ಬಜ್ಜಿ ಪಲ್ಯ

– ಮಾರಿಸನ್ ಮನೋಹರ್.

ಬಜ್ಜಿ ಪಲ್ಯ, bajji palya

ಬಡಗ-ಮೂಡಣ ಕರ‍್ನಾಟಕದ ಕಡೆ ಮಾಡುವ ತುಂಬಾ ವೀಶೇಶ ಪಲ್ಯ ಬಜ್ಜಿಪಲ್ಯ. ಇದನ್ನು ಎಲ್ಲ ಬಗೆಯ ಕಾಯಿಪಲ್ಯ ಮತ್ತು ಕಾಳುಗಳನ್ನು ಬಳಸಿ ಮಾಡುತ್ತಾರೆ. ಇದನ್ನು ಹೆಚ್ಚಾಗಿ ಡಿಸೆಂಬರ‍್-ಜನವರಿ ತಿಂಗಳುಗಳಲ್ಲಿ ಮಾಡಲಾಗುತ್ತದೆ.

ಬೇಕಾಗುವ ಸಾಮಾನುಗಳು

ಕಾಯಿಪಲ್ಯಗಳು

 • ಮೆಂತ್ಯಪಲ್ಯ – ¼ ಕೆಜಿ
 • ಈರುಳ್ಳಿ ಸೊಪ್ಪು – ¼ ಕೆಜಿ
 • ಬೀನ್ಸ್ – ¼ ಕೆಜಿ
 • ಪಾಲಕ್ – ¼ ಕೆಜಿ
 • ಗಜ್ಜರಿ – 3
 • ಬದನೆಕಾಯಿ – 3
 • ಹಸಿ ಮೆಣಸಿನಕಾಯಿ(ಮೀಡಿಯಂ ಕಾರ) – ¼ ಕೆಜಿ
 • ಹುಣಸೇಹಣ್ಣು – ¼ ಕೆಜಿ

ಕಾಳುಗಳು

 • ಹಸಿ ಕಡಲೆ ಕಾಳು (ಶೇಂಗಾ ಅಲ್ಲ) – 1 ಬಟ್ಟಲು
 • ಹಸಿ ಬಟಾಣಿ ಕಾಳು – 1 ಬಟ್ಟಲು
 • ಹಸಿ ಅವರೆ ಕಾಳು – 1 ಬಟ್ಟಲು
 • ಹಸಿ ತೊಗರಿ ಕಾಳು – 1 ಬಟ್ಟಲು

ಒಗ್ಗರಣೆಗೆ

 • ಸಾಸಿವೆ – 1 ಟೀಸ್ಪೂನ್
 • ಜೀರಿಗೆ – 1 ಟೀಸ್ಪೂನ್
 • ಬೆಳ್ಳುಳ್ಳಿ ಎಸಳುಗಳು – 10
 • ಶುಂಟಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
 • ಎಣ್ಣೆ – 150 ಗ್ರಾಂ
 • ಉಪ್ಪು – ರುಚಿಗೆ ತಕ್ಕಹಾಗೆ
 • ಕಡಲೆ ಹಿಟ್ಟು – ¼ ಕೆಜಿ

ಮಾಡುವ ಬಗೆ

ಎಲ್ಲ ಕಾಯಿಪಲ್ಯಗಳನ್ನು ಸಣ್ಣದಾಗಿ ಹೆಚ್ಚಿಟ್ಟು ಕೊಳ್ಳಬೇಕು. ಎಲ್ಲ ಕಾಳುಗಳನ್ನು ಬಿಡಿಸಿ ಇಟ್ಟುಕೊಳ್ಳಬೇಕು. ಹಸಿ ಮೆಣಸಿನಕಾಯಿ ಒರಳಲ್ಲಿ ಕುಟ್ಟಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಹುಣಸೇಹಣ್ಣನ್ನು ಒಂದು ಪಾತ್ರೆಯಲ್ಲಿ ಕುದಿಸಿ, ತಣ್ಣಗಾದ ಮೇಲೆ ಕಿವುಚಿ, ಸೋಸಿ ಹುಳಿರಸ ತೆಗೆದಿಟ್ಟುಕೊಳ್ಳಬೇಕು. ಒಂದು ಬೋಗುಣಿಯಲ್ಲಿ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕಾದಾ ಬಳಿಕ ಅದರಲ್ಲಿ ಸಾಸಿವೆ ಜೀರಿಗೆ ಹಾಕಿ ಸಿಡಿಸಬೇಕು. ಸಾಸಿವೆ ಚಟಪಟ ಸದ್ದು ನಿಂತ ಮೇಲೆ ಸುಲಿದ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಬಂಗಾರ ಕಂದು ಬಣ್ಣ ಬರುವವರೆಗೆ ಕರಿಯಬೇಕು. ಈಗ ಅದಕ್ಕೆ ಕುಟ್ಟಿಕೊಂಡ ಹಸಿ ಮೆಣಸಿನಕಾಯಿ ಸೇರಿಸಿ ಚೆನ್ನಾಗಿ ತಾಳಿಸಬೇಕು. ಆಮೇಲೆ ಇದಕ್ಕೆ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಕರಿಯಬೇಕು.

ಅರಿಶಿಣ ಹಾಕಿ ಚೆನ್ನಾಗಿ ಕೈಯಾಡಿಸಬೇಕು ಇಲ್ಲದಿದ್ದರೆ ಅರಿಸಿಣ ಸೀದು ಹೋಗುತ್ತದೆ. ಅರಿಶಿಣ ಹಾಕಿದ ಮೇಲೆ ಕೊಯ್ದಿಟ್ಟುಕೊಂಡ ಕಾಯಿಪಲ್ಯಗಳನ್ನು ಹಾಕಿ ಅವನ್ನು ಚೆನ್ನಾಗಿ ಬಾಡಿಸಬೇಕು. ಮೆಂತ್ಯಪಲ್ಯ ಕಹಿಯಾಗಿರುವದರಿಂದ ಎಣ್ಣೆಯಲ್ಲಿ ಅದು ಚೆನ್ನಾಗಿ ಬಾಡಿಸಬೇಕಾಗುತ್ತದೆ. ಎಲ್ಲ ಕಾಯಿಪಲ್ಯ ಎಣ್ಣೆಯಲ್ಲಿ ಬಾಡಿ, ಗಾಡ ಹಸಿರು ಬಣ್ಣಕ್ಕೆ ತಿರುಗಿದಾಗ ಬಿಡಿಸಿಟ್ಟುಕೊಂಡ ಎಲ್ಲ ಕಾಳುಗಳನ್ನು ಹಾಕಿ ಸ್ವಲ್ಪ ಕರಿಯಲು ಬಿಡಬೇಕು. ಎರಡು ಮೂರು ಮಿನಿಟು ಕರಿದ ಮೇಲೆ ಮೊದಲೇ ಸೋಸಿಟ್ಟುಕೊಂಡ ಹುಳಿರಸ ಹಾಕಬೇಕು. ಒಂದು ಕುದಿ ಬರುವವರೆಗೆ ಕುದಿಸಿ, ಮೂರು ತಂಬಿಗೆ ನೀರು (ಅಂದಾಜು 2 ಲೀಟರ್) ಹಾಕಿ ಅದಕ್ಕೆ ಎಸರು ಬರಿಸಬೇಕು. ಈಗ ಈ ನೀರಿನಲ್ಲಿ ಎಲ್ಲ ಕಾಯಿಪಲ್ಯ ಕಾಳುಗಳು ಕುದಿಯುತ್ತವೆ. ಹೀಗೆ ಐದಾರು ಮಿನಿಟು ಕುದಿಯಲು ಬಿಡಬೇಕು.

ಮತ್ತೊಂದು ಕಡೆ ಕಾಲು ಕೆಜಿ ಕಡಲೆ ಹಿಟ್ಟಿಗೆ ಒಂದು-ಒಂದೂವರೆ ಗ್ಲಾಸು ನೀರು ಹಾಕಿ ಕಲಸಿಟ್ಟುಕೊಂಡು, ಕುದಿಯುತ್ತಿರುವ ತಿಳಿಸಾರಿಗೆ ಹಾಕಿ ಒಂದೇ ಸಮನೆ ತಿರುವಬೇಕು. ಇಲ್ಲದಿದ್ದರೆ ಬಜ್ಜಿಪಲ್ಯದಲ್ಲಿ ಗಂಟುಗಳಾಗುತ್ತವೆ. ತಿರುವಿದ ಮೇಲೆ ಬೋಗುಣಿಯ ಮೇಲೆ ತಟ್ಟೆ ಮುಚ್ಚಿ ಕೆಳಗೆ ಉರಿ ಕಡಿಮೆ ಮಾಡಿ ಐದು ಮಿನಿಟು ಕುದಿಯಲು ಬಿಡಬೇಕು. ಬಳಿಕ ಚೆನ್ನಾಗಿ ತಿರುವಿ ಮತ್ತೆ ಐದು ನಿಮಿಶ ಇಡಬೇಕು. ಬಜ್ಜಿಪಲ್ಯದ ಹಿಟ್ಟು ಚೆನ್ನಾಗಿ ಕುದಿಯ ಬೇಕಾಗಿರುತ್ತದೆ. ಹಿಟ್ಟು ಕುದಿಯುತ್ತಿರುವಾಗ ತಳ ಕೂರದಂತೆ ಆಗ್ಗಾಗ್ಗೆ ತಿರುವುತ್ತಿರಬೇಕು. ಈಗ ತಯಾರಾದ ಬಜ್ಜಿಪಲ್ಯ ಚಪಾತಿ ಮತ್ತು ರೊಟ್ಟಿ ಅನ್ನದೊಂದಿಗೆ ತಿನ್ನಲು ಚೆನ್ನಾಗಿರುತ್ತದೆ. ಇದನ್ನು ಹೆಚ್ಚಾಗಿ ಇರುಳು ಮಾಡುತ್ತಾರೆ ಮುಂಜಾನೆ ತಿನ್ನಲು ಇನ್ನೂ ರುಚಿಯಾಗಿರುತ್ತದೆ. ಕೆಲವರು ಇದರ ಮೇಲೆ ಕುಸುಬೆ ಎಣ್ಣೆ ಹಾಕಿಕೊಂಡೂ ತಿನ್ನುತ್ತಾರೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: