ಕುಮಾರವ್ಯಾಸ ಬಾರತ ಓದು-ಆದಿ ಪರ್ವ-ದ್ರೌಪದಿಯ ಸ್ವಯಂವರ-ಮೊದಲನೆಯ ಹಂತ-ನೋಟ-26
ಪ್ರಸಂಗ-26
ದ್ರೌಪದಿಯ ಸ್ವಯಂವರ–ಮೊದಲನೆಯ ಹಂತ
(ಆದಿ ಪರ್ವ: ಹದಿಮೂರನೆಯ ಸಂದಿ: ಪದ್ಯ 49 ರಿಂದ 68)
ಪಾತ್ರಗಳು:
ದ್ರುಪದ: ಚತ್ರವತಿ ನಗರದ ರಾಜ. ದ್ರುಶ್ಟದ್ಯುಮ್ನ ಮತ್ತು ದ್ರೌಪದಿಯ ತಂದೆ.
ದ್ರುಶ್ಟದ್ಯುಮ್ನ: ದ್ರುಪದ ರಾಜನ ಮಗ.
ದ್ರೌಪದಿ: ದ್ರುಪದನ ರಾಜನ ಮಗಳು.
ಹೊಸಗನ್ನಡ ಗದ್ಯ
ದ್ರೌಪದಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಸ್ವಯಂವರ ಮಂಟಪಕ್ಕೆ ಕರೆತಂದರು. ಮುಂದೆ ಸಾಲಾಗಿ ಸಿಂಹಾಸನಗಳಲ್ಲಿ ಮಂಡಿಸಿದ್ದ ರಾಜರ ಸಮೂಹದಲ್ಲಿ ತಂಗಿ ದ್ರೌಪದಿಗೆ ಒಬ್ಬೊಬ್ಬ ರಾಜನ ಪರಿಚಯವನ್ನೂ ವಿವರಿಸಿ ತಿಳಿಸಬೇಕೆಂಬ ಉದ್ದೇಶದಿಂದ, ಅಣ್ಣ ರಾಜಕುಮಾರ ದ್ರುಶ್ಟದ್ಯುಮ್ನನು ದ್ರೌಪದಿಯ ಪಲ್ಲಕ್ಕಿಯ ಸಮೀಪಕ್ಕೆ ಬಂದನು.
“ತಂಗೀ, ನೋಡು ತಾಯಿ, ನಿನ್ನ ಕಣ್ಣುಗಳು ಇಶ್ಟಪಡುವುದಾದರೆ, ನಿನ್ನ ಮನೋಸಾಗರದ ಲಹರಿಯಲ್ಲಿ ಬೆಲೆ ಕಟ್ಟುವುದಾದರೆ ರಾಜರನ್ನು ತೋರಿಸುತ್ತೇನೆ. ಇಂಗಿತದಿಂದ ಅವರ ಅಂತರಂಗವನ್ನು…ಬಹಿರಂಗದಲ್ಲಿ ಅವರ ಮಯ್ ಕಟ್ಟಿನ ರೀತಿಯನ್ನು ನೀನು ತಿಳಿದುಕೊಳ್ಳುವುದು” ಎಂದು ತನ್ನ ತಂಗಿ ದ್ರೌಪದಿಗೆ ದ್ರುಶ್ಟದ್ಯುಮ್ನನು ಹೇಳಿದನು.
“ದ್ರೌಪದಿಯೇ, ದ್ರುತರಾಶ್ಟ್ರನ ಮಕ್ಕಳನ್ನು ನೋಡು… ಇವನು ದುರ್ಯೋದನ ಮಹೀಶ್ವರ…ಇವನು ದುಶ್ಶಾಸನ…ಇವನು ದುರ್ಜಯ…ಇವನು ದುಶ್ಶಳ…ಇವನು ದುಸ್ಸಹ…ಇವನು ಚಿತ್ರರತ…ಇವನು ದುರ್ಮದ…ಇವನು ಚಿತ್ರಕ…ಇವರುಗಳೆಲ್ಲಾ ಕುರುವಂಶದಲ್ಲಿ ಹೆಸರಾಂತವರು.”
“ದ್ರೌಪದಿಯು ಅವರನ್ನು ನೋಡಲಿಲ್ಲ…ಇವನನ್ನು ಮಾತಾಡಿಸಲಿಲ್ಲ…ಎಲ್ಲರನ್ನೂ ಕಡೆಗಣಸಿದಳು” ಎಂದು ದ್ರುಶ್ಟದ್ಯುಮ್ನನು ದ್ರೌಪದಿಯ ಮನದ ಇಂಗಿತವನ್ನು ಅರಿತುಕೊಂಡು ನಸುನಕ್ಕು ಮುಂದೆ ಮುಂದೆ ಸಾಗುತ್ತ…ಅಲ್ಲಿರುವ ರಾಜರ ಪರಿಚಯವನ್ನು ಮಾಡತೊಡಗುತ್ತಾನೆ
“ನೋಡು ತಂಗಿ, ಉತ್ತರನೊಂದಿಗೆ ಇರುವ ವಿರಾಟ ಮಹಾರಾಜನನ್ನು…ಕೀಚಕರನ್ನು…ಶ್ರುತಾಯುದ…ರವಿದ್ವಜ… ರೋಚಮಾನಕರು…ಮೂಡಣ ದಿಕ್ಕಿನ ಅರಸುಗಳನ್ನು ನೋಡು” ಎಂದು ಮುಂದಿನವರುಗಳನ್ನು ತೋರಿಸಿದನು.
“ಇವರು ನೀಲ…ಚಿತ್ರಾಯುದ…ತೆಂಕಣದ ಚೋಳ…ಕೇರಳ… ಪಾಂಡ್ಯ ರಾಜರು…ಚಂದ್ರಸೇನ…ಸಮುದ್ರಸೇನರು…ಈತ ಕಳಿಂಗದ ದೊರೆ…ಈತನು ಚೇಕಿತಾನ ದೊರೆ…ಈತ ಬಾನುದತ್ತ ದೊರೆ…ಇವರುಗಳನ್ನು ನೋಡು” ಎಂದು ದ್ರೌಪದಿಗೆ ತೋರಿಸಿದನು.
“ಈ ಕಡೆ ನೋಡು…ಇಲ್ಲಿ ಪೌಂಡ್ರಕ…ಬಗದತ್ತ…ಕಾಂಬೋಜ… ಹರದತ್ತ…ಹಂಸ…ಡಿಬಿಕರು…ಮಾದ್ರ ದೇಶದ ದೊರೆ ಶಲ್ಯ… ಜರಾಸಂದ…ಮಣಿಮಾನ…ಸಹದೇವರಿದ್ದಾರೆ…ಬ್ರುಹದ್ರತ ಈ ಕಡೆ…ಇವನು ದಂಡದಾರಕ ದೊರೆ-ಇವರೆಲ್ಲರನ್ನು ನೋಡು” ಎಂದು ದ್ರುಶ್ಟದ್ಯುಮ್ನನು ತೋರಿಸಿದ.
“ಈತ ಬೂರಿ…ಬೂರಿಶ್ರವ…ಇವರು ತೆಂಕಣದ ವೀರ ಬಾಹ್ಲಿಕ… ವಿಂದ್ಯ…ಚಿತ್ರ…ಬಗೀರತರು…ಇವರು ರಾಜೋತ್ತಮ ಜಯದ್ರತ…ಶಿಬಿ…ಶ್ರುತಾಯುದರು…ವೀರರಾದ ವ್ರುದ್ದಕ್ಶತ್ರ… ಸ್ರುಂಜಯ…ಸೋಮದತ್ತ…ಇವರು ಬಹುಬುಜಬಲ ಶಕ್ತಿವಂತರಾದ ರಾಜರು- ದ್ರೌಪದಿಯೇ ನೋಡು” ದ್ರುಶ್ಟದ್ಯುಮ್ನನು ತೋರಿಸಿದನು.
“ಈತ ರುಕ್ಮಾಂಗದ…ಈತ ಜಯದ್ಬಲ…ಇವರುಗಳು ಶ್ರುತಸೇನ…ಅಚ್ಯುತಾಯುದರು…ಇವರು ನಿಯತಾಯು… ದೀರ್ಗೋದರ ಮಹೋದರರು…ಈತ ದಮಗೋಶನ ಮಗ ಹೆಸರಾಂತ ಶಿಶುಪಾಲ…ಮಹಾ ಪರಾಕ್ರಮಿಯಾದ ಅಶ್ವತ್ತಾಮನು ಇವನು….ಈತ ಸೌಬಲ-ಇವರುಗಳನ್ನು ನೋಡು” ಎಂದನು.
“ಬೂಮಂಡಲದ ಸೂರ್ಯನಂತೆ ಪ್ರಕಾಶಿಸುತ್ತಿರುವಾತನು ಕರ್ಣನು…ಇವನಿಗೆ ವ್ರುಶಸೇನ… ಚಿತ್ರಸೇನಕ ಎಂಬುವರು ಮಕ್ಕಳು…ಈತನಾಗಬಹುದೇ ನೋಡು” ಎಂದು ಹೇಳಲು…ದ್ರೌಪದಿಯು ಅತಿಶಯವಾದ ಸಂಬಂದಬಾವದಲ್ಲಿ ಅವನನ್ನು ನೋಡಿದಳು…ನೋಡಿ ಕಣ್ಣುಗಳನ್ನು ಅತ್ತ ತಿರುಗಿಸಿದಳು.
ರಾಜರುಗಳಿಗೆ ಹಿಂದೆ ಇವಳ ಬಗ್ಗೆ ಕೇಳಿ ಕೇಳಿ ಉಂಟಾಗಿದ್ದ ಮೋಹದ ಉತ್ಸಾಹ ಕಣ್ಣಿಂದ…ಈಕೆಯನ್ನು ನೋಡಬೇಕೆಂಬ ಉದ್ರೇಕದಿಂದ…ಇವಳ ದೇಹಸ್ಪರ್ಶಕ್ಕಾಗಿ ರಾಜರ ಎದೆ ಚಡಪಡಿಸಿತು…ಮನಸ್ಸು ಸೋತು…ಸಂಕಟಕ್ಕೆ ಸಿಕ್ಕಿತು. ಅಹಂಕಾರದ ಚಿಹ್ನೆಯೋ…ಚಂಚಲತೆಯೋ…ಸಿದ್ದಿಯೋ… ಬೆರಗೋ ಎಂದು ರಾಜಸಮೂಹ ಚಿಂತಿಸುತ್ತಿತ್ತು.
ದ್ರುಶ್ಟದ್ಯುಮ್ನನು ಮುಂದುವರೆಸಿ “ಇತ್ತ ನೋಡಮ್ಮಾ ತಂಗಿ, ಈ ಯದುಕುಲದ ರಾಜರಲ್ಲಿ ಉತ್ತಮೋತ್ತಮನಾದವನನ್ನು… ರಕ್ಕಸರೆಂಬ ಬಾಳೆಯ ವನಕ್ಕೆ ಮದಿಸಿದ ಆನೆಯಿದ್ದಂತೆ ಇವನು…ಸಕಲ ವೇದ ಸಮೂಹಕ್ಕೆ ರತ್ನಪ್ರಾಯನಾದವನು…ಶ್ರೇಯಸ್ಸಿನ ಸುಂದರ ಮೂರ್ತಿಯು…ಅವನ ಉನ್ನತವಾದ ನಿರ್ಮಲವಾದ ಕೀರ್ತಿಯು ಮನಮುಟ್ಟುವುದಾದರೆ ತಪ್ಪಿಲ್ಲ…ನೀನು ಕ್ರಿಶ್ಣನನ್ನು ಸ್ವೀಕರಿಸು” ಎಂದು ಹೇಳಿದನು.
“ಈ ಯಾದವ ಶಿರೋಮಣಿಯು ಮನ್ಮತನ ತಂದೆ. ಮೂರುಲೋಕವನ್ನು ನಿರ್ಮಿಸಿದ ಬ್ರಹ್ಮನ ತಂದೆ. ನಿನ್ನ ರೂಪ ಶ್ರೀಮಂತಿಕೆಯನ್ನು ಇವನೊಂದಿಗೆ ನೀನು ನೋಡಿಕೊಳ್ಳಬಹುದು…ಸುಂದರಿಯರ ಒಡನಾಟ ನೋಡಿದರೆ…ಬೂದೇವಿ, ಲಕ್ಶ್ಮಿ ದೇವಿಯರು ಕ್ರಿಶ್ಣನ ಎರಡು ಪಾದಗಳ ಸೇವೆ ಮಾಡುತ್ತಿರುವರು. ಈತನಾಗಬಹುದೇ ನೋಡು” ಎಂದು ದ್ರುಶ್ಟದ್ಯುಮ್ನನು ಕೇಳಿದನು.
ಅಣ್ಣನ ಮಾತು ಕೇಳಿ ದ್ರೌಪದಿಯು ಪೂಜ್ಯ ಬಾವನೆಯ ಆನಂದದಲ್ಲಿ ಮುಳುಗಿ ರೋಮಾಂಚನಗೊಂಡಳು. ಅವಳ ದೇಹವು ರೋಮಾಂಚನದ ಬೆವರಿನ ಪ್ರವಾಹದಲ್ಲಿ ನೆನೆದವು. ಮನಸ್ಸಿನಲ್ಲಿಯೇ ಕ್ರಿಶ್ಣನಿಗೆ ನಮಿಸಿದಳು. “ನನಗೆ ಈತನಲ್ಲಿ ಗುರುಬಾವನೆಯು ಮನದಲ್ಲಿ ಮೂಡಿತು . ಏಕೆಂದು ನನಗೆ ತಿಳಿಯದು” ಎಂದು ಅವಳು ನಗುತ್ತ ಹೇಳಿದಳು.
“ಈ ಕ್ರಿಶ್ಣನಿಗೆ ಹಿರಿಯನಾದವನು ಬಲರಾಮನನ್ನು ನೋಡು… ಇಗೋ ಈತನು ಕ್ರಿಶ್ಣನ ಹಿರಿಯ ಮಗ. ಮೂರು ಲೋಕವನ್ನೂ ಸೆರೆ ಹಿಡಿಯುವ ಸೌಂದರ್ಯ ಇವನದು. ಹರನ ಕಣ್ಣಿಗೆ ಹೆದರದ ಬಿರುದುಳ್ಳ ಮನ್ಮತನಂತಹ ರೂಪುವುಳ್ಳವನನ್ನು ನೋಡು…ಈತನ ವರಪುತ್ರ ಅನಿರುದ್ದ…ಇವರೆಲ್ಲ ಯಾದವ ಕುಲದ ನಾಯಕರು. ಈತ ಸಾರಣ…ಈತ ವೀರ ಸಾಂಬ…ಈತ ಸುಂದರನಾದ ದೀಪಕ… ಈತನು ನಿರ್ಮಲನಾದ ಅಕ್ರೂರ…ಈತ ಸತ್ಯಕ…ಈತ ಸಾತ್ಯಕಿ…ಈತ ಕ್ರುತವರ್ಮ…ಈತನು ಸಾರಮೌಂಜಸ… ಈತ ವಿದೂರಣ – ಇವರೇ ಮೊದಲಾದ ಸಮಸ್ತ ಯಾದವ ವೀರರು…ಇವರು ಕ್ರಿಶ್ಣನ ಮಕ್ಕಳು” ಎಂದು ದ್ರೌಪದಿಗೆ ದ್ರುಶ್ಟದ್ಯುಮ್ನನು ತೋರಿಸಿದನು.
ಈ ಜಗತ್ತನ್ನು, ಇಂದ್ರಿಯ ವಿಶಯಾದಿಗಳನ್ನು ಯುಕ್ತಿಯಲ್ಲಿ ಹೊರತೆಗೆದಿಟ್ಟು, ವೇದಗಳ ಮೂಲಕ ಪವಿತ್ರ ತತ್ವವನ್ನು ಹುಡುಕುವ ರೀತಿಯಲ್ಲಿ…ತನ್ನ ಮನಸ್ಸಿನ ಬಯಕೆಯ ಚೆಂದದ ಪುಣ್ಯಶಾಲಿಯನ್ನು ಹುಡುಕುತ್ತ ದ್ರೌಪದಿಯು ಆ ಎಲ್ಲ ರಾಜಸಮೂಹವನ್ನು ತನ್ನ ಬೊಗಸೆ ಕಣ್ಣುಗಳಲ್ಲಿ ನೋಡಿ ಯಾರೊಬ್ಬರನ್ನು ಒಪ್ಪಲಿಲ್ಲ.
ಸ್ವಯಂವರ ಮಂಟಪದಲ್ಲಿದ್ದ ರಾಜರು ತಮ್ಮ ಮನದಲ್ಲಿಯೇ ಬಗೆಬಗೆಯ ಕಲ್ಪನೆಯನ್ನು ಮಾಡಿಕೊಳ್ಳುತ್ತಿದ್ದರು. ಕೆಲವರು ಆಕೆಯು ಮನೋಹರವಾದ ಕಣ್ಣಂಚಿನಿಂದ ತಮ್ಮನ್ನು ನೋಡಿದಳೆಂದೂ…ಕೆಲವರು ಕಣ್ಣುಗಳ ಕಾಂತಿಯ ಬೆಳಕಿನಲ್ಲಿ ತಮ್ಮನ್ನು ಕಂಡಳೆಂದೂ…ಕೆಲವರು ಮಂದಹಾಸದ ಪ್ರಕಾಶದಲ್ಲಿ ಗೆಳತಿಯರ ಜೊತೆ ಸೇರಿ ತಮ್ಮನ್ನು ನೋಡಿದಳೆಂದೂ…ಕೆಲವರು ದ್ರೌಪದಿಯು ತಮ್ಮನ್ನು ನೋಡಿ ಆನಂದದಿಂದ ತಮ್ಮ ಬಗ್ಗೆ ಪ್ರೀತಿಸುವ ಗೆಳತಿಯರಿಗೆ ಹೇಳಿದಳೆಂದೂ ಕಲ್ಪಿಸಿಕೊಂಡು ತಮ್ಮೊಳಗೊಳಗೆ ಕಲ್ಪನೆಯಲ್ಲಿಯೇ ಸುಕವನ್ನು ಹೊಂದಿದರು.
ಆ ಚೆಲುವೆಯ ಅಬಿಪ್ರಾಯವನ್ನು ತಿಳಿದು ಪಲ್ಲಕ್ಕಿ ಹಿಂತಿರುಗಿತು. ಅದರೊಡನೆಯೆ ಪರಿವಾರದ ಗುಂಪು ಆಕೆಯನ್ನು ಹಿಂಬಾಲಿಸಿತು. ಕ್ರಿಶ್ಣ ಮತ್ತು ಬೀಶ್ಮರನ್ನು ಹೊರತುಪಡಿಸಿ ಉಳಿದ ರಾಜರುಗಳು ಕಣ್ಣುಗಳಿಂದಲೂ ಮನಸ್ಸು ಇಂದ್ರಿಯಗಳಿಂದಲೂ ಆಕೆಯನ್ನು ಕಳುಹಿಸಿಕೊಡುತ್ತ ಬರಿಯ ಶರೀರ ಮಾತ್ರವಾಗಿ ತೋರಿಕೆಯ ವೇಶದಲ್ಲಿ ಸಿಂಹಾಸನವನ್ನು ಇಳಿಯದೆ ಕುಳಿತುಕೊಂಡಿದ್ದರು.
ದ್ರೌಪದಿಯ ರೂಪದ ಚೆಲುವಿಗೆ ಮರುಳಾಗಿ ಮಯ್ ಮರೆತ ರಾಜರುಗಳ ಸಮೂಹದಲ್ಲಿ ಚಿತ್ರವಿಚಿತ್ರವಾದ ಹಾವಬಾವಗಳು ಕಂಡುಬಂದವು. ಅವರು ಬೆರಳಲ್ಲಿ ಮಡಿಸಿದ ಎಲೆಯು ಬೆರಳೊಳಗೆಯೇ ಇತ್ತು. ಇನ್ನು ಬಾಯೊಳಗೆ ಒತ್ತಿ ಒಳಸೇರಿಸಿದ ಎಲೆಯು ಬಾಯೊಳಗೇ ಇತ್ತು. ಇನ್ನು ಮಂತ್ರಿಗಳ ಮಾತು ಕಿವಿಗೆ ಕೇಳಿಸಲಿಲ್ಲ. ಕಣ್ಣೆದುರು ಸುಳಿದರೂ ಕಾಣಿಸದು. ಮನ್ಮತನ ಉಗ್ರವಾದ ಬಾಣಗಳು ಮೇಲೆ ಬಿದ್ದು, ಮೂಗಿನ ಮೇಲೆ ಬೆರಳಿಟ್ಟು, ಚಿಂತೆಯನ್ನು ಹೊತ್ತು, ಕೈಗಳ ಅದ್ರುಶ್ಟ ರೇಕೆಗಳನ್ನು ನೋಡುತ್ತ ಮೂಕರಾಗಿ ಅಲ್ಲಾಡದೆ ಕುಳಿತಿದ್ದರು.
ಮಹಾ ಸ್ವಯಂವರದಲ್ಲಿ ಈ ಚೆಲುವೆ ಸಕಲ ಬೂಮಂಡಲದ ರಾಜರನ್ನು ಒಪ್ಪದೇ ಹಿಂತಿರುಗಿದಳು. ಜೋಯಿಸರ, ಜ್ಯೋತಿಶಿಗಳ ಸಂದೇಶ ಪ್ರಯೋಜನವಿಲ್ಲದೇ ಹೋಯಿತೇ ! ವೀರನಾರಾಯಣನು ಪಾಂಡವ ರಾಯರನ್ನು ತೋರಿಸಲಿಲ್ಲವಲ್ಲ ಎಂದು ದ್ರುಪದನು ಚಿಂತಿಸಿದನು.
(ಚಿತ್ರ ಸೆಲೆ: quoracdn.net)


ಇತ್ತೀಚಿನ ಅನಿಸಿಕೆಗಳು