ಗೊಂದಲನ ಸೋಂಕು

ಶ್ರೀನಿವಾಸಮೂರ‍್ತಿ ಬಿ.ಜಿ.

nyaya_anayaya

ಗೊಂದಲ ಹುಟ್ಟಿದ ಬಳಿಕ ತಂದೆ ತಾಯಿಗಳೊಡನೆ ತನ್ನ ಅಮ್ಮನ ಮನೆಯಿಂದ ತಂದೆಯ ಮನೆಗೆ ಬರುವಾಗ ದೋಣಿಯ ಮೂಲಕ ಬರಬೇಕಾಗಿತ್ತು. ಅಂತೆಯೇ ಆ ದಿನ ಈ ಮೂವರು ಇತರೆ ಜನರೊಡನೆ ದೋಣಿ ಮೂಲಕ ಬರುವಾಗ ಪ್ರವಾಹದಲ್ಲಿ ಕೊಚ್ಚಿ ಹೋದರು. ಗೊಂದಲ ತಂದೆ-ತಾಯಿಗಳಿಲ್ಲದ ಮಗುವಾದ. ತಂದೆ ತಾಯಿ ಸತ್ತರೆಂದು ಬಾವಿಸದಿರಿ. ದೋಣಿ ನೀರಿನಲ್ಲಿ ಮುಳುಗಿದಾಗ ತಾತ್ಕಾಲಿಕವಾಗಿ ಮೂವರೂ ಎರಡು ದಿಕ್ಕಾದರು. ಈ ಗೊಂದಲನ ಸ್ವಬಾವವೇ ಬೇರೆಯವರನ್ನು ಗೊಂದಲಕ್ಕೆ ಈಡು ಮಾಡುವುದು. ಆದಿನ ಅಂಬಿಗನನ್ನೂ ಸಹ ಗೊಂದಲಕ್ಕೆ ಈಡು ಮಾಡಿ ತಪ್ಪಿಸಬಹುದಾಗಿದ್ದ ಅವಗಡವನ್ನು ಆಗಿಸಿದ. ಗೊಂದಲನ ಹಾಲು ಮತ್ತು ಬಾಳು ಈಗ ಸರ‍್ಕಾರದ ಶಿಶು ಪಾಲನಾ ಕೇಂದ್ರದ ಹೆಗಲಿಗೆ ಬಿತ್ತು. ಶಿಶು ಪಾಲನಾ ಕೇಂದ್ರದವರೂ ತಮ್ಮ ಅದೀನಕ್ಕೆ ಗೊಂದಲನನ್ನು ಪಡೆಯುವುದಕ್ಕೂ ಮುನ್ನ ಯಾರಾದರೂ ಗೊಂದಲನನ್ನು ಸಾಕಲು ಬಂದರೆ ಅವರಿಗೆ ಸಂಪೂರ‍್ಣ ಆರ‍್ತಿಕ ನೆರವನ್ನೂ ಹಾಗೂ ಉದ್ಯೋಗವನ್ನೂ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದರು. ಇಶ್ಟೆಲ್ಲಾ ಪ್ರಯತ್ನ ಕಯ್ಗೂಡದಕ್ಕಾಗಿ ಶಿಶು ಪಾಲನ ಕೇಂದ್ರದವರೇ ಗೊಂದಲನ ಆಸರೆಗೆಂದು ನಿಲ್ಲಬೇಕಾಯಿತು. ಅಂತೂ ಗೊಂದಲನು ಪ್ರಾತಮಿಕ ಶಿಕ್ಶಣದಿಂದ ಪದವಿಯ ತನಕದ ಶಿಕ್ಶಣವನ್ನು ಸರ‍್ಕಾರದ ನೆರವಿನಿಂದ ಸರ‍್ಕಾರಿ ಶಾಲಾ-ಕಾಲೇಜಿನಲ್ಲಿಯೇ ಮುಗಿಸಿದ.

ಎಲ್ಲಾ ಹಂತದ ಶಿಕ್ಶಣದ ಪರೀಕ್ಶೆಗಳಲ್ಲಿ ನೀಡಲಾದ ಪ್ರಶ್ನೆಗಳಿಗೆ ಕೆಲವು ಸಾಲುಗಳಲ್ಲಿ ಉತ್ತರವನ್ನು ಚೆನ್ನಾಗಿ ಬರೆದು ಉಳಿದ ಸಾಲುಗಳಲ್ಲಿ ಬೇಕಾಬಿಟ್ಟಿ ಗೀಚೀಗೀಚೀ ಮವ್ಲ್ಯಮಾಪಕರನ್ನೇ ಗೊಂದಲಕ್ಕೆ ಈಡು ಮಾಡಿ ಅಂತೂ ತೇರ‍್ಗಡೆಯಾಗಿದ್ದ ಗೊಂದಲನು ಈಗ ಕೆಲಸಕ್ಕೆ ಗಾಳ ಹಾಕಿದ. ಕೆಲಸವೆಂದರೆ ಕೆಲಸ ಅಮ್ರುತವನ್ನು ಅಮ್ರುತದೊಡನೆ ಕಲಸಿ ತಿನ್ನುವಶ್ಟು ಸಂಬಳ ಸಿಗುವ ಕೆಲಸ ಅವನಿಗೆ ಬೇಕಾಗಿತ್ತು! ಗೊಂದಲ ಯೋಚಿಸಿದ ನ್ಯಾಯದ ಮಾರ‍್ಗವನ್ನು ತುಳಿಯಲೇ ಅತವಾ ಅವನ ವಿರೋದಿಯ ಪತ ಒಳ್ಳೆಯದೆ ಎಂದು. ಏನೂ ತಿಳಿಯದೆ ಗಾಳಿಯ ಗಾಲಿಯಲ್ಲವೆ ನಾನು? ಗಾಳಿ ಬೀಸಿದಂತೆ ತಿರುಗುವುದೇ ಸರಿ ಎಂದು ಬಾವಿಸಿದನು. ಆಗಶ್ಟೆ ರಾಜ್ಯದ ಪ್ರತಮ ಶ್ರೇಣಿಯ ಹುದ್ದೆಗಳಿಗೆ ಅರ‍್ಜಿಯನ್ನು ಹಾಕುವ ಅವಕಾಶವೂ ಇದ್ದುದ್ದರ ಜೊತೆಗೆ ಬಹು ಚರ‍್ಚಿತ ವಿಶಯವೂ ಆಗಿದ್ದರಿಂದ ಓಹ್! ನಾನೂ ಯಾವುದಾದರೊಂದು ಇಲಾಕೆಯ ಪ್ರತಮ ಶ್ರೇಣಿಯ ಹುದ್ದೆಗೆ ಸೇರಲೇ ಬೇಕೆಂದು ತಾನೂ ಸಹ ಅರ‍್ಜಿಯನ್ನು ಹಾಕಿಯೇ ಬಿಟ್ಟ. ಪ್ರತಮ ಶ್ರೇಣಿಯ ಹುದ್ದೆಗಳಿಗೆ ಸಂಬಂದಿಸಿದಂತೆ ಎಲ್ಲಾ ಹಂತಗಳ ಪರೀಕ್ಶೆಗಳಲ್ಲಿಯೂ ಈ ಹಿಂದಿನ ಶಾಲಾ-ಕಾಲೇಜುಗಳ ಪರೀಕ್ಶೆಗಳಲ್ಲಿ ಉತ್ತರಗಳನ್ನು ಬರೆಯಲು ಅನುಸರಿಸುತ್ತಿದ್ದ ವಿದಾನವನ್ನೇ ಅನುಸರಿಸಿ ಅಂತೂ ಇಲ್ಲಿಯೂ ತೇರ‍್ಗಡೆಯಾದ! ಸದರಿ ಪರಿಕ್ಶೆಗಳನ್ನು ನಡೆಸುತ್ತಿದ್ದ ಆಯೋಗವು ಪರೀಕ್ಶೆಗಳಲ್ಲಿ ನೀಡಲಾದ ಪ್ರಶ್ನೆಗಳಿಗೆ ಎರಡೆರಡು ಸಲ key answer ಗಳನ್ನು ಅಂತರ್‍ಜಾಲದ ಮೂಲಕ ಹಾಕುತ್ತಿದ್ದದ್ದು ಗೊಂದಲನ ಹಾಗೂ ಸೋಂಬೇರಿ ಎಂಬಾತನ ಪ್ರಬಾವದಿಂದಲೆ!

ಸಂದರ್‍ಶನದಲ್ಲೂ ಅವರಿವರಿಂದ ರಾಜಕೀಯ ಮತ್ತು ಹಣದ ಸಹಾಯ ಪಡೆದು ಸ್ವಲ್ಪ ಬುದ್ದಿ ಬಳಸಿ ಗೆದ್ದ ಗೊಂದಲನಿಗೆ ಈಗ ಎಲ್ಲಿಲ್ಲದ ಸಂತೋಶ! ಆದರೆ, ಕೆಲವರು ತಮಗೆ ಪರೀಕ್ಶೆಯಲ್ಲಿ ಮತ್ತು ಸಂದರ್‍ಶನದಲ್ಲಿ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ಪಲ ಹಗರಣಗಳು ಹೊರಬರಲು ಸಾದ್ಯವಾಯಿತು. ಗೊಂದಲನ ಉತ್ತರ ಪತ್ರಿಕೆಗಳೂ ಸಹ ತನಿಕೆಗೆ ಒಳಪಡುವ ಸಾದ್ಯತೆ ಇದ್ದರಿಂದ ಗೊಂದಲ ಕೊಂಚ ಬುದ್ದಿ ಬಳಸಿ ತನ್ನ ಉತ್ತರ ಪತ್ರಿಕೆಗಳನ್ನು ಹೇಗೋ ಬೇರೆಯವರ ನೆರವಿನಿಂದ ಸರಿಪಡಿಸಿದ. ತನಿಕೆಯಲ್ಲಿ ಈತನೂ ಸಹ ತಪ್ಪು ಮಾಡಿರುವುದು ಬೆಳಕಿಗೆ ಬಂದಿತು. ಆದರೆ ಪ್ರಬಾವ ಬಳಸಿ ಸರ್‍ಕಾರದ ಒಂದು ಇಲಾಕೆಯ ಕಾರ್‍ಯದರ್‍ಶಿಯಾದ.

ಈತ ಒತ್ತಡ ಮತ್ತು ವಂಚನೆ ಈ ಈರ್‍ವರ ನೆರವಿನಿಂದ ಸಿದ್ದಪಡಿಸುತ್ತಿದ್ದ ಕಡತಗಳೂ ಮತ್ತು ಪತ್ರಗಳೂ ಯಾರಿಗೂ ಅರ್‍ತವಾಗದಾಗ ಸರ್‍ಕಾರವೇ ಈತನನ್ನು ಮಾತ್ರ ಹುದ್ದೆಯಿಂದ ಕೇವಲ ಅಯ್ದೇ ವರ್‍ಶಗಳಲ್ಲಿ ತೆಗೆದು ಹಾಕಿತು. ಗೊಂದಲ ಹುದ್ದೆಯಲ್ಲಿ ಮುಂದುವರಿಯಲು ಯಾವ ಪ್ರಯತ್ನವನ್ನು ಮಾಡಲು ಸಾದ್ಯವಾಗಲಿಲ್ಲ. ಇದಕ್ಕೆ ಕಾರಣ ರಾಜಕೀಯದ ಪ್ರಬಾವ ಗೊಂದಲನಿಗಿಲ್ಲದೇ ಇದ್ದದ್ದು.

ತಾನು ಸುಮ್ಮನಿರಲು ಸಾದ್ಯವಿಲ್ಲ. ಈ ಮುಂಚೆಯೋ ಹೊಟ್ಟೆಗೆ ಮತ್ತು ಬಟ್ಟೆಗೆ ಸರ್‍ಕಾರವೇ ನೆರವಾಗುತ್ತಿತ್ತು. ಕಾಸಗಿ ಕ್ಶೇತ್ರಕ್ಕೆ ಹೋಗಿಬಿಟ್ಟರೆ ಉತ್ತಮ ಎಂದುಕೊಂಡವನೆ ಒಳ್ಳೆಯ ಕಂಪನಿಯಲ್ಲಿ ನವ್ಕರನಾದ. ಇಲ್ಲಿಯೂ ಗೊಂದಲನು ತನ್ನ ಹಿಂದಿನ ಸ್ನೇಹಿತರನ್ನು ಬೇಟಿ ಮಾಡಬೇಕಾಯಿತು. ಇವರಿಬ್ಬರೂ ತಮ್ಮ ಸ್ತಾನಕ್ಕೆ ಬೇರೆ ಪಕ್ಶದ ಬೆಂಬಲವುಳ್ಳ ತಮ್ಮಂತಿರುವ ಬೇರೆಯವರು ಬಂದಿದ್ದಾರೆಂದು ಗೊಂದಲನಿಗೆ ಹೇಳಿದರು. ‘ಹಾಗಾದರೆ, ನಾನಿದ್ದ ಸ್ತಾನಕ್ಕೆ’-ಗೊಂದಲನು ಎಂದಾಗ ಒತ್ತಡನು ‘ಅವನೂ ನಿನ್ನಂತೆಯೇ ಇದ್ದಾನೆ’ -ಎಂದು ಮೂವರು ಕುಶಲೋಪರಿಗಳನ್ನು ವಿನಿಮಯಿಸಿಕೊಂಡು ತಮ್ಮ ತಮ್ಮ ಕಾರ್‍ಯಗಳಲ್ಲಿ ತೊಡಗಿದರು.

ಕಂಪನಿಯವರಿಗೆ ತಡವಾಗಿ ಗೊಂದಲನ ಕಾರ್‍ಯಗಳು ಕಂಪನಿಯ ಅಸ್ತಿತ್ವಕ್ಕೆ ದಕ್ಕೆಯಾಗುತ್ತಿದ್ದನ್ನು ತಿಳಿದು ಗೊಂದಲನನ್ನು ಹೊರಹಾಕಲು ಕೆಲವು ಪ್ರಯತ್ನವನ್ನು ಮಾಡಿದರು. ಈ ಕಂಪನಿಯ ಪಲವಾಗಿ ಎಚ್ಚರನ ಬಟ್ಟೆಯನ್ನು ದರಿಸಿದರೆ ಗೊಂದಲನ ಕಾಟದಿಂದ ತಪ್ಪಿಸಿಕೊಳ್ಳಬಹುದೆಂದು ಸಂಶೋದನೆಯ ಮೂಲಕ ಎಲ್ಲರಿಗೂ ತಿಳಿಯಿತು. ಕಂಪನಿಯವರು ಈ ಎಚ್ಚರನ ಬಟ್ಟೆಯನ್ನು ದರಿಸಿಯೇ ಗೊಂದಲನನ್ನು ಮತ್ತು ಅವನ ಸ್ನೇಹಿತರಿಬ್ಬರನ್ನು ಹೊರಹಾಕಿದರು. ಕಂಪನಿಯಿಂದ ಹೊರಬಿದ್ದ ತಕ್ಶಣ ಗೊಂದಲ ತನ್ನ ಇಬ್ಬರ ಸ್ನೇಹಿತರನ್ನು ಬಿಟ್ಟು ಬಿಕ್ಶೆ ಬೇಡಿ ಜೀವನವನ್ನು ಸಾಗಿಸ ತೊಡಗಿದ.

ಒಂದು ದಿನ ಗೊಂದಲನಿಗೆ ಬಿಕ್ಶೆ ಬೇಡಿದರೂ ಏನೂ ದಕ್ಕಲೇ ಇಲ್ಲ. ಆಗ ಕಳುವು ಮಾಡಿಯಾದರೂ ಬದುಕಲೇಬೇಕು ಎಂದು ಕಳ್ಳತನಕ್ಕೆ ಇಳಿದ. ಪೋಲಿಸರಿಗೂ ಹಿಡಿಯಲು ಅಸಾದ್ಯವಾಗುತ್ತಿತ್ತು. ಪೋಲಿಸರು ಎಚ್ಚರ ಹಾಗೂ ಪ್ರಜ್ನೆ ಎಂಬಿಬ್ಬರ ಸಹಾಯದಿಂದ ಗೊಂದಲನನ್ನು ಬಂದಿಸಿದರು. ಗೊಂದಲ ಕೆಲವು ವರ್‍ಶಗಳ ಕಾಲ ಶಿಕ್ಶೆಯನ್ನು ಅನುಬವಿಸಿ ಜಯ್ಲಿನಿಂದ ಹೊರಬಂದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಕೆಟ್ಟ ಮತ್ತು ಒಳ್ಳೆಯ ಅಂಶಗಳುಳ್ಳ ಎಲ್ಲಾ ರೀತಿಯ ಕ್ಶೇತ್ರಗಳಲ್ಲೂ ತನ್ನಂತಿರುವವರು ಇದ್ದಾರೆಂದೂ, ಇಲ್ಲಿ ತನ್ನ ತಾಯಿ-ತಂದೆ ಸಿಗಲಾರರೆಂದು ಮನವರಿಕೆ ಮಾಡಿಕೊಂಡು ಎಲ್ಲಾ ಕ್ಶೇತ್ರಗಳಿಗಿಂತ ಉತ್ತಮವಾದ ಮತ್ತು ಎಲ್ಲರಿಗೂ ಅಹಾರವನ್ನು ಒದಗಿಸುವ ಕ್ಶೇತ್ರವಾದ ಬೇಸಾಯ ಕ್ಶೇತ್ರಕ್ಕೆ ಹೋಗಿ ಬೇಸಾಯ ಮಾಡಿದರೆ ತನ್ನ ತಂದೆ-ತಾಯಿಯನ್ನು ಕಾಣಲು ಸಾದ್ಯವಾಗಬಹುದೆಂದು ಯಾವುದೋ ಹಳ್ಳಿಗೆ ತೆರಳಿ ಅಲ್ಲಿಯೇ ಬೇಸಾಯ ಮಾಡುವುದನ್ನು ಕಲಿತು ಕ್ರುಶಿಕನಾದ. ಈಗ ಗೊಂದಲನ ಆಟಾಟೋಪಗಳು ಕಡಿಮೆಯಾಗಿದ್ದವು. ಇದರ ಜೊತೆಗೆ ತನ್ನ ತಾಯಿ-ತಂದೆ ಸಿಗುವ ಸುಳಿವೂ ಸಹ ಮನಸ್ಸಿನಲ್ಲಿ ಆಗಾಗ ಮೂಡುತ್ತಿತ್ತು.

ಒಂದು ಸಂಜೆ ಗೊಂದಲನು ಉಳುಮೆ ಮಾಡಿ ತೋಟದಿಂದ ಮನೆಗೆ ಬಂದವನೆ ನೇಗಿಲನ್ನು ಮೂಲೆಯಲ್ಲಿಟ್ಟು ನೆಲದ ಮೇಲೆ ಕಣ್ಣೀರನ್ನು ಸುರಿಸುತ್ತಾ ಮಲಗಿ ತನ್ನ ತಂದೆ-ತಾಯಿ ಮತ್ತು ಈ ಹಿಂದಿನ ತನ್ನ ಕಾರ್‍ಯಗಳೆಲ್ಲವನ್ನು ನೆನೆದು ನೆನೆದೂ ತನ್ನ ಕಣ್ಣೀರಿನಿಂದಲೇ ಒದ್ದೆಯಾದ. ಈ ಹೊತ್ತಿಗೆ ಸಮಾದಾನನು ಗೊಂದಲನ ಮನೆಗೆ ಬಂದು ಪ್ರಜ್ನನ ತಪಸ್ಸನ್ನು ಮಾಡುವಂತೆ ತನಗೆ ತೋಚಿದ ಪರಿಹಾರಗಳನ್ನು ಹೇಳಿ ಹೋಗಿದ್ದ. ಸಮದಾನನ ಮಾತನ್ನು ಕೇಳಿ ಗೊಂದಲನು ತುಸು ನಿರಾಳನಾಗಿಯೇ ಬಾಗಿಲನ್ನು ಹಾಕಿಕೊಂಡು ಊಟವನ್ನು ಮಾಡದೆಯೇ ‘ನ್ಯಾಯದ ಪತನೋ?, ಅನ್ಯಾಯದ ಪತನೋ? ಮತ್ತು ಒಳ್ಳೆಯ ಪತ ಯಾವುದೋ?’ ಎಂದು ಯೋಚನೆಗಳನ್ನು ಮನಸ್ಸಿಗೆ ಹತ್ತಿಸಿಕೊಂಡು ಮಲಗಿ ನಿದ್ದೆಗೆ ಜಾರಿದ.

ಅನ್ಯಾಯನು ರಬಸದಲ್ಲಿ ಬಂದು ಬಾಗಿಲನ್ನು ಬಡಿದು ಗೊಂದಲನನ್ನು ನಿದ್ದೆಯಿಂದ ಎಬ್ಬಿಸಿ ‘ನೀನು ನನ್ನ ಪತದಲ್ಲಿ ನಡೆಯುವುದೇ ಉತ್ತಮ. ಈ ಜಗತ್ತಿನಲ್ಲಿ ನನ್ನ ಅನುಯಾಯಿಗಳೇ ಬಹು ಸಂಕ್ಯಾತರಿದ್ದಾರೆ. ನಿನಗೆ ಅಗತ್ಯವಾದಾಗ ಅವರು ನಿನ್ನ ನೆರವಿಗೆ ಬರುತ್ತಾರೆ’-ಎಂದು ತನ್ನ ತೆಕ್ಕೆಯಲ್ಲಿ ಗೊಂದಲನನ್ನು ಬಂದಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಸವ್ಮ್ಯವಾಗಿ ಗೊಂದಲನ ಮನೆಯೊಳಗೆ ಬಂದು ನ್ಯಾಯನು ಅನ್ಯಾಯನಿಗೆ ಕಯ್ಮುಗಿದು ‘ದಯವಿಟ್ಟು ಬಿಡಿ. ಅವರ ಪಾಡಿಗೆ ಇರಲು ಬಿಡಿ.’-ಎನ್ನುತ್ತಲೇ ಗೊಂದಲನಿಗೆ ‘ದಯವಿಟ್ಟು ಅನ್ಯಾಯನನ್ನು ನಂಬಬೇಡಿ ನೀವು ನೀವಾಗಿ ಯಾರಿಗೂ ತೊಂದರೆಯನ್ನು ನೀಡದೆ ಬದುಕಬೇಕೆಂದರೆ ನನ್ನ ಪತಕ್ಕೆ ಬನ್ನಿ. ಇಲ್ಲಿ ಎಲ್ಲರಿಗೂ ಗವ್ರವವಿರುತ್ತದೆ. ಎಲ್ಲರ ನಡುವೆಯೂ ಹೊಂದಾಣಿಕೆ ಇರುತ್ತದೆ. ಈ ಅನ್ಯಾಯನ ಪತ ಕೇವಲ ಕಿತ್ತು ತಿನ್ನುವ ಪತ’-ಎಂದು ತನ್ನ ಮಾತನ್ನು ನಿಲ್ಲಿಸಿದನು. ಆಗ ಅನ್ಯಾಯನು ನ್ಯಾಯನ ಕಪಾಳಕ್ಕೆ ಹೊಡೆಯುತ್ತಾನೆ. ನ್ಯಾಯನು ಪ್ರಶಾಂತದಲ್ಲಿ ‘ನಿಮಗೆ ಹಿಂಸೆ ಇಶ್ಟವಾದರೆ ಅವನನ್ನು ಈಗಲೇ ಅಪ್ಪಿಕೊಳ್ಳಿ. ನಿಮಗೆ ತಾಯಿತಂದೆ ಬೇಕಿದ್ದರೆ ಈ ನಿಮ್ಮ ಮನೆಯನ್ನು ಅನ್ಯಾಯನಿಗೆ ಬರೆದುಕೊಟ್ಟು ನನ್ನೊಂದಿಗೆ ಬನ್ನಿ. ಕಂಡಿತವಾಗಿಯೂ ನಿಮ್ಮ ತಾಯಿತಂದೆ ಸಿಗುತ್ತಾರೆ.’-ಎಂದು ಗೊಂದಲನಿಗೆ ಬರವಸೆಗಳನ್ನು ತುಂಬುತ್ತಾನೆ. ವಾಸ್ತವದ ಮತ್ತು ಬಾವನಾತ್ಮಕ ಅಂಶಗಳನ್ನು ಗೊಂದಲನಿಗೆ ಮನವರಿಕೆ ಮಾಡಿಕೊಟ್ಟ ನ್ಯಾಯನನ್ನು ಕೊಲ್ಲಲು ಅನ್ಯಾಯನು ಮುಂದಾಗುತ್ತಾನೆ. ಇದೇ ಸಮಯಕ್ಕೆ ವಿವೇಕನು ಗೊಂದಲನ ಮನೆಗೆ ಬಂದು ಅನ್ಯಾಯನು ನಿಶ್ಚಯಿಸಿಕೊಂಡಿದ್ದ ಕ್ರುತ್ಯವನ್ನು ತಡೆಗಟ್ಟುತ್ತಾನೆ. ವಿವೇಕನು ನ್ಯಾಯನಿಗೂ ಹಾಗೂ ಅನ್ಯಾಯನಿಗೂ ತಮ್ಮ ತಮ್ಮ ಬೆಂಬಲಿಗರನ್ನು ಕರೆತರುವಂತೆ ತಿಳಿಸುತ್ತಾನೆ. ತಾನೆ ಗೆಲ್ಲುವುದಾಗಿ ಬಾವಿಸಿ ದಡದಡನೆ ಅನ್ಯಾಯನು ತನ್ನ ಬೆಂಬಲಿಗರನ್ನು ಕರೆದು ನ್ಯಾಯನನ್ನು ಹಂಗಿಸುತ್ತಾನೆ. ನ್ಯಾಯನು ತನ್ನ ಪರವಾಗಿ ದರ್‍ಮ ಮಾತ್ರ ಇರುವುದಾಗಿ ತಿಳಿಸುತ್ತಾನೆ. ವಿವೇಕನು ಗೊಂದಲನಿಗೆ ‘ಯಾರ ಪತದಲ್ಲಿ ನಡೆಯಬೇಕೆಂದು ಈಗ ಎಲ್ಲರ ಮುಂದೆ ತಿಳಿಸಿ’-ಎಂದು ವಿನಂತಿಸಿಕೊಳ್ಳುತ್ತಾನೆ. ಗೊಂದಲನು ‘ಬಹುಸಂಕ್ಯೆಯಲ್ಲಿರುವ ಅನ್ಯಾಯನ ಪತದಲ್ಲಿ ಇನ್ನುಮುಂದೆ ನನ್ನ ಪಯಣ’-ಎಂದು ತನ್ನ ತಲೆ ಮೇಲೆ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಹಾಕಿಕೊಳ್ಳುತ್ತಾನೆ. ಅನ್ಯಾಯನು ‘ನೀನು ನಿನ್ನ ಮೇಲೆ ಕಲ್ಲನ್ನು ಹಾಕಿಕೊಳ್ಳುವುದಲ್ಲ ನನ್ನ ಪತ. ನೀನು ಚೆನ್ನಾಗಿರಲು ಬೇರೆಯವರ ಮೇಲೆ ಕಲ್ಲನ್ನು ಹಾಕಬೇಕು’-ಎಂದನು. ನ್ಯಾಯನು ‘ಈಗಾಗಲೆ ಜಯ್ವಿಕವಾಗಿ, ನಯ್ತಿಕವಾಗಿ ಮತ್ತು ಸಾಮಾಜಿಕವಾಗಿ ಅನ್ಯಾಯನ ಅಚ್ಚೆ ಬಹಳ ಇದೆ. ಇಂದು ನನ್ನ ಪತದವರನ್ನು ಹುಡುಕುವುದು ಮರಳ ರಾಶಿಯಲ್ಲಿ ಸಾಸಿವೆಯ ಕಾಳೊಂದನ್ನು ಬಿಸಾಕಿ ಮತ್ತೆ ಅದನ್ನು ಹುಡುಕಿದಂತೆ ಆಗಿಬಿಟ್ಟಿದೆ. ದಯವಿಟ್ಟು ಸುಸ್ತಿರದ ಬದುಕಿಗೆ ಅನುವಾಗುವಂತೆ ಒಂದು ವ್ಯವಸ್ತೆಯನ್ನು ಕಲ್ಪಿಸು’-ಎಂದು ವಿವೇಕನನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ವಿವೇಕನು ಅನ್ಯಾಯನಿಗೂ ತಿಳಿಯದ ಹಾಗೆ ನ್ಯಾಯನಿಗೆ ‘ನಿನ್ನ ಅಸ್ತಿತ್ವವೇ ನನ್ನ ಅಸ್ತಿತ್ವ’-ಎಂದು ಗೊಂದಲನಿಗೆ ‘ನೀನು ಈ ಇಬ್ಬರ ಮಾರ್‍ಗವನ್ನು ಬಿಟ್ಟು ಎಚ್ಚರನ ಬಟ್ಟೆಯನ್ನು ದರಿಸಿ ಪ್ರಜ್ನನ ತಪಸ್ಸು ಮಾಡಿ ಅವನು ತೋರಿಸಿದ ಪತದಲ್ಲಿ ನಡೆ.’-ಎಂದು ತಿಳಿಸಿ ನ್ಯಾಯನ ಜೊತೆಗೆ ಹೋದನು. ಅನ್ಯಾಯನು ತನ್ನ ತೆಕ್ಕೆಗೆ ಬರಲು ಗೊಂದಲನನ್ನು ಪೀಡಿಸುತ್ತಾನೆ. ಆದರೆ ಗೊಂದಲ ಈತನ ಸಂಗಡ ಸೇರದೆ ವಿವೇಕನು ಹೇಳಿದಂತೆಯೇ ಅನುಸರಿಸುವುದಾಗಿ ಹೇಳುತ್ತಾನೆ. ಅನ್ಯಾಯನು ‘ಈಗ ನಾನು ಸೋತಿದ್ದೇನೆ. ಆದರೆ ಮುಂದೆ ನಿನ್ನನ್ನು ನಾನು ಬಂದಿಸುತ್ತೇನೆ’-ಎಂದು ಶಪತ ಮಾಡಿ ಬೆಂಬಲಿಗರೊಡನೆ ಮರೆಯಾಗುತ್ತಾನೆ.

ವಿವೇಕನು ಹೇಳಿದಂತೆ ಗೊಂದಲನು ಅನುಸರಿಸಿದ. ಇದರ ಪಲವಾಗಿ ಪ್ರಜ್ನನು ಗೊಂದಲನ ಮನೆಗೆ ಬಂದು ‘ಮೊದಲು ಈ ಮನೆಯನ್ನು ಬಿಟ್ಟು ನಯ್ತಿಕನ ಮನೆಗೆ ಹೋಗು. ಬಳಿಕ ನಿನ್ನ ತಂದೆ-ತಾಯಿ ತಾವಾಗಿಯೇ ಬರುವರು. ಅವರು ಹೇಳಿದ ಹೆಸರನ್ನಿಟ್ಟುಕೊಂಡು ಸೂಚಿಸಿದ ಹುಡುಗಿಯೊಂದಿಗೆ ಮದುವೆಯಾಗು. ಎಚ್ಚರನ ಬಟ್ಟೆಯನ್ನು ಸದಾ ದರಿಸಿಯೇ ಇರು. ಕಾನೂನಿನ ಮನೆಗೂ ಆಗಾಗ್ಗೆ ಹೋಗಿ ಬಾ. ಆದರೆ ಅಲ್ಲಿಯೇ ಉಳಿಯದಿರು. ನಯ್ತಿಕನ ಮನೆಯೇ ಕಾನೂನಿನ ಮನೆಗಿಂತ ಉತ್ತಮ ಮತ್ತು ಸತ್ವಯುತವಾದದ್ದು. ಅದು ಹೇಗೆ ನಿನ್ನ ಬಳಿ ಅನ್ಯಾಯನೂ ಮತ್ತು ಅವನ ಬೆಂಬಲಿಗರು ಬರುತ್ತಾರೆ ನೋಡಿಯೇ ಬಿಡೋಣ’ಎಂದು ತನಗೆ ತೋಚಿದ್ದನ್ನು ಹೇಳಿ ಪ್ರಜ್ನ ಹೊರಟು ಹೋದ.

ಪ್ರಜ್ನನು ಹೇಳಿದ್ದ ಎಲ್ಲವನ್ನು ಚಾಚೂ ತಪ್ಪದೆ ಪಾಲಿಸಿದ್ದಕ್ಕಾಗಿ ಗೊಂದಲನ ತಾಯಿಯಾದ ನೆಮ್ಮದಿ ಮತ್ತು ತಂದೆಯಾದ ಸಂತೋಶ ಬಂದರು. ಇಶ್ಟು ದಿನ ತಾವು ಪ್ರಜ್ನನ ಆಸರೆಯಲ್ಲಿದ್ದೇವೆಂದು ಮಗನಿಗೆ ತಿಳಿಸಿ ಗಟನೆಯನ್ನು ನೆನೆದು ಮೂವರು ಅತ್ತು ಬೆಸೆದುಕೊಂಡರು. ಈ ಮೂವರು ಮಾತನಾಡಿಕೊಳ್ಳುತ್ತಿರುವಾಗ ಸಮಾದಾನನು ಬಂದು ಎಲ್ಲರನ್ನು ಆಶೀರ್‍ವಾದಿಸಿ ಹೊರಟು ಹೋದ. ಕೆಲವು ದಿನಗಳ ಬಳಿಕ ತಂದೆ-ತಾಯಿ ಸೂಚಿಸಿದ ಸಂತ್ರುಪ್ತಿ ಎಂಬ ಹೆಸರನ್ನಿಟ್ಟುಕೊಂಡು ಶ್ವೇತ ಎಂಬ ಹುಡುಗಿಯನ್ನು ಮದುವೆಯಾಗಿ ಸುಕ ಜೀವನವನ್ನು ಈತ ನಡೆಸಿದನು.

ಶ್ವೇತ ತುಂಬಾ ಪಾರದರ್‍ಶಕವಾಗಿ ಎಲ್ಲವನ್ನು ಎಲ್ಲರಿಗೂ ತಿಳಿಸುವ ಜಾಣ್ಮೆಯ ಹುಡುಗಿ. ಇರುವುದನ್ನು ಇದ್ದ ಹಾಗೆ ಹೇಳುವ ದಯ್ರ್ಯ ಅವಳಿಗಿತ್ತು. ಗಂಡ ದುರಾಸೆಯ ಬಳಿ ಹೋಗಲು ಆಸಕ್ತನಾಗಿರುವುದಾಗಿ ತನ್ನ ಮಾವ ಮತ್ತು ಅತ್ತೆಗೆ ಒಂದು ದಿನ ಹೇಳಿದಳು. ‘ಈಗ ಕಾಯ್ದು ನೋಡುವ ತಂತ್ರವನ್ನು ಅನುಸರಿಸೋಣ. ಒಂದು ವೇಳೆ ಆತನೇ ನಮ್ಮನ್ನು ನಿರ್‍ಲಕ್ಶಿಸಲು ಆರಂಬಿಸಿದರೆ ಮೂವರು ಹೊರಡೋಣ’-ಎಂದು ಮಾವ ಹೇಳಿದಾಗ ಅವಳೂ ಮತ್ತು ಅತ್ತೆಯು ಒಪ್ಪಿದರು.

ಕೆಲವು ವರ್‍ಶಗಳಾದ ಬಳಿಕ ದುರಾಸೆ ಎಂಬುವನ ಮಾತನ್ನು ಕೇಳಿ ಸಂತ್ರುಪ್ತಿ ಹೆಸರು ಸರಿಯಾಗಿಲ್ಲವೆಂದು ಗೊಂದಲನು ತನ್ನನ್ನು ನಿಜವಾದ ಹೆಸರಿನಿಂದಲೇ ಕರೆಯುವಂತೆ ಸುತ್ತಲಿನವರಿಗೆ ಆಗ್ರಹಪಡಿಸುತ್ತಾನೆ. ತಾಯಿ-ತಂದೆ ಮತ್ತು ಹೆಂಡತಿಯನ್ನು ನಿರ್‍ಲಕ್ಶಿಸಲು ಗೊಂದಲನು ಆರಂಬಿಸುತ್ತಾನೆ. ಇದೂ ಅಲ್ಲದೆ ಎಚ್ಚರನ ಬಟ್ಟೆಯನ್ನು ಹರಿದು ಬೂದಿ ಮಾಡುತ್ತಾನೆ. ಇದನ್ನರಿತ ತಂದೆ-ತಾಯಿ ಮತ್ತು ಹೆಂಡತಿ ಈತನನ್ನು ಬಿಟ್ಟು ಪ್ರಜ್ನನ ಮನೆಗೆ ಹೋಗುತ್ತಾರೆ. ಮತ್ತೆ ಅನ್ಯಾಯನು ಬಂದು ‘ನನ್ನ ಶಪತ ಕಯ್ಗೂಡಿತು. ದುರಾಸೆ ನನ್ನ ಬೆಂಬಲಿಗ’-ಎಂದು ತನ್ನ ಬೆಂಬಲಿಗರಿಗೆ ಗೊಂದಲನ ಆಸ್ತಿಯನ್ನು ಹಂಚಿಕೊಳ್ಳಲು ಆಜ್ನೆ ಮಾಡುತ್ತಾನೆ.

ಎಲ್ಲರು ತನ್ನ ಆಸ್ತಿಗಾಗಿ ಹೊಡೆದಾಟ ಆರಂಬಿಸಿದ್ದನ್ನು ಕಂಡು ಗೊಂದಲನಿಗೆ ಸಾವು ಹತ್ತಿರವಾಗುತ್ತದೆ. ಕೊನೆಗಾಲದಲ್ಲೂ ಎಲ್ಲರನ್ನು ಇಕ್ಕಟ್ಟಿಗೆ ಸಿಲುಕಿಸಿಯೇ ಸಾವಿಗೆ ಶರಣಾಗಲು ತಂತ್ರವನ್ನು ಹೆಣೆಯುತ್ತಾನೆ. ಅನ್ಯಾಯನು ಗೊಂದಲನಿಗೆ ‘ಏನೋ ಸಾಯುವ ಹೊತ್ತೆಂದು ಬಯ ಅಲ್ಲವೆ ನಿನಗೆ?’ ಎಂದು ಗರ್‍ಜಿಸುತ್ತಾನೆ. ಮನನೊಂದ ಗೊಂದಲನು ಸ್ವತಹ ಬೆಂಕಿ ಹಚ್ಚಿಕೊಂಡು ‘ಗಾಳಿಯ ಗಾಲಿ ನಾನು; ಗಾಳಿ ಬೀಸಿದಂತೆ ತಿರುಗುವುದೇ ಸರಿ’-ಎಂದು ಅನ್ಯಾಯನ ಮತ್ತು ಅನ್ಯಾಯನ ಬೆಂಬಲಿಗರ ಸುತ್ತ ಗಾಲಿಯಾಗಿ ಗಾಳಿ ಬೀಸಿದಂತೆ ತಿರುಗುವಾಗ ವಿವೇಕನು ಮತ್ತು ನ್ಯಾಯನು ಬೆಂಬಲಿಗರೊಡನೆ ಕಟ್ಟೆಚ್ಚರನ ಬಟ್ಟೆ ದರಿಸಿ ಬರುತ್ತಾರೆ. ಗೊಂದಲನು ಎಶ್ಟೇ ನ್ಯಾಯನ ಹಾಗೂ ವಿವೇಕನ ಸುತ್ತ ಸುತ್ತಲು ಪ್ರಯತ್ನಿಸಿದರೂ ಅವರನ್ನು ಸ್ಪರ್‍ಶಿಸಲು ಸಾದ್ಯವಾಗಲಿಲ್ಲ. ಆದರೆ, ಇನ್ನೇನು ಗೊಂದಲನು ಬೂದಿಯಾಗಿಬಿಡುವ ಎಂದು ಬಿಸಿಯ ಜಳಕ್ಕೆ ಬೆವತು ಹೋಗಿದ್ದ ನ್ಯಾಯನು ತಾಳ್ಮೆಯನ್ನು ಕಳೆದುಕೊಂಡು ಕಟ್ಟೆಚ್ಚರನ ಬಟ್ಟೆಯನ್ನು ತೆಗೆದುಬಿಡುತ್ತಾನೆ. ಈ ಸುಳಿವನ್ನರಿತ ಗೊಂದಲನು ನ್ಯಾಯನ ದೇಹವನ್ನು ಸ್ಪರ್‍ಶಿಸಿಯೇ ಸಾಯುತ್ತಾನೆ. ಕೊನೆ ಪಕ್ಶ ಅನ್ಯಾಯನನ್ನು ನ್ಯಾಯನ ಹತ್ತಿರ ಬಿಡಬಾರದೆಂದು ವಿವೇಕನೇ ಕಟ್ಟೆಚ್ಚರನ ಬಟ್ಟೆಯನ್ನು ಜರೂರಾಗಿ ದರಿಸುವಂತೆ ಹೇಳುತ್ತಾನೆ. ಅಂತೆಯೇ ನ್ಯಾಯನು ಕಟ್ಟೆಚ್ಚರನ ಬಟ್ಟೆಯನ್ನು ದರಿಸುತ್ತಾನೆ.

ನ್ಯಾಯನು ಬೇಸರದಿಂದ ‘ನಾನೂ ಸಹ ಗೊಂದಲನ ನೆರಳಿನಲ್ಲಿರಬೇಕಾಯಿತಲ್ಲವೆ?’-ಎಂದು ವಿವೇಕನನ್ನು ಕೇಳುತ್ತಾನೆ. ವಿವೇಕನು ‘ನನ್ನನ್ನು ಮತ್ತು ಪ್ರಜ್ನನನ್ನು ಬಿಟ್ಟು ಎಲ್ಲರೂ ಸಹ ಈ ಗೊಂದಲನಂತೆ ಗಾಲಿಯಾಗಿದ್ದೀರಿ. ಗಾಳಿ ಬೀಸಿದಂತೆ ತಿರುಗುತ್ತಾ ಇದ್ದೀರಿ’-ಎಂದು ನ್ಯಾಯನಿಗೆ ಹೇಳಿ ನ್ಯಾಯ ಮತ್ತು ಅನ್ಯಾಯರ ನಡುವೆ ಸಣ್ಣನೆಯ ಅನಂತವಾದ ರಂದ್ರವನ್ನು ಕೊರೆದು ‘ನೀನು ನನ್ನ ಆಪ್ತ ನಿನ್ನನ್ನು ಯಾರು ತಪಸ್ಸು ಮಾಡಿ ನಿನ್ನ ಕ್ರುಪೆಗೆ ಒಳಗಾಗುವರೋ ಅವರಿಗೆ ಮಾತ್ರ ನಾನು ಸಿಗುತ್ತೇನೆ’-ಎಂದು ಪ್ರಜ್ನನಿಗೆ ರಂದ್ರದ ಬಳಿ ವಾಸಿಸಲು ಹೇಳಿದನು. ಪ್ರಜ್ನನೂ ಸಹ ಒಪ್ಪಿದ. ‘ನಮ್ಮಿಬ್ಬರ ನಡುವೆ ನೀನು?’-ಎಂದು ಅನ್ಯಾಯನು ಕೇಳಿದಾಗ ವಿವೇಕನು ‘ಸಮಾಜದ ಅಸ್ತಿತ್ವದ ದ್ರುಶ್ಟಿಯಿಂದ ನನ್ನ ಅವಶ್ಯಕತೆ ಇದೆ. ಜೊತೆಗೆ ನೀವು ಗೊಂದಲನ ಸೋಂಕಿಗೆ ಒಳಪಟ್ಟಿರುವಿರಿ. ನೀವಿಬ್ಬರು ವಿರುದ್ದಿಗಳು; ವಿರುದ್ದ ಮುಕಿಯಾಗಿ ಚಕ್ರೀಯವಾಗಿ ಚಲಿಸಲು ಹೋಗಿ’-ಎಂದು ಇಬ್ಬರಿಗೂ ತಿಳಿಸಿ ರಂದ್ರದ ಒಳಕ್ಕೆ ಹೋದನು. ಪ್ರಜ್ನನು ರಂದ್ರದ ಬಳಿ ಅಮೂರ್‍ತವಾಗಿ ಆದರೆ ಸೂಕ್ಶ್ಮವಾಗಿ ನೋಡುವವರಿಗೆ ದೊಡ್ಡ ಹಣತೆಯಂತೆ ರೂಪತಳೆದು ನಿಂತನು. ನ್ಯಾಯ ಮತ್ತು ಅನ್ಯಾಯರು ವಿವೇಕನ ಮಾತನ್ನು ಒಪ್ಪಿ ಕಾಲನ ಲೋಕದಲ್ಲಿ ವಿರುದ್ದ ಮುಕಿಯಾಗಿ ಚಕ್ರದಂತೆ ತಿರುಗಲು ಆರಂಬಿಸಿದರು.

(ಚಿತ್ರ: ಬರತ್ ಕುಮಾರ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks