ಆದಯ್ಯನ ವಚನಗಳ ಓದು – 2ನೆಯ ಕಂತು

ಸಿ.ಪಿ.ನಾಗರಾಜ.

ವಚನಗಳು, Vachanas

ಕಳವು ಪಾರದ್ವಾರ
ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ
ಕ್ರೋಧ ಲೋಭ ಚಿತ್ತದಲ್ಲಿ ಮೊಳೆಯದೆ
ಕಪಟ ಕಳವಳ ಬುದ್ಧಿಯಲ್ಲಿ ಬೆಳೆಯದೆ
ಕುಂದು ನಿಂದೆಗಳಿಂದ ಕೆಡೆನುಡಿವ ವಾಕು
ಮನದಲ್ಲಿ ಪಲ್ಲವಿಸದೆ
ಮದ ಮತ್ಸರ ಅಹಂಕಾರದಲ್ಲಿ ಮುಗುಳೊತ್ತದೆ
ಪ್ರಕೃತಿ ವಿಕೃತಿ ಭ್ರಾಂತು ಭಾವದಲ್ಲಿ ಫಲಿಸದೆ
ಸುಜ್ಞಾನದಿಂದ ಧರ್ಮಾಧರ್ಮಂಗಳ ವರ್ಮನರಿತು
ಮನಕ್ಕೆ ಮನಸ್ಸಾಕ್ಷಿಯಾಗಿ
ಸದ್ವರ್ತನೆ ಸಮತೆ ಸಾರಹೃದಯ ಅನಿಂದೆ
ಅನುಬಂಧ ಅಕಪಟ ಪಟುತರವಾಗಿ
ಸಟೆಯಳಿದು ದಿಟ ಘಟಿಸಿ ನಿಜ ನಿರುಗೆಯಾದಲ್ಲಿ
ಸೌರಾಷ್ಟ್ರ ಸೋಮೇಶ್ವರನೆಡೆಬಿಡವಿಲ್ಲದಿಪ್ಪನು.

ವ್ಯಕ್ತಿಯು ತನ್ನ ಮಯ್ ಮನದಲ್ಲಿ ಸದಾಕಾಲ ತುಡಿಯುತ್ತಿರುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿರುವ ಎಡೆಯಲ್ಲಿ ದೇವರಾದ ಶಿವನು ನೆಲೆಸಿರುತ್ತಾನೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ನಾಡಿನಲ್ಲಿರುವ ಜನಸಮುದಾಯವೆಲ್ಲವೂ ಜೀವನಕ್ಕೆ ಅಗತ್ಯವಾದ ‘ಅನ್ನ-ಬಟ್ಟೆ-ವಸತಿ-ವಿದ್ಯೆ-ಉದ್ಯೋಗ-ಆರೋಗ್ಯ’ ವನ್ನು ಪಡೆದು ಸರ್‍ವಸಮಾನತೆಯಿಂದ ಬಾಳಬೇಕಾದರೆ, ಪ್ರತಿಯೊಬ್ಬ ವ್ಯಕ್ತಿಯು ಒಳ್ಳೆಯ ನಡೆನುಡಿಗಳನ್ನು ಹೊಂದಿರಬೇಕು ಎಂಬ ನಿಲುವನ್ನು ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಹೊಂದಿದ್ದರು. ಆದ್ದರಿಂದಲೇ ಅವರು ದೇಗುಲಗಳನ್ನು ಮತ್ತು ದೇವರ ಕರುಣೆಯನ್ನು ಪಡೆಯಲು ಮಾಡುವ ಸಾಂಪ್ರದಾಯಿಕವಾದ ಆಚರಣೆಗಳನ್ನು ನಿರಾಕರಿಸಿದ್ದರು. ದೇವರನ್ನು ವ್ಯಕ್ತಿಯು ಆಡುವ ಒಳ್ಳೆಯ ನುಡಿಯಲ್ಲಿ ಮತ್ತು ಮಾಡುವ ಒಳ್ಳೆಯ ಕಾಯಕದಲ್ಲಿ ಕಾಣುತ್ತಿದ್ದರು.

ಕಳವು=ಕಳ್ಳತನ; ಪಾರದ್ವಾರ=ಹಾದರ; ಜೀವ+ಹಿಂಸೆ+ಎಂಬ+ಇವನ್+ಅತ್ತ+ಅತ್ತಲೆ; ಜೀವಹಿಂಸೆ=ಜೀವಿಗಳಿಗೆ ಸಾವು ನೋವನ್ನುಂಟುಮಾಡುವುದು; ಎಂಬ=ಎನ್ನುವ; ಇವನ್=ಇಂತಹ ಕೆಟ್ಟ ನಡೆನುಡಿಯನ್ನು; ಅತ್ತ=ಆ ಕಡೆ; ಅತ್ತತ್ತಲೆ=ಅತಿದೂರಕ್ಕೆ; ಕೆಡೆನೂಂಕಿ=ಕೆಳಕ್ಕೆ ಬೀಳುವಂತೆ ದಬ್ಬಿ/ತಳ್ಳಿ. ಅಂದರೆ ಅವುಗಳನ್ನು ದೂರವಿಟ್ಟು;

ಕಳವು ಪಾರದ್ವಾರ ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ=ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಕಳ್ಳತನ,ಹಾದರ ಮತ್ತು ಜೀವಿಗಳ ಕೊಲೆಸುಲಿಗೆಯಂತಹ ಕೆಟ್ಟಕೆಲಸಗಳನ್ನು ಮಾಡದೆ;

ಕ್ರೋಧ=ಸಿಟ್ಟು/ಕೋಪ; ಲೋಭ=ಅತಿಯಾಸೆ; ಚಿತ್ತ=ಮನಸ್ಸು; ಮೊಳೆ=ಮೂಡು/ಚಿಗುರು/ಕುಡಿಯೊಡೆಯುವುದು;

ಕ್ರೋಧ ಲೋಭ ಚಿತ್ತದಲ್ಲಿ ಮೊಳೆಯದೆ=ವ್ಯಕ್ತಿಯ ಮನದಲ್ಲಿ ಇತರರಿಗೆ ಕೇಡನ್ನು ಬಗೆಯಬೇಕೆಂಬ ಕೋಪದ, ಸೇಡಿನ, ಹಗೆತನದ ಒಳಮಿಡಿತ ಮತ್ತು ಇರುವ ಸಂಪತ್ತೆಲ್ಲವೂ ತನ್ನೊಬ್ಬನಲ್ಲಿಯೇ ಇರಬೇಕೆಂಬ ದುರಾಶೆಯು ಮೂಡದೆ;

ಕಪಟ=ವಂಚನೆ/ಮೋಸ; ಕಳವಳ=ತುಸುವಾದರೂ ನೆಮ್ಮದಿಯಿಲ್ಲದೆ ಸಂಕಟದಿಂದ ನರಳುವುದು; ಬುದ್ಧಿ=ಅರಿವು/ತಿಳಿವು; ಬೆಳೆ=ದೊಡ್ಡದಾಗುವುದು;

ಕಪಟ ಕಳವಳ ಬುದ್ಧಿಯಲ್ಲಿ ಬೆಳೆಯದೆ=ವ್ಯಕ್ತಿಯ ಮನದಲ್ಲಿ ಪರರನ್ನು ವಂಚಿಸಿ ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುವಂತಹ ಕೆಟ್ಟಗುಣ ಉಂಟಾಗದೆ;

ಕುಂದು=ಕುಗ್ಗು/ತಗ್ಗು; ನಿಂದೆ=ತೆಗಳಿಕೆ/ಬಯ್ಯುವಿಕೆ; ಕೆಡೆನುಡಿ=ಕೆಟ್ಟ ಮಾತು; ವಾಕು=ಮಾತು; ಮನ=ಮನಸ್ಸು; ಪಲ್ಲವಿಸು=ಚಿಗುರು/ಕುಡಿಯಿಡು;

ಕುಂದು ನಿಂದೆಗಳಿಂದ ಕೆಡೆನುಡಿವ ವಾಕು ಮನದಲ್ಲಿ ಪಲ್ಲವಿಸದೆ=ಇತರರ ವ್ಯಕ್ತಿತ್ವವನ್ನು ಅಲ್ಲಗಳೆದು, ಅವರನ್ನು ಅಪಮಾನಿಸುವಂತಹ ಬಯ್ಗುಳದ ನುಡಿಗಳನ್ನಾಡಬೇಕೆಂಬ ಕೆಟ್ಟ ಆಲೋಚನೆಯು ವ್ಯಕ್ತಿಯ ಮನದಲ್ಲಿ ಮೂಡದೆ;

ಮದ=ಸೊಕ್ಕು/ಗರ‍್ವ; ಮತ್ಸರ=ಹೊಟ್ಟೆಕಿಚ್ಚು; ಅಹಂಕಾರ=ನಾನೇ ಎಲ್ಲರಿಗಿಂತ ದೊಡ್ಡವನು ಎಂಬ ಒಳಮಿಡಿತ; ಮುಗುಳ್+ಒತ್ತದೆ; ಮುಗುಳ್=ಮೂಡು/ಮೊಳೆ; ಒತ್ತು=ಆಕ್ರಮಿಸು/ಮುತ್ತು; ಮುಗುಳೊತ್ತು=ಉಂಟಾಗು/ಹೊರಹೊಮ್ಮು;

ಮದ ಮತ್ಸರ ಅಹಂಕಾರದಲ್ಲಿ ಮುಗುಳೊತ್ತದೆ=ವ್ಯಕ್ತಿಯ ನಡೆನುಡಿಯಲ್ಲಿ ಸೊಕ್ಕಿನ, ಹೊಟ್ಟೆಕಿಚ್ಚಿನ ಮತ್ತು ಅಹಂಕಾರದ ವರ್‍ತನೆಗಳು ಹೊರಹೊಮ್ಮದೆ;

ಪ್ರಕೃತಿ=ಕಣ್ಣ ಮುಂದಿನ ಜಗತ್ತಿನಲ್ಲಿರುವ ಎಲ್ಲ ಬಗೆಯ ಜಡವಸ್ತುಗಳು ಮತ್ತು ಜೀವರಾಶಿಗಳು; ವಿಕೃತಿ=ಬದಲಾವಣೆ/ವ್ಯತ್ಯಾಸ; ಭ್ರಾಂತು=ಇಲ್ಲದ್ದನ್ನು ಇದೆಯೆಂದು—ಇರುವುದನ್ನು ಇಲ್ಲವೆಂದು ತಿಳಿಯುವುದು; ಭಾವ=ಮನಸ್ಸಿನಲ್ಲಿ ಮೂಡುವ ಒಳಮಿಡಿತಗಳು; ಫಲಿಸು=ಒದಗು/ಈಡೇರು/ಉಂಟಾಗು;

ಪ್ರಕೃತಿ ವಿಕೃತಿ ಭ್ರಾಂತು ಭಾವದಲ್ಲಿ ಫಲಿಸದೆ=ನಿಸರ್‍ಗದಲ್ಲಿರುವ ವಸ್ತುಗಳಲ್ಲಿ ಮತ್ತು ಜೀವರಾಶಿಗಳಲ್ಲಿ ಯಾವುದನ್ನು ಮೇಲು ಕೀಳು ಎಂಬ ತಾರತಮ್ಯವನ್ನು ಮಾಡದೆ;

ಸುಜ್ಞಾನ+ಇಂದ; ಸುಜ್ಞಾನ=ಒಳ್ಳೆಯ ತಿಳುವಳಿಕೆ; ಧರ್ಮ+ಅಧರ್ಮಮ್+ಗಳ; ಧರ್ಮ=ಒಳ್ಳೆಯ ನಡೆನುಡಿ; ಅಧರ್ಮ=ಕೆಟ್ಟ ನಡೆನುಡಿ; ವರ್ಮನ್+ಅರಿತು; ವರ್ಮ=ಗುಟ್ಟು/ರಹಸ್ಯ; ಅರಿತು=ತಿಳಿದುಕೊಂಡು; ಮನಸ್ಸಾಕ್ಷಿ+ಆಗಿ; ಮನಸ್ಸಾಕ್ಷಿ=ವ್ಯಕ್ತಿಯ ತನ್ನ ಮನದಲ್ಲಿ ಉಂಟಾಗುವ ಒಳಮಿಡಿತಗಳಲ್ಲಿ ಕೆಟ್ಟದ್ದು ಯಾವುದು—ಒಳ್ಳೆಯದು ಯಾವುದು ಎಂಬುದನ್ನು ತಾನೇ ಒರೆಹಚ್ಚಿ ತಿಳಿಯುವುದು;

ಸುಜ್ಞಾನದಿಂದ ಧರ್ಮಾಧರ್ಮಂಗಳ ವರ್ಮನರಿತು ಮನಕ್ಕೆ ಮನಸ್ಸಾಕ್ಷಿಯಾಗಿ=ವ್ಯಕ್ತಿಯು ನಿತ್ಯಜೀವನದಲ್ಲಿ ಒಳಿತು ಕೆಡುಕಿನ ಬಗೆಗಳನ್ನು ಅರಿತುಕೊಂಡು, ಮನದಲ್ಲಿ ಮೂಡುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯ ನಡೆನುಡಿಯಿಂದ ಬಾಳಬೇಕೆಂಬ ನಿಲುವನ್ನು ತಳೆದು;

ಸದ್ವರ್ತನೆ=ಒಳ್ಳೆಯ ನಡೆನುಡಿ; ಸಮತೆ=ಯಾರನ್ನು ಮೇಲು ಕೀಳು ಎಂದು ವಿಂಗಡಿಸದೆ, ಎಲ್ಲರನ್ನೂ ಸಮಾನವಾಗಿ ಕಾಣುವುದು; ಸಾರಹೃದಯ=ಒಳ್ಳೆಯ ಮನಸ್ಸು; ಅನಿಂದೆ=ಕೆಟ್ಟ ಮಾತುಗಳನ್ನಾಡದಿರುವುದು; ಅನುಬಂಧ=ಗೆಳೆತನ; ಅಕಪಟ=ವಂಚನೆಯಿಲ್ಲದಿರುವುದು; ಪಟುತರ+ಆಗಿ; ಪಟುತರ=ಅತಿಶಯವಾದ/ಕುಶಲತೆಯುಳ್ಳ;

ಸದ್ವರ್ತನೆ ಸಮತೆ ಸಾರಹೃದಯ ಅನಿಂದೆ ಅನುಬಂಧ ಅಕಪಟ ಪಟುತರವಾಗಿ=ವ್ಯಕ್ತಿಯು ತನ್ನ ನಿತ್ಯ ಜೀವನದ ವ್ಯವಹಾರಗಳಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತ, ಯಾರನ್ನೂ ನಿಂದಿಸದೆ ಮತ್ತು ವಂಚಿಸದೆ, ಎಲ್ಲರೊಡನೆ ಒಲವು ನಲಿವು ಮತ್ತು ಗೆಳೆತನದ ಒಡನಾಟದಿಂದ ಬಾಳುವ ಕುಶಲತೆಯನ್ನು ಕರಗತಮಾಡಿಕೊಂಡು;

ಸಟೆ+ಅಳಿದು; ಸಟೆ=ಸುಳ್ಳು; ಅಳಿದು=ಇಲ್ಲವಾಗಿ/ನಾಶಗೊಂಡು; ದಿಟ=ನಿಜ; ಘಟಿಸಿ=ಕೂಡಿಕೊಂಡು/ಸೇರಿಕೊಂಡು; ನಿಜ=ವಾಸ್ತವ/ಸತ್ಯ; ನಿರುಗೆ+ಆದ+ಅಲ್ಲಿ; ನಿರುಗೆ=ನಡವಳಿಕೆ; ನಿರುಗೆಯಾದಲ್ಲಿ=ನಡವಳಿಕೆಯಾಗಿ ರೂಪುಗೊಂಡಾಗ;

ಸಟೆಯಳಿದು ದಿಟ ಘಟಿಸಿ ನಿಜ ನಿರುಗೆಯಾದಲ್ಲಿ=ವ್ಯಕ್ತಿಯ ಜೀವನದ ವ್ಯವಹಾರಗಳಲ್ಲಿ ಸುಳ್ಳು ಇಲ್ಲವಾಗಿ, ನಿಜದ ನಡೆನುಡಿಗಳು ಆಚರಣೆಗೆ ಬಂದಾಗ;

ಸೌರಾಷ್ಟ್ರ=ಇಂದಿನ ಗುಜರಾತ್ ರಾಜ್ಯದಲ್ಲಿ ಹನ್ನೊಂದು ಜಿಲ್ಲೆಗಳಿಂದ ಕೂಡಿರುವ ಒಂದು ದೊಡ್ಡ ಪ್ರಾಂತ್ಯವನ್ನು ಸೂರತ್ ಎಂದು ಕರೆಯುತ್ತಾರೆ. ಇದಕ್ಕೆ ಮೊದಲು ಸೌರಾಶ್ಟ್ರ ಎಂಬ ಹೆಸರಿತ್ತು;

ಸೋಮೇಶ್ವರನ್+ಎಡೆ+ಬಿಡವೆ+ಇಲ್ಲದೆ+ಇಪ್ಪನು; ಸೋಮೇಶ್ವರ=ಶಿವ/ಈಶ್ವರ; ಸೌರಾಷ್ಟ್ರ ಸೋಮೇಶ್ವರ=ಆದಯ್ಯನವರ ವಚನಗಳ ಅಂಕಿತನಾಮ;

ಎಡೆ=ಜಾಗ; ಬಿಡವೆ=ಬಿರುಕು/ಸೀಳು; ಎಡೆಬಿಡವಿಲ್ಲದೆ=ನಡುವೆ ಬಿರುಕಿಲ್ಲದೆ/ಜೊತೆಗೂಡಿ; ಇಪ್ಪನು=ಇರುವನು;

ಸೌರಾಷ್ಟ್ರ ಸೋಮೇಶ್ವರನೆಡೆಬಿಡವಿಲ್ಲದಿಪ್ಪನು=ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಯ ಜೊತೆಯಲ್ಲಿಯೇ ಶಿವನು ಸದಾಕಾಲ ಇರುತ್ತಾನೆ ಎಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತಿವೆ.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: