ಕುಮಾರವ್ಯಾಸ ಬಾರತ ಓದು-ಆದಿಪರ್ವ- ಅರಗಿನ ಮನೆಯ ಪ್ರಸಂಗ-ನೋಟ-22
ಪ್ರಸಂಗ-22
ಅರಗಿನ ಮನೆಯ ಪ್ರಸಂಗ
(ಆದಿ ಪರ್ವ: ಎಂಟನೆಯ ಸಂದಿ: ಪದ್ಯ 83 ರಿಂದ 92)
ಪಾತ್ರಗಳು:
ದರ್ಮರಾಯ: ಪಾಂಡುರಾಜ ಮತ್ತು ಕುಂತಿಯ ಮಗ.
ಪುರೋಚನ: ದುರ್ಯೋದನನ ಆಪ್ತ ಸಚಿವ. ವಾರಣಾಸಿಯಲ್ಲಿ ಅರಗಿನ ಮನೆಯನ್ನು ಕಟ್ಟಿದವನು.
*** ಅರಗಿನ ಮನೆಯ ಪ್ರಸಂಗ ***
ಕುಂತಿ ಸಹಿತ ಐವರು ಆನಂದದಲಿ ವರ ವಾರಣಾವತಕೆ ಬಂದರು…ಅಂದು ಪುರಜನ ತಾವು ಇದಿರಾಗಿ ಕೂಡಿ ಬಂದು…ಕನ್ನಡಿ ಕಳಶ ವಿಭವದಲಿ ಕುಂತೀನಂದನರ ಹೊಗಿಸಿದರು…ಅಂದು ಪಟ್ಟಣ ಕೂಡೆ ಗುಡಿ ತೋರಣ ರಚನೆಯಲಿ ಮೆರೆದುದು…ಬೀಡು ಕಾಣಿಕೆಯಿತ್ತು ಕಂಡುದು… ಪುರೋಚನ ನಾಡೆ ಕಾಣಿಸಿದನು…ಅವರ ಕೂಡೆ ಹಾಸುಹೊಕ್ಕಾಗಿ ಮನವರಿದು ಸಂದನು… ಯಮನಂದನನು ಮನೆ ಮಾಡಿದ ಅಂದವನು ನೋಡಿದನು.
ಧರ್ಮರಾಯ: ಬೊಪ್ಪನವರು ಅರಗಿನ ಅರಮನೆಗೆ ಊಡುರಿವ ಬೇಳುವೆಯ ನೆನೆದರೆ…ನಾವ್ ನಾಲ್ವರು
ಸಮಿಧೆಗಳು…ಅಯ್ಯನ ರಮಣಿಯು ಆಹುತಿ…ಭೀಮನೇ ಪಶು…ಕುಮತಿ ಕಟ್ಟಿಸಿದ
ಅರಮನೆಯಿದು ಅಗ್ನಿ ಕುಂಡ…ಎಮಗೆ ಸಂಶಯವಿಲ್ಲ… ದೀಕ್ಷಾಕ್ರಮವ ಧರಿಸಿದವನು
ರಾಜೋತ್ತಮನೊ…ದುರ್ಯೋಧನನೊ…ಆವನು.
(ಎಂದನು ನಗುತ ಯಮಸೂನು… ಜನಪ ಕೇಳೈ, ವಿದುರನು ಅಟ್ಟಿದ ಖನಕ
ಬಂದನು… ಇವರ ಸಜ್ಜೆಯ ಮನೆಯಲಿ ಅತಿ ಗುಪ್ತದಲಿ ನೆಲದೊಳು ಪಥವ
ಸವೆಸಿದನು…ಖಳ ಪುರೋಚನನು ಒಡೆಯನಾಜ್ಞೆಯಲಿ ಕಿಚ್ಚಿನಲಿ ಚುಚ್ಚುವ
ಸಂದುಗಟ್ಟನು…ಆ ಬಾಹಿರನು ಅನುದಿನದೊಳು ನೆನೆವುತಿರ್ದನು…ಒಂದು ದಿನ
ಹಬ್ಬದಲಿ ಭೂಸುರ ವೃಂದ ಉಂಡುದು…ಅಲ್ಲಿ ಪಂಚ ಪುತ್ರಿಕೆಯೆಂದು ಬೇಡತಿ ಸುತರು
ಸಹಿತ ಒಬ್ಬಳಿದ್ದಳು…ಕೇಳು ಜನಮೇಜಯ ಮಹೀಪಾಲ, ಅಂದಿನ ಇರುಳು
ಪುರೋಚನನು ತಾನೊಂದ ನೆನೆದರೆ… ದೈವಗತಿ ಬೇರೊಂದ ನೆನೆದುದು…ಅವನು
ನಿದ್ರೆಯೊಳು ಅರಿಯದಿರಲು…ಇವರು ಆ ಭವನ ಮುಖದಲಿ ಕಿಚ್ಚನು ಒಟ್ಟಿಸಿ…
ಪವನಸುತ ಸಹಿತ ಬಿಲದ ಮಾರ್ಗದಲಿ ಹಾಯ್ದರು…ಮುನ್ನ ಅವರು ಬೆಂದರು…
ಬಳಿಕ ಆ ಭವನ ಪಂಕ್ತಿಗಳು ಅವನಿಯಲಿ ಉರಿದು ಕರಗಿದವು…ಪುರಜನ ಐದೆ
ಬೆರಗಾಗೆ ಅವನಿಯಲಿ ಹೊನಲಾಯ್ತು.)
ಪುರಜನ-1: ಅಕಟ…ಪಾಂಡವರು ಅಳಿದರೇ…ಕೌಳಿಕದಿ ಕೌರವರು ಇರಿದರೇ…ಮತಿ ವಿಕಳರು
ಅವದಿರು ಧರ್ಮದಲಿ ನಡೆದು ಬೆಂದು ಹೋದರು…ಪ್ರಕಟ ಪಾಪರಿಗೆ ಸಾಮ್ರಾಜ್ಯಕವು
ಅಹುದು…ಧರ್ಮಾತ್ಮರಿಗೆ ಈ ಪರಿವಿಕಟತೆಯ ಅಸುರ ರಾಜ್ಯ.
( ಎಂದುದು ಪೌರಜನ ಮರುಗಿ…)
ಪುರಜನ-2: ಪುರೋಚನ ಕುನ್ನಿಯದು ಮುನ್ನ ಬೆಂದನಲಾ…ಆ ಹದನ ಲೇಸಾಯ್ತು…ಅಕಟ…
ಅವ್ವೆಯರು ಸಹಿತ ಪಾಂಡವರು ಆಪನ್ನರಾದರೆ…ಇನ್ನು ಧರ್ಮ ಸಂಪ್ರತಿಪನ್ನ ಗುಣದ
ಆಚಾರಗಳ ಸಂಪನ್ನತೆಯನು ಸುಡು ಸುಡು.
( ಎಂದು ನಿಖಿಲ ಪರಿವಾರ ಒರಲಿ ಮರುಗಿತು…ಹಸ್ತಿನ ನಗರಿಯಲಿ ಈ ಬೇಳಂಬ
ಒಗೆದುದು…ತತ್ಪೌರಜನ ಮನವುಗಿದು ಶೋಕಮಯ ಸಾಗರದ ಮಧ್ಯದಲಿ
ಬಿದ್ದುದು…ವಿದುರ ಭೀಷ್ಮಾದಿಗಳಿಗೆ ಆನನ ಹೊಗೆದುದು…ಆ ಧೃತರಾಷ್ಟ ಸುತರಿಗೆ
ಮುಖಾಂಬುಜವ ದುಗುಡ ದಡ್ಡಿಯ ಹರುಷಸಿರಿ ಹೊಕ್ಕಳು…ಕೌರವವೃಂದ
ಪರಿಜನವೈದೆ ಶೋಕಿಸಿ ಆ ಸುರನದಿಗೆ ಬಂದುದು… ಗಂಗಾತೀರದಲಿ
ಮಿಂದು…ಬಳಿಕ ಸಂದ ವಿಧಿಯಲಿ ಊರ್ಧ್ವದೇಹಿಕವ ಮಾಡಿ ಪರಮಾನಂದ ಮಿಗಲು
ಅವರು ಇರ್ದರು…ಇತ್ತಲು ಇಂದು ಕುಲಸಂಭವರ ವಿಧಿಯನು ಮತ್ತೆ ಕೇಳೆಂದ.)
ಹೊಸಗನ್ನಡ ಗದ್ಯ
ತಾಯಿ ಕುಂತಿಯೊಡನೆ ಪಾಂಡವರು ಆನಂದದಿಂದ ವಾರಣಾವತಕ್ಕೆ ಬಂದರು. ಆ ಪುರದ ಜನರೆಲ್ಲರೂ ಕನ್ನಡಿ ಕಳಶಗಳ ಸೊಗಸಿನಿಂದ ಜತೆಗೂಡಿ ಬಂದು, ಪಾಂಡವರನ್ನು ಎದುರುಗೊಂಡು ಪಟ್ಟಣಕ್ಕೆ ಪ್ರವೇಶ ಮಾಡಿಸಿದರು. ಅಂದು ಪಟ್ಟಣವು ಬಾವುಟ ತೋರಣಗಳ ಅಲಂಕಾರದಿಂದ ಕಂಗೊಳಿಸಿತು ಪ್ರಜೆಗಳ ಗುಂಪು ಕಾಣಿಕೆ ಕೊಟ್ಟು ಪಾಂಡವರನ್ನು ಬರಮಾಡಿಕೊಂಡಿತು. ಪುರೋಚನನು ಪಾಂಡವರ ಕಣ್ಣಿಗೆ ಕಾಣಿಸಿಕೊಂಡನು. ಅವರೊಡನೆ ಹೊಂದಿಕೊಂಡು, ಅವರ ಮನಮೆಚ್ಚುವಂತೆ ನಡೆದುಕೊಂಡನು.
ಪ್ರಜೆಗಳು ಮತ್ತು ಪುರೋಚನನು ಅಲ್ಲಿಂದ ತೆರಳಿದ ನಂತರ, ದರ್ಮರಾಯನು ಮನೆಯನ್ನು ಕಟ್ಟಿರುವ ರೀತಿಯನ್ನು ಗಮನಿಸಿದನು. ತನ್ನೊಡನಿದ್ದ ತಾಯಿಗೆ ಮತ್ತು ತಮ್ಮಂದಿರಿಗೆ ನೋವಿನ ನಗೆಯಿಂದ ಕೂಡಿ ಈ ರೀತಿ ಹೇಳಿದನು.
“ತಂದೆಯ ಸಮಾನರಾದ ದ್ರುತರಾಶ್ಟ್ರರು ಅರಗಿನ ಮನೆಯ ಯಾಗದ ಬೆಂಕಿಯಲ್ಲಿ ನಮ್ಮನ್ನು ಸುಡಲು ಬಯಸಿದರೆ…ನಾವು ನಾಲ್ವರು ಸಮಿತ್ತುಗಳು… ಪಾಂಡುರಾಜನ ಹೆಂಡತಿಯಾದ ಕುಂತಿಯು ಹವಿಸ್ಸು…ಬೀಮನೇ ಬಲಿಕೊಡುವ ಪಶು…ಕೇಡಿಗನಾದ ಪುರೋಚನನು ಕಟ್ಟಿದ ಅರಮನೆಯಿದು ಅಗ್ನಿಕುಂಡ…ಇದು ನಮ್ಮನ್ನು ಬಲಿತೆಗೆದುಕೊಳ್ಳಲು ಕಟ್ಟಿದ ಮನೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ…ಈ ಯಾಗದ ಯೋಜನೆಯನ್ನು ಕಯ್ಗೊಂಡವನು ದ್ರುತರಾಶ್ಟ್ರನೋ…ದುರ್ಯೋದನನೋ…ಯಾರಿರಬಹುದು.” ಎಂದು ದರ್ಮರಾಯನು ನುಡಿದನು.
ವಿದುರನು ಕಳುಹಿಸಿದ ಕನಕ ಎಂಬುವನು ವಾರಣಾವತದ ಅರಗಿನ ಮನೆಗೆ ಬಂದನು. ಇವರು ಮಲಗುವ ಕೊಟಡಿಯಲ್ಲಿ ಅತಿ ಗುಟ್ಟಾಗಿ ನೆಲದಲ್ಲಿ ಸುರಂಗವನ್ನು ಕೊರೆದು ಹೊರಹೋಗುವುದಕ್ಕೆ ದಾರಿಯನ್ನು ಮಾಡಿದನು. ದುರ್ಯೋದನನ ಅಪ್ಪಣೆಯಂತೆ ಪುರೋಚನನು ಅರಗಿನ ಮನೆಗೆ ಬೆಂಕಿ ಹಾಕಲು ಸರಿಯಾದ ಸಮಯಕ್ಕಾಗಿ ಹೊಂಚುತ್ತಿದ್ದನು. ಹಬ್ಬದ ದಿನವೊಂದು ಬಂತು. ಅಂದು ಅರಗಿನ ಮನೆಗೆ ಬ್ರಾಹ್ಮಣರು ಗುಂಪುಗುಂಪಾಗಿ ಬಂದು ಊಟವನ್ನು ಮಾಡಿಕೊಂಡು ಹೋದರು. ಅಲ್ಲಿಗೆ ಅಯ್ದು ಮಂದಿ ಗಂಡು ಮಕ್ಕಳೊಡನೆ ಬೇಡತಿಯೊಬ್ಬಳು ಊಟಕ್ಕೆ ಬಂದಿದ್ದಳು. ಊಟವಾದ ನಂತರ ಬೇಡತಿಯು ಮಕ್ಕಳೊಡನೆ ಅಂದು ರಾತ್ರಿ ಅರಗಿನ ಮನೆಯಲ್ಲಿಯೇ ತಂಗಿದಳು.
ಕೇಳು ಜನಮೇಜಯ ರಾಜನೇ, ಅಂದಿನ ರಾತ್ರಿ ಪುರೋಚನನು ಅರಗಿನ ಮನೆಗೆ ಕಿಚ್ಚನ್ನಿಡಲು ಯೋಜಿಸಿದ್ದರೆ, ದೇವರ ಯೋಜನೆ ಬೇರೊಂದನ್ನು ನೆನೆಯಿತು. ಪುರೋಚನನು ನಿದ್ರೆಯಲ್ಲಿ ಮಯ್ ಮರೆತು ಮಲಗಿರುವಾಗ, ಪಾಂಡವರು ಅರಗಿನ ಮನೆಯ ಮುಂದುಗಡೆಯಿಂದಲೇ ಬೆಂಕಿಯನ್ನೊಡ್ಡಿ. ಬೀಮನೊಡನೆ ಸುರಂಗದ ಹಾದಿಯಲ್ಲಿ ಸಾಗಿದರು.
ಅರಗಿನ ಮನೆಯಲ್ಲಿ ಮಲಗಿದ್ದ ಬೇಡತಿ, ಆಕೆಯ ಮಕ್ಕಳು ಮತ್ತು ಪುರೋಚನನು ಕಿಚ್ಚಿನಲ್ಲಿ ಬೆಂದುಹೋದರು. ಅರಗಿನ ಮನೆಯ ಸಾಲು ಸಾಲು ಕಂಬಗಳೆಲ್ಲವೂ ಕಿಚ್ಚಿನಲ್ಲಿ ಉರಿ ಉರಿದು ನೆಲದ ಮೇಲೆ ಬಿದ್ದು ಕರಗಿದವು. ಪಟ್ಟಣಿಗರು ಬೆರಗಾಗುವಂತೆ ಬೂಮಿಯ ಮೇಲೆಲ್ಲಾ ದ್ರವರೂಪದ ವಸ್ತು ಹರಿಯಿತು.
“ಅಯ್ಯೋ…ಪಾಂಡವರು ಸಾವನ್ನಪ್ಪಿದರೇ…ಕೌರವರು ಮೋಸದಿಂದ ಅವರನ್ನು ಕೊಂದರೇ…ಕುತಂತ್ರವನ್ನು ಅರಿಯದ ಪಾಂಡವರು ದರ್ಮದಲ್ಲಿ ನಡೆದು ಬೆಂದುಹೋದರು. ಎಲ್ಲರಿಗೂ ಕಾಣುವಂತೆ ಪಾಪವನ್ನು ಮಾಡಿದವರಿಗೆ ರಾಜ್ಯದ ಪದವಿಯು ದೊರೆಯುವುದು. ಒಳ್ಳೆಯವರು ಈ ರೀತಿ ಕ್ರೂರಿಗಳು ಆಳುವ ರಾಜ್ಯದಲ್ಲಿ ಸಿಲುಕಿ ಸಾವನ್ನಪ್ಪಿದರು” ಎಂದು ವಾರಣಾವತದ ಪುರಜನರು ಮರುಗಿದರು.
ಮತ್ತೆ ಮತ್ತೆ ಕೇಡಿಗರನ್ನು ನಿಂದಿಸುತ್ತ “ಪುರೋಚನನೆಂಬ ನಾಯಿ ಮೊದಲೇ ಬೆಂದು ಸತ್ತನಲ್ಲವೇ…ಅದೊಂದು ಒಳ್ಳೆಯದಾಯ್ತು…ಅಯ್ಯೋ…ತಾಯಿಯೊಡನೆ ಪಾಂಡವರು ಆಪತ್ತಿಗೆ ಬಲಿಯಾದರೇ…ಇನ್ನು ದರ್ಮವೆಂದು ಹೇಳುವ ಒಳ್ಳೆಯ ನಡೆನುಡಿಗಳ ಆಚಾರವನ್ನು ಸುಡು ಸುಡು…ಅದಕ್ಕೆ ಬೆಂಕಿ ಬೀಳಲಿ” ಎಂದು ಸಮಸ್ತ ಪುರಜನ ಸಂಕಟದಿಂದ ಗೋಳಾಡಿದರು.
ಈ ದುರಂತದ ಸುದ್ದಿಯು ಹಸ್ತಿನಾಪುರವನ್ನು ಮುಟ್ಟಿತು. ಆ ಪಟ್ಟಣದ ಜನರು ಮನನೊಂದು ಶೋಕಸಾಗರದಲ್ಲಿ ಮುಳುಗಿದರು. ವಿದುರ ಬೀಶ್ಮಾದಿಗಳ ಮೊಗ ಕಪ್ಪಿಟ್ಟಿತು. ದ್ರುತರಾಶ್ಟ್ರನ ಮಕ್ಕಳ ಮೊಗದಲ್ಲಿ ದುಗುಡದ ಮುಸುಕಿನಲ್ಲಿ ಆನಂದದ ಬಾವನೆಗಳು ನೆಲೆಸಿದವು. ದುರ್ಯೋದನನ ಕಡೆಯವರು ಬಹಿರಂಗದಲ್ಲಿ ಬಹಳವಾಗಿ ಶೋಕಿಸುತ್ತ, ಗಂಗಾ ನದಿಯ ದಂಡೆಗೆ ಬಂದರು. ಗಂಗಾ ತೀರದಲ್ಲಿ ಮಿಂದು, ಸಂಪ್ರದಾಯದಂತೆ ಉತ್ತರಕ್ರಿಯೆಯನ್ನು ಮಾಡಿ, ಅಂತರಂಗದಲ್ಲಿ ಪರಮಾನಂದದಿಂದ ಇದ್ದರು. “ ಜನಮೇಜರಾಯನೇ ಕೇಳು, ಇತ್ತ ಅರಗಿನ ಮನೆಯ ಸುರಂಗದ ಹಾದಿಯಿಂದ ಹೊರಬಿದ್ದ ಪಾಂಡವರಿಗೆ ಆದ ಪಾಡನ್ನು ಹೇಳುತ್ತೇನೆ” ಎಂದು ವೈಶಂಪಾಯನ ಮುನಿಯು ಕತೆಯನ್ನು ಮುಂದುವರಿಸಿದನು.
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು