ನಂಬಿಕೆ
ಆ ಹಳ್ಳಿಯಲ್ಲಿ ಚಿರತೆಯನ್ನು ಕೊಲ್ಲುವ ಗುಂಡಿಗೆ ಇರುವವನೆಂದರೆ ಬಯ್ರಪ್ಪನೊಬ್ಬನೇ. ಅವನಿಂದ ಮಾತ್ರ ಆ ಕೆಲಸ ಮಾಡಲು ಸಾದ್ಯ ಎಂದು ಊರಿನವರೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಈಗಾಗಲೇ ಸಾಕಶ್ಟು ಕುರಿ, ಹಸುಗಳನ್ನು ತಿಂದು, ಇಬ್ಬರ ಜೀವವನ್ನೂ ತೆಗೆದುಕೊಂಡಿದ್ದ ಚಿರತೆಯಿಂದ ಊರಿನ ಜನರೆಲ್ಲ ಬೆಚ್ಚಿದ್ದರು. ರಾತ್ರಿ ಹೊತ್ತಿನ ಮಾತು ಹಾಗಿರಲಿ, ಹಗಲಿನಲ್ಲೇ ಒಂಟಿಯಾಗಿ ಓಡಾಡಲು ಹೆದರಿಕೆಯಾಗುತ್ತಿತ್ತು. ಚಿರತೆಯನ್ನು ಕೊಲ್ಲದಿದ್ದರೆ ಊರನ್ನೇ ಬಿಟ್ಟು ಬಿಡಬೇಕಾದ ಪರಿಸ್ತಿತಿ.
ಆದರೆ ಚಿರತೆಯನ್ನು ಕೊಲ್ಲುವುದಾದರೂ ಹೇಗೆ? ಇಲ್ಲಿ ತನಕವೂ ಅದು ದಾಳಿ ಮಾಡಿದ್ದು ರಾತ್ರಿ ಹೊತ್ತು ಮಾತ್ರ. ಕುರಿ, ಮೇಕೆಗಳನ್ನು ಮುಂದಿಟ್ಟುಕೊಂಡು, ರಾತ್ರಿಯೆಲ್ಲಾ ಕಾದು, ಅದನ್ನು ಬಲೆಗೆ ಬೀಳಿಸುವ ಹಳ್ಳಿ ಜನರ ಪ್ರಯತ್ನ ಕಯ್ಗೂಡಿರಲಿಲ್ಲ. ಅವರು ಕಾದು ಕುಳಿತಾಗ ಅದು ಬರುವುದೇ ಇಲ್ಲ. ಯಾವತ್ತೂ ಅದು ಬಂದಿದ್ದು ಅನಿರೀಕ್ಶಿತವಾಗಿಯೇ. ಅದು ಪ್ರತಿದಿನ ಊರೊಳಗೆ ಬರದಿದ್ದರೂ, ಆ ಊರಿನ ಸುತ್ತಮುತ್ತಲಿನಲ್ಲೇ ಓಡಾಡುವ ಹೆಜ್ಜೆ ಗುರುತುಗಳು ದಿನ ಬೆಳಗಾದರೆ ಊರ ಹೊರಗೆ ಕಾಣಿಸುತ್ತಿದ್ದವು. ಈಗ ಇರುವ ಒಂದೇ ದಾರಿಯೆಂದರೆ ಅದನ್ನು ಹುಡುಕಿಕೊಂಡು ಹೋಗಿ ಕೊಲ್ಲುವುದು. ಹೋಗುವವರಾರು?
ಒಡೆಯರ ಆಳ್ವಿಕೆಯಲ್ಲಾಗಿದ್ದರೆ ಅವರಿಗೆ ಬೇಡಿ, ಸಯ್ನಿಕರಿಂದಲೇ ಈ ಕೆಲಸ ಮಾಡಿಸಬಹುದಿತ್ತು. ಇತ್ತೀಚಿಗೆ ಊರಿಗೆ ಬಂದಿರುವ ಪೊಲೀಸ್ ಆಪೀಸರ್ ಗಳು ಕೋವಿ ಹಿಡಿದು ಕಾಡು ನುಗ್ಗಿ, ತಾವೇ ಗಾಯ ಮಾಡಿಕೊಂಡು ಬಂದಿದ್ದರು. ಚಿರತೆ ಮಾತ್ರ ಸತ್ತಿರಲಿಲ್ಲ. ಸ್ವಲ್ಪ ದಿನದಲ್ಲೇ ಹೆಚ್ಚಿನ ಪೊಲೀಸಿನವರನ್ನು ಕರೆಸಿ ಚಿರತೆಯನ್ನು ಕೊಲ್ಲಿಸುತ್ತೇವೆಂದು ಮಾತು ಕೊಟ್ಟಿದ್ದರು. ಆ ಹೆಚ್ಚಿನ ಪೊಲೀಸಿನವರು ಬಂದು ಚಿರತೆಯನ್ನು ಕೊಲ್ಲುವಶ್ಟರಲ್ಲಿ ಅದೆಶ್ಟು ಜನ, ಪ್ರಾಣಿಗಳು ಬಲಿಯಾಗುತ್ತವೆಯೋ ಎನ್ನುವ ಯೋಚನೆ ಊರಿನವರಿಗೆ. ಬಯ್ರಪ್ಪನೊಬ್ಬನೇ ಚಿರತೆಯನ್ನು ಕೊಲ್ಲಬಹುದೆಂಬ ಗುಸು ಗುಸು ಮಾತು ದಿನಕಳೆದಂತೆ ಬಲಪಡೆದು, ಕೊನೆಗೆ ಅವನೇ ಈ ಕೆಲಸ ಮಾಡಬೇಕೆಂದು ಊರಿನವರು ತಮ್ಮ ತಮ್ಮಲ್ಲೇ ತೀರ‍್ಮಾನ ಮಾಡಿಕೊಂಡರು. ಗೌಡರ ಕಿವಿಗೂ ಈ ಮಾತು ಬಿದ್ದು ಅವರಿಗೂ ಅದೇ ಸರಿಯೆನಿಸಿತು. ಸರಿ, ಗೌಡರು ಊರ ಹಿರಿಯರನ್ನು ಕರೆದುಕೊಂಡು ಬಯ್ರಪ್ಪನ ಬಳಿ ನೆರವು ಕೇಳಲು ಹೋಗುವುದಾಗಿ ತೀರ‍್ಮಾನಿಸಿದರು.
ಬಯ್ರಪ್ಪನೆಂದರೆ ಸಾಮಾನ್ಯನಲ್ಲ. ಹಳೆಯ ಕುಸ್ತಿ ಪಟು. ಹಿರಿದಾದ ಆಳು. ಆರಡಿ ಎತ್ತರ, ಅದಕ್ಕೆ ತಕ್ಕ ಮಯ್ಕಟ್ಟು. ಅಗಲವಾದ ಕಪ್ಪು ಮುಕದಲ್ಲಿ ಅಗಲವಾದ ಹಣೆ. ದಪ್ಪ ಮೂಗು, ಮೂಗಿನ ಕೆಳಗೆ ಮೇಲ್ದುಟಿ ಕಾಣದಂತೆ ತುಂಬಿದ ಮೀಸೆ. ಅವನ ಬಿಗುವಿನ ಮುಕ, ನಡೆ ನೋಡಿದರೆ ಯಾವ ಕುಸ್ತಿ ಪಯ್ಲ್ವಾನನಾದರೂ ನಾಚಬೇಕು. ಅವನ ತೋಳುಗಳನ್ನು ನೋಡಿದರೆ ಒಂದೇ ಕಯ್ಯಿಂದಲೇ ಯಾರನ್ನಾದರೂ ಎತ್ತಿ ಬೀಳಿಸಬಹುದೆಂದು ಅನಿಸುತ್ತಿತ್ತು. ಸೊಂಟಕ್ಕೆ ಚರ‍್ಮದ ಪಟ್ಟಿ ಕಟ್ಟಿ, ಚರ‍್ಮದ ಹೊದಿಕೆಯಿರುವ ಚಾಕುವೊಂದನ್ನು ಅದರಲ್ಲಿ ಯಾವಾಗಲೂ ಸಿಕ್ಕಿಸಿರುತ್ತಿದ್ದನು. ಅವನ ಮಾತು, ನಡತೆ ಒರಟೆನಿಸಿದರೂ ಯಾವತ್ತೂ ಯಾರೊಂದಿಗೂ ಜಗಳವಾಡಿದ ಉದಾಹರಣೆಯಿರಲಿಲ್ಲ. ಹಾಗೆಯೇ ಅವನನ್ನು ಕೆಣಕುವ ಸಾಹಸವನ್ನೂ ಯಾರು ಮಾಡಿರಲಿಲ್ಲ. ತನ್ನ ಪಾಡಿಗೆ ತಾನು ತೋಟ ನೋಡಿಕೊಂಡು ಇರುತ್ತಿದ್ದನು. ಈ ಊರಿಗೆ ಬಂದ ಮೇಲೆ ಕುಸ್ತಿ ಆಡುವುದನ್ನೂ ಬಿಟ್ಟಿದ್ದನು. ನಲವತ್ತು ದಾಟಿದ್ದರೂ ಮದುವೆಯಾಗಿರಲಿಲ್ಲ. ಬ್ರಮ್ಮಚಾರಿಯಾಗಿರುವುದರಿಂದಲೇ ಅವನಿಗೆ ಹನುಮನಶ್ಟು ಶಕ್ತಿಯೆಂದು ಜನ ಮಾತಾಡಿಕೊಳ್ಳುತ್ತಿದ್ದರು. ಅವನ ಸಾಹಸ ಹೇಳುವ ಬಗೆ ಬಗೆಯ ಕತೆಗಳು ಹುಟ್ಟಿಕೊಂಡಿದ್ದವು. ಆ ಕತೆಗಳ ಬಗ್ಗೆ ಕೇಳಿದಾಗ ಆತ ಗತ್ತಿನಿಂದಲೇ “ಹಾಗೆಲ್ಲ ಏನ್ ಇಲ್ಲಾ” ಎಂದು ತೆಗೆದು ಹಾಕುತ್ತಿದ್ದನು.
ಅಂದು ಗೌಡರು, ಸಂಜೆಯ ಹೊತ್ತಿನಲ್ಲಿ ಇಬ್ಬರು ಹಿರಿಯರನ್ನು ಕರೆದುಕೊಂಡು ಬಯ್ರಪ್ಪನ ತೋಟದ ಮನೆಗೆ ಬಂದರು. ಅವನ ಚಿಕ್ಕಪ್ಪ ಕಟ್ಟಿಸಿದ್ದ ಮನೆ. ಮಕ್ಕಳಿಲ್ಲದ ಅವನ ಚಿಕ್ಕಪ್ಪ ಸತ್ತು ಹೋದ ಮೇಲೆ ಬೇರೆ ಊರಿನಲ್ಲಿದ್ದ ಬಯ್ರಪ್ಪ ಇಲ್ಲಿ ಬಂದು ತಾತನ ಆಸ್ತಿಯಾದ ಇಪ್ಪತ್ತು ಎಕರೆ ತೋಟ ನೋಡಿಕೊಂಡಿದ್ದನು. ಮನೆಯ ಜಗುಲಿ ಮೇಲೆ ಹೊಗೆಸೊಪ್ಪು ಜಿಗಿಯುತ್ತ ಯಾವುದೋ ಲೆಕ್ಕ ನೋಡುತ್ತ ಕುಳಿತಿದ್ದನು ಬಯ್ರಪ್ಪ. ಅವನ ಪಕ್ಕದಲ್ಲಿ ಅವನ ಮನೆಯ ಆಳು ನಾಗಪ್ಪ ಇದ್ದನು. ದೂರದಿಂದಲೇ ಗೌಡರು ಬರುವುದನ್ನು ನೋಡಿ, ಹೊಗೆಸೊಪ್ಪು ಉಗುಳಿ, ಅವರನ್ನು ಬರಮಾಡಿಕೊಳ್ಳಲು ಕೆಳಗಿಳಿದು ಬಂದನು. ಒಬ್ಬರಿಗೊಬ್ಬರು ನಮಸ್ಕಾರ ಹೇಳಿ, ಮನೆಯ ಜಗುಲಿಯ ಮೇಲೇಯೆ ಕುಂತರು. ಬಂದವರಿಗೆ ಕುಡಿಯಲು ಎಳೆನೀರು ಕೊಚ್ಚಿ ತರಲು ನಾಗಪ್ಪ ಹೋದನು. ಬಯ್ರಪ್ಪನ ಸ್ತಿತಿಗತಿ ವಿಚಾರಿಸಿದ ಮೇಲೆ, ಗೌಡರು ಬಂದ ವಿಶಯ ಹೇಳಲು ಮೊದಲುಮಾಡಿದರು.
ಚಿರತೆಯ ಕಾಟದ ವಿವರಗಳನ್ನು ಮುನ್ನುಡಿಯಾಗಿ ಹೇಳಿ, ನಂತರ ಊರಿನ ಜನರಿಗೆ ಅದರಿಂದ ಊಂಟಾಗಿರುವ ಹೆದರಿಕೆಯ ಬಗ್ಗೆ ಹೇಳಿದರು. ಈ ಎಲ್ಲ ವಿಶಯವನ್ನೂ ತಿಳಿದಿದ್ದ ಬಯ್ರಪ್ಪ ಗೌಡರ ಮಾತಿಗೆ ಹೌದು ಎನ್ನುವ ರೀತಿಯಲ್ಲಿ ತಲೆಯಾಡಿಸುತ್ತಿದ್ದನು. ಗೌಡರು ಚಿರತೆಯ ಉಪಟಳಕ್ಕೆ ಕೊನೆಯಾಗಲೇಬೇಕೆನ್ನುವುದನ್ನು ಬಯ್ರಪ್ಪನಿಗೆ ಮನದಟ್ಟು ಮಾಡಿರುವುನ್ನು ನಿಕ್ಕಿ ಮಾಡಿಕೊಂಡು, ತಮ್ಮ ಮನದಲ್ಲಿದ್ದ ಮಾತು ಹೊರತೆಗೆದರು.
“ಆ ಚಿರತೆನಾ ಕೊಲ್ಲ್ದೆ ದಾರಿಯಿಲ್ಲ ನೋಡು ಬಯ್ರಪ್ಪ. ಏನಂತೀಯಾ?”
“ಹೌದು ಗೌಡ್ರೆ. ನೀವ್ ಹೇಳೋದ್ ಸರಿ. ಅದನ್ನ ಹಂಗೇ ಬಿಟ್ರೆ ಇನ್ನು ಎಶ್ಟ್ ಜೀವ ಹೋಗ್ತಾವೋ”
“ಅಲ್ವಾ ಮತ್ತೆ? ಅದಕ್ಕೆ ನಿನ್ ಹತ್ರ ಬಂದಿರೋದು ನೋಡು” ಅಂದರು ಗೌಡ್ರು. ಅಲ್ಲೀ ತನಕ ಗೌಡರ ಯಾವ ಮಾತಿಗೂ ಯೋಚಿಸದೆ ಸುಮ್ಮನೆ ತಲೆಯಾಡಿಸುತ್ತಿದ್ದ ಬಯ್ರಪ್ಪ, ಈ ಮಾತು ಕೇಳಿ ಚುರುಕಾದನು. ನನ್ ಹತ್ರ ಯಾಕ್ ಬಂದ್ರು, ನಾನೇನ್ ಮಾಡಬಲ್ಲೆ ಅನ್ನೋ ಕೇಳ್ವಿಗಳು ತಟ್ಟನೆ ಅವನ ಮನಸ್ಸಿನಲ್ಲಿ ಬಂದು ಹೋದವು. ಗೌಡರನ್ನೇ ದಿಟ್ಟಿಸಿ ನೋಡುತ್ತಿದ್ದ, “ಮುಂದೆ ಹೇಳಿ” ಎನ್ನುವ ರೀತಿಯಲ್ಲಿ. ಗೌಡರು ಅವನ ಮುಕದ ಬಾವನೆಗಳನ್ನು ತಿಳಿದು, ಮಾತು ಮುಂದುವರೆಸಿದರು.
“ನಮ್ ಸೀಮೆನಾಗಿ ಆ ಚಿರತೆ ಕೊಲ್ಲೋ ಗುಂಡಿಗೆ ನಿನಗ್ ಬಿಟ್ರೆ ಇನ್ಯಾರಗಿದೆ ಹೇಳು?” ಎಂದು ಅವನ ಉತ್ತರಕ್ಕಾಗಿ ಮಾತನ್ನು ಅಲ್ಲಿಗೇ ನಿಲ್ಲಿಸಿದರು.
ಗೌಡರ ಮಾತಿನ ಹುರುಳು ಬಯ್ರಪ್ಪನಿಗೆ ತಕ್ಶಣ ಗೊತ್ತಾಯಿತು. ಏರು ದನಿಯಲ್ಲಿ ಉದ್ಗರಿಸಿದನು, “ನಾನಾ?!” ಎಂದು. ಕನಸು ಮನಸಿನಲ್ಲಿಯೂ ಅವನು ಈ ಮಾತನ್ನು ನಿರೀಕ್ಶಿಸಿರಲಿಲ್ಲ. ಬೆರಗು, ಗೊಂದಲ, ಗಾಬರಿ ಎಲ್ಲ ಒಟ್ಟಿಗೆ ಆಗಿ ಅವನ ಎದೆಬಡಿತ ಹೆಚ್ಚಾಯಿತು.
ಒಪ್ಪಿಗೆ ಇಲ್ಲದ ಅವನ ದನಿ ಕಂಡ ಗೌಡರು, ಅವನನ್ನು ಒಪ್ಪಿಸಲು ಮುಂದಾದರು. ಈ ಕೆಲಸವನ್ನು ಅವನೊಬ್ಬನೇ ಮಾಡಬಲ್ಲನೆಂದು ಅವರಿಗೆ ಮನವರಿಕೆಯಾಗಿತ್ತು.
“ಹೌದು ಬಯ್ರಪ್ಪಣ್ಣ. ನೀನೇ ಮಾಡಬೇಕು. ಹಳ್ಳಿ ಜನ ಎಲ್ಲಾ ನಿನ್ನೇ ನಂಬಕಂಡವ್ರೆ. ಬೇಕಿದ್ರೆ ಈರಯ್ಯನೋರ‍್ನೆ ಕೇಳು” ಎಂದು ತಮ್ಮ ಜೊತೆ ಬಂದಿದ್ದ ಹಿರಿ ತಲೆಯೆಡೆಗೆ ನೋಡಿದರು.
“ಹೌದು ಬಯ್ರಪ್ಪ. ಈಗೆ ನೀನೊಬ್ನೇ ನಮಗ್ ದಿಕ್ಕು” ಎಂದರು ಈರಯ್ಯನವರು.
ಬಯ್ರಪ್ಪ ತಲೆ ಕೆಳಗಾಕಿ ಯೋಚಿಸುತ್ತಾ ಕುಳಿತ. ಎಶ್ಟೊತ್ತಾದರೂ ಮಾತಾಡಲಿಲ್ಲ. ಗೌಡರೇ ಅಲ್ಲಿ ತುಂಬಿದ್ದ ಮೌನ ಮುರಿದರು,
“ಬಯ್ರಪ್ಪ, ನನ್ ಕೈಲಿ ಆಗುತ್ತಾ ಅಂತ ಅನ್ಕೋಬೇಡಾ. ನಿನ್ ಶಕ್ತಿನಾಗೆ ನಂಗ್ ಪೂರ‍್ತಿ ನಂಬಿಕೆ ಅದೆ. ನೀನ್ ಈ ಕೆಲ್ಸ್ ಮಾಡೇ ಮಾಡ್ತೀಯಾ. ನಿನೆಗಿರೋ ಗುಂಡಿಗೆ ಮುಂದೆ ಆ ಚಿರತೆ ಯಾವ್ ಮಹಾ ಬಿಡು.” ಎಂದು ಅವನನ್ನು ಹುರಿದುಂಬಿಸುವ ಮಾತನಾಡಿದರು.
“ಅದು ಹಂಗಲ್ಲಾ ಗೌಡ್ರೆ” ಎಂದು ಮಾತನ್ನು ಅರ‍್ದಕ್ಕೇ ನಿಲ್ಲಿಸಿದ ಬಯ್ರಪ್ಪ.
ಅಶ್ಟರಲ್ಲಿ ಗೌಡರು ಮುಂದೆ ಬಂದು, ಅವನ ಕಯ್ ಹಿಡಿದು ಬೇಡಿಕೊಂಡರು, “ಬಯ್ರಪ್ಪ. ನೀನೇ ದಿಕ್ಕು ಅಂತಾ ಬಂದಿದೀವಿ. ನೀನು ಇಲ್ಲಾ ಅಂದ್ರೆ ನಮ್ಗೆ ಊರು ಬಿಡೊದೊಂದೆ ದಾರಿ”.
ಗೌಡರ ಮಾತಿನಿಂದ ಬಯ್ರಪ್ಪನಿಗೆ ಕಟ್ಟಿಹಾಕಿದಂತಾಯಿತು. ಆದರೂ ತಕ್ಶಣ ಒಪ್ಪಿಕೊಳ್ಳಲು ಅವನ ಮನಸ್ಸು ಹಿಂಜರಿಯಿತು.
“ಗೌಡ್ರೆ, ನಾನ್ ಒಂದ್ ಗಳಿಗೆ ಯೋಚ್ನೆ ಮಾಡಿ ನಾಳೆ ತಿಳಿಸ್ಲಾ?”
ಈಗ ಗೌಡರಿಗೂ ಅವನ ಮಾತಿಗೆ ಇಲ್ಲ ಎನ್ನಲು ಆಗಲಿಲ್ಲ. “ಸರಿ ಬಯ್ರಪ್ಪ. ನಾವು ನಾಳೆ ಸಂಜೆ ಬರ‍್ತೀವಿ. ನೀನ್ ಒಪ್ಕೊಂಡೇ ಒಪ್ಕೊತೀಯಾ ಅಂತ ನಂಗ್ ನಂಬಿಕೆ ಅದೆ” ಎಂದರು.
ಆ ರಾತ್ರಿ ಬಯ್ರಪ್ಪ ಸರಿಯಾಗಿ ನಿದ್ದೆ ಮಾಡಲಿಲ್ಲ. ಬೆಳಗು ಹರಿಯುವ ಮುಂಚೆಯೇ ಎದ್ದು ಕೂತಿದ್ದ. ಚಿಂತೆ ಅವನನ್ನು ಕಾಡುತಿತ್ತು. ಬೆಳಗು ಮೂಡುವ ಹೊತ್ತಿಗೆ ಮನೆ ಗುಡಿಸಲು ಬಂದ ಆಳು ನಾಗಪ್ಪ, ಆಗಲೇ ಎದ್ದು ಕುಂತಿದ್ದ ತನ್ನ ಸ್ವಾಮಿಯನ್ನು ನೋಡಿ ಬೆರಗಾದನು. ತನ್ನ ಸ್ವಾಮಿ ಅಶ್ಟು ಬೇಗ ಎದ್ದದ್ದು ಅವನಿಗೆ ನೆನಪಿರಲಿಲ್ಲ.
“ಯಾಕ್ ಸಾಮ್ಯಾರೆ, ಇಶ್ಟು ಲಗು ಎದ್ದೀರಿ?” ಎಂದ.
ಬಯ್ರಪ್ಪನಿಗೆ ನಾಗಪ್ಪ ಇಪ್ಪತ್ತು ವರುಶಗಳಿಂದ ಪರಿಚಯ. ಪರಿಚಯಕ್ಕಿಂತ ಗೆಳೆತನ ಅನ್ನಬಹುದು. ಅವನಿಗಿಂತ ಸುಮಾರು ಇಪ್ಪತ್ತು ವರುಶ ದೊಡ್ಡವನು. ನಂಬಿಕಸ್ತ ಆಳು. ಯಾವತ್ತೂ ಬಯ್ರಪ್ಪನ ಹಿತ ಕಾಪಾಡುವವನು. ಬಯ್ರಪನ ಚಿಕ್ಕಪನ ಕಾಲದಿಂದಲೂ ಅವರ ತೋಟದಲ್ಲಿ ಕೆಲಸಮಾಡುತ್ತಿದ್ದನು. ಹೀಗಾಗಿ ಅವರಿಬರಲ್ಲಿ ಆತ್ಮೀಯತೆ ಬೆಳೆದಿತ್ತು. ತನ್ನ ಚಿಂತೆಯನ್ನು ಅವನ ಬಳಿ ಹೇಳಿಕೊಳ್ಳಲು ಯಾವ ಮುಜುಗರವೂ ಈಗ ಉಳಿದಿರಲಿಲ್ಲ.
“ನಾಗಪ್ಪ, ನಿನ್ ಹತ್ರ ಒಂದ್ ವಿಶ್ಯಾ ಹೇಳಬೇಕಿತ್ತು”
“ಏನ್ ಸಾಮ್ಯಾರೆ?”
“ನಿನ್ನೆ ಗೌಡ್ರು ಬಂದಿದ್ರಲ್ಲಾ… ಅದೇ… ನಂಗ್ ಚಿರತೆ ಕೊಲ್ಲು ಅಂತ ಹೇಳೋಕೆ. ನಿಂಗೇನ್ ಅನ್ಸುತ್ತೆ?”
“ಅದೇನ್ ಮಹಾ ಕೆಲಸ ಬಿಡಿ ಸಾಮ್ಯಾರೆ. ಕುಸ್ತಿನಾಗ್ ನೀವ್ ಜಟ್ಟಿಗಳನ್ನಾ ಎತ್ತಿ ಒಗದಂಗ್ ಆ ಚಿರತೆನಾ ಒಂದ್ ಏಟ್ಗೇ ಮುಗುಸ್ತೀರಿ”.
ಅವನ ಮಾತು ಕೇಳಿ ಚಿಂತೆಯಲ್ಲೂ ಬಯ್ರಪ್ಪನಿಗೆ ನಗು ಬಂತು. “ಅದೇ ವಿಶ್ಯಾನ ನಿನ್ ಹತ್ರ ಹೇಳಬೇಕು” ಎಂದು ಮಾತು ಮುಂದುವರೆಸಿದನು. ನಾಗಪ್ಪ ಅಲ್ಲೇ ಕುಂತು ಕಿವಿಗೊಟ್ಟು ಕೇಳಿದ.
“ನಾನು ನಿಜವಾಗಲೂ ಯಾವ್ ಕುಸ್ತಿ ಪಯ್ಲ್ವಾನನೂ ಅಲ್ಲಾ. ಯಾರನ್ನೂ ಎತ್ತಿ ಹಾಕಿಲ್ಲ.”
ನಾಗಪ್ಪನಿಗೆ ಗೊಂದಲವಾಯಿತು. “ಏನ್ ಹಂಗಂದ್ರೆ?” ಎಂದು ಕೇಳಿದನು.
“ಹೇಳ್ತೀನಿ ಕೇಳು. ಇಪ್ಪತ್ತು ವರ‍್ಶದ್ ಕೆಳಗೆ ನಾನು ನಮ್ಮಪ್ಪನ ಜೊತೆ ಇಲ್ಲಿಂದ ತುಂಬಾ ದೂರದಲ್ಲಿರೋ ಮಂಗ್ಳೂರಿನಲ್ಲಿದ್ದೆ. ನಾನ್ ತುಂಬಾ ಚಿಕ್ಕೊನಿದ್ದಾಗ ಅಮ್ಮ ಸತ್ತಹೋದ್ಳಂತೆ. ಮಂಗ್ಳೂರನಲ್ಲಿ ಯಾವ್ದೋ ಕೆಲಸ ಸಿಕ್ತು ಅಂತ ಅಪ್ಪ ನನ್ ಕರಕೊಂಡು ಅಲ್ಲಿಗೇ ಹೋದ್ನಂತೆ. ನಂಗ್ ಯಾವ್ದು ನೆನಪಿಲ್ಲ. ನಾನು ಅಲ್ಲೇ ಬೆಳದೆ, ಅಪ್ಪನ ಹಂಗೆ ಎತ್ತರಕ್ಕೆ, ದಪ್ಪಗೆ. ನಾನೂ ಅಲ್ಲೇ ಒಂದ್ ಕೆಲಸ ಹುಡುಕ್ಕೊಂಡೆ. ಮದುವೆನೂ ಆದೆ. ಆದ್ರೆ ಏನ್ ಮಾಡೋದು, ಒಂದ್ ವರ‍್ಶಕ್ಕೇ ಅವಳು ಯಾವನ್ ಜೊತೆನೋ ಓಡ್ ಹೋದ್ಳು. ಇಲ್ಲಿ ಚಿಕ್ಕಪ್ಪ ಸಾಯೋದಕ್ಕೂ, ಅಲ್ಲಿ ಅಪ್ಪಂಗೆ ಲಕ್ವಾ ಹೊಡಯೋದಕ್ಕೂ ಸರಿಯಾಯ್ತು ನೋಡು. ಕುಡದೂ ಕುಡದೂ ಆರೋಗ್ಯ ಹಾಳ್ ಮಾಡ್ಕೊಂಡ. ಚಿಕ್ಕಪ್ಪ ಸತ್ತ್ ವಿಶ್ಯಾ ನಮಗ್ ಗೊತ್ತಾಗಿ, ಇಲ್ಲಿ ತೋಟ ನೋಡ್ಕೊಳ್ಳೊದಕ್ಕೆ ಯಾರೂ ಇಲ್ಲಾ ಅಂತ ಅಪ್ಪ ನಂಗೆ ಇಲ್ಲಿ ಹೋಗು ಅಂತ ಹೇಳಿದ್ರು. ಊರು ಹೊಸದು, ಯಾರನ್ನೂ ನಂಬೇಡ, ನಿನ್ ಎಚ್ಚರಕೆಯಲ್ಲಿ ನೀನಿರು ಅಂತ ಹೇಳಿ ಅವನೂ ಸತ್ತ್ ಹೋದ. ಅವ್ನ್ ಮಣ್ಣ ಮಾಡಿ ನಾನು ಸೀದಾ ಇಲ್ಲಿಗ್ ಬಂದೆ. ಅಪ್ಪ ಹೇಳಿದ್ ಮಾತು ನಂಗೆ ಹುಳದಂಗೆ ತಲೇಲಿ ಕೊರೀತಾ ಇತ್ತು. ಊರು ಹೊಸದು, ಜನ ಹೊಸಬ್ರು, ಕೆಲಸ ಹೊಸದು. ಯಾರನ್ನೂ ನಂಬೊಹಂಗಿಲ್ಲ. ಅದಕ್ಕೇ ಯಾರ್ ಹತ್ರಾನೂ ಹೆಚ್ಚ್ ಮಾತಾಡ್ತಿರಲಿಲ್ಲ. ನನ್ ಎಚ್ಚರಿಕೆಲಿ ನಾನ್ ಇದ್ರಾಯ್ತು ಅಂತ ಒಂದ್ ದೊಡ್ದ ಚಾಕು ತಂದೆ. ನನ್ ಆಕಾರ ನೋಡಿ, ಕುಸ್ತಿ ಪಯ್ಲ್ವಾನಾ ಅಂತ ನೀನೇ ಕೇಳ್ದೆ. ನಾನೂ ಇರಲಿ ಅಂತ ಹೂಂ ಅಂದೆ. ನೀನ್ ಅದನ್ನೇ ಸತ್ಯ ಮಾಡಿ ಊರೋರಿಗೆಲ್ಲ ಹೇಳಿ, ಎಲ್ರೂ ನಂಗೆ ಹೆದರೋಕ್ ಶುರು ಮಾಡಿದ್ರು. ನಂಗೂ ಒಂತರಾ ಕುಶಿಯಾಯ್ತು. ನಾನೂ ಅದನ್ನೇ ಮುಂದವರಿಸ್ದೆ. ಎಲ್ರುಗೂ ಕಾಣೋ ತರಾ ಚಾಕು ಸಿಕ್ಕಸಕೊಂಡ್ ಓಡಾಡ್ತಿದ್ದೆ.”
ಅವನ ಮಾತನ್ನು ತಡೆದು ನಾಗಪ್ಪ ಕೇಳಿದ, “ಅಂದ್ರೆ ನೀವು ಯಾವತ್ತೂ ಕುಸ್ತಿ ಆಡೇ ಇಲ್ವಾ?”
ಬಯ್ರಪ್ಪ ನಕ್ಕು ಹೇಳಿದ “ಕುಸ್ತಿ ಆಡೋರನ್ನೂ ನಾ ಸರಿಯಾಗಿ ನೋಡಿಲ್ಲ ನಾಗಪ್ಪ”.
“ಹೌದಾ!” ನಾಗಪ್ಪ ಗೊಂದಲಕ್ಕೆ ಬಿದ್ದನು. “ನೀವು ಕುಸ್ತಿ ಪಯ್ಲ್ವಾನ ಅನ್ಕೊಂಡು, ಅಶ್ಟ ಜನಕ್ ಹೊಡ್ದಾಕಿದೀರಾ, ಇಶ್ಟ ಜನಕ್ ಹೊಡ್ದಾಕಿದೀರಾ ಅಂತ ಕತೆ ಕಟ್ಟಿ ಊರೋರ‍್ಗೆಲ್ಲಾ ಹೇಳಿಬಿಟ್ಟೀನಲ್ಲಾ ಸಾಮ್ಯಾರೆ?”
“ನೀನ್ ಹೇಳ್ದಾಗ ನಾನೂ ಉಬ್ಬಿದ್ದೆ. ಆದ್ರೆ ಈಗ ಅದೇ ಮುಳು ಆಗೈತೆ. ಚಿರತೆ ಹೊಡಯೋದ್ ಹಂಗಿರ‍್ಲಿ, ಹೆಗ್ಗಣ ಕೂಡ ಹೊಡಯೋ ದರ‍್ಯ ನಂಗ ಇಲ್ಲಾ”.
“ಬುಡಿ ಸಾಮ್ಯಾರೆ, ನಿಮಗ್ ಅದೆಶ್ಟ್ ಶಕ್ತಿ ಅದೆ. ನೀವು ಈಗ್ಲೂ ಮನಸ್ ಮಾಡುದ್ರೆ ಆ ಚಿರತೆನಾ ಹೊಡಿಬೌದು.”
“ಶಕ್ತಿ ಇರೋದು ಮಯ್ ನಾಗಲ್ಲಾ ನಾಗಪ್ಪ, ಮನಸ್ಸಿನಾಗೆ. ನನ್ ಕಯ್ಲಿ ಆ ಕೆಲಸ ಆಗುಲ್ಲ ಅಂತ ನಂಗ್ ಗೊತ್ತು” ಎಂದು ನಿಟ್ಟುಸಿರು ಬಿಟ್ಟನು.
ತುಸು ಹೊತ್ತ ಮೌನದ ಮೇಲೆ, ನಾಗಪ್ಪ ಕೇಳಿದನು, “ಈಗ್ ಏನ್ ಮಾಡ್ತೀರ ಸಾಮ್ಯಾರೆ?”
“ನಾನೂ ರಾತ್ರಿಯೆಲ್ಲಾ ಯೋಚಿಸ್ದೆ. ಊರೋರೆಲ್ಲ ನನ್ ನಂಬ್ಕೊಂಡು ಕುಂತಾರೆ. ನಾನು ಇರೋ ಸತ್ಯ ಹೇಳಿದ್ರೆ, ನಂಗ್ ನಾಳೆ ಈ ಊರಲ್ಲಿ ಓಡಾಡೋಕು ಕಶ್ಟ ಆಗಬೌದು. ಎಲ್ರೂ ನನ್ನ ಹೀಯಾಳಿಸ್ತಾರೆ. ನನಗ ದೈರ‍್ಯ ಇಲ್ಲಾ ಅಂತ ಗೊತ್ತಾದ್ರೆ, ಇವತ್ತು ನನಗ್ ಹೆದರೋರೆಲ್ಲ ನಾಳೆ ನನಗ್ ಕೇಡ್ ಮಾಡ್ಬೌದು. ನನಗಾದ್ರೂ ಯಾರ್ ಇದಾರೆ ಕಾಪಾಡೋಕೆ? ಆದ್ರೆ ಸತ್ಯ ಹೇಳ್ದಿದ್ರೆ ಚಿರತೆ ಕೊಲ್ಲೊದಕ್ ಹೋಗ್ಬೇಕಾಗುತ್ತೆ. ಗೌಡ್ರಗೆ ಇಲ್ಲಾ ಅನ್ನೋಕಾಗುಲ್ಲ. ಹೋಗೊಲ್ಲ ಅಂತ ಕಡ್ಡಿ ತುಂಡ ಮಾಡ್ದಂಗೆ ಹೇಳಿದ್ರೂ, ನನಗ್ ಈಗಿರೋ ಮರ‍್ಯಾದೆ ಮುಂದೆ ಇರುಲ್ಲ. ಏನ್ ಮಾಡ್ಲಿ ತಿಳೀತಿಲ್ಲ.”
ಮತ್ತೇ ಮೌನ. ನಾಗಪ್ಪನ ಅನಿಸಿಕೆ ತಿಳಿದುಕೊಳ್ಳಲು ಅವನನ್ನೇ ಕೇಳಿದ ಬಯ್ರಪ್ಪ. “ನೀನೇ ಹೇಳು ನಾಗಪ್ಪ. ಯಾವ್ದು ಸರಿ? ಜನಗಳ ಕಣ್ಣಲ್ಲಿ ಸಣ್ಣವನಾಗಿ ಕೊನೆವರ‍್ಗೂ ಇದ್ದುಬಿಡ್ಲಾ, ಇಲ್ಲಾ ಚಿರತೆ ಕಯ್ಯಲ್ ಸತ್ತು ಅವರ ನಂಬಿಕೆ ಉಳಿಸ್ಕೊಳ್ಳಾ?”
ನಾಗಪ್ಪ ತುಸು ಹೊತ್ತು ಯೋಚಿಸಿ, “ನಂಗ್ ಗೊತ್ತಾಯ್ತಿಲ್ಲಾ ಸಾಮ್ಯಾರೆ, ನಿಮ್ ಮಾತಿಗೆ ಮೂಕ ಆಗೀನಿ.” ಅಂದ.
ನಾಗಪ್ಪ ಇಡೀ ದಿನ ಅದೇ ಗುಂಗಿನಲ್ಲಿ, ತನ್ನ ಕೋಣೆ ಬಿಟ್ಟು ಹೊರಬರಲಿಲ್ಲ. ಸಂಜೆಯಾಯಿತು. ಗೌಡ್ರು ನಿನ್ನೆ ಹೇಳಿದಂತೆ ಅದೇ ಸಮಯಕ್ಕೆ ಅವನ ಮನೆಗೆ ಬಂದರು. ಗೌಡರು ಬಂದ ವಿಶಯ ತಿಳಿಸಲು ಬಯ್ರಪ್ಪನ ಕೋಣೆಗೆ ನಾಗಪ್ಪ ಬಂದ.
“ಗೌಡ್ರು ಬಂದ್ರು ಸಾಮ್ಯಾರೆ. ಏನ್ ಹೇಳ್ತೀರಿ?”
ಬಯ್ರಪ್ಪ ತನ್ನ ಕುರ‍್ಚಿಯಿಂದ ಎದ್ದು, ಪಕ್ಕದಲ್ಲಿಟ್ಟಿದ್ದ ಚರ‍್ಮದ ಪಟ್ಟಿಯನ್ನು ಸೊಂಟಕ್ಕೆ ಸುತ್ತಿ, ಅದರಲ್ಲಿ ಚಾಕು ಸಿಕ್ಕಿಸಿ, ಚಿರತೆಯನ್ನು ಹುಡುಕಲು ಹೊರಟು ನಿಂತ. ತನ್ನ ಸ್ವಾಮಿಯ ತೀರ‍್ಮಾನ ಕಂಡು ನಾಗಪ್ಪನ ಕಣ್ಣುಗಳು ತೇವಗೊಂಡವು.
(ಚಿತ್ರಸೆಲೆ: kolkatasayantanc.blogspot.in )
ಇತ್ತೀಚಿನ ಅನಿಸಿಕೆಗಳು