ಕುವೆಂಪು ಕವನಗಳ ಓದು – 8ನೆಯ ಕಂತು

– ಸಿ.ಪಿ.ನಾಗರಾಜ.

ಕುವೆಂಪು, kuvempu

ಓ ಬನ್ನಿ ಸೋದರರೆ ಬೇಗ ಬನ್ನಿ
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮಟ್ಟ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗ ಬನ್ನಿ
ಅದೊ ನೋಡಿ ರಷ್ಯಾ ಜಪಾನು ತುರ್ಕಿಗಳೆಲ್ಲ
ಪರೆಗಳಚಿ ಹೊರಟಿಹವು ಹೊಸಪಯಣಕೆ
ಬೆಳಗಿಹರು ನೆತ್ತರೆಣ್ಣೆಯ ತಿಳಿವಿನುರಿಯಲ್ಲಿ
ಕಿಚ್ಚಿಟ್ಟು ಹಳೆಕೊಳಕು ಬಣಗು ತೃಣಕೆ
ಓ ಬನ್ನಿ ಸೋದರರೆ ರಾಷ್ಟ್ರರಣಕೆ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ.

ಜಾತಿ, ಮತ, ದೇವರುಗಳ ನೆಲೆಗಳಿಂದ ಹೊರಬಂದು, ನಿಸರ‍್ಗದ ನೆಲೆಯಲ್ಲಿ ನಾವೆಲ್ಲರೂ ಮನುಜ ಮತವೆಂಬ ಒಂದೇ ಗುಂಪಿನವರು ಎಂಬ ವಾಸ್ತವವನ್ನು ಅರಿತುಕೊಂಡು, ಪರಸ್ಪರ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳಬೇಕೆಂಬ ಕರೆಯನ್ನು ಈ ಕವನದಲ್ಲಿ ಲೋಕದ ಜನಸಮುದಾಯಕ್ಕೆ ನೀಡಲಾಗಿದೆ.

( ಗುಡಿ=ಹಿಂದೂಗಳು ದೇವರನ್ನು ಪೂಜಿಸುವ ಮಂದಿರ; ಚರ್ಚು=ಕ್ರಿಶ್ಚಿಯನ್ನರು ಏಸುವನ್ನು ಪೂಜಿಸುವ ಮಂದಿರ; ಮಸಜೀದಿ=ಮುಸಲ್ಮಾನರು ಅಲ್ಲಾನನ್ನು ಪೂಜಿಸುವ ಮಂದಿರ; ಬಡತನ=ವ್ಯಕ್ತಿಯು ಜೀವನಕ್ಕೆ ಅತ್ಯಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯವನ್ನು ಪಡೆಯಲಾಗದೆ ಸಂಕಟಕ್ಕೆ ಒಳಗಾಗಿರುವುದು; ಬುಡ=ಬೂಮಿಯೊಳಗಿರುವ ಮರಗಿಡಗಳ ಬೇರುಗಳ ಮೂಲ; ಬುಡಮಟ್ಟ=ಬೇರು ಸಮೇತ; ಕೀಳಬನ್ನಿ=ಕಿತ್ತು ಹಾಕಲು ಬನ್ನಿರಿ;

ಗುಡಿ ಚರ‍್ಚು ಮಸೀದಿಗಳಿಂದ ಹೊರಬರುವುದಕ್ಕೂ ಜನರ ಬಡತನದ ನಿವಾರಣೆಗೂ ಇರುವ ಪರಸ್ಪರ ನಂಟನ್ನು ತಿಳಿಯಬೇಕಾದರೆ, ಮಾನವ ಸಮುದಾಯದ ಬದುಕಿನ ನಡೆನುಡಿಗಳ ಮೇಲೆ ಇವು ಬೀರುತ್ತಿರುವ ಪರಿಣಾಮಗಳನ್ನು ಮನದಟ್ಟುಮಾಡಿಕೊಳ್ಳಬೇಕು.

ಗುಡಿ ಚರ‍್ಚು ಮಸೀದಿಗಳು ಆಯಾಯ ಮತಗಳ ಪ್ರತಿಮಾರೂಪದ ಕಟ್ಟಡಗಳು. ಪ್ರತಿಯೊಂದು ಮತದ ಆಚರಣೆ, ಸಂಪ್ರದಾಯ ಮತ್ತು ಕಟ್ಟುಕಟ್ಟಲೆಗಳು ಮತ್ತೊಂದು ಮತಕ್ಕಿಂತ ಬೇರೆಯಾಗಿವೆ. ವಿಶ್ವದಲ್ಲಿರುವ ಮಾನವ ಸಮುದಾಯವನ್ನು ಮತಗಳು ಜಾತಿ ಮತ ದೇವರ ಹೆಸರಿನಲ್ಲಿ ಬೇರೆ ಬೇರೆಯಾಗಿ ವಿಂಗಡಿಸಿವೆ. ಒಂದು ಮತದವರು ಹೊಂದಿರುವ ಆಸ್ತಿಪಾಸ್ತಿ, ರಾಜಕೀಯ ಗದ್ದುಗೆ ಮತ್ತು ಸಾಮಾಜಿಕ ಅಂತಸ್ತಿನ ಹಿರಿಮೆಯು ಬೇರೆ ಮತದವರಲ್ಲಿ ಅಸಹನೆ ಮತ್ತು ಅಸೂಯೆಯನ್ನು ಹುಟ್ಟಿಸುತ್ತದೆ. ಈ ಕಾರಣದಿಂದಾಗಿ ಜನರ ಮನದಲ್ಲಿ ಪರಸ್ಪರ ಅಪನಂಬಿಕೆ ಮತ್ತು ಹಗೆತನದ ಒಳಮಿಡಿತಗಳು ಕೆರಳುತ್ತ ಪದೇ ಪದೇ ಹಲ್ಲೆ, ಲೂಟಿ ಮತ್ತು ಕೊಲೆಯಂತಹ ಕ್ರೂರತನದ ಕ್ರಿಯೆಗಳು ಜಗತ್ತಿನ ಉದ್ದಗಲಕ್ಕೂ ನಡೆಯುತ್ತಿರುತ್ತವೆ. ಲೋಕದ ಸಂಪತ್ತು ಮತ್ತು ರಾಜಕೀಯ ಆಡಳಿತವು ತಮ್ಮ ಮತದವರ ಕೈಯಲ್ಲಿಯೇ ಇರಬೇಕೆಂದು ಪ್ರತಿಯೊಂದು ಮತದವರು ಇಚ್ಚಿಸುತ್ತಾರೆ ಮತ್ತು ಅವನ್ನು ಪಡೆಯಲು ನಿರಂತರವಾಗಿ ಹೋರಾಡುತ್ತಿರುತ್ತಾರೆ.

ಇತಿಹಾಸದ ಉದ್ದಕ್ಕೂ ಗುಡಿ ಚರ‍್ಚು ಮಸೀದಿಗಳನ್ನು ಕಟ್ಟಿಸಿಕೊಂಡು ಬರುತ್ತಿರುವ ರಾಜ ಮಹಾರಾಜರಿಗೆ ಮತ್ತು ಸಿರಿವಂತರಿಗೆ ಅವರದೇ ಆದ ಒಂದು ಉದ್ದೇಶವಿರುತ್ತದೆ. ಅದೇನೆಂದರೆ “ ದೇವರೇ ನಮ್ಮೆಲ್ಲರ ಜೀವನದ ಒಳಿತು ಕೆಡುಕುಗಳಿಗೆ ಕಾರಣ. ಆದ್ದರಿಂದ ನಮ್ಮ ಪಾಲಿಗೆ ಬಂದದ್ದನ್ನು ನಾವು ಅನುಬವಿಸಲೇಬೇಕು “ ಎಂಬ ನಿಲುವನ್ನು ಜನಮನದಲ್ಲಿ ಬೇರೂರಿಸಿ, ತಮಗೆ ಎದುರಾಗಿ ಯಾವುದೇ ಬಗೆಯಲ್ಲಿಯೂ ಜನರು ದನಿ ಎತ್ತದಂತೆ ಇಲ್ಲವೇ ಹೋರಾಡದಂತೆ ತಡೆಯವುದು. ಆದ್ದರಿಂದಲೇ ಗುಡಿ ಚರ‍್ಚು ಮಸೀದಿಗಳು ಉಳ್ಳವರ ಸಿರಿವಂತಿಕೆಯ ಹಣದಿಂದ ಅದ್ದೂರಿಯಾಗಿ ಕಂಗೊಳಿಸತೊಡಗಿದಾಗ, ದುಡಿಯುವ ಶ್ರಮಜೀವಿಗಳಾದ ಶ್ರೀಸಾಮಾನ್ಯರು ಅಪಾರವಾದ ಸಂಕಟಗಳಿಗೆ ಗುರಿಯಾಗಿ ಬಡತನದ ಬೇಗೆಯಲ್ಲಿ ಬೇಯತೊಡಗುತ್ತಾರೆ. ಗುಡಿ ಚರ‍್ಚು ಮಸೀದಿಗಳಲ್ಲಿ ನಡೆಯುವ ಆಯಾಯ ಮತದ ಆಚರಣೆ, ಸಂಪ್ರದಾಯ ಮತ್ತು ಕಟ್ಟುಕಟ್ಟಳೆಗಳಿಗೂ ಸಾಮಾಜಿಕ ವ್ಯಕ್ತಿಯ ಒಳ್ಳೆಯ ನಡೆನುಡಿಗಳಿಗೂ ಯಾವುದೇ ನಂಟು ಇರುವುದಿಲ್ಲ. ಸಹಮಾನವರನ್ನು ಮತ್ತು ಸಮಾಜವನ್ನು ವಂಚಿಸಿ ಸಂಪತ್ತನ್ನು ಲೂಟಿ ಹೊಡೆಯುವ ವ್ಯಕ್ತಿಗಳು ಅಪಾರವಾದ ಚಿನ್ನ ಬೆಳ್ಳಿ ವಜ್ರದ ಒಡವೆಗಳನ್ನು ಮತ್ತು ಹಣವನ್ನು ದೇವಮಂದಿರಗಳಿಗೆ ಕಾಣಿಕೆಯಾಗಿ ನೀಡುತ್ತಾರೆ. ಜನಬಲ, ತೋಳ್ಬಲ, ರಾಜಕೀಯ ಆಡಳಿತದ ಬಲವಿರುವ ಮತದವರು ದೇವ ಮಂದಿರಗಳ ಹೆಸರನ್ನು ಮುಂದಿಟ್ಟುಕೊಂಡು ದುರ‍್ಬಲರಾದ ಜನಸಮುದಾಯಗಳ ಮೇಲೆ ಹಲ್ಲೆ ನಡೆಸಿ, ಜಗತ್ತಿನ ಜನಸಂಕೆಯಲ್ಲಿ ಶೇ.40 ಕ್ಕಿಂತ ಹೆಚ್ಚು ಮಂದಿ ಬಡತನದಿಂದ ನರಳುತ್ತಿರುವುದಕ್ಕೆ ಕಾರಣರಾಗಿದ್ದಾರೆ.

ಈ ಹಿನ್ನೆಲೆಯಿಂದ ನೋಡಿದಾಗ ಗುಡಿ ಚರ‍್ಚು ಮಸೀದಿಗಳು ವಿಶ್ವದ ಮಾನವರೆಲ್ಲರೂ ಪರಸ್ಪರ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳುವುದಕ್ಕೆ ನೂರಾರು ಬಗೆಯ ಅಡೆತಡೆಗಳನ್ನು ಒಡ್ಡಿವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಮಾನಸಿಕವಾಗಿ ಇವುಗಳಿಂದ ಹೊರಬಂದಾಗ ಮಾತ್ರ “ ಎಲ್ಲ ಮಾನವರು ಒಂದೇ” ಎಂಬ ಅರಿವು ಬರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಅಗತ್ಯವಿರುವಂತೆಯೇ ಎಲ್ಲ ಮಾನವ ಜೀವಿಗಳಿಗೂ ಅನ್ನ ಬಟ್ಟೆ ವಸತಿ ವಿದ್ಯೆ ಉದ್ಯೋಗ ಆರೋಗ್ಯ ದೊರಕುವಂತಾಗಲೆಂಬ ಒಳ್ಳೆಯ ಉದ್ದೇಶದಿಂದ ದುಡಿಯತೊಡಗಿದಾಗ ಮಾತ್ರ ಮಾನವ ಸಮುದಾಯವನ್ನು ಕಾಡುತ್ತಿರುವ ಬಡತನವು ಸಂಪೂರ‍್ಣವಾಗಿ ತೊಲಗುತ್ತದೆ ಎಂಬ ಇಂಗಿತವನ್ನು “ ಗುಡಿ ಚರ‍್ಚು ಮಸೀದಿಗಳ ಬಿಟ್ಟು ಹೊರಬನ್ನಿ ಬಡತನವ ಬುಡಮಟ್ಟ ಕೀಳಬನ್ನಿ” ಎಂಬ ನುಡಿಗಳು ಸೂಚಿಸುತ್ತಿವೆ;

ಮೌಢ್ಯತೆ=ದಡ್ಡತನ/ತಿಳಿಗೇಡಿತನ; ಮಾರಿ=ಒಬ್ಬ ದೇವತೆಯ ಹೆಸರು/ಕೇಡು/ಹಾನಿ;

ಮೌಢ್ಯತೆಯ ಮಾರಿ=ಇದೊಂದು ರೂಪಕ. ಜಾತಿ ಮತ ದೇವರುಗಳೆಲ್ಲವೂ ಮಾನವ ಮನದಲ್ಲಿ ಮೂಡಿಬಂದಿರುವ ಕಲ್ಪನೆಗಳೇ ಹೊರತು, ಅವು ವಾಸ್ತವದಲ್ಲಿಲ್ಲ. ಆದರೆ ಸಾವಿರಾರು ವರುಶಗಳಿಂದಲೂ ಜನಮನದಲ್ಲಿ ಜಾತಿ ಮತ ದೇವರ ಬಗ್ಗೆ ಅನೇಕ ಮೂಡ ನಂಬಿಕೆಗಳು ನೆಲೆಯೂರಿವೆ. ಇಂತಹ ಮೂಡ ನಂಬಿಕೆಗಳು ಜನರ ದಿನನಿತ್ಯದ ಬದುಕನ್ನು ಬಹುಬಗೆಯ ಸಂಕಟಗಳಿಗೆ ಗುರಿಮಾಡಿವೆ;

ಹೊರದೂಡಲ್+ಐತನ್ನಿ; ಹೊರದೂಡು=ಹೊರಕ್ಕೆ ತಳ್ಳಲು; ಐತರು=ಬಂದು ಸೇರು; ಐತನ್ನಿ=ಬನ್ನಿರಿ; ವಿಜ್ಞಾನ=ಯಾವುದೇ ಜಡವಸ್ತು ಮತ್ತು ಜೀವಿಯ ಇರುವಿಕೆಯನ್ನು ಪ್ರಯೋಗದ ಮೂಲಕ ಒರೆಹಚ್ಚಿ ನೋಡಿ, ಕಾರ‍್ಯ ಕಾರಣಗಳ ಹಿನ್ನೆಲೆಯಲ್ಲಿ ಅವುಗಳ ನಿಜಸ್ವರೂಪವನ್ನು ಅಂದರೆ ವಾಸ್ತವದ ಸಂಗತಿಗಳನ್ನು ಅರಿಯುವುದು; ದೀವಿಗೆ=ದೀಪ; ವಿಜ್ಞಾನ ದೀವಿಗೆ=ಇದೊಂದು ರೂಪಕ. ಪ್ರಯೋಗಶೀಲತೆ ಮತ್ತು ವಿಚಾರವಂತಿಕೆಯಿಂದ ಅರಿವನ್ನು ಪಡೆಯುವುದು;

ಮಾನವ ಸಮುದಾಯವು ತಮ್ಮ ಇಂದಿನ ಜೀವನದ ಒಳಿತು ಕೆಡುಕುಗಳಿಗೆ ತಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಪುಣ್ಯ ಮತ್ತು ದೇವರು ಬರೆದಿರುವ ಹಣೆಬರಹ ಇಲ್ಲವೇ ವಿದಿ ಬರಹ ಕಾರಣವೆಂದು ನಂಬಿದೆ. ದೇವರ ಅಪ್ಪಣೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗದು ಎಂಬ ನಂಬಿಕೆಯಿಂದ ತಮ್ಮೆಲ್ಲ ಬದುಕಿಗೆ ದೇವರನ್ನೇ ಹೊಣೆಗಾರನನ್ನಾಗಿ ಮಾಡಿದೆ. ಇದು ಒಂದು ತಪ್ಪು ತಿಳುವಳಿಕೆ ಇಲ್ಲವೇ ಮೂಡ ನಂಬಿಕೆ. ಇದರಿಂದಾಗಿ ಮಾನವ ಸಮುದಾಯದಲ್ಲಿ ಬಹುತೇಕ ಮಂದಿಯ ಬಡತನಕ್ಕೆ ಮತ್ತು ಸಂಕಟಕ್ಕೆ ಕಾರಣವಾಗಿರುವ ಸಾಮಾಜಿಕ ಮತ್ತು ಆರ‍್ತಿಕ ವ್ಯವಸ್ತೆಯಲ್ಲಿನ ವಂಚನೆ, ಸುಲಿಗೆ ಮತ್ತು ಕ್ರೂರತನದ ವರ‍್ತನೆಗಳನ್ನು ಅರಿಯಲಾಗದೆ, ಆಳುವ ಅರಸರು ಮತ್ತು ಸಿರಿವಂತರು ಒಡ್ಡಿರುವ ಬಲೆಯಲ್ಲಿ ಸಿಲುಕಿ ಬಡ ಜನರು ನರಳುತ್ತಿದ್ದಾರೆ. ಮಾನವ ಸಮುದಾಯದ ಬದುಕಿನಲ್ಲಿ ನಡೆಯುತ್ತಿರುವ ಎಲ್ಲಾ ಬಗೆಯ ಆಗುಹೋಗುಗಳಿಗೆ ನಿಸರ‍್ಗದಲ್ಲಿ ಉಂಟಾಗುವ ಕ್ರಿಯೆಗಳು ಮತ್ತು ಮಾನವರ ನಡೆನುಡಿಗಳೇ ಕಾರಣವಾಗಿವೆ ಎಂಬ ವಾಸ್ತವವನ್ನು ಅರಿತಾಗ ಮಾತ್ರ ಇಂತಹ ಮೂಡ ನಂಬಿಕೆಗಳಿಂದ ಹೊರಬರಬಹುದು. ಈ ಹಿನ್ನೆಲೆಯಲ್ಲಿ “ ಮೌಡ್ಯತೆಯ ಮಾರಿಯನು ಹೊರದೂಡಲೈತನ್ನಿ ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ“ ಎಂಬ ನುಡಿಗಳು ಜಗತ್ತಿನ ವಿದ್ಯಮಾನಗಳನ್ನು ವಾಸ್ತವದ ನೆಲೆಯಲ್ಲಿ ಒರೆಹಚ್ಚಿ ನೋಡಬೇಕೆಂಬ ಅರಿವು ಮತ್ತು ಎಚ್ಚರದ ದನಿಗೆ ಸಂಕೇತವಾಗಿವೆ;

ಸೋದರ=ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿರುವ ಅಣ್ಣ ತಮ್ಮ;

ಓ ಬನ್ನಿ ಸೋದರರೆ ಬೇಗ ಬನ್ನಿ=ವಿಶ್ವದಲ್ಲಿರುವ ಮಾನವರಾದ ನಾವೆಲ್ಲ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದಿರುವ ಮಕ್ಕಳೆಂಬ ಅರಿವಿನಿಂದ ಜತೆಗೂಡಿ ಮುನ್ನಡೆಯೋಣ ಬನ್ನಿರಿ;

ಅದೊ ನೋಡಿ=ಜಗತ್ತಿನ ಎಲ್ಲೆಡೆಯಲ್ಲಿಯೂ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿ; ಪರೆ+ಕಳಚಿ; ಪರೆ=ಕಣ್ಣಿನ ಗುಡ್ಡೆಯ ಮೇಲೆ ಬೆಳೆದು ನೋಟಕ್ಕೆ ಅಡ್ಡಿಯನ್ನುಂಟುಮಾಡುವ ಪದರ; ಕಳಚು=ತೆಗೆದು; ಪರೆಕಳಚು=ಇದೊಂದು ನುಡಿಗಟ್ಟು. ಜನರ ನೆಮ್ಮದಿಯ ಜೀವನಕ್ಕೆ ಅಡ್ಡಿಯಾಗಿದ್ದ ಆಳರಸರ ಕ್ರೂರತನದ ಕಟ್ಟುಪಾಡುಗಳನ್ನು ತಿರಸ್ಕರಿಸಿ ಮತ್ತು ಸಾಮಾಜಿಕ ಕೆಡುಕುಗಳನ್ನು ನಿವಾರಿಸಿಕೊಂಡು ಎಂಬ ತಿರುಳಿನಲ್ಲಿ ಬಳಕೆಯಾಗಿದೆ;

ಹೊರಟು+ಇಹವು; ಇಹವು=ಇರುವುವು; ಹೊಸ=ನೂತನ; ಹೊಸಪಯಣ=ಇದು ಒಂದು ನುಡಿಗಟ್ಟು. ಹೊಸ ರೀತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳುವುದು ಎಂಬ ತಿರುಳಿನಲ್ಲಿ ಬಳಕೆಯಾಗಿದೆ;

ಅದೊ ನೋಡಿ ರಷ್ಯಾ ಜಪಾನು ತುರ್ಕಿಗಳೆಲ್ಲ ಪರೆಗಳಚಿ ಹೊರಟಿಹವು ಹೊಸಪಯಣಕೆ=ರಶ್ಯ ಜಪಾನು ತುರ‍್ಕಿ ದೇಶಗಳೆಲ್ಲ ಇದುವರೆಗೂ ತಮ್ಮ ದೇಶದ ಜನಸಮುದಾಯವನ್ನು ಆಳುತ್ತಿದ್ದ ರಾಜರ ನಿರಂಕುಶ ಆಡಳಿತದ ಎದುರಾಗಿ ಹೋರಾಡಿ, ಆಡಳಿತದ ಗದ್ದುಗೆಯಿಂದ ಅವರನ್ನು ಹೊರತಳ್ಳಿ ದೇಶದ ಸಂಪತ್ತಿನಲ್ಲಿ “ ಸರ‍್ವರಿಗೂ ಸಮಪಾಲು ಸರ‍್ವರಿಗೂ ಸಮಬಾಳು “ ಎಂಬುದನ್ನು ಜಾರಿಗೆ ತರುವುದರತ್ತ ಮತ್ತು ಬಡತನವನ್ನು ಬುಡಸಮೇತ ಕಿತ್ತೆಸೆಯುವತ್ತ ಮುನ್ನಡೆಯುತ್ತಿದ್ದಾರೆ;

ಬೆಳಗಿ+ಇಹರು; ಬೆಳಗು=ಹೊಳೆಯುವಂತೆ ಮಾಡು; ಇಹರು=ಇರುವರು; ನೆತ್ತರ್+ಎಣ್ಣೆಯ; ನೆತ್ತರು=ರಕ್ತ; ನೆತ್ತರೆಣ್ಣೆ=ಇದೊಂದು ರೂಪಕ. ದೀಪದಲ್ಲಿರುವ ಬತ್ತಿಯು ಉರಿದು ಬೆಳಕನ್ನು ನೀಡಲು ಎಣ್ಣೆಯು ಬೇಕು. ಅಂತೆಯೇ ರಾಜನ ಕ್ರೂರತನದ ಆಡಳಿತದ ಎದುರು ಹೋರಾಡಿ ಜನಸಮುದಾಯಕ್ಕೆ ಒಳಿತನ್ನು ಮಾಡಲೆಂದು ಹೋರಾಡುವಾಗ ಹಲವರ ಬಲಿದಾನವಾಗಿ ರಕ್ತ ಕೋಡಿಯು ಹರಿದಿದೆ. ಹೋರಾಟ ಮತ್ತು ಬಲಿದಾನದ ಮೂಲಕ ರಶ್ಯಾ ಜಪಾನು ತುರ‍್ಕಿ ದೇಶಗಳು ಸರ‍್ವಸಮಾನತೆಯ ಸಮಾಜವನ್ನು ಕಟ್ಟುವತ್ತ ಮುನ್ನಡೆಯುತ್ತಿವೆ;

ತಿಳಿವು+ಇನ್+ಉರಿ+ಅಲ್ಲಿ; ತಿಳುವು=ಅರಿವು; ಉರಿ=ಬೆಂಕಿ;

ತಿಳಿವಿನುರಿ=ಇದೊಂದು ರೂಪಕ. ಅರಿವು ಎಂಬುದು ಕೆಟ್ಟದ್ದನ್ನು ಸುಟ್ಟು ಇಲ್ಲವಾಗಿಸುವ ಬೆಂಕಿಯಾಗಿದೆ; ಕಿಚ್ಚು+ಇಟ್ಟು; ಕಿಚ್ಚು=ಬೆಂಕಿ; ಹಳೆ=ಹಿಂದಿನದು; ಕೊಳಕು=ಕೊಳೆಯಾಗಿರುವುದು; ಬಣಗು=ಕೀಳಾದುದು; ತೃಣ=ಹುಲ್ಲು;

ಹಳೆಕೊಳಕು ಬಣಗು ತೃಣ=ಇವೆಲ್ಲವೂ ರೂಪಕಗಳಾಗಿವೆ. ಜನಸಮುದಾಯದ ಜೀವನಕ್ಕೆ ಹಾನಿಯನ್ನು ಉಂಟುಮಾಡುವ ಸಾಮಾಜಿಕ ಕೆಡುಕುಗಳಾದ ಜಾತಿಯ ತಾರತಮ್ಯ, ಮತಗಳ ಒಡಕು ಮತ್ತು ಹಗೆತನ, ಲಿಂಗ ತಾರತಮ್ಯ, ಬಡವ ಬಲ್ಲಿದರೆಂಬ ವರ‍್ಗ  ತಾರತಮ್ಯ ಎಂಬ ತಿರುಳಿನಲ್ಲಿ ಬಳಕೆಯಾಗಿವೆ;

ಬೆಳಗಿಹರು ನೆತ್ತರೆಣ್ಣೆಯ ತಿಳಿವಿನುರಿಯಲ್ಲಿ ಕಿಚ್ಚಿಟ್ಟು ಹಳೆಕೊಳಕು ಬಣಗು ತೃಣಕೆ=ಬೆಳಗುತ್ತಿರುವ ದೀಪ ಮತ್ತು ಉರಿಯುತ್ತಿರುವ ಬೆಂಕಿಯು ರೂಪಕಗಳಾಗಿ ಬಳಕೆಗೊಂಡಿವೆ. ಕ್ರೂರತನದಿಂದ ಜನರನ್ನು ಹಿಂಸಿಸುತ್ತಿದ್ದ ಅರಸರ ಮತ್ತು ಶ್ರಮಜೀವಿಗಳಾದ ಬಡವರನ್ನು ಸುಲಿಗೆ ಮಾಡುತ್ತಿದ್ದ ಸಿರಿವಂತ ಜಮೀನ್ದಾರರ ಎದುರು ಹೋರಾಡುವಾಗ ಸಾವಿರಾರು ಮಂದಿಯ ರಕ್ತ ಹರಿದಿದೆ. ತ್ಯಾಗ ಬಲಿದಾನಗಳಿಂದ ಪಡೆದ ಸಮಾಜದಲ್ಲಿ ಮೊದಲು ಇದ್ದ ಮೂಡನಂಬಿಕೆಯ ಆಚರಣೆಗಳನ್ನು ಮತ್ತು ಜನಸಮುದಾಯದ ಒಳಿತಿಗೆ ಮಾರಕವಾಗಿದ್ದ ಸಂಪ್ರದಾಯಗಳನ್ನು ಬಿಟ್ಟು, ಎಲ್ಲರ ಒಳಿತಿಗೆ ಕಾರಣವಾಗುವ ಅರಿವಿನ ನಡೆನುಡಿಗಳಿಂದ ಈಗ ರಷ್ಯಾ ಜಪಾನು ತುರ‍್ಕಿ ದೇಶದ ಜನರು ಬಾಳತೊಡಗಿದ್ದಾರೆ ಎಂಬ ತಿರುಳಿನಲ್ಲಿ ಈ ರೂಪಕಗಳು ಬಳಕೆಯಾಗಿವೆ.

ರಾಷ್ಟ್ರ=ನಾಡು/ದೇಶ; ರಣ=ರಂಗ/ನೆಲೆ;

ಓ ಬನ್ನಿ ಸೋದರರೆ ರಾಷ್ಟ್ರರಣಕೆ=ಒಳಿತಿನ ಒಳಿತಿನ ಕಾರ‍್ಯಗಳನ್ನು  ಮಾಡಲು ದೇಶವನ್ನೇ ಒಂದು ರಂಗವನ್ನಾಗಿ ಮಾಡಿಕೊಂಡು ದುಡಿಯೋಣ ಬನ್ನಿರಿ;

ಸಿಲುಕದೆ+ಇರಿ; ಸಿಲುಕು=ವಶವಾಗು/ಸಿಕ್ಕಿಬೀಳು/ಸೆರೆಯಾಗು; ಮತ+ಎಂಬ; ಮತ=ಜನಸಮುದಾಯಗಳು ಕಟ್ಟುನಿಟ್ಟಾದ ಆಚರಣೆ ಮತ್ತು ಸಂಪ್ರದಾಯಗಳಿಂದ ರಚಿಸಿಕೊಂಡಿರುವ ಸಾಮಾಜಿಕ ಒಕ್ಕೂಟ; ಮೋಹ+ಅಜ್ಞಾನಕ್ಕೆ; ಮೋಹ=ಅತಿಯಾದ ಒಲವು; ಅಜ್ಞಾನ=ತಿಳುವಳಿಕೆಯಿಲ್ಲದಿರುವುದು; ಮತಿ+ಇಂದ; ಮತಿ=ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ಒರೆಹಚ್ಚಿನೋಡಿ, ತಪ್ಪನ್ನು ಮಾಡದೆ ಸರಿಯಾದ ನಡೆನುಡಿಯಿಂದ ಬಾಳಬೇಕೆಂಬ ಅರಿವು; ದುಡಿಯಿರೈ=ಕೆಲಸವನ್ನು ಮಾಡಿರಿ; ಲೋಕ+ಹಿತಕೆ; ಲೋಕ=ಜಗತ್ತು/ಜನಸಮುದಾಯ; ಹಿತ=ಒಳಿತು/ಒಳ್ಳೆಯದು;

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ ಮತಿಯಿಂದ ದುಡಿಯಿರೈ ಲೋಕಹಿತಕೆ=ಯಾವುದೇ ಕಾರಣದಿಂದಲೂ ಯಾವುದೇ ಮತದ ಬಗ್ಗೆ ಮೋಹಗೊಳ್ಳದೆ, ಎಲ್ಲ ಮಾನವರ ಒಳಿತಿಗೆ ನೆರವಾಗುವಂತಹ ಕಾರ‍್ಯಗಳ ಮೂಲಕ ಲೋಕಕ್ಕೆ ಒಳಿತನ್ನು ಮಾಡಿರಿ;

ಸಹವಾಸ=ಒಡನಾಟ/ನಂಟು; ಸಾಕು+ಇನ್ನು; ಸಾಕು=ಇನ್ನು ಬೇಡ/ಇಲ್ಲಿಗೆ ನಿಲ್ಲಿಸು; ಸೇರಿರೈ=ಸೇರಿಕೊಳ್ಳಿರಿ; ಮನುಜ=ಮಾನವ; ಮನುಜ ಮತ=ಜಾತಿ ಮತ ದೇವರುಗಳೆಲ್ಲವನ್ನೂ ನಿರಾಕರಿಸಿ ಜಗತ್ತಿನಲ್ಲಿರುವ ಎಲ್ಲ ಮಾನವರು ಒಂದೇ ಎಂಬ ತಿಳುವಳಿಕೆಯಿಂದ ರಚನೆಗೊಂಡಿರುವ ಸಾಮಾಜಿಕ ಒಕ್ಕೂಟ;

ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ=ಮಾನವನನ್ನು ಸಂಕುಚಿತ ವ್ಯಕ್ತಿಯನ್ನಾಗಿ ರೂಪಿಸಿ, ಲೋಕದಲ್ಲಿನ ಜನಸಮುದಾಯದ ಬಾಳನ್ನೇ ಸಂಕಟಕ್ಕೆ ಗುರಿಯನ್ನಾಗಿಸುವ ಎಲ್ಲ ಮತಗಳನ್ನು ನಿರಾಕರಿಸಿ, ಮನುಜಮತಕ್ಕೆ ಸೇರಿರಿ;

ವಿಶ್ವ=ಜಗತ್ತು/ಪ್ರಪಂಚ; ಪಥ=ದಾರಿ;

ಓ ಬನ್ನಿ ಸೋದರರೆ ವಿಶ್ವಪಥಕೆ=ವಿಶ್ವವು ನಮ್ಮೆಲ್ಲರಿಗೂ ಸೇರಿದ್ದು ಎಂಬ ಹಿರಿದಾದ ಮನಸ್ಸಿನಿಂದ ಜತೆಗೂಡಿ, ಜಗತ್ತಿನ ಸಿರಿಸಂಪದಗಳು ಎಲ್ಲರಿಗೂ ಸಮಾನವಾಗಿ ದೊರೆತು, ಪ್ರತಿಯೊಬ್ಬ ವ್ಯಕ್ತಿಯು ಅನ್ನ ಬಟ್ಟೆ ವಸತಿ ವಿದ್ಯೆ ಉದ್ಯೋಗ ಆರೋಗ್ಯವನ್ನು ಪಡೆದು ನೆಮ್ಮದಿಯಿಂದ ಬಾಳುವಂತಾಗಲು ನಾವೆಲ್ಲರೂ ಶ್ರಮಿಸೋಣ ಬನ್ನಿರಿ

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: