ಸೋಲರಿಯದ ಇಂಡಿಯಾ, ಗೆಲುವು ಕಾಣದ ಪಾಕ್

ಹರ‍್ಶಿತ್ ಮಂಜುನಾತ್.

India-vs-Pakistan-World-cup-feb-5

ಇಂಡಿಯಾ-ಪಾಕಿಸ್ತಾನ! ಈ ಎರಡು ನಾಡುಗಳ ನಡುವಣ ಕೊಂಡಿ ಹೇಗೇ ಇದ್ದರೂ, ಮಂದಿ ಮಾತ್ರ ಹೆಚ್ಚಿನ ವಿಚಾರವನ್ನು ಸೋಲು ಗೆಲುವಿನ ಲೆಕ್ಕಾಚಾರದಲ್ಲಿಯೇ ನೋಡುತ್ತಾರೆ. ಇದು ದಾಂಡಾಟದ ಪಯ್ಪೋಟಿಯಿಂದ ಏನೂ ಹೊರತಾಗಿಲ್ಲ.1952ರಲ್ಲಿ ಮೊದಲ ಬಾರಿಗೆ ಇಂಡಿಯಾ ಮತ್ತು ಪಾಕ್ ನಡುವೆ ಟೆಸ್ಟ್ ಪಯ್ಪೋಟಿಯನ್ನು ನಡೆಸಲಾಯಿತು. ಬಳಿಕ 1978ರಲ್ಲಿ ಇತ್ತಂಡಗಳು ಮೊದಲ ಬಾರಿಗೆ ಒಂದು ದಿನದಾಟದ ಪಯ್ಪೋಟಿಯಲ್ಲಿ ಎದುರಾದವು. ಅಲ್ಲಿಂದ ಇಲ್ಲಿಯ ವರೆಗೆ ಅರವತ್ತು ಟೆಸ್ಟ್ ಪಯ್ಪೋಟಿ, ನೂರ ಇಪ್ಪತ್ತೇಳು ಒಂದು ದಿನದ ದಾಂಡಾಟ ಪಯ್ಪೋಟಿಗಳು ನಡೆದಿವೆ. ಇದರಲ್ಲಿ ಎರಡೂ ನಾಡುಗಳು ಸೋಲು ಗೆಲುವಿನ ರುಚಿ ನೋಡಿವೆ.

ಆದರೆ ಪ್ರತೀ ಬಾರಿ ಹೊಸ ಪಯ್ಪೋಟಿಗಳು ನಡೆದಾಗಲೂ ಕುತೂಹಲ ಮಾತ್ರ ಮೊದಲಿನಂತೆಯೇ ಇರುತ್ತದೆ. ಅದರಲ್ಲೂ ವಿಶ್ವಕಪ್ ಪಯ್ಪೋಟಿಯಲ್ಲಿ ಇತ್ತಂಡಗಳು ಮಕಾಮುಕಿಯಾದರೆ ಮಂದಿಯೊಳಗೆ ಅದರ ಹುರುಪೇ ಬೇರೆ. ಅಂತೆಯೇ ಒಟ್ಟು ಆರು ಬಾರಿ ಇತ್ತಂಡಗಳು ವಿಶ್ವಕಪ್‌ನಲ್ಲಿ ಮುಕಾಮುಕಿಯಾಗಿದೆ. ವಿಶೇಶವೆಂದರೆ ಆ ಆರೂ ಬಾರಿ ಕೂಡ ಪಾಕ್ ಇಂಡಿಯಾ ತಂಡದೆದುರು ಸೋತಿದೆ. ಸಿಡ್ನಿ, ಬೆಂಗಳೂರು, ಮ್ಯಾಂಚೆಸ್ಟರ್, ಸೆಂಚೂರಿಯನ್, ಮೊಹಾಲಿ, ಅಡಿಲೇಡ್ ಹೀಗೆ ಪ್ರತೀ ಬಾರಿ ವಿಶ್ವಕಪ್ ಮುಕಾಮುಕಿಗೆ ಅಂಗಣಗಳು ಬದಲಾದರೂ ಹಿನ್ನಡವಳಿ ಮಾತ್ರ ಬದಲಾಗುತ್ತಿಲ್ಲ. ಅದೆಶ್ಟೇ ಗಟ್ಟಿ ತಂಡವನ್ನು ಕಟ್ಟಿಕೊಂಡು ಬಂದರೂ, ಪಾಕ್ ಮಾತ್ರ ಇಂಡಿಯಾ ತಂಡದೆದುರು ಸೋಲಿನ ಕಹಿ ಉಣ್ಣುತ್ತಿದೆ, ಹಾಗೆಯೇ ವಿಶ್ವಕಪ್‌ನಲ್ಲಿ ತನ್ನ ಹಿನ್ನಡವಳಿಯನ್ನು ಮರುಕಳಿಸುತ್ತಾ ಬಂದಿರುವ ಇಂಡಿಯಾ ಗೆಲುವಿನ ಸಿಹಿ ಉಣ್ಣುತ್ತಿದೆ. ಹೀಗೆ ವಿಶ್ವಕಪ್ ಎಂಬ ದೊಡ್ಡಾಟದಲ್ಲಿ ಇತ್ತಂಡಗಳ ಸೋಲು ಗೆಲುವುಗಳತ್ತ ಬೆಳಕು ಚೆಲ್ಲುವ ಸಣ್ಣ ಬರಹವಿದು.

1992ರ ವಿಶ್ವಕಪ್

Sachin-Tendulkar-batting-for-Indiaಇದು ಇತ್ತಂಡಗಳ ಪಾಲಿಗೆ ವಿಶ್ವಕಪ್ ಎಂಬ ದೊಡ್ಡಾಟದ ಮುಕಾಮುಕಿಗೆ ಮೊದಲ ವೇದಿಕೆಯಾದ ಹಿರಿಮೆಯನ್ನು ಹೊತ್ತುಕೊಂಡಿದೆ. ಮಾರ‍್ಚ್ 4ರಂದು ಆಸ್ಟ್ರೇಲಿಯಾದ ಸಿಡ್ನಿ ಅಂಗಣದಲ್ಲಿ ನಡೆದ ಹೊನಲು ಬೆಳಕಿನ ದಾಂಡಾಟದ ಪಯ್ಪೋಟಿಗೆ ಇಡೀ ಜಗತ್ತು ಹುಬ್ಬೇರಿಸಿ ಬೆರಗುಗಣ್ಣಿನಿಂದ ನೋಡಿದ ಹೊತ್ತದು. ಶತ್ರು ನಾಡುಗಳು ಎಂದೇ ಮಂದಿಯ ಮನದಲ್ಲಿ ಅಚ್ಚೊತ್ತಿರುವಾಗ ದೊಡ್ಡಾಟದ ಈ ಪಯ್ಪೋಟಿ ಎಲ್ಲರನ್ನು ದಾಂಡಾಟದತ್ತ ಬಹುವಾಗಿ ಸೆಳೆಯಿತು. ಮಹಮ್ಮದ್ ಅಜರುದ್ದೀನ್ ಮುಂದಾಳತ್ವದಲ್ಲಿ ಅಂಗಣಕ್ಕಿಳಿದ ಇಂಡಿಯಾ ಪಡೆ, ಇಮ್ರಾನ್ ಕಾನ್ ಮುಂದಾಳತ್ವದ ಪಾಕ್ ಪಡೆಯನ್ನು ಎದುರಿಸಿತು. ನಾಣ್ಯ ಚಿಮ್ಮುಗೆಯಲ್ಲಿ ಗೆದ್ದ ಇಂಡಿಯಾ ತಂಡ ಮೊದಲು ದಾಂಡುಗಾರಿಕೆ ನಡೆಸಲು ಬಯಸಿತು. 25 ಓಟ ಗಳಿಸುವಶ್ಟರಲ್ಲಿ ಕ್ರಿಸ್ ಶ್ರೀಕಾಂತ್ ರವರನ್ನು ಕಳೆದುಕೊಂಡ ಇಂಡಿಯಾ ತಂಡ ಮೊದಲಿಗೆ ತುಸು ಕಹಿ ಅನುಬವ ಪಡೆದುಕೊಂಡಿತು. ಬಳಿಕ ಅಜರುದ್ದೀನ್ ಮತ್ತು ಜಡೇಜಾರ ಹೊತ್ತಿನರಿವಿನ ದಾಂಡುಗಾರಿಕೆಯಿಂದ ಹಿಡಿತ ಸಾದಿಸತೊಡಗಿತು. ಆಗಶ್ಟೇ ದಾಂಡಾಟದಿಂದ ಜಗತ್ತಿನೆಲ್ಲೆಡೆ ಮಿಂಚು ಹರಿಸ ತೊಡಗಿದ್ದ ಸಚಿನ್ ತೆಂಡೂಲ್ಕರ್ ಅವರಿಗೂ ಅದು ಮೊದಲ ವಿಶ್ವಕಪ್ ಕೂಟ. ಈ ಪಯ್ಪೋಟಿಯಲ್ಲಿ ಹುತ್ತರಿ ಕಳೆದುಕೊಳ್ಳದೆ 54 ಓಟ ಗಳಿಸಿದ ಸಚಿನ್ ಇಂಡಿಯಾ ತಂಡ 7 ಹುತ್ತರಿ ಕಳೆದುಕೊಂಡು 216 ಓಟ ಗಳಿಸುವುದರಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದರು. ಪಾಕ್ ಆಟಗಾರರ ಮೆಲ್ಲಗಿನ ಎಸೆತಗಟ್ಟಿನ ಕಾರಣದಿಂದಾಗಿ ಪಯ್ಪೋಟಿಯನ್ನು 49 ಎಸೆತಗಟ್ಟುಗಳಿಗೆ ಸೀಮಿತಗೊಳಿಸಲಾಯಿತು.

49 ಎಸೆತಗಟ್ಟುಗಳಿಂದ 217 ಓಟಗಳನ್ನು ಗಳಿಸುವ ಗುರಿ ಪಡೆದ ಪಾಕ್ ಪಡೆ ಕಪಿಲ್ ದೇವ್ ಮತ್ತು ಪ್ರಬಾಕರ್ ದಾಳಿಗೆ ಕುಸಿತದಿಂದಲೇ ಮೊದಲ್ಗೊಂಡಿತು. ಇಲ್ಲಿಂದ ಪಯ್ಪೋಟಿಯ ಕೊನೆಯ ಹಂತದ ವರೆಗೂ ಇಂಡಿಯಾ ತಂಡ ಪಯ್ಪೋಟಿಯ ಮೇಲೆ ತನ್ನ ಹಿಡಿತ ಸಾದಿಸುತ್ತಾ ಹೋಯಿತು. ಪಾಕ್ ಪರ ಆಮಿರ್ ಸೊಹೇಲ್ 62 ಮತ್ತು ಜಾವೆದ್ ಮಿಯಾಂದಾದ್ 40 ಓಟಗಳನ್ನು ಗಳಿಸಿದ್ದು ಬಿಟ್ಟರೆ ಬೇರೆ ಯಾವುದೇ ನೆರವು ಬರಲಿಲ್ಲ. ಕೊನೆಗೆ ಪಾಕ್ 173 ಓಟಗಳನ್ನು ಗಳಿಸಿ ತನ್ನೆಲ್ಲಾ ಹುತ್ತರಿ ಕಳೆದುಕೊಳ್ಳುವ ಮೂಲಕ ಇಂಡಿಯಾ 43 ಓಟಗಳಿಂದ ವಿಶ್ವಕಪ್‌ನ ಮೊದಲ ಪಯ್ಪೋಟಿಯನ್ನು ಗೆದ್ದುಕೊಂಡಿತು. ಇಂಡಿಯಾ ಪರ ಕಪಿಲ್ ದೇವ್, ಶ್ರೀನಾತ್ ಮತ್ತು ಪ್ರಬಾಕರ್ ತಲಾ ಎರಡು ಹುತ್ತರಿ ಎಗರಿಸಿ ಮಿಂಚಿದ್ದರು.

* ಮಹಮ್ಮದ್ ಅಜರುದ್ದೀನ್ ಅವರು ಕ್ರಿಸ್ ಶ್ರೀಕಾಂತ್ ರವರ ಬಳಿಕ 1990ರಲ್ಲಿ ಇಂಡಿಯಾದ ಮುಂದಾಳತ್ವವನ್ನು ವಹಿಸಿಕೊಂಡರು. ಇಲ್ಲಿಂದ ದಾಂಡುಗಾರಿಕೆಯಲ್ಲಿ ಬಾರಿ ಹಿನ್ನಡೆ ಗಳಿಸಿದ ಅಜರುದ್ದೀನ್ ಓಟ ಗಳಿಸಲು ಪರದಾಡಿದರು. ಆದರೆ 1992 ವಿಶ್ವಕಪ್‌ನ ಒಳ್ಳೆಯ ದಾಂಡುಗಾರಿಕೆ ಮಾಡುವ ಮೂಲಕ ಇಂಡಿಯಾ ಪರ ವಿಶ್ವಕಪ್‌ನಲ್ಲಿ ಹೆಚ್ಚು ಓಟ ಗಳಿಸಿದ ಪೋಟಿಗಾರ ಎಂದೆನಿಸಿಕೊಂಡರು.
* ಇಮ್ರಾನ್ ಕಾನ್‌ರವರು 1987ರಲ್ಲಿ ದಾಂಡಾಟದಿಂದ ಬಿಡುವು ಪಡೆದ ಹೊತ್ತಿನಲ್ಲಿ, ಪಾಕಿಸ್ತಾನದ ಅದ್ಯಕ್ಶ ಜನರಲ್ ಜಿಯಾ-ಉಲ್-ಹಕ್‌ರವರ ಮನವಿಯ ಮೇರೆಗೆ ಮತ್ತೆ 1988ರಲ್ಲಿ ದಾಂಡಾಟಕ್ಕೆ ಮರಳಿದ್ದರು ಮತ್ತು ಪಾಕ್‌ನ ಮುಂದಾಳತ್ವ ವಹಿಸಿಕೊಂಡರು. 1992 ವಿಶ್ವಕಪ್‌ನಲ್ಲಿ ಪಾಕ್ ಇಂಡಿಯಾ ಎದುರು ಸೋತರೂ, ಕೊನೆ ಹಂತದ ಪಯ್ಪೋಟಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು.

1996ರ ವಿಶ್ವಕಪ್

236533,xcitefun-world-cup-1996-1ವಿಶ್ವಕಪ್ ದೊಡ್ಡಾಟದಲ್ಲಿ ಎರಡನೇ ಬಾರಿಗೆ ಇಂಡಿಯಾ ಮತ್ತು ಪಾಕ್ 1996ರಲ್ಲಿ ಎದುರಾದವು. ಇಂಡಿಯಾ, ಪಾಕಿಸ್ತಾನ ಮತ್ತು ಶ್ರೀಲಂಕಾ ಸೇರಿಸಿದಂತೆ ಮೂರು ನಾಡಿನಲ್ಲಿ ನಡೆಸಿಕೊಡಲಾಗಿದ್ದ ಈ ವಿಶ್ವಕಪ್‌ನಲ್ಲಿ, ಇಂಡಿಯಾಗೆ ಮೊದಲ ಬಾರಿ ವಿಶ್ವಕಪ್ ನಡೆಸಿಕೊಡುವ ಅವಕಾಶ ಸಿಕ್ಕಿತು. ಅಲ್ಲದೇ 1989ರಲ್ಲಿ ನಡೆದ ನೆಹರೂ ಕಪ್ ಬಳಿಕ ಪಾಕ್ ಇಂಡಿಯಾ ನೆಲದಲ್ಲಿ ಮಾಡಿದ ದಾಂಡಾಟದ ಮೊದಲ ಪಯ್ಪೋಟಿ. ಮಾರ‍್ಚ್ 9ರಂದು ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಹೊನಲು ಬೆಳಕಿನ ದಾಂಡಾಟದ ಪಯ್ಪೋಟಿಯು ನಿಜಕ್ಕೂ ಇಂಡಿಯಾಕ್ಕೆ ಸವಾಲಿನದ್ದಾಗಿತ್ತು. ಏಕೆಂದರೆ ಅದು ಎಂಟರಗಟ್ಟದ ಪಯ್ಪೋಟಿ. ಜೊತೆಗೆ 1992ರ ವಿಶ್ವಕಪ್ ಗೆಲ್ಲುವ ಮೂಲಕ ಪಾಕ್ ತನ್ನ ಗಟ್ಟಿತನವನ್ನು ಅದಾಗಲೇ ಜಗತ್ತಿಗೆ ತೋರಿಸಿಕೊಟ್ಟಿತ್ತು. ಅಲ್ಲದೇ ಮತ್ತೆ ವಿಶ್ವಕಪ್ ಗೆಲ್ಲಬಲ್ಲ ತಂಡವೆಂಬ ಹಣೆಪಟ್ಟಿಯನ್ನು ಕೂಡ ಅಂಟಿಸಿಕೊಂಡಿತ್ತು.

ಮತ್ತೊಂದು ವಿಶೇಶವೆಂದರೆ ಇದು ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಮೊದಲ ಹೊನಲು ಬೆಳಕಿನ ದಾಂಡಾಟದ ಪಯ್ಪೋಟಿ ಕೂಡ. ಮತ್ತೆ ನಾಣ್ಯ ಚಿಮ್ಮುಗೆಯಲ್ಲಿ ಗೆದ್ದ ಇಂಡಿಯಾ ತಂಡ ಮೊದಲು ದಾಂಡುಗಾರಿಕೆ ನಡೆಸಿತು. ಸಿದ್ದು ಅವರ 93 ಓಟಗಳು ಮತ್ತು ಕೊನೆಯ ಹೊತ್ತಿನಲ್ಲಿ ಜಡೇಜಾರ ಬಿರುಸಿನ 45 ಓಟಗಳ ನೆರವಿನಿಂದ, ಇಂಡಿಯಾ ನಿಗದಿತ 50 ಎಸೆತಗಟ್ಟುಗಳಲ್ಲಿ 8 ಹುತ್ತರಿ ಕಳೆದುಕೊಂಡು 287 ಓಟಗಳನ್ನು ಗಳಿಸಿತು. ವಕಾರ್ ಯೂನಿಸ್ ಎಸೆದ ಕೊನೆಯ ಎಸೆತಗಟ್ಟಿನಲ್ಲಿ 22 ಓಟಗಳನ್ನು ಗಳಿಸಿದ್ದಲ್ಲದೇ, ಕೊನೆಯ 4 ಎಸೆತಗಟ್ಟುಗಳಲ್ಲಿ 57 ಓಟಗಳನ್ನು ದೋಚಿ, ಇಂಡಿಯಾ ದೊಡ್ಡ ಗಳಿಕೆಯನ್ನು ಪಾಕಿಸ್ತಾನದ ಮುಂದಿಟ್ಟಿತು.

ಹಿಂದಿನ ವಿಶ್ವಕಪ್ ನಂತೆಯೇ ಈ ವಿಶ್ವಕಪ್‌ನಲ್ಲೂ ಮೆಲ್ಲಗಿನ ಎಸೆತಗಟ್ಟಿನಿಂದಾಗಿ ಪಾಕ್ ತಂಡಕ್ಕೆ 49 ಎಸೆತಗಟ್ಟುಗಳಿಂದ 288 ಓಟಗಳನ್ನು ಗಳಿಸುವ ಗುರಿ ನೀಡಲಾಯಿತು. ಈ ಗುರಿಯನ್ನು ಅಚ್ಚುಕಟ್ಟಾಗಿ ಬೆನ್ನಟ್ಟಿದ ಪಾಕ್ ತಂಡ, ಮೊದಲ 10 ಎಸೆತಗಟ್ಟುಗಳಲ್ಲಿ 84 ಓಟಗಳನ್ನು ಗಳಿಸಿ ಇಂಡಿಯಾದ ಎಸೆತಗಾರರನ್ನು ಬೆಚ್ಚಿಬೀಳಿಸಿತು. ಆದರೆ ಆ ಬಳಿಕ ವೆಂಕಟಪತಿ ರಾಜು ಮತ್ತು ಅನಿಲ್ ಕುಂಬ್ಳೆಯವರ ಒಳ್ಳೆಯ ಎಸೆತಗಾರಿಕೆಯಿಂದ ಪಾಕ್ ಕುಸಿತ ಕಾಣುತ್ತಾ ಹೋಯಿತಲ್ಲದೇ, ನಿಗದಿತ 49 ಎಸೆತಗಟ್ಟುಗಳಿಂದ 9 ಹತ್ತರಿ ಕಳೆದುಕೊಂಡು 288 ಓಟಗಳನ್ನು ಗಳಿಸಿತಶ್ಟೆ. ಆ ಮೂಲಕ ಪಾಕ್ ಮತ್ತೆ ಇಂಡಿಯಾದ ಮುಂದೆ 39 ಓಟಗಳಿಂದ ಸೋಲೊಪ್ಪಿಕೊಂಡಿತು. ಇದು 1992ರ ವಿಶ್ವಕಪ್ ಬಳಿಕ ಪಾಕ್ ಇಂಡಿಯಾದೆದುರು ಸೋತ ಮೊದಲ ದಾಂಡಾಟದ ಪಯ್ಪೋಟಿ. ಅಲ್ಲದೇ 1987ರ ಬಳಿಕ ಪಾಕ್ ಇಂಡಿಯಾ ನಾಡಿನಲ್ಲಿ ಇಂಡಿಯಾದೆದುರು ಸೋತ ಮೊದಲ ಪಯ್ಪೋಟಿ.

* ಮತ್ತೆ ಮಹಮ್ಮದ್ ಅಜರುದ್ದೀನ್ ಅವರ ಮುಂದಾಳತ್ವದಲ್ಲಿ ಆಡಿದ್ದ ಇಂಡಿಯಾ ನಾಲ್ಕರ ಗಟ್ಟ ತಲುಪಿ ಮಂದಿಯಲ್ಲಿ ವಿಶ್ವಕಪ್ ಗೆದ್ದು ತರುವ ಕನಸು ಮೂಡಿಸಿತ್ತು. 1996ರ ವಿಶ್ವಕಪ್‌ಗೂ ಮೊದಲು ನಡೆದ ಆರು ಕೂಟಗಳಲ್ಲಿ ಅಯ್ದನ್ನು ಅಜರುದ್ದೀನ್ ಮುಂದಾಳತ್ವದಲ್ಲಿ ಇಂಡಿಯಾ ಗೆದ್ದಿದ್ದರಿಂದ ಮತ್ತೊಮ್ಮೆ ವಿಶ್ವಕಪ್ ಹೊತ್ತುತರುವ ಕನಸಿಗೆ ಅಜರುದ್ದೀನ್ ಇಂಬು ನೀಡಿದ್ದರು. ಆದರೆ ಇಂಡಿಯಾ ನಾಲ್ಕರಗಟ್ಟದಲ್ಲಿಯೇ ಸೋತು ಕೂಟದಿಂದ ಹೊರನಡೆಯಿತು.
* ಇಮ್ರಾನ್ ಕಾನ್ ಬಳಿಕ ವಾಸಿಮ್ ಅಕ್ರಮ್ ಅವರು ಪಾಕಿಸ್ತಾನದ ಮುಂದಾಳತ್ವವನ್ನು 1993ರಲ್ಲಿ ವಹಿಸಿಕೊಂಡರು. ಆದರೆ ವಾಸಿಮ್ ಮುಂದಾಳತ್ವದಲ್ಲಿ ಪಾಕ್ ಮತ್ತೆ ವಿಶ್ವಕಪ್ ಗೆಲ್ಲಲು ಎಡವಿತು.

1999ರ ವಿಶ್ವಕಪ್

SACHIN TENDULKAR HOOKS A BALL FOR FOUR AGAINST PAKISTAN.ಸತತವಾಗಿ ಮೂರನೇ ಬಾರಿಗೆ 1999ರ ವಿಶ್ವಕಪ್‌ನಲ್ಲಿ ಇಂಡಿಯಾ ಮತ್ತು ಪಾಕ್ ಎದುರಾದವು. ಇಂಗ್ಲೆಂಡ್, ಅಯರ‍್ಲೆಂಡ್ ಸೇರಿದಂತೆ ಅಯ್ದು ನಾಡುಗಳಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ ಜೂನ್  ರಂದು ಮ್ಯಾಂಚೆಸ್ಟರ್ ಅಂಗಣದಲ್ಲಿ ಇತ್ತಂಡಗಳು ಮುಕಾಮುಕಿಯಾದವು. ಕಳೆದೆರಡು ಸೋಲಿಗೆ ಸೇಡು ತಿರಿಸುವ ತವಕ ಪಾಕಿಸ್ತಾನದ್ದಾದರೆ, ತನ್ನ ಗೆಲುವಿನ ನಡೆಯನ್ನು ಮುಂದುವರಿಸಿಕೊಂಡು ಹೋಗುವತ್ತ ಇಂಡಿಯಾ ತಂಡದ ಗಮನ. ಸಚಿನ್ ಅದಾಗಲೇ ಜಗತ್ತಿನ ಎಸೆತಗಾರರೆದೆಯಲ್ಲಿ ನಡುಕ ಹುಟ್ಟಿಸಿದ್ದರು. ಜೊತೆ ಜೊತೆಗೆ 1999ರ ವಿಶ್ವಕಪ್ ರಾಹುಲ್ ದ್ರಾವಿಡ್ ಎಂಬ ಕರುನಾಡಿನ ಚೇತನಕ್ಕೆ ಮೊದಲ ವಿಶ್ವಕಪ್ ವೇದಿಕೆ.

ಸತತವಾಗಿ ಮೂರನೇ ಬಾರಿ ನಾಣ್ಯ ಚಿಮ್ಮುಗೆಯಲ್ಲಿ ಗೆದ್ದ ಇಂಡಿಯಾ ತಂಡ ಮೊದಲು ದಾಂಡುಗಾರಿಕೆ ನಡೆಸಿತು. ಒಳ್ಳೆಯ ದಾಂಡುಗಾರಿಕೆ ನಡೆಸಿದ ದ್ರಾವಿಡ್ 61 ಓಟಗಳನ್ನು ಗಳಿಸಿದರೆ, ಸಚಿನ್ ಮತ್ತು ಅಜರುದ್ದೀನ್ ಕೂಡ ಉತ್ತಮ ದಾಂಡುಗಾರಿಕೆಯ ನೆರವಿತ್ತರು. ಆದರೆ 50 ಎಸೆತಗಟ್ಟುಗಳಲ್ಲಿ 6 ಹುತ್ತರಿ ಕಳೆದುಕೊಂಡು 227 ಓಟಗಳನ್ನಶ್ಟೇ ಇಂಡಿಯಾ ಗಳಿಸಿತು.

ಅಂತೆಯೇ 50 ಎಸೆತಗಟ್ಟುಗಳಲ್ಲಿ 228 ಓಟಗಳನ್ನು ಗಳಿಸುವ ಗುರಿ ಪಡೆದ ಪಾಕ್, ಇಂಡಿಯಾಕ್ಕೆ ಸೋಲಿನ ಬಯ ತೋರಿಸಲು ಎಡವಿತು. ವೆಂಕಟೇಶ್ ಪ್ರಸಾದ್ ಮತ್ತು ಜಾವಗಲ್ ಶ್ರೀನಾತ್ ಎಂಬಿಬ್ಬರು ಕನ್ನಡಿಗರ ಎಸೆತಗಾರಿಕೆಗೆ ಬೆದರಿದ ಪಾಕ್ 45.3 ಎಸೆತಗಟ್ಟುಗಳಲ್ಲಿ 180 ಓಟಗಳನ್ನು ಗಳಿಸುವಶ್ಟರಲ್ಲಿ ನೆಲ ಕಚ್ಚಿತು. ಇದು ಪಾಕ್ ವಿಶ್ವಕಪ್‌ನಲ್ಲಿ ಇಂಡಿಯಾದೆದುರು ಕಂಡ ಮೂರನೇ ಸೋಲು.

* ಇದು ಮಹಮ್ಮದ್ ಅಜರುದ್ದೀನ್ ಅವರ ಮುಂದಾಳತ್ವದಲ್ಲಿ ಇಂಡಿಯಾ ಆಡಿದ ಮೂರನೇ ವಿಶ್ವಕಪ್ ಕೂಟ. ಆ ಮೂಲಕ ಅತೀ ಹೆಚ್ಚು ವಿಶ್ವಕಪ್‌ಗೆ ಇಂಡಿಯಾ ತಂಡದ ಮುಂದಾಳತ್ವ ವಹಿಸಿದಾತ ಎಂಬ ಹಿರಿಮೆಯನ್ನು ಅಜರುದ್ದೀನ್ ಪಡೆದುಕೊಂಡರು.
* ವಾಸಿಮ್ ಅಕ್ರಮ್ ಅವರಿಗೆ 1887ರಿಂದಲೂ ವಿಶ್ವಕಪ್‌ನಲ್ಲಿ ಆಡಿದ ಅನುಬವವಿತ್ತು ಮತ್ತು 1996ರಲ್ಲಿ ವಾಸಿಮ್ ಮುಂದಾಳತ್ವದಲ್ಲಿ ಪಾಕ್ ವಿಶ್ವಕಪ್ ಕೂಟದಲ್ಲಿ ಪಾಲ್ಗೊಂಡಿತ್ತು. ಈ ಕಾರಣಕ್ಕೆ ಮತ್ತೆ ವಾಸಿಮ್ ಅವರಿಗೆ ಪಾಕ್ ತಂಡದ ಮುಂದಾಳತ್ವ ವಹಿಸಲಾಗಿತ್ತು. ಆದರೆ ಕೊನೆಯ ಹಂತಕ್ಕೇರಿ ಬರವಸೆ ಮೂಡಿಸಿದ್ದ ವಾಸಿಮ್ ಪಡೆ ಆಸ್ಟ್ರೇಲಿಯಾ ತಂಡದೆದುರು ಸೋಲೊಪ್ಪಿಕೊಂಡಿತು.

2003ರ ವಿಶ್ವಕಪ್

24sachin2ನಾಲ್ಕನೇ ಬಾರಿಗೆ ವಿಶ್ವಕಪ್‌ನಲ್ಲಿ ಇಂಡಿಯಾ ಮತ್ತು ಪಾಕಿಸ್ತಾನ ನಾಡುಗಳ ಮುಕಾಮುಕಿಗೆ ವೇದಿಕೆ ಅಣಿಗೊಳಿಸಿದ್ದು 2003ರ ವಿಶ್ವಕಪ್ ಮಾರ‍್ಚ್ 1 ರಂದು ಆಪ್ರಿಕಾದ ಸೆಂಚೂರಿಯನ್ ಅಂಗಣದಲ್ಲಿ ಎದುರಾದ ಈ ಪಯ್ಪೋಟಿಯಲ್ಲಿ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಕಾರಣ ಸೆಹವಾಗ್, ಯುವರಾಜ್, ಜಹೀರ್ ರಂತಹ ಯುವ ಪಡೆ ಮತ್ತು ಗಂಗೂಲಿ, ದ್ರಾವಿಡ್, ಸಚಿನ್ ರಂತಹ ಅನುಬವದ ಬಲ ಇಂಡಿಯಾದ ಬೆನ್ನಿಗಿತ್ತು. ಈ ಬಾರಿ ನಾಣ್ಯ ಚಿಮ್ಮುಗೆಯಲ್ಲಿ ಗೆದ್ದ ಪಾಕಿಸ್ತಾನ ತಂಡ ಮೊದಲು ದಾಂಡುಗಾರಿಕೆ ನಡೆಸಿತು. ಸಯ್ಯದ್ ಅನ್ವರ್ ಅವರ ನೂರರಾಟದಿಂದ ನಿಗದಿತ 50 ಎಸೆತಗಟ್ಟುಗಳಲ್ಲಿ ಪಾಕ್ 7 ಹುತ್ತರಿ ಕಳೆದುಕೊಂಡು 273 ಓಟಗಳನ್ನು ಗಳಿಸಿತು. ಇಂಡಿಯಾ ಪರ 4 ಹುತ್ತರಿ ಗಳಿಸಿದ ಜಹೀರ್ ಕಾನ್ ಒಳ್ಳೆಯ ಎಸೆತಗಾರ ಎಂದೆನಿಸಿಕೊಂಡರು.

ಈ ಗುರಿಯನ್ನು ಬೆನ್ನತ್ತಿದ ಇಂಡಿಯಾ ತಂಡ ಮೊದಲಲ್ಲಿ ತುಸು ಎಡವಿತಾದರೂ 12ನೇ ಎಸೆತಗಟ್ಟಿನಲ್ಲಿಯೇ 100 ಓಟಗಳ ಗಡಿ ದಾಟಿತು. ಆದರೆ ಸಚಿನ್, ದ್ರಾವಿಡ್ ಮತ್ತು ಯುವರಾಜ್ ಅವರ ಹೊತ್ತಿನರಿವಿನ ದಾಂಡುಗಾರಿಕೆಯಿಂದಾಗಿ 45.4 ಎಸೆತಗಟ್ಟುಗಳಲ್ಲಿ ಇಂಡಿಯಾ 4 ಹುತ್ತರಿಗಳನ್ನು ಕಳೆದುಕೊಂಡು ಗುರಿ ಮುಟ್ಟಿತು. ಆ ಮೂಲಕ ಇಂಡಿಯಾ ಪಾಕ್ ವಿರುದ್ದ ನಾಲ್ಕು ಗೆಲುವನ್ನು ದಾಕಲಿಸಿತು.

* ಸವ್ರವ್ ಗಂಗೂಲಿಯವರ ಮುಂದಾಳತ್ವದಲ್ಲಿ ಆಡಿದ ಇಂಡಿಯಾ ತಂಡ ಯುವಪಡೆಯಾದರೂ ಬಹಳಶ್ಟು ಗಟ್ಟಿತನ ಹೊಂದಿತ್ತು. 2003ರ ವಿಶ್ವಕಪ್ ನ ಕೊನೆಯ ಹಂತದ ವರೆಗೆ ಸಾಗಿದ ಇಂಡಿಯಾ ತಂಡ ಕೊನೆ ಹೊತ್ತಿನಲ್ಲಿ ಎಡವಿತು. ಆದರೆ ಕೂಟದಲ್ಲಿಯೇ ಉತ್ತಮ ದಾಂಡುಗಾರರನ್ನು ಹೊಂದಿದ ಗಟ್ಟಿ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
* ಪಾಕಿಸ್ತಾನದ ಹೆಸರಾಂತ ಎಸೆತಗಾರ ವಕಾರ್ ಯೂನಸ್ ಅವರ ಮುಂದಾಳತ್ವದಲ್ಲಿ ಪಾಕ್ 2003ರ ವಿಶ್ವಕಪ್ ಕಣಕ್ಕಿಳಿದಿತ್ತು. ಆದರೆ ಎಂಟರಗಟ್ಟದಿಂದ ಪಾಕ್ ಸೋತು ಹೊರ ನಡೆಯಿತು.

2011ರ ವಿಶ್ವಕಪ್

7827534.cms2007ರಲ್ಲಿ ಮುಕಾಮುಕಿಯನ್ನು ತಪ್ಪಿಸಿಕೊಂಡಿದ್ದ ಇತ್ತಂಡಗಳು 2011ರ ವಿಶ್ವಕಪ್‌ನ ನಾಲ್ಕರ ಗಟ್ಟದಲ್ಲಿ ಮುಕಾಮುಕಿಯಾದವು. ಮಾರ‍್ಚ್ 30 ರಂದು ಮೊಹಾಲಿಯ ಅಂಗಣದಲ್ಲಿ ಸಾಗಿದ ಈ ಪಯ್ಪೋಟಿ ಬಾರೀ ಹೆಚ್ಚುಗಾರಿಕೆಯನ್ನು ಪಡೆದುಕೊಂಡಿತು. ಇಂಡಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಮೂರು ನಾಡುಗಳಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ ಪಾಕ್ ಇಂಡಿಯಾ ನೆಲದಲ್ಲಿ ಇಂಡಿಯಾದೆದುರು ವಿಶ್ವಕಪ್ ನಲ್ಲಿ ಪಯ್ಪೋಟಿಗಿಳಿಯಿತು. ಸುಮಾರು 35000 ನೋಡುಗರೆದುರು ಮೊಹಾಲಿಯಲ್ಲಿ ನಡೆದ ಪಯ್ಪೋಟಿಯಲ್ಲಿ ಇಂಡಿಯಾ ನಾಣ್ಯ ಚಿಮ್ಮುಗೆಯಲ್ಲಿ ಗೆದ್ದು ಮೊದಲು ದಾಂಡುಗಾರಿಕೆ ವಹಿಸಿಕೊಂಡಿತು. ದಾಂಡುಗಾರರ ಉತ್ತಮ ಪೋಟಿಯಿಂದ ನಿಗದಿತ 50 ಎಸೆತಗಟ್ಟುಗಳಲ್ಲಿ ಇಂಡಿಯಾ 9 ಹುತ್ತರಿ ಕಳೆದುಕೊಂಡು 260 ಓಟಗಳನ್ನು ಗಳಿಸಿತು.

ಒಳ್ಳೆಯ ದಾಂಡುಗಾರರನ್ನು ಹೊಂದಿದ್ದ ಪಾಕ್ ಪಡೆ ಬಿರುಸಿನ ಓಟದಿಂದ ಮೊದಲ್ಗೊಂಡಿತು. ಆದರೆ ಇಂಡಿಯಾದ ಎಸೆತಗಾರರ ತಿರುಗೆಸತಗಳಿಗೆ ಓಟ ಗಳಿಸಲು ಪರದಾಡಿದ ಪಾಕ್ ಪಡೆ ಹುತ್ತರಿಗಳನ್ನು ಕಳೆದುಕೊಳ್ಳುತ್ತಾ ಕುಸಿತ ಕಂಡಿತು. 49.5 ಎಸೆತಗಟ್ಟುಗಳಲ್ಲಿ ತನ್ನೆಲ್ಲಾ ಹುತ್ತರಿಗಳನ್ನು ಕಳೆದುಕೊಂಡು 231 ಓಟಗಳನ್ನು ಗಳಿಸಿದ ಪಾಕ್, 29 ಓಟಗಳಿಂದ ಸೋಲುವ ಮೂಲಕ ತನ್ನ ಸೋಲಿನ ಅಂಕೆಯನ್ನು ಹೆಚ್ಚಿಸಿಕೊಂಡಿತು.

* ದೋನಿ ಮುಂದಾಳತ್ವದಲ್ಲಿ 20 ಎಸೆತಗಟ್ಟುಗಳ ವಿಶ್ವಕಪ್ ಕೂಟವನ್ನು ಗೆದ್ದು, ಗೆಲುವಿನ ಕುದುರೆ ಏರಿದ್ದ ಇಂಡಿಯಾ ತಂಡಕ್ಕೆ, ಮತ್ತೊಮ್ಮೆ ದೋನಿ ಮುಂದಾಳತ್ವದಲ್ಲಿ 2011ರ ಒಂದು ದಿನದಾಟದ ವಿಶ್ವಕಪ್ ದಕ್ಕಿತು. ಇದು 28 ವರುಶಗಳ ಬಳಿಕ ಇಂಡಿಯಾ ಗೆದ್ದ ಎರಡನೇ ಒಂದು ದಿನದಾಟದ ವಿಶ್ವಕಪ್.
* 2011ರ ಪಾಕ್ ನ ವಿಶ್ವಕಪ್ ಮುಂದಾಳತ್ವವನ್ನು ಶಾಹಿದ್ ಅಪ್ರೀದಿಗೆ ವಹಿಸಲಾಗಿತ್ತು. ಹಲವು ಕಾರಣಗಳಿಂದ ಅಯ್.ಸಿ.ಸಿ ಯಿಂದ ಚೀಮಾರಿ, ಪಾಕ್ ಮಂಡಳಿಯೊಂದಿಗಿನ ತಿಕ್ಕಾಟ ಮತ್ತು ತಂಡದ ಆಟಗಾರರ ನಡುವಿನ ಒಡಕು ಹೀಗೆ ಸಾಲು ಸಾಲು ಗೊಂದಲಗಳೊಂದಿಗೆ ವಿಶ್ವಕಪ್ ಅಕಾಡಕ್ಕೆ ಇಳಿದಿದ್ದ ಪಾಕ್ ತಂಡವನ್ನು ಒಗ್ಗೂಡಿಸಿ, ಒಂದು ತಂಡವಾಗಿ ಕಟ್ಟಿ, ಪಯ್ಪೋಟಿಯ ನಾಲ್ಕರ ಗಟ್ಟದ ವರೆಗೆ ತಂಡವನ್ನು ಕೊಂಡೊಯ್ದ ಹೆಗ್ಗಳಿಕೆ ಅಪ್ರೀದಿಗೆ ಸಲ್ಲುತ್ತದೆ.

2015ರ ವಿಶ್ವಕಪ್

Cricket WCup India Pakistanಇದು ವಿಶ್ವಕಪ್ 2015ರ ಹೊತ್ತು. ಕೆಲ ದಿನಗಳ ಹಿಂದಶ್ಟೇ ಇತ್ತಂಡಗಳು ಎದುರಾಗಿ ಕಾದಾಡಿದ್ದವು .ಮಾರ‍್ಚ್ 15 ರಂದು ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಅಂಗಳದಲ್ಲಿ ನಡೆದ ಇಂಡಿಯಾ ಮತ್ತು ಪಾಕ್ ನಡುವಿನ ಆರನೇ ಮುಕಾಮುಕಿಯಲ್ಲಿ ಇತ್ತಂಡಗಳು ಪಯ್ಪೋಟಿಗಿಳಿದಿದ್ದವು. ನಾಣ್ಯ ಚಿಮ್ಮುಗೆಯಲ್ಲಿ ಗೆದ್ದು ಮೊದಲು ದಾಂಡುಗಾರಿಕೆ ವಹಿಸಿಕೊಂಡ ಇಂಡಿಯಾ, ಕೊಹ್ಲಿ ಮತ್ತು ರಯ್ನಾರ ಒಳ್ಳೆಯ ದಾಂಡುಗಾರಿಕೆಯಿಂದ ನಿಗದಿತ 50 ಎಸೆತಗಟ್ಟುಗಳಲ್ಲಿ 7 ಹುತ್ತರಿ ಕಳೆದುಕೊಂಡು 300 ಓಟಗಳನ್ನು ಗಳಿಸಿತು. ಇದು ಇಂಡಿಯಾ ಪಾಕ್ ಎದುರು ವಿಶ್ವಕಪ್ ನಲ್ಲಿ ಗಳಿಸಿದ ಹೆಚ್ಚಿನ ಓಟ. ಮೊದಲಿನಿಂದ ಇಂಡಿಯಾದ ಪರವಾಗಿಯೇ ಸಾಗಿದ ಪೋಟಿಯಲ್ಲಿ ಪಾಕ್ ಎಲ್ಲೂ ಇಂಡಿಯಾಕ್ಕೆ ಸವಾಲಾಗಲೇ ಇಲ್ಲ. 47 ಎಸೆತಗಟ್ಟುಗಳಲ್ಲಿ ತನ್ನೆಲ್ಲಾ ಹುತ್ತರಿ ಕಳೆದುಕೊಂಡು 224 ಓಟಗಳನ್ನು ಗಳಿಸಿದ ಪಾಕ್ ಮತ್ತೆ ಸೋಲಿನತ್ತ ಮುಕ ಮಾಡಿತು.  76 ಓಟಗಳಿಂದ ಗೆದ್ದ ಇಂಡಿಯಾ ಸತತವಾಗಿ ಆರು ಬಾರಿ ಗೆದ್ದು, ಪಾಕ್ ಎದುರು ಸೋಲರಿಯದೆ ವಿಶ್ವಕಪ್ ನಲ್ಲಿ ಮುಂದುವರೆದಿದೆ.

* ಸತತವಾಗಿ ಎರಡನೇ ಬಾರಿಗೆ ವಿಶ್ವಕಪ್‌ನಲ್ಲಿ ಮುಂದಾಳತ್ವ ವಹಿಸಿಕೊಂಡಿರುವ ದೋನಿ, ಅಜರುದ್ದೀನ್ ಬಳಿಕ ಹೆಚ್ಚು ಬಾರಿ ವಿಶ್ವಕಪ್‌ನಲ್ಲಿ ಮುಂದಾಳತ್ವ ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇವರ ಮುಂದಾಳತ್ವದಲ್ಲಿ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಇಂಡಿಯಾವೂ ಒಂದೆನೆಸಿಕೊಂಡಿದೆ.
* ಸತತ ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನಕ್ಕೆ ಕೆಲವು ಹಿರಿಯ ಪೋಟಿಗಾರರ ಜೊತೆ ಪೂರ‍್ತಿ ಅನಾನುಬವಿಗಳನ್ನು ಜೊತೆಗೂಡಿಸಿ ಬಂದಿರುವ ಪಾಕ್ ತಂಡವನ್ನು ಈ ಬಾರಿ ಮಿಸ್ಬಾ-ಉಲ್-ಹಕ್ ಮುನ್ನಡೆಸುತ್ತಿದ್ದಾರೆ. ಈ ಹಿಂದೆ ನಡೆದಿದ್ದ ಕೆಲ ಇಪ್ಪತ್ತು ಎಸೆತಗಟ್ಟುಗಳ ವಿಶ್ವಕಪ್ ನಲ್ಲಿ ಮಿಸ್ಬಾ ಪಾಕ್ ತಂಡವನ್ನು ಮುನ್ನಡೆಸಿದ್ದರು.

(ಮಾಹಿತಿ ಸೆಲೆ: en.wikipedia.org)
(ಚಿತ್ರ ಸೆಲೆ: canindia, cricketcountry.comxcitefun.net, boomlive.in, sachinist.com, timesofindia, imgci.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications