗೆಯಲ್ಲಿ ಕಪ್ಪಾದ ಹೊಗೆ ಸುತ್ತಿಕೊಂಡು ದೊಡ್ಡ ಉರಿ ಕಾಣಿಸಿತು. ಆಗ್ನೇಯಾಸ್ತ್ರದಿಂದ ಉಂಟಾದ ಉರಿಯನ್ನು ವಾರುಣಾಸ್ತ್ರ ಪ್ರಯೋಗದಿಂದ ತಗ್ಗಿಸಿದನು. ಅದ್ಬುತವಾಗಿ ಆಕಾಶವು ನೀರಿನಿಂದ ತುಂಬಿಕೊಂಡಿತು. ಮತ್ತೆ ಅದನ್ನು ಹಿಂದಕ್ಕೆ ತೆಗೆದುಕೊಂಡನು. ಬಯಂಕರವಾದ ತಿಮಿರಾಸ್ತ್ರದಿಂದ ಸೂರ‍್ಯನ ಬೆಳಕನ್ನು ಒಂದೇ ತುತ್ತಿನಲ್ಲಿ ನುಂಗುವಂತೆ ಮಾಡಿದನು. ದೇವತೆಗಳ ಸಮೂಹಕ್ಕೆ ಅಚ್ಚರಿಯಾಗುವಂತೆ ಸೂರ‍್ಯಾಸ್ತ್ರದಿಂದ ಕತ್ತಲನ್ನು ನಿವಾರಿಸಿದನು.
ಪರ‍್ವತಾಸ್ತ್ರಗಳಿಂದ ಬೆಟ್ಟಗಳನ್ನು, ಮೇಗಾಸ್ತ್ರದಿಂದ ಮೋಡಗಳನ್ನು, ಸರ‍್ಪಾಸ್ತ್ರದಿಂದ ಹೆಚ್ಚಿನ ಸರ‍್ಪಗಳನ್ನು, ವಾಯುವ್ಯಾಸ್ತ್ರದಿಂದ ಬಿರುಗಾಳಿಯ ವಿಸ್ತಾರವನ್ನು ತೋರಿಸಿದನು. ಅಡಿಗಡಿಗೆ ಜನರ ಆನಂದದ ಉದ್ಗಾರವನ್ನು ಕೇಳಿ ಸಂಗತಿಯನ್ನರಿತ ದ್ರುತರಾಶ್ಟ್ರನು ತಲೆತಗ್ಗಿಸುವಂತಾಯಿತು. ಆನಂದಪಟ್ಟವನಂತೆ ನಟಿಸಿದನು.

ಗಂಗಾಪುತ್ರರಾದ ಬೀಶ್ಮರು, ಕ್ರುಪ ದ್ರೋಣಾದಿಗಳಿಗೆ ಸಂತೋಶವಾಯಿತು. ದ್ರುತರಾಶ್ಟ್ರಾದಿ ಕೌರವ ತಲೆಗಳು ತಗ್ಗಿದವು. ಇವರ ತಾಯಿ ಕುಂತಿಯ ಮುಕದ ಆನಂದವನ್ನೂ ದುರ‍್ಯೋದನನ ತಾಯಿ ಗಾಂದಾರಿಯ ಎರಡು ಪಟ್ಟು ದುಗುಡವನ್ನು ವರ‍್ಣಿಸಲು ನನಗೆ ತಿಳಿಯದೆಂದು ವೈಶಂಪಾಯನು ಜನಮೇಜಯ ರಾಜನಿಗೆ ಹೇಳಿದನು. ಅರ‍್ಜುನನ ಶಸ್ತ್ರಾಸ್ತ್ರಗಳ ಪ್ರಯೋಗ ಪರಿಣತಿಯನ್ನು ನೋಡಿ, ಸಬಿಕರಲ್ಲಿ ಬಹುತೇಕ ಮಂದಿ ಮೆಚ್ಚುಗೆಯಿಂದ ಹೊಗಳುತ್ತಿರುವಾಗ…ಕರ‍್ಣನು ಕಯ್ಯಲ್ಲಿ ಬಾಣವನ್ನು ತಿರುಗಿಸುತ್ತ “ ಅರ‍್ಜುನನನ್ನು ಹೊಗಳುವ ನಾಯಿಗಳ ಬಾಯನ್ನು ಹೊಡೆಯಿರಿ…ಏನಾಯ್ತು ಅಂತಹ ಅಚ್ಚರಿ… ವಿನಾಕಾರಣ ಹೊಗಳುತ್ತಿದ್ದಾರೆ…ಇವರ ಪಕ್ಶಪಾತವನ್ನು ನೋಡು…ನೋಡು ” ಎಂದು ನುಡಿಯುತ್ತ , ತನ್ನ ಎಡಬಲದಲ್ಲಿ ದುರ‍್ಯೋದನನ ತಮ್ಮಂದಿರ ಗುಂಪಿನೊಂದಿಗೆ ಶಸ್ತ್ರಾಸ್ತ್ರ ಪ್ರದರ‍್ಶನದ ರಂಗಕ್ಕೆ ಬಂದನು. ಗುರುಗಳಿಗೆ ಕೈಮುಗಿದು , ಸೂರ‍್ಯಮಂಡಲಕ್ಕೆ ತಲೆಬಾಗಿ ನಮಸ್ಕಾರ ಮಾಡಿ, ನೋಡುವ ಸಮೂಹಕ್ಕೆ “ ಇವನು ಯಾರು… ಈತನಾರು ” ಎಂಬ ಅಚ್ಚರಿಯನ್ನುಂಟುಮಾಡಿದನು. ಮಹಾರಾಜ ಕೇಳು, ಕರ‍್ಣನು ನಾನಾ ಬಗೆಯ ಆಯುದ ಪ್ರಯೋಗಗಳಲ್ಲೂ…ಆನೆ, ಕುದುರೆ, ತೇರು ಮೊದಲಾದ ವಾಹನಗಳ ವಿಚಾರದಲ್ಲಿಯೂ ಸಾದನೆಯನ್ನು ತೋರಿಸಿದನು. ಯಾವ ವಿದದಲ್ಲಿ ಅರ‍್ಜುನನು ಅಗ್ನಿ, ವಾಯು, ವಾರುಣ ಮೊದಲಾದ ದಿವ್ಯವಾದ ಅಸ್ತ್ರಗಳನ್ನು ಪ್ರಯೋಗಿಸಿದನೋ… ಅದೇ ವಿದಾನದಲ್ಲಿ ಸುಲಬವಾಗಿ ಅರ‍್ಜುನನ ಪರಾಕ್ರಮವನ್ನು ಕಲಿಕರ‍್ಣನೂ ತೋರಿಸಿದನು.

“ ಹೋರಾಡುವ ಹಾಗಿದ್ದರೆ ಬಾ” ಎಂದು ಅರ‍್ಜುನನನ್ನು ಕರ‍್ಣನು ಕೆಣಕಿದನು. ಕೆರಳಿದ ಕೋಪಾಗ್ನಿಯಿಂದ ಇಬ್ಬರ ಮೀಸೆಗಳೂ ಕುಣಿದವು…ಕಣ್ಣುಗಳು ಕೆಂಪನ್ನು ಹೊರಸೂಸಿದವು… ಬಾಣ ಬಾಣಗಳ ಆಟದಲ್ಲಿ ಬಾಣಗಳನ್ನು ಕತ್ತರಿಸುವ ಪ್ರಯೋಗದ ಆಟದಲ್ಲಿ “ ಕಣಿ ಕಣಿ ಕಣಿಲು ಕಣಿ ಕಣಿ ” ಎಂಬ ದನಿ ಕೇಳಿಬರುತ್ತಿರಲು, ಚತುರತೆಯಿಂದ ಇಬ್ಬರೂ ಬಾಣ ಪ್ರಯೋಗ ಮಾಡಿದರು.
ಇದನ್ನು ಕಂಡು ರಾಜ ಪರಿವಾರ ಚಿಂತೆಗೀಡಾಯಿತು. “ ಹೋ…ಹೋ…ಇದೇನು ಏನು” ಎನ್ನುತ್ತ ಬೀಮಸೇನ, ಕ್ರುಪ, ಅಶ್ವತ್ತಾಮ, ದ್ರೋಣ ಮೊದಲಾದವರು ಅರ‍್ಜುನನ್ನು ಹಿಡಿದರು. “ ಆಗ ಕ್ರುಪನು  ಆಯಿತು, ಎಲವೋ ಕರ‍್ಣ, ನೀನು ರಾಜರ ಶ್ರೇಣಿಯಲ್ಲಿ ನಾಯಕನೋ ಇಲ್ಲವೇ ನಾಯಕನ ಹಿಂಬಾಲಕನೋ…ನೀನು ಯಾರು ” ಎಂದು ಕೋಪದಿಂದ ಕೇಳಿದನು.

“ ಕರ‍್ಣನೆಂಬುವವನು ಇವನು ಯಾರು?…ಇವನು ಅರ‍್ಜುನನ್ನು ಎದುರಿಸಿ ಮೇಲೆ ಬಿದ್ದನು…ಇವನು ಅವನನ್ನು ಲೆಕ್ಕಿಸುವವನಲ್ಲ… ಇವನಲ್ಲೇನೂ ತಪ್ಪಿಲ್ಲ ” ಎನ್ನುತ್ತ ದ್ರುತರಾಶ್ಟ್ರನು ಹೆಮ್ಮೆಪಟ್ಟನು. ಇವನ ತಾಯಿ ಕುಂತಿಯು ಹಿಂದಿನ ಪ್ರಸಂಗವನ್ನು ನೆನಪಿಸಿಕೊಂಡಳು. ಆದರೂ “ ಇವನು ನನ್ನ ಮಗ ” ಎನ್ನುವುದಕ್ಕಾಗಲಿಲ್ಲ…ಅದು ಅವಳ ವಶವೇ… ವಿಶ್ಣು ಮಾಯೆಯ ಚತುರತೆಯಲ್ಲವೇ…ಮನದ ಬಯಕೆಯನ್ನು ಒಳಕ್ಕೆ ಅದುಮುದುದರಿಂದ ಮಾತು ಕಟ್ಟಿಹೋಯಿತು… ತನ್ನ ಸ್ತಿತಿಗೆ ತಾನೇ ಮರುಗಿದ ಕುಂತಿ ಮೂರ‍್ಚೆ ಹೊಂದಿದಳು. ಇತ್ತ ಕಡೆ ಕ್ರುಪ ಮಾತಿನಿಂದ ಸಂಕಟ ಹೆಚ್ಚಾಗಿ ಕರ‍್ಣನು ನೊಂದನು.

“ ಈತನು ರಾಜನಲ್ಲವೆಂದು ಕ್ರುಪ ನಿಂದಿಸುತ್ತಿರುವನೇ…ತಪ್ಪೇನು…ನನ್ನ ರಾಜ್ಯದಲ್ಲಿ ಈತನನ್ನು ಅರಸನು ಎನಿಸುತ್ತೇನೆ… ನಮ್ಮ ಪುರೋಹಿತರನ್ನು ಕರೆಯಿರಿ…ಚಿನ್ನದ ಗದ್ದಿಗೆ, ಮಂಗಳವಸ್ತುಗಳನ್ನು ತರಿಸಿ ” ಎಂದು ಆದೇಶವನ್ನು ನೀಡುತ್ತ, ಆ ಗಳಿಗೆಯಲ್ಲಿಯೇ ದುರ‍್ಯೋದನನು ಉತ್ಸಾಹದಿಂದ ಮೇಲೆದ್ದನು. ಉತ್ತಮವಾದ ಗದ್ದಿಗೆಯನ್ನು ತರಿಸಿ, ಕರ‍್ಣನಿಗೆ ಅಂಗದೇಶದ ಒಡೆತನವನ್ನು ಕೊಟ್ಟು ಮಸ್ತಕಾಬಿಶೇಕವನ್ನು ಮಾಡಿದನು. ಎಲ್ಲ ರಾಜರು ಬೇಟಿಯಾಗಿ ಕರ‍್ಣನನ್ನು ಕಂಡರು. ಪೂರ‍್ವದ ಬೆಟ್ಟದ ಮೇಲಿನ ಸೂರ‍್ಯನಂತೆ ಕರ‍್ಣನು ರಾಜ ತೇಜಸ್ಸಿನಿಂದ ಕಂಗೊಳಿಸಿದನು.

ಈತನ ಆನಂದವನ್ನು ತನ್ನದೆಂದೇ ಬಾವಿಸಿ ಪ್ರೀತಿಯಿಂದ ಸಾಕು ತಂದೆಯಾದ ಸೂತನು ಬಂದಾಗ, ಕರ‍್ಣನು ಸಿಂಹಾಸನದಿಂದಿಳಿದು ಅವನ ಪಾದಗಳಿಗೆ ನಮಸ್ಕರಿಸಿದನು. ಆಗ “ ಇವನು ಸೂತನ ಮಗ ” ಎಂದು ಎಲ್ಲರಿಗೂ ತಿಳಿಯಿತು. ನಂತರ ಇದು ಲೋಕ ಪ್ರಸಿದ್ದವಾಯಿತು. ಕರ‍್ಣನ ಕುಲವನ್ನು ಎತ್ತಿ ಆಡಿ, ನಸುನಗುತ್ತ ಅವಮಾನಿಸಿ ಬೀಮನ ನುಡಿದನು. ಅದನ್ನು ಕೇಳಿ ದುರ‍್ಯೋದನನು ಕೆರಳಿ ಕೋಪದಿಂದ  “ ಇವನ ತಂದೆ ಯಾರು… ಪಾಂಡುವೋ… ವಾಯುವೋ…ಕ್ರುಪಾ, ನಿಮ್ಮ ಜನ್ಮವನ್ನು ನನಗೆ ತಿಳಿಸಿರಿ…ಹಿರಿಯ ಗುರುಗಳಾದ ದ್ರೋಣರ ತಾಯಿ ಅದಾವಳೋ…ಹೀಯಾಳಿಸದಿರಿ…ನಿಮ್ಮ ಹಿರಿಯತನಕ್ಕಾಗಿ ಹಿಂಜರಿದು ಸುಮ್ಮನಿದ್ದೇನೆ ” ಎಂದು ದ್ರೋಣ ಕ್ರುಪಾದಿಗಳ ಬಗ್ಗೆ ಹೀನಾಯವಾಗಿ ಮಾತನಾಡಿದನು. ಸಬೆಯೊಳಗೆ ಗದ್ದಲವಾಯ್ತು. ಅಲ್ಲಲ್ಲಿದ್ದವರು ಅಲ್ಲಲ್ಲೆ ಆಯುದಗಳನ್ನು ಸೆಳೆದುಕೊಂಡರು…ಗುರು ದ್ರೋಣ ಮತ್ತು ಕ್ರುಪರ ದನಿಯನ್ನು ಕೇಳುವವರಿಲ್ಲ… ಕ್ರೀಡಾಂಗಣದಲ್ಲಿ ಜಗಳವೇ ಆರಂಬವಾಯಿತು. ಬೀಶ್ಮ ಮೊದಲಾದವರು ಪೀಟಗಳಿಂದ ಇಳಿದು ತಮ್ಮ ತಮ್ಮ ಮನೆಗಳಿಗೆ ಹೊರಟರು…ಎರಡು ಬಲದವರೂ ತಮ್ಮ ತಮ್ಮಲ್ಲೆ ಹೊಡೆದಾಡಿಕೊಂಡು ಹೊರಟುಹೋದರು. ಜನಮೇಜಯ ಮಹಾರಾಜನೇ ಕೇಳು “ ಕೆಲವರು ಬೀಮನನ್ನು…ಕೆಲವರು ಅರ‍್ಜುನನ್ನು…ಕೆಲವರು ಕರ‍್ಣನನ್ನು…ಮತ್ತೆ ಕೆಲವರು ದುರ‍್ಯೋದನನ್ನು ಹೊಗಳುತ್ತ ಹಸ್ತಿನಾಪುರದೊಳಕ್ಕೆ ಬಂದರು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *