ಮಲೆನಾಡ ಬಿಸಿಲ್ಮಳೆ

ವಲ್ಲೀಶ್ ಕುಮಾರ್

289410_1251082047869_full

{ ಹೊನಲಿನ ಓದುಗರೆಲ್ಲರಿಗೂ ಹೊನಲು ತಂಡದ ಕಡೆಯಿಂದ ಯುಗಾದಿ ಹಬ್ಬದ ಸವಿ ಹಾರಯ್ಕೆಗಳು }

ಮಳೆಯಿಂದ ಬಚ್ಚಿಟ್ಟು, ಬಿಸಿಲಿಂದ ಎಚ್ಚೆತ್ತ
ತನುವಿನೊಳಗೊಂದು ಹಾಡಿತ್ತು –
ಅದು ಮಲೆನಾಡಿನ ಬಿಸಿಲ್ಮಳೆ,
ಚೈತ್ರ ಮಾಸದ ಹೊಸಿಲ್ಮಳೆ.

ನೊಂದ ನೆಲಕೆ ವಿಶ್ರಾಂತಿಗೊಡಲು
ಆದೇಶವಿತ್ತ ಕೆಲಕಾಲ ಮಳೆ;
ದೂರವಿದ್ದ ಜೊತೆಯರಸುತಿದ್ದ
ಪ್ರೇಮಿಗಳ ಬೆಸೆವ ಕೆನೆಹಾಲ ಮಳೆ;
ವಿರಸದಿಂದ ದೂರಾದ ಗೆಳತಿಯ
ನೆನಪು ಸುರಿಸುವ ಹಾಳುಮಳೆ,
ಮೋಜಿನಲ್ಲಿ ನೀರೆರೆಚಿಕೊಂಡು
ಸದ್ದಿರದೆ ನಗುವ ಕರುನಾಡ ಮಳೆ.

ಬಿಸಿಲು ಬೇಯಿಸಿತು ನೆಂದ ನೋಟಗಳ
ಎಚ್ಚರಿಸಿತು ಮೈ ಮರೆವಿಂದ,
ಮಳೆಯು ಹಾದಿಹುದು, ಕೆಲಸ ಕಾದಿಹುದು
ಆಗಲಿಳಿಯ ದಿನ ಅರವಿಂದ,
ಮನೆಯೊಳಡಗಿ, ಮಂದತೆಗೆ ಒರಗಿ
ನಿನ್ನವರ ಮರೆಯದಿರು ಏಳೆಂದ,
ಜಗವು ಸಾಗಿಹುದು, ಮನಸು ಬಾಗಿಹುದು
ಪ್ರಕ್ರುತಿಯೇ ಆಗಿಹುದು ಅವನಿಂದ.

ಅದು ಮಲೆನಾಡಿನ ಬಿಸಿಲ್ಮಳೆ,
ಚೈತ್ರ ಮಾಸದ ಹೊಸಿಲ್ಮಳೆ.

(ಚಿತ್ರ: www.fanpop.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: