ಪತ್ತೇದಾರಿ ಕತೆ – ಪವಾಡ!….

– ಬಸವರಾಜ್ ಕಂಟಿ.

temple2

ಕಂತು-1 ಕಂತು 2 ಕಂತು 3

ಗುಡಿಯ ಮುಂದೆಯೇ ಹಾಯ್ದು ಮೊದಲು ವೆಂಕಣ್ಣನವರ ಮನೆಗೆ ಬಂದರು. ತುಂಬಾ ಹಳೆಯದಾದ ಮನೆ. ಇವರ ಮನೆಯಲ್ಲೇ ಸುರಂಗ ಇರಬಹುದು ಎಂದುಕೊಂಡ ಪುಲಕೇಶಿ. ಮನೆಯಲ್ಲಿದ್ದದ್ದು ವೆಂಕಣ್ಣನವರು ಮಾತ್ರ. ಶಂಕರ್ ಅವರು ಪುಲಕೇಶಿಯವರ ಪರಿಚಯ ಮಾಡಿಕೊಟ್ಟು, ಗುಡಿಯ ಪವಾಡ ಬಯಲು ಮಾಡಲು ಬಂದಿರುವುದಾಗಿ ಹೇಳಿದರು. ಪುಲಕೇಶಿಗೆ ವೆಂಕಣ್ಣನವರ ಮುಕದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ವೆಂಕಣ್ಣನವರಿಗೆ ಎಪ್ಪತ್ತು ದಾಟಿತ್ತು. ಮಾತಾಡುವಾಗ ಉಸಿರು ಹಿಡಿದು ಹಿಡಿದು ಆಡುತ್ತಿದ್ದರು. ವಾಡಿಕೆಯ ಮಾತು ಮುಗಿದ ಮೇಲೆ ಪುಲಕೇಶಿ ಮಾತು ಹೊರಳಿಸಿದನು, “ಎಶ್ಟ ದಿನದಿಂದ ನೀವು ಗುಡಿ ಪೂಜೆ ಮಾಡ್ತಿದೀರಾ?”

“ನಮ್ ತಂದೆಯವರ ಕಾಲದಿಂದ್ಳೂ ನಾನೇ ಮಾಡ್ತೀನಿ”

“ನಿಮ್ಮನ್ ಬಿಟ್ರೆ ಇನ್ಯಾರು ಮಾಡೋದಿಲ್ವಾ?”

“ನನ್ ಮಗ ಸುಬ್ಬು ಒಂದೊಂದ್ಸಾರಿ ಮಾಡ್ತಾನೆ. ನಂಗೆ ಹುಶಾರು ಇಲ್ದೆ ಇದ್ದಾಗ, ಇಲ್ಲಾ ನಾನು ಊರಲ್ಲಿ ಇರದೇ ಇದ್ದಾಗ”

“ಕೊನೇ ಸರಿ ನಿಮಗೆ ಯಾವಾಗ ಹುಶಾರು ತಪ್ಪಿತ್ತು?”

“ಹ… ಹ…”, ನಗುತ್ತಾ ಹೇಳಿದರು ವೆಂಕಣ್ಣ, “ವಯಸ್ಸಾಯ್ತು ನೋಡಿ, ಆಗಾಗ ಇದ್ದದ್ದೇ. ಎರಡು ವಾರದ ಹಿಂದೆಯಶ್ಟೇ ನೆಗಡಿ ಬಂದು ಮಲಗಿದ್ದೆ”

“ಈ ದೀಪ ಹತ್ಕೊಳ್ಳೊ ಬಗ್ಗೆ ನಿಮಗೇನ್ ಅನ್ಸುತ್ತೆ?”

“ನಂಗೆ ಒಂದೂ ಅರ‍್ತ ಆಗ್ತಿಲ್ಲ. ನಿಜವೋ, ಸುಳ್ಳೋ, ಆ ರಾಮನಿಗೇ ಗೊತ್ತು”

“ಈ ಮಾತು ನಿಜ ಹೇಳಿದ್ರಿ”, ವ್ಯಂಗ್ಯವಾಗಿ ನಕ್ಕನು ಪುಲಕೇಶಿ. “ಆ ರಾಮನಿಗೆ ಕಂಡಿತಾ ಗೊತ್ತಿರುತ್ತೆ”. ಒಂದೆರಡು ಕ್ಶಣ ಸುಮ್ಮನಿದ್ದು ಮುಂದುವರೆಸಿದನು, “ಒಂದು ಮಾತು… ಒಂದು ವೇಳೆ ಈ ಪವಾಡ ಮನುಶ್ಯರೇ ಮಾಡಿದ್ದು ಅಂತ ಸಾಬೀತಾದ್ರೆ ನಿಮಗ್ ಏನ್ ಅನ್ಸುತ್ತೆ?”

ವೆಂಕಣ್ಣನವರು ತುಸು ಯೋಚಿಸಿ ಹೇಳಿದರು, “ಬೇಜಾರಾಗುತ್ತೆ. ಯಾರಾದ್ರು ಯಾಕ್ ಹೀಗ್ ಮಾಡ್ಬೇಕು?”

“ನಿಮ್ಮ ಮಗ ಸುಬ್ಬು ಎಲ್ಲಿ?” ಎಂದು ಕೇಳಿದನು ಪುಲಕೇಶಿ.

“ಅವನು ಹೆಂಡ್ತಿ ಜೊತೆ ಬೇರೆ ಮನೇಲಿದಾನೆ” ಎಂದರು ವೆಂಕಣ್ಣ, ಮುಕ ಸಣ್ಣಗೆ ಮಾಡಿ.

ವೆಂಕಣ್ಣನವರ ಮನೆಯಿಂದ ಹೊರಬಿದ್ದ ತಕ್ಶಣ, ಶಂಕರ್ ಅವರು ಸುಬ್ಬು ಬೇರೆ ಮನೆಯಲ್ಲಿದ್ದ ಕಾರಣ ತಿಳಿಸಿದರು. ಸುಬ್ಬುವಿನ ಹೆಂಡತಿ ಮತ್ತು ವೆಂಕಣ್ಣನವರ ಮಗಳು ಸಾವಿತ್ರಿ ನಡುವೆ ವಿಪರೀತ ಜಗಳವಂತೆ. ತಾಳಲಾರದೆ ಅವರದೇ ಇನ್ನೊಂದು ಸ್ವಂತ ಮನೆಯಿದ್ದುದರಿಂದ ಹೆಂಡತಿ ಕರೆದುಕೊಂಡು ಒಂದು ವರ‍್ಶದ ಹಿಂದೆ ಅಲ್ಲಿಗೇ ಹೋಗಿ ಬಿಟ್ಟನಂತೆ. ಮುಂದಿನ ಮನೆಗೆ ಹೋಗುವ ದಾರಿಯಲ್ಲಿ ಶಂಕರ್ ಅವರು, ಪವಾಡದ ದೆಸೆಯಿಂದ ಗುಡಿಯ ಆರತಿ ತಟ್ಟೆ ತುಂಬಿ ತುಳುಕುತ್ತಿದ್ದ ವಿಶಯ ಹೇಳಲು ಮರೆಯಲಿಲ್ಲ.

ಮುಂದಿನದು ಶ್ರೀನಿವಾಸರಾಯರ ಮನೆ. ಅವರಿಗೆ ಸುಮಾರು ಅರವತ್ತು ವರ‍್ಶ. ಅವರ ಮನೆಯಲ್ಲಿದ್ದದ್ದು ಅವರು, ಮಗ-ಸೊಸೆ, ಇಬ್ಬರು ಮೊಮ್ಮಕ್ಕಳು. ಅವರ ಮನೆಯೂ ಹಳೆಯದಾಗಿ, ಪುಲಕೇಶಿಗೆ ಗೊಂದಲ ಇನ್ನಶ್ಟು ಹೆಚ್ಚಾಯಿತು. ಅವರ ಮಗ ಅವರಿಗಿದ್ದ ಅಯ್ದು ಎಕರೆ ತೋಟ ನೋಡಿಕೊಳ್ಳುತ್ತಿದ್ದ. ಎಲ್ಲರ ಮುಕ, ಕಣ್ಣುಗಳನ್ನು ಓದುತ್ತ, ಪುಲಕೇಶಿ ನೇರವಾಗಿ ಶ್ರೀನಿವಾಸರಾಯರಿಗೆ ಕೇಳಿದ,
“ಈ ಪವಾಡದ ಬಗ್ಗೆ ನಿಮಗೇನನಿಸುತ್ತದೆ?”

“ನಾನೂ ಆದಶ್ಟೂ ತಲೆ ಕೆಡಿಸಿಕೊಂಡಿದ್ದೀನಿ. ಆದ್ರೆ ಹ್ಯಾಗೆ ಅಂತ ಹೊಳೀತಿಲ್ಲ” ಅಂದರು. ಅಶ್ಟರಲ್ಲಿ ಅವರ ಮಗ ಬಾಯಿ ಹಾಕಿದನು,
“ಯಾರೋ ಬೇಕು ಅಂತಾನೇ ಮಾಡ್ತಿದಾರೆ ಸರ್. ಏನೋ ಟ್ರಸ್ಟು ಅಂತೆಲ್ಲಾ ಓಡಾಡ್ತಿದಾರೆ. ಎಲ್ಲಾ ದುಡ್ಡಿನಾಸೆ. ಅವರೇ ಮಾಡಿಸಿರ‍್ಬೇಕು”
ಇದ್ರೂ ಇರಬಹುದು ಎನಿಸಿತು ಪುಲಕೇಶಿಗೆ. ಇಡೀ ಊರೇ ಸೇರಿ ಇದನ್ನ ಮಾಡ್ತಿದಾರ? ಎನ್ನುವ ಯೋಚನೆ ಅವನ ತಲೆಯಲ್ಲಿ ಸುಳಿದು ಹೋಯಿತು.

“ಆದ್ರೆ ಗುಡಿಗೆ ಬೀಗದ ಕಯ್ ಇರೋದು ನಿಮ್ ಹತ್ರ ಮಾತ್ರ ಅಲ್ವಾ?” ಕೆಣಕಿದನು ಪುಲಕೇಶಿ.

“ಏನ್ ಸಾರ್ ನಮ್ಮೇಲೆ ಅನುಮಾನ ಪಡ್ತೀರಾ? ಆ ಎರಡ್ ಕಾಸಿನ್ ಬೀಗಕ್ಕೆ ನಕಲಿ ಬೀಗದ ಕಯ್ ಮಾಡ್ಸೋದು ಎಶ್ಟೊತ್ತು ಹೇಳಿ?”

ಅವನ ಕೇಳ್ವಿಗೆ ಪುಲಕೇಶಿ ಬಳಿ ಉತ್ತರವಿರಲಿಲ್ಲ. ಇನ್ನಶ್ಟು ಪ್ರಶ್ನೆ ಕೇಳಿ ಅಲ್ಲಿಂದ ಇಬ್ಬರೂ ಹೊರಬಂದರು. ಮುಂದಿನದು ನಾರಾಯಣ ಅವರ ಮನೆ. ಅವರಿಗೆ ಸುಮಾರು ನಲವತ್ತು ವರ‍್ಶ. ಮನೆಯಲ್ಲಿ ಹೆಂಡತಿ, ಮತ್ತು ಕಾಲೇಜು ಓದುತ್ತಿರುವ ಒಬ್ಬ ಮಗ. ಅವರ ಮನೆಯೂ ಹಳೆಯದಾಗಿದ್ದರಿಂದ ಪುಲಕೇಶಿ ಮನದಲ್ಲಿಯೇ ನಕ್ಕ. ಎಲ್ಲರ ಮನೆಯನ್ನು ಒಮ್ಮೆ ಹುಡುಕಿ ಬಿಡಬೇಕು ಎನಿಸಿತು. ಒಳ್ಳೆಯ ದಾರಿಯಲ್ಲ ಎಂದು ಸುಮ್ಮನಾದ. ನಾರಾಯಣ ಅವರು ಗುಡಿಯ ಪೂಜೆ ಜೊತೆಗೆ ಪೌರೋಹಿತ್ಯ ಮಾಡುತ್ತಿದ್ದರು. ಅದರಲ್ಲೇ ಅವರ ಜೀವನ ಸಾಗುತ್ತಿತ್ತು. ಅವರಿಗೂ ಅದೇ ಪ್ರಶ್ನೆಗಳನ್ನು ಕೇಳಿ, ಯಾವ ಸುಳಿವೂ ದೊರೆಯದೆ ಹೊರಬಂದನು. ಇಬ್ಬರು ಯಾವ ಮಾತೂ ಆಡದೆ ಮತ್ತೆ ಗುಡಿಯ ಬಯಲಿಗೆ ಬಂದರು. ಅಶ್ಟೊತ್ತು ನೋಡಿದ್ದೆಲ್ಲವನ್ನೂ ಪುಲಕೇಶಿ ಮೆಲುಕು ಹಾಕುತ್ತ, ಶಂಕರ್ ಅವರಿಗೆ ಕೇಳಿದ,
“ಈ ಮೂರು ಮನೆಗಳಲ್ಲಿ ಯಾರಿಗೆ ದುಡ್ಡಿನ ಅವಶ್ಯಕತೆ ಇದೆ?”

ತುಸು ಹೊತ್ತು ಯೋಚಿಸಿ, “ಎಲ್ರಿಗೂ ಇದೆ ಸರ್. ವೆಂಕಣ್ಣನವರಿಗೆ ಮಗಳ ಓದು, ಮದುವೆ. ಶ್ರೀನಿವಾಸರಾಯರ ತೋಟದ ದುಡಿಮೆ ಅಶ್ಟಕ್ಕಶ್ಟೆ ಇದೆ. ಅವರ ಮೊಮ್ಮಕ್ಕಳನ್ನಾ ಸಿಟೀಲಿ ಓದಿಸ್ಬೇಕು ಅಂತ ಅವರ ಮಗ ಓಡಾಡ್ತಾಯಿದಾನೆ. ಇನ್ನು ನಾರಾಯಣರು. ಪುರೋಹಿತ್ಯದಿಂದ ಎಶ್ಟು ದುಡ್ಡ್ ಸಿಗುತ್ತೆ ಸರ್ ಈ ಹಳ್ಳೀಲಿ?”

“ರೀ ಶಂಕರ್. ನೀವು ಗಂಟು ಬಿಡಸೋ ಬದಲು ಇನ್ನಶ್ಟು ಗಟ್ಟಿಯಾಗಿ ದಾರ ಎಳೀತಿದಿರಾ” ಎಂದು ನಕ್ಕು ಯೋಚನೆಯಲ್ಲಿ ಮುಳುಗಿದನು.

ಅವನಿಗೆ ಒಂದು ವಿಶಯ ಹೊಳೆಯಿತು. ಈ ಮೂರು ಮನೆಗಳು ಗುಡಿಗೆ ಹತ್ತಿರವಾಗಿ, ಅದರ ಸುತ್ತವೇ ಇದ್ದವು. ವೆಂಕಣ್ಣನವರದು ಗುಡಿಯ ಎಡಕ್ಕೆ, ಶ್ರೀನಿವಾಸರಾಯರದು ಬಲಕ್ಕೆ, ಮತ್ತು ನಾರಾಯಣ ಅವರದು ಗುಡಿಯ ಹಿಂದೆ. ಸುರಂಗ ಬಳಸಿ ಈ ಪವಾಡ ನಡೆಯುತ್ತಿದೆ ಎನ್ನುವ ಅವನ ನಂಬಿಕೆಗೆ ಈ ವಿಚಾರ ಇಂಬು ಕೊಟ್ಟಿತು. ಸ್ವಲ್ಪ ಹೊತ್ತಿನ ನಂತರ, ತನ್ನ ವಿಚಾರಗಳನ್ನು ಬಿಚ್ಚಿಟ್ಟನು,  “ನೋಡಿ, ಈಗ ಯಾರು ಮಾಡಿರಬಹುದು, ಯಾರು ಮಾಡಿರಲಿಕ್ಕಿಲ್ಲ ಅಂತ ಯೋಚಿಸೋಣ. ನನ್ನ ಪ್ರಕಾರ, ಆ ಟ್ರಸ್ಟಿನ ಜನ ಇದನ್ನ ಮಾಡಿರೋಕೆ ಚಾನ್ಸ್ ಇಲ್ಲಾ. ಇಂತಾ ಗುಟ್ಟನ್ನಾ ಅಶ್ಟು ಜನ ಸೇರಿ ಕಾಪಾಡ್ಕೊಳ್ಳೋಕೆ ಸಾದ್ಯ ಇಲ್ಲ. ಅಲ್ದೇ, ಅಲ್ಲಿದ್ದವರಿಗೆ ಗುಡಿಯ ಒಳಗೆ ಸಲೀಸಾಗಿ ಹೋಗಿ ಬರೊಕ್ಕೆ ಆಗೊಲ್ಲ. ಹಾಗಾಗಿ ಅದನ್ನ ಬಿಟ್ ಬಿಡೋಣ. ಈ ಮೂರ್ ಮನೇಲೇ ಯಾರೋ ಮಾಡ್ತಿದಾರೆ ಅಂತ ನನಗೆ ಅನಿಸ್ತಾಯಿದೆ. ಅವರಲ್ಲಿ ಯಾರ್ ಮನೇಲೂ ಸುರಂಗ ಇರಬಹುದು. ಈಗ ಹೇಳಿ, ವೆಂಕಣ್ಣನವರ ಮನೇಲಿ ಯಾರ ಮೇಲೆ ಅನುಮಾನ ಪಡಬಹುದು?”

“ವೆಂಕಣ್ಣನವರ ಮಗ ಇಂತದ್ದೆಲ್ಲ ಮಾಡ್ತಾನೆ ಅಂತ ನಂಗ್ ಅನ್ಸಲ್ಲಾ ಸಾರ್. ಅವನು ತುಂಬಾ ಮುಗ್ದ. ತಾನಾಯ್ತು ತನ್ ಕೆಲ್ಸಾ ಆಯ್ತು. ಅಲ್ದೆ ಅವನು ಈಗಿರೋ ಮನೆ ತುಂಬಾ ದೂರ ಸರ‍್”

“ವೆಂಕಣ್ಣನವರೇ ಮಾಡಿರಬಹುದು ಅಂತ ನಿಮಗ್ ಅನ್ಸಲ್ವಾ?”

“ಅಯ್ಯೋ… ಇಲ್ಲಾ ಸರ್”

“ಅವರನ್ನಾ ನೋಡಿದ್ರೆ ನಂಗೂ ಆ ಅನುಮಾನ ಬರ‍್ಲಿಲ್ಲ. ಹಮ್… ಅವರ ಮಗಳು? ಅದೇ ಆ ಸೆಂಟಿನ ಹುಡಗಿ?”

“ಅವ್ಳಾ… ಇದ್ರೂ ಇರಬಹುದು ಸಾರ್. ತುಂಬಾ ಚೂಟಿ ಅವ್ಳು”

ಸ್ಟ್ರೀಟ್ ಸ್ಮಾರ‍್ಟ್ ಎಂದುಕೊಂಡ ಪುಲಕೇಶಿ ಮನದಲ್ಲೇ.

ಶಂಕರ್ ತಮ್ಮ ಮಾತನ್ನು ತಡೆದು, “ಇಲ್ಲಾ ಸರ್. ಆ ಹುಡ್ಗಿ ಮಾಡಿರೋಕೆ ಸಾದ್ಯಾನೇ ಇಲ್ಲ”

“ಹೇಗೆ?”

“ಈ ದೀಪಾ ಹತ್ತೋಕೆ ಶುರು ಆದ ಎರಡನೇ ಅಮವಾಸ್ಯೆಗೆ ವೆಂಕಣ್ಣನವ್ರು ಮತ್ತೆ ಅವ್ರ ಮಗಳು ಯಾರೊ ನೆಂಟ್ರು ತೀರ್ ಹೋಗಿದಾರೆ ಅಂತ ಬೇರೆ ಊರಿಗ್ ಹೋಗಿದ್ರು. ಅವ್ಳು ಊರಲ್ಲಿ ಇಲ್ದೆ ಇರೋವಾಗ್ಲೂ ದೀಪ ಹತ್ಕೊಂಡಿದೆಯಲ್ಲಾ ಸರ‍್”

ಒಂದೆರಡು ಕ್ಶಣ ಪುಲಕೇಶಿ ಮಂಕಾದನು. ಮತ್ತೆ ಎಚ್ಚರಗೊಂಡು,

“ಆ ಶ್ರೀನಿವಾಸರಾಯರು?”

“ಅವರ ಮೇಲೆ ಅನುಮಾನ ಇಲ್ಲಾ ಬಿಡಿ. ಅವರೂ ಹಿರಿಯರು. ಅವ್ರು ಹಾಗೆಲ್ಲಾ ಮಾಡ್ಬಹುದು ಅಂತ ಅನ್ಸೊಲ್ಲ. ಆದ್ರೆ ಅವರ ಮಗ ಮಾಡಿದ್ರೂ ಮಾಡಿರಬಹುದು. ಅದೇ… ಗೋಪಿ”

“ಹಮ್… ಇನ್ನು ನಾರಾಯಣರು?”

“ಇಲ್ಲಾ ಸರ್. ಮೊನ್ನೆ ಅಮವಾಸ್ಯೆಗೆ ಅವ್ರು, ಅವರ ಮಗ ಇಬ್ರೂ, ದೀಪಾ ಹತ್ತೋವಾಗ ಗುಡಿಲೇ ಇದ್ರು. ನಂಗ್ ನೆನೆಪಿದೆ”

“ಮೊದಲಿಂದ್ಲೂ ಇದ್ರಾ, ಇಲ್ಲಾ ದೀಪಾ ಹತ್ತೋ ಹೊತ್ತಿಗೆ ಸರಿಯಾಗಿ ಬಂದ್ರ?”

“ಸರಿಯಾಗಿ ನೆನಪಿಲ್ಲ ಸರ್. ಆದ್ರೆ ದೀಪಾ ಹತ್ಕೊಳ್ಳೋವಾಗ ಮಾತ್ರ ಅಲ್ಲಿದ್ರು”

“ಶ್ರೀನಿವಾಸರಾಯರ ಮಗ? ಅವ್ರೂ ಇದ್ರಾ?”

ತುಸು ಹೊತ್ತು ಯೋಚಿಸಿ, “ಇರಲಿಲ್ಲ ಅನ್ಸುತ್ತೆ ಸರ‍್”

ಪುಲಕೇಶಿ ಈ ಎಲ್ಲವನ್ನೂ ತನ್ನ ತಲೆಯಲ್ಲಿ ಇಂಗಿಸಿಕೊಳ್ಳುತ್ತಾ ಕಣ್ಣು ಮುಚ್ಚಿ ನಿಂತ. ಆಮೇಲೆ ಕಣ್ಣು ತೆಗೆದು ತುಟಿಯಂಚಿನಲ್ಲಿ ನಕ್ಕ. ಆ ನಗುವಿನ ಹುರುಳು ಏನೆಂದು ಶಂಕರ್ ಅವರಿಗೆ ತಿಳಿಯಲಿಲ್ಲ. “ಏನಾಯ್ತ್ ಸಾರ‍್?” ಕೇಳಿದರು.

“ಯಾಕೋ ಈ ಗಂಟು ಬಿಡಸೋಕೆ ನಾನು ಕಲಿತಿದ್ದು ಸಾಕಾಗಿಲ್ಲ ಅನ್ಸುತ್ತೆ. ಕಾಲೇಜಿಗ್ ಹೋಗಿ ಮತ್ತೆ ಕಲಿತು ಬರ‍್ತೀನಿ”

“ಕಾಲೇಜಿಗಾ?”

(ಮುಂದುವರೆಯುವುದು : ಕೊನೆಯ ಕಂತು ನಾಳೆಗೆ ) 

( ಚಿತ್ರ ಸೆಲೆ: kalaasrishti.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 14/08/2015

    […] 2 ಕಂತು 3 ಕಂತು […]

ಅನಿಸಿಕೆ ಬರೆಯಿರಿ:

%d bloggers like this: