ನಾಲ್ಕು ಕಾಲಿನ ಬ್ಯಾಟೆ

ಸಿ.ಪಿ.ನಾಗರಾಜ

jason

ಇಂದಿಗೆ ಸುಮಾರು ಮೂವತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು.

ದಲಿತರ ಕೇರಿಯಲ್ಲಿ ಪಂಚಾಯ್ತಿ ಸೇರಿತ್ತು. ಕಾಡಮ್ಮನ ಹತ್ತು ವರುಶದ ಮಗ ಬೋರ ಕಳ್ಳತನದ ಆರೋಪ ಹೊತ್ತುಕೊಂಡು ತಲೆಬಗ್ಗಿಸಿ ನಿಂತಿದ್ದ. ಹಿಂದಿನ ದಿನ ಇಳ್ಳೊತ್ತಿನಲ್ಲಿ ಊರ ಗವ್ಡರ ಹೊಲದಲ್ಲಿ ಬೋರ ಅವರೆಕಾಯನ್ನು ಕದ್ದು ಕುಯ್ಯುತ್ತಿದ್ದಾಗ, ಗವ್ಡರ ಮನೆಯ ಆಳು ಕರಿಯನ ಕಯ್ಗೆ ಸಿಕ್ಕಿಬಿದ್ದು, ಗವ್ಡರ ಬಳಿಗೆ ಬೋರನನ್ನು ಎಳೆದೊಯ್ದಾಗ-

“ಅದೇನ್ ವಿಚಾರಣೆ ಮಾಡಿ, ನೀವೇ ದಂಡ ಹಾಕಿ, ನೀವೇ ವಸೂಲ್ ಮಾಡ್ಕೊಳಿ” ಎಂದು ಗವ್ಡರು ದಲಿತರ ಕೇರಿಯ ಯಜಮಾನರ ಪಾಲಿಗೆ ಎಲ್ಲವನ್ನೂ ಬಿಟ್ಟಿದ್ದರು. ಪಂಚಾಯ್ತಿ ಶುರುವಾಗುತ್ತಿದ್ದಂತೆಯೇ, ಕಾಡಮ್ಮ ದೊಡ್ಡದಾಗಿ ರಾಗ ತೆಗೆದು-

“ಯಾರೂ ಮಾಡಬಾರದ ತಪ್ಪನ್ನು ನನ್ಮಗ ಮಾಡಿದ್ದನಾ ?.. ಎಲ್ಲೋ ಜೀವ ತಡೀನಾರ‍್ದೆ.. ಮೂರು ಅವರೆಕಾಯಿ ಕಿತ್ಬುಟ್ಟವ್ನೆ. ನೀವ್ಯಾರೂ ಗವ್ಡರ ಹೊಲದಲ್ಲಿ ಅವರೆಕಾಯ್ನ ಯಾವತ್ತೂ ಕದ್ದು ಕುಯ್ದಿಲ್ಲವೋ.. ನೀವೇನು ಸಾಚಾಗಳೇ.. ಯಾರ‍್ಯಾರು ಹೆಂಗೆಂಗೆ ಅನ್ನೋದನ್ನ ನಾನ್ ಕಾಣ್ನೆ”ಎಂದು ಪಂಚಾಯ್ತಿ ಮಾಡಲು ಸೇರಿದ್ದವರಿಗೆ ಸವಾಲನ್ನು ಹಾಕಿದಳು. ಕಳೆದ ನಾಲ್ಕು ವರುಶಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ಕಾಡಮ್ಮ, ತನ್ನ ಎರಡು ಮಕ್ಕಳಿಗಾಗಿ ಎಡಗಯ್ಯಲ್ಲಿ ಜೀವ ಹಿಡಿದುಕೊಂಡು, ಕೂಲಿ-ನಾಲಿ ಮಾಡಿಕೊಂಡು ಜೀವನ ತಳ್ಳುತ್ತಿದ್ದ ಕಡು ಬಡವೆ. ದಲಿತರ ಕೇರಿಯ ಒಂದು ಮೂಲೆಯಲ್ಲಿದ್ದ ಮುರುಕಲು ಗುಡಿಸಲೊಂದನ್ನು ಬಿಟ್ಟರೆ, ಅವಳದೆನ್ನುವ ಮತ್ತಾವ ಸ್ತಿರಾಸ್ತಿಯು ಇರಲಿಲ್ಲ. ಎರಡು ಸಣ್ಣ ಆಡಿನ ಮರಿಗಳು ಮತ್ತು ಒಂದು ಹೋತ ಅವಳ ಪಾಲಿನ ಚರಾಸ್ತಿಯಾಗಿದ್ದವು.

ವಿಚಾರಣೆ ಮಾಡುವುದಕ್ಕೆ ಮೊದಲೇ ತಿರುಗಿಬಿದ್ದ ಕಾಡಮ್ಮನ ಕೇಸನ್ನು ದಲಿತರ ಪಂಚಾಯ್ತಿ ಕಟ್ಟೆಯಿಂದ ಗವ್ಡರ ಪಂಚಾಯ್ತಿ ಕಟ್ಟೆಗೆ ವರ‍್ಗಾಯಿಸಲಾಯ್ತು. ನಾಲ್ಕು ದಿನಗಳ ನಂತರ ಗವ್ಡರ ದೊಡ್ಡಮನೆಯ ಮುಂದೆ ಮತ್ತೆ ಪಂಚಾಯ್ತಿ ಸೇರಿತು. ಕಾಡಮ್ಮನು ಗವ್ಡರ ಮುಂದೆ ತನ್ನ ಅಹವಾಲನ್ನು ಮಂಡಿಸಿದಳು.

“ಏನೋ.. ನನ್ ಮಗ ತಪ್ಪು ಮಾಡುಬುಟ್ಟವ್ನೆ ಕಣ್ರಪ್ಪ. ಹಸಿ ಅವರೆಕಾಳ್ ತಿನ್ನಬೇಕು ಅನ್ನೋ ಆಸೇಗೆ ಹಿಂಗೆ ಮಾಡ್ಬುಟ್ಟವ್ನೆ ಕಣ್ರಪ್ಪ. ಇದೊಂದು ಸತಿ ನನ್ ಮಗನ ತಪ್ಪ ನಿಮ್ಮ ಹೊಟ್ಟೇಲಿ ಹಾಕೊಂಡು ಮನ್ನಿಸುಬುಡ್ರಪ್ಪ” ಎಂದು ಕಯ್ ಮುಗಿದು ಅಡ್ಡಬಿದ್ದು ಕೇಳಿಕೊಂಡಳು.

“ಅದ್ಸರಿ ಕನಮ್ಮಿ ಕಾಡಿ. ಕೇಳಿದ್ರೆ ನಾನೇ ಮೂರು ಕುಯ್ಕೊಂಡು ಹೋಗು ಅಂತ ಹೇಳ್ತಿರಲಿಲ್ವೆ.. ಅಂತಾದ್ದರಲ್ಲಿ ಕದ್ದು ಕುಯ್ಯೋಕೆ ಏನಾಗಿತ್ತು ನಿನ್ ಮಗನಿಗೆ ?”

“ತಪ್ಪು ಕಣ್ರಪ್ಪ.. ನಾನು ಇಲ್ಲ ಅಂದನೆ.”

“ನೋಡು.. ಈಗ ನಿನ್ ಮಗನಿಗೆ ದಂಡ ಹಾಕ್ದೆ ಬುಟ್ಬುಟ್ರೆ.. ನಾಳೆ ಹೊತಾರೆ ಹೊತ್ತಿಗೆ ನನ್ನ ಹೊಲವೆಲ್ಲಾ ಕೂಳೆ ಆಗೋಯ್ತದೆ. ಅದಕ್ಕೆ ಏನಂತಿಯೆ ನೀನು ?”

“ಅಪ್ಪೋ.. ನಾನು ಗಂಡ ಸತ್ತ ಮುಂಡೆ.. ಬಡವೆ ಕಣ್ರಪ್ಪ. ನಾನು ದಂಡ ಕಟ್ಟಲಾರೆ. ನಿಮ್ ಪಾದ ಅಂತೀನಿ.. ನಿಮ್ ದಮ್ಮಯ್ಯ ಅಂತೀನಿ.. ಇದೊಂದು ಸತಿ ಬುಟ್ಬುಡ್ರಪ್ಪ” ಎಂದು ಇನ್ನಿಲ್ಲದಂತೆ ಗೋಗರೆದಳು. ಕಾಡಮ್ಮನ ಮೊರೆಗೆ ಈಗ ಯಾವ ಬೆಲೆಯೂ ಇಲ್ಲವಾಗಿತ್ತು. ಏಕೆಂದರೆ ಎಲ್ಲರಿಗೂ ಗೊತ್ತಾಗಿರುವ ಈ ಕಳ್ಳತನಕ್ಕೆ ದಂಡವನ್ನು ಹಾಕುವುದು ಗವ್ಡರ ಪಾಲಿಗೆ ಅನಿವಾರ‍್ಯವಾಗಿತ್ತು.

ದಲಿತಕೇರಿಯಲ್ಲಿನ ಪಂಚಾಯ್ತಿದಾರರಲ್ಲಿ ಒಂದಿಬ್ಬರು.. ಕಾಡಮ್ಮನಿಗೆ ಆಗದವರು, ಆಕೆಯ ಬಳಿಯಲ್ಲಿ ಹೋತವಿರುವುದನ್ನು ಈಗಾಗಲೇ ಗವ್ಡರಿಗೆ ಮುಟ್ಟಿಸಿ, ಅದನ್ನೇ ದಂಡದ ರೂಪದಲ್ಲಿ ಕಟ್ಟಿಸಿಕೊಳ್ಳಬಹುದೆಂದು ಗವ್ಡರ ಕಿವಿಯಲ್ಲಿ ಊದಿದ್ದರು. ಹೋತವನ್ನು ಕುಯ್ದು, ಅರೆಪಾಲನ್ನು ಗವ್ಡರಿಗೆ ಒಪ್ಪಿಸಿ, ಮಿಗುವ ಅರೆಪಾಲನ್ನು ದಲಿತಕೇರಿಯ ಪಂಚಾಯ್ತಿದಾರರು ಹಂಚಿಕೊಂಡು ತಮ್ಮ ಬಾಯ್ ಚಪಲವನ್ನು ತೀರಿಸಿಕೊಳ್ಳಬೇಕೆಂಬ ತರಾತುರಿಯಲ್ಲಿದ್ದರು. ಈಗ ಗವ್ಡರು ಕಾಡಮ್ಮನನ್ನು ಕುರಿತು-

“ಕಾಡಿ.. ಇವತ್ತು ನಿನ್ನ ಮಗನನ್ನ ಹಂಗೆ ಬಿಟ್ಟೆ ಅಂತ್ಲೆ ಇಟ್ಕೊ.. ನಾಳಾಕೆ ಇನ್ನೂ ಒಂದು ದೊಡ್ಡದುಕ್ಕೆ ಕಯ್ ಹಾಕ್ತನೆ. ಆಗ ನೀನೇ ಅವನನ್ನ ಕಳ್ಳನನ್ನಾಗಿ ಮಾಡ್ದಂಗೆ ಆಗೋದಿಲ್ವೆ ?.. ಅದಕ್ಕೆ ಅವನ್ಗೂ ಒಂದು ಬೆದರಿಕೆ ಇರ‍್ಲಿ ಅಂತ ಈಗೊಂದು ದಂಡ ಹಾಕ್ತೀನಿ.. ಅದ ನೀನು ಕಟ್ಟಲೇಬೇಕು” ಎಂದರು. ಬಾಡಿದ ಮೋರೆಯ ಕಾಡಮ್ಮ ಮರು ಮಾತನಾಡದೆ, ಅಲ್ಲಿ ಕುಳಿತಿದ್ದ ದಲಿತಕೇರಿಯ ಹಿರಿಯರೆಲ್ಲರನ್ನೂ ಒಮ್ಮೆ ನೋಡಿದಳು. ಅವಳ ಕಣ್ಣುಗಳಿಂದ ಕಂಬನಿಗಳು ಉರುಳತೊಡಗಿದವು. ಗವ್ಡರು ಕೊನೆಯ ತೀರ‍್ಮಾನವನ್ನು ನೀಡುತ್ತಾ-

“ಕಾಡಿ.. ನೀನು ನಾಲ್ಕು ಕಾಲಿನ ಒಂದು ಬ್ಯಾಟೆಯನ್ನು ನಮಗೆ ತಂದು ಒಪ್ಪಿಸ್ಬುಡು” ಎಂದು ಹೇಳಿ ಮೇಲೆದ್ದರು. ಕಾಡಮ್ಮನ ಬಳಿಯಿದ್ದ ಹೋತವೇ ನಾಲ್ಕು ಕಾಲಿನ ಬ್ಯಾಟೆಯಾಗಿತ್ತು.

ಹೋತವನ್ನು ದಂಡವಾಗಿ ಕೊಡಲು ತುಂಬಾ ಸಂಕಟಗೊಂಡ ಕಾಡಮ್ಮ.. ಈ ಸಂಗತಿಯನ್ನು ನಗರದಲ್ಲಿದ್ದ ಸಣ್ಣಪ್ಪನವರಿಗೆ ತಿಳಿಸಿದಳು. ಬಿ.ಎ., ಓದಿದ್ದ ದಲಿತರ ಸಣ್ಣಪ್ಪ.. ಯಾವುದೇ ಸರ‍್ಕಾರಿ ಕೆಲಸಕ್ಕೆ ಸೇರದೆ, ತಮ್ಮ ಸಮುದಾಯದ ದಿನನಿತ್ಯದ ಸಮಸ್ಯೆಗಳ ನಿವಾರಣೆಗೆ, ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ ವ್ಯಕ್ತಿ. ಸುಮಾರು ಅಯ್ವತ್ತರ ವಯೋಮಾನದ ಸಣ್ಣಪ್ಪನವರಲ್ಲಿ ಒಂದು ಹವ್ಯಾಸವಿತ್ತು. ಅದೇನೆಂದರೆ, ಯಾವುದೇ ಹಳ್ಳಿಗೆ ಹೋದಾಗ, ಸಮಸ್ಯೆಯಿಂದ ನರಳುತ್ತಿರುವವರ ಗುಡಿಸಲಿನ ಒಳಗೆಲ್ಲಾ ಓಡಾಡಿ, ಅಲ್ಲಿ ಕಂಡುಬರುವ ವಸ್ತುಗಳೆಲ್ಲವನ್ನೂ ಗಮನಿಸಿ, ಅವರ ಹಣಕಾಸಿನ ಮಟ್ಟವನ್ನು ತಿಳಿದುಕೊಳ್ಳುತ್ತಿದ್ದರು. ಅನಂತರ ಅದಕ್ಕೆ ತಕ್ಕಂತೆ ಸಮಸ್ಯೆಯ ಪರಿಹಾರಕ್ಕೆ ಸರಿಯಾದ ದಾರಿಯನ್ನು ಹುಡುಕುತ್ತಿದ್ದರು.

ಕಾಡಮ್ಮನ ಗುಡಿಸಲಿನ ಒಳಕ್ಕೆ ಬಂದ ಸಣ್ಣಪ್ಪನವರ ಕಣ್ಣಿಗೆ ನಾಲ್ಕಾರು ಮಡಕೆ-ಕುಡಿಕೆಗಳು, ಹರಿದ ಚಿಂದಿಬಟ್ಟೆಗಳು, ಒಂದೆರಡು ಗೋಣಿತಾಟುಗಳು ಕಂಡುಬಂದವು. ಮೂಲೆಯೊಂದರಲ್ಲಿದ್ದ ದೊಡ್ಡ ಮಂಕರಿಯೊಳಗಿಂದ ಚಿಲಿಪಿಲಿ ದನಿ ಕೇಳಿಬರುತ್ತಿತ್ತು. ಮಂಕರಿಯನ್ನು ಎತ್ತಿನೋಡಲೆಂದು ಸಣ್ಣಪ್ಪನವರು ಮುನ್ನಡೆಯುತ್ತಿದ್ದಂತೆಯೇ, ಕಾಡಮ್ಮ ಅವರನ್ನು ತಡೆಯುತ್ತಾ-

“ಮ್ಯಾಕೆ ಎತ್ ಬ್ಯಾಡಿ ಕಣ್ರಪ್ಪ.. ಆಚೆಗೆ ಹೊಂಟೋಯ್ತವೆ”

“ಒಳಗೆ ಏನಿದ್ದವಮ್ಮ ?”

“ಕೋಳಿ.. ಮರಿ ಮಾಡದೆ ಕಣ್ರಪ್ಪ. ಎಲ್ಲಾ ಇನ್ನೂ ಹೂಮರಿಗಳು”

“ಎಶ್ಟಿದ್ದವು ?”

“ಒಂದ್ ಹತ್-ಹನ್ನೆರಡು ಅವೆ ಕಣ್ರಪ್ಪ”

ಬಾಗಿಲ ಬಳಿ ಕಟ್ಟಿದ್ದ ಕಂತೆಯಿಂದ ಬೇವಿನ ಸೊಪ್ಪಿನ್ನು ಮೇಯುತ್ತಿದ್ದ ಕಾಡಮ್ಮನ ಎರಡು ಆಡಿನ ಮರಿಗಳನ್ನು ಮತ್ತು ಹೋತವನ್ನು ಒಂದು ಗಳಿಗೆ ದಿಟ್ಟಿಸಿ ನೋಡಿದ ಸಣ್ಣಪ್ಪನವರು-

“ಈಗ ಬಾಮ್ಮ ಗವ್ಡರ ಹಟ್ಟೀತಕೆ ಹೋಗ್ ಬರ‍್ಮ. ನನಗೆ ಅವರು ಅವರಪ್ಪಾವರ ಕಾಲದಿಂದಲೂ ಬೋ ಪರಿಚಯ” ಎಂದು ಹೇಳಿ ಕಾಡಮ್ಮನನ್ನು ಕರೆದುಕೊಂಡು ಗವ್ಡರ ಮನೆಯ ಬಳಿಗೆ ಬಂದರು. ಗವ್ಡರು ದೊಡ್ಡಜಗಲಿಯ ಮೇಲೆ ಕುಳಿತಿದ್ದರು.”ನಮಸ್ಕಾರ.. ಗವ್ಡರೇ” ಎಂದ ಸಣ್ಣಪ್ಪನವರನ್ನು ಜಗಲಿಕಟ್ಟೆಯ ಮೇಲಕ್ಕೆ ಕರೆಯುತ್ತಾ-

“ಬನ್ನಿ ಸಣ್ಣಪ್ಪ.. ಕಾಡಿ ನ್ಯಾಯ ಬಗೆಹರಿಸೋಕೆ ಇಲ್ಲಿಗಂಟ ಬಂದ್ರ” ಎಂದರು.

“ಹೂ ಕಣ್ ಗವ್ಡರೆ..ನನ್ನತಕೆ ಬಂದು.. ಅತ್ತೂ ಕರೆದೂ ಕೇಳ್ಕೊಂಡ್ಲು. ಅದಕ್ಕೆ ಬಂದೆ”.

“ಏನ್ ಮಾಡೋದು ಸಣ್ಣಪ್ಪ.. ನಿಮ್ಮ ಜನಕ್ಕೆ ಎಲ್ಲಾನು ಬುಟ್ಟಿದ್ದೆ. ಅವರವ್ರೆ ಬಗೆಹರಿಸಿಕೊಳ್ಳದೇ, ನನ್ನತಕೆ ತಿರ‍್ಗ ಬಂದ್ರು. ಹಿಂದಿನಿಂದ ನಡೆದುಕೊಂಡು ಬಂದ ಊರಿನ ಸಂಪ್ರದಾಯದಂತೆ ನಾನು ದಂಡ ಹಾಕಲೇಬೇಕಾಯ್ತು.”

“ಏನ್ ದಂಡ ಹಾಕಿದ್ದೀರಿ ?”

“ಯಾಕೆ ?.. ಕಾಡಿ.. ನಿಮ್ ಜೊತೇಲಿ ಹೇಳಿಲ್ವೇ ?.. ಅದೇ ನಾಲ್ಕು ಕಾಲಿನ ಬ್ಯಾಟೆ.”

“ಊರಿನ ಗವ್ಡರು ನೀವು ದಂಡ ಹಾಕಿದ ಮ್ಯಾಲೆ.. ಇಲ್ಲ ಅನ್ನೋಕೆ ಆದದೆ.. ಕಾಡಮ್ಮನ ಕಯ್ಯಲ್ಲಿ ಕಟ್ಟೀಸ್ತೀನಿ ಬುಡಿ”ಎಂದು ಹೇಳಿ, ಜಗುಲಿಯಿಂದ ಕೆಳಕ್ಕಿಳಿದು ಬಂದ ಸಣ್ಣಪ್ಪನವರು, ಕಾಡಮ್ಮನ ಕಿವಿಯಲ್ಲಿ ಏನನ್ನೋ ಮೆಲ್ಲನೆ ಉಸುರಿದರು.

ಕಾಡಮ್ಮ ದಡದಡನೆ ಗುಡಿಸಲ ಕಡೆಗೆ ಹೋಗಿ, ಒಂದೆರಡು ಗಳಿಗೆಯಲ್ಲೇ ತನ್ನ ಸೆರಗಿನ ಮಡಿಲಲ್ಲಿ ಏನನ್ನೋ ಮುಚ್ಚಿಟ್ಟುಕೊಂಡು ಬಂದು ಸಣ್ಣಪ್ಪನವರ ಮುಂದೆ ನಿಂತುಕೊಂಡಳು. ಈಗ ಸಣ್ಣಪ್ಪನವರು ಒಮ್ಮೆ ಗವ್ಡರನ್ನು ನೋಡಿ.. ಆಮೇಲೆ ಕಾಡಮ್ಮನನ್ನು ಕುರಿತು-

“ಗವ್ಡರಿಗೆ ನಾಲ್ಕು ಕಾಲಿನ ಬ್ಯಾಟೆಯನ್ನು ಒಪ್ಪಿಸುಬುಡಮ್ಮ” ಎಂದರು. ಕೂಡಲೇ ಕಾಡಮ್ಮ ತನ್ನ ಮಡಿಲೊಳಗಿಂದ ಎರಡು ಕೋಳಿಮರಿಗಳನ್ನು ಹೊರತೆಗೆದು, ಗವ್ಡರ ಮುಂದೆ ಬಿಟ್ಟಳು.

“ಇದೇನ್ ಸಣ್ಣಪ್ಪ !” ಎಂದು ಅಚ್ಚರಿಯಿಂದ ಗವ್ಡರು ಉದ್ಗಾರವೆಳೆದರು.

“ಗವ್ಡರು ದಂಡ ಹಾಕಿದಂಗೂ ಆಯ್ತು.. ಬಡವೆ ಕಾಡಮ್ಮ ದಂಡ ಕಟ್ಟಿದಂಗೂ ಆಯ್ತು. ದಯಮಾಡಿ ದೊಡ್ಡಮನಸ್ಸಿನಿಂದ ಗವ್ಡರು ಇದ ಒಪ್ಪಿಸ್ಕೊಬೇಕು” ಎಂದ ಸಣ್ಣಪ್ಪನವರ ಕಳಕಳಿಯ ಮಾತುಗಳನ್ನು ತೆಗೆದುಹಾಕಲಾಗದೆ.. ಗವ್ಡರು ಮುಗುಳ್ನಗುತ್ತಾ ಶರಣಾದರು.

(ಚಿತ್ರ: www.whitmorefarm.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. honnusidharth says:

    ಬಹಳ ಚಲೋ ಐತ್ರಿ ಯಪ್ಪಾ ಕತಿ

ಅನಿಸಿಕೆ ಬರೆಯಿರಿ:

%d bloggers like this: