ಪತ್ತೇದಾರಿ ಕತೆ – ಪವಾಡ!……..

– ಬಸವರಾಜ್ ಕಂಟಿ.

detective

ಸುಮಾರು ದಿನಗಳು ಕಳೆದ ನಂತರ ಶಂಕರ್ ಅವರು ಪುಲಕೇಶಿಗೆ ಕರೆ ಮಾಡಿದರು, “ಏನ್ ಸರ್. ಇನ್ನೆರಡು ದಿನಾ ಬಿಟ್ರೆ ಮತ್ತೆ ಅಮವಾಸ್ಯೆ ಬಂತು. ನೀವ್ ಆವತ್ತು ಬಂದವ್ರು ಮತ್ತೆ ಈ ಕಡೆ ಬರ‍್ಲೇ ಇಲ್ಲಾ? ಏನಾದ್ರೂ ಗೊತ್ತಾಯ್ತಾ ಸರ‍್?”

“ಇನ್ನೂ ಏನೂ ಗೊತ್ತಾಗಿಲ್ಲ ರೀ. ನಂಗ್ ಟೈಮ್ ಬೇಕು” ಸಿಡುಕಿನಲ್ಲಿ ಹೇಳಿದ ಪುಲಕೇಶಿ.

“ಅಮವಾಸ್ಯೆ ದಿನಾ ಬರ‍್ತೀರಾ ಸರ‍್? ದೀಪ ಹತ್ಕೊಳ್ಳೋದನ್ನಾ ನೋಡೋಕೆ?”

“ಇಲ್ಲಾ ರೀ. ನಂಗೆ ಅವತ್ತು ಬೇರೆ ಕೆಲ್ಸ ಇದೆ” ಎಂದು ಕರೆ ಮುಗಿಸಿದ.

ಅಂದು ಅಮವಾಸ್ಯೆ. ದೀಪ ತನ್ನಿಂತಾನೇ ಹತ್ತಿಕೊಳ್ಳುವ ಸುದ್ದಿ ಊರಿಂದ ಊರಿಗೆ ಹರಡಿ ಹುಲಿದುರ‍್ಗದ ಗುಡಿಯ ಬಯಲು ಕಿಕ್ಕಿರಿದು ತುಂಬಿತ್ತು. ರಾತ್ರಿ ಎಶ್ಟು ಹೊತ್ತಿಗೆ ಬೇಕಾದರೂ ದೀಪ ಹತ್ತಿಕೊಳ್ಳುತ್ತಿದ್ದರಿಂದ ಊರಿನ ಬಹುತೇಕರು ಬೇಗ ಊಟ ಮುಗಿಸಿ ಗುಡಿಕಡೆ ಹೊರಟಿದ್ದರು. ವೆಂಕಣ್ಣನವರೂ ಹೊರಟರು.

“ಸಾವಿತ್ರಿ, ಬರ‍್ತಿ ಏನೇ?”

“ಇಲ್ಲಾ ಅಪ್ಪಾ. ನೀವ್ ಹೋಗಿ ನಾನು ಮಲ್ಕೋತೀನಿ. ಹೊರಗಡೆ ಬೀಗ ಹಾಕ್ಕೊಂಡ್ ಹೋಗಿ” ಎಂದಳು ಸೆಂಟಿನ ಹುಡುಗಿ.

ಆಯಿತೆಂದು ವೆಂಕಣ್ಣನವರು ಗುಡಿಕಡೆ ಹೊರಟರು. ಗಂಟೆ ರಾತ್ರಿ ಹತ್ತಾಗಿತ್ತು. ಗುಡಿಯ ಹತ್ತಿರ ಕಾರೊಂದು ಬಂದು ನಿಂತಿತು. ಅದರಿಂದ ಮೂವತ್ತರ ಹುಡುಗನೊಬ್ಬ ಇಳಿದು ಗುಡಿಯ ಬಯಲಲ್ಲಿ ಜನಗಳ ನಡುವೆ ಬಂದು ನಿಂತ. ಅಶ್ಟರಲ್ಲಿ ಶಂಕರ್ ಅವರ ಮೊಬಾಯಿಲಿಗೆ ಕರೆ ಬಂದಿತು, ಪುಲಕೇಶಿಯದು. ಗದ್ದಲಲ್ಲಿದ್ದ ಶಂಕರ್, ಗುಡಿಯ ಬಯಲಿನಿಂದ ದೂರ ಬಂದು ಮಾತಾಡಿದರು,

“ಹೇಳಿ ಸರ‍್”

“ರೀ ಶಂಕರ್. ಗುಡಿಯ ಹೊರಗಿರೋ ಕಾರಲ್ಲಿ ನಾನ್ ಕೂತಿದೀನಿ. ಯಾರ‍್ಗೂ ಗೊತ್ತಾಗದ ಹಾಗೆ ಇಲ್ಲಿ ಬನ್ನಿ”

“ಸರಿ” ಎಂದು ಕರೆ ಮುಗಿಸಿ, ಮನೆಕಡೆ ಹೋಗುವವರಂತೆ ನಟಿಸುತ್ತಾ, ಹಾದಿ ಬದಲಿಸಿ, ಸುತ್ತು ಹಾಕಿ ಕಾರಿನ ಕಡೆ ಬಂದರು ಶಂಕರ್.

ಕಾರಿನ ಬಾಗಿಲು ತಗೆದು, ಶಂಕರ್ ಅವರನ್ನು ಒಳಗಡೆ ಬಿಟ್ಟುಕೊಂಡ ಪುಲಕೇಶಿ. “ಶಂಕರ್. ನನ್ನ ಬಗ್ಗೆ ಯಾರಾದ್ರೂ ಇವತ್ತು ನಿಮಗೆ ಕೇಳಿದ್ರಾ?”

ಸ್ವಲ್ಪ ಯೋಚಿಸಿ, “ಹೌದು ಸರ‍್”

“ಯಾರು?”

“ಅದೇ ಆ ಟ್ರಸ್ಟಿನವ್ರು”

“ಅವರನ್ನಾ ಬಿಟ್ಟು?”

“ಹಮ್… ಗೋಪಿ ಸರ್. ಅದೇ ನಾರಾಯಣರ ಮಗ”

ಮನದಲ್ಲೇ ನಕ್ಕ ಪುಲಕೇಶಿ. “ಏನಂತ ಕೇಳ್ದ?”

“ಪುಲಕೇಶಿಯವ್ರು ಬರ‍್ತಾರ ಸರ‍್? ಅಂತ ಕೇಳ್ದ. ಇವತ್ತಶ್ಟೇ ಅಲ್ಲ. ಮೊನ್ನೆನೂ ಕೇಳಿದ್ದ”

“ಹ ಹ ಹಾ…” ಎಂದು ಮನಸಾರೆ ನಕ್ಕ ಪುಲಕೇಶಿ.

“ಯಾಕೆ ಸರ‍್? ಅವನೇ ಅಂತ ನಿಮ್ ಅನುಮಾನನಾ? ಆದ್ರೆ ಅವ್ನು ಇವತ್ತು ಇಲ್ಲೇ ಗುಡೀಲೇ ಇದಾನೆ. ಅವ್ನು ಇಲ್ಲೇ ಇದ್ರೆ ದೀಪ ಅದ್ ಹೇಗೆ ಹತ್ಕೊಳ್ಳುತ್ತೆ?”

“ಇದರ ಹಿಂದೆ ಇರೋದು ಅವ್ನೇ. ಅವ್ನು ಇಲ್ಲೇ ಇದ್ರೂ ದೀಪ ಹತ್ಕೊಳ್ಳುತ್ತೆ. ಹ್ಯಾಗೆ ಅಂತ ತೋರಿಸ್ತೀನಿ”. ಶಂಕರ್ ಅವರು ಬೆರಗು ಗಣ್ಣಿನಿಂದ ಪುಲಕೇಶಿ ಮುಕವನ್ನೇ ದಿಟ್ಟಿಸಿದರು.

ಗಂಟೆ ಒಂದಾಯಿತು. ಇವರಿಬ್ಬರೂ ಇನ್ನೂ ಕಾರಲ್ಲೇ ಇದ್ದರು. ಒಮ್ಮಿದ್ದೊಮ್ಮೆಲೇ ಗುಡಿಯ ಬಯಲಿನಿಂದ “ಹೋ…” ಎನ್ನುವ ಜನರ ಕೂಗು ಕೇಳಿಸಿತು. ದೀಪ ಹತ್ತಿಕೊಂಡಿತು ಎಂದು ಗೊತ್ತಾದ ಪುಲಕೇಶಿ, ಕಾರಿನಿಂದ ಇಳಿದು ನೇರ ವೆಂಕಣ್ಣನವರ ಮನೆ ಕಡೆಗೆ ಓಡಿದ. ಶಂಕರ್ ಅವರು ಅಶ್ಟೇ ವೇಗದಲ್ಲಿ ಹಿಂಬಾಲಿಸಿದರು. ಎಲ್ಲರೂ ಗುಡಿಯ ಒಳಗಿನ ಬಯಲಲ್ಲಿದ್ದುದರಿಂದ ಯಾರೂ ಅವರನ್ನು ನೋಡಲಿಲ್ಲ. ಅವರ ಮನೆ ಬೀಗ ಹಾಕಿತ್ತು. ಬಾಗಿಲಿಗೆ ಜೋರಾಗಿ ಒದ್ದ ಪುಲಕೇಶಿ. ಅವನು ಒದ್ದ ಏಟಿಗೆ ಚಿಲಕವೇ ಮುರಿದು ಬಿತ್ತು. ಮನೆಯ ಒಳಗೆ ನುಗ್ಗಿ ಏನೋ ಹುಡುಕಿದ. ಒಂದು ಕೋಣೆಯ ಬಾಗಿಲು ಒಳಗಡೆಯಿಂದ ಹಾಕಿಕೊಂಡಿತ್ತು. ಅದನ್ನೂ ಜೋರಾಗಿ ಒದ್ದ. ತೆರೆಯಿತು. ಕೋಣೆಯ ಒಳಗಡೆ ಕವಾಟೊಂದು ಕಾಣಿಸಿತು. ಅದರ ಬಾಗಿಲು ಅರ‍್ದ ತೆರೆದಿತ್ತು. ಪೂರ‍್ತಿಯಾಗಿ ತೆರೆದ ಪುಲಕೇಶಿ. ಅದು ಸುರಂಗ ದಾರಿಗೆ ಎಡೆಮಾಡಿಕೊಟ್ಟಿತು. ಮಂದವಾಗಿ ನಕ್ಕ. ಆದರೆ ಆ ದಾರಿಯಲ್ಲಿ ಇಳಿಯದೆ, ಅದನ್ನು ಮುಚ್ಚಿ, ಅದಕ್ಕಿದ್ದ ಚಿಲಕ ಹಾಕಿ, ಅದು ತೆರೆಯದಂತೆ ಬದ್ರಪಡಿಸಿದ.

“ಯಾಕ್ ಸರ್ ಮುಚ್ಚಿದ್ರಿ? ಅಲ್ಲೇ ಇಳಿದು ಹೋಗ್ಬಹುದಲ್ಲಾ?” ಗೊಂದಲಗೊಂಡು ಕೇಳಿದರು ಶಂಕರ್.

“ನನ್ಗೆ ಡ್ರಾಮಾ ಅಂದ್ರೆ ತುಂಬಾ ಇಶ್ಟ” ನಕ್ಕನು ಪುಲಕೇಶಿ.

ಅಲ್ಲಿಂದ ತಕ್ಶಣ ಹೊರಬಂದು, ಬಾಗಿಲುಗಳನ್ನು ಮುಚ್ಚಿ, ಮುರಿದಿದ್ದ ಚಿಲಕ ಹಾಗೇ ಸಿಕ್ಕಿಸಿ, ನಾರಾಯಣರ ಮನೆಕಡೆಗೆ ಓಡಿದ. ಶಂಕರ್ ಹಿಂಬಾಲಿಸಿದರು. ಬಾಗಿಲು ತಟ್ಟಿದಾಗ, ಅವರ ಹೆಂಡತಿ ತೆರೆದರು, ಕಣ್ಣು ಉಜ್ಜುತ್ತಾ. ತೊಂದರೆ ಮಾಡಿದ್ದಕ್ಕೆ ಕ್ಶಮೆ ಕೇಳುತ್ತಾ, “ಗೋಪಿ ಮಲಗುವ ಕೋಣೆ ತೋರಿಸಿ ತಾಯಿ” ಎಂದ ಪುಲಕೇಶಿ.

“ಬನ್ನಿ” ಎನ್ನುತ ಅವನ ಕೋಣೆಗೆ ಕರೆದುಕೊಂಡು ಹೋದರು ನಾರಾಯಣರ ಹೆಂಡತಿ.

ಅಲ್ಲಿಯೂ ಅದೇ ತರಹದ ಕವಾಟು ಇತ್ತು. ಈ ಬಾರಿ ಏನೂ ಮಾಡದೆ, ಅದರ ಎದುರಿಗೆ ಪುಲಕೇಶಿ ಸುಮ್ಮನೆ ನಿಂತ. ಅವನ ಹಿಂದೆ ಶಂಕರ್ ಮತ್ತು ನಾರಾಯಣರ ಹೆಂಡತಿ ಇದ್ದರು. ಒಂದಯ್ದು ನಿಮಿಶದಲ್ಲಿ, ಆ ಕವಾಟಿನ ಹಿಂದೆ ಯಾರೋ ಬರುವ ಸಪ್ಪಳವಾಯಿತು. ಪುಲಕೇಶಿ ಎಲ್ಲರಿಗೂ ಸುಮ್ಮನಿರುವಂತೆ, ಮತ್ತು ಅಡಗಿಕೊಳ್ಳುವಂತೆ ಸನ್ನೆ ಮಾಡಿದ. ಕವಾಟಿನಿಂದ ವೆಂಕಣ್ಣನವರ ಮಗಳು ಸಾವಿತ್ರಿ ಹೊರಬಂದಳು. ಅದನ್ನು ನೋಡಿ ಶಂಕರ್ ಮತ್ತು ನಾರಾಯಣರ ಹೆಂಡತಿಗೆ ಬೆರಗಾದರೆ, ಪುಲಕೇಶಿ ಜೋರಾಗಿ ನಕ್ಕು ಅವಳ ಮುಂದೆ ಬಂದ. ಅಲ್ಲಿದ್ದವರನ್ನು ನೋಡಿ ಸಾವಿತ್ರಿಗೆ ಬೆರಗು, ನಾಚಿಕೆ ಒಟ್ಟಿಗೆ ಆಯಿತು. ಏನು ಮಾಡಬೇಕು ತೋಚದೆ ಅವಮಾನದಿಂದ ತಲೆ ತಗ್ಗಿಸಿ, ಕೆಳಗೆ ಕೂತು ಅಳತೊಡಗಿದಳು. ವೆಂಕಣ್ಣನವರನ್ನು ಅಲ್ಲಿಗೇ ಕರೆತರಲು ಶಂಕರ್ ಅವರಿಗೆ ಪುಲಕೇಶಿ ಕೇಳಿಕೊಂಡ. ಶಂಕರ್ ಅವರು ಹೋಗಿ, ಒಂದು ಹದಿನಯ್ದು ನಿಮಿಶದಲ್ಲಿ ವೆಂಕಣ್ಣನವರು, ನಾರಾಯಣ ಮತ್ತು ಗೋಪಿ ಮೂವರನ್ನೂ ಕರೆದುಕೊಂಡು ಬಂದರು. ಬಂದವರಿಗೂ ಬೆರಗಾಯಿತು. ಪುಲಕೇಶಿ ಗೋಪಿಯತ್ತ ತಿರುಗಿ ಕೇಳಿದ,

“ಗೋಪಿ, ಏನ್ ಕತೆ ಅಂತ ನೀನೇ ಹೇಳ್ತೀಯಾ ಇಲ್ಲಾ ಪೊಲೀಸರಿಗೆ ಕರಿಸ್ಲಾ?” ಗೋಪಿ ಮತ್ತು ಸಾವಿತ್ರಿಯ ಗೆಳೆತನದ ಬಗ್ಗೆ ಅವನಿಗೆ ಗೊತ್ತಾಗಿತ್ತು.

ಪೊಲೀಸ್ ಅಂದ ತಕ್ಶಣ ಅಲ್ಲಿದ್ದ ಎಲ್ಲರಿಗೂ ದಿಗಿಲಾಯಿತು. “ಬಾಯಿ ಬಿಡೋ ಮುಂಡೆದೆ” ಎಂದು ಏರು ದನಿಯಲ್ಲಿ ಬಯ್ದರು ನಾರಾಯಣ. ಬೇರೆ ದಾರಿಯಿಲ್ಲದೆ ಗೋಪಿ ನಡೆದುದೆಲ್ಲ ಹೇಳಿದ. ಗೋಪಿ ಮತ್ತು ಸಾವಿತ್ರಿ ಇಬ್ಬರೂ ಕಾಲೇಜಿನಲ್ಲಿ ಒಡನಾಡಿಗಳಾಗಿದ್ದರು. ತಮ್ಮ ತಮ್ಮ ಮನೆಯಲ್ಲಿದ್ದ ಮುಚ್ಚಿಹೋದ ಸುರಂಗಳನ್ನು ತೆರೆಯುವ ಕುತೂಹಲ ಮೂಡಿತು. ಅದಕ್ಕೆಂದೇ ತನ್ನ ಅತ್ತಿಗೆಯ ಜೊತೆ ಜಗಳಾಡಿ ಅವರು ಮಲಗುತ್ತಿದ್ದ ಕೋಣೆಯನ್ನು ತನ್ನ ಹಿಡುವಳಿಯಲ್ಲಿ ತೆಗೆದುಕೊಂಡಿದ್ದಳು ಸಾವಿತ್ರಿ. ಆ ಕೋಣೆಯಲ್ಲೇ ಸುರಂಗ ಸೇರುವ ದಾರಿ ಇದ್ದದ್ದು. ಅವರ ಕೋಣೆಯಲ್ಲಿದ್ದ ಸುರಂಗಗಳು ಅವರಿಬ್ಬರ ಮನೆಗಳನ್ನೇ ಕೂಡುತ್ತಿದ್ದವು. ಅವರಿಬ್ಬರ ಮನೆಗಳು ಹತ್ತಿರವೇ ಇದ್ದುದರಿಂದ, ಸುರಂಗವೇನೂ ಅಶ್ಟು ಉದ್ದವಿರಲಿಲ್ಲ. ಇಬ್ಬರೂ ಆರು ತಿಂಗಳುಗಳ ಕಾಲ ಸುರಂಗದಲ್ಲಿ ಕೂಡಿದ್ದ ಕಲ್ಲು ಮಣ್ಣು ತೆಗೆದು ದಾರಿ ಮಾಡಿಕೊಂಡರು. ತಾವು ತೆರೆದ ಸುರಂಗಗಳು ತಮ್ಮ ಮನೆಗಳನ್ನೇ ಕೂಡುತ್ತವೆ ಎಂದು ಗೊತ್ತಾಗಿ ಇಬ್ಬರಿಗೂ ಕುಶಿಯಾಯಿತು. ಹೇಗಾದರೂ ಮಾಡಿ ಆ ಸುರಂಗದ ಬಳಕೆ ಪಡೆಯಲು ಇಬ್ಬರೂ ಯೋಚಿಸಿದರು. ಈ ಪವಾಡದ ಹೊಳಹು ಮೂಡಿ, ಗುಡಿಯ ಕೆಳಗಿನ ತನಕ ಇನ್ನೊಂದು ಸುರಂಗ ಅಗೆಯುವ ಮನಸ್ಸು ಮಾಡಿದರು. ಅದೂ ಆರು ತಿಂಗಳು ತೆಗೆದುಕೊಂಡಿತು. ನಂತರ ಸಲಕರಣೆಗಳನ್ನು ಬಳಸಿ, ರಾಮನ ಮೂರ‍್ತಿಯ ಅಡಿಯ ತನಕ ತೂತು ಕೊರೆದು ಈ ಪವಾಡಕ್ಕೆ ಅಣಿಯಾಗಿದ್ದರು. ಕೆಲವೊಮ್ಮೆ ಗೋಪಿ ಈ ಪವಾಡ ಮಾಡಿದರೆ, ಇನ್ನೊಮ್ಮೆ ಸಾವಿತ್ರಿ ಮಾಡುತ್ತಿದ್ದಳು. ಅಮವಾಸ್ಯೆಯ ದಿನದ ಸಂಜೆ, ಗೋಪಿ, ಹೇಗಾದರೂ ಮಾಡಿ ಪಣತೆಯ ಬತ್ತಿಗೆ ಪೊಟಾಶಿಯಮ್ ಪರಮ್ಯಾಂಗ್ನೇಟ್ ಪುಡಿ ಹಚ್ಚಿ ಬರುತ್ತಿದ್ದನು. ಆಮೇಲೆ ಕೆಳಗಿನಿಂದ ಮೊದಲು ಗ್ಲಿಸರೀನ್, ಆಮೇಲೆ ಎಣ್ಣೆಯನ್ನು ಒತ್ತಿ ನೂಕುತ್ತಿದ್ದರು. ಹಗಲು ಹೊತ್ತಿನಲ್ಲೇ ಯಾರೂ ಮನೆಯಲ್ಲಿ ಇಲ್ಲದ ಸಮಯ ನೋಡಿ ಇವರು ಸುರಂಗ ಅಗೆಯುತ್ತಿದ್ದದ್ದು. ಸುರಂಗಕ್ಕೆ ಸೇರುವ ಕವಾಟಿನ ಬಾಗಿಲುಗಳು ಎಶ್ಟೋ ವರ‍್ಶಗಳಿಂದ ಮುಚ್ಚಿಯೇ ಇದ್ದುದರಿಂದ, ಮನೆಯವರು ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಇದನ್ನೆಲ್ಲ ಕೇಳಿ ವೆಂಕಣ್ಣನವರು ಮತ್ತು ನಾರಾಯಣರಿಗೆ ಬೇಸರದ ಜೊತೆಗೆ ದುಕ್ಕವಾಯಿತು. “ಮುಂದೇನು?” ಎನ್ನುವಂತೆ ಪುಲಕೇಶಿ ವೆಂಕಣ್ಣನವರ ಕಡೆ ನೋಡಿದ. ಅವರು ಹತ್ತಿರ ಬಂದು, ಅವನ ಕಯ್ಗಳನ್ನು ಹಿಡಿದು “ಯಾರಿಗೂ ಹೇಳಬೇಡಿ” ಎಂದು ಬೇಡಿಕೊಂಡರು. ನಾರಾಯಣ ಅವರೂ ಅದನ್ನೇ ಹೇಳಿದರು. ಪುಲಕೇಶಿ ಶಂಕರ್ ಅವರ ಕಡೆ ನೋಡಿದನು. ಅವರು,

“ಹೋಗಲಿ ಬಿಡಿ, ಏನೋ ಹುಡುಗ ಬುದ್ದಿ. ಸುಮ್ನೆ ದೊಡ್ಡದು ಮಾಡಿದ್ರೆ ಅವರ ಮನೆ ಮರ‍್ಯಾದೆ ಹೋಗುತ್ತೆ” ಅಂದರು. ಪುಲಕೇಶಿ ತಲೆದೂಗಿದನು.

(ಮುಗಿಯಿತು)
( ಚಿತ್ರ ಸೆಲೆ: masthya.deviantart.com )

 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. usharajeshs says:

    Simple and beautiful story…

ಅನಿಸಿಕೆ ಬರೆಯಿರಿ: