ಕುಮಾರವ್ಯಾಸ ಬಾರತ ಓದು – ಆದಿಪರ‍್ವ – ದ್ರೌಪದಿ ಧೃಷ್ಟದ್ಯುಮ್ನ ಜನನ – ನೋಟ – 17

ದ್ರೌಪದಿ ಧೃಷ್ಟದ್ಯುಮ್ನ ಜನನ
( ಆದಿಪರ್ವ: ಏಳನೆಯ ಸಂಧಿ: ಪದ್ಯ 69 ರಿಂದ 74 )
ಪಾತ್ರಗಳು:
ದ್ರುಪದ: ಪಾಂಚಾಲ ದೇಶದ ರಾಜ. ಚಿಕ್ಕಂದಿನಲ್ಲಿ ದ್ರೋಣ ಮತ್ತು ದ್ರುಪದ-ಇಬ್ಬರೂ ಒಂದೇ ಗುರುಕುಲದಲ್ಲಿ ವಿದ್ಯೆಯನ್ನು ಕಲಿತಿದ್ದರು.
ಜನಸಮುದಾಯ: ದ್ರುಪದ ರಾಜನ ಪ್ರಜೆಗಳು.
***ದ್ರೌಪದಿ ಧೃಷ್ಟದ್ಯುಮ್ನ ಜನನ***
ಅರಸ ಕೇಳೈ, ದ್ರುಪದನು ಈ ಪರಿ ಪರಿಭವಕೆ ಗುರಿಯಾಗಿ ತನ್ನಯ ಪುರವ ಹೊಗದೆ… ಗಂಗಾತೀರ ದೇಶದಲಿ ಐತಂದು… ಪುತ್ರಕಾಮ್ಯಾಧ್ವರವ ವಿರಚಿಸಲಾಗ ನಾನಾ ಅಗ್ರಹಾರದಲಿ ಸತ್ವೋತ್ಕರುಷವಂತರನು ಅರಸಿದನು… ದ್ರೋಣ ಭಯದಲಿ ಸಕಲ ವಿಪ್ರಶ್ರೇಣಿಯಿರೆ… ಯಾಜೋಪಯಾಜರು ಪ್ರಾಣ ನಿಸ್ಪೃಹರಾಗಿ ಮಹಾಕ್ರತುವ ಮಾಡಿಸಿದರು… ಕೇಣವಳಿದು ಆಹುತಿಯನು ಅಮರರ ಬಾಣಸಿಗಗೆ ಉಣಬಡಿಸೆ… ದೇವ ಶ್ರೇಣಿ ದಣಿದುದು… ಪಾಂಚಾಲನ ಅಭಿಮತವ ಸಲಿಸಿದರು… ಅರಸ ಕೇಳೈ, ಕುಂಡ ಮಧ್ಯದೊಳು ಉರಿಯ ಕರುವಿಟ್ಟು ಎರಕಿದರೊ… ಭಾಸುರ ಮಹಾ ಅನಲನ ಅಪರರೂಪೋ ತಾನಿದೇನು ಎನಲು… ಶರ.. ಅಡಾಯುಧ.. ಚಾಪ.. ವರ್ಮ ಉತ್ಕರಸಹಿತ ರೌದ್ರಾಂಗನು ಆಗ ಅವತರಿಸಿದನು… ಪಾಂಚಾಲ ಭೂಪತಿ ಭುಜವ ಸೂಳೈಸೆ… ವೇದಿ ಮಧ್ಯವನು ಒಡೆದು ಮೂಡಿದಳ…
ಜನಸಮುದಾಯ: ಅಮಮ… ಕಾಮನ ಕೈದುವೋ… ತ್ರೈಲೋಕ್ಯ ಮೋಹನ ಮಂತ್ರ ದೇವತೆಯೊ…
( ಜನ ಆದರಿಸಿ… ದ್ರುಪದಾತ್ಮಜೆಯ ಜನನದಲಿ… ”ಕಾದುವರೆ
ಕರೆ… ಹರಿ ಹರ ಬ್ರಹ್ಮಾದಿಗಳಿಗೆ ಒರೆ ” ಎಂಬ ಹೂಂಕೃತಿ ಆ ಕಾಮಂಗೆ
ಆದುದು.)
ದ್ರುಪದ: ಈ ಮಗನು ದ್ರೋಣವಧೆಗೆ… ಈ ಮಗಳು ಪಾರ್ಥಗೆ ರಾಣಿ.
( ಎಂದು ದ್ರುಪದ ಕ್ಷೋಣಿಪತಿ ಸುತರನು ಸಾನುರಾಗದಲಿ ಸಲಹಿದನು… ದ್ರೋಣನು
ಈತನ ಕರೆಸಿ ಶಸ್ತ್ರದ ಜಾಣಿಕೆಯ ಕಲಿಸಿದನು. ಈ ಕಲಶಜನ ಪರಿಯಲಿ ವಿಗಡರ
ಕಾಣೆನು… ರಾಯ ಕೇಳೆಂದ.)
ದ್ರುಪದ: ಧೃಷ್ಟದ್ಯುಮ್ನ ಮಗನು… ದ್ರೌಪದಿ ಮಗಳು… ಭಾರದ್ವಾಜನು ಎತ್ತಿದ ಹಗೆಗೆ ಹರುವಾಯ್ತು
( ಎನುತ ದ್ರುಪದ ಭೂಪಾಲ ಹಿಗ್ಗಿದ.)
ಪದ ವಿಂಗಡಣೆ ಮತ್ತು ತಿರುಳು:
ಪರಿ= ರೀತಿ; ಪರಿಭವ= ಅಪಮಾನ; ಹೊಗು=ಪ್ರವೇಶಿಸು; ಐತಂದು=ಆಗಮಿಸಿ; ಪುತ್ರ+ಕಾಮ್ಯ+ಅಧ್ವರ; ಕಾಮ್ಯ=ಬಯಕೆ/ಆಸೆ/ಇಚ್ಚೆ; ಅಧ್ವರ=ಯಾಗ; ಪುತ್ರಕಾಮ್ಯಾಧ್ವರ=ಮಗನನ್ನು ಪಡೆಯುವುದಕ್ಕಾಗಿ ಮಾಡುವ ಯಾಗ; ವಿರಚಿಸು=ಮಾಡು/ಆಚರಿಸು; ಅಗ್ರಹಾರ=ಬ್ರಾಹ್ಮಣರ ಸಮುದಾಯ ಮಾತ್ರ ನೆಲೆಸಿರುವ ಊರು/ಕೇರಿ; ಸತ್ವ+ಉತ್ಕರುಷವಂತರು; ಸತ್ವ=ಬಲ/ಶಕ್ತಿ; ಉತ್ಕರ್ಷ=ಹೆಚ್ಚಳ/ಹಿರಿಮೆ; ಸತ್ವೋತ್ಕರುಷವಂತರು=ಹೆಚ್ಚಿನ ಶಕ್ತಿ ಮತ್ತು ಹಿರಿಮೆಯುಳ್ಳವರು; ಅರಸು=ಹುಡುಕು;
ಸಕಲ=ಎಲ್ಲ; ವಿಪ್ರ=ಬ್ರಾಹ್ಮಣ; ಶ್ರೇಣಿ=ಗುಂಪು/ಸಮೂಹ; ನಿಸ್ಪೃಹ=ಆಸೆ ಬಿಟ್ಟವನು/ವಿರಕ್ತ; ಪ್ರಾಣ ನಿಸ್ಪೃಹ=ಜೀವದ ಬಗ್ಗೆ ಹೆದರಿಕೆಯಿಲ್ಲದವನು; ಮಹಾಕ್ರತು=ದೊಡ್ಡ ಯಾಗ; ಕೇಣ+ಅಳಿದು; ಕೇಣ=ಕೊರತೆ/ಕಡಿಮೆ; ಕೇಣವಳಿದು=ಯಾವ ಕೊರತೆಯಿಲ್ಲದೆ; ಆಹುತಿ=ಯಾಗದ ಬೆಂಕಿಯ ಕುಂಡದಲ್ಲಿ ಹಾಕುವ ವಸ್ತುಗಳು; ಅಮರ=ದೇವತೆ; ಬಾಣಸಿಗ=ಅಡುಗೆಯವನು; ಅಮರರ ಬಾಣಸಿಗ=ಅಗ್ನಿದೇವ. ಇವನು ಯಾಗಕುಂಡದ ಬೆಂಕಿಯಲ್ಲಿ ಹಾಕುವ ವಸ್ತುಗಳೆಲ್ಲವನ್ನೂ ದೇವಲೋಕದಲ್ಲಿರುವ ದೇವತೆಗಳಿಗೆ ತೆಗೆದುಕೊಂಡು ಹೋಗಿ ಕೊಡುತ್ತಾನೆ ಎಂಬ ಕಲ್ಪನೆ ಮತ್ತು ನಂಬಿಕೆ ಯಾಗ ಮಾಡುವವರಲ್ಲಿ ಇರುತ್ತದೆ;
ಪಾಂಚಾಲ=ಪಾಂಚಾಲ ದೇಶದ ರಾಜನಾದ ದ್ರುಪದ; ಅಭಿಮತ=ಆಸೆ/ಬಯಕೆ/ಮನದ ಇಚ್ಚೆ; ಸಲಿಸಿದರು=ಈಡೇರಿಸಿದರು; ಅರಸ ಕೇಳೈ=ಜನಮೇಜಯ ರಾಜನಿಗೆ ವೈಶಂಪಾಯನ ಮುನಿಯು ಮಹಾಬಾರತದ ಕತೆಯನ್ನು ಮತ್ತೊಮ್ಮೆ ಹೇಳುತ್ತಿದ್ದಾನೆ; ಕುಂಡ=ಯಾಗದ ಬೆಂಕಿಯನ್ನು ಉರಿಸಲು ಮಾಡಿರುವ ಕುಳಿ; ಉರಿ=ಬೆಂಕಿ; ಕರು=ಎರಕದ ಅಚ್ಚು; ಕರುವಿಟ್ಟು=ಎರಕ ಹೊಯ್ಯು; ಎರಕ=ಕಾಯಿಸಿದ ಲೋಹದ ದ್ರವವನ್ನು ಅಚ್ಚಿನ ಮನೆಗೆ ಹಾಕಿ, ವಿಗ್ರಹವನ್ನು ರೂಪಿಸುವುದು;
ಭಾಸುರ=ಹೊಳೆಯುವ; ಅನಲ=ಬೆಂಕಿ; ಮಹಾ ಅನಲ=ದೊಡ್ಡ ಪ್ರಮಾಣದ ಬೆಂಕಿ; ಅಪರ=ಮನೋಹರ/ಸುಂದರ; ಶರ=ಬಾಣ; ಅಡಾಯುಧ=ಚಿಕ್ಕ ಕತ್ತಿ; ಚಾಪ=ಬಿಲ್ಲು; ವರ್ಮ=ದೇಹಕ್ಕೆ ತೊಡುವ ಉಕ್ಕಿನ ಕವಚ; ಉತ್ಕರ=ರಾಶಿ/ಸಮೂಹ; ರೌದ್ರಾಂಗ=ಕಟ್ಟುಮಸ್ತಾದ ದೇಹವುಳ್ಳವನು; ಅವತರಿಸಿದನು=ಹುಟ್ಟಿದನು/ಮೂಡಿಬಂದನು; ಪಾಂಚಾಲ ಭೂಪತಿ=ದ್ರುಪದ ರಾಜ; ಸೂಳೈಸು=ತಟ್ಟು/ಹೊಡಿ; ಭುಜವ ಸೂಳೈಸೆ=ತನ್ನ ಬುಜವನ್ನು ತಾನೇ ತಟ್ಟಿಕೊಳ್ಳಲು; ವೇದಿ=ಯಾಗದ ಕುಳಿ; ಒಡೆದು=ಸೀಳಿಕೊಂಡು; ಮೂಡಿದಳು=ಹುಟ್ಟಿದಳು; ಆದರಿಸು=ಪ್ರೀತಿಯಿಂದ ಕಾಣು;
ಅಮಮ=ಅಬ್ಬಬ್ಬಾ. ಅಚ್ಚರಿಯನ್ನು ಸೂಚಿಸುವ ಪದ; ಕಾಮ=ಗಂಡು ಹೆಣ್ಣಿನ ಮಯ್ ಮನದಲ್ಲಿ ಪ್ರಣಯ ಪ್ರೇಮವನ್ನು ಕೆರಳಿಸುವ ದೇವತೆ; ಕೈದು=ಹತಾರ/ಶಸ್ತ್ರ; ತ್ರೈಲೋಕ್ಯ=ಮೂರು ಲೋಕಗಳು; ಮೋಹನ=ಸೆಳೆತ/ತನ್ನ ಕಡೆಗೆ ಎಳೆಯುವುದು; ದ್ರುಪದ+ಆತ್ಮಜೆ; ಆತ್ಮಜೆ=ಮಗಳು; ಕಾದುವರೆ=ಹೋರಾಡಲು; ಒರೆ=ಹೇಳು; ಹೂಂಕೃತಿ=ದೊಡ್ಡ ದನಿಯಲ್ಲಿ ಕೂಗಿ ಅಬ್ಬರಿಸುವುದು;
ದ್ರೋಣವಧೆಗೆ=ದ್ರೋಣನನ್ನು ಕೊಲ್ಲುವುದಕ್ಕೆ; ಪಾರ್ಥಗೆ ರಾಣಿ=ಅರ್ಜುನನನ್ನು ಮದುವೆಯಾಗಿ ರಾಣಿಯಾಗುವುದಕ್ಕೆ; ಕ್ಷೋಣಿಪತಿ=ರಾಜ; ಸಾನುರಾಗ=ಒಲವು ನಲಿವು; ಜಾಣಿಕೆ=ಕುಶಲತೆ/ನಿಪುಣತೆ; ಶಸ್ತ್ರದ ಜಾಣಿಕೆ=ಆಯುದಗಳನ್ನು ಬಳಸುವ ವಿದ್ಯೆಯಲ್ಲಿ ಪರಿಣತಿ; ಕಲಶಜ=ದ್ರೋಣ; ವಿಗಡ=ಶೂರ/ಪರಾಕ್ರಮಿ; ಭಾರದ್ವಾಜ=ಬರದ್ವಾಜನೆಂಬ ವ್ಯಕ್ತಿಯ ಮಗ ದ್ರೋಣ; ಹಗೆ=ಶತ್ರು; ಹರುವಾಯ್ತು=ದಾರಿ ತೋರಿತು;
ಹೊಸಗನ್ನಡ ಗದ್ಯ
ಜನಮೇಜಯ ಮಹಾರಾಜನೇ ಕೇಳು, ಈ ರೀತಿ ದ್ರುಪದನು ದ್ರೋಣನಿಂದ ಅವಮಾನಕ್ಕೆ ಗುರಿಯಾಗಿ, ತನ್ನ ಪುರವನ್ನು ಪ್ರವೇಶಿಸದೆ, ಗಂಗಾ ನದಿಯ ತೀರ ಪ್ರದೇಶಕ್ಕೆ ಬಂದು, ಬ್ರಾಹ್ಮಣರ ಮೂಲಕ ಪುತ್ರಕಾಮೇಶ್ಟಿಯನ್ನು ಮಾಡಬೇಕೆಂದು ಸಂಕಲ್ಪಿಸಿಕೊಂಡು, ಆಗ ವೇದದ ಅಚರಣೆಗಳನ್ನು ಬಲ್ಲ ಬ್ರಾಹ್ಮಣರನ್ನು ಅನೇಕ ಅಗ್ರಹಾರಗಳಲ್ಲಿ ಹುಡುಕಿದನು. ದ್ರುಪದನು ಬಂದು ಕೇಳಿಕೊಂಡರೂ, ದ್ರೋಣನ ಹೆದರಿಕೆಯಿಂದ ಬ್ರಾಹ್ಮಣರು ಯಾರೊಬ್ಬರೂ ಯಾಗ ಮಾಡಿಸುವುದಕ್ಕೆ ಮುಂದೆ ಬರಲಿಲ್ಲ. ಯಾಜೋಪಯಾಜ ಎಂಬುವರು ಮಾತ್ರ ತಮ್ಮ ಪ್ರಾಣದ ಮೇಲಿನ ಆಸೆಯನ್ನು ಬಿಟ್ಟು, ಆ ಮಹಾ ಯಾಗವನ್ನು ಮಾಡಿಸಿದರು. ಯಾವ ಕೊರತೆಯೂ ಇಲ್ಲದಂತೆ ಅಗ್ನಿಗೆ ಹವಿಸ್ಸನ್ನು ಸಲ್ಲಿಸಲು, ದೇವತೆಗಳು ತಣಿದು ದ್ರುಪದನ ಆಸೆಯನ್ನು ಈಡೇರಿಸಿದರು.
ಯಾಗದ ಅಗ್ನಿಕುಂಡದಲ್ಲಿ ಪ್ರಜ್ವಲಿಸುತ್ತಿರುವ ದೊಡ್ಡ ಉರಿಯನ್ನು ಅಚ್ಚಿನಲ್ಲಿ ಎರಕ ಹುಯ್ದರೋ ಎನ್ನುವಂತೆ… ಪ್ರಕಾಶಮಾನವಾಗಿ ಜ್ವಲಿಸುತ್ತಿರುವ ಮಹಾಗ್ನಿಯ ಅಪರಾವತಾರವೋ ಎನ್ನುವಂತೆ.. ಬಿಲ್ಲು, ಬಾಣ, ಕಿರುಗತ್ತಿ, ಕವಚಗಳ ಸಹಿತ ಕಟ್ಟುಮಸ್ತಾದ ದೇಹದೊಂದಿಗೆ ದ್ರುಶ್ಟದ್ಯುಮ್ನನು ಹುಟ್ಟಿದನು. ಮಕ್ಕಳನ್ನು ಪಡೆಯಬೇಕೆಂಬ ಬಯಕೆ ಈಡೇರಿದ್ದರಿಂದ ಪಾಂಚಾಲರಾಜನು ತನ್ನ ಬುಜಗಳನ್ನು ತಾನೇ ಹೆಮ್ಮೆಯಿಂದ ತಟ್ಟಿಕೊಂಡನು.
ಯಾಗದ ಅಗ್ನಿಕುಂಡದಲ್ಲಿ ಉರಿಯುತ್ತಿರುವ ಜ್ವಾಲೆಯನ್ನು ಸೀಳಿಕೊಂಡು ಮಗಳೊಬ್ಬಳು ಮೂಡಿಬಂದಳು…ಜನರೆಲ್ಲರೂ ಅಚ್ಚರಿಯಿಂದ “ ಅಬ್ಬಬ್ಬಾ… ಕಾಮನ ಆಯುದವೋ… ಮೂರು ಲೋಕಗಳನ್ನು ಮೋಹಗೊಳಿಸುವ ಮಂತ್ರ ದೇವತೆಯೋ.. “ ಎಂದು ಅಚ್ಚರಿಪಡುತ್ತಿರಲು, ದ್ರುಪದನಿಗೆ ಸುಂದರಿಯಾದ ಮಗಳು ಹುಟ್ಟಿದ್ದರಿಂದ ಪ್ರಣಯದ ದೇವತೆಯಾದ ಕಾಮನಿಗೆ “ ತನ್ನೊಡನೆ ಕಾಳೆಗಕ್ಕೆ ಬರುವಂತೆ ಹರಿ ಹರ ಬ್ರಹ್ಮಾದಿಗಳಿಗೆ ಹೇಳಿ “ ಎಂಬ ಅಹಂಕಾರ ಉಂಟಾಯಿತು. ಅಂದರೆ ದ್ರೌಪದಿಯ ರೂಪದ ಚೆಲುವಿನ ಮುಂದೆ, ದೇವಾದಿದೇವತೆಗಳು ಸೋತುಹೋಗುತ್ತಾರೆ ಎಂದು ಕಾಮದೇವನು ಅಬ್ಬರಿಸಿದನು.
“ ದ್ರೋಣನನ್ನು ಕೊಲ್ಲುವುದಕ್ಕೆ ಒಬ್ಬ ಮಗ ಹುಟ್ಟಿದನು; ಅರ‍್ಜುನನನ್ನು ಮದುವೆಯಾಗಿ ರಾಣಿಯಾಗುವುದಕ್ಕೆ ಒಬ್ಬಳು ಮಗಳು ಹುಟ್ಟಿದಳು ” ಎಂದು ದ್ರುಪದರಾಜನು ಮಕ್ಕಳನ್ನು ಒಲವು ನಲಿವಿನಿಂದ ಬೆಳೆಸಿದನು. ಬೆಳೆದು ದೊಡ್ಡವನಾದ ದ್ರುಶ್ಟದ್ಯುಮ್ನನನ್ನು ದ್ರೋಣನು ಕರೆಸಿಕೊಂಡು, ಅವನನ್ನು ಶಸ್ತ್ರಾಸ್ತ್ರ ವಿದ್ಯೆಯಲ್ಲಿ ಪರಿಣತನನ್ನಾಗಿ ಮಾಡಿದನು. ತನ್ನ ಹಗೆಯಾದ ದ್ರುಪದನ ಮಗನಿಗೆ ಈ ರೀತಿ ಶಸ್ತ್ರಾಸ್ತ್ರ ವಿದ್ಯೆಯನ್ನು ಹೇಳಿಕೊಟ್ಟ ದ್ರೋಣನಂತಹ ವೀರರನ್ನು ನಾನು ಜೀವನದಲ್ಲಿಯೇ ಕಂಡಿಲ್ಲವೆಂದು ವೈಶಂಪಾಯನ ಮುನಿಯು ಜನಮೇಜಯ ರಾಜನ ಮುಂದೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾನೆ. “ ದ್ರೋಣನೊಡನೆ ಹಗೆಯನ್ನು ಸಾದಿಸುವುದಕ್ಕೆ ಅನುವಾಗುವಂತೆ ದ್ರುಶ್ಟದ್ಯುಮ್ನನನ್ನು ಮಗನನ್ನಾಗಿ… ದ್ರೌಪದಿಯು ಮಗಳನ್ನಾಗಿ ಪಡೆದೆನು…” ಎಂದು ದ್ರುಪದ ರಾಜನು ಮನದಲ್ಲಿಯೇ ಹಿಗ್ಗಿದನು.
(ಚಿತ್ರ ಸೆಲೆ: quoracdn.net)

ಇತ್ತೀಚಿನ ಅನಿಸಿಕೆಗಳು