ನಾಟಕ: ಅಂಬೆ ( ಎರಡನೇ ಕಂತು )

 ಸಿ.ಪಿ.ನಾಗರಾಜ.

Ambas-plight-1090x614

ಪಾತ್ರಗಳು:

ಪರಶುರಾಮ—–ಗಾಂಗೇಯನ ಗುರು

ಗಾಂಗೇಯ—–ಶಂತನು ಮತ್ತು ಗಂಗಾದೇವಿಯ ಮಗ

ಚಿತ್ರಾಂಗದ ಮತ್ತು ವಿಚಿತ್ರವೀರ‍್ಯ—-ಶಂತನು ಮತ್ತು ಸತ್ಯವತಿಯ ಮಕ್ಕಳು

ವೀರಸೇನ—–ಸಾರತಿ

ಬೊಮ್ಮ—–ಸೇವಕ

ಸತ್ಯವತಿ—–ಶಂತನುವಿನ ಹೆಂಡತಿ

ಅಂಬೆ-ಅಂಬಿಕೆ-ಅಂಬಾಲಿಕೆ—–ಕಾಶಿರಾಜನ ಪುತ್ರಿಯರು

ಮಾಲಿನಿ—–ಕಾಶೀರಾಜ ಪುತ್ರಿಯರ ಆಪ್ತಸಕಿ

ಸರೋಜ-ನಳಿನಿ-ಸುಮ—-ಈ ಮೂವರು ಹಸ್ತಿನಾಪುರದ ರಾಣಿವಾಸದಲ್ಲಿರುವ ಸಕಿಯರು

—————————————————————————————————–

ಅಂಕ – 1 ಅಂಕ – 2

ನೋಟ- 1

[ರಾಣಿವಾಸದ ಕೊಟಡಿಯೊಂದರಲ್ಲಿ ಅಂಬೆ ಮತ್ತು ಮಾಲಿನಿಯರು ಸಮಾಲೋಚನೆಯಲ್ಲಿ ತಲ್ಲೀನರಾಗಿದ್ದಾರೆ]

ಮಾಲಿನಿ—ದೇವಿ, ಆಗಿಹೋದ ದುರಂತಗಳ ನೆನಪಿನಿಂದ ಯಾವ ಪ್ರಯೋಜನವೂ ಇಲ್ಲ. ಚಿಂತೆ ಹೆಚ್ಚಾದಶ್ಟೂ ಜೀವನವೇ ಹದಗೆಡುತ್ತದೆ.

ಅಂಬೆ—ಚಿಂತೆಗೆ ಸಿಲುಕಿ ಕೊರಗುವಂತಹ ಮನಸ್ಸು ನನ್ನದಲ್ಲ, ಮಾಲಿನಿ. ಮುಂದೇನು ಮಾಡಬೇಕೆಂಬುದನ್ನು ಯೋಚಿಸುತ್ತಿದ್ದೇನೆ.

ಮಾಲಿನಿ—ತಂದೆಯವರ ಬಳಿಗೆ ಹಿಂತಿರುಗೊಣವೇ?

ಅಂಬೆ—ನನ್ನ ತಂಗಿಯರ ಕತೆ ಹಾಗಾಯಿತು ; ನನ್ನದು ಹೀಗಾಯಿತೆಂದು ಬಾಯ್ಬಿಡುತ್ತಾ ಗತಿಗೇಡಿಯಂತೆ ಅಲ್ಲಿಗೆ ಹೋಗಲೇನು? ಬೆಂದ ಹುಣ್ಣಿನ ಮೇಲೆ ಮತ್ತಶ್ಟು ಬರೆ ಎಳೆಯಲೇ?

ಮಾಲಿನಿ—ಮನ್ನಿಸಿ ದೇವಿ. ನಿಮ್ಮ ಮನಸ್ಸಿಗೆ ನೋವಾಗುವಂತಹ ಸಲಹೆಯನ್ನು ನೀಡಿದ್ದಕ್ಕಾಗಿ.

ಅಂಬೆ—ನೋವು! ಎಂತಹ ನೋವೆ? ಹೆಣವನ್ನು ಕತ್ತಿಯಿಂದ ಚುಚ್ಚಿದರೆ ನೊಂದನೆಂದು ಒದ್ದಾಡುವುದೇ? ಮಾಲಿನಿ, ಮದುಮಂಟಪದಿಂದ ನಾವು ಅಪಹರಿಸಲ್ಪಟಾಗಲೇ ನಮ್ಮ ಬಾಳಿನ ಮಂಗಳ ಅದ್ಯಾಯ ಮುಗಿಯಿತು.

ಮಾಲಿನಿ—ಇಶ್ಟೊಂದು ನಿರಾಶರಾಗಬೇಡಿ ದೇವಿ. ಬರುವ ಸಂಕಶ್ಟಗಳನ್ನು ಎದುರಿಸಿ ಬಾಳುವುದೇ ನಮ್ಮ ಗುರಿಯಲ್ಲವೇ?

ಅಂಬೆ—ಈಗ ನನ್ನ ಬಾಳಿಗಿರುವುದು ಒಂದೇ ಒಂದು ಗುರಿ ಮಾತ್ರ.

ಮಾಲಿನಿ—ಅದೇನೆಂಬುದನ್ನು ತಿಳಿಯಬಹುದೆ ದೇವಿ.

ಅಂಬೆ—ನಿನಗಲ್ಲದೆ ಮತ್ತಾರಿಗೆ ನಾನದನ್ನು ತಿಳಿಸಲಿ. (ಕೆಲವು ಗಳಿಗೆ ಸುಮ್ಮನಿದ್ದು) ಮಾಲಿನಿ, ಮುಳ್ಳನ್ನು ಮುಳ್ಳಿನಿಂದಲೇ ಕೀಳೋಣವೆಂದು ತೀರ‍್ಮಾನಿಸಿದ್ದೇನೆ.

ಮಾಲಿನಿ—(ಅಂಬೆಯ ಮಾತಿನ ಒಳತಿರುಳನ್ನು ತಿಳಿಯದೆ ಸುಮ್ಮನೆ ನೋಡುತ್ತಾಳೆ)

ಅಂಬೆ—ಸ್ವಯಂವರ ಮಂಟಪವನ್ನು ಮಣ್ಣುಗೂಡಿಸಿ, ನಮ್ಮನ್ನು ಇಲ್ಲಿಗೆ ಎಳೆತಂದವನು ಯಾರು ಮಾಲಿನಿ?

ಮಾಲಿನಿ—(ಅಚ್ಚರಿಯಿಂದ) ಇದೇನು ದೇವಿ ಹೀಗೆ ಕೇಳುತ್ತಿದ್ದೀರಿ?

ಅಂಬೆ—ಸುಮ್ಮನೆ ನನ್ನ ಮಾತಿಗೆ ಉತ್ತರ ನೀಡು.

ಮಾಲಿನಿ—(ಅಂಬೆಯ ಆವೇಶಪೂರ‍್ಣವಾದ ಮಾತುಗಳನ್ನು ಕೇಳಿ ಆತಂಕದಿಂದ) ಗಾಂಗೇಯರು.

ಅಂಬೆ—ನನ್ನ ಬಾಳಿನ ಆಶಾಲತೆ ಚಿಗುರುತ್ತಿದ್ದ ಕಾಲದಲ್ಲೇ ಅದನ್ನು ಚಿಗುಟಿ ಹಾಕಿದವನಾರು?

ಮಾಲಿನಿ—ಗಾಂಗೇಯರು.

ಅಂಬೆ—ಹೆತ್ತ ಕರುಳಿಗೆ ಕಿಚ್ಚಿಟ್ಟವನಾರು?

ಮಾಲಿನಿ—(ಸುಮ್ಮನಿರುತ್ತಾಳೆ)

ಅಂಬೆ—ಒಲಿದ ಗಂಡುಹೆಣ್ಣನ್ನು ಶಾಶ್ವತವಾಗಿ ಅಗಲಿಕೆಗೆ ಗುರಿಮಾಡಿದವನಾರು?

ಮಾಲಿನಿ—(ಸುಮ್ಮನಿರುತ್ತಾಳೆ)

ಅಂಬೆ—ಮುಗ್ದೆಯರಾದ ನನ್ನ ತಂಗಿಯರ ಮನದ ಆಶೆಯನ್ನು ನಾಶ ಮಾಡಿ, ಒತ್ತಾಯಕ್ಕೆ ಮಣಿದು ಬಾಳುವಂತೆ ಮಾಡಿದವನಾರು?

ಮಾಲಿನಿ—(ಸುಮ್ಮನಿರುತ್ತಾಳೆ)

ಅಂಬೆ—(ಆವೇಶದ ತೀವ್ರತೆಯಿಂದ ಕೊರಳ ದನಿಯು ಹೆಚ್ಚಾಗುತ್ತಿರುತ್ತದೆ) ಮಾತಾಡು ಮಾಲಿನಿ. ನಿನ್ನ ದನಿ ಅಡಗಿಹೋಯಿತೇ? ಹೇಳು…ನಮ್ಮ ವಂಶದ ಕೀರ‍್ತಿಗೆ ಕಳಂಕದ ಕಪ್ಪನ್ನು ಹಚ್ಚಿದವನಾರು?…ಹೇಳು ಮಾಲಿನಿ?

ಮಾಲಿನಿ—(ಅಂಬೆಯ ಮನೋವೇದನೆಯನ್ನು ಅರಿತ ಮಾಲಿನಿಗೆ ಎದೆ ಹಿಂಡಿದಂತಾಗುತ್ತದೆ. ಕಂಬನಿಗಳು ತುಂಬಿ ಬರುತ್ತವೆ.) ದೇವಿ, ದೇವಿ, ಶಾಂತರಾಗಿ ದೇವಿ. ಶಾಂತರಾಗಿ, ಆವೇಶಗೊಳ್ಳಬೇಡಿ.

(ಎಂದು ಹೇಳುತ್ತಿದ್ದಂತೆಯೇ ಮಾಲಿನಿಯ ಕೊರಳು ಕಂಪಿಸತೊಡಗುತ್ತದೆ)

ಅಂಬೆ—ಇನ್ನೆಲ್ಲಿಯ ಶಾಂತಿ ಮಾಲಿನಿ. ಒಡೆದ ಹಾಲಿನಂತಾಗಿರುವ ನನ್ನ ಬಾಳಿಗೆ ಸಾವು ಬಂದಾಗಲೇ ಶಾಂತಿ.

(ಎಂದು ಹೇಳುತ್ತಿದ್ದಂತೆಯೇ ಕಣ್ಣುಗಳಲ್ಲಿ ಒಂದೇ ಸಮನೆ ಬಿಸಿಗಂಬನಿಗಳು ಹರಿಯತೊಡಗುತ್ತವೆ. ತನ್ನೊಡತಿಯ ಸಂಕಟವನ್ನು ಕಂಡು ಮಾಲಿನಿ, ಅಂಬೆಯ ಕಯ್ಗಳನ್ನು ಹಿಡಿದುಕೊಂಡು ಸಮಾದಾನ ಮಾಡಲೆತ್ನಿಸುತ್ತಾ, ತಾನೂ ಅಳತೊಡಗುತ್ತಾಳೆ. ತುಸು ಸಮಯ ಇಬ್ಬರೂ ಮಾತಿಲ್ಲದೆ ಇರುತ್ತಾರೆ.)

ಅಂಬೆ—(ತೀರ‍್ಮಾನದ ದನಿಯಿಂದ). ಈಗೊಂದು ಕಾರ‍್ಯವನ್ನು ಮಾಡಬೇಕಾಗಿದೆ.

ಮಾಲಿನಿ—ಯಾವುದು ದೇವಿ?

ಅಂಬೆ—ಶಂತನುವಿನ ಹಿರಿಯಮಗನ ಕಯ್ ಹಿಡಿಯಬೇಕು.

ಮಾಲಿನಿ—ಮನಕ್ಕೆ ಒಪ್ಪದ ವ್ಯಕ್ತಿಯೊಡನೆ ಕೂಡಿ ಬಾಳುತ್ತೀರ!

ಅಂಬೆ—ಬಾಳುವುದಕ್ಕಲ್ಲ ಮಾಲಿನಿ.

ಮಾಲಿನಿ—ಅಂದರೆ!

ಅಂಬೆ—ನಮ್ಮ ಬಾಳು ಹಾಳಾಗಿರುವಂತೆ, ಅವನ ಬಾಳನ್ನು ನಾಶಮಾಡುವುದಕ್ಕಾಗಿ.

ಮಾಲಿನಿ—ತಮ್ಮ ಅಂತರಂಗವೇನೆಂಬುದೇ ತಿಳಿಯುತ್ತಿಲ್ಲ.

ಅಂಬೆ—(ಆವೇಶದಿಂದ ಕುದಿಯುತ್ತಾ) ಹೆಣ್ಣಿನ ಗೊಡವೆಯೇ ಬೇಡವೆಂದು ದೂರ ಸರಿದಿರುವ ಆತನ ಬಾಳಿನಲ್ಲಿ ನಾನು ಜಾಗವನ್ನು ಪಡೆಯಲೇಬೇಕು. ಅವನ ಪ್ರತಿಜ್ನೆಯನ್ನು ಮುರಿಯಲೇ ಬೇಕು. ಅಚ್ಚಳಿಯದ ಕೀರ‍್ತಿಯಿಂದ ಆತ ಚ್ಯುತಿಗೊಳ್ಳುವಂತೆ ಮಾಡಲೇ ಬೇಕು. ಅಂದೇ ನನಗೆ ನೆಮ್ಮದಿ. ನಮ್ಮ ಬಾಳನ್ನು ದಹಿಸಿದ ಅಪಮಾನದ ಉರಿ ಆತನ ಬಾಳನ್ನೂ ಬೇಯಿಸಬೇಕು. ಲೋಕದ ನಗೆಪಾಟಲಿಗೆ ಆತ ಗುರಿಯಾಗುವಂತೆ ಮಾಡಲೇಬೇಕು.

ಮಾಲಿನಿ—ಇದು ಆಗುತ್ತದೆಯೇ ದೇವಿ?

ಅಂಬೆ—ಮನುಶ್ಯಪ್ರಯತ್ನದ ಮುಂದೆ ಲೋಕದಲ್ಲಿ ಅಸಾದ್ಯವಾದುದು ಯಾವುದೂ ಇಲ್ಲ.

ಮಾಲಿನಿ—ದೇವಿ, ನಿಮ್ಮ ತೀರ‍್ಮಾನವನ್ನು ಕಾರ‍್ಯರೂಪಕ್ಕೆ ತರುವ ಹಾದಿ ಯಾವುದು?

ಅಂಬೆ—ನೇರವಾದದ್ದು.

ಮಾಲಿನಿ—ಅಂದರೆ!

ಅಂಬೆ—ನನ್ನ ಪರವಾಗಿ ನೀನು ಆತನಲ್ಲಿಗೆ ಹೋಗಿ, ಅವನ ಕಯ್ ಹಿಡಿಯಬೇಕೆಂಬ ನನ್ನ ಇಚ್ಚೆಯನ್ನು ಮತ್ತಶ್ಟು ಪ್ರಬಲವಾಗಿ ತಿಳಿಸು.

ಮಾಲಿನಿ—ಪ್ರತಿಜ್ನಾಬದ್ದರಾದ ಅವರು ತಮ್ಮ ನಿಲುವನ್ನೇ ಸಮರ‍್ತಿಸಿಕೊಂಡರೇ?

ಅಂಬೆ—ನಿನ್ನ ಬುದ್ದಿಶಕ್ತಿಯೆನ್ನೆಲ್ಲಾ ಬಳಸಿ ಅವನ ಮನಸ್ಸನ್ನು ಬದಲಿಸಲು ಯತ್ನಿಸು.

ಮಾಲಿನಿ—ನನ್ನ ಕಯ್ಯಲ್ಲಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ಒಳ್ಳೆಯದಾಗಲೆಂದು ಹಾರಯಿಸಿ ದೇವಿ.

ಅಂಬೆ—ಯಾರಿಗೆ ಒಳ್ಳೆಯದಾಗಲೆಂದು ಹಾರಯಿಸಲೇ ಮಾಲಿನಿ.

ಮಾಲಿನಿ—ದೇವಿ.

ಅಂಬೆ—ಒಳಿತು ಕೆಡುಕಿನ ಪ್ರಶ್ನೆ ಮುಗಿದಿದೆ ಮಾಲಿನಿ. ಈಗ ಉಳಿದಿರುವುದು ಅಪಮಾನದ ಅಗ್ನಿ ಮಾತ್ರ. ಅದು ನಂದುವ ಮುನ್ನ ಹಗೆಯ ಬಾಳಿಗೆ ಹಚ್ಚಬೇಕಾಗಿದೆ.

ಮಾಲಿನಿ—ನಾನಿನ್ನು ಹೋಗಿ ಬರುತ್ತೇನೆ.
(ಅಲ್ಲಿಂದ ತೆರಳುತ್ತಾಳೆ)

ನೋಟ – 2

[ಅರಮನೆಯಲ್ಲಿನ ಒಂದು ಕೊಟಡಿ. ಆಸನವೊಂದರಲ್ಲಿ ಗಾಂಗೇಯ ಯೋಚನಾಮಗ್ನರಾಗಿ ಒರಗಿದ್ದಾರೆ. ಮಾಲಿನಿ ಅಲ್ಲಿಗೆ ಆಗಮಿಸುತ್ತಾಳೆ]

ಮಾಲಿನಿ—ಪೂಜ್ಯರಿಗೆ ವಂದಿಸುತ್ತೇನೆ.

ಗಾಂಗೇಯ—ಕುಳಿತಿಕೊ ಮಾಲಿನಿ.

ಮಾಲಿನಿ—ತಮ್ಮನ್ನೇ ಕಾಣಲೆಂದು ಬಂದೆ.

ಗಾಂಗೇಯ—ಉದ್ದೇಶವೇನು?

ಮಾಲಿನಿ—ತಮ್ಮ ನೆರವಿನಿಂದ ಆಗಬೇಕಾದ ಕಾರ‍್ಯವೊಂದಿದೆ.

ಗಾಂಗೇಯ—ಯಾವುದದು?

ಮಾಲಿನಿ—ಬೇರು ಸಹಿತ ಕಿತ್ತು ತಂದಿರುವ ಸಸಿಯನ್ನು ಮತ್ತೆ ನೆಟ್ಟು ನೀರೆರೆದು ಬೆಳೆಸಬೇಕಾಗಿದೆ.

ಗಾಂಗೇಯ—(ಹುಬ್ಬುಗಂಟಿಕ್ಕಿ).ಒಗಟಿನ ಮಾತುಗಳನ್ನಾಡಿ ಸಮಯವನ್ನು ಹಾಳು ಮಾಡಬೇಡ.

ಮಾಲಿನಿ—(ಕೆಲವು ಗಳಿಗೆ ಸುಮ್ಮನಿದ್ದು).ಕಾಶೀರಾಜನ ಪುತ್ರಿಯಾದ ಅಂಬೆಯ ಪರವಾಗಿ ನಾನು ನಿಮ್ಮಲ್ಲಿಗೆ ಬಂದಿದ್ದೇನೆ.

ಗಾಂಗೇಯ—ಯಾವ ಕಾರಣಕ್ಕಾಗಿ?

ಮಾಲಿನಿ—ಆಕೆಯ ಅಂತರಂಗದ ಆಸೆಯನ್ನು ತಮಗೆ ತಿಳಿಸಲೆಂದು.

ಗಾಂಗೇಯ—ರಾಜಮಾತೆಯವರ ಮುಂದೆ ಹೇಳಿಕೊಂಡಿದ್ದ ಸಂಗತಿಯೇನು?

ಮಾಲಿನಿ—ಅಹುದು. ಆಕೆ ತಮಗೆ ಮನಸೋತಿದ್ದಾಳೆ.

ಗಾಂಗೇಯ—ಈ ಜನ್ಮದಲ್ಲಿ ಯಾವುದೇ ಹೆಣ್ಣಿಗೂ ನನ್ನ ಮನದಲ್ಲಿ ಎಡೆಯಿಲ್ಲವೆಂಬ ನಿಲುವು ಆಕೆಗೆ ತಿಳಿಯದೇನು?

ಮಾಲಿನಿ—ತಿಳಿದಿದೆ ಪೂಜ್ಯರೆ. ಆದರೆ ಸಾಗರದ ಅಲೆಯಂತೆ ಏರಿಳಿತಕ್ಕೆ ಒಳಗಾಗುತ್ತಿರುವ ಯಾವುದೋ ಒಂದು ನಿಲುವನ್ನೇ ಅಚಲವೆಂದು ನಂಬಬೇಕೆ?

ಗಾಂಗೇಯ—ನಿನ್ನ ಮಾತಿನ ವ್ಯಾಕ್ಯಾನ ಅನ್ಯರ ಪಾಲಿಗಿರಲಿ. ನನ್ನ ನಿಲುವು ಎಂದೆಂದಿಗೂ ಒಂದೇ ಆಗಿರುತ್ತದೆ.

ಮಾಲಿನಿ—ನಾನು ತಮ್ಮ ನಿಲುವಿನ ಅಳಿವು-ಉಳಿವುಗಳ ಬಗೆಗೆ ಪ್ರಸ್ತಾಪಿಸುತ್ತಿಲ್ಲ ಪೂಜ್ಯರೆ. ಒಂದು ಹೆಣ್ಣಿನ ಜೀವನವನ್ನು ಉತ್ತಮಪಡಿಸಿರೆಂದು ಬೇಡಿಕೊಳ್ಳುತ್ತಿದ್ದೇನೆ.

ಗಾಂಗೇಯ—ಅನ್ಯರ ಬದುಕನ್ನು ಉತ್ತಮಪಡಿಸಲು ನನ್ನ ವ್ಯಕ್ತಿತ್ವದ ಇತಿಮಿತಿಯಲ್ಲಿ ಪ್ರಯತ್ನಿಸಬಹುದೇ ಹೊರತು, ಅದನ್ನು ಮೀರಿ ಆಗುವುದಿಲ್ಲ.

ಮಾಲಿನಿ—ಅಪ್ಸರೆಯಂತೆ ಮಹಾ ರೂಪವತಿಯೂ, ಅನಸೂಯೆಯಂತೆ ಸುಗುಣವತಿಯೂ ಆಗಿರುವ ಅಂಬೆಯನ್ನು ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಮುರಿದು ಬೀಳುತ್ತಿರುವ ಒಂದು ಹೆಣ್ಣಿನ ಬಾಳನ್ನು ಒಲವಿನ ಊರೆಗೋಲಿನಿಂದ ನಿಲ್ಲಿಸಿದ ಕೀರ‍್ತಿ ತಮಗೆ ಸಲ್ಲುತ್ತದೆ.

ಗಾಂಗೇಯ—ಮಾಲಿನಿ, ಹಾಗೆ ಮಾಡಿದರೆ ಅದು ನನ್ನ ಹೆಗ್ಗಳಿಕೆಯ ನಡೆಯಾಗುತ್ತದೆಯೋ? ಇಲ್ಲವೇ ಹೆಣ್ಣಿಗಾಗಿ ಅಂತರಂಗದಲ್ಲಿ ಆಸೆಪಟ್ಟು ನನಗೆ ನಾನೇ ಮಾಡಿಕೊಂಡ ಆತ್ಮವಂಚನೆಯಾಗುತ್ತದೆಯೋ?

ಮಾಲಿನಿ—ಇಲ್ಲಿ ವಂಚನೆಯ ಪ್ರಶ್ನೆಯೇ ಬಾರದು ಪೂಜ್ಯರೆ. ನೊಂದು ಬೆಂದಿರುವ ಒಂದು ಹೆಣ್ಣಿನ ಬಾಳಿಗೆ ನೆಮ್ಮದಿಯನ್ನು ನೀಡಿ, ಅವಳ ಬಾಳಿಗೆ ಜೀವ ತುಂಬಿದ ಪುಣ್ಯ ತಮ್ಮದಾಗುವುದಿಲ್ಲವೇ?

ಗಾಂಗೇಯ—ಕಂಡಿತ ಆಗುವುದಿಲ್ಲ. ಒಂದು ಹೆಣ್ಣಿನ ಬಾಳನ್ನು ಸರಿಪಡಿಸುವುದಕ್ಕಾಗಿ ನನ್ನ ನಿಲುವನ್ನು ಕಯ್ ಬಿಡಲಾರೆ.

ಮಾಲಿನ—ತಮ್ಮ ನಿಲುವನ್ನು ಬದಲಿಸಲು ಆಗುವುದಿಲ್ಲವೇ?

ಗಾಂಗೇಯ—ಇಲ್ಲ ಮಾಲಿನಿ ಅದಕ್ಕೆ ವಿರುದ್ದವಾಗಿ ನಡೆದುಕೊಂಡರೆ ಆಗ ನನ್ನ ಬಾಳಿಗೆ ಯಾವ ಗುರಿಯೂ ಇರುವುದಿಲ್ಲ; ಯಾವ ಬೆಲೆಯೂ ಇಲ್ಲದಾಗುತ್ತದೆ.

ಮಾಲಿನಿ—ನಿಮ್ಮ ವ್ಯಕ್ತಿಗತ ಜೀವನದ ಆಗುಹೋಗುಗಳ ಬಗೆಗೆ ಇಶ್ಟೊಂದು ಕಳಕಳಿಯಿರುವಂತೆ, ಜಗತ್ತಿನಲ್ಲಿ ಮತ್ತಾರಿಗೂ ಇಲ್ಲವೆಂದು ತಿಳಿದಿದ್ದೀರಾ?

ಗಾಂಗೇಯ—ಪರರ ಬಾಳನ್ನು ನಾನು ಹಾಗೆಂದೂ ಕಡೆಗಣಿಸಿಲ್ಲ. ನನ್ನದನ್ನು ದೊಡ್ಡದೆಂದು ಅಂದುಕೊಂಡಿಲ್ಲ.

ಮಾಲಿನಿ—ಹಾಗಾದರೆ ಅಂಬೆಯ ಬಾಳಿನಲ್ಲೇಕೆ ನೀವು ಪ್ರವೇಶಿಸಿದಿರಿ? ಅವಳ ಬಾಳಿನ ಮಂದಿರವನ್ನೇಕೆ ನಿಮ್ಮ ಬಾಹುಬಲದಿಂದ ಕೆಡವಿ ಹಾಕಿದಿರಿ? ನಿಮಗಿರುವಂತೆಯೇ ಅವಳಿಗೂ ಜೀವನದಲ್ಲಿ ಒಂದು ಆಶೆ ಆದರ‍್ಶಗಳಿರಲಿಲ್ಲವೇನು? ಅವುಗಳನ್ನೆಲ್ಲಾ ಒಂದೇ ಗಳಿಗೆಯಲ್ಲಿ ಕುಟ್ಟಿಪುಡಿ ಮಾಡಿ ಬಂದಿರಲ್ಲ? ಅದು ಸರಿಯೇ?

ಗಾಂಗೇಯ—ಅದರಲ್ಲಿ ರಾಜಕಾರಣದ ಉದ್ದೇಶವಿತ್ತು

ಮಾಲಿನಿ—ರಾಜಕಾರಣದಲ್ಲಿ ಮಾನವೀಯತೆಗೆ ಅವಕಾಶವಿಲ್ಲವೇನು?

ಗಾಂಗೇಯ—(ತುಸು ಕೋಪದಿಂದ) ಮಾಲಿನಿ.

ಮಾಲಿನಿ—ದಯವಿಟ್ಟು ಕೋಪಗೊಳ್ಳಬೇಡಿ ಪೂಜ್ಯರೆ. ನಾನು ನಿಮ್ಮನ್ನು ಪರಿಹಾಸ್ಯ ಮಾಡುವುದಕ್ಕಾಗಲಿ ಇಲ್ಲವೇ ನಿಮ್ಮನ್ನು ಕೆಣಕಿ ಕೆರಳಿಸುವುದಕ್ಕಾಗಿ ತಮ್ಮ ಬಳಿಗೆ ಬಂದಿಲ್ಲ. ಹೆಣ್ಣೊಬ್ಬಳ ಒಡೆದಿರುವ ಬಾಳನ್ನು ಸರಿಪಡಿಸಿರೆಂದು ಕೇಳಿಕೊಳ್ಳಲು ಬಂದಿದ್ದೇನೆ. ನಮ್ಮ ರಾಣಿಯ ಮನದ ನೋವು ಎಂತಹುದೆಂಬುದನ್ನು ನೀವು ಅರಿತುಕೊಳ್ಳಿ.

ಗಾಂಗೇಯ—ಎಲ್ಲರ ನೋವನ್ನೂ ಅರಿತುಕೊಂಡು, ಸರಿಪಡಿಸಲು ನನ್ನ ಕಯ್ಯಲ್ಲಿ ಆಗುತ್ತದೆಯೇ?

ಮಾಲಿನಿ—ವಿನಾಕಾರಣವಾಗಿ ಅನ್ಯರಿಗೆ ನೋವನ್ನುಂಟುಮಾಡಲು ಆಗುತ್ತದೆಯಲ್ಲವೇ ? ಮುಗ್ದೆಯರ ಬಾಳನ್ನು ನಿಶ್ಕರುಣೆಯಿಂದ ಹಾಳು ಮಾಡುವುದು ನಿಮ್ಮಂತಹ ಲೋಕಜ್ನಾನವುಳ್ಳ ಮಹಿಮರಿಗೆ ಒಪ್ಪುತ್ತದೆಯೇ?

(ಆವೇಶದ ತೀವ್ರತೆಯಿಂದ) ತಮ್ಮಲ್ಲಿ ಕಯ್ ಜೋಡಿಸಿ ಕೇಳಿಕೊಳ್ಳುತ್ತೇನೆ , ಈ ಸಮಯದಲ್ಲಿ ಹಟಕ್ಕಿಂತ ಕರುಣೆ ಮುಕ್ಯ; ಪ್ರತಿಜ್ನೆಗಿಂತ ವಿವೇಚನೆ ಮುಕ್ಯ.

ಗಾಂಗೇಯ—(ಮಾಲಿನಿಯ ವೇದನೆಯ ತೀವ್ರತೆಯನ್ನು ಗಮನಿಸಿ, ಕೆಲ ಗಳಿಗೆ ಸುಮ್ಮನಿದ್ದು, ಅನಂತರ ) ಮಾಲಿನಿ, ಈಗ ನಿನಗೆ ಮುಕ್ಯವಾಗಿರುವುದು ಅಂಬೆಯ ಬಾಳನ್ನು ಸುಕಮಯವಾಗಿಸುವುದಲ್ಲವೇ?

ಮಾಲಿನಿ—ಅಹುದು, ಒಡೆಯ.

ಗಾಂಗೇಯ—ಆ ಹೊಣೆಯನ್ನು ನನಗೆ ಬಿಡು. ಆಕೆಯ ಬಾಳಿಗೆ ಮಂಗಳದ ಮಾರ‍್ಗವನ್ನು ನಾನು ತೋರಿಸುತ್ತೇನೆ.

ಮಾಲಿನಿ—(ಅಚ್ಚರಿಯಿಂದ) ಯಾವ ರೀತಿ ಪೂಜ್ಯರೇ?

ಗಾಂಗೇಯ—ಅಂಬೆಯು ಯಾರ ಬಾಳ ಸಂಗಾತಿಯಾಗಬೇಕೆಂದು ಹಂಬಲಿಸಿದ್ದಳೋ, ಆ ರಾಜನೊಡನೆ ಆಕೆಯ ವಿವಾಹವನ್ನು ಗೊತ್ತುಪಡಿಸುತ್ತೇನೆ.

ಮಾಲಿನ—(ಹುಬ್ಬು ಗಂಟಿಕ್ಕಿ) ಯಾರೊಡನೆ ಒಡೆಯ?

ಗಾಂಗೇಯ—ಸಾಲ್ವಲನೊಡನೆ.

ಮಾಲಿನಿ—ತಾವು ಅಪಹರಿಸಿ ತಂದಿರುವ ಹೆಣ್ಣನ್ನು ಆತ ಕಯ್ ಹಿಡಿಯಲು ಒಪ್ಪುತ್ತಾನೆಯೇ?

ಗಾಂಗೇಯ—ಒಪ್ಪಿಸುವ ಹೊಣೆ ನನ್ನದು.

ಮಾಲಿನಿ—ಒಡೆದ ಮಡಕೆಯ ಚೂರುಗಳನ್ನು ಮತ್ತೆ ಒಂದುಗೂಡಿಸುವಿರ!

ಗಾಂಗೇಯ—(ತುಸು ಅಸಹನೆಯಿಂದ) ಮಾಲಿನಿ

ಮಾಲಿನಿ—ಮದುಮಂಟಪದಲ್ಲಿ ಸಾಲ್ವಲನನ್ನು ಸದೆಬಡಿದು, ಆತನ ಕಣ್ಣ ಮುಂದೆಯೇ ಆಕೆಯನ್ನು ನೀವು ಎಳೆದು ತಂದಿರುವಾಗ, ಈ ಮದುವೆಗೆ ಆತ ಒಪ್ಪುತ್ತಾನೆಯೇ? ಆತನಿಗೂ ಸ್ವಾಬಿಮಾನ ಇರುವುದಿಲ್ಲವೇನು? ಒಂದು ವೇಳೆ ಆತ ಒಪ್ಪಿದರೂ ನಮ್ಮ ಒಡತಿ ಇದಕ್ಕೆ ಕಂಡಿತ ಸಮ್ಮತಿಸುವುದಿಲ್ಲ.

ಗಾಂಗೇಯ—ಕಾರಣ?

ಮಾಲಿನಿ—ಯಾವ ಗಳಿಗೆಯಲ್ಲಿ ಆಕೆ ನಿಮ್ಮಿಂದ ಅಪಹರಿಸಲ್ಪಟ್ಟಳೋ, ಆ ಗಳಿಗೆಯಿಂದಲೇ ಆಕೆ ನಿಮ್ಮವಳು. ಅವಳನ್ನು ಪಡೆಯುವ ಹಕ್ಕು ನಿಮಗಿದೆಯೇ ಹೊರತು, ಬೇರೆಯವರಿಗಿಲ್ಲ.

ಗಾಂಗೇಯ—ನಾನು ಒಪ್ಪದಿರುವಾಗ?

ಮಾಲಿನಿ—ನಿಮ್ಮನ್ನೇ ಪಡೆಯುವುದಕ್ಕಾಗಿ ಆಕೆ ಪ್ರಯತ್ನಿಸುತ್ತಾಳೆ. ನೀವೇ ಅವಳಿಗೆ ಎಲ್ಲವೂ ಆಗಿದ್ದೀರಿ. ಅವಳ ಮನದಲ್ಲಿ ಈಗ ನೆಲೆಸಿರುವವರು ನೀವೊಬ್ಬರೆ. ಅಲ್ಲಿ ಮತ್ತೊಬ್ಬರಿಗೆ ಈ ಜನ್ಮದಲ್ಲಿ ಎಡೆಯಿಲ್ಲ.

ಗಾಂಗೇಯ—ಮಾಲಿನಿ, ನಿನ್ನ ಮಾತನ್ನು ನಿಲ್ಲಿಸು. ನೀನು ಯಾವ ಬಗೆಯ ಸಾಹಸ ಮಾಡಿದರೂ ನನ್ನ ನಿಲುವನ್ನು ಬದಲಿಸಲಾರೆ.

ಮಾಲಿನಿ—ಪೂಜ್ಯರೇ, ಮತ್ತೊಮ್ಮೆ ಕಯ್ ಜೋಡಿಸಿ ಬೇಡಿಕೊಳ್ಳುತ್ತೇನೆ…ನನ್ನೊಡತಿಯನ್ನು ಕಾಪಾಡಿ.

ಗಾಂಗೇಯ—ಕಾಪಾಡಬಲ್ಲ ಶಕ್ತಿ ನನಗಿಲ್ಲ.

ಮಾಲಿನಿ—ಹಾಗಾದರೆ ನೀವೇ ಕಯ್ಯಾರ ಆಕೆಯನ್ನು ಕೊಂದುಬಿಡಿ.

ಗಾಂಗೇಯ—ಮತ್ತೊಂದು ತಪ್ಪನ್ನು ತಲೆಗೆ ಕಟ್ಟಿಕೊಳ್ಳಲೇನು?

ಮಾಲಿನಿ—(ಅಚ್ಚರಿಯಿಂದ) ಈಗ ಮಾಡಿರುವುದು ತಪ್ಪು ಎಂಬ ಅರಿವು ತಮಗಿರುವುದೇ?

ಗಾಂಗೇಯ—ಅಂಗಯ್ ಹುಣ್ಣಿಗೆ ಕನ್ನಡಿ ಬೇಕೆ?

ಮಾಲಿನಿ—ಹಾಗಾದರೆ ಅಂಬೆಯ ಬಾಳನ್ನು ಸರಿಪಡಿಸಿ ಪೂಜ್ಯರೆ.

ಗಾಂಗೇಯ— ಅದೊಂದು ಮಾತ್ರ ಆಗುವುದಿಲ್ಲ ಮಾಲಿನಿ. ಯಾವ ಗಳಿಗೆಯಲ್ಲಿ ಈ ಬೂಮಿಯ ಮೇಲಿನ ಹೆಣ್ಣುಗಳೆಲ್ಲರನ್ನೂ ನನ್ನ ತಾಯಂದಿರಿಗೆ ಸಮಾನರೆಂದು ನಿಶ್ಚಯಿಸಿರುವೆನೋ, ಆ ನಿಲುವು ನನ್ನ ಬಾಳಿನ ಕೊನೆ ಗಳಿಗೆಯ ತನಕ ನನ್ನೊಡನೆ ಇರುತ್ತದೆ. ಅದಕ್ಕೆ ಯಾವ ಕಾರಣದಿಂದಲೂ ನಾನು ಚ್ಯುತಿ ತಂದುಕೊಳ್ಳಲಾರೆ.

ಮಾಲಿನಿ—ಇದೇ ತಮ್ಮ ಅಂತಿಮ ತೀರ‍್ಮಾನವೇ?

ಗಾಂಗೇಯ—ಅಹುದು.

ಮಾಲಿನಿ—(ನಿರಾಶಳಾಗಿ) ನಾನಿನ್ನು ಬರುತ್ತೇನೆ.

(ಎಂದು ನಮಿಸಿ ಹಿಂತಿರುಗುತ್ತಾಳೆ.)

ನೋಟ- 3

[ಅರಮನೆಯಲ್ಲಿನ ಕೊಟಡಿಯೊಂದರಲ್ಲಿ ಗಾಂಗೇಯರು ಕುಳಿತಿದ್ದಾರೆ . ಅಲ್ಲಿಗೆ ಮಾಲಿನಿಯು ಮತ್ತೆ ಬರುತ್ತಾಳೆ]

ಮಾಲಿನಿ—ಪೂಜ್ಯರಿಗೆ ವಂದಿಸುತ್ತೇನೆ.

ಗಾಂಗೇಯ—[ಮಾಲಿನಿಯನ್ನು ಕಂಡು ಅಚ್ಚರಿಗೊಂಡು] ಬಾ ಮಾಲಿನಿ, ಇಶ್ಟು ಬೇಗ ಮತ್ತೆ ಬಂದ ಉದ್ದೇಶವೇನು?

ಮಾಲಿನಿ—ದೇವಿಯವರು ತಮ್ಮನ್ನು ಕಾಣಲೆಂದು ಬಂದಿದ್ದಾರೆ.

ಗಾಂಗೇಯ—ಯಾರು?

ಮಾಲಿನಿ—ರಾಜಕುಮಾರಿ ಅಂಬೆ ಒಳಕ್ಕೆ ಬರಲು ತಮ್ಮ ಅನುಮತಿಯನ್ನು ಕೇಳುತ್ತಿದ್ದಾರೆ.

ಗಾಂಗೇಯ—(ಅರೆಗಳಿಗೆ ಯೋಚಿಸಿ, ನಂತರ) ಬರುವಂತೆ ಹೇಳು.

(ಮಾಲಿನಿ ಅತ್ತ ತೆರಳಿ , ಮತ್ತೆ ಅಂಬೆಯ ಜತೆಗೂಡಿ ಒಳಬರುತ್ತಾಳೆ.)

ಗಾಂಗೇಯ—ಕುಳಿತುಕೊಳ್ಳಿ.

[ಅವರಿಬ್ಬರು ಆಸನಗಳಲ್ಲಿ ಕುಳಿತ ನಂತರ, ಗಾಂಗೇಯನು ಮಾಲಿನಿಯ ಕಡೆಗೆ ” ಬಂದ ಸಮಾಚಾರವೇನು?” ಎನ್ನುವಂತೆ ನೋಡುತ್ತಾನೆ]

ಮಾಲಿನಿ—ತಮ್ಮ ನಿರ‍್ದಾರವನ್ನು ರಾಜಕುಮಾರಿಗೆ ತಿಳಿಸಿದೆನು. ತಮ್ಮೊಡನೆ ಮಾತಾಡಬೇಕೆಂಬ ಉದ್ದೇಶದಿಂದ ಬಂದಿದ್ದಾರೆ.

(ಮಾಲಿನಿಯ ನುಡಿಗಳಿಗೆ ಪ್ರತಿಯಾಗಿ ಏನನ್ನೂ ಆಡದೆ ಗಾಂಗೇಯನು ಅಂಬೆಯತ್ತ ನೋಡುತ್ತಾನೆ. ಅಂಬೆಯು ಆತನ ಕಡೆಗೆ ದಿಟ್ಟಿಸಿ ನೋಡುತ್ತಾಳೆ. ಅವರಿಬ್ಬರ ಕಣ್ಣುಗಳು ಒಂದುಗೂಡುತ್ತವೆ. ಉದ್ವೇಗದಿಂದ ತಳಮಳಿಸುತ್ತಿದ್ದ ಅಂಬೆಯ ಮೊಗದಲ್ಲಿ ಬಹುಬಗೆಯ ಒಳಮಿಡಿತಗಳು ತುಡಿಯುತ್ತಿರುತ್ತವೆ.)

ಗಾಂಗೇಯ—ರಾಜಕುಮಾರಿ, ನಿನ್ನ ಮನದ ಸಂಕಟವನ್ನು ನಾನು ಅರ‍್ತಮಾಡಿಕೊಳ್ಳಬಲ್ಲೆ. ಅದರ ನಿವಾರಣೆಯ ಮಾರ‍್ಗವನ್ನು ನಾನೀಗಾಗಲೇ ಸೂಚಿಸಿದ್ದೇನೆ. ಅದರಂತೆ ನಡೆದರೆ ನಿನಗೆ ಒಳಿತಾಗುವುದು.

ಅಂಬೆ—ಲೋಕದಲ್ಲಿ ಯಾವ ಹೆಣ್ಣು ಸಿಲುಕಬಾರದಂತಹ ಸಂಕಟಕ್ಕೆ ನನ್ನನ್ನು ಗುರಿಮಾಡಿ, ಈಗ ಉಪಕಾರದ ಮಾತುಗಳನ್ನಾಡುತ್ತಿದ್ದೀರ?

ಗಾಂಗೇಯ—ಕ್ಶತ್ರಿಯ ಕುಲದಲ್ಲಿ ಹುಟ್ಟಿರುವ ನಿನಗೆ ರಾಜರ ಬಾಳು ಎಶ್ಟು ಅನಿಶ್ಚಿತವೆಂಬುದು ತಿಳಿಯದ ವಿಶಯವೇನಲ್ಲ. ನಮ್ಮ ಬಾಳು ಚದುರಂಗದಾಟವಿದ್ದಂತೆ ಯಾವ ಗಳಿಗೆಯಲ್ಲಿ, ಯಾವ ಎಡೆಯಿಂದ, ಯಾವ ಬಗೆಯ ಆಪತ್ತು ಯಾರಿಂದ ತಟ್ಟುವುದೋ ಹೇಳಲಾಗದು. ನಿನ್ನನ್ನು ಇಂತಹ ವೇದನೆಗೆ ಸಿಲುಕಿಸಬೇಕೆಂದು ನಾನು ಕನಸುಮನಸಿನಲ್ಲಿಯೂ ನೆನೆಸಿರಲಿಲ್ಲ. ಆದರೆ ನಿನ್ನ ತಂದೆ ಮಾಡಿದ ತಪ್ಪೊಂದು ಇಶ್ಟೆಲ್ಲಾ ಅನಾಹುತಕ್ಕೆ ಎಡೆಮಾಡಿತು.

ಅಂಬೆ—ನಮ್ಮ ತಂದೆ ಮಾಡಿದ ತಪ್ಪೇನು?

ಗಾಂಗೇಯ—ನಮ್ಮ ಅರಸರನ್ನು ಸ್ವಯಂವರಕ್ಕೆ ಆಹ್ವಾನಿಸದೆ ದೂರವಿಟ್ಟಿದ್ದು.

ಅಂಬೆ—ಅದು ದೊಡ್ಡ ತಪ್ಪೇನು?

ಗಾಂಗೇಯ—ಅಲ್ಲವೇ?

ಅಂಬೆ—ಹೆತ್ತ ತಂದೆಗೆ ತನ್ನ ಹೆಣ್ಣು ಮಕ್ಕಳನ್ನು ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದೆಂಬುದನ್ನು ನಿರ‍್ದರಿಸುವ ಹಕ್ಕಿಲ್ಲವೇನು? ತನ್ನ ಮಕ್ಕಳ ಬಾಳಿನ ಆಗುಹೋಗುಗಳ ಬಗೆಗೆ ಆತ ವಿವೇಚಿಸುವುದು ಮಹಾ ಅಪರಾದವೇನು?

ಗಾಂಗೇಯ—ಹಸ್ತಿನಾಪುರದ ಅರಸರಿಗೆ ಅಪಮಾನ ಮಾಡಲೆಂದೇ ನಿನ್ನ ತಂದೆ ಆಹ್ವಾನಪತ್ರವನ್ನು ಕಳುಹಿಸಲಿಲ್ಲ.

ಅಂಬೆ—ಸಲ್ಲದ ಆರೋಪಕ್ಕೆ ನನ್ನ ತಂದೆಯನ್ನು ವಿನಾಕಾರಣ ಗುರಿ ಮಾಡಬೇಡಿ…(ಕೆಲ ಗಳಿಗೆ ಸುಮ್ಮನಿದ್ದು) ಅಪಮಾನವಾದದ್ದು ಯಾರಿಗೆ?

ಗಾಂಗೇಯ—ನಮ್ಮ ಅರಸರಿಗೆ.

ಅಂಬೆ—ಹಾಗಾದರೆ ನಿಮ್ಮ ಅರಸರೇಕೆ ಅಲ್ಲಿಗೆ ಬರಲಿಲ್ಲ? ಸ್ವಯಂವರ ಮಂಟಪದಲ್ಲಿ ತಮ್ಮ ಪರಾಕ್ರಮವನ್ನು ಮೆರೆದು, ನಮ್ಮನ್ನು ಇಲ್ಲಿಗೆ ಅವರೇ ಕರೆತರಬಹುದಿತ್ತಲ್ಲ? ಹಾಗೇಕೆ ಮಾಡಲಿಲ್ಲ?

ಗಾಂಗೇಯ—(ನಿರುತ್ತರನಾಗುತ್ತಾನೆ)

ಅಂಬೆ—ಏಕೆ?…ಅರಸರ ಪರಾಕ್ರಮದಲ್ಲಿ ನಿಮಗೆ ನಂಬಿಕೆಯಿರಲಿಲ್ಲವೇನು?

ಗಾಂಗೇಯ—(ತುಸು ಬೇಸರದ ದನಿಯಿಂದ) ಅದೆಲ್ಲಾ ನಮ್ಮ ರಾಜಕಾರಣದ ರಹಸ್ಯ. ಅದನ್ನು ಬಹಿರಂಗಪಡಿಸಬೇಕಾದ ಅಗತ್ಯವಿಲ್ಲ.

ಅಂಬೆ—ನಿಮ್ಮ ಅರಸರ ಪರಾಕ್ರಮದ ಟೊಳ್ಳುತನವೆಲ್ಲಿ ಬಯಲಾದೀತೆಂದು ಅಳುಕಿ, ಅವರನ್ನು ಕಳುಹಿಸದೆ ನೀವೇ ಬಂದಿರಲ್ಲವೇ?

ಗಾಂಗೇಯ—(ಅಂಬೆಯ ಮೊಗವನ್ನು ದುರುಗುಟ್ಟುಕೊಂಡು ನೋಡುತ್ತಾನೆ)

ಅಂಬೆ—ನಮ್ಮನ್ನು ಸ್ವಯಂ ಯೋಗ್ಯತೆಯಿಂದ ಪಡೆಯುವ ಬಾಹುಬಲವಿಲ್ಲದವರಿಗೆ, ನಮ್ಮನ್ನು ಕಾಪಾಡುವ ಶಕ್ತಿಯಿದೆಯೇನು?

ಗಾಂಗೇಯ—[ಕೋಪದಿಂದ] ಅಂಬೆ, ನಿನ್ನ ನಾಲಿಗೆ ಉದ್ದವಾಗುತ್ತಿದೆ.

ಅಂಬೆ—ನನ್ನ ನಾಲಿಗೆಯ ಉದ್ದಟತನವೇ ನಿಮ್ಮನ್ನು ಇಶ್ಟು ಕೆರಳಿಸುತ್ತಿರಬೇಕಾದರೆ, ನಿಮ್ಮ ಪರಾಕ್ರಮದ ಒರಟುತನಕ್ಕೆ ಬಲಿಯಾಗಿ ನರಳುತ್ತಿರುವ ನನ್ನ ಮನದ ನೋವು ಎಂತಹುದೆಂಬುದನ್ನು ಅರ‍್ತಮಾಡಿಕೊಳ್ಳಲಾರಿರ?

ಗಾಂಗೇಯ—ಎಲ್ಲರ ಮನಸ್ಸನ್ನು ಅರ‍್ತಮಾಡಿಕೊಳ್ಳಬೇಕಾದ ಅಗತ್ಯ ನಮಗಿಲ್ಲ.

ಅಂಬೆ—ಹಾಗಾದರೆ ಕಾಶೀರಾಜ ಪುತ್ರಿಯರನ್ನು ನಿಮ್ಮ ಪರಾಕ್ರಮದ ಯಜ್ನಕ್ಕೆ ಬಲಿಪಶುಗಳನ್ನಾಗಿಸುವ ಅಗತ್ಯವೇನಿತ್ತು?

ಗಾಂಗೇಯ—ರಾಜಕಾರಣದಲ್ಲಿ ಇಂತಹ ಏರುಪೇರುಗಳು ಸರ‍್ವೇಸಾಮಾನ್ಯ. ಆದ ಪ್ರಸಂಗವನ್ನೇ ಮತ್ತೆ ಮತ್ತೆ ಕೆದಕುವುದರಿಂದ ಪ್ರಯೋಜನವಿಲ್ಲ. ಸರಿಯಾದ ಮಾರ‍್ಗದಲ್ಲಿ ತಾಳ್ಮೆಯಿಂದ ನಡೆಯುವುದೇ ನಿನಗೆ ಒಳ್ಳೆಯದು.

ಅಂಬೆ—(ನೋವಿನಿಂದ ಕೂಡಿದ ದನಿಯಲ್ಲಿ) ಸರಿಯಾದ ಮಾರ‍್ಗ…ತಾಳ್ಮೆಯ ನಡೆ…ಯಾವುದೆಂಬುದನ್ನು ತಾವು ಸೂಚಿಸುತ್ತೀರಾ?

ಗಾಂಗೇಯ—ಸಾಲ್ವಲನ ಕಯ್ ಹಿಡಿಯುವುದು

ಅಂಬೆ—ಅದು ಸೂಕ್ತವೇ?

ಗಾಂಗೇಯ—ನೀನು ಬಾಲ್ಯದಿಂದಲೂ ಮೆಚ್ಚಿರುವ ಗಂಡಸನ್ನು ವರಿಸುವುದು ಸರಿಯಲ್ಲವೇನು?

ಅಂಬೆ—ಆತ ಗಂಡಸಾಗಿದ್ದರೆ ನಿಮ್ಮ ಸಲಹೆಯನ್ನು ಒಪ್ಪಿಕೊಳ್ಳುತ್ತಿದ್ದೆ.

ಗಾಂಗೇಯ—ನಿನ್ನ ಮಾತಿನ ಅರ‍್ತ!

ಅಂಬೆ—ನಿಮ್ಮ ಪರಾಕ್ರಮದ ಮುಂದೆ ಕುಸಿದು ಕುಗ್ಗಿರುವ ಅವನನ್ನು ನಾನು ವರಿಸಲೇನು?

ಗಾಂಗೇಯ—ಒಮ್ಮೆ ಸೋತ ಮಾತ್ರಕ್ಕೆ ನಿನ್ನಿಂದ ದೂರವಾದನೆ!

ಅಂಬೆ—ಅಪಹರಣಕ್ಕೊಳಗಾದ ಹೆಣ್ಣನ್ನು ಕಾಪಾಡದೆ, ಹೇಡಿಯಂತೆ ಆತ ಸ್ವಯಂವರ ಮಂಟಪದಿಂದ ಪಲಾಯನ ಮಾಡಿದ್ದನ್ನು ನೀವೇ ಕಣ್ಣಾರ ಕಾಣಲಿಲ್ಲವೆ?

ಗಾಂಗೇಯ—(ಸುಮ್ಮನಿರುತ್ತಾನೆ)

ಅಂಬೆ—ಅದು ಗಂಡಾದವನು ಮಾಡುವ ಕಾರ‍್ಯವೇನು? ತನಗೊಲಿದಿರುವ ಹೆಣ್ಣಿನ ಮಾನ ಪ್ರಾಣಗಳನ್ನು ಕಾಪಾಡಲು ತನ್ನ ಜೀವವನ್ನಾದರೂ ಕಡೆಗಣಿಸಿ ಮುನ್ನುಗ್ಗದೇ, ಬೆನ್ನು ತೋರಿಸಿ ಓಡಿದ ಆತ ನನ್ನ ಪಾಲಿಗೆ ಅಂದೇ ಸತ್ತ ; ಅವನ ಪಾಲಿಗೆ ನಾನು ಸತ್ತೆ.

ಗಾಂಗೇಯ—ಒಂದು ವೇಳೆ ಆತ ನನ್ನೊಡನೆ ಹೋರಾಡುತ್ತಿದ್ದಾಗ ಸಾವನ್ನಪ್ಪಿದ್ದರೆ?

ಅಂಬೆ—ಅವನೊಡನೆ ಚಿತೆಯೇರುತ್ತಿದ್ದೆ.( ಬೇಸರವನ್ನು ಮೊಗದಲ್ಲಿ ವ್ಯಕ್ತಪಡಿಸುತ್ತಾ) ಈಗ ನನ್ನ ಮುಂದೆ ಅವನ ಹೆಸರನ್ನೂ ಎತ್ತಬೇಡಿ.

ಗಾಂಗೇಯ—ಚಿಕ್ಕಂದಿನಿಂದಲೂ ಬಹುವಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಒಮ್ಮೆಲೆ ಇಶ್ಟೊಂದು ಹಗುರವಾಗಿ ಕಾಣುವುದೇ?

ಅಂಬೆ—ಅವನೊಬ್ಬ ಶಂಡ, ದುರ‍್ಬಲ, ಹೇಡಿ. ಅವನೊಂದು ಗಂಡಿನ ರೂಪದ ಹೆಣ್ಣು. ಅವನೊಡನೆ ಕೂಡಿ ಹೇಗೆ ಬಾಳಲಿ?

ಗಾಂಗೇಯ—ಸಣ್ಣದನ್ನೆ ದೊಡ್ಡದನ್ನಾಗಿ ಮಾಡಿಕೊಂಡು ತಳಮಳಿಸುತ್ತಿರುವೆ. ಮತ್ತೊಮ್ಮೆ ತಾಳ್ಮೆಯಿಂದ ಆಲೋಚಿಸಿ ನೋಡು. ಬಾಳಿನುದ್ದಕ್ಕೂ ಯಾರನ್ನು ಕೂಡಿ ಬಾಳಬೇಕೆಂದು ಹಂಬಲಿಸಿದ್ದೆಯೋ, ಅವನನ್ನು ತಿರಸ್ಕರಿಸಬೇಡ. ನಿನ್ನ ನಿರ‍್ದಾರವನ್ನು ಬದಲಿಸು.

ಅಂಬೆ—ಅದು ಸಾದ್ಯವೇ ಇಲ್ಲ.

ಗಾಂಗೇಯ—ನಿನ್ನ ಮೊಂಡುತನವನ್ನು ಬಿಡಲಾರೆಯ?

ಅಂಬೆ—ಇದು ಮೊಂಡುತನವಲ್ಲ ರಾಜಕುಮಾರ. ನಿಮ್ಮನ್ನು ಪಡೆಯುವುದಕ್ಕೆ ಎಲ್ಲಾ ರೀತಿಯಿಂದಲೂ ನಾನು ಯೋಗ್ಯಳಾಗಿದ್ದೇನೆ. ನನ್ನನ್ನು ನೀವು ನಿರಾಕರಿಸುವುದಕ್ಕೆ ಸಾದ್ಯವೇ ಇಲ್ಲ.

ಗಾಂಗೇಯ—ಏಕೆ?

ಅಂಬೆ—ಚಂದ್ರವಂಶದ ರಾಜಕುವರನಾದ ನೀವು, ಆಡಿದ ಮಾತಿಗೆ ತಪ್ಪಿ ನಡೆಯುವುದು ಅದರ‍್ಮವಾಗುವುದಿಲ್ಲವೇ?

ಗಾಂಗೇಯ—(ಅಚ್ಚರಿಯಿಂದ) ಯಾವ ಮಾತಿಗೆ?

ಅಂಬೆ—ನಮ್ಮನ್ನು ಅಪಹರಿಸಿ ತರುವಾಗ ಸ್ವಯಂವರ ಮಂಟಪದಲ್ಲಿ ತಾವು ಆಡಿದ ನುಡಿಗಳ ನೆನಪಿದೆಯೇ?

ಗಾಂಗೇಯ—(ನೆನಪಿಸಿಕೊಳ್ಳಲು ಯತ್ನಿಸುತ್ತಾನೆ)

ಅಂಬೆ—(ಆವೇಶಪೂರ‍್ಣಳಾಗಿ) ಪರಾಕ್ರಮದ ಮತ್ತಿನಲ್ಲಿದ್ದ ನಿಮಗೆ ಅವುಗಳ ನೆನಪು ಇರಲಾರದು. ಆದರೆ ನೊಂದಿರುವ ನನ್ನೆದೆಯಲ್ಲಿ ಅವು ನಾಟಿವೆ.

ಗಾಂಗೇಯ—(ದುರುಗುಟ್ಟುಕೊಂಡು ನೋಡುತ್ತಾ , ಅಂಬೆಯ ಮಾತುಗಳನ್ನು ಕೇಳತೊಡಗುತ್ತಾನೆ)

ಅಂಬೆ—ವರಣಮಾಲೆಯನ್ನು ಹಿಡಿದು ಮಂಗಳಮಂಟಪದಲ್ಲಿ ನಡೆದಾಡುತ್ತಿದ್ದ ನಮ್ಮನ್ನು ಅಡ್ಡಗಟ್ಟಿ ನಿಂತು, ನೀವು ಆಡಿದ ನುಡಿಗಳನ್ನು ನೆನಪಿಗೆ ತರಲೇನು?

[ಉದ್ವಿಗ್ನಳಾಗಿದ್ದ ಆಕೆಯ ಕೊರಳ ದನಿ ಏರುತ್ತದೆ]

“ನೆರೆದಿರುವ ವೀರರೇ ಕೇಳಿ, ಎಲ್ಲ ಬಗೆಯ ವಿವಾಹಕ್ಕಿಂತ ಹೆಣ್ಣನ್ನು ಪರಾಕ್ರಮದಿಂದ ವರಿಸುವುದೇ ಅತ್ಯುನ್ನತವಾದುದು. ಗಂಡಿನ ಪರಾಕ್ರಮಕ್ಕೆ ಹೆಣ್ಣು ಒಲಿಯುವಳೇ ಹೊರತು, ಅವನ ಅಲಂಕಾರಕ್ಕಲ್ಲ. ಇದೀಗ ನನ್ನ ಪರಾಕ್ರಮವನ್ನೇ ನಿಮ್ಮ ಮುಂದೆ ಪಣವಾಗಿ ಒಡ್ಡಿ ಈ ಮದುವಣಗಿತ್ತಿಯರನ್ನು ವಶಪಡಿಸಿಕೊಂಡಿದ್ದೇನೆ. ಕೆಚ್ಚುಳ್ಳವರು ನನ್ನೊಡನೆ ಹೋರಾಡಿ ಇವರನ್ನು ಪಡೆಯಿರಿ; ಇಲ್ಲದಿದ್ದರೆ ಇವರು ನನ್ನವರು” ಎಂದು ಅಬ್ಬರಿಸಿದ್ದು ನಿಜವಲ್ಲವೇನು?

ಗಾಂಗೇಯ—(ಸುಮ್ಮನೆ ನೋಡುತ್ತಿರುತ್ತಾನೆ)

ಅಂಬೆ—ಸ್ವಯಂವರ ಮಂಟಪದಲ್ಲಿ “ಇವರು ನನ್ನವರು” ಎಂದು ನುಡಿದು, ಎಲ್ಲರನ್ನು ಸದೆಬಡಿದು ನಮ್ಮನ್ನು ಗೆದ್ದು ತಂದಿರಿ . ಈಗ ನಾವು ದರ‍್ಮಕ್ಕೆ ತಲೆಬಾಗಿ ಕಯ್ ಹಿಡಿಯಬೇಕಾದ್ದು ಯಾರನ್ನ?…ನಿಮ್ಮಾಜ್ನೆಯ ಬಲಾತ್ಕಾರಕ್ಕೆ ನನ್ನ ತಂಗಿಯರು ಮಣಿದರು. ಆದರೆ ಅವರಂತಾಗಲು ಈ ಜನ್ಮದಲ್ಲೆ ನಾನು ಸಿದ್ದಳಿಲ್ಲ. ಸಾಲ್ವಲನೊಡನೆ ವಿವಾಹವಾಗಬೇಕೆಂಬ ನಿಮ್ಮ ವಿವೇಕ ಯಾರಿಗೆ ಹಿತವಾದದ್ದು? ಆಡಿದ ನುಡಿಗೆ ತಪ್ಪಿ ನಡೆದು ಕಳಂಕಕ್ಕೆ ಗುರಿಯಾಗಬೇಡಿ. ಈಗ ತಾಳ್ಮೆಯಿಂದ ವಿವೇಚಿಸಬೇಕಾಗಿರುವುದು ನಾನಲ್ಲ, ನೀವು.

ಗಾಂಗೇಯ — ಕಾರ‍್ಯ ಸಾದನೆಯ ಆವೇಗದಲ್ಲಿ ನಾನಾಡಿದ ನುಡಿಗಳನ್ನೇ ಪಟ್ಟು ಹಿಡಿದು ವಾದಿಸಬೇಡ.

ಅಂಬೆ– ಹಾಗಾದರೆ, ನಿಮ್ಮ ಮೊದಲಿನ ನಿರ‍್ದಾರವು ಕಾರ‍್ಯ ಸಾದನೆಯೊಂದಕ್ಕಾಗಿ ಆಡಿದ ನುಡಿಯಲ್ಲವೇನು? ಅದನ್ನೇಕೆ ಬಾಳಿನುದ್ದಕ್ಕೂ ಎಳೆದು ತರುತ್ತಿರುವಿರಿ?

ಗಾಂಗೇಯ—ದರ‍್ಮದ ನಡೆ ಅತ್ಯಂತ ಸೂಕ್ಶ್ಮವಾದದ್ದು. ಅದು ವಾದಕ್ಕೆ ಎಟುಕುವಂತಹುದಲ್ಲ.

ಅಂಬೆ—ಅಗತ್ಯಕ್ಕೆ ತಕ್ಕಂತೆ; ಕಾಲಕ್ಕೆ ತಕ್ಕಂತೆ ; ವ್ಯಕ್ತಿಗೆ ತಕ್ಕಂತೆ ದರ‍್ಮ ಬದಲಾಗುವುದೇನು?

ಗಾಂಗೇಯ—ಅದು ನನ್ನ ಜೀವನಕ್ಕೆ ಸಂಬಂದಪಟ್ಟಿದ್ದು. ಅದನ್ನು ಪ್ರಶ್ನಿಸಬೇಡ.

ಅಂಬೆ—ಇದು ನನ್ನ ಬಾಳಿಗೆ ಸಂಬಂದಪಟ್ಟಿದ್ದು. ಅದಕ್ಕಾಗಿ ಪ್ರಶ್ನಿಸುತ್ತಿದ್ದೇನೆ.

ಗಾಂಗೇಯ—(ತುಸು ಕೋಪದಿಂದ) ಅಂಬೆ, ವ್ಯರ‍್ತ ಸಾಹಸವನ್ನೆಸಗಬೇಡ. ಹಿಡಿದ ಹಟವನ್ನು ಬಿಡು.

ಅಂಬೆ—ಹಟ ನನ್ನದೋ? ನಿಮ್ಮದೋ?

ಗಾಂಗೇಯ—ನನ್ನನ್ನೇ ಪಡೆದು ಬಾಳಬೇಕೆಂಬುದು ಹಟವಲ್ಲದೆ ಮತ್ತೇನು? ಸಂದರ‍್ಬಕ್ಕೆ ತಕ್ಕಂತೆ ಹೊಂದಿಕೊಂಡು ಬಾಳುವುದು ಮುಕ್ಯವಲ್ಲವೇ?

ಅಂಬೆ—ಹಸಿದ ಹುಲಿ ಹುಲ್ಲನ್ನು ತಿಂದು ಬಾಳಲಿಚ್ಚಿಸುವುದೇ?

(ಅಶ್ಟರಲ್ಲಿ ಗಾಂಗೇಯರ ಆಪ್ತಸೇವಕ ಬಾಗಿಲ ಬಳಿಯಲ್ಲಿ ಬಂದು ನಿಂತು ವಂದಿಸುತ್ತಾನೆ. ಗಾಂಗೇಯರು ಅವನತ್ತ ನೋಡುತ್ತಾರೆ.)

ಸೇವಕ—ಅಮಾತ್ಯರು ಬಂದು ಬಹಳ ಸಮಯವಾಯಿತು. ತಮ್ಮನ್ನ ಕಾಣಲೆಂದು ಕಾಯುತ್ತಿದ್ದಾರೆ.

ಗಾಂಗೇಯ—ಇದೀಗ ಬರುವರೆಂದು ತಿಳಿಸು.

(ಸೇವಕನು ಹಿಂತಿರುಗುತ್ತಾನೆ . ಅಂಬೆಯತ್ತ ತಿರುಗಿ)

ಉದ್ವೇಗದ ಮನಸ್ಸನ್ನು ಶಾಂತಪಡಿಸಿಕೊ. ಈಗಲೂ ಕಾಲ ಮಿಂಚಿಲ್ಲ. ವಿವೇಚನೆಯ ಹಾದಿಯಲ್ಲಿ ನಡೆಯಲೆತ್ನಿಸು. ಹಟ ಹಿಡಿಯುವುದರಿಂದ ಯಾವ ಪ್ರಯೋಜನವೂ ಇಲ್ಲ.

ಅಂಬೆ—ನಿಮ್ಮನ್ನಲ್ಲದೆ ಮತ್ತಾರನ್ನೂ ನಾನು ಕನಸುಮನಸಿನಲ್ಲೂ ನೆನೆಸಲಾರೆ.

ಗಾಂಗೇಯ—ಈ ಬಗೆಯ ನಿರ‍್ದಾರದಿಂದ ನಿನಗೆ ಒಳಿತಾಗುವುದಿಲ್ಲ.

ಅಂಬೆ—ಒಳ್ಳೆಯದೋ ಕೆಟ್ಟದ್ದೋ ನಿಮ್ಮನ್ನೇ ಪಡೆಯುತ್ತೇನೆ.

ಗಾಂಗೇಯ—(ಅಂಬೆಯ ಕಟು ನಿರ‍್ದಾರದ ನುಡಿಗಳನ್ನು ಕೇಳಿ ಒಂದು ಬಗೆಯ ಕಸಿವಿಸಿಯಾಗುತ್ತದೆ) ನನಗಾಗಿ ಅಮಾತ್ಯರು ಕಾಯುತ್ತಿದ್ದಾರೆ.

ಅಂಬೆ—ನನ್ನ ಬಾಳಿಗೆ ಬೆಂಕಿಯಿಟ್ಟು, ನೀವು ನೆಮ್ಮದಿಯಿಂದಿರಲು ಬಯಸುತ್ತಿದ್ದೀರಾ?

ಗಾಂಗೇಯ—ನಿನ್ನೊಡನೆ ಹೆಚ್ಚು ವಾದಿಸಲಾರೆ.

ಅಂಬೆ—ನಮ್ಮ ವಂಶದ ಕಿಚ್ಚು, ನಿಮ್ಮ ವಂಶವನ್ನು ಸುಡದೆ ಬಿಡದು.

ಗಾಂಗೇಯ—ಕಾಳ್ಗಿಚ್ಚು ಉರಿದೆದ್ದಾಗ ಹಸಿಯಾದುದ್ದು, ಒಣಗಿದ್ದೆಲ್ಲವೂ ಸುಟ್ಟು ನಾಶವಾಗುತ್ತದೆ. ಅದಕ್ಕಾಗಿ ಅಂಜಬೇಕಾದ ಅಗತ್ಯವಿಲ್ಲ…(ಗಾಂಗೇಯ ನುಡಿಗಳಿಂದ ಅಂಬೆ ಕೆರಳುತ್ತಾಳೆ. ಆಕೆಯ ಕಣ್ಣುಗಳಲ್ಲಿ ತೀವ್ರವಾದ ಕೋಪೋದ್ರೇಕ ಹೊರ ಹೊಮ್ಮುತ್ತಿರುತ್ತದೆ. ಅಪಮಾನದ ನೋವು ಅವಳ ಮೊಗದಲ್ಲಿ ಎದ್ದು ಕಾಣುತ್ತಿರುತ್ತದೆ. ತೀರಾ ಉದ್ವಿಗ್ನಳಾಗಿರುವ ಅಂಬೆ ಏದುಸಿರನ್ನು ಬಿಡುತ್ತಿರುತ್ತಾಳೆ. ಮರುಗಳಿಗೆಯಲ್ಲೇ ಅಲ್ಲಿಂದೆದ್ದು ಹೊರಡುತ್ತಾಳೆ.)

ಮಾಲಿನಿ—ನಾವಿನ್ನು ಬರುತ್ತೇವೆ.

ಗಾಂಗೇಯ—(ಒಪ್ಪಿಗೆಯ ಸೂಚನೆಯೆಂಬಂತೆ ತಲೆಯಾಡಿಸುತ್ತಾನೆ. ಅಂಬೆ ಮತ್ತು ಮಾಲಿನಿಯರು ಅಲ್ಲಿಂದ ಹೋಗುತ್ತಿರುವುದನ್ನು ನಿಟ್ಟಿಸಿ ನೋಡುತ್ತಾ ಗಾಂಗೇಯನ ಮನದಲ್ಲಿ ನಾನಾ ಬಗೆಯ ಒಳಮಿಡಿತಗಳು ಕೆರಳತೊಡಗುತ್ತವೆ. ಲಾವಣ್ಯವತಿಯಾದ ಅಂಬೆಯ ದೇಹದ ಚೆಲುವು ಅವನ ಮನದ ತಳಮಳಕ್ಕೆ ಕಾರಣವಾಗುತ್ತದೆ. ಅವಳ ಕಣ್ಣಿನ ಮಾಟ, ಮೊಗದ ಚೆಲುವು, ಹರೆಯ ತುಂಬಿದ ದೇಹದ ಕಾಂತಿಯು ಗಾಂಗೇಯನ ಮನದ ಮೇಲೆ ಅಚ್ಚೊತ್ತಿದ್ದವು.)

ಮನಸ್ಸು 1—ಅಬ್ಬಾ ಎಂತಹ ಚೆಲುವೆ! ಅಪ್ಸರೆಯನ್ನು ಮೀರಿಸುವಂತಹ ತೇಜಸ್ವಿನಿ, ಬಹು ದಿಟ್ಟೆ. ಇಂತಹ ಹೆಣ್ಣೇ ಅಪರೂಪವೆಂದು ಕಾಣುತ್ತದೆ. ಇವಳನ್ನು ಪತ್ನಿಯನ್ನಾಗಿ ಪಡೆಯುವವನು ಬಾಗ್ಯವಂತ.

ಮನಸ್ಸು 2—ಆ ಬಾಗ್ಯ ನನ್ನದೇ ಏಕಾಗಬಾರದು? ಬಳಿಗೆ ಬಂದಿರುವ ಬಾಗ್ಯವನ್ನೇಕೆ ನಿರಾಕರಿಸುವುದು? ಇಂತಹ ದಿಟ್ಟೆಯನ್ನು ಕಯ್ ಹಿಡಿದರೆ ನಿಜಕ್ಕೂ ಜೀವನ ಸಾರ‍್ತಕವಾಗುತ್ತದೆ.

ಮನಸ್ಸು 1—ಆದರೆ ಅದು ಸಾದ್ಯವೇ? ಅಂದು ದಾಶರಾಜನಿಗೆ ಕೊಟ್ಟಿರುವ ಮಾತಿಗೆ ತಪ್ಪಿ ನಡೆಯಲೆ?

ಮನಸ್ಸು 2—ಅದರಲ್ಲೇನು ತಪ್ಪು? ನಾನಾಗಿಯೆ ಯಾವ ಹೆಣ್ಣನ್ನೂ ಈವರೆಗೆ ಬಯಸಲಿಲ್ಲ. ಈಗ ಕಾಲ ಕೂಡಿ ಬಂದಿರಬೇಕು. ಅದಕ್ಕಾಗಿ ಏನೋ ಅಂಬೆ ನನ್ನತ್ತ ಒಲಿದಿದ್ದಾಳೆ.

ಮನಸ್ಸು 1—ಆದರೆ ಲೋಕ ಸುಮ್ಮನಿರುತ್ತದೆಯೇ? ನಾನು ಕೊಟ್ಟಿರುವ ಬಾಶೆಯನ್ನು ಎತ್ತಿ ಆಡುತ್ತಾ, ನನ್ನ ಹೆಸರಿಗೆ ಮಸಿ ಬಳಿಯುವುದಿಲ್ಲವೇ?

ಮನಸ್ಸು 2—ಹೆಸರಿಗೇಕೆ ಅಶ್ಟು ಬೆಲೆ ಕೊಡುವುದು? ನನ್ನ ಜೀವನದ ಸುಕ ನನಗೆ ಮುಕ್ಯ.

ಮನಸ್ಸು 1—ನನ್ನ ಸುಕವೇ ಮುಕ್ಯವಾಗಿದ್ದರೆ, ಅಂದು ತಂದೆಗಾಗಿ ನಾನು ಮಾತು ಕೊಡಬೇಕಾಗಿರಲಿಲ್ಲ. ಈಗ ಆ ಬಾಶೆಗೆ ತಪ್ಪಿ ನಡೆದರೆ ಸಾವಿಗಿಂತಲೂ ಕೆಟ್ಟದ್ದಾದ ಅಪಕೀರ‍್ತಿ ಬರುತ್ತದೆಯಲ್ಲ!

ಮನಸ್ಸು 2—ಹಾಗಾದರೆ ಜೀವನದ ಉದ್ದಕ್ಕೂ ಹೀಗೆ ಒಬ್ಬಂಟಿಯಾಗಿಯೇ ಉಳಿಯುವೆಯಾ?

ಮನಸ್ಸು 1—ಇದೇನು?…ಇಂದು ಈ ಬಗೆಯ ಚಿಂತೆ. ಅಂದು ಬಾಶೆ ಕೊಡುವಾಗಲೇ ಇದನ್ನೆಲ್ಲ ಆಲೋಚಿಸಬೇಕಿತ್ತು.

ಮನಸ್ಸು 2—ಅಯ್ಯೋ…ಆಗ ನನಗೆ ಇಶ್ಟೊಂದು ಲೋಕಜ್ನಾನ ಇರಲಿಲ್ಲ. ಅದೂ ಅಲ್ಲದೆ ಚಿಕ್ಕಮ್ಮನವರಿಗಾಗಿ ಪರಿತಪಿಸುತ್ತಿದ್ದ ತಂದೆಯವರ ಸ್ತಿತಿ ಅಂದು ಚಿಂತಾಜನಕವಾಗಿತ್ತು. ನನ್ನ ಜಾಗದಲ್ಲಿ ಯಾರೇ ಇದ್ದರೂ ತಂದೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಅಂತಹ ಬಾಶೆಯನ್ನೇ ಕೊಡುತ್ತಿದ್ದರು.

ಮನಸ್ಸು 1—ಏಕೋ…ಏನೋ…ಅಂಬೆಯ ಆಶೆಯನ್ನು ಕೇಳಿದಾಗಿನಿಂದ ನನ್ನಲ್ಲಿ ಹೆಣ್ಣಿನ ಬಗೆಗೆ ಆಸಕ್ತಿ ಬೆಳೆಯುತ್ತಿದೆ. ನನ್ನೊಳಗಿನ ಕಾಮನೆಗಳನ್ನು ಕೆರಳಿಸುವ ಹೆಣ್ಣಾಗಿ ಈಕೆ ಬಂದಿರುವಂತೆ ಕಾಣುತ್ತಿದೆ.

ಮನಸ್ಸು 2—ವಯಸ್ಸಿಗೆ ಬಂದ ಗಂಡುಹೆಣ್ಣು ಪರಸ್ಪರ ಕೂಡಿ ಬಾಳುವುದು ನಿಸರ‍್ಗ ಸಹಜವಾದುದು. ಅದನ್ನೇಕೆ ನಾನು ನಿರಾಕರಿಸುವುದು?

ಮನಸ್ಸು 1—ಅವಳನ್ನು ಕಯ್ ಹಿಡಿದರೆ, ಜನರ ಕಣ್ಣಿನಲ್ಲಿ ನಾನೊಬ್ಬ ಹೀನ ವ್ಯಕ್ತಿಯಾಗುತ್ತೇನಲ್ಲವೇ?…”ಕೊಟ್ಟ ಬಾಶೆಗೆ ತಪ್ಪಿ ನಡೆದವನು ; ಹೆಣ್ಣುಗಳನ್ನು ಇದಕ್ಕಾಗಿಯೇ ಹೊತ್ತುಕೊಂಡು ಬಂದ ಕಾಮುಕ ; ಹೆಣ್ಣಿನ ಸಂಗವೇ ಬೇಡವೆಂದು ನಾಟಕವಾಡಿ, ಒಳಗೊಳಗೆ ತಳಮಳಿಸಿದ ಕಪಟಿಯೆಂದು ಬಹುಬಗೆಯಲ್ಲಿ ನಿಂದಿಸತೊಡಗುತ್ತಾರಲ್ಲ! ಏನು ಮಾಡುವುದು?

ಮನಸ್ಸು 2—ಈ ಜಗತ್ತಿನಲ್ಲಿ ನಿಂದೆಯು ಯಾರಿಗೂ ತಪ್ಪಿದ್ದಲ್ಲ. ಅದಕ್ಕೆ ನಾನೇಕೆ ಹೆದರಬೇಕು. ನನ್ನ ಮನದ ನೇರಕ್ಕೆ ತಕ್ಕಂತೆ ಬಾಳಿದರಾಯಿತು.

ಮನಸ್ಸು 1—ಆದರೆ ಈ ಜಗತ್ತಿಗೆ ಅಂಜದೆ ಬಾಳಲು ಸಾದ್ಯವಿಲ್ಲ. ನಾನೋ ಹೆಸರಾಂತ ರಾಜವಂಶದಲ್ಲಿ ಹುಟ್ಟಿರುವ ವ್ಯಕ್ತಿ ; ನಾಲ್ಕು ಮಂದಿಯ ಮುಂದೆ ಬಾಶೆ ಕೊಟ್ಟಿರುವವನು ; ಬೀಶ್ಮನೆಂಬ ಕೀರ‍್ತಿಯನ್ನು ಪಡೆದಿರುವವನು…ಅಯ್ಯೋ…ಈ ನನ್ನ ಕೀರ‍್ತಿ…ಈ ರಾಜವಂಶದ ಹಿರಿಮೆ…ಇವೇ ನನ್ನ ಬಾಳಿಗೆ ಶತ್ರುವಾಯಿತಲ್ಲ!…ನಾನೊಬ್ಬ ಅನಾಮದೇಯನಾಗಿ ಹುಟ್ಟಿದ್ದರೆ ಎಶ್ಟು ಚೆನ್ನಾಗಿರುತ್ತಿತ್ತು!

ಮನಸ್ಸು 2—ಹುಟ್ಟಿದ್ದರೆ ಚೆನ್ನಾಗಿತ್ತು. ಆದರೆ ಈಗ ಆ ರೀತಿ ಇಲ್ಲವಲ್ಲ. ಏನು ಮಾಡುವುದು?

( ನೋವಿನಿಂದ ಕೂಡಿದ ನಿಟ್ಟುಸಿರನ್ನು ಬಿಡುತ್ತಾ ಆಸನವೊಂದರ ಮೇಲೆ ಗಾಂಗೇಯ ಕುಳಿತುಕೊಳ್ಳುತ್ತಾನೆ.)

ನೋಟ- 4

[ರಾಣಿವಾಸದ ಕೊಟಡಿಯೊಂದರಲ್ಲಿ ಅಂಬೆ ಮತ್ತು ಮಾಲಿನಿಯರು ಸಮಾಲೋಚನೆಯಲ್ಲಿ ತೊಡಗಿದ್ದಾರೆ]

ಮಾಲಿನಿ—ನಮ್ಮ ಪ್ರಯತ್ನಗಳೆಲ್ಲಾ ಗೋರ‍್ಕಲ್ಲ ಮೇಲೆ ಮಳೆ ಸುರಿದಂತಾಯಿತಲ್ಲವೇ, ದೇವಿ.

ಅಂಬೆ—ಇಶ್ಟರಿಂದಲೇ ನಾವು ನಿರಾಶರಾಗಬೇಕಾದ್ದಿಲ್ಲ, ಮಾಲಿನಿ. ಇದು ನಮ್ಮ ಪ್ರಯತ್ನದ ಮೊದಲನೆಯ ದಾಳಿ. ಅವನ ಮನಸ್ಸನ್ನು ಮತ್ತೆ ಮತ್ತೆ ಗಾಸಿಗೊಳಿಸುವಂತಹ ಸನ್ನಿವೇಶಗಳನ್ನು ತಂದೊಡ್ಡಿ ಎಂತಾದರೂ ಮಾಡಿ ಅವನ ನಿರ‍್ದಾರವನ್ನು ಅಲುಗಿಸಲೇಬೇಕು.

ಮಾಲಿನಿ—ಇದೇನು ದೇವಿ? ಶತ್ರುವಿನ ಕೋಟೆಯ ಮೇಲೆ ಲಗ್ಗೆ ಹಾಕುವ ಸೇನಾದಿಪತಿಯಂತೆ ನುಡಿಯುತ್ತಿದ್ದೀರಲ್ಲ!

ಅಂಬೆ—ಹೌದು ಮಾಲಿನಿ. ಇದೂ ಒಂದು ಬಗೆಯ ಯುದ್ದ. ಇಬ್ಬರಲ್ಲೊಬ್ಬರು ಗೆಲ್ಲಬೇಕು ಇಲ್ಲವೇ ಇಬ್ಬರೂ ಅಳಿಯಬೇಕು.

ಮಾಲಿನಿ—ಮುಂದಿನ ದಾರಿ ಯಾವುದು ದೇವಿ?

ಅಂಬೆ—ನಾನು ಅದನ್ನೇ ಚಿಂತಿಸುತ್ತಿದ್ದೇನೆ.

(ತುಸು ಕಾಲ ಇಬ್ಬರೂ ಆಲೋಚನಾಮಗ್ನರಾಗುತ್ತಾರೆ)

ಮಾಲಿನಿ—ಗಾಂಗೇಯರು ನೀತಿವಂತರು. ತಾವು ಮಾಡಿದ ತಪ್ಪನ್ನು ತಾವೇ ಅರಿತುಕೊಳ್ಳುವಂತಹ ವ್ಯಕ್ತಿ. ಆದ್ದರಿಂದ…

ಅಂಬೆ—ಆದ್ದರಿಂದ…

ಮಾಲಿನಿ—ಅವರನ್ನು ದರ‍್ಮದ ಮೂಲಕವಾಗಿಯೇ ವಶಪಡಿಸಿಕೊಳ್ಳಬೇಕು. ಅವರ ಮನಸ್ಸಿನ ಮೇಲೆ ಪ್ರಬಾವ ಬೀರುವಂತಹ ಪೂಜ್ಯ ವ್ಯಕ್ತಿಗಳನ್ನು ನಾವು ಆಶ್ರಯಿಸಿದರೆ ಕಂಡಿತ ನಮ್ಮ ಉದ್ದೇಶ ಈಡೇರುತ್ತದೆ, ದೇವಿ.

ಅಂಬೆ—ಅವರಿಗೆ ಪೂಜ್ಯರಾದ ವ್ಯಕ್ತಿಗಳು ಯಾರು?

ಮಾಲಿನಿ—ಒಬ್ಬರ ಬಗೆಗೆ ಈಗಾಗಲೇ ಕೇಳಿ ತಿಳಿದಿದ್ದೇನೆ.

ಅಂಬೆ—ಯಾರವರು?

ಮಾಲಿನಿ—ಗಾಂಗೇಯರಿಗೆ ಬಾಲ್ಯದಲ್ಲಿ ವೇದವಿದ್ಯೆಯನ್ನು ಮತ್ತು ಅಸ್ತ್ರವಿದ್ಯೆಯನ್ನು ಹೇಳಿಕೊಟ್ಟ ಗುರುವರ‍್ಯರಾದ ಪರಶುರಾಮರು.

ಅಂಬೆ—ಅವರನ್ನು ಅವತಾರ ಪುರುಶರೆಂದೇ ಜನ ಹೇಳುತ್ತಾರಲ್ಲವೇ?

ಮಾಲಿನಿ—ಅಹುದು ದೇವಿ.

ಅಂಬೆ—ಚಿಕ್ಕಂದಿನಿಂದಲೂ ನಾನವರ ಪರಾಕ್ರಮವನ್ನು ತಂದೆಯವರಿಂದ ಕೇಳಿ ಬಲ್ಲೆನು. ಅಂತಹ ಮಹಾಶಕ್ತಿ ಸಂಪನ್ನರ ಆಶ್ರಯವನ್ನು ಪಡೆಯುವುದು ಹೇಗೆ?…ಮಾಲಿನಿ.

ಮಾಲಿನಿ—ನೀವು ಮೊದಲೇ ತಿಳಿಸಿರುವಂತೆ ನಮಗಿರುವುದು ಒಂದೇ ದಾರಿಯಲ್ಲವೇ ?

ಅಂಬೆ—ಯಾವುದದು?

ಮಾಲಿನಿ—ನೇರವಾದ ದಾರಿ. ಈಗ ಅವರು ಇಲ್ಲಿಗೆ ಸಮೀಪದಲ್ಲಿನ ನದಿತೀರದ ಆಶ್ರಮವೊಂದರಲ್ಲಿ ನೆಲೆಸಿದ್ದಾರಂತೆ. ಅಲ್ಲಿಗೆ ಹೋಗಿ ನಮ್ಮ ಸಂಕಟದ ಕತೆಯನ್ನು ಅವರ ಕರುಣೆಗೆ ಪಾತ್ರವಾಗುವಂತಹ ರೀತಿಯಲ್ಲಿ ಹೇಳಿಕೊಳ್ಳೋಣ. ತಮ್ಮ ಶಿಶ್ಯನಿಂದಾಗಿರುವ ಅನ್ಯಾಯವನ್ನು ಸರಿಪಡಿಸಿಕೊಡಿರೆಂದು ನ್ಯಾಯ ಬಿಕ್ಶೆಗಾಗಿ ಯಾಚಿಸೋಣ.

ಅಂಬೆ—ಒಂದು ವೇಳೆ ಅವರು ನಮ್ಮ ಬಗ್ಗೆ ಕರುಣೆ ತೋರದಿದ್ದರೆ?

ಮಾಲಿನಿ—ಕಂಡಿತ ಹಾಗಾಗುವುದಿಲ್ಲ. ಹೆಣ್ಣಿನ ಬಾಳಿನ ದುರಂತವನ್ನು ಕಂಡು ಮರುಗದ ಗಂಡು ಈ ಜಗತ್ತಿನಲ್ಲಿಲ್ಲ.

ಅಂಬೆ—ಹೇಗೆ ಹೇಳುವೆ?

ಮಾಲಿನಿ—ಎಲ್ಲರೂ ಹೆಣ್ಣಿನ ಹೊಟ್ಟೆಯಿಂದ ಮೂಡಿಬಂದವರಲ್ಲವೇ ದೇವಿ. ತಾಯಿಯ ಆ ಕರುಳಿನ ಸಂಬಂದವಾದರೂ ಅವರಲ್ಲಿ ಕರುಣೆಯನ್ನು ಮಿಡಿಸುತ್ತದೆ.

ಅಂಬೆ—(ಅವಳ ಬಗ್ಗೆ ತನ್ನ ಮೆಚ್ಚುಗೆಯನ್ನು ಕಣ್ಣುಗಳಲ್ಲಿ ಸೂಚಿಸುತ್ತಾ) ನಿನ್ನ ವಿವೇಕ ಸಾಹಸಗಳೇ ನನಗೀಗ ದಿಕ್ಕು. ನನ್ನ ಬಳಿ ನೀನಿಲ್ಲದಿದ್ದರೆ, ಈ ವೇಳೆಗೆ ನನ್ನ ಕತೆ ಮುಗಿಯುತ್ತಿತ್ತೆಂದು ಕಾಣುತ್ತದೆ.

ಮಾಲಿನಿ—ಕೆಟ್ಟ ಮಾತನ್ನೇಕೆ ಆಡುವಿರಿ ದೇವಿ?

ಅಂಬೆ—ಇನ್ನೂ ನಿನ್ನ ಒಡತಿಯ ಪಾಲಿಗೆ ಒಳ್ಳೆಯದನ್ನೇ ಹಾರಯಿಸುತ್ತಿರುವೆಯಾ ಮಾಲಿನಿ?

ಮಾಲಿನಿ—ನಮ್ಮ ಬಾಳು ಇರುವುದು ಮಂಗಳವನ್ನು ಕಾಣುವುದಕ್ಕೆ ಹೊರತು, ಬರುವ ದುರಂತಗಳಿಗೆ ಸುಮ್ಮನೆ ತಲೆಯೊಡ್ಡುವುದಕ್ಕಾಗಿಯಲ್ಲ, ದೇವಿ.

ಅಂಬೆ—[ಮಾಲಿನಿಯ ಮಾತುಗಳನ್ನು ಕೇಳುತ್ತಿದ್ದಂತೆಯೇ ಯಾವುದೋ ಒಂದು ಬಗೆಯ ವೇದನೆಗೆ ಒಳಗಾಗುತ್ತಾಳೆ. ಉಸ್ಸೆಂದು ನಿಟ್ಟುಸಿರು ಬಿಡುತ್ತಾಳೆ]

ಮಾಲಿನಿ—ದೇವಿ, ಗುರುಗಳ ಬಳಿಗೆ ತೆರಳೋಣವೇ?

ಅಂಬೆ—[ಆಗಲೆಂದು ಸೂಚಿಸುತ್ತಾಳೆ. ಇಬ್ಬರೂ ಅಲ್ಲಿಂದ ತೆರಳುತ್ತಾರೆ.]

(ಕೊನೆಯ ಅಂಕ ನಾಳೆ ಮೂಡಿಬರುತ್ತದೆ)

( ಚಿತ್ರ ಸೆಲೆ: youtube.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 08/06/2016

    […] ಅಂಕ-1 ಅಂಕ-2 ಅಂಕ-3 […]

ಅನಿಸಿಕೆ ಬರೆಯಿರಿ: