ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 8ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ನಡೆಯಲರಿಯದೆ
ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು. (409-41)

ನಡೆ+ಅಲ್+ಅರಿಯದೆ; ನಡೆ=ನಡವಳಿಕೆ/ವರ‍್ತನೆ/ಮಾಡುವ ಕೆಲಸ; ಅರಿ=ತಿಳಿ/ಕಲಿ; ಅರಿಯದೆ=ತಿಳಿಯದೆ/ಕಲಿಯದೆ; ನಡೆಯಲರಿಯದೆ=ನಿತ್ಯಜೀವನದಲ್ಲಿ ತನ್ನ ಒಳಿತಿಗಾಗಿ ದುಡಿಯುವಂತೆಯೇ ಸಹಮಾನವರ ಮತ್ತು ಸಮಾಜದ ಹಿತಕ್ಕಾಗಿ ಬಾಳಬೇಕೆಂಬುದನ್ನು ತಿಳಿಯದೆ/ಅರಿತುಕೊಳ್ಳದೆ;

ನುಡಿ+ಅಲ್+ಅರಿಯದೆ; ನುಡಿ=ಮಾತು/ಸೊಲ್ಲು; ನುಡಿಯಲರಿಯದೆ=ಇತರರೊಡನೆ ಮಾತನಾಡುವಾಗ ಅವರೊಡನೆ ಹೇಗೆ ಮಾತನಾಡಬೇಕೆಂಬುದನ್ನು ತಿಳಿಯದೆ/ಇತರರೊಡನೆ ತಾನಾಡುವ ಮಾತುಗಳು ಅವರ ಮನಸ್ಸಿಗೆ ಅರಿವು ಮತ್ತು ಆನಂದವನ್ನು ನೀಡುವಂತಿರಬೇಕೇ ಹೊರತು, ಅವರ ಮನಸ್ಸನ್ನು ಗಾಸಿಗೊಳಿಸುವಂತಿರಬಾರದು ಎಂಬ ಎಚ್ಚರವನ್ನು ಹೊಂದಿರದೆ;

ಲಿಂಗ=ಈಶ್ವರನ ಸಂಕೇತವಾದ ವಿಗ್ರಹ/ಮೂರ‍್ತಿ; ಪೂಜಿಸು=ದೂಪ ದೀಪಗಳ ಆರತಿಯಿಂದ/ಹೂಹಣ್ಣುಗಳ ಅರ‍್ಪಣೆಯಿಂದ ದೇವರ ಸೇವೆಯನ್ನು ಮಾಡುವುದು; ಫಲ+ಏನು; ಫಲ=ಪ್ರಯೋಜನ/ಪರಿಣಾಮ; ಏನು=ಯಾವುದು;

ಸಹಮಾನವರೊಡನೆ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳುವ ಒಳ್ಳೆಯ ನಡೆನುಡಿಗಳನ್ನು ಅರಿಯದೆ ಮಾಡುವ ದೇವರ ಪೂಜೆಯಿಂದ ಯಾವ ಪ್ರಯೋಜನವೂ ಇಲ್ಲ. ದೇವರ ಪೂಜೆಯನ್ನು ಮಾಡುವ ವ್ಯಕ್ತಿಯು ಸಾಮಾಜಿಕವಾಗಿ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರಬೇಕೆಂಬ ಸಂಗತಿಯನ್ನು ಈ ನುಡಿಗಳು ಸೂಚಿಸುತ್ತಿವೆ.

ನುಡಿದಂತೆ ನಡೆಯದಿದ್ದಡೆ
ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯಾ. (418-41)

ನುಡಿದ+ಅಂತೆ; ನುಡಿ=ಮಾತು/ಸೊಲ್ಲು; ಅಂತೆ=ಹಾಗೆ/ಆ ರೀತಿ; ನಡೆಯದೆ+ಇದ್ದಡೆ; ನಡವಳಿಕೆ/ವರ‍್ತನೆ/ಮಾಡುವ ಕೆಲಸ; ಇದ್ದಡೆ=ಇದ್ದರೆ; ನುಡಿದಂತೆ ನಡೆಯದಿದ್ದಡೆ=ವ್ಯಕ್ತಿಯು ತಾನು ಆಡುವ ಒಳ್ಳೆಯ ಮಾತುಗಳಿಗೆ ತಕ್ಕಂತೆ ನಿತ್ಯಜೀವನದ ವ್ಯವಹಾರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡದಿದ್ದರೆ/ಹೇಳುವುದು ಒಂದು ಮಾಡುವುದು ಮತ್ತೊಂದಾದರೆ;

ಕೂಡಲಸಂಗಯ್ಯ=ಶಿವ/ಈಶ್ವರ/ದೇವರು; ಮೆಚ್ಚು=ಒಪ್ಪು/ಒಲಿ; ಮೆಚ್ಚ=ಒಪ್ಪುವುದಿಲ್ಲ/ಒಲಿಯುವುದಿಲ್ಲ; ಕಾಣಿರಿ+ಅಯ್ಯಾ; ಕಾಣ್=ನೋಡು/ತಿಳಿ; ಕಾಣಿರಿ=ತಿಳಿಯಿರಿ;

ಜೀವನದಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳಿದಾಗ ಮಾತ್ರ ಕೂಡಲಸಂಗಮದೇವನು ಒಲಿಯುತ್ತಾನೆ ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು.

ಬಂದುದ ಕೈಕೊಳ್ಳಬಲ್ಲಡೆ ನೇಮ
ಇದ್ದುದ ವಂಚನೆಯ ಮಾಡದಿದ್ದಡೆ ನೇಮ
ನಡೆದು ತಪ್ಪದಿದ್ದಡೆ ಅದು ನೇಮ
ನುಡಿದು ಹುಸಿಯದಿದ್ದಡೆ ಅದು ಮುನ್ನವೆ ನೇಮ. (231-28)

ಬಂದುದ=ಬಂದಿರುವುದನ್ನು/ವ್ಯಕ್ತಿಯ ಪಾಲಿಗೆ ಬಂದ ಕೆಲಸದ ಹೊಣೆಗಾರಿಕೆಯನ್ನು; ಕೈಕೊಳ್ಳ+ಬಲ್ಲಡೆ; ಕೈಕೊಳ್ಳು=ಸ್ವೀಕರಿಸು/ಒಪ್ಪಿಕೊಳ್ಳುವುದು; ಬಲ್=ಕಸುವು/ಶಕ್ತಿ; ಬಲ್ಲಡೆ=ಶಕ್ತಿಯನ್ನು/ಕಸುವನ್ನು ಹೊಂದಿದ್ದರೆ; ಕೈಕೊಳ್ಳಬಲ್ಲಡೆ=ಕೆಲಸವನ್ನು ಒಪ್ಪಿಕೊಂಡು ಚೆನ್ನಾಗಿ ಮಾಡಬಲ್ಲ ಕಸುವನ್ನು ಹೊಂದಿದ್ದರೆ;

ನೇಮ=ವ್ರತ/ನೋಂಪಿ/ದೇವರನ್ನು ಒಲಿಸಿಕೊಳ್ಳಲು, ದೇವರ ಕರುಣೆಗೆ ಪಾತ್ರರಾಗಲು ಮಾಡುವ ಜಪ/ತಪ/ಪೂಜೆ/ಉಪವಾಸ/ಜಾಗರಣೆ ಮುಂತಾದ ನಿಯತವಾದ ಆಚರಣೆ. ಇಂತಹ ಆಚರಣೆಯಲ್ಲಿ ತೊಡಗಿದಾಗ ವ್ಯಕ್ತಿಯು ಹೀಗೆಯೆ ಇರಬೇಕು/ಮಾಡಬೇಕು/ನಡೆದುಕೊಳ್ಳಬೇಕು ಎಂಬ ಕಟ್ಟಲೆ/ನಿಯಮವಿರುತ್ತದೆ;

ಬಂದುದ ಕೈಕೊಳ್ಳಬಲ್ಲಡೆ ನೇಮ=ವ್ಯಕ್ತಿಯ ತನ್ನ ಪಾಲಿನ ಕೆಲಸವನ್ನು ಒಲವು ನಲಿವು ಮತ್ತು ಪ್ರಾಮಾಣಿಕತನದಿಂದ ಮಾಡಿದರೆ, ಅದು ದೇವರ ಪೂಜೆಗೆ ಸಮನಾಗುತ್ತದೆ;

ಇದ್ದುದ=ಇರುವುದನ್ನು; ವಂಚನೆ=ಮೋಸ/ದ್ರೋಹ; ಮಾಡದೆ+ಇದ್ದಡೆ; ಇದ್ದಡೆ=ಇದ್ದರೆ;

ಇದ್ದುದ ವಂಚನೆ ಮಾಡದಿದ್ದಡೆ ನೇಮ=ಜನಸಮುದಾಯವೆಲ್ಲವೂ ಹಂಚಿಕೊಂಡು ಪಡೆಯಬೇಕಾಗಿರುವ ಅನ್ನ ಬಟ್ಟೆ ವಸತಿ ವಿದ್ಯೆ ಉದ್ಯೋಗವನ್ನು ಕಪಟತನದಿಂದ/ಕ್ರೂರತನದಿಂದ/ದಬ್ಬಾಳಿಕೆಯಿಂದ ಲಪಟಾಯಿಸದೆ, ಸಹಮಾನವರೆಲ್ಲರಿಗೂ ದೊರೆಯುವಂತೆ ನಡೆದುಕೊಂಡರೆ ಅದು ನೇಮವಾಗುತ್ತದೆ;

ನಡೆದು=ದುಡಿಮೆಯ ನೆಲೆಯಲ್ಲಿ ಕೆಲಸವನ್ನು ಮಾಡುವಾಗ; ತಪ್ಪದೆ+ಇದ್ದಡೆ; ತಪ್ಪು=ಸರಿಯಾದ ರೀತಿಯಲ್ಲಿ ಮಾಡದೆ, ಕ್ರಮತಪ್ಪಿ ನಡೆಯುವುದು/ಹದಗೆಡುವುದು/ಹಾಳು ಮಾಡುವುದು; ತಪ್ಪದೆ=ತಪ್ಪುಗಳನ್ನು ಮಾಡದೆ/ಕೇಡನ್ನು ಬಗೆಯದೆ; ನಡೆದು ತಪ್ಪದಿದ್ದಡೆ ಅದು ನೇಮ=ವ್ಯಕ್ತಿಯು ತಾನು ಮಾಡುವ ಕೆಲಸದಲ್ಲಿ ತಪ್ಪುಗಳನ್ನು ಮಾಡದಿದ್ದರೆ, ಅದು ನೇಮವಾಗುತ್ತದೆ;

ನುಡಿ=ಮಾತು/ಸೊಲ್ಲು; ಹುಸಿಯದೆ+ಇದ್ದಡೆ; ಹುಸಿ=ಸುಳ್ಳು/ಸಟೆ/ಇರುವುದನ್ನು ಇಲ್ಲವೆಂದು ಹೇಳುವುದು, ಇಲ್ಲದ್ದನ್ನು ಇದೆಯೆಂದು ಹೇಳುವುದು; ಮುನ್ನ=ಮೊದಲು/ಎಲ್ಲಕ್ಕಿಂತ ಮಿಗಿಲಾದುದು;

ನುಡಿದು ಹುಸಿಯದಿದ್ದಡೆ ಅದು ಮುನ್ನವೆ ನೇಮ=ಮಾತನಾಡುವಾಗ ಸುಳ್ಳನ್ನು ಹೇಳದಿದ್ದರೆ, ಅದು ಎಲ್ಲ ಬಗೆಯ ನೇಮಗಳಿಗಿಂತಲೂ ಒಳ್ಳೆಯದು/ಮಿಗಿಲಾದುದು;

ವ್ಯಕ್ತಿಯ ಒಳ್ಳೆಯ ನಡೆನುಡಿಗಳೇ ನೇಮವೆಂಬ/ದೇವರಿಗೆ ಮಾಡುವ ಪೂಜೆಯೆಂಬ ನಿಲುವನ್ನು ಈ ನುಡಿಗಳು ಸೂಚಿಸುತ್ತವೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: