ಮತ್ತೆ ಬಂದ ವಸಂತ…

– ಶ್ಯಾಮಲಶ್ರೀ.ಕೆ.ಎಸ್.

ಮತ್ತೆ ಬಂದ ವಸಂತ
ಚೈತ್ರದ ಚೆಲುವಿನ ಚಿತ್ತಾರಕೆ
ಜೀವ ಬೆರೆಸಲು
ಯುಗಾದಿಯ ಕರೆ ತಂದ

ಇಳೆಗೆ ತಂಪನೀಯಲು
ಹೊಂಗೆಯ ಚಪ್ಪರವ ಹೆಣೆದ
ಹಕ್ಕಿಗಳ ಇನಿದನಿಗೆ
ಕಿವಿಯಾಗುವ ಆಸೆ ತಂದ

ಮಾಮರದ ಮುಡಿ ತುಂಬಿ
ತಳಿರು ತೋರಣದಲಿ ಮಿಂಚಿದ
ಸೂರ‍್ಯನ ಹೊಂಬೆಳಕಿನಲಿ
ಪ್ರಕ್ರುತಿಯ ಮೈಸಿರಿಯ ನೋಡೆಂದ

ಹೊಸ ವರುಶದ ಉತ್ಸಾಹದಿ
ಹೊಂಗನಸುಗಳ ಕಾಣೆಂದ
ಬೇವು ಬೆಲ್ಲದ ಸಿಹಿ ಕಹಿಯ ಸವಿಯನು
ಸಂಯಮದಿ ಸವಿಯೆಂದ

ಯುಗಾದಿಯ ಸಡಗರವ
ಕಣ್ತುಂಬಿಕೊ ಎಂದ

‘ವಸಂತ ಬಂದ ರುತುಗಳ ರಾಜ ತಾ ಬಂದ’ ಎಂಬ ಕವಿವಾಣಿಯಂತೆ ವಸಂತ ರುತುವು ಪ್ರಕ್ರುತಿಯಲ್ಲಿ ಹೊಸ ಬದಲಾವಣೆಗಳನ್ನು ಮೂಡಿಸಿ ಸಂಬ್ರಮವನ್ನು ಹಂಚುವ ರುತು. ಉಳಿದ ಎಲ್ಲ ರುತುಗಳಿಗೆ ಹೋಲಿಸಿದರೆ ಇದು ಅಸಾಮಾನ್ಯ. ವಸಂತ ರುತು ಹೊಸ ಆರಂಬದ ಸಂಕೇತವಾಗಿದೆ. ಚಳಿಗಾಲದ ಅಂತ್ಯವನ್ನು ಸೂಚಿಸಿ ಬೇಸಿಗೆ ಕಾಲವನ್ನು ಸ್ವಾಗತಿಸುವ ಕಾಲ ವಸಂತಕಾಲ. ನವಚೈತನ್ಯವನ್ನು ತುಂಬುವ ಪರ‍್ವ ಕಾಲ ಯುಗಾದಿ ಬರುವುದು ಇದೇ ರುತುವಿನಲ್ಲಿ. ಆದ್ದರಿಂದ ಚೈತ್ರ ಮಾಸದ ಆದಿಯಲ್ಲಿ ಹಬ್ಬಗಳ ಹಬ್ಬ ಯುಗಾದಿಯ ಸವಿಯನ್ನು ಉಣಬಡಿಸುವ ವಸಂತ ರುತು ಎಲ್ಲರೂ ಇಶ್ಟ ಪಡುವಂತಹ ರುತು. ಜೊತೆಗೆ ನಿಸರ‍್ಗದ ಸೌಂದರ‍್ಯಕ್ಕೆ ಜೀವಕಳೆ ತುಂಬುವಂತಹ ಮಹಾಕಾಲ ವಸಂತ.

ಹೊಂಗೆ, ಬೇವು, ಮಾವು ಹೀಗೆ ಹಲವು ಗಿಡ ಮರಗಳಿಗೆ ಜೀವದಾರೆ ಸುರಿವ ಈ ರುತುವಿನಲ್ಲಿ ಹಣ್ಣೆಲೆಗಳು ಉದುರಿ ಬೋಳಾಗಿದ್ದ ಹೊಂಗೆ ಮರವು ಚಿಗುರಿ ಹಸಿರಿನ ಚಪ್ಪರದಂತೆ ಕಂಗೊಳಿಸುತ್ತದೆ. ಇದೊಂದು ಪ್ರಕ್ರುತಿಯ ವಿಸ್ಮಯವೆನ್ನಬಹುದು. ಹೊಂಗೆಮರದ ತಂಪಿಗೆ ತಲೆದೂಗದವರಿಲ್ಲ. ಇತರೆ ಮರ ಗಿಡಗಳು ಉದುರಿ ಚಿಗುರಿದರೂ ಹೊಂಗೆಯ ಸೊಬಗಿಗೆ ಸರಿಸಾಟಿಯಿಲ್ಲ ಎನ್ನಬಹುದು. ಅಂತೆಯೇ ಅದೇ ರುತುವಿನಲ್ಲಿ ಚಿಗುರುವ ಮಾವಿನ ಎಲೆಗಳು ಯುಗಾದಿಯಂದು ಮನೆಯ ಹೆಬ್ಬಾಗಿಲುಗಳಿಗೆ ತಳಿರು ತೋರಣ ಕಟ್ಟುವ ಮೂಲಕ ಹೊಸ ಸೊಬಗನ್ನು ನೀಡುತ್ತವೆ. ಸಾಮಾನ್ಯವಾಗಿ ಈ ರುತುವು ಹಳದಿ ಹೂಗಳು ಬಿಡಲು ಸೂಕ್ತ ಕಾಲ. ಎಲ್ಲೆಲ್ಲೂ ಹಳದಿಮಯವೇ. ಹಾಗೆಂದ ಮಾತ್ರಕ್ಕೆ ಬೇರೆ ಬಣ್ಣದ ಹೂಗಳಿಗೆ ಬರವಿರುವುದಿಲ್ಲ. ಪ್ರಾಣಿ, ಪಕ್ಶಿ ಸಂಕುಲಗಳಿಗೂ ಇದು ತುಂಬಾ ಪ್ರಿಯವಾದ ರುತು. ಮಳೆ ಚಳಿಯ ಅಬ್ಬರವಿಲ್ಲದೆ ಸ್ವಚ್ಚಂದವಾಗಿ ತಿರುಗಾಡಲು ಹೇಳಿಮಾಡಿಸಿದಂತಹ ಕಾಲ ವಸಂತಕಾಲ. ಕೋಗಿಲೆಗಳ ಇಂಪಾದ ದನಿಗೆ ಇಂಬು ನೀಡುವುದರ ಜೊತೆಗೆ ಹಕ್ಕಿಗಳು ಈ ರುತುವಿನಲ್ಲಿ ಹೆಚ್ಚಾಗಿ ಗೂಡು ಕಟ್ಟುತ್ತವೆ. ಮೊಟ್ಟೆ ಇಟ್ಟು ಮರಿ ಮಾಡಲು ಕಾಯುತ್ತಿರುತ್ತವೆ. ಆಹಾರಕ್ಕಾಗಿ ಬಗೆ ಬಗೆಯ ಹಣ್ಣುಗಳು, ಬೀಜಗಳು ಸಿಗುವುದರಿಂದ ಅವಕ್ಕೆ ಎಲ್ಲಿಲ್ಲದ ಸಂಬ್ರಮ. ಜೇನು, ದುಂಬಿ ಮತ್ತಿತರ ಕೀಟಗಳಿಗೆ ಈ ಕಾಲದಲ್ಲಿ ಮಕರಂದವನ್ನು ಸವಿಯುವುದೇ ಒಂದು ಹಬ್ಬ.

ಅಂದಹಾಗೆ ವಸಂತ ಕಾಲದಲ್ಲಿ ಹಗಲು ಹೆಚ್ಚು ಇರುಳು ಕಡಿಮೆ ಎನ್ನುವ ಅಬಿಪ್ರಾಯವಿದೆ. ಚಳಿಗಾಲ ಮುಕ್ತಾಯವಾಗುವುದರಿಂದ ಪ್ರವಾಸಿಗರಿಗೆ ಇದು ತುಂಬಾ ಕುಶಿ ಕೊಡುವ ಕಾಲ. ದೀರ‍್ಗಕಾಲದ ಪ್ರಯಾಣಕ್ಕೆ ತುಂಬಾ ಅನುಕೂಲವಾದ ಹವಮಾನವಿರುವ ರುತುವಿದು. ಇನ್ನು, ಈ ವಸಂತ ಕಾಲದಲ್ಲಿ ಸಾಮಾನ್ಯವಾಗಿ ಕಾಯಿಲೆಗಳು ಕಡಿಮೆ. ಹೆಚ್ಚೆಂದರೆ ಸಿಡುಬು, ತುರಿಕೆ ಈ ಬಗೆಯವು ಬರಬಹುದು. ವಸಂತ ರುತುವು, ಬಣ್ಣದೋಕುಳಿ ಎರಚುವ ಹೋಳಿ, ನಂತರ ನವಚೈತನ್ಯ, ನವೋಲ್ಲಾಸ ತುಂಬುವ ಯುಗಾದಿ, ರಾಮನವಮಿ ಹೀಗೆ ಹಬ್ಬಗಳ ಹಿಂಡನ್ನು ಹೊತ್ತು ತರುತ್ತದೆ. ಪ್ರಕ್ರುತಿಗೆ ಮೆರುಗು ನೀಡಿ ಹೊಸತನವನ್ನು ತುಂಬಿ ಜೀವನಕ್ಕೆ ಹೊಸ ಆಶಯವನ್ನು ಬಿತ್ತುವ ರುತು ಎನಿಸಿದೆ ಈ ವಸಂತ ರುತು.

(ಚಿತ್ರ ಸೆಲೆ: theapopkavoice.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: