ಅಕ್ಕಮಹಾದೇವಿಯ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.

 

ಪಂಚೇಂದ್ರಿಯಂಗಳೊಳಗೆ
ಒಂದಕ್ಕೆ ಪ್ರಿಯನಾದಡೆ ಸಾಲದೆ
ಸಪ್ತವ್ಯಸನಂಗಳೊಳಗೆ
ಒಂದಕ್ಕೆ ಪ್ರಿಯನಾದಡೆ ಸಾಲದೆ
ರತ್ನದ ಸಂಕಲೆಯಾದಡೇನು
ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ.

ಮಾನವ ಜೀವಿಯ ಮಯ್ ಮನಗಳಲ್ಲಿ ಮೂಡುವ ಕೆಟ್ಟ ಬಯಕೆ ಮತ್ತು ಚಟಗಳು ಅವನ ಇಡೀ ಬದುಕನ್ನೇ ಬಲಿತೆಗೆದುಕೊಳ್ಳುತ್ತವೆ ಎಂಬುದನ್ನು ತಿಳಿಸುತ್ತಾ, ವ್ಯಕ್ತಿಯು ತನ್ನ ಮಯ್ ಮನಗಳ ಒಲವು ನಲಿವುಗಳಿಗೆ ಕಾರಣವಾಗಿರುವ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು, ಸಪ್ತವ್ಯಸನಗಳಿಂದ ದೂರವಾಗಿ ಬಾಳಬೇಕು ಎಂಬ ಇಂಗಿತವನ್ನು ಈ ವಚನದಲ್ಲಿ ಸೂಚಿಸಲಾಗಿದೆ.

(ಪಂಚ+ಇಂದ್ರಿಯಂಗಳ+ಒಳಗೆ ; ಪಂಚ=ಅಯ್ದು ; ಇಂದ್ರಿಯ=ನೋಟ-ಶಬ್ದ-ಕಂಪು-ರುಚಿ-ಮುಟ್ಟುವಿಕೆಯ ಅರಿವನ್ನು ಪಡೆಯಲು ಕಾರಣವಾಗುವ ಅಂಗ ; ಇಂದ್ರಿಯಂಗಳ=ಇಂದ್ರಿಯಗಳ ; ಪಂಚೇಂದ್ರಿಯಗಳು=ಕಣ್ಣು-ಕಿವಿ-ಮೂಗು-ನಾಲಗೆ-ತೊಗಲು ಎಂಬ ಅಯ್ದು ಅಂಗಗಳು ; ಒಳಗೆ=ಇವುಗಳಲ್ಲಿ ; ಒಂದಕ್ಕೆ=ಒಂದು ಇಂದ್ರಿಯಕ್ಕೆ ; ಪ್ರಿಯನು+ಆದಡೆ ;
ಪ್ರಿಯ=ಒಲವು/ಮಮತೆ/ಅಕ್ಕರೆ; ಆದಡೆ=ಆದರೆ ; ಒಂದಕ್ಕೆ ಪ್ರಿಯನಾದಡೆ=ಅಯ್ದು ಇಂದ್ರಿಯಗಳಲ್ಲಿ ಯಾವುದಾದರೂ ಒಂದು ಇಂದ್ರಿಯದ ಸೆಳತಕ್ಕೆ ಹೆಚ್ಚಾಗಿ ಸಿಲುಕಿದರೆ/ಒಳಗಾದರೆ; ಅಂದರೆ ಕಣ್ಣಿನ ಮೂಲಕ ಕೆಟ್ಟ ನೋಟಗಳನ್ನೇ ನೋಡುತ್ತಿರುವುದು/ಕಿವಿಯ ಮೂಲಕ ಕೆಟ್ಟ ಸುದ್ದಿಗಳನ್ನೇ ಕೇಳುತ್ತಿರುವುದು/ಮೂಗಿನ ಮೂಲಕ ಕೆಟ್ಟ ವಾಸನೆಯನ್ನೇ ಮೂಸಿಸುತ್ತಿರುವುದು/ನಾಲಗೆಯ ಮೂಲಕ ಕೆಟ್ಟರುಚಿಯನ್ನೇ ಸವಿಯುತ್ತಿರುವುದು/ತೊಗಲಿನ ಮೂಲಕ ಕೆಟ್ಟದ್ದನ್ನೇ ಮುಟ್ಟಿ ಮುದಗೊಳ್ಳುತ್ತಿರುವುದು ; ಸಾಲದೆ=ಸಾಕಲ್ಲವೇ ; ಒಂದಕ್ಕೆ ಪ್ರಿಯನಾದಡೆ ಸಾಲದೆ=ಒಂದು ಇಂದ್ರಿಯದ ಚಪಲತೆಗೆ ಗುರಿಯಾದರೂ ಸಾಕು , ಅಂತಹ ವ್ಯಕ್ತಿಯು ಸಾಮಾಜಿಕವಾಗಿ ಕೆಟ್ಟ ನಡೆನುಡಿಗಳಿಂದ ವರ‍್ತಿಸುತ್ತಾ , ತಾನೇ ತನ್ನ ಕಯ್ಯಾರ ಬದುಕನ್ನು ಹಾಳುಮಾಡಿಕೊಳ್ಳುತ್ತಾನೆ ಹಾಗೂ ತನ್ನನ್ನು ನಂಬಿದವರ ಬಾಳನ್ನು ನೋವುಸಂಕಟಗಳಿಗೆ ದೂಡುತ್ತಾನೆ ಎಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತವೆ ;

ಸಪ್ತ+ವ್ಯಸನಂಗಳ+ಒಳಗೆ ; ಸಪ್ತ=ಏಳು ; ವ್ಯಸನ=ಗೀಳು/ಚಟ ; ವ್ಯಸನಂಗಳು=ವ್ಯಸನಗಳು ; ಸಪ್ತವ್ಯಸನಗಳು=ಏಳು ಬಗೆಯ ಚಟಗಳು-1)ಹಾದರ/ಹೆಣ್ಣುಗಂಡುಗಳ ಸಮಾಜ ಒಪ್ಪಿತವಲ್ಲದ ಕಾಮದ ನಂಟು 2)ಜೂಜು/ಸಂಪತ್ತನ್ನು ಒಡ್ಡಿ ಆಡುವ ಆಟ 3)ಬೇಟೆ/ಪ್ರಾಣಿಪಕ್ಶಿಗಳನ್ನು ಸೆರೆ ಹಿಡಿಯುವುದು ಮತ್ತು ಕೊಲ್ಲುವುದು 4)ಕುಡಿತ/ಮಾದಕ ಪಾನೀಯಗಳ ಸೇವನೆ 5)ಬಿರುನುಡಿ/ಬಯ್ಗುಳ/ಇತರರ ಮನಸ್ಸನ್ನು ನೋಯಿಸುವಂತೆ ಕೆಟ್ಟ ಮಾತುಗಳನ್ನಾಡುವುದು 6)ದಂಡನೆ/ಪೀಡನೆ/ಕಿರುಕುಳ/ಇತರರ ಮಯ್ ಮನಗಳಿಗೆ ಪೆಟ್ಟನ್ನು ನೀಡಿ ಗಾಸಿಗೊಳಿಸುವಿಕೆ 7)ಕಳ್ಳತನ/ಸಹಮಾನವರ ಮತ್ತು ಸಮಾಜದ ಆಸ್ತಿಪಾಸ್ತಿ/ಒಡವೆವಸ್ತು/ಹಣಕಾಸನ್ನು ದೋಚುವುದು/ಲಪಟಾಯಿಸುವುದು ; ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ=ಹಾದರ/ಜೂಜು/ಬೇಟೆ/ಕುಡಿತ/ಬಿರುನುಡಿ/ದಂಡನೆ/ಕಳ್ಳತನವೆಂಬ ಈ ಏಳುಬಗೆಯ ಕೆಟ್ಟ ನಡೆನುಡಿಗಳಲ್ಲಿ ಯಾವುದಾದರೂ ಒಂದನ್ನು ಚಟವನ್ನಾಗಿ ಮಾಡಿಕೊಂಡರೆ ಸಾಕು, ಅಂತಹ ವ್ಯಕ್ತಿಯ ಬದುಕು ದುರಂತದಲ್ಲಿ ಕೊನೆಗೊಳ್ಳುತ್ತದೆ ;

ರತ್ನ=ಬೆಲೆಬಾಳುವ ಹರಳು/ವಜ್ರ/ಮಣಿ ; ಸಂಕಲೆ+ಆದಡೆ+ಏನು; ಸಂಕಲೆ=ಬೇಡಿ/ಕಬ್ಬಿಣದ ಸರಪಣಿ/ಕೋಳ ; ಆದಡೆ+ಏನು ; ಆದಡೇನು=ಆಗಿದ್ದರೇನು; ಬಂಧನ=ಸೆರೆಗೆ ಒಳಗಾಗುವುದು/ಕಟ್ಟಿಗೆ ಸಿಲುಕುವುದು/ಹಿಡಿತಕ್ಕೆ ಗುರಿಯಾಗುವುದು ; ಬಿಡುವುದೆ=ಹೋಗುವುದೆ ; ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ =ವ್ಯಕ್ತಿಗೆ ತೊಡಿಸಿರುವ ಬೇಡಿಯು ರತ್ನದ ಮಣಿಗಳಿಂದ ಕಂಗೊಳಿಸುತ್ತಿದ್ದರೇನು, ಅದು ಅವನನ್ನು ಕಟ್ಟಿಹಾಕಿದೆಯಲ್ಲದೆ , ಅವನ ಬಿಡುಗಡೆಗೆ ನೆರವಾಗುವುದಿಲ್ಲ. ಸಿರಿವಂತಿಕೆಯ ನೆಲೆಯಲ್ಲಿರುವ ವ್ಯಕ್ತಿಗಳು ಹಣವನ್ನು ಚೆಲ್ಲುತ್ತಾ ಬೆಳೆಸಿಕೊಂಡಿರುವ ಚಟಗಳು ಹೊರನೋಟಕ್ಕೆ ಅದ್ದೂರಿಯಾಗಿ/ಆಡಂಬರದಿಂದ ಕಂಗೊಳಿಸಿದರು , ಒಳಗೊಳಗೆ ಅವರನ್ನು ನಾಶ ಮಾಡುತ್ತಿರುತ್ತವೆ ಎಂಬ ಸಂಗತಿಯನ್ನು ಈ ರೂಪಕವು ಸೂಚಿಸುತ್ತದೆ)

ನಡೆಯದ ನುಡಿಗಡಣ ಮಾಡದ ಕಲಿತನ
ಚಿತ್ರದ ಸತಿಯ ಶೃಂಗಾರವದೇತಕ್ಕೆ ಪ್ರಯೋಜನ
ಎಲೆಯಿಲ್ಲದ ಮರನು ಜಲವಿಲ್ಲದ ನದಿಯು
ಗುಣಿಯಲ್ಲದ ಅವಗುಣಿಯ
ಸಂಗವದೇತಕ್ಕೆ ಪ್ರಯೋಜನ
ದಯವಿಲ್ಲದ ಧರ್ಮವು ಉಭಯವಿಲ್ಲದ ಭಕ್ತಿಯು
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ
ಎನ್ನ ದೇವ ಚೆನ್ನಮಲ್ಲಿಕಾರ್ಜುನಾ.

ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳನ್ನು ವ್ಯಕ್ತಿಯು ಹೊಂದದಿದ್ದರೆ , ಅಂತಹ ಬಾಳ್ವೆಯಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಹೇಳಲಾಗಿದೆ.

(ನಡೆ=ನಡವಳಿಕೆ/ಆಚರಣೆ/ವರ‍್ತನೆ/ಕೆಲಸ ಮಾಡುವಿಕೆ; ನುಡಿ=ಮಾತು/ಸೊಲ್ಲು ; ಗಡಣ=ಗುಂಪು/ಸಮೂಹ/ರಾಶಿ ; ನಡೆಯದ ನುಡಿಗಡಣ=ಜೀವನದ ನಿತ್ಯ ವ್ಯವಹಾರಗಳಲ್ಲಿ ಇತರರಿಗೆ ಒಳಿತನ್ನು ಮಾಡದೆ , ಸತ್ಯ/ನೀತಿ/ನಿಯಮ/ಆದರ‍್ಶದ ಮಾತುಗಳನ್ನು ಮಾತ್ರ ಸದಾಕಾಲ ಆಡುತ್ತಿರುವುದು/ಕಾರ‍್ಯರೂಪಕ್ಕೆ ಬಾರದ ಮಾತುಗಳು/ಆಚರಿಸಿ ತೋರಿಸದ ನುಡಿಗಳು;

ಕಲಿತನ=ಪರಾಕ್ರಮ/ಶೂರತನ/ಕೆಚ್ಚು ; ಮಾಡದ ಕಲಿತನ=ಕದನದಲ್ಲಿ ಇಲ್ಲವೇ ಆಪತ್ತು ಬಂದ ಸಮಯದಲ್ಲಿ ಕೆಚ್ಚಿನಿಂದ ಹೋರಾಡದೆ ಸುಮ್ಮನಿರುವುದು/ತಾನೊಬ್ಬ ಮಹಾಶೂರನೆಂದು ಬಡಾಯಿ ಕೊಚ್ಚಿಕೊಳ್ಳುತ್ತಾ , ಜೀವನರಂಗದ ಆಗುಹೋಗುಗಳಲ್ಲಿ ಯಾವುದೇ ಬಗೆಯ ಕೆಟ್ಟದ್ದನ್ನು ಹೋಗಲಾಡಿಸಲು ಹೋರಾಡದಿರುವುದು ;

ಚಿತ್ರ=ಗೆರೆ/ಬಣ್ಣಗಳಿಂದ ರಚನೆಗೊಂಡಿರುವ ಆಕಾರ/ರೂಪ ; ಸತಿ=ಹೆಣ್ಣು/ಹೆಂಗಸು ; ಚಿತ್ರದ ಸತಿ=ಗೆರೆ/ಬಣ್ಣಗಳಿಂದ ಬಿಡಿಸಲಾಗಿರುವ ಹೆಣ್ಣಿನ ರೂಪ ; ಶೃಂಗಾರವು+ಅದು+ಏತಕ್ಕೆ ; ಶೃಂಗಾರ=ಅಂದಚೆಂದದ ಅಲಂಕಾರ/ಸುಂದರವಾದ ಉಡುಗೆತೊಡುಗೆ/ನೋಡುವವರ ಕಣ್ಮನಗಳನ್ನು ಸೆಳೆಯುವಂತಹ ಚೆಲುವು; ಏತಕ್ಕೆ=ಯಾವುದಕ್ಕೆ ; ಪ್ರಯೋಜನ=ವ್ಯಕ್ತಿಯ ಬದುಕಿಗೆ ನೆರವಾಗುವುದು/ಬೇಕಾಗುವುದು/ಒಳಿತನ್ನು ಉಂಟುಮಾಡುವುದು ; ಚಿತ್ರದ ಸತಿಯ ಶೃಂಗಾರವದೇತಕ್ಕೆ ಪ್ರಯೋಜನ=ಚಿತ್ರದಲ್ಲಿರುವ ಕಂಡುಬರುವ ಅಂದಚೆಂದದ ಹೆಣ್ಣನ್ನು ತನ್ನವಳನ್ನಾಗಿ ಪಡೆಯಲು ಆಗದು. ಏಕೆಂದರೆ ಚಿತ್ರದಲ್ಲಿ ಕಂಡುಬರುತ್ತಿರುವ ಹೆಣ್ಣು ಜೀವವಿಲ್ಲದ ಒಂದು ಜಡರೂಪ.

ಎಲೆಯು+ಇಲ್ಲದ ; ಜಲವು+ಇಲ್ಲದ ; ಜಲ=ನೀರು ; ಗುಣಿಯು+ಅಲ್ಲದ ; ಗುಣಿ=ಒಳ್ಳೆಯ ನಡೆನುಡಿಗಳುಳ್ಳವನು ; ಗುಣಿಯಲ್ಲದ=ಗುಣವಂತನಲ್ಲದ/ನಿಜದ ನಡೆನುಡಿಗಳಿಲ್ಲದ ; ಅವಗುಣಿ=ಕೆಟ್ಟ ನಡೆನುಡಿಯುಳ್ಳವನು/ನೀಚ ವ್ಯಕ್ತಿ ; ಸಂಗವು+ಅದು+ಏತಕ್ಕೆ ; ಸಂಗ=ಸಹವಾಸ/ಒಡನಾಟ/ಗೆಳೆತನ ;

ದಯೆ+ಇಲ್ಲದ ; ದಯೆ=ಕರುಣೆ/ಅನುಕಂಪ/ಇತರರ ನೋವು ಸಂಕಟಗಳಿಗೆ ಮಿಡಿದು ನೆರವನ್ನು ನೀಡುವ ಮನಸ್ಸು ; ಧರ್ಮ=ತನಗೆ ಒಳಿತನ್ನು ಬಯಸುವಂತೆಯೇ ಇತರರಿಗೂ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳು ; ದಯವಿಲ್ಲದ ಧರ್ಮ=ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ನಡೆನುಡಿಗಳು/ಆಚರಣೆಗಳು/ಸಂಪ್ರದಾಯಗಳು/ನಂಬಿಕೆಗಳು ;

ಉಭಯ+ಇಲ್ಲದ ; ಉಭಯ=ಎರಡು ; ಭಕ್ತಿ=ದೇವರ ಬಗೆಗಿನ ಒಲವು/ಒಳಿತಿನ ಕಡೆಗೆ ಮಯ್ ಮನಗಳನ್ನು ನೆಲೆಗೊಳಿಸುವಿಕೆ ; ಉಭಯದಿಂದ ಕೂಡಿರುವ ಭಕ್ತಿ=1) ಅಂತರಂಗದ ಮನದಲ್ಲಿ ದೇವರ ಬಗ್ಗೆ ಒಲವು ಮತ್ತು 2) ಬಹಿರಂಗದ ಸಾಮಾಜಿಕ ಜೀವನದಲ್ಲಿ ಸಹಮಾನವರಿಗೆ ಒಳಿತನ್ನು ಉಂಟು ಮಾಡುವಂತಹ ನಡೆನುಡಿಗಳು ; ಉಭಯವಿಲ್ಲದ ಭಕ್ತಿ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡದ ದೇವರ ಪೂಜೆ ;

ನಯ+ಇಲ್ಲದ ; ನಯ=ಕೋಮಲವಾದ/ಇಂಪಾದ/ಒರಟಲ್ಲದ ; ಶಬ್ದ+ಅದು+ಏತಕ್ಕೆ ; ಶಬ್ದ=ಮಾತು/ನುಡಿ ; ನಯವಿಲ್ಲದ ಶಬ್ದ=ಕೇಳುಗರ ಮಯ್ ಮನಗಳನ್ನು ಗಾಸಿಗೊಳಿಸುವಂತಹ ಕೆಟ್ಟಮಾತು/ನಿಂದನೆಯ ನುಡಿ/ತೆಗಳಿಕೆಯ ಮಾತು;

” ದಯವಿಲ್ಲದ ಧರ್ಮ ಮತ್ತು ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ ” ಎಂಬ ನುಡಿಗಳಲ್ಲಿ ನಾವು ಆಚರಿಸುವ ದರ‍್ಮದಲ್ಲಿ ಸಹಮಾನವರನ್ನು ಕರುಣೆಯಿಂದ ಕಾಣುವ ನಡೆನುಡಿಗಳಿರಬೇಕು ಮತ್ತು ನಾವು ಆಡುವ ಮಾತುಗಳಲ್ಲಿ ಕೇಳುಗರಿಗೆ ಅರಿವನ್ನು ಮತ್ತು ಮುದವನ್ನು ನೀಡುವ ಸಂಗತಿಗಳಿರಬೇಕೆಂಬ ಸೂಚನೆಯಿದೆ ; ಎನ್ನ=ನನ್ನ ; ಎನ್ನ ದೇವ ಚೆನ್ನಮಲ್ಲಿಕಾರ್ಜುನ = ನನ್ನ ನೆಚ್ಚಿನ ದೇವರಾದ ಚೆನ್ನಮಲ್ಲಿಕಾರ‍್ಜುನ )

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ
ಆಗುಮಾಡಬಂದವರಲ್ಲ
ಮನದ ಮೇಲೆ ಬಂದು ನಿಂದು ಜರೆದು ನುಡಿದು
ಪಥವ ತೋರಬಲ್ಲಡಾತನೆ ಸಂಬಂಧಿ
ಹಾಗಲ್ಲದೆ ಅವರಿಚ್ಛೆಯ ನುಡಿದು
ತನ್ನುದರವ ಹೊರೆವ ಬಚ್ಚಣಿಗಳ
ಮಚ್ಚುವನೆ ಚೆನ್ನಮಲ್ಲಿಕಾರ್ಜುನ.

ನಮ್ಮ ನಡೆನುಡಿಗಳಲ್ಲಿ ಕಂಡುಬರುವ ತಪ್ಪುಗಳನ್ನು ಕಂಡು ಆತಂಕಗೊಂಡು , ಹಾಳಾಗಿ ಹೋಗುತ್ತಾನಲ್ಲ ಎಂಬ ಸಂಕಟದಿಂದ ನೊಂದು , ಬಯ್ದು ತಿಳುವಳಿಕೆಯನ್ನು ಹೇಳಿ , ಜೀವನದಲ್ಲಿ ಒಳ್ಳೆಯ ದಾರಿಯಲ್ಲಿ ನಮ್ಮನ್ನು ನಡೆಯುವಂತೆ ಮಾಡುವವನೇ ನಿಜವಾದ ನೆಂಟ/ಗೆಳೆಯ/ಆತ್ಮೀಯ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

(ಧನ=ಹಣ/ಸಂಪತ್ತು/ಆಸ್ತಿಪಾಸ್ತಿ ; ಅನುಸರಿ=ಹಿಂಬಾಲಿಸುವವನು/ಹೊಂದಿಕೊಂಡು ನಡೆವವನು; ಆಗುಮಾಡು=ನೆರವೇರಿಸು/ಈಡೇರಿಸು; ಧನದ ಮೇಲೆ ಬಂದವರು=ವ್ಯಕ್ತಿಯ ಬಳಿಯಿರುವ ಸಂಪತ್ತನ್ನು ನೋಡಿ , ಅದರಿಂದ ಅನುಕೂಲವನ್ನು ಪಡೆಯಬೇಕೆಂಬ ಉದ್ದೇಶದಿಂದ ಸಿರಿವಂತರ ಬಳಿಗೆ ಬಂದವರು/ಸಂಪತ್ತುಳ್ಳವರ ಬಳಿಗೆ ಸ್ವಂತದ ಹಿತಕ್ಕಾಗಿ ಬಂದವರು ; ಅನುಸರಿಗಳಲ್ಲದೆ ಆಗುಮಾಡಬಂದವರಲ್ಲ=ಸಿರಿವಂತಿಕೆಯಲ್ಲಿ ಪಾಲನ್ನು ಪಡೆದು ಉಂಡುತಿಂದು ಹೋಗುವವರೇ ಹೊರತು , ಒಳಿತನ್ನು ಮಾಡಲು ಬಂದವರಲ್ಲ ;

ಮನ=ಮನಸ್ಸು ; ಮನದ ಮೇಲೆ ಬಂದು=ವ್ಯಕ್ತಿಯ ನಡೆನುಡಿಗಳಲ್ಲಿ ಕಂಡುಬರುವ ತಪ್ಪುಒಪ್ಪುಗಳನ್ನು ಒರೆಹಚ್ಚಿನೋಡಿ , ತಪ್ಪುಗಳನ್ನು ತಿದ್ದಿಕೊಳ್ಳುವಂತೆ ಅವನ ಮನಸ್ಸಿಗೆ ನಾಟುವಂತೆ ಹಿತನುಡಿಗಳನ್ನಾಡುವವರು ; ನಿಂದು=ನಿಂತುಕೊಂಡು/ಎಲ್ಲವನ್ನೂ ಚೆನ್ನಾಗಿ ಗಮನಿಸಿ ; ಜರೆ=ನಿಂದಿಸು/ತೆಗಳು/ಬಯ್ ; ಜರೆದು ನುಡಿದು=ಕೆಟ್ಟ ನಡೆನುಡಿಗಳನ್ನು ಬಿಟ್ಟು ಒಳ್ಳೆಯ ರೀತಿಯಲ್ಲಿ ಬಾಳಬೇಕೆಂಬ ತಿಳುವಳಿಕೆಯನ್ನು ಹೇಳಿ/ಬಯ್ದು ಬುದ್ದಿಯನ್ನು ಹೇಳಿ ; ಪಥ=ದಾರಿ/ಮಾರ‍್ಗ/ಹಾದಿ ; ತೋರು=ಕಾಣಿಸು/ತಿಳಿಯುವಂತೆ ಮಾಡು ; ಪಥವ ತೋರಬಲ್ಲಡೆ=ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕುವ ಹಾದಿಯನ್ನು ತೋರಿಸಲು ಶಕ್ತನಾದರೆ ; ಆತನೆ=ಅಂತಹ ವ್ಯಕ್ತಿಯೇ ಅಂದರೆ ಕೆಟ್ಟ ನಡೆನುಡಿಗಳನ್ನು ಕಟುನುಡಿಗಳಿಂದ ಅಲ್ಲಗಳೆದು , ಒಳಿತಿನ ಒಳಮಿಡಿತಗಳನ್ನು ಮನದಲ್ಲಿ ಮೂಡುವಂತೆ ಮಾಡಿ , ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನು ಆಚರಣೆಗೆ ತರುವಂತೆ ಮಾಡುವವನೇ ; ಸಂಬಂಧಿ=ನೆಂಟ/ಗೆಳೆಯ/ಆತ್ಮೀಯ ;

ಹಾಗೆ+ಅಲ್ಲದೆ ; ಹಾಗಲ್ಲದೆ=ಆ ರೀತಿಯಲ್ಲಿ ಮಾಡದೆ ; ಅವರ+ಇಚ್ಛೆಯ ; ಅವರ=ಸಿರಿವಂತರ/ಸಂಪತ್ತುಳ್ಳವರ ; ಇಚ್ಛೆ=ಬಯಕೆ/ಆಸೆ ; ನುಡಿದು=ಹೇಳಿ ; ತನ್ನ+ಉದರವ ; ಉದರ=ಹೊಟ್ಟೆ ; ಹೊರೆ=ಕಾಪಾಡು/ಸಲಹು ; ಬಚ್ಚಣೆ=ಸೋಗು/ತೋರಿಕೆಯ ನಟನೆ; ಬಚ್ಚಣಿ=ಮೋಸಗಾರ/ವಂಚಕ/ತೋರಿಕೆಯ ನಡೆನುಡಿಯವನು/ಒಳಗೊಂದು ಹೊರಗೊಂದು ಬಗೆಯ ನಡೆನುಡಿಯುಳ್ಳವನು ; ಅವರಿಚ್ಛೆಯ ನುಡಿದು ತನ್ನುದರವ ಹೊರವ ಬಚ್ಚಣಿಗಳು= ಸಿರಿವಂತರಲ್ಲಿ ಕಂಡುಬರುವ ಕೆಟ್ಟನಡೆನುಡಿಗಳನ್ನು ತಿದ್ದಿ ಸರಿಪಡಿಸಲು ಹೋಗದೆ , ಅವರ ಆಸೆ/ಬಯಕೆ/ಉದ್ದೇಶಗಳನ್ನೇ ದೊಡ್ಡದಾಗಿ ಹೊಗಳಿ ಕೊಂಡಾಡುತ್ತಾ , ಸಿರಿವಂತರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ , ತಮ್ಮ ಹೊಟ್ಟೆಯ ಪಾಡನ್ನು ನೀಗಿಸಿಕೊಳ್ಳುವ ನಯವಂಚಕರು ; ಮಚ್ಚು=ಮೆಚ್ಚು ; ಮೆಚ್ಚು=ಒಲಿ/ಹೊಗಳು/ಕೊಂಡಾಡು/ಬಯಸು; ಮಚ್ಚುವನೆ ಚೆನ್ನಮಲ್ಲಿಕಾರ್ಜುನ=ನಯವಂಚಕರನ್ನು ಚೆನ್ನಮಲ್ಲಿಕಾರ‍್ಜುನನು ಮೆಚ್ಚುವುದಿಲ್ಲ/ಕೆಟ್ಟ ನಡೆನುಡಿಯುಳ್ಳವರನ್ನು ದೇವರು ಒಪ್ಪಿಕೊಳ್ಳುವುದಿಲ್ಲ.ಅಂದರೆ ದೇವರ ಮೆಚ್ಚುಗೆಗೆ ಪಾತ್ರನಾಗಬೇಕಾದರೆ ವ್ಯಕ್ತಿಯಲ್ಲಿ ಒಳ್ಳೆಯ ನಡೆನುಡಿಗಳು ಇರಬೇಕೆಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತವೆ)

( ಚಿತ್ರ ಸೆಲೆ: travelthemes.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: