ಜೋಡಿ

ಬಸವರಾಜ್ ಕಂಟಿ.

http://www.dreamstime.com/royalty-free-stock-photography-hands-father-mother-newborn-baby-family-concept-parents-holding-palms-child-s-hand-image43891157

ಅವಳ ಗಂಡ ಹಾಯ್ ವೇ ದಾರಿಯ ಆಕ್ಸಿಡೆಂಟ್ ನಲ್ಲಿ ಸತ್ತು ಹೋಗಿರುವುದನ್ನು ಅವಳಿಗೆ ಹೇಗೆ ತಿಳಿಸಬೇಕೆಂದು ಅಕ್ಕ ಪಕ್ಕದ ಮನೆಯವರು ಒದ್ದಾಡುತ್ತಿದ್ದರು. ಆ ಸುದ್ದಿ ಕೇಳಿ ಅವಳಿಗೇನಾದರೂ ಹೆಚ್ಚು ಕಮ್ಮಿಯಾಗಿ ಆ ಪಾಪ ತಮ್ಮ ಮೇಲೆ ಬಂದರೆ? ಎ‌ಶ್ಟಾದರೂ ಒಂದನ್ನೊಂದು ಬಿಟ್ಟಿರಲಾರದ ಜೀವಗಳು. ಒಂದು ಜೀವ ಸತ್ತರೆ ಇನ್ನೊಂದಾದರೂ ಹೇಗೆ ಬದುಕಬಲ್ಲದು? ಆದರೆ ಸುದ್ದಿ ತಿಳಿಸದೆ ದಾರಿಯಿಲ್ಲ. ಏನಾಗುವುದೋ ಆಗಿಬಿಡಲಿ, ಅವಳು ಆ ಸುದ್ದಿ ಕೇಳಿ ಸತ್ತುಹೋದರೂ, ಆ ಜೀವಗಳು ಸತ್ತ ಮೇಲೆ ಒಂದಾಗಬಹುದು ಎಂಬ ಸಮರ‍್ತನೆ ಕಂಡುಕೊಳ್ಳುತ್ತಿದ್ದರು.

ಅವಳೇನೋ ಸತ್ತು ಹೋಗಬಹುದು, ಆದರೆ ಈಗಲೋ ಆಗಲೋ ಅವಳ ಹೊಟ್ಟೆಯಿಂದ ಹೊರಬರಲು ತವಕಿಸುತ್ತಿರುವ ಆ ಮಗು? ಅದರ ಗತಿಯೇನು ಎಂದು ಮತ್ತೆ ಯೋಚನೆಯಲ್ಲಿ ಮುಳುಗುತ್ತಿದ್ದರು. ಎರಡು ಜೀವ ಸಾಯಿಸಿದ ಪಾಪ ಸುತ್ತಿಕೊಳ್ಳುವುದಿಲ್ಲವೆ? ಅಶ್ಟರಲ್ಲಿ, ಸುನಂದಮ್ಮನವರಿಗೆ ಒಂದು ವಿಚಾರ ಹೊಳೆದು ಅವಳ ಮನೆಯ ಕದ ತಟ್ಟಿದರು.

“ರೀ ಶಾರದಾ, ಹಾಯ್ ವೇ ನಲ್ಲಿ ಯಾವ್ದೊ ಆಕ್ಸಿಡೆಂಟ್ ಆಗಿದೆಯಂತ್ರಿ. ಬನ್ನಿ ನೋಡ್ಕೊಂಡ್ ಬರೋಣ” ಅಲ್ಲಿಗೆ ಹೋದಮೇಲೆ ತಾನಾಗಿಯೇ ತಿಳಿಯಲಿ ಎಂದು ಅವಳನ್ನು ಕರೆದರು.

“ಇಲ್ಲಾ ರೀ. ನಮ್ ಯಜಮಾನ್ರು ಬರೋ ಹೊತ್ತಾಯ್ತು. ಅವ್ರಿಗೆ ತಿಂಡಿ ಮಾಡ್ತಾಯಿದೀನಿ. ಬೇಕಾದ್ರೆ ಒಂದ್ ಅರ‍್ದಾ ಗಂಟೆ ಬಿಟ್ಕೊಂಡ್ ಹೋಗೋಣ. ಅವ್ರು ಇನ್ನೇನು ಬರೋ ಹೊತ್ತು.” ಗಂಡನ ದಾರಿ ಕಾಯುತ್ತ ಅವಳ ಹೇಳಿದಳು.

ಕಾಯಿಸುತ್ತಿರುವ ನಿನ್ನ ಗಂಡ ಇನ್ನೆಂದೂ ಬರುವುದಿಲ್ಲವೆಂದು ಸುನಂದಮ್ಮ ಅವಳಿಗೆ ಹೇಗೆ ಹೇಳಿಯಾರು? ಅವಳ ಹಣೆಯ ಕುಂಕುಮ, ಅವಳು ಮುಡಿದ ಹೂವುಗಳನ್ನು ನೋಡಿ ಅವರಿಗೆ ಮಾತು ಹೊರಡದೆ, ಗಂಟಲು ಬಿಗಿದು, ಕಣ್ಣುಗಳು ತೇವಗೊಂಡವು. ತಕ್ಶಣ ಅವಳ ಬಾಗಿಲಿಂದ ಹೊರಳಿ, ಅಕ್ಕ ಪಕ್ಕದವರೆಲ್ಲರೂ ಸೇರಿರುವ ತಮ್ಮ ಮನೆಗೆ ಬಂದರು. ಸ್ವಲ್ಪ ಹೊತ್ತಾದ ಮೇಲೆ ಪೊಲೀಸ್ ಜೀಪೊಂದು ಅವಳ ಮನೆಯ ಮುಂದೆ ಬಂದು ನಿಂತಿತು.

ಅಕ್ಕ ಪಕ್ಕದವರೂ ಅವಳ ಮನೆಯ ಬಾಗಿಲ ಬಳಿಗೆ ಬಂದರು, ಏನಾಗುವುದೋ ಎಂಬ ಗಾಬರಿಯಲ್ಲಿ. ಕೆಳಗಿಳಿದ ಎಸ್. ಐ., ಅವಳ ಮನೆಯ ಬಾಗಿಲು ತಟ್ಟಿ, ನಡೆದ ಗಟನೆಯನ್ನು ಯಾವ ಬಾವವೂ ಇಲ್ಲದ ದನಿಯಲ್ಲಿ ಅವಳಿಗೆ ತಿಳಿಸಿದರು. ಅವಳು ಅಲ್ಲೇ ಕುಸಿದು ಬಿದ್ದಳು. ಅಲ್ಲಿದ್ದವರು ಎಸ್.ಐ. ಗೆ ಹಿಡಿಶಾಪ ಹಾಕಿದರು. ಅವಳನ್ನು ಎಚ್ಚರಿಸುವ ಎಲ್ಲ ಪ್ರಯತ್ನಗಳೂ ಸೋಲಾದವು. ಅವಳು ಸತ್ತಿರಲಿಲ್ಲ, ಇನ್ನೂ ಜೀವವಿತ್ತು. ಲಗುಬಗೆಯಿಂದ ಅವಳನ್ನು ಆಸ್ಪತ್ರೆಗೆ ಸಾಗಿಸಿದರು.

ಮದುವೆಯಾಗಿ ಮೂರು ವರ‍್ಶವಾದರೂ, ಬರೀ ಮೂರು ತಿಂಗಳಾಗಿದೆಯೇನೋ ಎನ್ನುವಂತಿತ್ತು ಆ ಜೋಡಿ. ಅವರ ಅನ್ಯೋನ್ಯತೆಗೆ ಹಾರೈಸಿದವರೆಶ್ಟೋ, ಅಶ್ಟೇ ಹೊಟ್ಟೆಕಿಚ್ಚು ಪಟ್ಟುಕೊಂಡವರೂ ಇದ್ದರು. ದೇಹಕ್ಕೆ ಉಸಿರಿನಂತೆ, ಮೀನಿಗೆ ನೀರಿನಂತೆ, ದೀಪಕ್ಕೆ ಎಣ್ಣೆಯಂತೆ, ನೆರಳಿಗೆ ಬೆಳಕಿನಂತೆ, ಬಳ್ಳಿಗೆ ಆಸರೆಯಂತೆ ಇತ್ತು ಅವರಿಬ್ಬರ ಸಂಬಂದ. ಒಬ್ಬರಿಲ್ಲದೆ ಇನ್ನೊಬ್ಬರ ಜೀವನ ಸಾದ್ಯವಿರಲಿಲ್ಲ. ಮೂರು ವರ‍್ಶದಲ್ಲಿ ಒಂದು ದಿನದ ಮಟ್ಟಿಗಾದರೂ ಅವರು ಬೇರೆ ಬೇರೆ ಇದ್ದಿರಲಿಲ್ಲ. ಅವನು ಅಡಿಗಡಿಗೂ ಅವಳ ಬಗ್ಗೆ ತನಗಿದ್ದ ಪ್ರೀತಿಯನ್ನು ತೋರ‍್ಪಡಿಸುತ್ತಿದ್ದ. ಬೇಂದ್ರೆಯವರ ಸಕೀಗೀತ, ನಾನು ಬಡವಿ ಆತ ಬಡವ, ಹೀಗೆ ಅನೇಕ ಪದ್ಯದ ಸಾಲುಗಳನ್ನು ಹಾಡಿ ಅವಳ ಕೆನ್ನೆ ರಂಗೇರುವಂತೆ ಮಾಡುತ್ತಿದ್ದ. ಅವನ ಪ್ರತಿಯೊಂದು ಪ್ರೀತಿಯ ಮಾತಿಗೆ ಅವಳು ನಾಚಿ ತನ್ನದೇ ರೀತಿಯಲಿ ಸ್ಪಂದಿಸುತ್ತಿದ್ದಳು.

ಇನ್ನೇನು ಹುಟ್ಟುವ ಮಗುವಿನೊಂದಿಗೆ ಅವರ ಸಂಸಾರ ಪೂರ‍್ಣಗೊಳ್ಳುವ ಸಂತೋಶದಲ್ಲಿದ್ದರು. ಸಾಮಾನ್ಯವಾಗಿ ಶಾಂತವಾಗಿರುವ ಕಡಲ ಒಡಲು ಒಂದು ಕ್ಶಣ ಕಂಪಿಸಿ, ಆ ಕಂಪನದಿಂದ ಬಾನೆತ್ತರದ ಅಲೆಗಳು ಉಂಟಾಗಿ, ದಡದಲ್ಲಿರುವ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡುವ ಆ ಸುನಾಮಿಯಂತೆ, ವಿದಿಯು ಲಾರಿಯ ರೂಪದಲ್ಲಿ ಬಂದು, ಅವನ ದೇಹವನ್ನಶ್ಟೇ ಅಲ್ಲದೆ, ಅವಳ ಬಾಳನ್ನೂ ಹರಿದು ಹಾಕಿತ್ತು. ಎಲ್ಲೋ ಹುಟ್ಟಿ, ಎಲ್ಲೆಲ್ಲೋ ಹರಿದರೂ, ಸಮುದ್ರದ ಜೊತೆಗೆ ಒಂದಾಗುವುದರಲ್ಲೇ ಇರುವುದು ನದಿಯ ಸಾರ‍್ತಕತೆ. ಹರಿದು ಬರುವ ನದಿಯನ್ನು ಆಲಂಗಿಸಿಕೊಳ್ಳಲು ಸಮುದ್ರವೇ ಇರದಿದ್ದರೆ? ಹುಣ್ಣಿಮೆಯಂದು ಚಂದ್ರನೇ ಇರದಿದ್ದರೆ? ಗುಡಿಯಲ್ಲಿ ದೇವರೇ ಇರದಿದ್ದರೆ? ಎಲ್ಲವೂ ಶೂನ್ಯವಾಗಿ ತೋರುತ್ತದೆ. ಗಂಡನನ್ನು ಕಳೆದುಕೊಂಡ ಅವಳ ಬದುಕೂ ಶೂನ್ಯವಾಗಿತ್ತು.

ಅವಳ ಮನಸ್ಸಿಗಾಗಿದ್ದ ಪೆಟ್ಟು ದೇಹದ ಮೇಲೂ ಪರಿಣಾಮ ಬೀರಿದ್ದರಿಂದ ಅವಳ ದೇಹಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದರು. ಕಮ್ಮಿಯಾಗಿದ್ದ ಅವಳ ರಕ್ತದೊತ್ತಡವನ್ನು ಹೆಚ್ಚಿಸಲು ವೈದ್ಯರು ಸಾಕಶ್ಟು ಶ್ರಮಪಟ್ಟು, ಅದು ಒಂದು ಹಂತಕ್ಕೆ ಬಂದ ಮೇಲೆ ಆಪರೀಶನ್ ಮಾಡಿ ಹೊಟ್ಟೆಯಲ್ಲಿದ್ದ ಗಂಡು ಮಗುವನ್ನು ಉಳಿಸಿಕೊಂಡಿದ್ದರು. ಅವಳಿಗೆ ಅರಿವು ಮೂಡಲು ಒಂದೆರಡು ದಿನಗಳೇ ಬೇಕಾಗಿದ್ದವು. ಎಚ್ಚರವಾದರೂ, ಅವಳು ಆತ್ಮವಿರದ ದೇಹದಂತಾಗಿದ್ದಳು. ಯಾರ ಮಾತಿಗೂ ಸ್ಪಂದಿಸುತ್ತಿರಲಿಲ್ಲ. ಮೂಗಿಯಾಗಿದ್ದಳು, ಕಿವುಡಿಯಾಗಿದ್ದಳು. ತನ್ನ ಪಕ್ಕದಲ್ಲೇ ಮಲಗಿದ ಮಗುವಿನಂತಾಗಿದ್ದಳು. ಅದು ಅತ್ತಾಗ ತಾನೂ ಅಳುತ್ತಿದ್ದಳು. ಏನನ್ನೂ ತಿನ್ನದೆ, ಕುಡಿಯದೆ ಎಶ್ಟೋ ದಿನ ಆಸ್ಪತ್ರೆಯಲ್ಲೇ ಕಳೆದಳು. ಅಸ್ಪತ್ರೆಯಿಂದ ತವರು ಮನೆಗೆ ಬಂದ ಮೇಲೂ ಅವಳ ವರ‍್ತನೆಯಲ್ಲಿ ಅಂತಹ ಬದಲಾವಣೆ ಎನೂ ಆಗಲಿಲ್ಲ. ಅವಳ ತಾಯಿಯ ಬಲವಂತದಿಂದ ಎಶ್ಟು ತಿನ್ನುತ್ತಿದ್ದಳೋ ಅಶ್ಟೇ. ಪಕ್ಕದಲ್ಲಿರುವ ಮಗುವೊಂದು ಇಲ್ಲದಿದ್ದರೆ ಅದನ್ನೂ ತಿನ್ನುತ್ತಿರಲಿಲ್ಲವೆನೋ.

ತಾನು ಯಾರಿಗೆ ಏನು ಅನ್ಯಾಯ ಮಾಡಿದ್ದೆ? ದೇವರೇಕೆ ತನಗೆ ಈ ಪಾಡು ತಂದಿಟ್ಟ ಎಂದು ಯೋಚಿಸುತ್ತಿದ್ದಳು. ತನಗಾದ ಅನ್ಯಾಯಕ್ಕೆ ದೇವರನ್ನು ಬಿಟ್ಟರೆ ಯಾರನ್ನು ಹೊಣೆಮಾಡಲು ಸಾದ್ಯ? ಸದಾ ದೇವರನ್ನೇ ಶಪಿಸುತ್ತಿದ್ದಳು. ದೇವರು ಮಾತ್ರ ಯಾವುದಕ್ಕೂ ಉತ್ತರ ಕೊಡಲಿಲ್ಲ. ಗಂಡ ಸತ್ತಮೇಲೆ ಗಂಡನ ಚಿತೆಯ ಜೊತೆ ಸೇರಿ ಹೆಂಡತಿಯೂ ಸುಟ್ಟು ಹೋಗುವ ಸತಿಸಹಗಮನ ಪದ್ದತಿ ಇಂದಿಗೂ ಇದ್ದರೆ ಎಶ್ಟು ಚೆನ್ನಾಗಿರುತ್ತಿತ್ತು. ತಾನೂ ಅವರ ಜೊತೆ ಸತ್ತು ಮತ್ತೆ ಅವರನ್ನು ಕೂಡುವಂತಿದ್ದರೆ? ಅವಳ ಮನಸ್ಸು ತಾನೂ ಕೂಡ ಸತ್ತುಬಿಡಬೇಕು ಎನ್ನುವುದರ ಸುತ್ತಲೇ ಸುತ್ತುತಿತ್ತು.

ತಾನು ಇನ್ನು ಬದುಕಿದ್ದಾದರೂ ಏನು ಪ್ರಯೋಜನ? ಅವರೇ ಇಲ್ಲದ ಮೇಲೆ ಈ ಲೋಕ ತನಗೇಕೆ? ಮನೆಯ ದೇವರ ಕೋಣೆಯ ಮುಂದೆ ಕೂತು ಈ ರೀತಿಯೆಲ್ಲಾ ಯೋಚಿಸುವುದರಲ್ಲೇ ದಿನ ಕಳೆಯುತ್ತಿದ್ದಳು. ಸಾಯುವುದಾದರೆ ಹೇಗೆ ಸಾಯಬೇಕು? ನೇಣು ಹಾಕಿಕೊಂಡೆ? ಅತವಾ ಕೈಯ ರಕ್ತನಾಳ ಕುಯ್ದುಕೊಂಡೆ? ಯಾವುದು ಸುಲಬ? ದೇವರನ್ನೇ ಕೇಳುತ್ತಿದ್ದಳು. ಹೀಗೆ ದಿನವೆಲ್ಲಾ ಅದೇ ಯೋಚನೆ. ಮಗುವಿನ ಅಳು ಕೇಳಿದ ತಕ್ಶಣ ಅವಳ ತಾಯಿ ಹ್ರುದಯ ತುಂಬಿ, ಸಾಯುವ ಯೋಚನೆಯಿಂದ ಮನಸ್ಸು ಬದಲಾಯಿಸುತ್ತಿದ್ದಳು.

ಮಗುವಿಗಾದರೂ ಬದುಕಬೇಕೆಂದುಕೊಂಡಳು. ಅವನನ್ನು ಮರೆಯಲು ಪ್ರಯತ್ನಿಸುವ ತೀರ‍್ಮಾನ ಮಾಡಿದಳು. ಗಂಡ ಸತ್ತಾಗಿನಿಂದ ಕನ್ನಡಿಯಲ್ಲಿ ತನ್ನ ಮುಕ ನೋಡಿಕೊಂಡಿರಲಿಲ್ಲ. ಕನ್ನಡಿ ಮುಂದೆ ನಿಂತಳು. ತುಂಬಾ ಕ್ರುಶವಾದಂತೆ ಕಾಣುತ್ತಿದ್ದಳು. ಮುಕದ ಕಾಂತಿಯಲ್ಲಾ ಇಂಗಿ, ಬಾಡಿಹೋಗಿತ್ತು. ಬಚ್ಚಲು ಮನೆಗೆ ಹೋಗಿ ಮುಕ ತೊಳೆದುಕೊಂಡು ಬಂದಳು. ಈಗ ತುಸು ಶುಬ್ರವಾಗಿ ಕಂಡಿತು. ತನಗೇ ಗೊತ್ತಾಗದೆ ತುಟಿಯ ಮೇಲೆ ಕಿರುನಗೆ ಮೂಡಿತು. ತನ್ನ ನಗು ಕಂಡು ಅವನು ಸದಾ ಹಾಡುತ್ತಿದ್ದ “ನಾರಿ ನಿನ್ನ ಮಾರಿ ಮ್ಯಾಲ ನಗಿ ನವಿಲು ಆಡತಿತ್ತ” ಹಾಡು ನೆನಪಾಗಿ, ಅದರ ಹಿಂದೆಯೇ ಅವನ ಬಗೆಗಿನ ಎಲ್ಲವೂ ನೆನಪಾಗಿ ಅವಳ ಮನಸ್ಸು ಮತ್ತೆ ಕುಗ್ಗಿತು.

ಅವಳು ಅವನನ್ನು ಮರೆಯಲು ಏನೆಲ್ಲಾ ಮಾಡಿದರೂ ಒಂದಿಲ್ಲೊಂದು ರೀತಿಯಲ್ಲಿ ಇಣುಕಿ ಅವಳನ್ನು ಕಾಡುತ್ತಿದ್ದನು. ಅವಳ ಉಸಿರು ಉಸಿರಿನಲ್ಲಿ ಬೆರೆತು ಹೋಗಿದ್ದ ಅವನನ್ನು ಮರೆಯಲು ಹೇಗೆ ಸಾದ್ಯ? ಮನಸ್ಸನ್ನು ಬೇರೆಡೆ ಹರಿಸಲು ಮಗುವಿನ ಜೊತೆ ಸಮಯ ಕಳೆಯಬೇಕೆಂದು ಅಂದುಕೊಂಡಳು. ಮಗುವನ್ನು ಆಡಿಸಲು ಕೈಯಲ್ಲಿ ಎತ್ತಿ ಅದರ ಮುಕವನ್ನು ದಿಟ್ಟಿಸಿದಳು. ಅವನದೇ ಬಿಂಬ. ಬಲವಂತದಿಂದ ತಡೆದುಕೊಂಡಿದ್ದ ಅವನ ನೆನಪುಗಳೆಲ್ಲಾ ಮತ್ತೆ ಕಣ್ಣ ಮುಂದೆ ಬಂದವು. ತಕ್ಶಣ ಮಗುವನ್ನು ಕೆಳಗಿಳಿಸಿದಳು. ಗಂಡನನ್ನೇ ಹೋಲುವ ಮಗನೊಂದಿಗೆ ಗಂಡನ ನೆನೆಪು ಬಾರದಂತೆ ಈಡೀ ಜೀವನ ನಡೆಸಲು ಸಾದ್ಯವೇ? ಅದು ಆಗುವ ಮಾತೇ ಅಲ್ಲ. ಅವಳು ಎಶ್ಟು ಪ್ರಯತ್ನ ಪಟ್ಟರೂ ಗಂಡನ ನೆನಪು ಮತ್ತು ಮಗುವಿನ ಮಮಕಾರದ ನಡುವಿನ ಯುದ್ದದಲ್ಲಿ ಗಂಡನ ನೆನಪೇ ಪದೇ ಪದೇ ಗೆಲ್ಲುತ್ತಿತ್ತು.

ಹಾಗಾದರೇ ಅವರನ್ನು ಮರೆಯುವುದು ಹೇಗೆ? ತನ್ನ ರಕ್ತದ ಕಣ ಕಣದಲ್ಲಿಯೂ ಅವರ ನೆನಪು ತುಂಬಿರುವದು. ದೇಹದಲ್ಲಿನ ರಕ್ತ ಹೊರತೆಗೆದರೆ? ಅದೊಂದೆ ದಾರಿ ಎಂದುಕೊಂಡಳು. ಸತ್ತ ನಂತರ ಗಂಡನನ್ನು ಕೂಡುವ ಕನಸು ಕಂಡಳು. ಏನೋ ಒಂದು ಬಗೆಯ, ವಿವರಿಸಲಾಗದ ಆನಂದ ಅವಳಿಗಾಯಿತು. ನಿರಾಳ ಬಾವ ಮನಸ್ಸು ತುಂಬಿತು. ಈ ಜಗತ್ತಿನಲ್ಲಿ ತನಗೇನೂ ಉಳಿದಿಲ್ಲ, ಇರುವುದಾದರೆ ಅವರ ಜಗತ್ತಿನಲ್ಲಿ, ಅವರ ಜೊತೆಯೇ ಎಂದುಕೊಂಡಳು. ಅಂದುಕೊಂಡಂತೆ ಆ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ಅಡುಗೆಮನೆಗೆ ಹೋಗಿ ಚಾಕು ತಂದಳು.

ಬಲಗೈಯಲ್ಲಿ ಚಾಕು ಹಿಡಿದು ಎಡ ಮುಂಗೈಯ ರಕ್ತನಾಳ ಸೀಳಿಕೊಂಡಳು. ಸರಿಯಾಗಿ ಅದೇ ಸಮಯಕ್ಕೇ ಮಗು ಅಳಲಾರಂಬಿಸಿತು. ತಾಯಿಗಾದ ನೋವು ಅದರ ಕರುಳು ಹಿಂಡಿತೇನೋ. ಕತ್ತಲಲ್ಲಿ ಅದರ ಮುಕ ಸರಿಯಾಗಿ ಕಾಣದಿದ್ದರೂ ಅದರ ಅಳುವ ದನಿ ಬೆಂಕಿಯ ಕಿಡಿಯಂತೆ ಅವಳಲ್ಲಿ ತಾಯ್ತನದ ಬಾವವನ್ನು ಹೊತ್ತಿಸಿತು. ಅವಳ ಮಂಚಕ್ಕೆ ಹೊಂದುಕೊಂಡಿದ್ದ ಗೋಡೆಗೆ ಒರಗಿ ಮಗುವನ್ನು ತೊಡೆಯಮೇಲೆ ಮಲಗಿಸಿಕೊಂಡಳು. ಎದೆಯ ಹಾಲು ಕುಡಿಸಬೇಕಿನಿಸಿತು. ರವಿಕೆ ಸರಿಸಿ, ಮೊಲೆಯನ್ನು ಮಗುವಿನ ಬಾಯಿಗಿಟ್ಟಳು. ಅದು ಅಳುವುದನ್ನು ನಿಲ್ಲಿಸಿತು. ಅವಳ ಅಪ್ಪ-ಅಮ್ಮ ಮಗು ಅಳುವ ದನಿ ಕೇಳಿ ಎದ್ದು ಬಂದರು. ಬಾಗಿಲ ಬಳಿ ನಿಂತು ತಮ್ಮ ಮಗಳು ಮಗುವಿಗೆ ಸುಕವಾಗಿ ಹಾಲು ಉಣಿಸುವುದನ್ನು ಕಂಡು ಕುಶಿಪಟ್ಟರು. ಕತ್ತಲಲ್ಲಿ ಅವಳ ಕೈಯಿಂದ ಸೋರುತ್ತಿದ್ದ ರಕ್ತ ಅವರ ಕಣ್ಣಿಗೆ ಕಾಣಲೇ ಇಲ್ಲ.

(ಚಿತ್ರಸೆಲೆ: www.dreamstime.com

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *