ಬದಲಾವಣೆ

ಬಸವರಾಜ್ ಕಂಟಿ.

princi

ಪ್ರಿನ್ಸಿಪಾಲ್ ಪಾಂಡುರಂಗ ದೇಸಾಯಿಯೆಂದರೆ ತುಂಬಾನೇ ಸ್ಟ್ರಿಕ್ಟು ಅಂತ ಆ ಕಾಲೇಜಿನಲ್ಲಶ್ಟೇ ಅಲ್ಲದೇ ಕಾಲೇಜಿನ ಸುತ್ತಮುತ್ತಲಿನ ಜನಕ್ಕೆಲ್ಲ ಗೊತ್ತು. ಕಾಲೇಜಿನ ಹೊರಗಡೆ ಇರುವ ಬೀಡಾ ಅಂಗಡಿಯ ಎದುರುಗಡೆ ಹುಡುಗರು ಗುಂಪು ಕಟ್ಟಿಕೊಂಡು ಸಿಗರೇಟು ಸೇದುವುದನ್ನು ಇವರು ನೋಡಿ, ಪೊಲೀಸರಿಗೆ ದೂರು ಕೊಟ್ಟು, ಪೊಲೀಸರು ಬಂದು ಅಲ್ಲಿದ್ದ ಹುಡುಗರಿಗೆಲ್ಲ ದಂಡ ಹಾಕಿದ ಮೇಲಂತೂ ಇವರನ್ನು ಕಂಡರೆ ಅಂಗಡಿಯವರಿಗೂ ಹೆದರಿಕೆ ಶುರುವಾಗಿತ್ತು. ಎಲ್ಲಿ ತಮ್ಮ ಅಂಗಡಿಯಗಳನ್ನೇ ಎತ್ತಂಗಡಿ ಮಾಡಿಸಿಬಿಡುತ್ತಾರೋ ಎಂದು. ಪ್ರಿನ್ಸಿಪಲ್ ದೇಸಾಯಿಯರೆಂದರೆ ಹಾಗೆಯೇ. ಅವರ ವ್ಯಕ್ತಿತ್ವವನ್ನು ಅವರ ಮಯ್ಯ ಎಲ್ಲ ಅಂಗಗಳೂ ಸಾರಿ ಸಾರಿ ಹೇಳುತ್ತಿದ್ದವು. ಸ್ವಾಬಿಮಾನ ತುಂಬಿದ ಕಣ್ಣುಗಳು. ನೇರ, ದಿಟ್ಟ ಮಾತುಗಳು. ಉಬ್ಬಿದ ಎದೆ, ಎಂದಿಗೂ ಬಾಗದ ತಲೆ. ಅವರು ತೊಡುತ್ತಿದ್ದ ಉಡುಪುಗಳೂ ಅವರ ವ್ಯಕ್ತಿತ್ವಕ್ಕೆ ಇಂಬು ಕೊಡುತ್ತಿದ್ದವು. ಅವರು ಕಾಲೇಜಿಗೆ ಒಂದು ದಿನವೂ ಟಾಯಿ, ಕೋಟು ತೊಡದೆ ಬಂದವರಲ್ಲ. ತಮ್ಮ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯಿರುವುದಶ್ಟೇ ಅಲ್ಲದೇ, ಇತರರಿಗೂ ಮಾದರಿಯಾಗಿರಬೇಕೆಂದು ಬಯಸುತ್ತಿದ್ದರು. ಅವರ ಬಿಗುವಿನ ನಡತೆಯಿಂದಾಗಿಯೇ ಅವರಿಗೆ ಕಾಲೇಜಿನಲ್ಲಿ ಯಾರೊಂದಿಗೂ ಸಲುಗೆಯಿರಲಿಲ್ಲ, ತಮ್ಮ ಹಳೆಯ ಗೆಳೆಯ ವೆಂಕನನ್ನು ಬಿಟ್ಟು. ವೆಂಕ ಮತ್ತು ಪ್ರಿನ್ಸಿಪಾಲ್ ಸಾಹೇಬರು ಅವರ ಕಾಲೇಜಿನ ದಿನಗಳಿಂದಲೂ ಪರಿಚಿತರು. ಇಪ್ಪತ್ತು ಏಡುಗಳ (years) ಗೆಳೆತನ. ತಾವಿಬ್ಬರೇ ಇರುವಾಗ ಹೋಗೋ, ಬಾರೋ ಎನ್ನುವಶ್ಟು.

ಆ ದಿನ ಪ್ರಿನ್ಸಿಪಾಲ್ ಸಾಹೇಬರು ಬೆಳಗ್ಗೆ ಲೇಟಾಗಿ ಎದ್ದಿದ್ದರು. ಹಿಂದಿನ ದಿನ ಯಾವುದೋ ಹೊತ್ತಗೆ ಓದುತ್ತ ತುಂಬ ತಡವಾಗಿ ಮಲಗಿದ್ದರು. ಅವತ್ತು ಅವರು ಕೊನೆ ಸೆಮಿಸ್ಟರ್ ಹುಡುಗರಿಗೆ ಪಾಟ ಮಾಡಬೇಕಿತ್ತು. ಅದರ ನಂತರ ಯುನಿವರ‍್ಸಿಟಿಯವರೊಂದಿಗೆ ಮಾತುಕತೆ ಬೇರೆ. ಲಗುಬಗೆಯಿಂದ ಸ್ನಾನ ಮಾಡಿ, ಕೆಲಸದವಳು ಮಾಡಿ ಕೊಟ್ಟ ತಿಂಡಿ ಮುಗಿಸಿ, ಕಾರು ಹತ್ತಿದರು. ಆಗಲೇ ಗಾಡಿಗಳ ದಟ್ಟಣೆ ಶುರುವಾಗಿತ್ತು. ಕಾರು ಓಡಿಸಿಕೊಂಡು ಕಾಲೇಜಿಗೆ ಬಂದರು. ನಿಲುಗಡೆ ಜಾಗದಲ್ಲಿ ಕಾರನ್ನು ನಿಲ್ಲಿಸಿ, ಇನ್ನೇನು ಇಳಿಯಬೇಕೆನ್ನುವಾಗಲೇ ಅವರು ತಮ್ಮ ಕಾಲಿಗೆ ಶೂ ಬದಲು ಮನೆಯಲ್ಲಿ ತೊಡುವ ಹವಾಯಿ ಚಪ್ಪಲಿ ಹಾಕಿಕೊಂಡು ಬಂದದ್ದು ನೋಡಿಕೊಂಡರು. ಅವರ ಮುಕ ಪೆಚ್ಚಾಯಿತು. ತಮ್ಮ ಮರೆವಿಗೆ ಶಾಪಹಾಕಿದರು. ಅವರೇನು ಮರೆಗುಳಿಗಳಲ್ಲ. ಆದರೆ ಅವತ್ತು ಗಡಿಬಿಡಿಯಲ್ಲಿ ಹೀಗೆ ಆಗಿಬಿಟ್ಟಿತ್ತು. ತಕ್ಶಣ ಏನು ಮಾಡಬೇಕೆಂದು ಅವರಿಗೆ ಹೊಳೆಯಲಿಲ್ಲ. ಮರಳಿ ಮನೆಗೆ ಹೋಗಿ ಶೂ ಹಾಕಿಕೊಂಡು ಬರಬೇಕೆನಿಸಿತು. ಆದರೆ ಆ ದಟ್ಟಣೆಯಲ್ಲಿ ಗಾಡಿಯನ್ನು ಓಡಿಸಿಕೊಂಡು ಹೋಗಿಬರುವಶ್ಟು ಸಮಯ, ತಾಳ್ಮೆ ಅವರಿಗೆ ಇರಲಿಲ್ಲ. ರಜೆ ಹಾಕಿ, ಇತ್ತಿಂದಿತ್ತಲೇ ಮನೆಗೆ ಹೋದರೆ? ಹೇಳಿಕೊಡುವ ಪಾಟ ತಪ್ಪಿಸಿದ ಪ್ರಸಂಗ ಅವರ ಹಳಮೆಯಲ್ಲೇ ಇಲ್ಲ. ಅಲ್ಲದೇ ಯುನಿವರ‍್ಸಿಟಿಯವರೊಂದಿಗೆ ಮಾತುಕತೆಯ ದಿನವನ್ನು ಅವರೇ ಗೊತ್ತು ಮಾಡಿದ್ದರು. ಕಾಲೇಜಿಗೆ ಬಂದು, ನೆಪ ಹೇಳಿ, ಮರಳಿ ಮನೆಗೆ ಹೋದರೆ ತಮ್ಮ ಹೆಸರಿಗೆ ಕಳಂಕ ಬರುವುದಿಲ್ಲವೇ? ಹೋಗಲಿ, ಅದೇ ಚಪ್ಪಲಿಯಲ್ಲೇ ಇಡೀ ದಿನ ಇರಬಹುದು. ಆದರೆ, ಚಪ್ಪಲಿ ಹಾಕಿಕೊಂಡು ಕಾಲೇಜಿನಲ್ಲಿ ಓಡಾಡಿದರೆ, ಹುಡುಗರು, ಕಲಿಸುಗರು ನಗುವುದಿಲ್ಲವೇ? ತಮ್ಮ ಮುಂದೆ ನಗದಿದ್ದರೂ, ಬೆನ್ನ ಹಿಂದೆ ಕಂಡಿತ ನಗುತ್ತಾರೆ. ಕಲಿಸುಗರು ಟಾಯಿ ಕಟ್ಟಿಕೊಂಡು ಶಿಸ್ತಾಗಿ ಉಡುಪು ತೊಟ್ಟು ಬರಬೇಕೆಂದು ತಾವೇ ಅಪ್ಪಣೆ ಮಾಡಿದ್ದರು. ಈಗ ತಾವೇ ಹೀಗೆ ಚಪ್ಪಲಿ ಹಾಕಿಕೊಂಡು ಓಡಾಡಿದರೆ, ಅವರಿಗೆಲ್ಲ ಸಲುಗೆ ಕೊಟ್ಟಂತಾಗುತ್ತದೆ. ಯಾಕಾದರೂ ಆ ರೀತಿ ಅಪ್ಪಣೆ ಮಾಡಿದೆನೋ ಎಂದುಕೊಂಡರು. ಏನು ಮಾಡಬೇಕೆಂದು ಗೊತ್ತಾಗದೆ ಕಾರಿನಲ್ಲಿಯೇ ಕುಳಿತು, ತಲೆ ಕೆಳಗಾಕಿ, ಕಾಲಿನಲ್ಲಿದ್ದ ಚಪ್ಪಲಿಗಳನ್ನು ನೋಡಿದರು. ತಮ್ಮ ಇಡೀ ವ್ಯಕ್ತಿತ್ವವನ್ನೇ ಕೇವಲವಾದ ಚಪ್ಪಲಿಯು ಬಲಿ ತೆಗೆದುಕೊಂಡಿತಲ್ಲಾ ಎನಿಸಿತು.

ಸಾಹೇಬರು ಕಾರು ನಿಲ್ಲಿಸಿ ಅಯ್ದು ನಿಮಿಶವಾದರೂ ಹೊರಗೆ ಬಾರದ್ದನ್ನು ಗಮನಿಸಿದ ಸೆಕ್ಯುರಿಟಿಯವನು ನಿದಾನವಾಗಿ ಕಾರಿನ ಹತ್ತಿರ ಬಂದು ಬಾಗಿಲ ಬಳಿ ನಿಂತನು. ಸ್ಟೇರಿಂಗ್ ಹಿಡಿದು ತಲೆ ಕೆಳಗಾಕಿ ಕೂತಿದ್ದ ಸಾಹೇಬರನ್ನು ಗೊಂದಲದಿಂದ ನೋಡಿ, “ಸಾರ‍್” ಎಂದು ಮೆಲುದನಿಯಲ್ಲಿ ಕೂಗಿದನು. ಸಮಸ್ಯೆಗೆ ಪರಿಹಾರ ಹೊಳೆಯದೆ ಆಳವಾಗಿ ಯೋಚಿಸುತ್ತಿದ್ದ ಸಾಹೇಬರು, ಸೆಕ್ಯುರಿಟಿವಯನ ಕೂಗು ಕೇಳಿ ಎಚ್ಚರಗೊಂಡರು. ತಾನು ಕಾರಿಂದ ಇಳಿಯದಿದ್ದುದನ್ನು ನೋಡಿ ಇವನು ಇಲ್ಲಿ ಬಂದು ನಿಂತಿದ್ದಾನೆ ಎನ್ನುವುದನ್ನು ಊಹಿಸಿದರು. ಈಗ ಅನಿವಾರ‍್ಯವಾಗಿ ಕೆಳಗೆ ಇಳಿಯಬೇಕಾಯಿತು, ಏನೂ ಆಗಿಲ್ಲ ಅನ್ನುವಂತೆ ತೋರ‍್ಪಡಿಸಲು. ಪಕ್ಕದಲ್ಲಿದ್ದ ಬ್ಯಾಗನ್ನು ಹಿಡಿದು ಕೆಳಗಿಳಿದರು. ಸೆಕ್ಯುರಿಟಿಯವನು “ನಮಸ್ಕಾರ” ಹೇಳಿದ. ಸಾಹೇಬರು ಪ್ರತಿಯಾಗಿ ತಲೆ ಅಲ್ಲಾಡಿಸಿದರು. ಅವರ ನೋಟ ಸೆಕ್ಯುರಿಟಿಯವನ ಕಾಲಿಗೆ ಹೊರಳಿತು. ಮಿಂಚುತ್ತಿದ್ದ ಕರಿ ಶೂ ತೊಟ್ಟಿದ್ದನು. ಅವನ ಬಟ್ಟೆಯೂ ಹಸನಾಗಿತ್ತು. ಒಂದು ಕ್ಶಣ ಅವನಿಗಿಂತ ತಾನು ಸಣ್ಣವನೆನಿಸಿತು. ತಮ್ಮ ಗೊಂದಲ ತೋರ‍್ಗೊಡದೆ ಸಾಹೇಬರು ಏನೂ ಆಗಿಲ್ಲವೆಂದು ನಟಿಸುತ್ತಾ ತಮ್ಮ ಆಪೀಸಿನೆಡೆಗೆ ನಡೆದರು. ಸೆಕ್ಯುರಿಟಿಯವನು ತನ್ನ ಚಪ್ಪಲಿ ಗಮನಿಸಿದನೋ ಇಲ್ಲವೋ ಎನ್ನುವ ವಿಚಾರ ಅವರ ಮನಸ್ಸಿನಲ್ಲಿ ಕೊರೆಯಲು ಶುರುಮಾಡಿತು. ಮೊದಲಬಾರಿಗೆ ತಲೆ ಕೆಳಗಾಕಿ, ಮುಜುಗರದ ನಡಿಗೆಯಲ್ಲಿ ನೇರ ತಮ್ಮ ಆಪೀಸಿಗೆ ಬಂದರು. ದಾರಿಯುದ್ದಕ್ಕೂ ಎದುರಿಗೆ ಬಂದವರ ಕಾಲಿನ ಮೇಲೆಯೇ ಅವರ ಕಣ್ಣು ನೆಟ್ಟಿದ್ದವು. ಎಲ್ಲರ ಕಾಲಿನಲ್ಲಿಯೂ ಶೂ ಕಂಡಿದ್ದವು. ಪ್ರೊಪೆಸ್ಸರ್ ಗಳ ಕಾಲುಗಳಲ್ಲಿ ಹೊಳೆಯುವ ಕರಿ, ಕಂದು ಬಣ್ಣದ ಬೂಟುಗಳಿದ್ದರೆ, ಹುಡುಗರ ಕಾಲಿನಲ್ಲಿ ಬಣ್ಣ ಬಣ್ಣದ ಶೂಗಳು. ಕೆಲವು ಹುಡುಗಿಯರೂ ಶು ಹಾಕಿಕೊಂಡಿದ್ದು ಕಾಣಿಸಿತು. ತನ್ನ ಉಡುಪಿಗೆ ಹೊಂದಿಕೆಯಾಗದ ಚಪ್ಪಲಿ ತೊಟ್ಟಿದ್ದರಿಂದ ಅವರೆಲ್ಲರ ನಡುವೆ ತಾನು ಬೇರೆ ಲೋಕದ ಜೀವಿ ಎನಿಸಿತ್ತು ಸಾಹೇಬರಿಗೆ.

ತಮ್ಮ ಕೋಣೆಗೆ ಬಂದು ಮೇಜಿನ ಮುಂದೆ ಇರುವ ಕುರ‍್ಚಿಯಲ್ಲಿ ಕುಂತಾಗಲೇ ತುಸು ಸಮಾದಾನ ಎನಿಸಿದ್ದು. ಏನು ಮಾಡಬೇಕೆಂದು ಇನ್ನೂ ತೀರ‍್ಮಾನಿಸಿರಲಿಲ್ಲ. ತಕ್ಶಣ ಗೆಳೆಯ ವೆಂಕನ ನೆನಪಾಯಿತು. ಅವನ ಹತ್ತಿರ ಹೇಳಿಕೊಳ್ಳಲು ಯಾವ ಮುಜುಗರವೂ ಇರಲಿಲ್ಲ. ಗಂಟೆ ಒತ್ತಿ ಅಟೆಂಡರ್ ನನ್ನು ಕರೆದರು.

“ಪ್ರೊಪೆಸರ್ ವೆಂಕಟೇಶ್ ಬಂದಿದ್ದಾರಾ?”

“ಬಂದಿದಾರೆ ಸರ‍್”. ವೆಂಕ ಕಾಲೇಜಿಗೆ ಬಂದಿದ್ದಾನೆ ಎನ್ನುವುದನ್ನು ಕೇಳಿಯೇ ಮನಸ್ಸಿಗೆ ಎಶ್ಟೋ ಸಮಾದಾನವಾಯಿತು.

“ಬರೋಕ್ ಹೇಳಿ” ಎಂದು ನಿಟ್ಟುಸಿರು ಬಿಟ್ಟು ಕುಳಿತರು ಸಾಹೇಬರು.

ಸ್ವಲ್ಪ ಸಮಯದಲ್ಲೇ ವಂಕಟೇಶ್ ಬಂದರು. ತಾವಿಬ್ಬರೇ ಇರುವುದನ್ನು ಅರಿತು, “ಏನೋ?” ಎಂದು ಕೇಳಿದರು. “ಇಲ್ಲಿ ಬಾ” ಎಂದು ತಮ್ಮ ಪಕ್ಕಕ್ಕೆ ಕರೆದ ಸಾಹೇಬರು, ಕಾಲು ತೋರಿಸಿದರು. ವೆಂಕಟೇಶ್ ಅವರಿಗೆ ಹೊಳೆಯಲಿಲ್ಲ. ಸಾಹೇಬರ ಕಾಲನ್ನೇ ನೋಡುತ್ತಾ, “ಏನು?” ಎಂದರು.

“ನನ್ ಕಾಲ್ ನೋಡು”

“ಏನಾಗಿದೆ ಕಾಲಿಗೆ?”

ಸಾಹೇಬರು ತಾಳ್ಮೆಗೆಟ್ಟು, “ಶೂ ಬದ್ಲು ಚಪ್ಲಿ ಹಾಕೊಂಡ್ ಬಂದಿದೀನಿ” ಎಂದರು.  ತಕ್ಶಣ ಪರಿಸ್ತಿತಿ ಅರಿತ ವೆಂಕಟೇಶ್ ಅವರು ನಗತೊಡಗಿದರು. ಸಾಹೇಬರಿಗೆ ಇರುಸುಮುರಸಾಯಿತು. ನಗುವುದನ್ನು ಕಡಿಮೆಮಾಡಿದ ವೆಂಕಟೇಶ್,

“ಇವತ್ತು ನಿಂಗೆ ಕ್ಲಾಸ್ ಇದೆ ಅಲ್ವಾ?”

ತಲೆ ಕೆಳಗಾಕಿ, “ಹೂಂ” ಎಂದರು.

“ಏನ್ಮಾಡ್ತೀಯಾ ಈಗ?”

“ಏನ್ಮಾಡ್ಬೇಕು ಅಂತ ಗೊತ್ತಿದ್ರೆ ನಿಂಗ್ಯಾಕ್ ಕರಿಸ್ತಿದ್ದೆ?” ಸಾಹೇಬರ ಮುಕ ಬಾಡಿತ್ತು.

“ಯಾರ‍್ನಾದ್ರು ಕಳ್ಸಿ ತರ‍್ಸೋಣ ಇರು” ಎಂದು ವಂಕಟೇಶ್ ಅಟೆಂಡರ್ ನನ್ನು ಕರೆಯಲು ಮುಂದಾದರು.

“ಹೇ! ಇರು” ಎಂದು ವೆಂಕಟೇಶ್ ಅವರನ್ನು ತಡೆದ ಸಾಹೇಬರು, “ಯಾರನ್ನಾ ಕಳಿಸ್ತೀಯಾ? ಬೇಡ. ಯಾರ್ ಹತ್ರಾನೂ ಹೆಲ್ಪ್ ಕೇಳೋದು ನಂಗ್ ಇಶ್ಟಾ ಇಲ್ಲಾ”

ಸಾಹೇಬರ ಗುಣ ಚೆನ್ನಾಗಿ ಅರಿತಿದ್ದ ವೆಂಕಟೇಶ್, “ಯಾಕಪ್ಪಾ? ನಿನ್ಗಿಂತ ಸಣ್ಣವರ ಹತ್ರ ಸಹಾಯ ಕೇಳೋಕೆ ಹಿಂಜರಿಕೆನಾ? ಅತವಾ ಹೀಗಾಗಿದೆ ಅಂತ ಹೇಳಕೊಳ್ಳೋಕೆ ಮುಜುಗರಾನಾ?”

ಸಾಹೇಬರು ಮುಕ ಕೆಳಗಾಕಿದರು. ಅವರ ಮುಕ ನೋಡಿ, ವೆಂಕಟೇಶ್ ಸಮಾದಾನ ಹೇಳಿದರು, “ನೋಡು, ನೀನೇನ್ ತಪ್ಪು ಮಾಡಿಲ್ಲ. ಶೂ ಹಾಕೊಳ್ಳೋದು ಮರ‍್ತ್ ಬಂದಿದೀಯಾ ಅಶ್ಟೇ. ಈಗ ಕ್ಲಾಸ್ ಬೇರೆ ಇದೆ. ಇಲ್ಲಾಂದ್ರೆ ನೀನೆ ಹೋಗಿ ತರಬಹುದಿತ್ತು. ಪ್ರಾಬ್ಲಮ್ ಬಂದಾಗ ನಾವು ಇನ್ನೊಬ್ಬರ ಹತ್ರ ಸಹಾಯ ಕೇಳೋದು ತಪ್ಪಲ್ಲ. ಅದರಿಂದ ನಮ್ ವ್ಯಕ್ತಿತ್ವಕ್ಕೇನೂ ದಕ್ಕೆ ಬರೋದಿಲ್ಲ, ಬದಲಾಗಿ ಅವ್ರಿಗೆ ಹತ್ತಿರ ಆಗ್ತೀವಿ. ಏನಂತೀಯಾ?”

ಸಾಹೇಬರು ಒಂದೆರಡು ಗಳಿಗೆ ಯೋಚಿಸಿ, “ಸರಿ” ಎನ್ನುವವರಂತೆ ತಲೆ ಅಲ್ಲಾಡಿಸಿದರು. ವೆಂಕಟೇಶ್ ಗಂಟೆ ಒತ್ತಿ ಅಟೆಂಡರ್ ನನ್ನು ಕರೆದರು.

“ನಿಮ್ ಹತ್ರ ಟೂ ವೀಲರ್ ಇದ್ಯಾ?”

“ಇದೆ ಸರ‍್”

“ಸಾಹೇಬರ ಮನೆ ನೋಡಿದಿರಾ?”

“ನೋಡಿದೀನಿ ಸರ‍್” ಎಂದ ಮುಗುಳ್ನಗುತ್ತಾ

“ಸರಿ ಹಾಗಿದ್ರೆ, ಅವ್ರ ಮನೆಗ್ ಹೋಗಿ, ಅವರದ್ ಒಂದ್ ಜೊತೆ ಬ್ಲಾಕ್ ಶೂ ತೊಗೊಂಡ ಬರ‍್ತೀರಾ?”

“ಆಯ್ತು ಸರ್. ಈಗ್ಲೇ ಹೋಗ್ತೀನಿ” ಎಂದ.

ತಮ್ಮ ಮನೆಯ ಬೀಗದ ಕಯ್ಯನ್ನು ಅವನಿಗೆ ಕೊಟ್ಟರು ಸಾಹೇಬರು. “ವರಾಂಡಾದಲ್ಲೇ ಇರುತ್ತೆ.” ಅಂದರು.

“ಸರಿ ಸರ‍್” ಎಂದನು ಅಟೆಂಡರ್.

ವೆಂಕಟೇಶ್ ಅವರು, “ಶೂ ತೊಗೊಂಡು ಸೀದಾ ಇಲ್ಲಿಗೇ ಬರಬೇಕು.” ಎಂದು ಹೇಳಿದರು, ಆದಶ್ಟು ಬೇಗ ಬರಲೆಂದು.

“ಸರಿ ಸರ‍್” ಎಂದು ಸಾಹೇಬರ ಮುಕವನ್ನೊಮ್ಮೆ ನೋಡಿ ಹೊರಳಿದನು ಅಟೆಂಡರ್

ವೆಂಕಟೇಶ್ ಅವರು ಸಾಹೇಬರ ಕಡೆಗೆ ಹೊರಳುತ್ತಾ, “ಈಗ ಕ್ಲಾಸಿಗೆ ನನ್ ಶೂ ಹಾಕೊಂಡ್ ಹೋಗು. ಅವನು ಬರೋದು ಹೇಗೂ ಒಂದ್ ಗಂಟೆ ಆಗ್ಬಹುದು. ನೀನ್ ಬರೋ ವರ‍್ಗೂ ನಾನು ಇಲ್ಲೇ ಇರ‍್ತೀನಿ”

ಗೆಳೆಯನ ಶೂ ಗಳನ್ನು ಯಾವುದೇ ಮುಜುಗರವಿಲ್ಲದೇ ಹಾಕಿಕೊಂಡರು ಸಾಹೇಬರು. ಸ್ವಲ್ಪ ಬಿಗಿ ಎನಿಸಿದರೂ ನಡೆಯಲು ತೊಡಕಾಗಲಿಲ್ಲ. ಕ್ಲಾಸು ಮುಗಿಸಿ ಮರಳಿ ತಮ್ಮ ಕೋಣೆಗೆ ಬಂದರು. ವೆಂಕಟೇಶ್ ಅವರು ಯಾವುದೋ ಹೊತ್ತಗೆ ಓದುತ್ತಾ ಅಲ್ಲಿಯೇ ಕುಂತಿದ್ದರು. ಸಾಹೇಬರು ಶೂ ಕಳಚಿ ಮತ್ತೆ ಚಪ್ಪಲಿ ತೊಟ್ಟರು. ವೆಂಕಟೇಶ್ ತಮ್ಮ ಶೂ ಹಾಕಿಕೊಂಡರು. ತುಸು ಸಮಯದಲ್ಲೇ, ಅಟೆಂಡರ್ ಬಂದನು, ಪ್ಲಾಸ್ಟಿಕ್ ಕವರಿನಲ್ಲಿ ಶೂ ತೆಗೆದುಕೊಂಡು. ಶೂ ಕೆಳಗಿಟ್ಟು, ಬೀಗದ ಕಯ್ಯನ್ನು ಸಾಹೇಬರಿಗೆ ಕೊಟ್ಟನು. ಸಾಹೇಬರಿಗೆ ನಿರಾಳ ಏನಿಸಿತು. ಆ ಒಂದು ಗಂಟೆಯಲ್ಲಿ ಅಟೆಂಡರ್ ಎಂದಿಗಿಂತಲೂ ಹತ್ತಿರ ಎನಿಸಿಬಿಟ್ಟನು. ಪರ‍್ಸ್ ನಿಂದ ನೂರರ ಎರಡು ನೋಟನ್ನು ತೆಗೆದು ಅವನೆಡೆಗೆ ಚಾಚಿದರು. ಅವನು ಮುಗುಳಗುತ್ತಾ,

“ಏನ್ ಸಾರ್, ಇಶ್ಟ್ ಸಣ್ಣ್ ಹೆಲ್ಪ್ ಗೆಲ್ಲಾ ದುಡ್ಡ್ ಕೊಡ್ತೀರಾ? ಬೇಡ ಸರ‍್” ಎಂದು ಹೊರನಡೆದನು. ಸಾಹೇಬರು ಬದುಕಿನ ಒಂದು ಪಾಟ ಕಲಿತಿದ್ದರು.

 

(ಚಿತ್ರ ಸೆಲೆ: angriesout.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ: