ರಣಜಿ: ಇಂದಿನಿಂದ ಕರ‍್ನಾಟಕ – ಸೌರಾಶ್ಟ್ರ ಸೆಮಿಪೈನಲ್ ಹಣಾಹಣಿ

– ರಾಮಚಂದ್ರ ಮಹಾರುದ್ರಪ್ಪ.

ರಣಜಿ, Ranji

ಕಳೆದ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ 2018/19 ರ ರಣಜಿ ಟೂರ‍್ನಿ ಕಡೆಯ ನಾಲ್ಕರ ಗಟ್ಟ ತಲುಪಿದೆ. ಮುಂಬೈ, ದೆಹಲಿಯಂತಹ ಸಾಂಪ್ರದಾಯಿಕ ಬಲಿಶ್ಟ ತಂಡಗಳು ಕಡೆಯ ಎಂಟರ ಗಟ್ಟ ತಲುಪದೇ ಹೋದದ್ದು ಈ ಬಾರಿಯ ಅಚ್ಚರಿಗಳಲ್ಲೊಂದು. ಕರ‍್ನಾಟಕ, ವಿದರ‍್ಬ, ಸೌರಾಶ್ಟ್ರ ಮತ್ತು ಕೇರಳ ಈ ಬಾರಿ ಸೆಮಿಪೈನಲ್ ತಲುಪಿರೋ ತಂಡಗಳಾಗಿದ್ದು ಈ ತಂಡಗಳಲ್ಲಿ ಕರ‍್ನಾಟಕ ಒಂದೇ ಸಾಂಪ್ರಾದಾಯಿಕವಾಗಿ ಬಲಿಶ್ಟ ತಂಡ ಎಂಬುವುದು ಇಲ್ಲಿ ಗಮನಿಸಬೇಕಾದ ಅಂಶ. ಎಲ್ಲರ ಎಣಿಕೆಯಂತೆಯೇ ಕಳೆದ ಬಾರಿಯ ಚಾಂಪಿಯನ್ ವಿದರ‍್ಬ ನಿರಾಯಾಸವಾಗಿ ಸೆಮಿಪೈನಲ್ ತಲುಪಿದರೆ ಕೇರಳ ಮೊಟ್ಟ ಮೊದಲ ಬಾರಿಗೆ ಇಶ್ಟು ದೂರ ಕ್ರಮಿಸಿ ಇತಿಹಾಸ ಸ್ರುಶ್ಟಿಸಿದೆ. ಈ ಎರಡು ತಂಡಗಳು ವಾಯ್ನಾಡ್ ನಲ್ಲಿ ನಡೆಯುವ ಮೊದಲ ಸೆಮೀಸ್ ಪೋಟಿಯಲ್ಲಿ ಎದುರುಗೊಳ್ಳಲಿವೆ.

2004 ರ ನಂತರ ಮೊದಲ ಬಾರಿಗೆ ಕರ‍್ನಾಟಕ ಲೀಗ್ ಹಂತದಲ್ಲೇ ಎರಡು ಪಂದ್ಯಗಳನ್ನು ಸೋತರೂ ಮೂರು ಪಂದ್ಯಗಳನ್ನು ಗೆದ್ದು, ಬಳಿಕ ಕ್ವಾರ‍್ಟರ್ ಪೈನಲ್ ನಲ್ಲಿ ರಾಜಸ್ತಾನದ ವಿರುದ್ದ ಗೆದ್ದು 32 ನೇ ಬಾರಿ ನಾಲ್ಕರ ಗಟ್ಟಕ್ಕೆ ದಾಪುಗಾಲು ಇಟ್ಟಿತು. ಆದರೆ ಸೌರಾಶ್ಟ್ರ ಈ ಬಾರಿ ಒಂದೂ ಪಂದ್ಯವನ್ನು ಸೋಲದೆ, ಕ್ವಾರ‍್ಟರ್ ಪೈನಲ್ ನಲ್ಲಿ ಉತ್ತರ ಪ್ರದೇಶಕ್ಕೆ 178 ರನ್ ಗಳ ದೊಡ್ಡ ಇನ್ನಿಂಗ್ಸ್ ಮುನ್ನಡೆ ಬಿಟ್ಟು ಕೊಟ್ಟ ನಂತರವೂ ಕಡೇ ಇನ್ನಿಂಗ್ಸ್ ನಲ್ಲಿ 372 ರನ್ ಗಳನ್ನು ಬೆನ್ನಟ್ಟಿ ಪವಾಡದ ರೀತಿಯಲ್ಲಿ ಸೆಮಿಪೈನಲ್ ಗೆ ಲಗ್ಗೆ ಇಟ್ಟಿದೆ. ಕರ‍್ನಾಟಕ ಮತ್ತು ಸೌರಾಶ್ಟ್ರ ನಡುವೆ ಈ ಬಾರಿಯ ಎರಡನೇ ಸೆಮೀಸ್ ಪಂದ್ಯ ಬೆಂಗಳೂರಿನ ಎಮ್. ಚಿನ್ನಸ್ವಾಮಿ ಅಂಗಳದಲ್ಲಿ ಜನವರಿ 24 ಅಂದರೆ ಇಂದಿನಿಂದ ಜನವರಿ 28 ರವರೆಗೆ ನಡೆಯಲಿದೆ.

ಸೌರಾಶ್ಟ್ರ : ಈ ಬಾರಿಯ ಟೂರ‍್ನಿಯಲ್ಲಿ ಸಾಗಿ ಬಂದ ಹಾದಿ

ಸೌರಾಶ್ಟ್ರ ತಂಡ 1950/51 ರ ಸಾಲಿನಿಂದ ರಣಜಿ ಪೋಟಿಯಲ್ಲಿ ಪಾಲ್ಗೊಳ್ಳುತ್ತಿದೆ. ಅದಕ್ಕೂ ಮೊದಲು ನವನಗರ ಎಂಬ ಹೆಸರಲ್ಲಿ 1936/37 ಒಮ್ಮೆ ಟ್ರೋಪಿ ಗೆದ್ದರೆ, 1943/44 ರಲ್ಲಿ ಪಶ್ಚಿಮ ಬಾರತ ಎಂಬ ಹೆಸರಲ್ಲೊಮ್ಮೆ ಟ್ರೋಪಿ ಗೆದ್ದಿದೆ. ಅದಾದ ನಂತರ ಸೌರಾಶ್ಟ್ರ ತಂಡ 2012/13 ಮತ್ತು 2015/16 ರಲ್ಲಿ ಪೈನಲ್ ಪ್ರವೇಶಿಸಿರೋದನ್ನ ಬಿಟ್ಟರೆ ಹೇಳಿಕೊಳ್ಳುವಂತ ಸಾದನೆ ಏನೂ ಮಾಡಿಲ್ಲ. ಜಯದೇವ್ ಉನಾದ್ ಕಟ್, ಚೇತೇಶ್ವರ್ ಪೂಜಾರ ಮತ್ತು ರವೀಂದ್ರ ಜಡೇಜಾ ಇತ್ತೀಚಿನ ದಿನಗಳಲ್ಲಿ ಸೌರಾಶ್ಟ್ರದಿಂದ ಬಾರತದ ಪರ ಅಂತರಾಶ್ಟ್ರೀಯ ಕ್ರಿಕೆಟ್ ಆಡಿರುವ ಆಟಗಾರರು.

2018/19 ಸಾಲಿನ ರಣಜಿ ಟೂರ‍್ನಿಯಲ್ಲಿ ಸೌರಾಶ್ಟ್ರ ಒಳ್ಳೆ ಆಟ ಆಡಿ ಲೀಗ್ ಹಂತದಲ್ಲಿ ರೈಲ್ವೇಸ್, ಮಹಾರಾಶ್ಟ್ರ ಮತ್ತು ಕರ‍್ನಾಟಕ ತಂಡಗಳ ಮೇಲೆ ಗೆಲುವು ಸಾದಿಸಿ 29 ಅಂಕ ಪಡೆದು ಎ ಮತ್ತು ಬಿ ಗುಂಪಿನ ಒಟ್ಟಾರೆ ಅಂಕ ಪಟ್ಟಿಯಲ್ಲಿ 2ನೇ ಸ್ತಾನ ಪಡೆದು ಅಂತಿಮ ಎಂಟರ ಗಟ್ಟ ತಲುಪಿತ್ತು. ಬ್ಯಾಟಿಂಗ್ ನಲ್ಲಿ ಪೂಜಾರ ಅನುಪಸ್ತಿತಿಯಲ್ಲಿ ಹಾರ‍್ವಿಕ್ ದೇಸಾಯಿ ಮತ್ತು ಶೆಲ್ಡನ್ ಜಾಕ್ಸನ್ ಹೆಚ್ಚು ರನ್ ಗಳಿಸಿದರೆ ಬೌಲಿಂಗ್ ನಲ್ಲಿ ಎಡಗೈ ಸ್ಪಿನ್ನರ್ ದರ‍್ಮೇಂದ್ರ ಸಿಂಗ್ ಜಡೇಜಾ ಅತ್ಯದಿಕ (45) ವಿಕೆಟ್ ಗಳನ್ನು ಪಡೆದ್ದಿದ್ದಾರೆ. ಹೇಗಾದರೂ ಸರಿ ಗೆಲ್ಲಲೇಬೇಕೆಂದು ಕರ‍್ನಾಟಕ ವಿರುದ್ದದ ರಾಜಕೋಟ್ ಪಂದ್ಯದಲ್ಲಿ ಸೌರಾಶ್ಟ್ರ ತಯಾರಿಸಿದ್ದ ಪಿಚ್ ಕಳಪೆ ಮಟ್ಟದ್ದು ಮತ್ತು ಆಟದ ಸ್ಪೂರ‍್ತಿಗೆ ಚ್ಯುತಿ ತರುವಂತದ್ದು ಎಂಬ ಟೀಕೆಗಳು ಕೇಳಿ ಬಂದವು. ಮೂರೇ ದಿನಗಳಲ್ಲಿ ಮುಗಿದ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವುದು ಅಸಾದ್ಯವೆಂಬಂತಿತ್ತು. ಕರ‍್ನಾಟಕ ತಂಡ ಈ ಪಿಚ್ ನ ಬಗ್ಗೆ ಬಿ.ಸಿ.ಸಿ.ಐ ಗೆ ದೂರು ಕೂಡ ನೀಡಿತ್ತು.

ಕರ‍್ನಾಟಕ : ಈ ಬಾರಿಯ ಟೂರ‍್ನಿಯಲ್ಲಿ ಸಾಗಿ ಬಂದ ಹಾದಿ

1933 ರ ರಣಜಿ ಟೂರ‍್ನಿಯಿಂದ 1972/73 ರ ವರೆಗೂ ಮೈಸೂರು ತಂಡ ಎಂಬ ಹೆಸರಿನಲ್ಲಿ ಆಡುತ್ತಿದ್ದ ಕರುನಾಡ ಕ್ರಿಕೆಟಿಗರ ಪಡೆ 1973/74 ರ ಸಾಲಿನಿಂದ ಕರ‍್ನಾಟಕ ತಂಡವಾಗಿ ಮಾರ‍್ಪಟ್ಟಿತು. ಅದಾದ ನಂತರ ಒಟ್ಟು 8 ಬಾರಿ ರಣಜಿ ಟೂರ‍್ನಿ ಗೆದ್ದು ದೇಸೀ ಕ್ರಿಕೆಟ್ ನ ಒಂದು ಬಲಿಶ್ಟ ತಂಡವಾಗಿ ಹೊರಹೊಮ್ಮುವುದರ ಜೊತೆಗೆ ಬಾರತ ತಂಡಕ್ಕೆ ಪ್ರಸನ್ನ, ಚಂದ್ರಶೇಕರ್, ವಿಶ್ವನಾತ್, ಕುಂಬ್ಳೆ, ಶ್ರೀನಾತ್, ದ್ರಾವಿಡ್ ರಂತಹ ಹಲವಾರು ದಿಗ್ಗಜರನ್ನು ಕರ‍್ನಾಟಕ ಕಾಣಿಕೆಯಾಗಿ ನೀಡಿದೆ.

2018/19 ರ ಸಾಲಿನ ಟೂರ‍್ನಿ ಕರ‍್ನಾಟಕದ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಸ್ತಿರ ಪ್ರದರ‍್ಶನ ನೀಡದೆಯೂ ಮುಂದಿನ ಹಂತ ತಲುಪಿದ ಒಂದು ಅಪರೂಪದ ಟೂರ‍್ನಿ. ಆರಂಬದ ಪಂದ್ಯಗಳಿಗೆ ಅನುಬವಿಗಳಾದ ಕರುಣ್, ಮನೀಶ್ ಮತ್ತು ಸಮರ‍್ತ್ ರ ಸೇವೆ ಸಿಗದ್ದಿದ್ದರೂ ಹೊಸಬರಾದ ನಿಶ್ಚಲ್, ಸಿದ್ದಾರ‍್ತ್ ಬ್ಯಾಟಿಂಗ್ ನೊಗ ಹೊತ್ತು ತಂಡವನ್ನು ಕಾಪಾಡಿದ್ದಾರೆ. ಜೊತೆಗೆ 18ರ ಹೆರೆಯದ ದೇವದತ್ ಕೂಡ ಎರಡು ಪಂದ್ಯಗಳಲ್ಲಿ ಒಳ್ಳೆ ಬ್ಯಾಟಿಂಗ್ ಮಾಡಿ ಕರ‍್ನಾಟಕ ತಂಡದ ಬವಿಶ್ಯದ ಬಗ್ಗೆ ನಂಬಿಕೆ ಮೂಡಿಸಿದ್ದಾರೆ. ಇನ್ನು ವೇಗದ ಬೌಲಿಂಗ್ ನಲ್ಲಿ ರೋನಿತ್ ಮೋರೆ ತಂಡದ ಪರ ಹೆಚ್ಚು ವಿಕೆಟ್ ಪಡೆದರೆ ಸ್ಪಿನ್ನರ್ ಗಳಾದ ಶ್ರೇಯಸ್ ಮತ್ತು ಗೌತಮ್ ತಮ್ಮ ಎಂದಿನ ಸ್ತಿರ ಪ್ರದರ‍್ಶನ ಕಾಯ್ದುಕೊಂಡಿದ್ದಾರೆ. ಒಟ್ಟು 8 ಪಂದ್ಯಗಳಲ್ಲಿ ಮಹಾರಾಶ್ಟ್ರ, ಚತ್ತೀಸ್ ಗಡ, ರೈಲ್ವೇಸ್ ಮೇಲೆ ಗೆಲುವು ಸಾದಿಸಿ ಸೌರಾಶ್ಟ್ರ, ಬರೋಡ ತಂಡಗಳ ಮೇಲೆ ಸೋಲು ಕಂಡು ಒಟ್ಟು 27 ಅಂಕ ಪಡೆದು ಎ ಮತ್ತು ಬಿ ಗುಂಪಿನ ಒಟ್ಟಾರೆ ಅಂಕ ಪಟ್ಟಿಯಲ್ಲಿ 3ನೇ ಸ್ತಾನ ಪಡೆದು ಕರ‍್ನಾಟಕ ಕ್ವಾರ‍್ಟರ್ ಪೈನಲ್ ತಲುಪಿತ್ತು. ನಂತರ ಬೆಂಗಳೂರಿನಲ್ಲಿ ರಾಜಸ್ತಾನದ ಮೇಲೆ ಮೊದಲ ಇನ್ನಿಂಗ್ಸ್ ನಲ್ಲಿ ವಿನಯ್ ರ ಸಮಯೋಚಿತ ಬ್ಯಾಟಿಂಗ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಕರುಣ್ ಮತ್ತು ಮನೀಶ್ ರ ಕೆಚ್ಚೆದೆಯ ಬ್ಯಾಟಿಂಗ್ ನಿಂದ ಈಗ ಸೆಮಿಪೈನಲ್ ಪ್ರವೇಶಿಸಿ ಸೌರಾಶ್ಟ್ರ ತಂಡವನ್ನು ಎದುರಿಸಲಿದೆ.

ಕರ‍್ನಾಟಕ – ಸೌರಾಶ್ಟ್ರ ಮುಕಾಮುಕಿ

ಕರ‍್ನಾಟಕ ಮತ್ತು ಸೌರಾಶ್ಟ್ರ ತಂಡಗಳು ಇಲ್ಲಿಯ ತನಕ ಒಟ್ಟು 9 ಪಂದ್ಯಗಳಲ್ಲಿ ಮುಕಾಮುಕಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಮುಂಬೈ, ದೆಹಲಿಯಂತಹ ಬಲಾಡ್ಯ ತಂಡಗಳನ್ನು ನಿರಾಯಾಸವಾಗಿ ಮಣಿಸುವ ಕರ‍್ನಾಟಕಕ್ಕೆ ಸೌರಾಶ್ಟ್ರ ತಂಡ ಮೊದಲಿಂದಲೂ ಕಂಟಕಪ್ರಾಯವಾಗಿರೋದು ಸುಳ್ಳಲ್ಲ. ಈ ತಂಡ ಕರ‍್ನಾಟಕ ಕ್ರಿಕೆಟ್ ತಂಡದ ಎದುರು 4 ಪಂದ್ಯಗಳನ್ನು ಗೆದ್ದು 2 ಪಂದ್ಯಗಳನ್ನಶ್ಟೇ ಸೋತು ಮೇಲುಗೈ ಸಾದಿಸಿರೋದು ಅಚ್ಚರಿಯೇ ಸರಿ. ಆದರೆ ಅವರು ಗೆದ್ದಿರೋ ನಾಲ್ಕೂ ಪಂದ್ಯಗಳು ರೋಚಕತೆಯಿಂದ ಕೂಡಿದ್ದಾಗಿದ್ದು ಸ್ವಲ್ಪ ಅದ್ರುಶ್ಟ ಕೈ ಹಿಡಿದ್ದಿದ್ದರೆ ಯಾರು ಬೇಕಾದರೂ ಗೆಲ್ಲಬಹುದಾಗಿದ್ದ ಪಂದ್ಯಗಳಾಗಿದ್ದವು. 2007 ರಲ್ಲಿ ಮೈಸೂರಿನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಕೇವಲ 3 ರನ್ ಗಳ ಗೆಲುವನ್ನು ಸೌರಾಶ್ಟ್ರ ಪಡೆದಿತ್ತು. ನಂತರ 2008 ರಲ್ಲಿ ಮುಂಬೈ ನಲ್ಲಿ ನಡೆದ ಕ್ವಾರ‍್ಟರ್ ಪೈನಲ್‌ನಲ್ಲಿ 100 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ನಂತರವೂ ಕರ‍್ನಾಟಕ ಕಳಪೆ ಕ್ಯಾಚಿಂಗ್ ನಿಂದ ಪಂದ್ಯ ಸೋತಿತ್ತು. 2016 ರಲ್ಲಿ ಪಟಿಯಾಲದಲ್ಲಿ ನಡೆದ ಕೌತುಕತೆಯಿಂದ ಕೂಡಿದ್ದ ಲೀಗ್ ಪಂದ್ಯದಲ್ಲೂ ಸೌರಾಶ್ಟ್ರ 4 ವಿಕೆಟ್ ಗಳ ಗೆಲುವು ಸಾದಿಸಿತ್ತು. ನಂತರ 2018/19 ರ ಸಾಲಿನ ಟೂರ‍್ನಿಯಲ್ಲಿ ರಾಜ್ ಕೋಟ್ ನಲ್ಲಿ ಕಳಪೆ ಪಿಚ್ ತಯಾರಿಸಿ ಗೆದ್ದಿತು. ನಾಕೌಟ್ ಪಂದ್ಯವೊಂದರಲ್ಲಿ ಈ ಎರಡು ತಂಡಗಳು ಕಡೇ ಸಾರಿ ಮುಕಾಮುಕಿಯಾಗಿದ್ದು 2012/13 ರ ಕ್ವಾರ‍್ಟರ್ ಪೈನಲ್ ನಲ್ಲಿ. ರಾಜ್ ಕೋಟ್ ನಲ್ಲಿ ನಡೆದ ಈ ಪಂದ್ಯದಲ್ಲಿ ಸೌರಾಶ್ಟ್ರ ಗೆಲ್ಲದ್ದಿದ್ದರೂ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದು ಸೆಮಿಪೈನಲ್ ಗೆ ಲಗ್ಗೆ ಇಟ್ಟಿತ್ತು. ಪೂಜಾರ ಈ ಪಂದ್ಯದಲ್ಲಿ ಸೊಗಸಾದ ತ್ರಿಶತಕ ಗಳಿಸಿದ್ದರು. ಆದರೆ ಕರ‍್ನಾಟಕ ಸೌರಾಶ್ಟ್ರ ಮೇಲೆ ಸಾದಿಸಿರೋ ಎರಡೂ ಗೆಲುವುಗಳು 2009 ಕ್ಕಿಂತ ಮೊದಲಿನವೇ ಆಗಿವೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಈ ತಂಡವನ್ನು ಕಟ್ಟಿಹಾಕಲು ಕರ‍್ನಾಟಕ ಸೋತಿದೆ ಅನ್ನೋದು ಸುಳ್ಳಲ್ಲ.

2018/19 ರ ಸೆಮಿಪೈನಲ್

ಲೀಗ್ ಹಂತ ಮತ್ತು ಕ್ವಾರ‍್ಟರ್ ಪೈನಲ್ ಹಂತವನ್ನು ದಾಟಿರುವ ಸೌರಾಶ್ಟ್ರ ಮತ್ತು ಕರ‍್ನಾಟಕ ತಂಡಗಳ ನಡುವಣ ಸೆಮಿಪೈನಲ್ ಪಂದ್ಯ ಇಂದಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ. ಈ ಎರಡೂ ತಂಡಗಳು ಸೆಮಿಪೈನಲ್ ಪಂದ್ಯವೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ಮುಕಾಮುಕಿಯಾಗುತ್ತಿರುವುದು ವಿಶೇಶ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರತದ ಪರ ಮೂರು ಶತಕ ಗಳಿಸಿ ಐತಿಹಾಸಿಕ ಸರಣಿ ಗೆಲುವಿಗೆ ಕಾರಣರಾದ ಆಂತರಾಶ್ಟ್ರೀಯ ಕ್ಯಾತಿಯ ಪೂಜಾರ ಮರಳಿರೋದು ಕಂಡಿತವಾಗಿಯೂ ಸೌರಾಶ್ಟ್ರ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಜೊತೆಗೆ ಆಂತರಾಶ್ಟ್ರೀಯ ಕ್ರಿಕೆಟ್ ಆಡಿರೋ ಅನುಬವವುಳ್ಳ ಎಡಗೈ ವೇಗಿ ಮತ್ತು ನಾಯಕ ಉನಾದ್ ಕಟ್ ರ ಬೌಲಿಂಗ್ ಬಲವೂ ಅವರ ತಂಡಕ್ಕಿದೆ. ಸ್ನೆಲ್ ಪಟೇಲ್, ಜಾಕ್ಸನ್, ಹಾರ‍್ವಿಕ್ ದೇಸಾಯಿ, ದರ‍್ಮೇಂದ್ರ ಜಡೇಜಾ ಇವರುಗಳನ್ನೊಳಗೊಂಡ ಸೌರಾಶ್ಟ್ರ ತಂಡ ವಿರುದ್ದ ಗೆಲ್ಲಲು ಕರ‍್ನಾಟಕ ತಂಡ ಒಳ್ಳೆ ದರ‍್ಜೆಯ ಆಟವನ್ನೇ ಆಡಬೇಕಿದೆ. ಪೂಜಾರರಂತೆಯೇ ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿ ಮಾಯಾಂಕ್ ಅಗರ‍್ವಾಲ್ ಕರ‍್ನಾಟಕ ತಂಡ ಸೇರಿದ್ದಾರೆ. ಜೊತೆಗೆ ಮನೀಶ್ ಪಾಂಡೆ ಮತ್ತು ಕರುಣ್ ನಾಯರ್ ರಂತಹ ಅಂತರಾಶ್ಟ್ರೀಯ ಆಟಗಾರರ ಬಲವೂ ಕರ‍್ನಾಟಕ ತಂಡಕ್ಕಿದೆ. ರನ್ ಗಳಿಸಲು ಹೆಣಗಾಡುತ್ತಿರುವ ಸಮರ‍್ತ್ ಮತ್ತು ವಿಕೆಟ್ ನ ಹಿಂದೆ ಮತ್ತು ಮುಂದೆ ಎರಡೂ ಕಡೆ ಕಳಪೆ ಪ್ರದರ‍್ಶನ ತೋರಿರೋ ಶರತ್ ಬಿ.ಆರ್ ಇಬ್ಬರ ಬದಲಾಗಿ ನಿಶ್ಚಲ್ ಮತ್ತು ಶ್ರೀನಿವಾಸ್ ಶರತ್ ಕಣಕ್ಕಿಳಿದರೆ ತಂಡದ ಕುಂದುಗಳು ಒಂದು ಮಟ್ಟಕ್ಕೆ ಬಗೆಹರಿದಂತಾಗುತ್ತದೆ. ಈ ಬಾರಿ ವಿನಯ್ ರ ಬೌಲಿಂಗ್ ಸಪ್ಪೆಯಾದರೂ ಬ್ಯಾಟಿಂಗ್ ನಿಂದ ತಂಡವನ್ನು ಕಾಪಾಡಿದ್ದಾರೆ. ರೋನಿತ್ ಮೋರೆ ಈ ಸಾಲಿನ ಅತ್ಯುತ್ತಮ ವೇಗಿ ಆದರೆ ಮಿತುನ್ ಹೇಳಿಕೊಳ್ಳುವಂತಹ ಬೌಲಿಂಗ್ ಮಾಡದ್ದಿದ್ದರೂ ಕಳಪೆ ಪ್ರದರ‍್ಶವನ್ನೇನು ತೋರಿಲ್ಲ. ಇಲ್ಲಿ ಮಿತುನ್ ರ ಬೌಲಿಂಗ್ ನಲ್ಲಿ ಒಟ್ಟು 8 ಕ್ಯಾಚ್ ಗಳನ್ನು ಸಹ- ಆಟಗಾರರು ಕೈ ಚೆಲ್ಲಿದ್ದಾರೆ ಅನ್ನೋದು ಗಮನಿಸಬೇಕಾದ ವಿಶಯ. ಪ್ರಸಿದ್ ಕ್ರಿಶ್ಣ ಮೊದಲ ಪಂದ್ಯಗಳಲ್ಲಿ ಒಳ್ಳೆ ವೇಗ ಮತ್ತು ಕಟ್ಟುನಿಟ್ಟಾದ ಬೌಲಿಂಗ್ ಮಾಡಿಯೂ ಸೆಮಿಪೈನಲ್ ನಲ್ಲಿ ಆಡುವುದು ಅನುಮಾನವೇ ಆಗಿದೆ.

ಎರಡೂ ತಂಡಗಳ ಬಲಾಬಲವನ್ನೂ ಒಬ್ಬೊಬ್ಬ ಆಟಗಾರನ ಚಳಕವನ್ನು ತೂಗಿ ನೋಡಿದರೆ ಹಾಳೆ ಮೇಲೆ ಕರ‍್ನಾಟಕವೇ ಪರಿಪೂರ‍್ಣ ತಂಡವಾಗಿ ಕಂಡುಬರುತ್ತದೆ. ಆದರೆ ಸೌರಾಶ್ಟ್ರ ತಂಡದ ಇತಿಹಾಸ ಮತ್ತು ನಾಕೌಟ್ ಪಂದ್ಯಗಳಲ್ಲಿ ಕರ‍್ನಾಟಕದ ಮೇಲೆ ಸಾದಿಸಿರುವ ಮೇಲುಗೈಯನ್ನು ಗಮನಿಸಿದರೆ ಅವರನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತವರಿನಲ್ಲಿ ಆಡುತ್ತಿರುವುದರಿಂದ ಹೆಚ್ಚು ಒತ್ತಡ ಇಲ್ಲದೆ ಅಬಿಮಾನಿಗಳ ಚಪ್ಪಾಳೆ, ಶಿಳ್ಳೆ, ಹರ‍್ಶೋದ್ಗಾರಗಳನ್ನೊಳಗೊಂಡ ಬೆಂಬಲದ ಬಲದೊಂದಿಗೆ ಕರ‍್ನಾಟಕ ಕಣಕ್ಕಿಳಿಯಲಿದೆ. ಅಂತರಾಶ್ಟ್ರೀಯ ಪಂದ್ಯಗಳಿಗೆ ಸಿಗುವಂತ ಮುನ್ನೆಲೆ ಈ ಪಂದ್ಯಕ್ಕೆ ಸಿಕ್ಕಿರುವುದು ವಿಶೇಶವೇ ಸರಿ. ಕ್ರಿಕೆಟ್ ಪಂಡಿತರು ಕೂಡ ಪೂಜಾರ ಇರುವಿಕೆಯ ಅಂಶ ಈ ಪಂದ್ಯಕ್ಕೆ ನಿರ‍್ಣಾಯಕವಾಗಲಿದೆ ಎಂದು ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಒಟ್ಟಿನಲ್ಲಿ ಪಂದ್ಯದ ಆಗುಹ ಏನೇ ಆದರೂ ಒಂದು ರೋಚಕ ಪಂದ್ಯ ಇದಾಗಲಿದ್ದು ಅಬಿಮಾನಿಗಳು ಕಾತರದಿಂದ ಈ ಪಂದ್ಯವನ್ನು ನೋಡಲು ಕಾಯುತ್ತಿದ್ದಾರೆ.

(ಚಿತ್ರಸೆಲೆ: news18.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks