ಕವಿತೆ: ಕೊರಗಿತು ಮುಗ್ದ ಜೀವ

– ಶ್ಯಾಮಲಶ್ರೀ.ಕೆ.ಎಸ್.

ಉದ್ದುದ್ದ ದಾರಿಯಲಿ
ಕಿಕ್ಕಿರಿದ ಜನರ ಓಡಾಟ
ಬದಿಯಲ್ಲೊಂದು ಆರ‍್ತನಾದ
ಹಸಿದ ಒಡಲಿನ ತೊಳಲಾಟ

ಕರಗಳ ಚಾಚಿ ಬೇಡಿದರೂ
ವೇದನೆಯ ಕೇಳುವವರಿಲ್ಲ
ಮಾಸಿದ ಬಟ್ಟೆಗಳನ್ನು ಕಂಡು
ಓರೆಗಣ್ಣಲ್ಲೇ ನೋಡುವರು ಎಲ್ಲಾ

ಅದ್ಯಾವ ಶಾಪವೋ ಏನೋ
ಹೆತ್ತವರ ಸುಳಿವಿಲ್ಲ ಬಂದು ಬಳಗವಿಲ್ಲ
ಬಯಸಿದ್ದು ಕೊಡಿಸುವವರಿಲ್ಲ
ನೆಲೆಯಿಲ್ಲ ಸೂರಿಲ್ಲ ಒಲವ ತೋರುವವರಿಲ್ಲ

ಬೆರೆಯುವ ಬಯಕೆಯಿದ್ದರೂ
ಜೊತೆ ಸೇರಿಸುವವರಿಲ್ಲ
ಹರಿದ ಬಟ್ಟೆ ಜೋಡುಗಳ
ನೋಡಿ ಗದರುವರು ಜನರೆಲ್ಲ

ಒಳಗೊಳಗೆ ನೋವುಂಡು
ಕೊರಗಿತು ಮುಗ್ದ ಜೀವ
ಕಡೆವರೆಗೂ ಮರೆಯಾಗಲಿಲ್ಲ
ನಿರ‍್ಗತಿಕನೆಂಬ ಅಳುಕಿನ ಬಾವ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: