ಮನೆಯ ಹೊರಗಡೆ ಅಡಿಗೆಮನೆ ಪಾಕಶಾಲೆಯಾಗಬೇಕೇ?

ಡಿ.ಎನ್.ಶಂಕರ ಬಟ್

ನುಡಿಯರಿಮೆಯ ಇಣುಕುನೋಟ – 2nudi_inuku

ಕನ್ನಡಿಗರ ಪದಬಳಕೆಯ ವಿಶಯದಲ್ಲಿ ಒಂದು ಸೋಜಿಗದ ಸಂಗತಿಯಿದೆ. ಅದೇನೆಂದು ತಿಳಿಯಲು ಕೆಲವು ಎತ್ತುಗೆಗಳನ್ನು ತೆಗೆದುಕೊಳ್ಳೋಣ:

ಮನೆಯಲ್ಲಿ ಅಡಿಗೆಮನೆ, ಊಟದಕೋಣೆ ಎನ್ನುವ ನಾವು ಸಮ್ಮೇಳನಗಳಂತಹ ಸಂದರ‍್ಬಗಳಲ್ಲಿ ಅವುಗಳ ಬದಲಾಗಿ ಪಾಕಶಾಲೆ, ಬೋಜನಶಾಲೆ ಎನ್ನುತ್ತೇವೆ. ಬಟ್ಟೆಯಂಗಡಿಗೆ ಹೋಗುತ್ತೇನೆ ಎನ್ನುತ್ತೇವೆ; ಆದರೆ, ಅಂತಹ ಅಂಗಡಿಗಳಿಗೆ ಹೆಸರು ಕೊಡಬೇಕಾದಾಗ, ವಸ್ತ್ರಾಲಯ ಇಲ್ಲವೇ ವಸ್ತ್ರಬಂಡಾರ ಎಂಬ ಹೆಸರುಗಳಶ್ಟೇ ಹೊಳೆಯುತ್ತವೆ. ತಿಂಡಿಗಳನ್ನು ಮಾರುವ ಅಂಗಡಿ ತಿಂಡಿಮನೆಯಾಗಿಬಿಟ್ಟರೆ ಅದೇನೋ ಮುಜುಗರ, ಉಪಹಾರಗ್ರುಹವೇ ಆಗಬೇಕು.

ನಾಯಿಯ ಕುರಿತು ಬರೆದ ಬರಹದಲ್ಲಿ ಉದ್ದಕ್ಕೂ ನಾಯಿ ಎಂಬ ಪದವೇ ಬಳಕೆಯಾಗಿದೆಯಾದರೂ, ತಲೆಬರಹದಲ್ಲಿ ಮಾತ್ರ ಶ್ವಾನವಿದ್ದರಶ್ಟೇ ನೆಮ್ಮದಿ. ಮದುವೆಯ ಕರೆಯೋಲೆ ಕಳುಹಿಸುವ ಬದಲು ವಿವಾಹ ಆಮಂತ್ರಣ ಕಳಿಸಿದರೆ ಮಾತ್ರ ಮದುವೆಗೆ ಬರುತ್ತಾರೇನೋ ಎಂಬ ಅನಿಸಿಕೆ ನಮ್ಮಲ್ಲಿ ಹಲವರಲ್ಲಿದ್ದಂತಿದೆ.

ಹಾಗೆಯೇ, ಪುಸ್ತಕಗಳಿಗೆ ಹೆಸರು ಕೊಡುವಲ್ಲೂ ಬಳಕೆಯಲ್ಲಿರುವ ಪದಗಳಿಗಿಂತ ಬಳಕೆಯಲ್ಲಿಲ್ಲದ ಮತ್ತು ಹೆಚ್ಚು ಮಂದಿಗೆ ತಿಳಿಯದ ಪದಗಳೇ ಚಂದವೆಂದು ಹಲವು ಬರಹಗಾರರಿಗೆ ಅನಿಸುತ್ತದೆ. ಮನೆಗಳಿಗೆ, ಅಂಗಡಿಗಳಿಗೆ, ಕೂಟಗಳಿಗೆ, ಇಲ್ಲವೇ ಹಲವು ಬಗೆಯ ಹಮ್ಮುಗೆಗಳಿಗೆ ಹೆಸರು ಕೊಡಬೇಕಾಗಿರುವಲ್ಲೂ ನಮ್ಮ ಒಡಲಿನಿಂದ ನೇರವಾಗಿ ಬರುವ ಪದಗಳು ತಕ್ಕವೆಂದು ತೋರುವುದೇ ಇಲ್ಲ; ದೂರದರ‍್ಶನ, ದಿನಪತ್ರಿಕೆ, ಉಚ್ಚಶಿಕ್ಶಣ, ನಿರುದ್ಯೋಗ ಸಮಸ್ಯೆ, ಜನಗಣನೆ, ಲೋಕಾಯುಕ್ತ, ಪಟ್ಯಪುಸ್ತಕ ಮೊದಲಾದ ಹಲವು ಬಗೆಯ ಪದಗಳನ್ನು ಉಂಟುಮಾಡುವಲ್ಲಿ ಕೂಡ ಇದೇ ಸೋಜಿಗವನ್ನು ಕಾಣಬಹುದು.

ಇಂತಹ ಹಲವಾರು ‘ಮೇಲ್ಮಟ್ಟದ’ ಸನ್ನಿವೇಶಗಳಲ್ಲಿ ನಮ್ಮ ನಾಲಿಗೆಗಳಿಗೆ ತಂತಾನೇ ಬರುವ ಪದಗಳು – ಎಂದರೆ ಕನ್ನಡದವೇ ಆದ ಪದಗಳು – ಬಳಕೆಗೆ ತಕ್ಕವಲ್ಲ, ಮೇಲೆ ಕಾಣಿಸಿದಂತೆ ಸಂಸ್ಕ್ರುತದಿಂದ ಎರವಲು ಪಡೆದ ಪದಗಳೇ ತಕ್ಕವು ಎಂಬ ಕೀಳರಿಮೆ ನಮ್ಮಲ್ಲಿ ಹೆಚ್ಚಿನವರಲ್ಲಿದೆ. ಇದೊಂದು ಸೋಜಿಗವಲ್ಲದೆ ಮತ್ತೇನು?

ಹಿಂದಿನ ಕಾಲದಲ್ಲಿ ಕನ್ನಡ ನುಡಿ ಸಂಸ್ಕ್ರುತದ ಕಳೆಗೆಟ್ಟ ರೂಪ ಎಂಬ ಅನಿಸಿಕೆ ಹಲವು ಕನ್ನಡ ಪಂಡಿತರಲ್ಲಿತ್ತು; ಕನ್ನಡ ಪದಗಳಿಗಿಂತ ಸಂಸ್ಕ್ರುತ ಪದಗಳು ಮೇಲ್ಮಟ್ಟದವು ಎಂಬುದಾಗಿ ಅವರು ತಿಳಿಯುತ್ತಿದ್ದುದಕ್ಕೆ ಈ ತಪ್ಪು ಅನಿಸಿಕೆ ಕಾರಣವಾಗಿತ್ತು; ಆದರೆ, ನಿಜಕ್ಕೂ ಕನ್ನಡ ಸಂಸ್ಕ್ರುತದ ಕಳೆಗೆಟ್ಟ ರೂಪ ಅಲ್ಲ, ಅದಕ್ಕಿಂತ ತೀರ ಬೇರಾಗಿರುವ ಒಂದು ಸ್ವತಂತ್ರವಾದ ನುಡಿ ಎಂಬುದನ್ನು ಇವತ್ತು ನಾವು ಕಂಡುಕೊಂಡಿದ್ದೇವೆ. ಹಾಗಾಗಿ, ಇವತ್ತಿಗೂ ಸಂಸ್ಕ್ರುತ ಪದಗಳು ಕನ್ನಡ ಪದಗಳಿಂದ ಮೇಲ್ಮಟ್ಟದವು ಎಂದು ಬಾವಿಸುವುದಕ್ಕೆ ಯಾವ ಆದಾರವೂ ಇಲ್ಲ.

ಈ ರೀತಿ ಹೊಸಪದಗಳನ್ನು ಉಂಟುಮಾಡಬೇಕಾಗಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸದಿರುವುದಕ್ಕೆ ಅವುಗಳ ಕುರಿತಾಗಿ ಕೀಳರಿಮೆ ಇರುವುದು ಒಂದು ಕಾರಣವಾದರೆ, ತಮಗೆ ಬೇಕಾಗಿರುವ ಹೊಸ ಪದಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿಲ್ಲ ಎಂಬ ತಪ್ಪು ಕಲ್ಪನೆ ಇನ್ನೊಂದು ಕಾರಣ. ಸಂಸ್ಕ್ರುತದಲ್ಲಿರುವಶ್ಟು ಒಟ್ಟು(ಪ್ರತ್ಯಯ)ಗಳು ಮತ್ತು ಪದಗಳು ಕನ್ನಡದಲ್ಲಿಲ್ಲ; ಹಾಗಾಗಿ, ಹಲವು ಬಗೆಯ ಪದಗಳನ್ನು ಹೊಸದಾಗಿ ಉಂಟುಮಾಡುವಲ್ಲಿ ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬ ಅನಿಸಿಕೆ ಹಲವರಲ್ಲಿದೆ.

ಆದರೆ, ಇದು ತಪ್ಪು ಅನಿಸಿಕೆ. ಎಂತಹ ವಿಶಯವನ್ನು ಬೇಕಿದ್ದರೂ ತಿಳಿಸಲು ಬೇಕಾಗುವಂತಹ ಪದಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿದೆ. ಎಲ್ಲಾ ಸ್ವಾಬಾವಿಕವಾಗಿ ಬೆಳೆದುಬಂದ ನುಡಿಗಳಿಗೂ ಇಂತಹ ಅಳವು ಇರುತ್ತದೆ. ಕನ್ನಡದ ಈ ಅಳವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡು, ಅದನ್ನು ಬಳಸಿ, ಕನ್ನಡಕ್ಕೆ ಬೇಕಾಗಿರುವ ಹೊಸ ಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಅಂತಹ ಹೊಸ ಪದಗಳಿರುವ ಬರವಣಿಗೆಯನ್ನು ಹೆಚ್ಚು ಹೆಚ್ಚು ಕನ್ನಡಿಗರು ಸುಲಬವಾಗಿ ಓದಿ ತಿಳಿದುಕೊಳ್ಳಬಲ್ಲರು, ಮತ್ತು ಬರವಣಿಗೆಯ ಮೂಲಕ ನಡೆಯುವ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೂ ಬಲ್ಲರು. ಬರವಣಿಗೆಯ ಗುರಿಯೇ ಇದಲ್ಲವೆ?

ಎಲ್ಲಾ ನುಡಿಗಳಿಗೂ ಅವುಗಳದೇ ಆದ ಪದಗಳ ಸೊಗಡು ಎಂಬುದಿರುತ್ತದೆ; ಕನ್ನಡ ಪದಗಳ ಸೊಗಡು ಸಂಸ್ಕ್ರುತ ಪದಗಳ ಸೊಗಡಿಗಿಂತ ತೀರ ಬೇರಾಗಿದೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸಿದಂತೆಲ್ಲ, ಅದರ ಪದಗಳ ಸೊಗಡು ಮರೆಯಾಗುತ್ತಾ ಹೋಗುತ್ತದೆ, ಮತ್ತು ಅದನ್ನು ಓದಿ ತಿಳಿಯುವ ಕೆಲಸ ಕನ್ನಡಿಗರಿಗೆ ಹೆಚ್ಚು ಹೆಚ್ಚು ತೊಡಕಿನದಾಗುತ್ತಾ ಹೋಗುತ್ತದೆ.

ಹಾಗಾಗಿ, ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಎರವಲು ಪದಗಳನ್ನು ಬಳಸಹೋಗದೆ, ಅದರ ಪದಗಳ ಸೊಗಡನ್ನು ಉಳಿಸಿಕೊಳ್ಳಬೇಕು ಎನ್ನುವುದು ಬರಿಯ ಅಬಿಮಾನದ ಪ್ರಶ್ನೆ ಮಾತ್ರ ಅಲ್ಲ; ಕನ್ನಡ ಬರಹ ಎಲ್ಲಾ ಕನ್ನಡಿಗರನ್ನೂ ತಲಪಬೇಕು ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಬರಬೇಕೆಂಬ ಮುಕ್ಯವಾದ ಗುರಿಯನ್ನು ಮುಟ್ಟುವ ಪ್ರಶ್ನೆಯೂ ಹೌದು.

ಇತ್ತೀಚೆಗೆ ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವವರು ಈ ವಿಶಯವನ್ನು ಪೂರ‍್ತಿ ಮರೆತಿರುವಂತೆ ಕಾಣುತ್ತದೆ. ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಕಾಣಿಸದೆ ಹೋಗುತ್ತಿವೆ. ಅವರು ಉಂಟುಮಾಡಿರುವ ಪದಕೋಶಗಳಲ್ಲಿ ನೂರಕ್ಕೆ ತೊಂಬತ್ತರಶ್ಟು ಸಂಸ್ಕ್ರುತದಿಂದ ಎರವಲು ಪಡೆದ, ಇಲ್ಲವೇ ಸಂಸ್ಕ್ರುತದಲ್ಲಿ ಹೊಸದಾಗಿ ಉಂಟುಮಾಡಿ ಕನ್ನಡಕ್ಕೆ ಎರವಲು ತಂದ ಪದಗಳೇ ಕಾಣಿಸಿಕೊಳ್ಳುತ್ತವೆ; ಇಂತಹ ಪದಕೋಶಗಳನ್ನು ಕನ್ನಡ ಪದಕೋಶಗಳೆಂದು ಕರೆಯುತ್ತಿರುವುದು ನಿಜಕ್ಕೂ ಅಚ್ಚರಿಯ ವಿಶಯವಾಗಿದೆ!

ಇಂಗ್ಲಿಶ್‌ನಲ್ಲಿರುವ ಹಲವು ಅರಿಮೆಯ ಪದಗಳು ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿ ಕಾಣಿಸಿಕೊಳ್ಳುತ್ತವೆ, ಮತ್ತು ಅವನ್ನು ಓದಿ ತಿಳಿದುಕೊಳ್ಳುವ ಕೆಲಸ ಕನ್ನಡಿಗರಿಗೆ ತುಂಬಾ ತೊಡಕಿನದಾಗುತ್ತದೆ. ಹಾಗಾಗಿ, ನಾವು ಅವುಗಳ ಬದಲು ಬೇರೆ ಕನ್ನಡದವೇ ಆದ ಅರಿಮೆಯ ಪದಗಳನ್ನು ಉಂಟುಮಾಡಲು ಹೋಗುತ್ತೇವೆ.

ಆದರೆ, ಹಾಗೆ ಪದಗಳನ್ನು ಉಂಟುಮಾಡಬೇಕಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತ ಪದಗಳನ್ನು ಬಳಸಿದೆವಾದರೆ, ನಮ್ಮವೇ ಆದ ಪದಗಳನ್ನು ಉಂಟುಮಾಡುವುದರ ಹಿಂದಿರುವ ಮುಕ್ಯವಾದ ಗುರಿಯನ್ನು ನಾವು ತಲಪುವುದೇ ಇಲ್ಲ. ಯಾಕೆಂದರೆ, ಇಂಗ್ಲಿಶ್ ಎರವಲುಗಳ ಹಾಗೆ ಹಲವು ಸಂಸ್ಕ್ರುತ ಎರವಲುಗಳೂ ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಮತ್ತು ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿಯೇ ಉಳಿಯುತ್ತವೆ. ಅವನ್ನು ಓದಿ, ಅವು ತಿಳಿಸುವ ವಿಶಯಗಳನ್ನು ತಿಳಿದುಕೊಳ್ಳುವ ಕೆಲಸವೂ ತುಂಬಾ ತೊಡಕಿನದಾಗಿಯೇ ಉಳಿಯುತ್ತದೆ.

ಸಂಸ್ಕ್ರುತ ಪದಗಳನ್ನು ಬಳಸಿ ಪಳಗಿರುವ ಕನ್ನಡ ಬರಹಗಾರರಿಗೆ ಮತ್ತು ಓದುಗರಿಗೆ ತುಂಬಾ ಸಂಸ್ಕ್ರುತ ಪದಗಳನ್ನು ಬಳಸಿರುವ ಬರಹಗಳೂ ಅಶ್ಟೊಂದು ತೊಡಕಿನವೆಂದು ಅನಿಸದಿರಬಹುದು. ಇದಕ್ಕೆ ಕಾರಣವೇನೆಂದರೆ, ಅವರು ಕನ್ನಡ ಪದಗಳ ಸೊಗಡನ್ನು ಮಾತ್ರವಲ್ಲದೆ ಸಂಸ್ಕ್ರುತ ಪದಗಳ ಸೊಗಡನ್ನೂ ತಮ್ಮದಾಗಿಸಿಕೊಂಡಿರುತ್ತಾರೆ.

ಆದರೆ, ಹೆಚ್ಚಿನ ಕನ್ನಡಿಗರಿಗೂ ಅಂತಹ ಬರಹಗಳು ತೊಡಕಿನವಾಗಿ ಕಾಣಿಸುತ್ತವೆ; ಅವರ ಆಡುನುಡಿಗಳಲ್ಲಿ ತುಂಬಾ ಕಡಿಮೆ ಸಂಸ್ಕ್ರುತ ಎರವಲುಗಳು ಬಳಕೆಯಾಗುತ್ತಿರುವುದು, ಮತ್ತು ಹಾಗೆ ಬಳಕೆಯಾಗುತ್ತಿರುವವೂ ಕನ್ನಡ ಪದಗಳ ಸೊಗಡಿಗೆ ಹೊಂದಿಕೆಯಾಗುವಂತೆ ಮಾರ‍್ಪಟ್ಟಿರುವುದು ಇದಕ್ಕೆ ಕಾರಣ.

ಹಾಗಾಗಿ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲಪಬೇಕಿದ್ದಲ್ಲಿ, ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಹೊಮ್ಮಬೇಕಿದ್ದಲ್ಲಿ, ಅವುಗಳಲ್ಲಿ ಬಳಕೆಯಾಗುವ ಎರವಲು ಪದಗಳನ್ನು, ಅವು ಸಂಸ್ಕ್ರುತದವಿರಲಿ ಇಲ್ಲವೇ ಇಂಗ್ಲಿಶಿನವಿರಲಿ, ಆದಶ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು, ಮತ್ತು ಬಳಸಲೇಬೇಕೆಂದಿರುವವು ಕನ್ನಡದ ಸೊಗಡನ್ನು ಕೆಡಿಸದಂತೆ ಅವುಗಳಲ್ಲಿ ಮಾರ‍್ಪಾಡುಗಳನ್ನು ಮಾಡಿಕೊಳ್ಳಬೇಕು.

ಎಲ್ಲಾ ಮಟ್ಟದ ಬಳಕೆಗಳಿಗೂ ಕನ್ನಡ ಪದಗಳು ತಕ್ಕುದಾದುವು ಎಂಬುದನ್ನು ಕನ್ನಡದ ಬರಹಗಾರರು ಮತ್ತು ಕನ್ನಡದಲ್ಲಿ ಹೊಸ ಪದಗಳನ್ನು ಉಂಟುಮಾಡುವವರು ಮನಗಾಣಬೇಕು, ಮತ್ತು ಮೇಲ್ಮಟ್ಟದ ಬಳಕೆಗಳಿಗೆ ಕನ್ನಡದವೇ ಆದ ಪದಗಳನ್ನು ಬಳಸುವುದು ಹೆಮ್ಮೆಯ ವಿಶಯವಶ್ಟೇ ಅಲ್ಲ, ಬರವಣಿಗೆಯ ಮುಕ್ಯ ಗುರಿಯನ್ನು ಮುಟ್ಟುವ ಬಗೆಯೂ ಹೌದೆಂಬ ಅನಿಸಿಕೆ ಅವರಲ್ಲಿ ಬೆಳೆದುಬರಬೇಕು.

 (ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 1

ನುಡಿಯರಿಮೆಯ ಇಣುಕುನೋಟ – 3 >>

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 13/08/2013

    […] >> ನುಡಿಯರಿಮೆಯ ಇಣುಕುನೋಟ – 2 […]

  2. 14/08/2013

    […] << ನುಡಿಯರಿಮೆಯ ಇಣುಕುನೋಟ – 2 […]

ಅನಿಸಿಕೆ ಬರೆಯಿರಿ: