ನಾಟಕ: ಅಂಬೆ ( ಮೊದಲ ಕಂತು )

 ಸಿ.ಪಿ.ನಾಗರಾಜ.

Bhisma_fight_in_Swayamvara
ಪಾತ್ರಗಳು:

ಪರಶುರಾಮ—–ಗಾಂಗೇಯನ ಗುರು

ಗಾಂಗೇಯ—–ಶಂತನು ಮತ್ತು ಗಂಗಾದೇವಿಯ ಮಗ

ಚಿತ್ರಾಂಗದ ಮತ್ತು ವಿಚಿತ್ರವೀರ‍್ಯ—-ಶಂತನು ಮತ್ತು ಸತ್ಯವತಿಯ ಮಕ್ಕಳು

ವೀರಸೇನ—–ಸಾರತಿ

ಬೊಮ್ಮ—–ಸೇವಕ

ಸತ್ಯವತಿ—–ಶಂತನುವಿನ ಹೆಂಡತಿ

ಅಂಬೆ-ಅಂಬಿಕೆ-ಅಂಬಾಲಿಕೆ—–ಕಾಶಿರಾಜನ ಪುತ್ರಿಯರು

ಮಾಲಿನಿ—–ಕಾಶೀರಾಜ ಪುತ್ರಿಯರ ಆಪ್ತಸಕಿ

ಸರೋಜ-ನಳಿನಿ-ಸುಮ—-ಈ ಮೂವರು ಹಸ್ತಿನಾಪುರದ ರಾಣಿವಾಸದಲ್ಲಿರುವ ಸಕಿಯರು

——————————————————————————————

ಅಂಕ – 1

ನೋಟ- 1

[ಹಸ್ತಿನಾಪುರದ ರಾಜಮಾತೆ ಸತ್ಯವತಿದೇವಿಯ ರಾಣಿವಾಸದ ಕೊಟಡಿಯೊಂದರಲ್ಲಿ ಮೂವರು ಕಾಶಿರಾಜ ಪುತ್ರಿಯರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಅವರ ಆಪ್ತಸಕಿಯಾದ ಮಾಲಿನಿಯು ಅವರ ಬೇಗುದಿಯನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದಾಳೆ. ಅವರೆಲ್ಲರ ಮೊಗದಲ್ಲಿ ಹೆದರಿಕೆ ಮತ್ತು ಆತಂಕದ ಒಳಮಿಡಿತಗಳು ಎದ್ದುಕಾಣುತ್ತಿವೆ. ಅಲ್ಲಿಗೆ ರಾಜಮಾತೆ ಸತ್ಯವತಿ ಬರುತ್ತಾರೆ.]

ಸತ್ಯವತಿ—ಅಪರಿಚಿತವಾದ ಎಡೆಯಲ್ಲಿ ಹಾನಿಯುಂಟಾಗುವುದೆಂದು ಕಳವಳಿಸಬೇಡಿ. ಇಲ್ಲಿ ನಿಮ್ಮ ಮಯ್‍ಮನಗಳಿಗೆ ಕುಂದುಂಟಾಗುವ ಯಾವ ಕೆಟ್ಟ ಕಾರ‍್ಯವೂ ಯಾರಿಂದಲೂ ಉಂಟಾಗುವುದಿಲ್ಲ.

ಮಾಲಿನಿ—ಕೇಡನ್ನು ಬಗೆಯಲೆಂದೇ ಅಪಹರಿಸಿ ತಂದಿರುವ ಎಡೆಯಲ್ಲಿ ಆಪತ್ತಿಲ್ಲವೆಂದರೆ, ಅದಕ್ಕಿಂತಲೂ ಪರಿಹಾಸ್ಯ ಮತ್ತೊಂದಿಲ್ಲ.

ಸತ್ಯವತಿ—ಯಾವ ಆಪತ್ತು ನಿಮಗೆ ತಟ್ಟದಂತೆ ನಾನು ನೋಡಿಕೊಳ್ಳುತ್ತೇನೆ, ನನ್ನ ಮಾತಿನಲ್ಲಿ ನಂಬಿಕೆಯಿರಲಿ.

ಮಾಲಿನಿ—ನಂಬಿಕೆಗೆ ಯೋಗ್ಯವಲ್ಲದ ಎಡೆಯಲ್ಲಿ ಅಮ್ರುತವೂ ವಿಶದಂತೆ ತೋರುವುದಲ್ಲವೇ?

ಸತ್ಯವತಿ—ಮಾತಿಗೆ ಮಾತನ್ನು ಒಡ್ಡುವುದರಲ್ಲಿ ನಿಪುಣೆಯಾದ ನೀನಾರು ? ನಿನ್ನ ಹೆಸರೇನು?

ಮಾಲಿನಿ—ಅದರಿಂದ ತಮಗಾಗುವ ಪ್ರಯೋಜನವೇನು?

ಸತ್ಯವತಿ—ಹೆಚ್ಚಿನ ಯಾವ ಪ್ರಯೋಜನವಿಲ್ಲದಿದ್ದರೂ ಕುತೂಹಲವಾದರೂ ತಣಿಯುವುದಿಲ್ಲವೇ?

ಮಾಲಿನಿ—ನನ್ನ ಹೆಸರು ಮಾಲಿನಿ. ದೊಡ್ಡ ಕಂಟಕಕ್ಕೆ ಸಿಲುಕಿರುವ ಈ ಕಾಶಿರಾಜ ಪುತ್ರಿಯರ ಆಪ್ತಸಕಿ.

ಸತ್ಯವತಿ—ಹಸ್ತಿನಾಪುರದಂತಹ ಚೆಲುವಿನ ನೆಲೆಯಲ್ಲಿರುವ ರಾಜಪುತ್ರಿಯರನ್ನು ಏಕೆ ಹಾಗೆಂದು ಕರೆಯುವೆ?

ಮಾಲಿನಿ—ಚಿನ್ನದ ಕತ್ತಿಯಿಂದ ಇರಿದರೆ ನೋವಾಗುವುದಿಲ್ಲವೇ?

ಸತ್ಯವತಿಯ ದಾಸಿಯೊಬ್ಬಳು—ಅಬ್ಬಾ! ಎಂತಾ ಮಾತಿನಮಲ್ಲಿಯೇ ನೀನು? ರಾಜಮಾತೆಯವರ ಮುಂದೆಯೂ ಮಾತಿನ ಮೇಲೆ ನಿಗಾ ಇಲ್ಲವಲ್ಲ.

ಮಾಲಿನಿ—[ತಾನು ಇದುವರೆಗೂ ಮಾತನಾಡುತ್ತಿದ್ದು ರಾಜಮಾತೆಯವರೊಡನೆ ಎಂಬುದನ್ನು ಅರಿತ ಕೂಡಲೇ…]

ಮನ್ನಿಸಬೇಕು ದೇವಿ. ನಾನಾಡಿದ ನುಡಿಗಳು ಒರಟಾಗಿದ್ದರೆ ಬೇಸರಪಟ್ಟುಕೊಳ್ಳಬೇಡಿ.

ಸತ್ಯವತಿ—ನಿನ್ನಂತಹ ಸಕಿ ಬಳಿಯಲ್ಲಿದ್ದರೆ ಕಾಲದ ಪರಿವೆಯೇ ತಿಳಿಯದು. ನಿನ್ನ ಕೊರಳ ದನಿಯು ಕೋಗಿಲೆಯ ಕಂಟವನ್ನು ಅಣಕಿಸುತ್ತದೆ. ನಿನ್ನ ಮಾತಿನ ಚಾತುರ‍್ಯ ಹಗೆಗಳನ್ನೂ ಆತ್ಮೀಯರನ್ನಾಗಿಸುತ್ತದೆ.

ಮಾಲಿನಿ—ದೇವಿ, ತಮ್ಮ ನುಡಿಗಳಿಗೆ ನಾನು ಚಿರರುಣಿ. ಆದರೆ…

ಸತ್ಯವತಿ—(ಮುಗುಳ್ನಗುತ್ತಾ) “ಆದರೆ” ಎಂಬ ಈ ನಿನ್ನ ಉದ್ಗಾರ, ಇನ್ನಾವ ಹೊಸ ಬಗೆಯ ಮಾತಿನ ಮೋಡಿಗೆ ನಾಂದಿಯಾಗುವುದು ಮಾಲಿನಿ?

ಮಾಲಿನಿ—ದರ‍್ಮದ ಗೆರೆಯನ್ನು ದಾಟಿ ಬಾಳುತ್ತಿರುವ ಮಗನ ತಾಯಿ ನೀವಾಗಿದ್ದೀರಲ್ಲ ಎಂಬ ಸಂಕಟ ನನ್ನನ್ನು ಕಾಡುತ್ತಿದೆ.

ಸತ್ಯವತಿ—ಅಂದರೆ ನಿನ್ನ ಮಾತಿನ ಅರ‍್ತ. ನನ್ನ ಮಗ…

ಮಾಲಿನಿ—ದರ‍್ಮದ ನಡೆನುಡಿಗಳಿಗೆ ಹೊರತಾದವರಲ್ಲವೇ ದೇವಿ?

ಸರೋಜ—ನಾಲಿಗೆಯ ಮೇಲೆ ಹತೋಟಿಯಿರಲಿ. ಮಾತೆಯವರ ಮೆಚ್ಚುಗೆಗೆ ಪಾತ್ರಳಾಗಿದ್ದೇನೆಂದು ಬಾಯಿಗೆ ಬಂದಂತೆ ಹರಟಬೇಡ.

ಸತ್ಯವತಿ—[ದಾಸಿಯತ್ತ ತಿರುಗಿ, ನಡುವೆ ತಲೆಹಾಕಬಾರದೆಂದು ಕಣ್ಸನ್ನೆಯಿಂದ ಸೂಚಿಸುತ್ತಾಳೆ]

ಮಾಲಿನಿ, ನನ್ನ ಮಗ ದರ‍್ಮವಿರೋದಿಯಾದ ಕಾರ‍್ಯವನ್ನು ಕನಸಿನಲ್ಲೂ ಮಾಡುವವನಲ್ಲ.

ಮಾಲಿನಿ—ಹಾಡುಹಗಲಿನಲ್ಲಿ ಅನ್ಯರ ವಸ್ತುವನ್ನು ಅಪಹರಿಸಿದರೆ, ಅದು ಕಳ್ಳತನವಲ್ಲವೇ ದೇವಿ?

ಸತ್ಯವತಿ—ನಿನ್ನ ಒಗಟನ್ನು ಬಿಡಿಸಿ ಹೇಳು.

ಮಾಲಿನಿ—ಸ್ವಯಂವರ ವೇದಿಕೆಯಲ್ಲಿ ವರಣಮಾಲೆಯನ್ನು ಹಿಡಿದು ನಿಂತಿದ್ದ ಮದುವಣಗಿತ್ತಿಯರನ್ನು ಬಲಾತ್ಕಾರವಾಗಿ ಅಪಹರಿಸಿ ತಂದುದು ಸರಿಯೇ?…ಹೂವಿನ ರಾಶಿ ಹರಡಿದ್ದ ಮದುಮಕ್ಕಳ ಮಂಗಳ ಮಂಟಪವನ್ನು, ಕತ್ತಿಯ ಬಲದಿಂದ ಕೆಡವಿ, ರಕ್ತದ ಚೆಲ್ಲಾಟವಾಡಿ, ಗೋಳಿನ ಬೀಡನ್ನಾಗಿ ಮಾಡಿ ಬಂದುದು ಯಾವ ದರ‍್ಮ ದೇವಿ?

ಸತ್ಯವತಿ—(ಸುಮ್ಮನಿರುತ್ತಾಳೆ)

ಮಾಲಿನಿ—ಹೆತ್ತ ತಂದೆಯನ್ನು ಸದೆಬಡಿದು, ಅವನ ಕಣ್ಣೆದುರಿನಲ್ಲೇ ಹೆಣ್ಣು ಮಕ್ಕಳನ್ನು ಎಳೆತಂದಿದ್ದು ದರ‍್ಮನಿಶ್ಟವಾದ ಕಾರ‍್ಯವೇ?

[ಆವೇಶದ ತೀವ್ರತೆಯಿಂದ ದನಿ ಕಂಪಿಸತೊಡಗುತ್ತದೆ]

ಸತ್ಯವತಿ—ಮಾಲಿನಿ, ನಿನ್ನ ನುಡಿಗಳಲ್ಲಿ ಸತ್ಯಾಂಶವಿದ್ದರೂ, ಈ ರೀತಿ ಮಾಡಿರುವ ಗಾಂಗೇಯನಲ್ಲಿ ಯಾವುದೋ ಮಹತ್ತರವಾದ ದೂರದ್ರುಶ್ಟಿಯಿರಲೇಬೇಕು. ಆತ ದರ‍್ಮದಲ್ಲಿ ಶ್ರದ್ದೆಯುಳ್ಳವನು.

ಮಾಲಿನಿ—ಅಬಲೆಯರನ್ನು ಎಳೆತರುವುದು ದರ‍್ಮಶ್ರದ್ದೆಯೇ?

ಸತ್ಯವತಿ—(ತುಸು ಕೋಪದಿಂದ) ಮಾಲಿನಿ, ಗಾಂಗೇಯನ ವ್ಯಕ್ತಿತ್ವವನ್ನು ಅಲ್ಲಗಳೆಯುವಂತಹ ಸಾಹಸಕ್ಕೆ ತೊಡಗಬೇಡ. ಅಪಹರಿಸಿ ತಂದ ನಿಮ್ಮನ್ನು ನಮ್ಮ ರಾಣಿವಾಸದಲ್ಲಿ ಇರಿಸಿರುವುದೇ ಹೆಣ್ಣುಮಕ್ಕಳ ಬಗೆಗೆ ಆತನಿಗಿರುವ ಹೊಣೆಗಾರಿಕೆಗೆ ಸಾಕ್ಶಿಯಾಗಿದೆ.

ಮಾಲಿನಿ—ಹಾಗಾದರೆ ಯಾವ ಕಾರ‍್ಯಸಾದನೆಗಾಗಿ ನಮ್ಮ ರಾಜಪುತ್ರಿಯರನ್ನು ಇಂತಹ ಸಂಕಟಕ್ಕೆ ಒಡ್ಡಿದ್ದಾರೆ?

ಸತ್ಯವತಿ—ನಿನಗೆ ಸಮಂಜಸವಾದ ಉತ್ತರವನ್ನು ನಾನೀಗ ನೀಡಲಾರೆ. ಕಾಶಿ ರಾಜ್ಯದತ್ತ ಹೋಗಿ ಬರುವೆನೆಂದು ಆತುರಾತುರದಲ್ಲಿ ಹೇಳಿ ಹೋದ ಗಾಂಗೇಯನು ಹಿಂತಿರುಗಿ ಬಂದ ಸಂಗತಿ ಇದೀಗ ತಾನೆ ದಾಸಿಯರಿಂದ ತಿಳಿಯಿತು. ನಮ್ಮ ರಾಣಿವಾಸದಲ್ಲಿ ಕಾಶಿರಾಜಪುತ್ರಿಯರಿದ್ದಾರೆ ಎಂಬ ಸುದ್ದಿ ಕೇಳಿ ಇತ್ತ ಬಂದೆನು. ಇನ್ನೂ ನನ್ನ ಪುತ್ರನ ಬೇಟಿಯಾಗಿಲ್ಲ.

ಮಾಲಿನಿ—(ದೀನವದನಳಾಗಿ) ದೇವಿ, ನಿಮ್ಮಲ್ಲಿ ಕಯ್ ಮುಗಿದು ಕೇಳಿಕೊಳ್ಳುತ್ತೇನೆ. ನಮ್ಮ ರಾಜಪುತ್ರಿಯರ ಬಾಳನ್ನು ಹೊಸಕಿ ಹಾಕುವಂತಹ ಯಾವ ಕಾರ‍್ಯವೂ ನಡೆಯದಿರಲಿ. ಅರಳಬೇಕಾದ ಮೊಗ್ಗು ಬಾಡದಿರಲಿ ದೇವಿ.

ಸತ್ಯವತಿ—ಇಲ್ಲ ಮಾಲಿನಿ, ಕಂಡಿತ ಇಲ್ಲ. ಹೂವನ್ನು ಹೊಸಕಿ ಹಾಕುವಂತಹ ಒರಟರು ನಾವಲ್ಲ. ನೆಮ್ಮದಿಯಿಂದಿರಿ, ಕಳವಳಿಸಬೇಡಿ. ನೀವಿನ್ನು ವಿಶ್ರಮಿಸಿಕೊಳ್ಳಿ.

(ರಾಜಪುತ್ರಿಯರ ಕಡೆಗೆ ಕಣ್ಣು ಹಾಯಿಸಿ ಅವರಿಗೆ ಸಾಂತ್ವನದ ನುಡಿಗಳನ್ನು ಹೇಳತೊಡಗುತ್ತಾಳೆ. ಆದರೆ ಸತ್ಯವತಿಯ ಮಾತುಗಳನ್ನು ಕೇಳುತ್ತಿದ್ದಂತೆಯೇ ರಾಜಪುತ್ರಿಯರ ಸಂಕಟ ಇಮ್ಮಡಿಸಿ ಬಿಕ್ಕಿ ಬಿಕ್ಕಿ ಅಳತೊಡಗುತ್ತಾರೆ. ಈ ನೋಟ ಸತ್ಯವತಿಯ ಮನವನ್ನು ಗಾಸಿಗೊಳಿಸುತ್ತದೆ. ದರ‍್ಮಸಂಕಟದ ಬೇಗೆಯಲ್ಲಿ ಬೇಯುತ್ತಾ ಸತ್ಯವತಿ ಅಲ್ಲಿಂದ ತೆರಳುತ್ತಾಳೆ)

 

ನೋಟ – 2

[ಅರಮನೆಯಲ್ಲಿನ ಒಂದು ಕೊಟಡಿ. ಆಸನವೊಂದರಲ್ಲಿ ಗಾಂಗೇಯ ಕುಳಿತಿದ್ದಾನೆ. ಸತ್ಯವತಿಯು ಬಂದದ್ದನ್ನು ಕಂಡ ಕೂಡಲೇ ಎದ್ದು ನಿಂತು ತಾಯಿಯನ್ನು ಪ್ರೀತಿಯಿಂದ ಆಹ್ವಾನಿಸುತ್ತಾನೆ]

ಗಾಂಗೇಯ—ಇತ್ತ ಬನ್ನಿ ಚಿಕ್ಕಮ್ಮ. ತಮಗಾಗಿ ಬಹು ಹೊತ್ತಿನಿಂದಲೂ ಕಾಯುತ್ತಿದ್ದೇನೆ.

ಸತ್ಯವತಿ—ನಿನ್ನನ್ನೇ ಕಾಣಬೇಕೆಂಬ ಆತುರದಿಂದ ನಾನೂ ಬಂದಿದ್ದೇನೆ.

ಗಾಂಗೇಯ—ಅಶ್ಟೊಂದು ತುರ‍್ತಾದ ಕಾರ‍್ಯವೇನು ಚಿಕ್ಕಮ್ಮ?

ಸತ್ಯವತಿ—ನೀನು ವಯಸ್ಸಿನಲ್ಲಿ ಕಿರಿಯವನಾಗಿದ್ದರೂ, ಅರಿವಿನಲ್ಲಿ ಹಿರಿಯವನಾಗಿದ್ದೀಯೆ. ನಿನಗೆ ನಾನು ದರ‍್ಮದ ಸ್ವರೂಪವನ್ನು ತಿಳಿಸಲು ಶಕ್ತಳಲ್ಲ. ಆದರೂ…

ಗಾಂಗೇಯ—ತಮ್ಮ ಮನದ ಇಂಗಿತವೇನೆಂಬುದನ್ನು ಮೊದಲು ತಿಳಿಸಿ.

ಸತ್ಯವತಿ—ಗಾಂಗೇಯ, ಅಬಲೆಯರ ಮೇಲೆ ಆಕ್ರಮಣ ಮಾಡಿ, ಅವರನ್ನು ಅಪಹರಿಸಿ ತರಬೇಕಾದ ಅಗತ್ಯವೇನಿತ್ತು? ಅವರ ಮೂಕವೇದನೆಯನ್ನು ಕಂಡು ನನ್ನ ಕರುಳು ಕಿತ್ತು ಬಂದಂತಾಗಿದೆ. ನಿನ್ನ ಈ ವರ‍್ತನೆಗೆ ಕಾರಣವೇನು?

ಗಾಂಗೇಯ—ಮನ್ನಿಸಿ ಚಿಕ್ಕಮ್ಮ, ರಾಜಕಾರಣದಲ್ಲಿ ಅನ್ಯರಿಗೆ ನೋವುಂಟಾಗುವ ಕಾರ‍್ಯವನ್ನು ಕೆಲವೊಮ್ಮೆ ಅನಿವಾರ‍್ಯವಾಗಿ ಮಾಡಬೇಕಾಗುತ್ತದೆ.

ಸತ್ಯವತಿ—(ತುಸು ಕೋಪದಿಂದ) ಹಾಗೆಂದು ಅದಿಕಾರಬಲದಿಂದ, ತೋಳ್ಬಲದಿಂದ ದರ‍್ಮವಿರುದ್ದವಾದ ಕಾರ‍್ಯವನ್ನು ಎಸಗಬಹುದೇ?

ಗಾಂಗೇಯ—ಈ ಕಾರ‍್ಯ ನಿಮ್ಮ ಮನಸ್ಸಿಗೆ ತೀವ್ರವಾದ ನೋವನ್ನುಂಟು ಮಾಡಿದ್ದರೂ, ಅದರ ಹಿಂದಿನ ಆಶಯವನ್ನು ಅರಿತಾಗ, ನೀವು ಆನಂದಪಡುವಿರೆಂದು ತಿಳಿದಿದ್ದೇನೆ.

ಸತ್ಯವತಿ—ಅನ್ಯರನ್ನು ಕಣ್ಣೀರಿನಲ್ಲಿ ಕಯ್ ತೊಳಿಸಿ, ಅದಾವ ಬಗೆಯ ಆನಂದವನ್ನು ನಾವು ಪಡೆಯಬಹುದು.

ಗಾಂಗೇಯ—ಯಾರ ಅಳುವೂ, ಯಾರ ನಗುವೂ ಈ ಪ್ರಪಂಚದಲ್ಲಿ ಶಾಶ್ವತವಲ್ಲ ಚಿಕ್ಕಮ್ಮ. ಎಲ್ಲವೂ ಒಂದೊಂದು ಗಳಿಗೆಯ ಆಟಗಳಶ್ಟೆ!

ಸತ್ಯವತಿ—ನಿನ್ನ ಮಾತಿನ ಆಳವನ್ನು ಅರಿಯುವಶ್ಟು ಶಕ್ತಿ ನನಗಿಲ್ಲ. ನೀನು ಎಳೆದು ತಂದಿರುವ ಆ ಹೆಣ್ಣುಗಳ ಗತಿಯೇನೆಂಬುದನ್ನು ತಿಳಿಸುವೆಯಾ?

ಗಾಂಗೇಯ—ಅವರನ್ನು ತಮ್ಮ ಸೊಸೆಯರನ್ನಾಗಿ ಪಡೆಯಲಿದ್ದೀರಿ ಚಿಕ್ಕಮ್ಮ.

ಸತ್ಯವತಿ—ಏನೆಂದೆ?

ಗಾಂಗೇಯ—ವಿಚಿತ್ರವೀರ‍್ಯನ ಕಯ್ ಹಿಡಿದು ರಾಣಿಯರಾಗುವ ಅವಕಾಶ ಅವರಿಗೆ ದೊರಕಿದೆ.

ಸತ್ಯವತಿ—ಹಾಗಿದ್ದರೆ ಸ್ವಯಂವರ ಮಂಟಪಕ್ಕೆ ರಾಜಕುಮಾರನನ್ನೇ ಕಳುಹಿಸಬಹುದಾಗಿತ್ತು!

ಗಾಂಗೇಯ—ರಾಜಕಾರಣದ ಒಳಸಂಚುಗಳನ್ನು ತಿಳಿಯದೆ ನೀವು ಮುಗ್ದ ಮನಸ್ಸಿನಿಂದ ಮಾತನಾಡುತ್ತಿದ್ದೀರಿ.

ಸತ್ಯವತಿ—ಅಂದರೆ…ನಿನ್ನ ಮಾತನ್ನು ವಿವರಿಸಿ ಹೇಳು.

ಗಾಂಗೇಯ—ಸುತ್ತಮುತ್ತಲಿನ ನೂರಾರು ರಾಜರಿಗೆ ಸ್ವಯಂವರದ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ ಕಾಶಿರಾಜನ ಮನದಲ್ಲಿ ಹಸ್ತಿನಾಪುರದ ಅರಸು ಆಹ್ವಾನಯೋಗ್ಯನಾಗಿರಲಿಲ್ಲವಂತೆ! ಆತ ನಮ್ಮ ರಾಜರಿಗೆ ಆಹ್ವಾನವನ್ನೇ ನೀಡದಿದ್ದಾಗ ಅಲ್ಲಿಗೆ ಕಳುಹಿಸುವುದು ಹೇಗೆ?…ಚಿಕ್ಕಮ್ಮ.

ಸತ್ಯವತಿ—ನೀಡದಿರಲು ಕಾರಣ!

ಗಾಂಗೇಯ—(ಹೇಳಲು ತುಸು ಹಿಂಜರಿಯುತ್ತಾನೆ)

ಸತ್ಯವತಿ—ಚಂದ್ರವಂಶದ ಅರಸನನ್ನು ಕಡೆಗಣಿಸುವುದಕ್ಕೆ ಕಾರಣವೇನಂತೆ? ನನ್ನ ಮಗನಲ್ಲಿ ಯಾವ ಕುಂದನ್ನು ಕಂಡನಂತೆ?

ಗಾಂಗೇಯ—ಅತಿಯಾದ ಊಹಾಪೋಹದಿಂದ ಕೆಟ್ಟ ಕಲ್ಪನೆಯೊಂದನ್ನು ಕಟ್ಟಿಕೊಂಡು ಆತ ವಿಚಿತ್ರವೀರ‍್ಯನನ್ನು ಕಡೆಗಣಿಸಿದನೆಂದು ಗೂಡಚಾರರಿಂದ ನಮಗೆ ತಿಳಿದು ಬಂದಿತು.

ಸತ್ಯವತಿ—ಅದೇನೆಂಬುದನ್ನು ಬೇಗ ಹೇಳು?

ಗಾಂಗೇಯ—ಕಾರಣವನ್ನು ತಿಳಿದು ತಾಯಕರುಳಿಗೆ ನೋವಾಗುವುದೇನೋ ಎಂಬ ಶಂಕೆ ನನ್ನನ್ನು ಕಾಡುತ್ತಿದೆ.

ಸತ್ಯವತಿ—ಗಾಂಗೇಯ, ನೋವು ಜೀವನದ ಅನಿವಾರ‍್ಯ ಅಂಗವಲ್ಲವೇ? ಅದೇನೆಂದು ಹೇಳು.

ಗಾಂಗೇಯ—“ವಿಚಿತ್ರವೀರ‍್ಯನ ಅಣ್ಣ ಚಿತ್ರಾಂಗದನು ಗಂದರ‍್ವರೊಡನೆ ನಡೆದ ಯುದ್ದದಲ್ಲಿ ಅಕಾಲಮರಣಕ್ಕೆ ತುತ್ತಾಗಿರುವುದರಿಂದ, ಆತನ ತಮ್ಮನಾದ ವಿಚಿತ್ರವೀರ‍್ಯನೂ ಇಂದಲ್ಲ ನಾಳೆ ಗಂದರ‍್ವರ ಕೋಪಕ್ಕೆ ಬಲಿಯಾಗಬೇಕಾಗುತ್ತದೆ. ಆದ್ದರಿಂದ ಗಂದರ‍್ವರ ಕೋಪಕ್ಕೆ ಗುರಿಯಾಗಿರುವ ರಾಜವಂಶಕ್ಕೆ ನನ್ನ ಮಕ್ಕಳನ್ನು ಕೊಡುವುದು ಉಚಿತವಲ್ಲವೆಂದು” ನಿರಾಕರಿಸಿದನಂತೆ.

ಸತ್ಯವತಿ—ನನ್ನ ಮಗನ ಜೀವಿತವನ್ನೇ ಕಿರಿದೆಂದು ಬಾವಿಸಿದನೆ ಪಾಪಿ.

ಗಾಂಗೇಯ—ತನ್ನ ಹೆಣ್ಣು ಮಕ್ಕಳ ಮೇಲಣ ಮೋಹ ಅದಕ್ಕೆ ಕಾರಣವಿರಬೇಕು.

ಸತ್ಯವತಿ—ತಮ್ಮ ಮಕ್ಕಳ ಬಗ್ಗೆ ಇರುವ ಮೋಹದಿಂದ ಅನ್ಯರ ಮಕ್ಕಳನ್ನು ಕಡೆಗಣಿಸುವುದು ಸರಿಯೇ?

ಗಾಂಗೇಯ—ಆದ್ದರಿಂದಲೇ ಅವನಿಗೆ ತಕ್ಕ ಬುದ್ದಿಯನ್ನು ಕಲಿಸಲೆಂದು ಈ ಕಾರ‍್ಯವನ್ನು ಎಲ್ಲರೂ ನೆರೆದಿದ್ದ ಸ್ವಯಂವರ ಮಂಟಪದಲ್ಲಿ ಮಾಡಬೇಕಾಯಿತು ಚಿಕ್ಕಮ್ಮ.

ಸತ್ಯವತಿ—ನಿನ್ನ ತೋಳ್ಬಲದ ಪ್ರದರ‍್ಶನ ನಮ್ಮ ರಾಜವಂಶದ ದೊಡ್ಡತನವನ್ನು ಎತ್ತಿ ಹಿಡಿದಿದೆ. ಆದರೆ ಮುಗ್ದೆಯರ ಬಾಳನ್ನು ಸಂಕಟಕ್ಕೀಡು ಮಾಡಿರುವೆಯಲ್ಲಾ?

ಗಾಂಗೇಯ—ತಂದೆ ಮಾಡಿದ ತಪ್ಪಿಗೆ ಮಕ್ಕಳು ಪಾಲುದಾರರಾಗಬೇಕಲ್ಲವೇ?…ಚಿಕ್ಕಮ್ಮ.

ಸತ್ಯವತಿ—[ಏನನ್ನೋ ನೆನೆದುಕೊಂಡು, ನೋವಿನಿಂದ ಕೂಡಿದ ನಗೆ ನಕ್ಕು ಸುಮ್ಮನಾಗುತ್ತಾಳೆ]

ಗಾಂಗೇಯ—ಆದಶ್ಟು ಬೇಗ ಮಂಗಳಮಂಟಪದಲ್ಲಿ ಮದುಮಕ್ಕಳನ್ನು ಸಿಂಗರಿಸಲು ಅನುಮತಿ ನೀಡಿ.

ಸತ್ಯವತಿ—ನಿನ್ನ ಆತುರಕ್ಕಿಶ್ಟು ಕಡಿವಾಣ ಹಾಕಿ, ನನ್ನದೊಂದು ಮಾತನ್ನು ನಡೆಸಿಕೊಡುವೆಯಾ?

ಗಾಂಗೇಯ—ಏನೆಂಬುದನ್ನು ತಿಳಿಸಿ.

ಸತ್ಯವತಿ—ಆ ರಾಜಪುತ್ರಿಯರ ಮನದ ಇಂಗಿತವನ್ನು ಒಮ್ಮೆ ಕೇಳೋಣ. ಅವರ ಒಪ್ಪಿಗೆಯೂ ಬೇಕಲ್ಲವೇ?

ಗಾಂಗೇಯ—ತಮ್ಮ ಇಚ್ಚೆಯಂತೆಯೇ ಆಗಲಿ.

ಸತ್ಯವತಿ—ನನ್ನ ನೂರು ಜನ್ಮದ ಪುಣ್ಯಪಲದಿಂದಲೇ ನಿನ್ನಂತಹ ಮಗನನ್ನು ಪಡೆದಿರುವೆ.

ಗಾಂಗೇಯ—ಇದೇನು ಚಿಕ್ಕಮ್ಮ, ನಿಂದಿಸಲೆಂದು ಬಂದವರು ಹೊಗಳಿಬಿಟ್ಟಿರಲ್ಲ!

ಸತ್ಯವತಿ—ನಿನ್ನ ಗುಣ ಅಂತಹುದಪ್ಪ.

[ಇಬ್ಬರೂ ಮುಗುಳ್ ನಗುತ್ತಾ ಅಲ್ಲಿಂದ ತೆರಳುತ್ತಾರೆ]

 

ನೋಟ- 3

[ರಾಣಿವಾಸಕ್ಕೆ ಹೊಂದಿಕೊಂಡಿರುವ ಉದ್ಯಾನವೊಂದರಲ್ಲಿ ಹಸಿರು ಹುಲ್ಲಿನ ಹಾಸಿನ ಮೇಲೆ ಇಬ್ಬರು ಸಕಿಯರು ಕುಳಿತಿದ್ದಾರೆ. ಅವರ ಮೊಗದ ಮೇಲೆ ಯಾವುದೋ ಚಿಂತೆ ಕವಿದಿದೆ. ಆಗ ಅಲ್ಲಿಗೆ ಮತ್ತೊಬ್ಬಳು ಬರುತ್ತಾಳೆ]

ಸುಮ—ಏನ್ರೇ, ಮೂಗಿಯರಂತೆ ಕುಳಿತಿದ್ದೀರಿ! ನಿಮಗೂ ಮದುವೆ ಹುಚ್ಚು ಹಿಡಿಯಿತೇನು?

(ಸುಮ ಮಾಡಿದ ಹಾಸ್ಯದಿಂದ ಅವರ ಮೊಗದಲ್ಲಿ ನಗೆ ಚಿಮ್ಮುವುದಿಲ್ಲ. ಎಲ್ಲರೂ ಸುಮ್ಮನಿರುತ್ತಾರೆ.)

ಸುಮ—ಇವತ್ತೇನಾಗಿದೆ ನಿಮಗೆ ? ದೆವ್ವ ಹಿಡಿದವರಂತೆ ಕುಳಿತಿದ್ದೀರಲ್ಲ? ಲೇ ಸರೋಜ, ನೀನೂ ಹೀಗೆ ನಾಲಿಗೆ ಬಿಗಿಹಿಡಿದಿರಬೇಕಾದರೆ, ಈ ದಿನ ಕಂಡಿತ ಪ್ರಳಯ ಆಗುತ್ತೆ ಕಣೆ.

ಸರೋಜ—ಸುಮ್ನಿರೆ ಸುಮ, ಎಲ್ಲಾ ಸಮಯದಲ್ಲೂ ನೀನೊಂದೇ ರೀತಿ ಆಡ್ತೀಯಮ್ಮ.

ಸುಮ—(ಅವರತ್ತ ಮತ್ತೊಮ್ಮೆ ಕಣ್ಣಾಡಿಸಿ, ಸ್ವಲ್ಪ ಗಾಬರಿಯಿಂದ) ಏನ್ರೇ? ಯಾಕೆ ಹೀಗಿದ್ದೀರಾ?….ನಿಮ್ಮನ್ನು ನೋಡುದ್ರೆ, ನಂಗ್ಯಾಕೋ ಒಂದು ರೀತಿ ಗಾಬರಿ ಆಗುತ್ತಪ್ಪ.

ನಳಿನಿ—ಏನೂ ಇಲ್ಲ ಬಾರೆ. ಯಾಕೆ ಈ ರೀತಿ ಚಡಪಡಿಸ್ತೀಯಾ?

ಸುಮ—ನೀವೆಲ್ಲಾ ಮಂಕು ಹಿಡಿದವರಂತೆ ಕುಳಿತಿದ್ದರೆ, ನಾನು ಇನ್ನೇನ್ ತಾನೆ ಮಾಡ್ಬೇಕು?

ನಳಿನಿ—ಮಂಕು ನಮಗೆ ಮಾತ್ರವಲ್ಲ; ಎಲ್ಲರಿಗೂ ಹಿಡಿದಿದೆ.

ಸುಮ—ತೂ… ಹೋಗ್ರೆ, ಬರೀ ಒಗಟನ್ನೇ ಆಡ್ತಾ ಇದ್ದೀರಿ. ನಿಮಗೆಲ್ಲಾ ಬಹಳ ಜಂಬ ಕಣ್ರೆ. ಮೂರು ದಿನ ಊರಿನಲ್ಲಿ ಇಲ್ಲದಿದ್ದಕ್ಕೆ ನನ್ನನ್ನು ಹೊಸಬಳೆಂದೇ ತಿಳಿದಿದ್ದೀರಲ್ಲ! ಅದೇನಾಗಿದೆ ಹೇಳ್ರೆ.

ನಳಿನಿ—ನೀನು ಪುಣ್ಯವಂತೆ ಕಣೆ. ಇಲ್ಲಿದ್ದು ಅದನ್ನೆಲ್ಲಾ ನೋಡಿ ಸಂಕಟ ಪಡುವುದಕ್ಕಿಂತ ದೂರವಿದ್ದುದು ಒಳ್ಳೇದೆ ಆಯ್ತು.

ಸುಮ—ಅಂತಹ ಸಂಗತಿ ಏನು ನಡೀತು?

ಸರೋಜ—ಕಾಶಿರಾಜಪುತ್ರಿಯರನ್ನು ಗಾಂಗೇಯರು ಸ್ವಯಂವರ ಮಂಟಪದಿಂದ ಅಪಹರಿಸಿ ತಂದಿದ್ದು ನಿನಗೆ ಗೊತ್ತಿಲ್ಲವೆ?

ಸುಮ—ಗೊತ್ತು.

ಸರೋಜ—ಅನಂತರ ರಾಜಮಾತೆಯವರು ಅವರನ್ನು ತಮ್ಮ ಸೊಸೆಯರಾಗಿರೆಂದು ಕೇಳಿಕೊಂಡರು.

ಸುಮ—ಅಂತಹ ಚೆಲುವೆಯರನ್ನು ಯಾರಿಗೆ ತಾನೇ ಸೊಸೆಯರನ್ನಾಗಿ ಪಡೆಯಲು ಇಶ್ಟವಿರುವುದಿಲ್ಲ!…ಆಮೇಲೆ.

ಸರೋಜ—ರಾಜಮಾತೆಯವರ ಮಾತಿಗೆ ಅವರಲ್ಲಿ ಒಬ್ಬರಾದರೂ ತುಟಿಪಿಟಿಕ್ ಅನ್ನಲಿಲ್ಲ.

ಸುಮ—ಏನು ಮಾಡುತ್ತಿದ್ದರು?

ಸರೋಜ—ದಿನವಿಡೀ ಅಳುತ್ತಿದ್ದರೇ ಹೊರತು, ಯಾವೊಂದು ಮಾತನ್ನೂ ಆಡಲಿಲ್ಲ. ರಾಜಮಾತೆಯವರು ಒಲವಿನ ನುಡಿಗಳಿಂದ ಅವರನ್ನು ಸಂತಯಿಸುತ್ತಾ “ನಿಮಗೆ ನನ್ನ ಮಗನ ಕಯ್ ಹಿಡಿಯುವ ಮನಸ್ಸಿಲ್ಲದಿದ್ದರೆ ಮದುವೆಯ ಪ್ರಸ್ತಾಪವನ್ನೇ ನಾವು ಕಯ್ ಬಿಡುತ್ತೇವೆ. ನೀವು ಅಳಬೇಡಿ. ನಿಮ್ಮ ಇಚ್ಚೆಯೇನೆಂಬುದನ್ನು ತಿಳಿಸಿ. ಯಾವ ಬಗೆಯಲ್ಲೂ ಅಳುಕಬೇಡಿ” ಎಂದು ಮತ್ತೆ ಮತ್ತೆ ಕೇಳಿಕೊಂಡರು.

ನಳಿನಿ—ಅಬ್ಬಾ! ಅಕ್ಕತಂಗಿಯರ ಆ ಸಂಕಟ ಎಂತಹವರ ಕರುಳನ್ನು ಕರಗಿಸುವಂತಿತ್ತು.

ಸುಮ—ಪಾಪ! ಅವರಾಶೆ ಏನೇನಿತ್ತೋ?

ಸರೋಜ—ಯಾವ ಉತ್ತರವೂ ಬಾರದಿದ್ದಾಗ, ರಾಜಮಾತೆಯವರು ಮದುವೆಯ ಮಾತನ್ನೇ ಕಯ್ ಬಿಡುವುದರಲ್ಲಿದ್ದರು.

ನಳಿನಿ—ಆದರೆ ಗಾಂಗೇಯರು ಮದುವೆಯು ನಡೆಯಲೇಬೇಕೆಂದು ತಾಯಿಗೆ ಒತ್ತಾಯ ಮಾಡಿದರಂತೆ.

ಸುಮ—ತಾವು ಮದುವೆಯಾಗದಿದ್ದರೂ, ಬೇರೆಯವರಿಗೆ ಮದುವೆ ಮಾಡಿಸುವುದರಲ್ಲಿ ಗಾಂಗೇಯರು ಎತ್ತಿದ ಕಯ್. ಅನಂತರ ಏನಾಯ್ತು?

ಸರೋಜ—ರಾಜಮಾತೆಯವರು ಇನ್ನೇನು ಮಾಡುತ್ತಾರೆ? ಗಾಂಗೇಯರ ಮಾತನ್ನು ಮೀರಲಾಗದೆ, ರಾಜಪುತ್ರಿಯರನ್ನು ಸ್ವಲ್ಪ ಒತ್ತಾಯದಿಂದಲೇ ಮತ್ತೆ ಮತ್ತೆ ಕೇಳಿದಾಗ, ಅವರಲ್ಲಿ ಹಿರಿಯವಳು ಮಾತ್ರ ಬಾಯಿ ಬಿಟ್ಟಳು.

ಸುಮ—ಏನೆಂದು?

ಸರೋಜ—ತಾನು ಗಾಂಗೇಯರನ್ನು ಮದುವೆಯಾಗುತ್ತೇನೆಂದು.

ಸುಮ—ಏನೆಂದೆ?

ಸರೋಜ—ಹೂ ಕಣೆ…ಗಾಂಗೇಯರನ್ನು ವರಿಸುತ್ತೇನೆಂದಳು.

ಸುಮ—ಅಯ್ಯೋ! ಅವಳಿಗೆ ಗೊತ್ತಿರಲಿಲ್ಲವೇನೆ? ಅವರು ಕಟ್ಟಾ ಬ್ರಹ್ಮಚಾರಿಗಳೆಂದು.

ಸರೋಜ—ಗೊತ್ತಿತ್ತೋ…ಗೊತ್ತಿಲ್ಲವೋ…ಅಂತೂ ರಾಜಮಾತೆಯವರ ಪ್ರಶ್ನೆಗೆ ಅವಳದೊಂದೇ ಉತ್ತರ.

ಸುಮ—ಗಾಂಗೇಯರು ಏನೆಂದರು?

ಸರೋಜ—ರಾಣಿವಾಸಕ್ಕೆ ಅವರ‍್ಯಾಕೆ ಬರುತ್ತಾರೆ? ರಾಜಮಾತೆಯೊಬ್ಬರೇ ವಿಚಾರಿಸುತ್ತಿದ್ದರು.

ನಳಿನಿ—ಗಾಂಗೇಯರ ವ್ರತವನ್ನು ಆಕೆಗೆ ತಿಳಿಸಿ, ಈ ಜನ್ಮದಲ್ಲಿ ಅವರು ಯಾವ ಕಾರಣದಿಂದಲೂ ಯಾವ ಹೆಣ್ಣನ್ನೂ ಕೈ ಹಿಡಿಯುವುದಿಲ್ಲವೆಂದು ರಾಜಮಾತೆ ಹೇಳಿದರು.

ಸರೋಜ—ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆಕೆ ಮಾತ್ರ ಗಾಂಗೇಯರ ನಾಮಸ್ಮರಣೆಯನ್ನಲ್ಲದೆ ಮತ್ತೇನನ್ನೂ ಆಡಲಿಲ್ಲ.

ಸುಮ—ಇನ್ನು ಉಳಿದವರಿಬ್ಬರು!

ಸರೋಜ—ಅತ್ತು ಅತ್ತು ಸೊರಗಿದ್ದ ಅವರಿಗೆ ಆ ಮಾತುಕತೆಯು ದಿಕ್ಕುತೋಚದಂತೆ ಮಾಡಿತ್ತು.

ನಳಿನಿ—ಅವರಿಬ್ಬರ ಮನದ ಇಂಗಿತವನ್ನು ತಿಳಿಯಲು ರಾಜಮಾತೆ ಎಶ್ಟೇ ಪ್ರಯತ್ನ ಮಾಡಿದರೂ ಅವರು ಏನೊಂದನ್ನು ಆಡಲಿಲ್ಲ.

ಸರೋಜ—ರಾಣಿವಾಸದಲ್ಲಿ ನಡೆದದ್ದನ್ನೆಲ್ಲಾ ಗಾಂಗೇಯರಿಗೆ ರಾಜಮಾತೆಯವರು ಹೇಳಿದರಂತೆ.

ನಳಿನಿ—ಅದಕ್ಕೆ ಗಾಂಗೇಯರು “ಸುಮ್ಮನಿರುವುದು ಒಪ್ಪಿಗೆಯ ಸೂಚಕ”ವೆಂದು ಹೇಳಿ, ವಿಚಿತ್ರವೀರ‍್ಯನೊಡನೆ ಕಿರಿಯರಿಬ್ಬರ ಮದುವೆಯನ್ನು ಮಾಡಿಸಿದರು.ನಮಗೀಗ ಅವರು ರಾಣಿಯರಾಗಿದ್ದಾರೆ.

ಸುಮ—ಅವರ ಹೆಸರೇನೆ?

ನಳಿನಿ—ಅಂಬಿಕೆ, ಅಂಬಾಲಿಕೆ.

ಸುಮ—ಹಿರಿಯವಳ ಹೆಸರು?

ಸರೋಜ—ಅಂಬೆ.

ನಳೀನಿ—ಅವಳೆಶ್ಟು ರೂಪಸಿಯೇ! ತಂಗಿಯರಿಗಿಂತಲೂ ಅಂಬೆಯೇ ಅಂದಚೆಂದದ ಚೆಲುವೆ. ಅಬ್ಬಾ! ಅಮ್ರುತಶಿಲೆಯಲ್ಲಿ ಕಡೆದಿರುವ ಶಿಲಾಬಾಲಿಕೆಯಂತೆ ಇದ್ದಾಳಲ್ಲವೇನೆ?

ಸರೋಜ—ನಾನೇನಾದರೂ ಗಾಂಗೇಯರಂತೆ ಗಂಡಾಗಿದ್ದರೆ, ಬ್ರಹ್ಮಚರ‍್ಯವನ್ನು ಗಾಳಿಗೆ ತೂರಿ, ಅಂಬೆಯ ಕಯ್ ಹಿಡಿಯುತ್ತಿದ್ದೆ.

(ಎಲ್ಲರೂ ನಗುತ್ತಾರೆ. ಅಶ್ಟರಲ್ಲಿ ರಾಜಮಾತೆ ಸತ್ಯವತಿ ದೇವಿಯವರು ರಾಣಿವಾಸಕ್ಕೆ ಹೊಂದಿಕೊಂಡಿದ್ದ ದೇವಾಲಯಕ್ಕೆ ಹೋಗಲು ತಮ್ಮ ಇಬ್ಬರು ಸೊಸೆಯಂದಿರ ಜೊತೆಗೂಡಿ ಇತ್ತ ಬರುತ್ತಿದ್ದಾರೆ. ಅವರನ್ನು ಕಂಡಕೂಡಲೇ ಸಕಿಯರೆಲ್ಲರೂ ಬೇಗ ಬೇಗನೆ ಚದುರಿ ಉದ್ಯಾನವನದಲ್ಲಿ ಹೂಗಳನ್ನು ಬಿಡಿಸುವುದರಲ್ಲಿ ಮಗ್ನರಾಗುತ್ತಾರೆ)

(ಎರಡನೇ ಅಂಕ ನಾಳೆ ಮೂಡಿಬರುತ್ತದೆ)

( ಚಿತ್ರ ಸೆಲೆ: en.wikipedia.org )

2 ಅನಿಸಿಕೆಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.