‘ನಮಗೆ ನಾವೇ ಮಾರ‍್ಗದರ‍್ಶಕರು’

.

ನಾಯಕ, Hero

ನಮಗೆ ನಿಜವಾದ ಮಾರ‍್ಗದರ‍್ಶಕರೆಂದರೆ ಯಾರು?

ನಮ್ಮ ನಿಜವಾದ ಮಾರ‍್ಗದರ‍್ಶಕ ನಮ್ಮ ಮನಸ್ಸು. ‘ನಾನು ಯಾರು? ನಾನು ಏನು? ನನ್ನ ಇತಿಮಿತಿಗಳೇನು? ನನ್ನ ತುಡಿತಗಳು ಮಿಡಿತಗಳು ಯಾವುವು? ನನ್ನ ಶಕ್ತಿ ಏನು? ನನ್ನ ದೌರ‍್ಬಲ್ಯ ಯಾವುದು?’ ಇದರ ಸಂಪೂರ‍್ಣ ವಿಶ್ಲೇಶಕ ನಾನೇ! ಆದ್ದರಿಂದ ನನ್ನ ನಿಜವಾದ ಮಾರ‍್ಗದರ‍್ಶಕ ನಾನೇ! ಅಂದರೆ ನನ್ನ ಮನಸ್ಸು.

ಬಿತ್ತಿದಂತೆ ಬೆಳೆ, ಆಲೋಚನೆಯಂತೆ ವ್ಯಕ್ತಿತ್ವ. ನಾವು ಮನಸ್ಸಿಗೆ ಯಾವ ರೀತಿ ಆಗ್ನೆ ಮಾಡುತ್ತೀನೋ ಅದರಂತೆ ಅದು ಪ್ರತಿಕ್ರಿಯಿಸುತ್ತದೆ. ನಿತ್ರಾಣವಾದರೂ ಹುಲಿ ಅಟ್ಟಿಸಿಕೊಂಡು ಬಂದಾಗ “ಮಗನೆ ನೀನು ಹುಲಿಗೆ ಆಹಾರವಾಗುತ್ತಿ, ಜೀವ ಉಳಿಯಬೇಕಾ ನಿನ್ನ ಕಾಲಿಗೆ ಬುದ್ದಿ ಹೇಳು, ಓಡು.! ಓಡಿ ಜೀವ ಉಳಿಸಿಕೋ” ಎಂದು ಮನಸ್ಸು ಮೆದುಳಿಗೆ ಆಗ್ನೆ ಮಾಡಿದಾಕ್ಶಣ, ಅದೆಲ್ಲಿಂದ ಬರುತ್ತದೋ ದೈತ್ಯ ಶಕ್ತಿ, ಓಡಿ ಓಡಿ ಹೇಗೊ ಜೀವ ಉಳಿಸಿಕೊಳ್ಳುವ ಕೆಲಸವಾಗುತ್ತದೆ. ಇಲ್ಲಿ ಮನುಶ್ಯನಿಗೆ ತನಗೆ ತಾನೇ ಮಾರ‍್ಗದರ‍್ಶಕನಾಗುವ, ಜೀವರಕ್ಶಕನಾಗುವ ಹಾಗೆ ಮಾಡುವುದು ಮನಸ್ಸು!

ಮನಸಿಗೆ “ಸುಕವಾಗಿ ಮುದವಾಗಿ ಹೊದ್ದು ಮಲಗು, ಎದ್ದು ಮೈ ಮುರಿದು ಏಕೆ ಹೈರಾಣಾಗುತ್ತಿ?” ಎಂದು ಅಣತಿ ಮಾಡಿ ನೋಡಿ. ಬ್ರಹ್ಮಾಂಡ ಸೋಮಾರಿತನ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ ಮತ್ತು ಸಣ್ಣ ಕೆಲಸವೂ ಕೂಡ ಗುಡ್ಡದಂತೆ ಕಂಡು ಏನನ್ನೂ ಮಾಡಲು ಮನಸ್ಸು ಮಾಡದಂತೆ ಮಾಡಿ ಇತರರಿಗೂ ಹೊರೆಯಾಗುವಂತೆ ಮಾಡುತ್ತದೆ. ಇದು ನಮ್ಮ ಪ್ರಗತಿಗೆ ಮಾರಕವಶ್ಟೇ ಅಲ್ಲ, ಇದರಿಂದ ಕ್ರಮೇಣ ದಾರಿದ್ರ‍್ಯ ನಮ್ಮ ಮನೆದೇವರಾಗಿ ಬಿಡುತ್ತದೆ.

ಚುರುಕಿನ ಬುಗ್ಗೆ, ಅಯಸ್ಕಾಂತದ ಸೆಳೆತ, ಪಾದರಸದ ಓಟ – ಇಂತಹ ಅಣತಿ ಮನಸ್ಸಿಗೆ ನೀಡಿದರೆ ವಿಶ್ವವೇ ಅಚ್ಚರಿಗೊಳಿಸುವ ಅದ್ಬುತ ಸಾದನೆ ಮಾಡಿ ಜಗದ್ವಿಕ್ಯಾತಿಯಾಗಿ ಬಿಡಬಹುದು! ‘ ಅರಿವೇ ಗುರು, ನುಡಿ ಜ್ಯೋತಿರ‍್ಲಿಂಗ’ ಎನ್ನುವ ಹಾಗೆ, ಮನುಶ್ಯನ ಬದುಕಿನಲ್ಲಿ ಪ್ರತಿಯೊಂದು ಕಲಿಕೆಯೂ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಾ, ನಮ್ಮ ಜೀವನಕ್ಕೆ ಮಾರ‍್ಗದರ‍್ಶಕನಾಗುತ್ತಾ ಹೋಗುತ್ತದೆ. ನಮ್ಮೊಳಗಿನ ಅರಿವು ನಮ್ಮನ್ನು ಪುಟವಿಟ್ಟ ಚಿನ್ನವಾಗಿಸಿ ನಮ್ಮ ವ್ಯಕ್ತಿತ್ವಕ್ಕೆ ಹೊಳಪು ನೀಡುತ್ತಾ ಹೋಗುತ್ತದೆ.

ಸಿದ್ದಾರ‍್ತ ಬೋದಿಸತ್ವ ಮರದ ಕೆಳಗೆ ಕುಳಿತು ದ್ಯಾನಿಸುತ್ತ, ಅಲ್ಲಿ ಆತನಿಗೆ ಜ್ನಾನೋದಯವಾಗಿ ಬುದ್ದನಾದ. ಅಂದರೆ, ತನಗೆ ತಾನೆ ಮಾರ‍್ಗದರ‍್ಶಕನಾಗಿ ಅರಿವನ್ನು ಮೂಡಿಸಿಕೊಂಡು ತನ್ನೊಳಗಿನ ತಮವನ್ನೆಲ್ಲ ಹೊಡೆದೋಡಿಸಿ, ಅಂದಕಾರದಲ್ಲಿರುವ ಇತರ ದುಕ್ಕಿಗಳಿಗೆ, ದಟ್ಟ ದಾರಿದ್ರ‍್ಯರ ಬಾಳಿಗೆ ಬೆಳಕಾದ. ಯಾರು ಅರಿವನ್ನು ಪಡೆಯುತ್ತಾರೋ ಅವರಿಗೆ ಅವರೇ ನಿಸ್ಸಂಶಯವಾಗಿ ಮಾರ‍್ಗದರ‍್ಶಕರಾಗುತ್ತಾರೆ. ಇಂತಹವರು ಸಹಜ ನಾಯಕರಾಗುವುದರೊಂದಿಗೆ, ಸ್ವಾಬಿಮಾನಿಯಾಗಿ ವಿಶ್ವಕ್ಕೆ ಮಾದರಿಯಾಗುತ್ತಾರೆ.

ಆದ್ದರಿಂದ ‘ಮಾರ‍್ಗದರ‍್ಶಕನಾಗಿ ಬೆಳೆಯುವುವನು ಗುಲಾಮತನದಿಂದ ದೂರವಾಗಿ ಸ್ವಯಂ ಪ್ರಬೆಯ ನಾಯಕನಾಗಿ ಬೆಳೆದು ಇತರರಿಗೆ ಮಾರ‍್ಗದರ‍್ಶಕನಾಗಬಲ್ಲ’

( ಚಿತ್ರಸೆಲೆ : aier.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: