ಅವುಟ್ ಕೊಟ್ರೆ…

– ಸಿ.ಪಿ.ನಾಗರಾಜ.

gully-cric
ಮೊನ್ನೆ ಸಂಜೆ ಅಯ್ದು ಗಂಟೆಯ ಸಮಯದಲ್ಲಿ ಗೆಳೆಯರೊಬ್ಬರನ್ನು ನೋಡಲೆಂದು ಅವರ ಮನೆಯ ಬಳಿಗೆ ಹೋದಾಗ, ಪಕ್ಕದ ಬಯಲಿನಲ್ಲಿ ಚಿಕ್ಕ ಚಿಕ್ಕ ಹುಡುಗರು ಜೋರಾಗಿ ಕೂಗಾಡುತ್ತಿರುವುದು ಕೇಳಿ ಬಂತು. ದಾರಿಯ ಮಗ್ಗುಲಲ್ಲಿ ನಿಂತುಕೊಂಡು ಅವರ ವರ‍್ತನೆಗಳನ್ನು ಗಮನಿಸತೊಡಗಿದೆ. ಕ್ರಿಕೆಟ್ ಆಟದಲ್ಲಿ ತೊಡಗಿದ್ದವರಲ್ಲಿ ಒಬ್ಬ ಹುಡುಗನು ಕ್ರಿಕೆಟ್ ಚೆಂಡನ್ನು ತೆಗೆದುಕೊಂಡು ತನ್ನ ಮನೆಯತ್ತ ಓಡುತ್ತಿದ್ದ. ಅವನನ್ನು ಹೋಗಬೇಡವೆಂದು ಅಲ್ಲಿದ್ದವರೆಲ್ಲರೂ ಕೂಗಿಕೊಳ್ಳುತ್ತಿದ್ದರು. ಓಡಿ ಹೋಗುತ್ತಿದ್ದ ಹುಡುಗನು ಈಗ ರಸ್ತೆಯ ಮತ್ತೊಂದು ಬದಿಯಲ್ಲಿ ನಿಂತು, ದೂರದಿಂದಲೇ ಕೂಗಿ ಹೇಳಿದ –

“ನೀವು ಅವುಟ್ ಕೊಟ್ರೆ…ನಾನು ಆಟಕ್ಕೆ ಬರೊಲ್ಲ”

ಆಟವಾಡುತ್ತಿದ್ದ ಎಡೆಯಿಂದ ಒಬ್ಬ ಹುಡುಗ ಇವನ ಹತ್ತಿರಕ್ಕೆ ಓಡಿಬಂದು –

“ಲೇ…ನೀನು ಅವುಟಾಗಿಲ್ವೇನೋ? ನೀನ್ ಕೊಟ್ಟ ಕ್ಯಾಚನ್ನ ನಾನೇ ಹಿಡಿದನಲ್ಲೋ!”

“ನೀನ್ ಹಿಡಿದಿದ್ದು ಕ್ಯಾಚೆ ಅಲ್ಲ…ಪಸ್ಟ್ ಪಿಚ್ ನೆಲಕ್ಕೆ ಬಿದ್ದ ಮೇಲೆ ಬಾಲ್ ಹಿಡ್ಕೊಂಡೆ”

“ಏ…ಸುಳ್ ಸುಳ್ನೆ ಹೇಳಬ್ಯಾಡ…ಗಾಡ್ ಪ್ರಾಮಿಸ್ ಹೇಳು…ನಾನು ಕರೆಕ್ಟಾಗಿ ಕ್ಯಾಚ್ ಹಿಡಿಲಿಲ್ವ?”

ಅಶ್ಟರಲ್ಲಿ ಅಲ್ಲಿಗೆ ಆರೇಳು ಮಂದಿ ಆಟಗಾರರು ಬಂದು, ಚೆಂಡನ್ನು ಹೊತ್ತೊಯ್ಯುತ್ತಿದ್ದ ಹುಡುಗನನ್ನು ಸುತ್ತುವರಿದರು. ಈಗ ವಾಗ್ವಾದ ಇನ್ನೂ ಜೋರಾಯಿತು.

“ಲೇ…ಈಗ ಏನೋ…ನೀನು ಆಟಕ್ಕೆ ಬರಲ್ವೇನೋ?”

“ನಾನು ಆಟಕ್ಕೂ ಬರೊಲ್ಲ…ನನ್ನ ಚೆಂಡನ್ನೂ ಕೊಡೊಲ್ಲ”

“ಲೋ…ಯಾಕೊ ಆಟ ನಿಲ್ಲಿಸ್ತೀಯ ? …. ಬಾರೋ ಸುಮ್ನೆ”

“ತಿರ‍್ಗ ನಂಗೆ ಬ್ಯಾಟಿಂಗ್ ಕೊಡೋದಾದ್ರೆ ಬರ‍್ತೀನಿ . ಇಲ್ದೇದ್ರೆ ಇಲ್ಲ”

“ಅದೆಂಗೋ ಆಗುತ್ತೆ? ಒಂದ್ ಸತಿ ಕ್ಯಾಚ್ ಕೊಟ್ಟ ಮೇಲೆ…ನೀನು ಅವುಟಲ್ವೇನೋ? …ಮತ್ತೆ ಹೆಂಗೋ ನಿಂಗೆ ಬ್ಯಾಟಿಂಗ್ ಕೊಡೋಕಾಗುತ್ತೆ?”

“ಅದೇನೊ ಅದೆಲ್ಲಾ ನಂಗೊತ್ತಿಲ್ಲ…ಚೆಂಡು ನನ್ನದು…ನೀವೆಲ್ಲಾ ಆಟ ಬೇಕು ಅನ್ನೋದಾದ್ರೆ…ನಂಗೆ ತಿರ‍್ಗ ಬ್ಯಾಟಿಂಗ್ ಕೊಡಿ…ಬತ್ತೀನಿ”

“ತೂ…ಎಂತಾ ಅಂಡಬಂಡನೋ ನಿಂದು. ಹೋಗೋ ಲೋ ಹೋಗು. ಬನ್ರೋ…ಇಂತಾವ್ನ ಜೊತೇಲಿ ಆಡುವ ಬದಲು…ಪೀಲ್ಡನಲ್ಲಿ ಕುಂತ್ಕೊಂಡು ಏನಾದ್ರು ಮಾತನಾಡೋಣ…ಬನ್ರೋ”

ಚೆಂಡನ್ನು ಹಿಡಿದಿದ್ದ ಹುಡುಗ ಈಗ ತನ್ನ ಮನೆಯತ್ತ ನಡೆದ. ಉಳಿದವರೆಲ್ಲರೂ ಆಟ ನಿಂತು ಹೋದುದಕ್ಕಾಗಿ ನಿರಾಶೆಗೊಂಡು, ಮೊದಲು ಆಟವಾಡುತ್ತಿದ್ದ ಎಡೆಗೆ ಮಂದಗತಿಯಲ್ಲಿ ಹೆಜ್ಜೆಗಳನ್ನಿಡುತ್ತಾ –

“ಇನ್ನು ಮುಂದಕ್ಕೆ ಅವನ ಚೆಂಡು ನಂಬ್ಕೊಂಡು ಆಟಕ್ಕೆ ಬರಬಾರ‍್ದು ಕಣ್ರೊ. ನಾವೆಲ್ಲಾ ಒಸೊಸಿ ದುಡ್ಡು ಹಾಕೊಂಡು ಬಾಲ್ ತಕೊಬೇಕು”

“ಎಂತಾವನೋ ಅವನು … ಚೆಂಡು ಅವನ್ದು ಅಂತ, ಅವನು ಹೇಳ್ದಂಗೆಲ್ಲಾ ಕೇಳ್ಬೇಕಾ?… ಇನ್ನು ಯಾವತ್ತು ಅವನನ್ನ ನಮ್ ಜೊತೇಲಿ ಆಟಕ್ಕೆ ಸೇರಿಸ್ಕೊಬಾರ‍್ದು ಕಣ್ರೊ” ಎಂದು ಮಾತನಾಡಿಕೊಳ್ಳುತ್ತಾ ಬಯಲಿನತ್ತ ನಡೆದರು.

ಕ್ರಿಕೆಟ್ ಆಡುವಾಗ ಪಡುತ್ತಿದ್ದ ಬಹುಬಗೆಯ ಉದ್ವೇಗ, ತಲ್ಲಣ , ರೋಮಾಂಚನ ಹಾಗೂ ಆನಂದದ ಗಳಿಗೆಗಳು ಈಗ ಅವರ ಪಾಲಿಗೆ ಇಲ್ಲವಾಗಿದ್ದವು. ಗೆಳೆಯರ ಜೊತೆಗೂಡಿ ಆಡಿ ನಲಿಯದೆ, ಚೆಂಡನ್ನು ಮನೆಗೆ ಒಯ್ದ ಆ ಹುಡುಗನ ಮೊಂಡುತನದ ವರ‍್ತನೆಯನ್ನು ನೋಡಿದ ನನಗೆ, ಏಕೋ ಏನೋ ಮರುಗಳಿಗೆಯಲ್ಲೇ ವಯಸ್ಸಿನಲ್ಲಿ ದೊಡ್ಡವರಾದ ನಮ್ಮ ಸಾಮಾಜಿಕ ವರ‍್ತನೆಗಳನ್ನು ಒಮ್ಮೆ ಒರೆಹಚ್ಚಿ ನೋಡಿಕೊಳ್ಳಬೇಕು ಎಂದೆನಿಸಿತು.

ಸಾಮಾಜಿಕ ವ್ಯವಹಾರಗಳಲ್ಲಿ ವ್ಯಕ್ತಿಗತವಾಗಿ ದೊಡ್ಡದಾದ ಸ್ತಾನಮಾನ ಮತ್ತು ಮನ್ನಣೆಯು ನಮಗೆ ದೊರೆಯದಿದ್ದಾಗ ಮಾತಿನ ವರಸೆಯಿಂದ ನಾನಾ ಬಗೆಯ ಕಾರಣಗಳನ್ನು ಮುಂದೊಡ್ಡಿ ಇತರರು ಮಾಡುವ ಎಲ್ಲಾ ಬಗೆಯ ಒಳ್ಳೆಯ ಕೆಲಸಗಳನ್ನು ಕಡೆಗಣಿಸುವ ಇಲ್ಲವೇ ನಡೆಯದಂತೆ ಮಾಡುವ ನಡೆನುಡಿಗಳು ನಮ್ಮೆಲ್ಲರಲ್ಲೂ ಬೇರೆ ಬೇರೆ ಪ್ರಮಾಣದಲ್ಲಿ ನೆಲೆಗೊಂಡಿವೆ. ಆದುದರಿಂದಲೇ ಕುಟುಂಬ/ದುಡಿಮೆ/ಸಾರ‍್ವಜನಿಕ ನೆಲೆಗಳಲ್ಲಿ ವ್ಯಕ್ತಿಯ ನಾನತ್ವವೇ ಹೆಚ್ಚಾಗಿ, ಸಮಾಜದ ಒಟ್ಟು ಬದುಕು ಬಹುಬಗೆಯ ಒತ್ತಡಗಳಿಗೆ ಸಿಲುಕಿ ನರಳುತ್ತಿರುವುದನ್ನು ನಮ್ಮ ದೇಶದ ಎಲ್ಲಾ ರಂಗಗಳಲ್ಲಿಯೂ ಕಾಣುತ್ತಿದ್ದೇವೆ.

(ಚಿತ್ರ ಸೆಲೆ: trendspotters.tv )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: