ಕವಿತೆ: ಮುನ್ನುಡಿ

– ನಾಗರಾಜ್ ಬೆಳಗಟ್ಟ.

ಬೇವುಬೆಲ್ಲ, ಯುಗಾದಿ, Ugadi

ಮರಗಳ ಎಲೆಯುದುರಿ
ಬೂ ಮಡಿಲ ಸೇರಿ
ರುತು ಮಾನದಲಿ ಮಿಂದ ಪ್ರಕ್ರುತಿ
ನಗುತಿದೆ ಮತ್ತೆ ಚಿಗುರಿ

ಚಿಗುರು ಮತ್ತೆ ಮೊಗ್ಗಾಗಿ
ಮನೆಗಳಿಗೆ ತಳಿರು ತೋರಣವಾಗಿ
ಮನಗಳಿಗೆ ಪಲ ಪುಶ್ಪವಾಗಿ
ಮೈದುಂಬಿಹುದು ನವ ಚೈತ್ರವಾಗಿ

ಚೈತ್ರ ಹಸಿರು ಕುಪ್ಪಸವುಟ್ಟು
ಮುಡಿಗೆ ಮಲ್ಲಿಗೆ ತೊಟ್ಟು
ಹಣೆಗೆ ನಸುಗೆಂಪು ತಿಲಕವಿಟ್ಟು
ನಿಂತಿಹಳು ಬೇವು ಚಿಗುರನುಟ್ಟು

ನೋವು ನಲಿವ ಅಳಿಸಿ
ಬಳಿದ ಅಂಗಳಕ್ಕೆ
ರಂಗೋಲಿ ಬಿಡಿಸಿ
ನವ ವಸಂತ ದೀಪ ಬೆಳಗಿಸಿ

ಮೈಮನಕ್ಕೆ ಅಬ್ಯಂಜನವ ಮಾಡಿ
ದಾರಿಯುದ್ದಕ್ಕೂ ಸಂಪಿಗೆ ಹರಡಿ
ಯುಗದ ಆದಿ… ಯುಗಾದಿ
ಚೈತ್ರಳಿಗೆ ಸೋಬಾನೆ ಹಾಡಿ

ಚೈತ್ರ ಬದುಕಿನ ಮುನ್ನುಡಿ
ಹೊಸ ಬಟ್ಟೆ ದರಿಸಿ ಬನ್ನಿ
ಬೇವು-ಬೆಲ್ಲದ ಬಂಡಿ ಹೂಡಿ
ಒಬ್ಬಟ್ಟು ಸವಿಯುವ ಬನ್ನಿ

(ಚಿತ್ರ ಸೆಲೆ: welcome-the-new-year-with-ugadi)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks