ಜೋಳದ ರೊಟ್ಟಿ ತಿಂದವರು ಗಟ್ಟಿ

ರೂಪಾ ಪಾಟೀಲ್.

Jolad_rotti

ಕರ‍್ನಾಟಕದ ವಿಜಯಪುರದಾಗ ನೋಡಲಿಕ್ಕ ಗೋಳಗುಮ್ಮಟ ಚೆಂದಾ. ಗುಮ್ಮಟದ ನಾಡಿನಾಗ ಅಕ್ಕಾರ ಅಣ್ಣಾರ ಅಂತ ಮಾತಾಡಿಸೋ ಮಾತು ಚೆಂದಾ. ಅವರ ಚೆಂದಾದ ಮಾತಿಲೆ ಕರೆದು ಕೊಡುವ ಬಿಸಿ ಬಿಸಿ ಬಿಳಿಜೋಳದ ರೊಟ್ಟಿ ಇನ್ನೂ ಚೆಂದ. ಉತ್ತರ ಕರ‍್ನಾಟಕದ ಕಡಕ ಅಡಗಿ ಅಂದ್ರ ಜೋಳದ ರೊಟ್ಟಿ-ಚಟ್ನಿ. ಇದರ ಹೆಸರು ಎತ್ತಿದ್ರ ಬಾಯಾಗ ನೀರು ಬರೂದ್ ಗಟ್ಟಿ. ಹಸಿದವರಿಗೆ ಅನ್ನ, ಬಡವರ ಕೈಗೆಟುಕುವ ಬಾಗ್ಯಲಕ್ಶ್ಮಿ ಅಂತನ ಹೇಳಬಹುದು.

ರೊಟ್ಟಿ ಮಾಡಲು ಬೇಕಾಗುವ ಸಾಮಾನುಗಳು:
ಬಿಳಿ ಜೋಳದ ಹಿಟ್ಟು ಮತ್ತು ನೀರು.

ಮಾಡುವ ಬಗೆ:
ಒಂದು ಪಾತ್ರೆಯಲ್ಲಿ 5-6 ಬಟ್ಟಲಿನಶ್ಟು ಜೋಳದ ಹಿಟ್ಟು ತಗೊಂಡು ಚೆನ್ನಾಗಿ ಸಣ್ಣ ಜರಡಿಯೊಳಗೆ ಸೋಸಿಟ್ಟುಕೋಳ್ಳಬೇಕು.
ಸುಮಾರು 2 ಬಟ್ಟಲು ನೀರನ್ನು ಕುದಿಸಬೇಕು. ಕುದಿ ಬಂದ ನೀರನ್ನು ಹಿಟ್ಟಿಗೆ ಸ್ವಲ್ಪ ಸ್ವಲ್ಪವಾಗಿ ಹಾಕಿ ಗಂಟು ಬರದಂತೆ ಗಟ್ಟಿಯಾಗಿ ನಾದಬೇಕು. ಬೇಕಾದರೆ ಮೇಲೆ ಸ್ವಲ್ಪ ತಣ್ಣೀರನ್ನು ಬಳಸಬಹುದು. ಗಟ್ಟಿಯಾಗಿ ತಯಾರಿಸಿದ ಈ ಹಿಟ್ಟಿನಿಂದ ನಿಂಬೆ ಹಣ್ಣಿನ ಅಳತೆಯ ಉಂಡೆಗಳನ್ನಾಗಿ ಮಾಡಬೇಕು. ಹಿಟ್ಟಿನ ಉಂಡೆಯ ಕೆಳಗೆ ಮತ್ತು ಮೇಲೆ ಸ್ವಲ್ಪ ಒಣ ಹಿಟ್ಟನ್ನು ಹಾಕಿ ಒಂದು ಕಯ್ಯಿಂದ ತಟ್ಟುತ್ತಾ ಇನ್ನೊಂದು ಕಯ್ಯಿಂದ ತಿರುಗಿಸುತ್ತಿರಬೇಕು. [ಹೀಗೆ ರೊಟ್ಟಿಯನ್ನು ಒಂದು ಕಯ್ಯಿಂದ ತಟ್ಟಿ ಇನ್ನೊಂದು ಕಯ್ಯಿಂದ ತಿರುಗಿಸುವುದೇ ಒಂದು ಕಲೆ.]

ರೊಟ್ಟಿ ತೆಳ್ಳಗಾದ ಮೇಲೆ ಅದನ್ನು ಹಂಚಿನ ಮೇಲೆ ಹಾಕಿ ಸಾದಾರಣ ಬೆಂಕಿಯ ಮೇಲೆ ಇಡಬೇಕು. ರೊಟ್ಟಿಯ ಒಂದು ಬದಿಗೆ ಚಿಕ್ಕ ಬಟ್ಟೆ ತುಣಿಕಿನಿಂದ ಒದ್ದೆ ಮಾಡವುದು ರೂಡಿ. ಒಂದೆರೆಡು ನಿಮಿಶಗಳ ಬಳಿಕ ರೊಟ್ಟಿಯನ್ನು ಹಂಚಿನ ಮೇಲೆ ಬೋರಲಾಗಿ ತಿರುಗಿಸಿ. ಮತ್ತೆ ಒಂದೆರೆಡು ನಿಮಿಶ ಬೇಯಿಸಿದರೆ ಜೋಳದ ರೊಟ್ಟಿ ಸಿದ್ದ.

ಹೀಗೆ ತಯಾರಿಸಿದ ಬಿಸಿ-ಬಿಸಿಯಾದ ರೊಟ್ಟಿಯನ್ನು ಚಟ್ನಿ, ಪಲ್ಯ ಜತೆಗೆ ತಿನ್ನಬಹುದು. ಉತ್ತರ ಕರ‍್ನಾಟಕದ ಕಡೆ ರೈತರು ಹೊಲ ಗದ್ದೆಗಳಿಗೆ ಹೋಗುವ ಮೊದಲು ಹಾಲಿನೊಂದಿಗೆ ಗಡದ್ದಾಗಿ ತಿನ್ನುತ್ತಾರೆ. ಹೀಗೆ ತಿನ್ನುವ ಬೆಳಗಿನ ಊಟಕ್ಕೆ ನ್ಯಾರಿ ಎನ್ನುತ್ತಾರೆ.

(ಚಿತ್ರ ಸೆಲೆ: holagi.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks