ಡಾಲ್ಪಿನ್‍ಗಳ ಸಿಳ್ಳೆ ಮತ್ತು ಜೀವನ

– ಡಾ. ರಾಮಕ್ರಿಶ್ಣ ಟಿ.ಎಮ್.

dolphin

ಡಾಲ್ಪಿನ್‍ಗಳು ಸಮುದ್ರದಲ್ಲಿ ವಾಸಿಸಿದರೂ ಸಹ ಮರುಬೂಮಿಯಲ್ಲಿ ವಾಸಿಸುವ ಜೀವಿಗಳಂತೆ ವಾಸಿಸುತ್ತವೆ. ಅವು ನೀರನ್ನು ಕುಡಿಯುವುದಿಲ್ಲ. ಡಾಲ್ಪಿನ್‍ಗಳಿಗೆ ಬೇಕಾಗುವಶ್ಟು ನೀರನ್ನು ಆವುಗಳ ತಿನ್ನುವ ಆಹಾರದಿಂದಲೇ ಪೂರೈಸಿಕೊಳ್ಳುತ್ತವೆ. ಡಾಲ್ಪಿನ್‍ಗಳು ವಿವಿದ ರೀತಿಯ ಮೀನುಗಳನ್ನು ತಿಂದು ಬದುಕುತ್ತವೆ. ಅವುಗಳು ತಿಂದ ಆಹಾರದಲ್ಲಿನ ಕೊಬ್ಬನ್ನು ಜೀರ‍್ಣಿಸಿಕೊಳ್ಳುವ ಕೆಲಸದಲ್ಲಿ ಉತ್ಪತ್ತಿಯಾದ ನೀರನ್ನು ಬಳಸಿಕೊಳ್ಳುತ್ತವೆ.

ಪ್ರಾಣಿಗಳ ವರ‍್ಗೀಕರಣದ ಪ್ರಕಾರ – ಡಾಲ್ಪಿನ್, ತಿಮಿಂಗಲ ಮತ್ತು ಕಿಲ್ಲರ್ ತಿಮಿಂಗಿಲಗಳು ಡಾಲ್ಪಿನ್ ಕುಟುಂಬಕ್ಕೆ ಸೇರುತ್ತವೆ. ಡಾಲ್ಪಿನ್‍ಗಳು ಗುಂಪಿನಲ್ಲಿ ಜೀವಿಸುತ್ತವೆ. ಆ ಗುಂಪಿಗೆ ಡಾಲ್ಪಿನ್‍ಗಳ ಕಟ್ಟು(Pack of Dolphins)ಗಳೆಂದು ಹೆಸರು. ಇಂತಹ ಡಾಲ್ಪಿನ್‍ಗಳ ಗುಂಪು ಒಟ್ಟಿಗೆ ದೊಡ್ಡ ತಿಮಿಂಗಲನ್ನು ಕೊಲ್ಲಬಲ್ಲವು.

dolphin-2ಡಾಲ್ಪಿನ್ ಬಾಯಲ್ಲಿ 260 ಹಲ್ಲುಗಳಿರುತ್ತವೆ. ಈ ತರಹದ, ಹೆಚ್ಚು ಹಲ್ಲುಗಳಿರುವ ಪ್ರಾಣಿ ಯಾವುದೇ ಸಸ್ತನಿ ಪ್ರಾಣಿಗಳಲ್ಲಿ ಸಿಗುವುದಿಲ್ಲ. ಈ ಹಲ್ಲುಗಳು ಆಹಾರವನ್ನು ಜಗಿದು ತಿನ್ನುವುದಕ್ಕೆ ಪ್ರಯೋಜನವಿಲ್ಲ ಆದರೆ ಈ ಹಲ್ಲುಗಳು ನುಂಗಿದ ಪ್ರಾಣಿಯನ್ನು ದವಡೆಯಿಂದ ತಪ್ಪಿಸಿಕೊಂಡು ಹೋಗದಂತೆ ಸಹಕರಿಸುತ್ತವೆ. ಡಾಲ್ಪಿನ್‍ಗಳ ಬಾಯಲ್ಲಿ ಜೀರ‍್ಣಕಾರ‍್ಯ ನಡೆಯುವುದಿಲ್ಲ ಆದ ಕಾರಣ ತಿಂದ ಆಹಾರವನ್ನು ಹಾಗೆಯೇ ನುಂಗಿಬಿಡುತ್ತವೆ.

ಡಾಲ್ಪಿನ್‍ಗಳು ನಿದ್ದೆಮಾಡುವಾಗ ಮಿದುಳಿನ ಅರ‍್ದ ಬಾಗ ಸುಪ್ತವಾಗಿದ್ದರೆ, ಇನ್ನರ‍್ದ ಬಾಗ ಎಚ್ಚರಿಕೆಯಿಂದ ಕೆಲಸ ಮಾಡುತ್ತದೆ. ಈ ಎಚ್ಚರಿಕೆಯ ಮಿದುಳಿನ ಬಾಗ, ಕೊಂದು ತಿನ್ನುವ ಪ್ರಾಣಿಗಳಿಂದ ತೊಂದರೆ ಬರಬಹುದೆಂಬ ಕಾರಣದಿಂದ ಜಾಗ್ರತೆಯಾಗಿರುತ್ತದೆ. ಜತೆಗೆ ಎಚ್ಚರವಿರುವ ಮಿದುಳಿನ ಬಾಗ, ಉಸಿರಾಡಲು ನೀರಿನ ಮೇಲ್ಮೈಗೆ ಬರಬೇಕೆಂದು ನೆನಪು ಮಾಡಿಕೊಡುತ್ತದೆ. ಎರಡು ಗಂಟೆಗಳು ಕಳೆದ ನಂತರ ಸುಪ್ತವಾದ ಮಿದುಳು ಜಾಗ್ರತಗೊಳ್ಳುತ್ತದೆ ಮತ್ತು ಜಾಗ್ರತೆಯಿಂದಿದ್ದ ಮಿದುಳು ಸುಪ್ತ ಸ್ತಿತಿಗೆ ಹೋಗುತ್ತದೆ. ಈ ತರಹದ ನಿಯಮವನ್ನು ಪಾಲಿಸುವ ಮಿದುಳಿಗೆ ’ಲ್ಯಾಗಿಂಗ್’ (lagging) ಎಂದು ಕರೆಯುತ್ತಾರೆ.

ವಿಯೆಟ್ನಾಮ್ ಯುದ್ದದ ಬಳಿಕ ಅಮೇರಿಕಾ ಯುದ್ದ ನೌಕೆಯಲ್ಲಿ ಡಾಲ್ಪಿನ್‍ಗಳನ್ನು ಯುದ್ದ ಕಾರ‍್ಯದಲ್ಲಿ ತೊಡಗಿಸಿಕೊಂಡಿದ್ದಾರೆಂಬ ಪ್ರತೀತಿಯಿದೆ. ಇತ್ತೀಚೆಗೆ ಅಮೇರಿಕಾದ ನೌಕಾಪಡೆಯಲ್ಲಿ 100ಕ್ಕೂ ಹೆಚ್ಚು ಡಾಲ್ಪಿನ್‍ಗಳಿಗೆ ಮತ್ತು ಸಮುದ್ರದಲ್ಲಿ ಜೀವಿಸುವ ಇತರೆ ಸಸ್ತನಿಗಳು ಮತ್ತು ಸಮುದ್ರ ಸಿಂಹಗಳಿಗೆ ಯುದ್ದ ಮಾಡಲು ತರಬೇತಿ ಕೊಟ್ಟಿದ್ದಾರೆಂದು ತಿಳಿದುಬಂದಿದೆ. ವಿಶೇಶವಾಗಿ ಡಾಲ್ಪಿನ್‍ಗಳಿಗೆ ಮನುಶ್ಯರಂತೆ ಕಲಿಯುವ ಸಾಮಾರ‍್ತ್ಯವಿದೆಯೆಂಬ ವಿಶಯ ಗೊತ್ತಾಗಿದೆ.

ಬಾಟಲ್ ನೊಸ್ ಎಂಬ ಡಾಲ್ಪಿನ್ ಗಳಲ್ಲಿ ಕೈಗೊಂಡ ಸಂಶೋದನೆಯಿಂದ ಒಂದು ವಿಶೇಶವಾದ ಸಂಗತಿ ಪತ್ತೆಯಾಗಿದೆ ಅದೆಂದರೆ ಸುಮಾರು ನಾಲ್ಕು ತಿಂಗಳ ಮರಿಗಳಿಂದ ಒಂದು ವರ‍್ಶದ ವಯಸ್ಸಿನ  ಡಾಲ್ಪಿನ್‍ಗಳು ಸಿಳ್ಳೆ (Whistle) ಹೊಡೆಯುವುದನ್ನು ಕಲಿತಿರುತ್ತವೆ. ಈ ಸಿಳ್ಳೆಯು ವಿವಿದ ರೀತಿಯದ್ದಾಗಿದ್ದು, ಸಿಳ್ಳೆಯನ್ನು ತನ್ನ ಜೀವನದಲ್ಲಿ ಗುರುತಾಗಿ ಬಳಸುತ್ತವೆ. ಇನ್ನೊಂದು ಗುರುತರವಾದ ಅಂಶವೆಂದರೆ ಡಾಲ್ಪಿನ್‍ಗಳ ಈ ಸಿಳ್ಳೆಯ ಶಬ್ದವು ಮನುಶ್ಯರ ಹೆಸರಿನಂತೆ ಇರುತ್ತದೆ. ಸ್ಟಿಪಾನಿ ಕಿಂಗ್ ಮತ್ತು ವಿನ್ಸೆಂಟ್ ಜಾನಿಕ್ ಎಂಬ ಸಮುದ್ರ ಸಸ್ತನಿಗಳ ತಜ್ನರು ಈ ವಿಶಯವನ್ನು ಕಂಡುಕೊಂಡಿದ್ದಾರೆ.

ಇದಕ್ಕೆ ಸಂಬಂದಪಟ್ಟ ಸಂಶೋದನೆಗಳು ಹೀಗಿವೆ: ಆಲೈ ಮತ್ತು ಬೈಲಿ ಎಂಬ ಎರಡು ಡಾಲ್ಪಿನ್‍ಗಳು ಪ್ಲಾರಿಡಾದಲ್ಲಿ ಇಪ್ಪತ್ತು ವರ‍್ಶಗಳ ಕಾಲ ಜತೆಯಲ್ಲಿದ್ದವು. ಆಮೇಲೆ ಆಲೈಯನ್ನು ಚಿಕಾಗೊ ಮತ್ತು ಬೈಲಿಯನ್ನು ಬರ‍್ಮುಡಾಕ್ಕೆ ಸ್ತಳಾಂತರಿಸಲಾಯಿತು. ಅನೇಕ ವರ‍್ಶಗಳ ನಂತರವು ಬೈಲಿ ಡಾಲ್ಪಿನ್ ಆಲೈ ಸ್ನೇಹಿತನ ಸಿಳ್ಳೆಯನ್ನು ಗುರುತಿಸುತ್ತದೆ.

ಅಂದರೆ ಡಾಲ್ಪಿನ್‍ಗಳು ಸಿಳ್ಳೆಯನ್ನು ’ಚಿಹ್ನೆ ಸಿಳ್ಳೆ’ಯಂತೆ, ಮಾನವರು ಬಳಸುವ ಹೆಸರಿನಂತೆ ಬಳಸುತ್ತವೆಂದು ತಿಳಿಯುತ್ತದೆ. ಹೆಣ್ಣು ಡಾಲ್ಪಿನ್ ಗಳು ಈ ’ಚಿಹ್ನೆ ಸಿಳ್ಳೆ’ ಯನ್ನು ಚೆನ್ನಾಗಿ ಗುರುತಿಸುತ್ತವೆಂದು ಮತ್ತು ಗಂಡು ಡಾಲ್ಪಿನ್‍ಗಳು ಶಿಳ್ಳೆ ಗುರುತಿಸುವಲ್ಲಿ ಅಶ್ಟು ಪ್ರಬುದ್ದವಾಗಿರುವುದಿಲ್ಲವೆಂದು ಈ ಸಂಶೋದನೆಯಲ್ಲಿ ತಿಳಿದುಬಂದಿದೆ.

ಬ್ರೂಕ್ ಎಂಬ ಇನ್ನೊಬ್ಬ ಸಸ್ತನಿ ಪ್ರಾಣಿಗಳ ಸಂಶೋದಕ ಆರು ಡಾಲ್ಪಿನ್ ಸಂತಾನಬಿವ್ರುದ್ದಿ ಕೇಂದ್ರಗಳಿಂದ 50 ಡಾಲ್ಪಿನ್‍ಗಳ ಬಗ್ಗೆ ಅದ್ಯಯನವನ್ನು ಮಾಡುತ್ತಾನೆ. ಈ ಕೇಂದ್ರಗಳಲ್ಲಿ ಡಾಲ್ಪಿನ್‍ಗಳನ್ನು ಒಂದು ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ಬದಲಾಯಿಸುತ್ತಾ ಇರುತ್ತಾನೆ. ಯಾವ ಡಾಲ್ಪಿನ್ ಜತೆಗೆ ಯಾವ ಡಾಲ್ಪಿನ್‍ಗಳಿದ್ದವು ಮತ್ತು ಯಾವ ಕಾಲದಲ್ಲಿ ಇದ್ದುವೆಂದು ಅವುಗಳು ಗ್ರಹಿಸುತ್ತವೆಂದು, ’ಸಿಳ್ಳೆಯೇ’ ಬಾಟಲ್ ನೊಸ್ ಡಾಲ್ಪಿನ್ (Bottle nose Dolphin)ಗಳ ಸಂಗಾತಿಯ ಗುರುತು ಎಂದು ಆತ ಕಂಡುಕೊಂಡಿದ್ದಾನೆ.

(ಚಿತ್ರಸೆಲೆಗಳು: passion4pearl.wordpress.com, www.pbs.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: