“ತಾಯ್ನುಡಿಯಲ್ಲಿ ಕಲಿಯುವುದು ನಮ್ಮ ಹಕ್ಕು”

 ಅನ್ನದಾನೇಶ ಶಿ. ಸಂಕದಾಳ.

kurds

 

ತನ್ನ ತಾಯ್ನುಡಿಯಲ್ಲೇ ಕಲಿಯಬೇಕೆಂಬುದು ಪ್ರತಿಯೊಬ್ಬನ ಜನ್ಮಸಿದ್ದ ಹಕ್ಕು. ನಾವು ನಮ್ಮ ಹೋರಾಟವನ್ನು ಇಶ್ಟಕ್ಕೇ ನಿಲ್ಲಿಸುವುದಿಲ್ಲ

ಹೀಗೆ ಹೇಳುತ್ತಿರುವುವರು ಟರ‍್ಕಿಯ ‘ಕಲಿಸುಗರ ಒಕ್ಕೂಟ’ದ (Teachers Union) ಮುಂದಾಳುಗಳಲ್ಲಿ ಒಬ್ಬರಾದ ‘ಡಿಲೆಕ್ ಅಡ್ಸನ್‘ನವರು. ಅವರು ಹೀಗೆ ಹೇಳಲು ಕಾರಣವೇನೆಂದರೆ, ಕುರ‍್ಡಿಶ್ ನುಡಿಯಲ್ಲೇ ಎಲ್ಲವನ್ನು ಕಲಿಸುವ ಮೂರು ಕಾಸಗಿ ಶಾಲೆಗಳನ್ನು ಮುಚ್ಚುವಂತೆ ಟರ‍್ಕಿ ಸರಕಾರ ಒತ್ತಾಯ ಮಾಡುತ್ತಿರುವುದು. ಆದರೆ ಕುರ‍್ಡಿಶ್ ಮಂದಿ, ತಾಯ್ನುಡಿಯಲ್ಲಿ ಕಲಿಯುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂದು ಆ ಒತ್ತಾಯಕ್ಕೆ ಮಣಿಯದೇ ಇರುವುದು. ಆ ಶಾಲೆಗಳನ್ನು ಮುಚ್ಚುವುದು-ತೆರೆಯುವುದು ನಡೆದೇ ಇದೆ. ಸ್ವಾಬಾವಿಕವಾಗಿ/ಸಹಜವಾಗಿ ದಕ್ಕಬೇಕಿರುವ ನುಡಿಯ ಹಕ್ಕುಗಳ ಬಗ್ಗೆ ನಡೆಯುತ್ತಿರುವ ಹೋರಾಟದ ಬಗ್ಗೆ ಡಿಲೆಕ್ ಅವರು ಮೇಲಿನಂತೆ ಹೇಳಿದ್ದಾರೆ.

ಕುರ‍್ಡಿಶ್ ನುಡಿಯ ವಿಚಾರ ಟರ‍್ಕಿಯಲ್ಲಿ ಮೊದಲಿನಿಂದಲೂ ಸೂಕ್ಶ್ಮವಾದ ವಿಚಾರವಾಗಿದೆ. ಆ ನುಡಿಯಾಡುವವರು ತಮ್ಮ ಗುರುತನ್ನು ಅಲ್ಲಿನ ಸರಕಾರದ ಮುಂದೆ ಬೇಡಿಕೆ ಇಟ್ಟೇ ಉಳಿಸಿಕೊಳ್ಳುವಂತಹ ಸನ್ನಿವೇಶ ಟರ‍್ಕಿಯಲ್ಲಿ ಹಿಂದಿನಿಂದಲೂ ಇತ್ತು ಮತ್ತು ಅದು ಇಂದಿಗೂ ಮುಂದುವರೆಯುತ್ತಿದೆ. 1980ರ ಸಮಯ ಮತ್ತು ಆಸುಪಾಸಿನಲ್ಲಿ ಟರ‍್ಕಿಯಲ್ಲಿ ಕುರ‍್ಡಿಶ್ ನುಡಿಯಾಡುವವರಿಗೆ ಅವರ ನುಡಿಯನ್ನಲ್ಲದೆ ಅವರ ಗುರುತನ್ನೂ ನಿರಾಕರಿಸಲಾಗುತ್ತಿತ್ತು. ನಾವು ‘ಕುರ್‍ಡ್’ರು ಎಂದು ಹೊರಗಡೆ ಹೇಳದಿರುವಂತೆ ತಮ್ಮ ಮಕ್ಕಳಿಗೆ ತಂದೆ-ತಾಯಂದಿರು ಹೇಳಿಕೊಡುವ ಪಾಡು ಕುರ‍್ಡಿಶ್ ಮಂದಿಯದ್ದಾಗಿತ್ತು. ಕುರ‍್ಡಿಶ್ ನುಡಿಯಾಡುವವರು ಆ ನುಡಿಯಲ್ಲಿ ಮಾತಾಡುವಾಗ ಗಟ್ಟಿಯಾಗಿ ಮಾತಾಡದೇ ಮೆಲುದನಿಯಲ್ಲೇ ಮಾತಾಡುವಂತಿದ್ದು, ಅದನ್ನು ‘ಪಿಸುಗುಡುವ ನುಡಿ‘ (whispering language) ಎಂದೇ ಕರೆಯುತ್ತಿದ್ದರು ಎಂದು ಹೇಳಲಾಗುತ್ತದೆ. ಮೆಲುದನಿಯಲ್ಲಿ ಯಾಕೆ ಮಾತಾಡಬೇಕು ಎಂದು ಯಾರಾದರೂ ಕೇಳಿದರೆ, ‘ಕುರ‍್ಡಿಶ್ ನುಡಿಯೇ ಹಾಗೆ, ಅದು ಮೆಲುದನಿಯ ನುಡಿ’ ಎಂಬ ಉತ್ತರ ಕೊಡುವಂತ ಕಾಲವೂ ಇತ್ತು ಎಂದು ಕೆಲವರು ಹೇಳುತ್ತಾರೆ. ಕುರ‍್ಡಿಶ್ ನುಡಿಯಾಡುವವರನ್ನು ಟರ‍್ಕಿಯವರು ತಮ್ಮ ಸಿನೆಮಾಗಳಲ್ಲಿ ಅಣಕಿಸುವುದು, ಕುರ‍್ಡಿಶ್ ಸಂಗೀತದ ಕ್ಯಾಸೆಟ್ ಹೊಂದಿರುವುವರನ್ನು ಸೆರೆಮನೆಗೆ ಅಟ್ಟುತ್ತಿದ್ದದ್ದೂ ನಡೆದಿತ್ತು. ಆದರೆ ಕಾಲ ಸರಿಯುತ್ತಾ, ಕುರ‍್ಡಿಶ್ ಮಂದಿಯಲ್ಲಿ ತಮ್ಮ ಸಾಂಸ್ಕ್ರುತಿಕ ಮತ್ತು ರಾಜಕೀಯ ಹಕ್ಕುಗಳ ಅರಿವು ಮೂಡುತ್ತಿದ್ದಂತೆ ಮೆಲುದನಿಯ ನುಡಿ ಟರ‍್ಕಿಯಲ್ಲಿ ಜೋರಾಗಿ ಕೇಳುವಂತ ಗಟ್ಟಿದನಿ ನುಡಿಯಾಗಿ ಬದಲಾಯಿತು ಎಂದು ತಿಳಿದು ಬಂದಿದೆ.

ಟರ‍್ಕಿ ನಾಡಿನಲ್ಲಿ ಶೇ 70-75 ರಶ್ಟು ಟರ‍್ಕಿಶ್ ನುಡಿಯಾಡುವವರಿದ್ದರೆ ಶೇ 18 ರಶ್ಟು ಕುರ‍್ಡಿಶ್ ನುಡಿಯಾಡುವವರಿದ್ದಾರೆ. ಟರ‍್ಕಿಯ ಮಂದಿಯೆಣಿಕೆ ಸುಮಾರು ಏಳೂವರೆ ಕೋಟಿಯಿದ್ದು ಅದರಲ್ಲಿ ಸುಮಾರು 13 ಮಿಲಿಯನ್ ಅಂದರೆ ಒಂದು ಕೋಟಿ ಮೂವತ್ತು ಲಕ್ಶ ಮಂದಿ ಕುರ‍್ಡಿಶ್ ನುಡಿಯಾಡುವವರಿದ್ದಾರೆ ಎಂದು ಹೇಳಲಾಗುತ್ತದೆ. ಕುರ‍್ಡಿಶ್ ನುಡಿಯಲ್ಲಿ ಕಲಿಕೆ ಅಲ್ಲಿಲ್ಲ ಮತ್ತು ಮೊದಲು, ಕುರ‍್ಡಿಶ್ ನುಡಿಯನ್ನು ಒಂದು ನುಡಿಯಾಗಿಯೂ ಅಲ್ಲಿನ ಶಾಲೆಗಳಲ್ಲಿ ಕಲಿಸುತ್ತಿರಲಿಲ್ಲ. ಕಾರಣ, ಟರ‍್ಕಿಯ ಕಟ್ಟಳೆಕಂತೆ (constitution) ಟರ‍್ಕಿಶ್ ನುಡಿಗಶ್ಟೇ ಅದಿಕ್ರುತ ನುಡಿಯ ಸ್ತಾನಮಾನ ಕೊಟ್ಟಿದೆ. ಟರ‍್ಕಿಶ್ ನುಡಿಯೊಂದನ್ನು ಬಿಟ್ಟು ಬೇರೆ ನುಡಿಯಲ್ಲಿ ಸರಕಾರಿ ಮತ್ತು ಕಾಸಗಿ ಶಾಲೆಗಳಲ್ಲಿ ಕಲಿಸುವ ಹಾಗೇ ಇಲ್ಲ ಎಂಬ ಕಟ್ಟಳೆಯೂ ಅಲ್ಲಿತ್ತು. ಆದರೆ ಕುರ‍್ಡಿಶ್ ಮಂದಿಯ ಸತತವಾದ ಹೋರಾಟದಿಂದ ಸೆಪ್ಟೆಂಬರ್‍ 2013ರಂದು ಟರ‍್ಕಿ ಸರಕಾರವು ‘ಡೆಮಾಕ್ರಟಯ್ಸೇಶನ್ ಪ್ಯಾಕೇಜ್‘ ಎಂಬ ಹಮ್ಮುಗೆಯಡಿ ಕುರ‍್ಡಿಶ್ ನುಡಿಯನ್ನು ಸರಕಾರಿ ಹಾಗೂ ಕಾಸಗಿ ಶಾಲೆಗಳಲ್ಲಿ ಒಂದು ಆಯ್ಕೆಯಾಗಿ ಕೊಡುವಂತೆ ಮತ್ತು ಕಾಸಗಿ ಶಾಲೆಗಳಲ್ಲಿ ಕುರ‍್ಡಿಶ್ ನುಡಿಯಲ್ಲೇ ಕಲಿಸುವಂತೆ ಕಟ್ಟಳೆಗಳನ್ನು ಸಡಲಿಸಲಾಯಿತು.

ಕಾಸಗಿ ಶಾಲೆಗಳನ್ನು ತೆರೆಯಲು ಟರ್‍ಕಿ ಸರಕಾರ ನೀಡಿರುವ ಕಟ್ಟಲೆಗಳಂತೆ ಕುರ‍್ಡಿಶ್ ಮಂದಿ ನಡೆದುಕೊಂಡಿಲ್ಲ, ಆದರಿಂದ ಆ ಕಾಸಗಿ ಶಾಲೆಗಳನ್ನು ಮುಚ್ಚುತ್ತಿದ್ದೇವೆ ಎಂಬ ನೆಪವನ್ನು ಅಲ್ಲಿನ ಸರಕಾರದವರು ನೀಡುತ್ತಿದ್ದಾರೆ. ಆದರೆ ಕುರ‍್ಡಿಶ್ ಮಂದಿ ಬೇಡಿಕೆ ಸರಕಾರೀ ಶಾಲೆಗಳಲ್ಲೂ ಕುರ‍್ಡಿಶ್ ನುಡಿಯಲ್ಲೇ ಕಲಿಸುವುದಾಗಿದ್ದು, ಅವರ ಸದ್ಯದ ಹೋರಾಟ ಟರ‍್ಕಿಯ ಕಟ್ಟಳೆಕಂತೆಯ ಬದಲಾವಣೆ ಕುರಿತಾಗಿದೆ. ಇದು ಅಲ್ಲಿನ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಆದರಿಂದ ಕುರ‍್ಡಿಶ್ ಕಾಸಗಿ ಶಾಲೆಗಳನ್ನು ಮುಚ್ಚುವ ಸರಕಾರದ ಆದೇಶದ ಹಿಂದಿನ ಕಾರಣಗಳನ್ನು ಸುಳುವಾಗಿ ಊಹಿಸಬಹುದಾಗಿದೆ. ತಮ್ಮ ಹಕ್ಕುಗಳನ್ನು ಯಾವಾಗಲೂ ಹೋರಾಟದ ಮೂಲಕವೇ ಪಡೆದುಕೊಳ್ಳುವ ಕುರ‍್ಡಿಶ್ ಮಂದಿ ಈ ಹೋರಾಟದಲ್ಲಿ ಗೆಲುವು ಪಡೆಯುವರೇ ಎಂದು ಕಾದು ನೋಡಬೇಕಿದೆ.

( ಮಾಹಿತಿ ಸೆಲೆ: wiki-turkeykurdish-identity, kurds-educationtodayszaman.comhrw.org )

(ಚಿತ್ರ ಸೆಲೆ:  azadiya.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: