ಅಕ್ಕಮ್ಮನ ವಚನಗಳ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು : ಅಕ್ಕಮ್ಮ
ಕಾಲ : ಕ್ರಿ.ಶ.ಹನ್ನೆರಡನೆಯ ಶತಮಾನ
ದೊರೆತಿರುವ ವಚನಗಳು : 155
ಅಂಕಿತನಾಮ : ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ

***

ವ್ರತವೆಂಬುದೇನು
ಮನ ವಿಕಾರಿಸುವುದಕ್ಕೆ ಕಟ್ಟಿದ ಗೊತ್ತು
ಜಗದ ಕಾಮಿಯಂತೆ ಕಾಮಿಸದೆ
ಜಗದ ಕ್ರೋಧಿಯಂತೆ ಕ್ರೋಧಿಸದೆ
ಜಗದ ಲೋಭಿಯಂತೆ ಲೋಭಿಸದೆ
ಮಾಯಾ ಮೋಹಂಗಳು ವರ್ಜಿತವಾಗಿ
ಮನ ಬಂದಂತೆ ಆಡದೆ
ತನು ಬಂದಂತೆ ಕೂಡದೆ
ವ್ರತದಂಗಕ್ಕೆ ಸಂಗವಾಗಿ
ನಿಂದ ಸದ್ಭಕ್ತನ ಅಂಗವೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ.

ವ್ರತವೆಂಬುದು ವ್ಯಕ್ತಿಯು ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ತನ್ನ ಮತ್ತು ಸಹಮಾನವರ ಒಳಿತಿಗಾಗಿ ಒಳ್ಳೆಯ ನಡೆನುಡಿಯನ್ನು ಸದಾಕಾಲ ಹೊಂದಿರಲು ಪಡೆಯುವ ಮಾನಸಿಕ ತರಬೇತಿಯೇ ಹೊರತು, ದೇವರನ್ನು ಪೂಜಿಸುವಾಗ ಮಾಡುವ ಬಹು ಬಗೆಯ ಆಚರಣೆಗಳಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ವ್ರತ+ಎಂಬುದು+ಏನು; ವ್ರತ=ವ್ಯಕ್ತಿಯು ಮಿಂದು ಮಡಿಯುಟ್ಟು, ಉಪವಾಸವಿದ್ದು, ದೇವರ ಹೆಸರನ್ನು ಜಪಿಸುತ್ತ ಹೂ ಹಣ್ಣು ಕಾಯಿ ಅನ್ನ ಪಾನಗಳನ್ನು ದೇವರ ಮುಂದೆ ಎಡೆಯಾಗಿ ಇಟ್ಟು, ದೀಪ ದೂಪಗಳಿಂದ ಬೆಳಗುತ್ತ, ದೇವರ ಅನುಗ್ರಹವನ್ನು ಪಡೆಯಲು ಮತ್ತು ದೇವರನ್ನು ಒಲಿಸಿಕೊಳ್ಳಲು ಮಾಡುವ ನಿಯಮಿತವಾದ ಆಚರಣೆಗಳನ್ನು ವ್ರತವೆಂದು ಕರೆಯುತ್ತಾರೆ. ವ್ರತವನ್ನು ಮಾಡುವಾಗ “ಇಂತಹ ದೇವರಿಗೆ ಇಂತಹ ರೀತಿಯಲ್ಲಿಯೇ ಪೂಜೆಯನ್ನು ಮಾಡಬೇಕು” ಎಂಬ ಕಟ್ಟುಕಟ್ಟಲೆಯಿರುತ್ತದೆ; ಎಂಬುದು=ಎನ್ನುವುದು;

ಮನ=ಮನಸ್ಸು; ವಿಕಾರ=ಆಕಾರ ಕೆಟ್ಟ ರೀತಿಯಲ್ಲಿ ಬದಲಾಗುವುದು; ಕಟ್ಟು=ನಿಯಮಿಸು/ಅಳವಡಿಸು; ಗೊತ್ತು=ನೆಲೆ/ಕೊಟ್ಟಿಗೆಯಲ್ಲಿ ದನಕರುಗಳನ್ನು ಕಟ್ಟುವ ಜಾಗ;

ವ್ರತವೆಂಬುದೇನು, ಮನ ವಿಕಾರಿಸುವುದಕ್ಕೆ ಕಟ್ಟಿದ ಗೊತ್ತು=ವ್ರತ ಎಂದರೆ ಏನೆಂದು ತಿಳಿದಿರುವೆ? ಮನಸ್ಸನ್ನು ಹತೋಟಿ ತಪ್ಪದಂತೆ ಕಟ್ಟಿಹಾಕಿರುವ ಒಂದು ನೆಲೆ;

ಜಗ=ಪ್ರಪಂಚ/ಲೋಕ; ಕಾಮಿ+ಅಂತೆ; ಕಾಮ=ಬಯಕೆ/ಇಚ್ಚೆ/ಆಸೆ; ಕಾಮಿ=ಅತಿ ಹೆಚ್ಚಿನ ಬಯಕೆಗಳುಳ್ಳವನು;

ಜಗದ ಕಾಮಿ=ಜೀವನದ ಉದ್ದಕ್ಕೂ ಮಯ್ ಮನದ ಬಯಕೆಗಳಲ್ಲೇ ತೊಳಲಾಡುತ್ತ ಯಾವುದರಿಂದಲೂ ನೆಮ್ಮದಿಯನ್ನು ಪಡೆಯದೆ ಪರಿತಪಿಸುತ್ತಿರುವ ವ್ಯಕ್ತಿ; ಕಾಮಿಸದೆ=ಅತಿಯಾಗಿ ಆಸೆಪಡದೆ;

ಕ್ರೋಧಿ+ಅಂತೆ; ಕ್ರೋಧ=ಸಿಟ್ಟು/ಕೋಪ;

ಜಗದ ಕ್ರೋಧಿ=ಒಂದಲ್ಲ ಒಂದು ಕಾರಣಕ್ಕಾಗಿ ಇತರರ ಬಗ್ಗೆ ಸದಾಕಾಲ ಕೋಪದಿಂದ ಸಿಡಿಮಿಡಿಗೊಳ್ಳುವ ವ್ಯಕ್ತಿ; ಕ್ರೋಧಿಸದೆ=ಕೋಪವನ್ನು ಮಾಡಿಕೊಳ್ಳದೆ;

ಲೋಭಿ+ಅಂತೆ; ಲೋಭಿ=ಜಿಪುಣ;

ಜಗದ ಲೋಭಿ=ಜೀವನದ ಅಗತ್ಯಗಳಿಗಾಗಿ ಹಣವನ್ನು ವೆಚ್ಚ ಮಾಡದೆ, ಸಂಪತ್ತನ್ನು ಕೂಡಿಟ್ಟುಕೊಳ್ಳುವ ವ್ಯಕ್ತಿ; ಲೋಭಿಸದೆ=ಸಂಪತ್ತಿನ ಸಂಗ್ರಹಕ್ಕಾಗಿಯೇ ಚಿಂತಿಸದೆ;

ಮಾಯೆ=ಇರುವುದನ್ನು ಇಲ್ಲವೆಂದು—ಇಲ್ಲದ್ದನ್ನು ಇದೆಯೆಂದು ತಿಳಿದಿರುವುದು; ಮೋಹ=ಯಾವುದೇ ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಅತಿಯಾದ ಒಲವು; ವರ್ಜಿತ=ಬಿಟ್ಟ/ತ್ಯಜಿಸಿದ;

ಮಾಯಾ ಮೋಹಂಗಳು ವರ್ಜಿತವಾಗಿ=ತಪ್ಪುಕಲ್ಪನೆ ಮತ್ತು ಅತಿಯಾದ ಒಲವಿನಿಂದ ಕೂಡಿದ ನಡೆನುಡಿಗಳನ್ನು ತ್ಯಜಿಸಿ; ಮನ ಬಂದಂತೆ ಆಡುವುದು=ಮನಸ್ಸಿನಲ್ಲಿ ಸದಾಕಾಲ ಮೂಡಿಬರುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತೋಟಿಯಲ್ಲಿಟ್ಟುಕೊಳ್ಳದೆ ವರ‍್ತಿಸುವುದು;

ಮನ ಬಂದಂತೆ ಆಡದೆ=ಕೆಟ್ಟ ನಡೆನುಡಿಗಳಲ್ಲಿ ತೊಡಗದೆ/ಸಮಾಜಕ್ಕೆ ಕೇಡನ್ನುಂಟುಮಾಡುವ ಕೆಲಸಗಳನ್ನು ಮಾಡದೆ;

ತನು=ದೇಹ/ಶರೀರ; ತನು ಬಂದಂತೆ ಕೂಡು=ದೇಹದಲ್ಲಿ ತುಡಿಯುವ ಕಾಮದ ಬಯಕೆಯನ್ನು ಈಡೇರಿಸಿಕೊಳ್ಳಲು ಅನೇಕ ವ್ಯಕ್ತಿಗಳೊಡನೆ ಕಾಮದ ನಂಟನ್ನು ಪಡೆಯುವುದು;

ತನು ಬಂದಂತೆ ಕೂಡದೆ=ಸಮಾಜ ಒಪ್ಪಿತವಲ್ಲದ ಬಗೆಯಲ್ಲಿ ಕಾಮದ ನಂಟನ್ನು ಹೊಂದದೆ;

ವ್ರತದ+ಅಂಗಕ್ಕೆ; ಅಂಗ=ದೇಹ; ಸಂಗ+ಆಗಿ; ಸಂಗ=ಹೊಂದಿಕೆ/ಸಾಮರಸ್ಯ; ನಿಂದ=ನಿಂತಿರುವ/ಬಾಳುತ್ತಿರುವ;

ವ್ರತದಂಗಕ್ಕೆ ಸಂಗವಾಗಿ ನಿಂದ=ಒಳ್ಳೆಯ ನಡೆನುಡಿಯಿಂದ ಕೂಡಿದ ವ್ಯಕ್ತಿಯಾಗಿ ಬಾಳುತ್ತಿರುವ;

ಸದ್ಭಕ್ತ=ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ತಿಳಿದು ಬಾಳುತ್ತಿರುವವನು;

ಆಚಾರ=ಒಳ್ಳೆಯ ನಡೆನುಡಿ; ಪ್ರಾಣ=ಉಸಿರು/ಜೀವ; ರಾಮೇಶ್ವರಲಿಂಗದ+ಅಂಗ; ರಾಮೇಶ್ವರಲಿಂಗ=ಶಿವನ ಮತ್ತೊಂದು ಹೆಸರು;

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ=ಅಕ್ಕಮ್ಮನ ವಚನಗಳಲ್ಲಿ ಕಂಡುಬರುವ ಅಂಕಿತನಾಮ. ವ್ಯಕ್ತಿಯ ಒಳ್ಳೆಯ ನಡೆನುಡಿಗಳಲ್ಲಿಯೇ ಶಿವನ ಉಸಿರು ನೆಲೆಸಿದೆ ಎಂಬ ನಿಲುವನ್ನು ಅಕ್ಕಮ್ಮನು ಹೊಂದಿದ್ದಳು.

ಈ ವಚನದಲ್ಲಿ ಅಕ್ಕಮ್ಮನವರು ಬಹು ದೊಡ್ಡ ಸಂಗತಿಯೊಂದನ್ನು ಕುರಿತು ಹೇಳಿದ್ದಾರೆ. ಜನರು ಮಾಡುತ್ತಿರುವ ದೇವರ ಹೆಸರಿನ ವ್ರತಗಳಿಂದ ಉಪವಾಸ ಮತ್ತು ಜಪತಪ ಮುಂತಾದ ಆಚರಣೆಗಳ ಕಟ್ಟುಪಾಡುಗಳಿಗೆ ವ್ಯಕ್ತಿಯ ಮಯ್ ಮನಸ್ಸು ಒಳಪಡುತ್ತದೆ ಹಾಗೂ ವ್ಯಕ್ತಿಯ ಹಣ ವೆಚ್ಚವಾಗುತ್ತದೆ. ಈ ರೀತಿ ಮಾಡುವ ವ್ರತಕ್ಕೂ ವ್ಯಕ್ತಿಯ ಸಾಮಾಜಿಕ ನಡೆನುಡಿಗೂ ಯಾವುದೇ ನಂಟು ಇರುವುದಿಲ್ಲ. ಆದ್ದರಿಂದ ಅಕ್ಕಮ್ಮನವರು “ವ್ಯಕ್ತಿಯನ್ನು ಒಳಗೊಂಡಂತೆ ಸಹಮಾನವರ ಮತ್ತು ಸಮಾಜದ ಒಳಿತಿಗೆ ನೆರವಾಗುವಂತಹ ಒಳ್ಳೆಯ ನಡೆನುಡಿಗಳನ್ನು” ವ್ರತವೆಂದು ಪರಿಗಣಿಸಿದ್ದಾರೆ.

ಕ್ರಿ.ಪೂ. ಆರನೆಯ ಶತಮಾನದಲ್ಲಿದ್ದ ಗೌತಮ ಬುದ್ದರು ವ್ಯಕ್ತಿಯು ತನ್ನ ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವದಕ್ಕಾಗಿ ನಿತ್ಯವೂ ಬಗೆಬಗೆಯ ವ್ಯಾಯಾಮಗಳ ಮೂಲಕ ದೇಹಕ್ಕೆ ತರಬೇತಿಯನ್ನು ನೀಡುವಂತೆಯೇ, ವ್ಯಕ್ತಿಯು ತನ್ನ, ತನ್ನ ಕುಟುಂಬದ, ಸಹಮಾನವರ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ, ಅಂದರೆ ಎಲ್ಲರ ಒಳಿತಿಗಾಗಿ ನಿತ್ಯವೂ ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು, ಒಳ್ಳೆಯ ನಡೆನುಡಿಯಿಂದ ಬಾಳಲು ಅಗತ್ಯವಾದ ಮಾನಸಿಕ ತರಬೇತಿಯನ್ನು ನಿರಂತರವಾಗಿ ಪಡೆಯುತ್ತಿರಬೇಕೆಂದು ಹೇಳಿದ್ದಾರೆ.

ಗೌತಮ ಬುದ್ದ ಮತ್ತು ಅಕ್ಕಮ್ಮನವರ ನಿಲುವಿನಲ್ಲಿ ವ್ರತ ಎಂಬುದು “ವ್ಯಕ್ತಿಯು ಒಳ್ಳೆಯ ನಡೆನುಡಿಗಳನ್ನು ರೂಪಿಸಿಕೊಂಡು ಬಾಳುವುದಕ್ಕಾಗಿ ತನ್ನ ದೇಹ ಮತ್ತು ಮನಸ್ಸಿಗೆ ನೀಡುವ ಮಾನಸಿಕ ತರಬೇತಿಯಾಗಿದೆ.”

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: