ಹೆತ್ತಕರುಳಿನ ಮರೆಯಲ್ಲಿ…

ಸಿ.ಪಿ.ನಾಗರಾಜ

ಕಳೆದ ಒಂದೆರೆಡು ವರುಶಗಳ ಹಿಂದೆ, ನಮ್ಮ ಪಕ್ಕದ ಊರಿನಲ್ಲಿ ಹೆಂಗಸರ ಒಕ್ಕೂಟವೊಂದು ತುಂಬಾ ಚಟುವಟಿಕೆಯಿಂದ ಕೂಡಿತ್ತು. ಈ ಒಕ್ಕೂಟದ ವತಿಯಿಂದ ದರ‍್ಮಸ್ತಳ, ಉಡುಪಿ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಮುಂತಾದ ಊರುಗಳ ಕಡೆಗೆ ಒಮ್ಮೆ ನಾಲ್ಕಾರು ದಿನಗಳ ಕಾಲ ಹೆಂಗಸರು ಪ್ರವಾಸ ಹೊರಟರು. ಪ್ರವಾಸಿಗರಲ್ಲಿ ಹದಿನಾರರ ಹರೆಯದವರಿಂದ ಹಿಡಿದು ಅಯ್ವತ್ತು-ಅಯ್ವತ್ತಯ್ದು ವಯೋಮಾನದ ನಲವತ್ತು ಮಂದಿ ಹೆಂಗಸರು ಮತ್ತು ಅಯ್ದು ಮಂದಿ ಗಂಡಸರಿದ್ದರು. ಈ ಗಂಡಸರಲ್ಲಿ ಇಬ್ಬರು ಅಡಿಗೆಯವರು, ಒಬ್ಬ ಮಾರ‍್ಗದರ‍್ಶಿ, ಮತ್ತಿಬ್ಬರು ಬಸ್ ಚಾಲಕ ಮತ್ತು ಕ್ಲೀನರ್.

ಸುಮಾರು ಇಪ್ಪತು-ಇಪ್ಪತ್ತೆರಡರ ಹರೆಯದ ಚಾಲಕನು ಹೊಚ್ಚಹೊಸದಾಗಿದ್ದ ಸರ‍್ಕಾರಿ ಬಸ್ಸನ್ನು ಬಹಳ ಚೆನ್ನಾಗಿ ಓಡಿಸುತ್ತಿದ್ದನು. ಕುತೂಹಲ ಹಾಗೂ ಉತ್ಸಾಹದಿಂದ ದೇಗುಲಗಳನ್ನು ನೋಡಲು ಮತ್ತು ಅಂಗಡಿಮುಂಗಟ್ಟುಗಳಲ್ಲಿ ಬಗೆಬಗೆಯ ಸಾಮಾನುಗಳನ್ನು ಕೊಳ್ಳಲು ಬಸ್ಸಿನಿಂದ ಇಳಿದು ಹೋಗುತ್ತಿದ್ದ ಹೆಂಗಸರು, ಹೇಳಿದ ಸಮಯಕ್ಕೆ ಸರಿಯಾಗಿ ಬಸ್ ಹತ್ತದಿದ್ದರೂ, ಆತುರಮಾಡದೆ ಎಲ್ಲಾ ಜಾಗಗಳಲ್ಲಿಯೂ ಚಾಲಕನು ತಾಳ್ಮೆಯಿಂದ ಸಹಕರಿಸುತ್ತಿದ್ದನು. ಪ್ರವಾಸ ಹೊರಟ ಒಂದೆರಡು ದಿನಗಳಲ್ಲಿಯೇ ನಗುಮೊಗದ ಚಾಲಕನು ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾದನು.

ನೋಡಬೇಕೆಂದಿದ್ದ ಎಲ್ಲಾ ಎಡೆಗಳನ್ನು ಯಾವ ಅಡೆತಡೆಗಳಿಲ್ಲದೆ ಆನಂದವಾಗಿ ನೋಡಿದ ನಂತರ, ಪಯಣಿಗರೆಲ್ಲರೂ ಬಸ್ಸಿನಲ್ಲಿ ಕುಳಿತು ನೆಮ್ಮದಿಯಿಂದ ಊರಿಗೆ ಹಿಂತಿರುಗುತ್ತಿದ್ದರು. ಬಸ್ಸು ಸಾಕಶ್ಟು ವೇಗವಾಗಿ ಸಾಗುತ್ತಿತ್ತು. ಸಂಜೆ ಅಯ್ದರ ಸಮಯ… ಎಡೆಬಿಡದ ತಿರುಗಾಟದಿಂದ ಬಳಲಿದ್ದ ಪ್ರವಾಸಿಗರಲ್ಲಿ ಬಹುತೇಕ ಮಂದಿ ಅರೆನಿದ್ರೆಯಲ್ಲಿದ್ದರು. ವೇಗವಾಗಿ ಸಾಗುತ್ತಿದ್ದ ಬಸ್ಸಿಗೆ ಇದ್ದಕ್ಕಿದ್ದಂತೆ ಅಡ್ಡಲಾಗಿ ನುಗ್ಗಿದ ಯಾರನ್ನೋ ಉಳಿಸುವುದಕ್ಕಾಗಿ ಚಾಲಕನು ಒಮ್ಮೆಲೇ ಬಲವಾಗಿ ಬ್ರೇಕ್ ಹಾಕಿದಾಗ, ಬಸ್ಸಿನಲ್ಲಿದ್ದವರೆಲ್ಲಾ ಕುಳಿತಲ್ಲಿಂದ ಮುಂದಕ್ಕೆ ಜಗ್ಗಿಬಿದ್ದರು. ಜತೆಯಲ್ಲೇ ” ಅಯ್ಯಯ್ಯೋ…” ಎಂದು ಅರಚುತ್ತಿರುವುದು ಬಸ್ಸಿನ ಹೊರಗಡೆಯಿಂದ ಕೇಳಿಬಂತು. ಬಸ್ಸಿನ ಒಳಗಿದ್ದವರೆಲ್ಲಾ ” ಏನಾಯಿತೋ ಏನೋ ” ಎಂಬ ಗಾಬರಿ ಹಾಗೂ ಹೆದರಿಕೆಯಿಂದ ನಡುಗತೊಡಗಿದರು. ಬಸ್ಸನ್ನು ನಿಲ್ಲಿಸಿದ ಚಾಲಕನು, ಒಂದೇ ಗಳಿಗೆಯಲ್ಲಿ ಕೆಳಕ್ಕಿಳಿದು ಬಂದು ನೋಡಿದ.

ನಾಲ್ಕು ಕುರಿಗಳ ಮೇಲೆ ಬಸ್ಸಿನ ಚಕ್ರ ಹರಿದು, ಮಾಂಸದ ತುಂಡುಗಳು ಚಲ್ಲಾಪಿಲ್ಲಿಯಾಗಿ… ರಕ್ತ ಎಲ್ಲೆಡೆ ಹರಿಯುತ್ತಿತ್ತು. ಕುರಿಗಳನ್ನು ಮೇಯಿಸಲು ಬಂದಿದ್ದ ಇಬ್ಬರು ಹುಡುಗರು ಬಾಯಿ ಬಡಿದುಕೊಳ್ಳುತ್ತಾ, ರಸ್ತೆಯಂಚಿನಿಂದ ಸುಮಾರು ಒಂದು ಪರ‍್ಲಾಂಗ್ ದೂರದಲ್ಲಿದ್ದ ತಮ್ಮ ಹಳ್ಳಿಯತ್ತ ಬಿದ್ದಂಬೀಳ ಓಡುತ್ತಿದ್ದರು. ಬಸ್ಸಿನೊಳಗಿಂದ ದಡದಡನೆ ಇಳಿದು ಬಂದವರೆಲ್ಲಾ, ಅಲ್ಲಿ ಆಗಿದ್ದ ಅನಾಹುತವನ್ನು ಕಂಡು, ಮತ್ತಶ್ಟು ಆತಂಕದಿಂದ ” ಏನಾಯಿತೆಂದು ” ಚಾಲಕನನ್ನು ಕೇಳತೊಡಗಿದರು. ಓಡುತ್ತಿದ್ದ ಹುಡುಗರತ್ತ ಚಾಲಕನು ಕಯ್ಯನ್ನು ತೋರಿಸುತ್ತಾ-

“ಆ ಹುಡುಗ್ರು ಎಂತಾ ಕೆಲ್ಸ ಮಾಡ್ಬುಟ್ರು ಅಂತ….ಅಲ್ನೋಡಿ ಅಲ್ ಕಾಣ್ತಾದಲ್ಲ ಆ ಒಬ್ಬೆ ಮರೆಯಿಂದ ರಸ್ತೆಗೆ ಏಕ್‌ದಮ್ ನುಗ್ಗಿ ಬಂದ ಕುರಿಗಳ ಜೊತೆಗೆ ಅವರಿಬ್ಬರು ಬಸ್ಸಿಗೆ ಅಡ್ಡಲಾಗಿ ಬಂದ್ಬುಟ್ರು.. ನಾನು ಒಸಿ ಏಮಾರಿದ್ರು… ಅವರಿಬ್ಬರ ಮ್ಯಾಲೆ ಬಸ್ ಹರ‍್ದುಬುಡ್ತಿತ್ತು. ಅವರನ್ನ ಬಚಾವ್ ಮಾಡೂದಕ್ಕೆ ಹೋಗಿ… ಈ ಕುರಿಗಳ ಮೇಲೆ ಬಸ್ ಬುಡ್ಬೇಕಾಯ್ತು” ಎಂದು ಅವಗಡ ನಡೆದ ರೀತಿಯನ್ನು ವಿವರಿಸಿದ. ಅಲ್ಲಿದ್ದ ಹೆಂಗಸರ ಗುಂಪಿನಿಂದ ತರಾವರಿ ಮಾತುಗಳು ಕೇಳಿಬರತೊಡಗಿದವು.

“ಹೆಂಗೊ ಬುಡಪ್ಪ… ಆ ಹುಡುಗ್ರ ಜೀವ ಉಳ್ಸಿ ಪುಣ್ಯ ಕಟ್ಕೊಂಡೆ.”

“ಓಹೋ…. ನೋಡ್ರವ್ವ ಅಲ್ಲಿ…ಮಾರಿಗುಡಿ ಮುಂದೆ ಮರಿ ಕೂದಂಗೆ ರತ್ತ ಹರೀತಾದಲ್ಲ!”

“ಹರುದ್ರೆ ಹರೀತದೆ ಸುಮ್ನಿರಮ್ಮಿ… ಅವು ಯಾವತ್ತಿದ್ರು ಕುಯ್ಕೊಂಡು ತಿನ್ತಿದ್ದವು ತಾನೆ ?… ದರ‍್ಮಸ್ತಳದ ಮಂಜುನಾತನ ದಯದಿಂದ ಹೆಂಗೊ ಎರ‍್ಡು ಅಯ್ಕಳು ಜೀವ ಉಳ್ಕೋತಲ್ಲ ! ಅಶ್ಟೇ ಸಾಕು.”
ಮಾರ‍್ಗದರ‍್ಶಿಯಾಗಿ ಬಂದಿದ್ದ ವ್ಯಕ್ತಿಯು ಚಾಲಕನೊಡನೆ ಈಗ ಉಂಟಾಗಿದ್ದ ಸನ್ನಿವೇಶದ ಲೆಕ್ಕಾಚಾರದಲ್ಲಿ ತೊಡಗಿದನು.

“ಆ ಹಯ್ಕಳು ಹೊಂಗ್ಲೋ ಅಂತ ಬಡ್ಕೊಂಡು ಊರೊಳಕ್ಕೆ ಹೋಗವ್ರಲ್ಲ… ಇನ್ನೇನು ಕುರಿಯೋರು ಇಲ್ಲಿಗೆ ಬತ್ತರೆ… ಬಂದ್ಮೇಲೆ ನಮ್ಮನ್ನ ಸುಮ್ನೆ ಬುಟ್ಟರೆ ?… ಏನಿದ್ರು ಸತ್ತೋಗಿರು ನಾಲ್ಕು ಮರಿಗಳ ದುಡ್ಡ ವಸೂಲ್ ಮಾಡ್ಕೊಂಡೆ ಮುಂದಕ್ಕೆ ಬುಡೋದು.”

“ನಂದೇನೂ ತಪ್ಪಿಲ್ಲ… ಮತ್ತ ಆ ಹುಡುಗ್ರ ಜೀವ ಉಳಿಸಿದ್ದೀನಿ ನಾನು. ಹಂಗೆಲ್ಲಾ ನೀವು ಹೆದುರ‍್ಕೊಬ್ಯಾಡಿ ಸುಮ್ಮಿರಿ” ಎಂದು ಚಾಲಕನು ನುಡಿಯುತ್ತಿದ್ದಂತೆಯೇ, ಆ ಹಳ್ಳಿಯ ಕಡೆಯಿಂದ ಹತ್-ಹದಿನಯ್ದು ಮಂದಿ ಗಂಡಸರು ಕಯ್ಯಲ್ಲಿ ಕೋಲು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಬಸ್ಸಿನತ್ತ ಓಡೋಡಿ ಬರುತ್ತಿರುವುದು ಕಣ್ಣಿಗೆ ಬಿತ್ತು. ಬಸ್ಸಿನಿಂದ ಇಳಿದು ನಿಂತಿದ್ದ ಹೆಂಗಸರು ಅವರನ್ನು ಕಂಡು, ಈಗ ಏನಾಗುವುದೋ ಏನೋ ಎಂಬ ಆತಂಕದಿಂದ ಕಳವಳಕ್ಕೀಡಾದರು.

“ಇದೇನಪ್ಪ… ಇವರ ಮನೆ ಕಾಯ್ನಾಗ… ಹಿಂಗೆ ದೊಣ್ಣೆಗಳನ್ನು ತಕೊಂಡು ಬತ್ತಾವ್ರೆ… ಅಯ್ಯಯ್ಯೋ… ಹೆಂಗಪ್ಪ ಇವ್ರ ಎದುರ‍್ಸೋದು!”

“ಗುರುತು ಪರಿಚಯ ಇಲ್ದೇ ಇರೂ ಜಾಗದಲ್ಲಿ ಸಿಗಾಕೊಂಡಂಗಾಯ್ತಲ್ಲ…ಈಗೇನಪ್ಪ ಮಾಡೋದು?” – ಎಂದು ಒಂದಿಬ್ಬರು ಹೆಂಗಸರು ಪೇಚಾಡುತ್ತಿರುವಾಗ… ಸುಮಾರು ಅಯ್ವತ್ತರ ವಯೋಮಾನದ ಪುಟ್ಟಚೆನ್ನಮ್ಮ ಎಂಬ ಎತ್ತರದ ನಿಲುವಿನ ಹೆಂಗಸು, ಮಾರ‍್ಗದರ‍್ಶಿ ಹಾಗೂ ಚಾಲಕನ ಮುಂದೆ ಬಂದು ನಿಂತು-

“ನೋಡ್ರಪ್ಪ… ಹೋದ್ನೆ ವರ‍್ಸ ನಮ್ ಬೀಗರ ಊರಲ್ಲಿ ಇಬ್ರು ಇಸ್ಕೂಲ್ ಅಯ್ಕಳು ಮ್ಯಾಲೆ ಹಿಂಗೆ ಒಂದ್ ಬಸ್ಸು ಹರ‍್ದುಬುಡ್ತು. ಆಗ ಅಲ್ಗೆ ಬಂದ ಜನವೆಲ್ಲಾ… ಬೋ ಕ್ವಾಪದಲ್ಲಿ ಬಸ್ಸಿಗೆ ಬೆಂಕಿ ಎಟ್ಬುಟ್ಟು, ಬಸ್ ಡ್ರಯ್‌ವರನ್ನ ಬೆಂಕಿ ಒಳಾಕೆ ಎತ್ತಿ ಎಸೆಯೋಕೆ ಅಂತ ನುಗ್ಗುಬುಟ್ರು. ಅಶ್ಟರಲ್ಲಿ ಯಾರೋ ಪುಣ್ಯಾತ್ಮರು ಆ ವಯ್ಯನ್ನ ಅಲ್ಲಿಂದ ಪಾರು ಮಾಡುದ್ರು” ಎಂದು ಒಂದೇ ಉಸಿರಿನಲ್ಲಿ ಹೇಳಿ, ಚಾಲಕನನ್ನು ಕುರಿತು-

“ಹಂಗೆ ನಿಂಗೇನಾರ ಹೊಡ್ದು ಬಡ್ದು… ಜೀವಕ್ಕೇನಾದ್ರು ಅಪಾಯ ಮಾಡ್ಬುಟ್ಟರು ಕಣಪ್ಪ… ಇಲ್ಲಿಂದ ಎತ್ತಗಾರು ಹೋಗಿ ಅಡೀಕೊಪ್ಪ” ಎಂದು ಎಚ್ಚರಿಕೆ ನೀಡಿದಳು.
ಮತ್ತೊಮ್ಮೆ ಈಗ ಎಲ್ಲರೂ ತಮ್ಮತ್ತ ನುಗ್ಗಿ ಬರುತ್ತಿರುವ ಗುಂಪಿನ ಕಡೆ ನೋಡಿದರು. ಬರುತ್ತಿದ್ದವರ ಅಬ್ಬರ ಬಹಳ ಜೋರಾಗಿತ್ತು. ಹೆಂಗಸರಲ್ಲಿ ಮತ್ತೊಬ್ಬಳು ಚಾಲಕನನ್ನು ಕುರಿತು-

“ಮೊಗ… ಪುಡಚೆನ್ನಿ ಹೇಳ್ದಂಗೆ ಎತ್ತಗಾರ ಎದ್ಬುಡಪ್ಪ… ಈ ಹಾಳಾದ್ ಜನವ ಹಿಂಗೆ ಅಂತ ಹೇಳೂಕಾಗೂದಿಲ್ಲ. ಗುಂಪುಗೂಡ್ದಾಗ ಏನ್ ಮಾಡೂಕು ಹೇಸೂದಿಲ್ಲ” ಎಂದು ಅವನ ಕಯ್ಯನ್ನು ಹಿಡಿದು ಎಳೆದಳು. ಇನ್ನೊಬ್ಬಳು ಚಾಲಕನ ಹತ್ತಿರ ಬಂದು-

“ಅವರೆಲ್ಲಾ ಬಂದು ಹೋಗೂ ತಂಕ… ಯಾವುದಾದ್ರು ಬೇಲಿ ಮರೇಲಿ… ಇಲ್ದೇದ್ರೆ ಒಂದು ಒಬ್ಬೆ ಮರೇಲಿ ಅವಸ್ಕೋಗಪ್ಪ… ಈಗ ನೀನು ಅವರ ಕಯ್ಗೇನಾರ ಸಿಕ್ಕುದ್ರೆ… ಮೊಕಮುಸುಡಿ ನೋಡ್ದೆ ತಲಾಗಿ ಒಂದೊಂದು ಏಟು ಹಾಕ್ಬುಡ್ತರೆ ಕಣಪ್ಪ” ಎಂದು ಚಡಪಡಿಸತೊಡಗಿದಳು.

“ಎಲ್ ಅಡೀಕೊಂಡ್ರೆ ತಾನೆ ಬುಟ್ಟರೇನವ್ವ !… ಸುತ್ತಮುತ್ತ ಎಲ್ಲಾ ಕಡೆ ತಡಕಾಡ್ಬುಟ್ಟು…. ಈಚೆಗೆ ಎಳ್ಕೊಂಡು… ಹುಚ್ಚುನಾಯಿಗೆ ಹೊಡ್ದಂಗೆ ಹೊಡ್ದಾಕ್ಬುಡ್ತರೆ” ಎಂದು ಪುಟ್ಟಚೆನ್ನಮ್ಮ ಮತ್ತೊಮ್ಮೆ ಸಂಕಟಪಟ್ಟಳು.
ಮುಂದೇನಾಗುವುದೋ ಎಂಬ ಹೆದರಿಕೆಯಿಂದ ಚಾಲಕನು ನಡುಗುತ್ತಾ ಬೆವತುಹೋದ. ಗಳಿಗೆ ಗಳಿಗೆಗೂ ಹಳ್ಳಿಗರ ಗುಂಪು ಅರಚುತ್ತಾ ಹತ್ತಿರವಾಗುತ್ತಿತ್ತು. ಅವರ ಕಯ್ಗಳಲ್ಲಿದ್ದ ಹತಾರಗಳನ್ನು ನೋಡಿಯೇ… ಪ್ರವಾಸಿಗರ ಎದೆ ಹೊಡೆದುಕೊಳ್ಳತೊಡಗಿದವು. ಸತ್ತಿರುವ ಕುರಿಗಳಿಗೆ ದಂಡಕಟ್ಟಬೇಕಾಗುವ ಹಣಕ್ಕಿಂತ… ಡ್ರಯ್‌ವರನ ಜೀವಕ್ಕೆ ಹಾನಿಯಾಗುವ ಏಟುಗಳು ಎಲ್ಲಿ ಬೀಳುತ್ತವೆಯೋ ಎಂಬ ಆತಂಕ ಎಲ್ಲರನ್ನೂ ಕಾಡತೊಡಗಿತು.
ಹೆಂಗಸರು ಅಪಾರವಾದ ಅನುಕಂಪದಿಂದ ಚಾಲಕನನ್ನು ಈಗ ಸುತ್ತುವರಿದು ನಿಲ್ಲತೊಡಗಿದರು. ಉದ್ರೇಕದಿಂದ ಮುನ್ನುಗ್ಗಿ ಬರುತ್ತಿರುವ ಗುಂಪನ್ನು ನೋಡಿದ ಪುಟ್ಟಚೆನ್ನಮ್ಮನು ತೀವ್ರವಾಗಿ ತಲ್ಲಣಗೊಳ್ಳುತ್ತಾ-

“ಅಯ್ಯಯ್ಯೋ… ಇವತ್ತು ಈ ಮಗೀನ ಇವ್ರು ಸುಮ್ನೆ ಬುಟ್ಟರೇನವ್ವ !… ಏನ್ರವ್ವ ಮಾಡೋದು ಈಗ?” ಎಂದು ಕಂಗಾಲಾಗಿದ್ದವಳು, ಮರುಗಳಿಗೆಯಲ್ಲೇ” ಏನೋ ಒಂದನ್ನು
ಮಾಡಬೇಕೆಂದು ತೀರ‍್ಮಾನಿಸಿಕೊಂಡಳು. ಚಾಲಕನ ಬಳಿಗೆ ನುಗ್ಗಿ ಬಂದು, ಅವನ ಕಯ್ಗಳನ್ನು ಹಿಡಿದುಕೊಂಡು-

“ಮೊಗ… ನಿಂಗೆ ನಾನು ಹೆತ್ತತಾಯಿ ಇದ್ದಂಗೆ…ನೀನೇನೂ ಅನ್ಕೋಬ್ಯಾಡ… ಅವರೆಲ್ಲಾ ಬಂದ್ ಹೋಗು ತಂಕ… ಕಯಕ್-ಪಿಯಕ್ ಅನ್ನದೇ ಸುಮ್ಮಿರಪ್ಪ” ಎಂದು ಹೇಳಿ, ಸುತ್ತುವರಿದಿದ್ದ ಹೆಂಗಸರೆಲ್ಲರನ್ನೂ ಕುರಿತು-

“ನೋಡ್ರವ್ವ… ನೀವೆಲ್ಲಾ ನನ್ ಸುತ್ತ ಇನ್ನೊಸಿ ಒತ್ರಿಸ್ಕೊಂಡು ಒತ್ರಿಸ್ಕೊಂಡು ಒಬ್ಬರು ಮಗ್ಗುಲಲ್ಲಿ ಒಬ್ಬರು ನಿಂತ್ಕೊಳಿ. ಏನೇ ಆದ್ರೂ ಅತ್ತಗೆ ಇತ್ತಗೆ ಒಂದ್ ಚಿಂಕ್ರನೂ ಜರುಗ್ಬೇಡಿ. ಬಂದೋರ್ ಜೊತೇಲಿ ಏನಿದ್ರೂ ನಮ್ ಕಡೆ ಗಂಡಸರು ಮಾತಾಡ್ಲಿ” ಎಂದವಳೇ, ಚಾಲಕನ ತಲೆಯ ಮೇಲೆ ಕಯ್ಯಿಟ್ಟು ಕೆಳಕ್ಕೆ ಅದುಮಿ ಅವನನ್ನು ತನ್ನೆರಡು ಉದ್ದನೆಯ ಕಾಲುಗಳ ನಡುವೆ ಕುಳ್ಳಿರಿಸಿ…ಮೊಣಕಾಲಿನವರೆಗೆ ಮೇಲಕ್ಕೆ ಬಂದಿದ್ದ ಸೀರೆಯನ್ನು… ಈಗ ಆತನ ಸುತ್ತಲೂ ಇಳಿಬಿಟ್ಟುಕೊಂಡು ನಿಂತಳು.

ಅಶ್ಟರಲ್ಲಿ ಅಲ್ಲಿಗೆ ಆಕ್ರೋಶದಿಂದ ಅಬ್ಬರಿಸುತ್ತಾ ಬಂದ ಹಳ್ಳಿಯ ಗುಂಪಿನ ಜನರು ಚಾಲಕನಿಗಾಗಿ ಬಸ್ಸಿನ ಒಳಗೆ ಹೊರಗೆ ಸುತ್ತಲೂ ತಡಕಾಡತೊಡಗಿದರು. ಅವರಲ್ಲಿ ಹಲವರ ಕಣ್ಣಿನ ನೋಟ… ಹೆಂಗಸರ ಗುಂಪಿನ ನಡುವೆಯೂ ಸೀಳಿಕೊಂಡು ಹೋಯಿತು. ಆದರೆ ಪುಟ್ಟಚೆನ್ನಮ್ಮನ ಸೀರೆಯ ಮರೆಯಲ್ಲಿದ್ದ ಚಾಲಕನು ಯಾರೊಬ್ಬರ ಕಣ್ಣಿಗೂ ಬೀಳಲಿಲ್ಲ. ಮುಂದಿದ್ದ ಒಬ್ಬ ಹೆಂಗಸು ಹಳ್ಳಿಗರ ಗುಂಪಿನ ಮುಂದಾಳುಗಳನ್ನು ಕುರಿತು –

“ಬಸ್‌ಗೆ ಅಡ್ಡಲಾಗಿ ಬಂದ ನಿಮ್ಮ ಅಯ್ಕಳ ಉಳ್ಸುಕೋಗಿ, ಕುರಿಗಳ ಮ್ಯಾಲೆ ಬಸ್ ಬುಟ್ಟವ್ನೆ ಕಣ್ರಪ್ಪ. ಹೆಂಗೋ ದೇವರದಯದಿಂದ ಮಕ್ಳ ಜೀವ ಉಳ್ಕೋತು. ಡ್ರಯ್‌ವರ್ ಹೆದರ‍್ಕೊಂಡು ನಡುಗ್ತ ಇಲ್ಲೇ ನಿಂತಿದ್ದ. ಅಶ್ಟೊತ್ಗೆ ಇಲ್ಲೊಂದು ಕುಟಿಕುಟಿ ಬಂತು. ಅದ್ರ ಮ್ಯಾಲೆ ಕುಂತ್ಕೊಂಡು ಆಗಲೇ ಹೊಂಟೋದ ಕಣ್ರಪ್ಪ. ನಾವು ದೂರದ ಊರಿಂದ ದೇವರು ಮಾಡೂಕೆ ಹೋಗಿದ್ದೋರು ಕಣ್ರಪ್ಪ. ನಿಮ್ ದಮ್ಮಯ್ಯ ಅಂತೀವಿ ಯಾರ‍್ಗೂ ಏನೂ ಮಾಡ್ಬೇಡಿ” ಎಂದು ಮೊರೆಯಿಡುತ್ತಾ ಅಳತೊಡಗಿದಳು.

ಅಲ್ಲಿದ್ದ ಹೆಂಗಸರಲ್ಲಿ…. ಬಹುತೇಕ ಮಂದಿಯ ಕಣ್ಣುಗಳಲ್ಲಿ ಬಟ್ಟಾಡುತ್ತಿದ್ದ ಕಂಬನಿಯನ್ನು ಕಂಡು, ಹಳ್ಳಿಗರ ಗುಂಪು ತಣ್ಣಗಾಯಿತು. ಮಾರ‍್ಗದರ‍್ಶಿಯಾಗಿ ಬಂದಿದ್ದ ಗಂಡಸಿನ ಜತೆ ಮಾತುಕತೆಯಾಡಿ, ಸತ್ತ ಕುರಿಗಳಿಗೆ ತಗಲುವ ಹಣವನ್ನು ಕಟ್ಟಿಸಿಕೊಂಡು ಹಳ್ಳಿಗರು ಹಿಂತಿರುಗಿದರು. ಬಸ್ಸು ಈಗ ಮತ್ತೆ ಪ್ರವಾಸಿಗರ ಊರಿನ ಕಡೆಗೆ ಮರಳಿತು.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. jspradeep says:

    ತುಂಬಾ ಚನ್ನಾಗಿ ಬರದಿರಿ, ಖುಷಿಯಾಯಿತು.

ಅನಿಸಿಕೆ ಬರೆಯಿರಿ: