ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 3

ಸಿ. ಪಿ. ನಾಗರಾಜ.

*** ಉತ್ತರಕುಮಾರನ ಪ್ರಸಂಗ: ನೋಟ – 3 ***

ಎಲೆ ಪರೀಕ್ಷಿತ ತನಯ ಕೇಳ್ , ನೃಪತಿಲಕನು ಅತಿ ವೇಗದಲಿ ರಥವನು ಕೊಳುಗುಳಕೆ ತರೆ, ಉತ್ತರ ಮುಂದೆ ದೂರದಲಿ ತಳಿತ ಕುಂತದ ಬಾಯಿಧಾರೆಯ ಹೊಳವುಗಳ, ಹೊದರೆದ್ದ ಸಿಂಧದ ಸೆಳೆಯ ಸೀಗುರಿಗಳ, ವಿಡಂಬದ ಸಕಲ ಮೋಹರವ ಕಂಡನು. ಕರಿಘಟಾವಳಿಯ ಒಡ್ಡುಗಲ್ಲಿನ, ತುರಗ ನಿಕರದ ತೆರೆಯ, ತೇರಿನ ಹೊರಳಿಗಳ ಸುಳಿಯ, ಆತಪತ್ರದ ಬಹಳ ಬುದ್ಬುದದ, ನರನಿಕಾಯದ ಜಲಚರ ಓಘದ, ತರದ ವಾದ್ಯ ಧ್ವನಿಯ ರವದುಬ್ಬರದೊಳು ಬಹಳ ಜಲನಿಧಿಯಂತೆ ಕುರುಸೇನೆ ಇದ್ದುದು. ಖಡ್ಗದ ಜಡಿವ ಕಿಡಿಯ, ಸೇನೆಯ ಕಡುಹುಗಳ ಕೇಸುರಿಯ, ಬಲದುಗ್ಗಡದ ರಭಸದ ರೌದ್ರರವ ಛಟಛಟಿತ ನಿಸ್ವನದ, ಧೂಳಿಯ ಇಡಿದ ಧೂಮರಾಶಿಯ ಪಡೆ ಒಡನೊಡನೆ ಇದಿರಿನಲಿ ವಿರಾಟನ ಮಗನ ಕಂಗಳಿಗೆ ದಾವಾಗ್ನಿಯಂತಿರೆ ತೋರಿತು.

ಉತ್ತರ ಕುಮಾರ: (ತನ್ನಲ್ಲಿಯೇ) ಪ್ರಳಯ ಮೇಘದ ಮಾತೃಕೆಯೊ…ಕರಿಕುಲವೊ…ಸಿಡಿಲಿನ ಗರುಡಿಯೋ…ಕಳಕಳವೊ…ಕಲ್ಪಾನಲನ ಧೂಮಾವಳಿಯೊ… ಕೈದುಗಳೊ… ನೆಲನ ದಡ್ಡಿಯ ಬೆಟ್ಟದಡವಿಯೊ… ತಳಿತ ಟೆಕ್ಕೆಯವೋ… ಜಗಂಗಳನು ಅಳಿವ ಜಲಧಿಯೊ… ಸೇನೆಯೋ… ಇದನು ನಾವು ಅರಿಯೆವು. ಕಾಲಕೂಟದ ತೊರೆಯೊ… ಮಾರಿಯ ಗೂಳೆಯವೊ… ಮೃತ್ಯುವಿನ ಗಂಟಲ ತಾಳಿಗೆಯೊ… ಭೈರವನ ಥಟ್ಟೋ… ಜವನ ಜಂಗುಳಿಯೊ… ಕಾಲರುದ್ರನ ನೊಸಲ ವಹ್ನಿಜ್ವಾಲೆಯೋ… ಕೌರವನ ಸೇನಾಜಾಲವೋ… ಶಿವ

(ಎನುತ ಸುಕುಮಾರ ಅಂದು ಹೆದರಿದನು. ತನ್ನಲ್ಲಿಯೇ ಮಾತನಾಡಿಕೊಳ್ಳತೊಡಗಿದನು.)

ಕಂಗಳು ಕಡೆಗೆ ಹಾಯವು. ಮನವು ಈ ಬಲಗಡಲ ಈಸಾಡಲಾರದು. ಒಡಲುವಿಡಿದಿರಲು ಅದ್ಭುತವ ಏನ ಕಾಣಲುಬಾರದು. ಪೊಡವಿ ಈದುದೊ ಮೋಹರವನು. ಇದರೊಡನೆ ಕಾದುವನು ಆವನು ಆತನೆ ಮೃಡನು. ಶಿವ ಶಿವ ಕಾದಿ ಗೆಲಿದೆವು. ಬಲಕೆ ನಮೊ.

(ಎಂದ. ಅನಂತರ ಬೃಹನ್ನಳೆಯನ್ನು ಕುರಿತು)

ಬೃಹನ್ನಳೆ, ಹಸಿದ ಮಾರಿಯ ಮಂದೆಯಲಿ ಕುರಿ ನುಸುಳಿದಂತಾದೆನು. ತೇಜಿಗಳ ಎಸಗದಿರು ತಡೆ. ಚಮ್ಮಟಿಗೆಯನು ಬಿಸುಡು. ಮಿಸುಕಬಾರದು. ಪ್ರಳಯ ಕಾಲನ ಮುಸುಕನು ಉಗಿವವನಾರು. ಕೌರವನು ಅಸಮ ಲನೈ. ರಥವ ಮರಳಿಚು ಜಾಳಿಸುವೆನು

ಬೃಹನ್ನಳೆ: ಎಲೆ ಕುಮಾರಕ, ಮೊದಲ ಚುಂಬನದೊಳಗೆ ಹಲು ಬಿದ್ದಂತೆ ಕಾಳಗದೊಳಗೆ ಬೆರೆಯದ ಮುನ್ನ ಸಮರ ಭೀತಿಯನು ಹಿಡಿದೈ. ಅಳುಕಲಾಗದು. ನಿಮ್ಮ ತಂದೆಯ ಕುಲಕೆ ಕುಂದನು ತಾರದಿರು. ಮನ ಗೆಲವಿನಲಿ ಕಾದು.

(ಎನುತ ರಥವನು ಬೇಗ ಹರಿಸಿದನು. ಸಾರಿ ಬರಬರಲು ಅವನ ತನು ಮಿಗೆ ಭಾರಿಸಿತು. ಮೈಮುರಿದು ರೋಮ ವಿಕಾರ ಘನ ಕಾಹೇರಿತು. ಅವಯವ ನಡುಗಿ ಡೆಂಡಣಿಸಿ ಭೂರಿಭಯ ತಾಪದಲಿ ತಾಳಿಗೆ ನೀರು ತೆಗೆದುದು. ತುಟಿ ಒಣಗಿ, ಸುಕುಮಾರ ಕಣ್ಣೆವೆ ಸೀಯೆ ಕರದಲಿ ಮುಖವ ಮುಚ್ಚಿದನು.)

ಉತ್ತರ ಕುಮಾರ: ಏಕೆ ಸಾರಥಿ, ರಥವ ಮುಂದಕೆ ನೂಕಿ ಗಂಟಲ ಕೊಯ್ವೆ. ಸುಡು ಸುಡು. ಕಾಕಲಾ, ಕಣ್ಣು ಒಡೆದವೇ. ಆ ಮಹಾಬಲವ ಕಾಣು…ನಾಕನಿಲಯರಿಗೆ ಅರಿದು. ನಿನಗೆ ವಿವೇಕವು ಎಳ್ಳನಿತಿಲ್ಲ… ತೆಗೆ ತೆಗೆ ಸಾಕು. ವಾಘೆಯ ಮರಳಿ ಹಿಡಿ. ತೇಜಿಗಳ ತಿರುಹು.

(ಎಂದ ನುಡಿಯ ಕೇಳದೆ ಅರ್ಜುನ ರಥವ ಹತ್ತೆಂಟು ಅಡಿಯನು ಮುಂದೆ ಹರಿಸಲು, ಹಿಡಿದ ಬಿಲ್ಲಂಬುಗಳು ಬಿದ್ದವು. ಕೈಯನು ಅರೆತೆಗೆದು… )

ಇರಿಗಾರ ಸಾರಥಿ, ಹಯವನು ಹಿಡಿ.. ನುಡಿವವರು ನಾವ್ ಹಗೆಗಳೇ. ನಿನ್ನ ಒಡೆಯರಲ್ಲಾ. ಸ್ವಾಮಿ ದುರುಹಿಕೆ ಲೇಸು ಲೇಸು.

(ಎಂದೊಡೆ, ಅರ್ಜುನ ನಗುತ ರಥವನು ಮುಂದೆ ನಾಲ್ಕೆಂಟು ಅಡಿಯ ನೂಕಲು… )

ಉತ್ತರಕುಮಾರ: ಈ ಸಾರಥಿ ಕೊಂದನು…

(ಎನುತ ಮುಂಜೆರಗ ಸಂವರಿಸಿ, ಮೆಲ್ಲನೆ ರಥದ ಹಿಂದಕೆ ಬಂದು ನಿಂದು, ದುಮ್ಮಿಕ್ಕಿದನು.)

ಉತ್ತರಕುಮಾರ: ಬದುಕಿದೆಯಾ

(ಎಂದು ಬಿಟ್ಟಮಂಡೆಯಲಿ ನಿಟ್ಟೋಟದಲಿ ಹಾಯ್ದನು. ಕಲಿಪಾರ್ಥನು ನೋಡಿದನು. ಈ ಕೇಡಾಡಿ ಕೆದರಿದ ಕೇಶದಲಿ ಕೆಟ್ಟೋಡುತಿರಲು… )

ಬೃಹನ್ನಳೆ: ಎಲಲೆ… ಪಾಪಿ ಹಾಯ್ದನು ಹಿಡಿಯಬೇಕು.

(ಎನುತ ಕೂಡೆ ಸೂಟಿಯೊಳು ಅಟ್ಟಲು… ಇಳೆಯು ಅಲ್ಲಾಡಲು… ಅಹಿಪತಿ ಹೆದರಲು… ಇತ್ತಲು

ಕೌರವ ಸೇನೆ ನೋಡಿ, ನಗೆಯ ಕಡಲೊಳಗೆ ಕೆಡೆದುದು.)

ಕೌರವÀನ ಸೈನಿಕರು: ಎಲೆಲೆ… ಕಾದಲು ಬಂದ ವೀರನ ಬಲುಹ ನೋಡಾ. ಶಿವ ಶಿವಾ… ಬೆಂಬಳಿಯಲಿ ಅಟ್ಟುವ ವೀರನು ಆವನೊ

ಸುಭಟನಹನು. ಅವನು ತಿಳಿಯಲು ಅರಿದು. ಇವನಾವನೋ ವೆಗ್ಗಳೆಯನಹನು. ಆಕಾರದಲಿ

ನೆರೆ ಫಲುಗುಣನ ಹೋಲುವನು.

( ಎನುತ ಅರಿಸೇನೆ ಗಜಬಜಿಸಿತು.)

ಕರ್ಣ: ಸಾರಥಿ ಅಳವಿಯಲಿ ಮಿಗುವಾತನು ಈತ ಉತ್ತರ. ಅರ್ಜುನಂಗೆ ಈ ಸೂತತನವು ಎತ್ತಲು. ವೀಕ್ಷಿಸಲು ನಪುಂಸಕ ವೇಷ.

ಈತ ಅರ್ಜುನನಾಗಲಿ… ಆ ಪುರುಹೂತನಾಗಲಿ… ರಾಮನಾಗಲಿ… ಬರಲಿ ಆತಡೆ ಇರಿವೆನು.

(ಎಂದನು ಕರ್ಣ ಖಾತಿಯಲಿ.)

ಪದ ವಿಂಗಡಣೆ ಮತ್ತು ತಿರುಳು

ಪರೀಕ್ಷಿತ=ಸುಬದ್ರೆ ಮತ್ತು ಅಬಿಮನ್ಯುವಿನ ಮಗ; ತನಯ=ಮಗ; ಪರೀಕ್ಷಿತ ತನಯ=ಜನಮೇಜಯ; ಈಗ ಹಸ್ತಿನಾವತಿಯ ರಾಜ;

ಎಲೆ ಪರೀಕ್ಷಿತ ತನಯ ಕೇಳ್=ಜನಮೇಜಯ ರಾಜನಿಗೆ ವ್ಯಾಸರು ರಚಿಸಿದ ಮಹಾಬಾರತದ ಕತೆಯನ್ನು ಮತ್ತೊಮ್ಮೆ ವೈಶಂಪಾಯನ ಮುನಿಯು ಹೇಳುತ್ತಿದ್ದಾನೆ;

ನೃಪ=ರಾಜ; ತಿಲಕ=ಉತ್ತಮನಾದವನು; ನೃಪತಿಲಕ=ಬೃಹನ್ನಳೆಯ ಮಾರುವೇಶದಲ್ಲಿರುವ ಅರ್‍ಜುನ; ಕೊಳುಗುಳ=ರಣರಂಗ/ಕಾಳೆಗದ ಬೂಮಿ; ತರೆ=ತರಲು;

ನೃಪತಿಲಕನು ಅತಿ ವೇಗದಲಿ ರಥವನು ಕೊಳುಗುಳಕೆ ತರೆ=ಸಾರತಿಯಾದ ಬೃಹನ್ನಳೆಯು ಅತಿವೇಗದಿಂದ ಕುದುರೆಗಳನ್ನು ಮುನ್ನಡೆಸುತ್ತ ವಿರಾಟನಗರದಿಂದ ದುರ್‍ಯೋದನನ ಸೇನೆಯು ಬೀಡುಬಿಟ್ಟಿದ್ದ ರಣರಂಗದ ಕಡೆಗೆ ತೇರನ್ನು ತರುತ್ತಿದ್ದಂತೆಯೇ;

ಉತ್ತರ ಮುಂದೆ ದೂರದಲಿ=ಉತ್ತರಕುಮಾರನು ತನ್ನ ಮುಂದೆ ಸ್ವಲ್ಪ ದೂರದಲ್ಲಿ ನೆರೆದಿದ್ದ ಸೇನೆಯತ್ತ ನೋಡಿದನು;

ತಳಿತ=ಹರಡು/ಕವಿ/ಆವರಿಸು; ಕುಂತ=ಈಟಿ;/ಒಂದು ಬಗೆಯ ಆಯುದ; ಬಾಯಿಧಾರೆ=ಆಯುದಗಳ ಹರಿತವಾದ ಅಂಚು; ಹೊಳವು=ಕಾಂತಿ;

ತಳಿತ ಕುಂತದ ಬಾಯಿ ಧಾರೆಯ ಹೊಳವುಗಳ=ಸೇನೆಯ ಉದ್ದಗಲದಲ್ಲಿ ಎದ್ದುಕಾಣುವಂತೆ ಹರಡಿಕೊಂಡಿರುವ ಕತ್ತಿ ಈಟಿ ಮುಂತಾದ ಹತಾರಗಳ ಹರಿತವಾದ ಅಂಚಿನಿಂದ ಹೊಳೆಯುತ್ತಿರುವ ಕಾಂತಿ;

ಹೊದರು=ಹೆಚ್ಚಾಗು; ಹೊದರೆದ್ದ=ದಟ್ಟವಾಗು/ಹೇರಳವಾಗು; ಸಿಂಧ=ಬಾವುಟ; ಸೆಳೆ=ಬಳುಕು/ಅಲ್ಲಾಡು; ಸೀಗುರಿ=ಚಾಮರ/ಬೀಸಣಿಗೆ;

ಹೊದರೆದ್ದ ಸಿಂಧದ ಸೆಳೆಯ ಸೀಗುರಿಗಳ=ಸೇನಾಪಡೆಯ ತೇರುಗಳ ಮೇಲೆ ಕಟ್ಟಿರುವ ಬಾವುಟಗಳ ಸಂಕೆಯು ಹೇರಳವಾಗಿದ್ದು, ಬಾವುಟಗಳು ಚಾಮರಗಳಂತೆ ಅತ್ತಿತ್ತ ಬೀಸುತ್ತಿವೆ; ವಿಡಂಬ=ಆಡಂಬರ/ಕಾಳೆಗದಲ್ಲಿ ಬಾರಿಸುವ ರಣವಾದ್ಯ;

ಸಕಲ=ಸಮಸ್ತ/ಎಲ್ಲ; ಮೋಹರ=ಸೇನೆ/ದಂಡು;

ವಿಡಂಬದ ಸಕಲ ಮೋಹರವ ಕಂಡನು=ರಣರಂಗದಲ್ಲಿ ನುಡಿಸುವ ವಾದ್ಯಗಳಾದ ಡೋಲು/ನಗಾರಿ/ತಮ್ಮಟೆಯ ವಾದ್ಯಗಳಿಂದ ಮೆರೆಯುತ್ತಿದ್ದ ದುರ್‍ಯೋದನನ ಸಮಸ್ತ ಸೇನೆಯನ್ನು ಕಂಡನು;

ಕರಿ=ಆನೆ; ಘಟಾ=ಗುಂಪು; ಆವಳಿ=ಸಾಲು; ಒಡ್ಡುಗಲ್ಲು=ಚಾಚಿಕೊಂಡಿರುವ ಕಲ್ಲು/ವಿಸ್ತಾರವಾದ ಬಂಡೆ;

ಕರಿಘಟಾವಳಿಯ ಒಡ್ಡುಗಲ್ಲಿನ=ಆನೆಗಳ ಗುಂಪಿನ ಸಾಲು ಕಡಲಿನಲ್ಲಿ ವಿಸ್ತಾರವಾದ ಜಾಗದಲ್ಲಿ ಚಾಚಿಕೊಂಡಿರುವ ಬಂಡೆಗಲ್ಲಿನಂತೆಯೂ;

ತುರಗ=ಕುದುರೆ; ನಿಕರ=ಗುಂಪು; ತೆರೆ=ಅಲೆ/ತರಂಗ;

ತುರಗ ನಿಕರದ ತೆರೆಯ=ಕುದುರೆಗಳ ಗುಂಪು ಕಡಲಿನ ಉಬ್ಬರವಿಳಿತದ ಅಲೆಗಳಂತೆಯೂ;

ತೇರು=ರತ; ಹೊರಳಿ=ಗುಂಪು; ಸುಳಿ=ನೀರು ಗುಂಡಾಗಿ ಸುತ್ತುವ ಎಡೆ/ಮಡು;

ತೇರಿನ ಹೊರಳಿಗಳ ಸುಳಿಯ=ತೇರುಗಳ ಸಮೂಹವು ಆಳವಾದ ನೀರಿನ ಮಡುಗಳಂತೆಯೂ; ಆತಪತ್ರ=ಕೊಡೆ/ಸತ್ತಿಗೆ/ರಾಜತನದ ಸಂಕೇತವಾದ ಬೆಳ್ಗೊಡೆ;

ಬಹಳ=ಹೆಚ್ಚು/ಅಪಾರವಾದ; ಬುದ್ಬುದ=ನೀರ ಮೇಲಣ ಗುಳ್ಳೆ/ಬೆಳ್ಳನೆಯ ನೊರೆ;

ಆತಪತ್ರದ ಬಹಳ ಬುದ್ಬುದದ=ಬೆಳ್ಗೊಡೆಗಳು ಅಲೆಗಳ ಬಡಿತದಿಂದ ಉಂಟಾಗುವ ಬೆಳ್ನೊರೆಗಳಂತೆಯೂ;

ನರ=ಮಾನವ; ನಿಕಾಯ=ಗುಂಪು; ಜಲಚರ=ನೀರಿನಲ್ಲಿ ವಾಸಿಸುವ ಮೀನು ಮೊಸಳೆ ಮುಂತಾದ ಜೀವಿಗಳು; ಓಘ=ಗುಂಪು;

ನರನಿಕಾಯದ ಜಲಚರ ಓಘದ=ಚತುರಂಗ ಬಲದ ಕಾದಾಳುಗಳು ಕಡಲಿನ ಜೀವಿಗಳಂತೆಯೂ;

ತರ=ರೀತಿ; ರವದ+ಉಬ್ಬರ+ಒಳು; ರವ=ಶಬ್ದ/ದನಿ; ಉಬ್ಬರ=ಆವೇಗ/ಸಡಗರ/ಹೆಚ್ಚುಗೆ; ಬಹಳ=ಅನಂತವಾದ/ದೊಡ್ಡದಾದ; ಜಲನಿಧಿ+ಅಂತೆ; ಜಲನಿಧಿ=ಕಡಲು/ಸಮುದ್ರ; ಅಂತೆ=ಹಾಗೆ;

 ತರದ ವಾದ್ಯ ಧ್ವನಿಯ ರವದುಬ್ಬರದೊಳು ಕುರುಸೇನೆ ಬಹಳ ಜಲನಿಧಿಯಂತೆ ಇದ್ದುದು=ಬಹುಬಗೆಯ ರಣವಾದ್ಯಗಳ ಶಬ್ದದಿಂದ ಮೊರೆಯುತ್ತ ಕುರುಸೇನೆಯು ಅನಂತವಾದ ಕಡಲಿನಂತಿತ್ತು;

ಖಡ್ಗ=ಕತ್ತಿ; ಜಡಿ=ಜಳಪಿಸು/ಬೀಸು; ಕಿಡಿ=ಬೆಂಕಿಯ ಕಣ;

ಖಡ್ಗದ ಜಡಿವ ಕಿಡಿಯ=ದುರ್‍ಯೋದನನ ಸೇನೆಯ ಕಾದಾಳುಗಳು ಜಳಪಿಸುತ್ತಿರುವ ಕತ್ತಿಗಳ ಕಾಂತಿಯು ಬೆಂಕಿಯ ಕಣಗಳಂತೆಯೂ;

ಕಡುಹು=ಉಗ್ರತೆ/ಆವೇಶ/ಬಿರುಸು; ಕೇಸುರಿ=ಕೆಂಪು ಜ್ವಾಲೆ/ಬೆಂಕಿ;

ಸೇನೆಯ ಕಡುಹುಗಳ ಕೇಸುರಿಯ=ಕಾದಾಳುಗಳ ಉಗ್ರತೆಯೇ ಬೆಂಕಿಯ ಜ್ವಾಲೆಯಂತೆಯೂ;

ರಭಸ=ತೀವ್ರ ವೇಗ; ರೌದ್ರ=ಬಯಂಕರ/ಬೀಕರ; ರವ=ಶಬ್ದ; ಛಟಛಟ=ದನಿಯನ್ನು ಸೂಚಿಸುವ ಅನುಕರಣದ ಪದ; ನಿಸ್ವನ=ದನಿ/ಶಬ್ದ;

ರಭಸದ ರೌದ್ರರವ ಛಟಛಟಿತ ನಿಸ್ವನದ=ವೇಗವಾಗಿ ಮುನ್ನುಗ್ಗಲು ಹಾತೊರೆಯುತ್ತಿರುವ ಸೇನೆಯ ಕೋಲಾಹಲವು ದೊಡ್ಡ ದನಿಯಾಗಿ ಅನುರಣಿಸುತ್ತಿರುವಂತೆಯೂ;

ಧೂಳು=ಮಣ್ಣಿನ ಹುಡಿ; ಇಡಿದ=ತುಂಬಿರುವ; ಧೂಮರಾಶಿ=ಹೊಗೆ; ಪಡೆ=ಸೇನೆ;

ಧೂಳಿಯ ಇಡಿದ ಧೂಮರಾಶಿಯ ಪಡೆ=ಚತುರಂಗಬಲದ ಕಾಲ್ತುಳಿತದಿಂದ ಮೇಲೆದ್ದ ದೂಳಿನ ರಾಶಿಯೇ ಹೊಗೆ ಕವಿದಂತೆಯೂ;

ಒಡನೆ+ಒಡನೆ; ಒಡನೊಡನೆ=ಜತೆಜತೆಯಲ್ಲಿ;

ಒಡನೊಡನೆ ಇದಿರಿನಲಿ=ದುರ್‍ಯೋದನನ ಸೇನೆಯ ಇರುವಿಕೆಯು ಬೆಂಕಿಯ ಕಣಗಳಂತೆ, ಜ್ವಾಲೆಗಳಂತೆ, ಅನುರಣಿಸುವ ಶಬ್ದದಂತೆ, ದಟ್ಟವಾಗಿ ಕವಿದ ಹೊಗೆಯಂತೆ ಎಲ್ಲವೂ ಜತೆಗೂಡಿ ಎದುರುಗಡೆಯಲ್ಲಿ ಕಂಡುಬರಲು;

ಕಣ್+ಗಳು=ಕಂಗಳು; ದಾವಾಗ್ನಿ+ಅಂತಿರೆ; ದಾವಾಗ್ನಿ=ಕಾಳ್ಗಿಚ್ಚು/ಅರಣ್ಯದಲ್ಲಿ ಹತ್ತಿ ಉರಿಯುವ ಬೆಂಕಿ; ಅಂತಿರೆ=ಅಂತಿರಲು; ತೋರಿತು=ಕಂಡುಬಂದಿತು;

ವಿರಾಟನ ಮಗನ ಕಂಗಳಿಗೆ ದಾವಾಗ್ನಿಯಂತಿರೆ ತೋರಿತು=ಉತ್ತರಕುಮಾರನ ಕಣ್ಣುಗಳಿಗೆ ದುರ್‍ಯೋದನ ಸೇನೆಯು ಕಾಳ್ಗಿಚ್ಚಿನಂತೆ ಕಂಡುಬಂದಿತು;

ಪ್ರಳಯ=ಇಡೀ ಜಗತ್ತು ಸರ್‍ವನಾಶವಾಗುವುದು; ಮೇಘ=ಮೋಡ; ಮಾತೃಕೆ=ನೆಲೆ/ಮೂಲ/ಆಗರ;

ಪ್ರಳಯ ಮೇಘದ ಮಾತೃಕೆಯೊ=ಇಡೀ ಜಗತ್ತನ್ನೇ ನಾಶಮಾಡಲು ಬಂದಿರುವ ಕಾರ್‍ಮೋಡಗಳ ನೆಲೆಯೋ; ಕರಿ=ಆನೆ; ಕುಲ=ಗುಂಪು/ಹಿಂಡು;

ಕರಿಕುಲವೊ=ಆನೆಗಳ ಹಿಂಡೋ; ಸಿಡಿಲು=ಮೋಡಗಳ ತಿಕ್ಕಾಟದಿಂದ ಹೊರಹೊಮ್ಮುವ ವಿದ್ಯುತ್ ಪ್ರವಾಹ. ಇದು ಬಡಿದ ಕಡೆ ಎಲ್ಲವೂ ಸುಟ್ಟು ಕರಿಕಲಾಗುತ್ತದೆ;

ಗರುಡಿ=ನೆಲೆ;

ಸಿಡಿಲಿನ ಗರುಡಿಯೋ=ಸಿಡಿಲಿನ ನೆಲೆಯೋ;

ಕಳಕಳ=ಗಜಿಬಿಜಿ/ಗದ್ದಲ/ಗೊಂದಲ; ಕಳಕಳವೋ=ಚತುರಂಗಬಲದ ಅಬ್ಬರದ ದನಿಯೋ; ಕಲ್ಪ+ಅನಲನ; ಕಲ್ಪ=ಪ್ರಳಯ; ಅನಲ=ಬೆಂಕಿ; ಧೂಮ+ಆವಳಿ; ಧೂಮ=ಹೊಗೆ; ಆವಳಿ=ಸಮೂಹ;

ಕಲ್ಪಾನಲನ ಧೂಮಾವಳಿಯೊ=ಪ್ರಳಯ ಕಾಲದ ಬೆಂಕಿಯಲ್ಲಿ ದಟ್ಟವಾಗಿ ಕವಿದಿರುವ ಕಪ್ಪನೆಯ ಹೊಗೆಯೋ;

ಕೈದು=ಆಯುದ/ಹತಾರ;

ಕೈದುಗಳೊ=ತೇರು ಆನೆ ಕುದುರೆ ಕಾದಾಳುಗಳೆಲ್ಲವೂ ಆಯುದಗಳೋ;

ದಡ್ಡಿ=ಹೊದಿಕೆ/ಮುಸುಕು; ಬೆಟ್ಟದ+ಅಡವಿಯೊ; ಅಡವಿ=ಕಾಡು;

ನೆಲನ ದಡ್ಡಿಯ ಬೆಟ್ಟದಡವಿಯೊ=ನೆಲದ ಮೇಲೆ ಹಬ್ಬಿಕೊಂಡಿರುವ ಬೆಟ್ಟಗುಡ್ಡಕಾಡುಗಳೋ; ತಳಿತ=ಹರಡಿಕೊಂಡಿರುವ;

ಟೆಕ್ಕೆ/ಟೆಕ್ಕೆಯ=ಬಾವುಟ;

ತಳಿತ ಟೆಕ್ಕೆಯವೋ=ಎಲ್ಲೆಡೆ ಹರಡಿಕೊಂಡಿರುವ ಬಾವುಟಗಳೋ;

ಅಳಿ=ನಾಶಪಡಿಸು; ಜಲಧಿ=ಕಡಲು/ಸಮುದ್ರ;

ಜಗಂಗಳನು ಅಳಿವ ಜಲಧಿಯೊ ಸೇನೆಯೋ =ಜಗತ್ತೆಲ್ಲವನ್ನೂ ನಾಶಪಡಿಸುವ ಉಕ್ಕೆದ್ದ ಸಾಗರವೋ ಇಲ್ಲವೇ ಸೇನೆಯೋ;

ಇದನು=ಇದನ್ನು; ಅರಿ=ತಿಳಿ;

ಇದನು ನಾವು ಅರಿಯೆವು= ಈ ಸೇನೆಯ ಪ್ರಮಾಣ ಮತ್ತು ಬಲ ಎಶ್ಟಿದೆ ಎಂಬುದು ನನಗೆ ತಿಳಿಯದು;

ಕಾಲಕೂಟ=ಉಗ್ರವಾದ ವಿಶ/ನಂಜು; ತೊರೆ=ನದಿ;

ಕಾಲಕೂಟದ ತೊರೆಯೊ=ಉಗ್ರವಾದ ನಂಜಿನ ತೊರೆಯೊ;

ಮಾರಿ=ಒಬ್ಬ ದೇವತೆ. ಒಲಿದವರಿಗೆ ಒಳಿತನ್ನು ಮಾಡುವ ಮತ್ತು ಮುನಿದವರಿಗೆ ಸಾವನ್ನು ತರುವ ದೇವತೆ ಎಂಬ ನಂಬಿಕೆ ಜನಮನದಲ್ಲಿದೆ; ಗೂಳೆಯ=ಬಿಡಾರ;

ಮಾರಿಯ ಗೂಳೆಯವೊ=ಸಾವಿನ ದೇವತೆಯು ರಣರಂಗವನ್ನೇ ಬಿಡಾರ ಮಾಡಿಕೊಂಡಿದ್ದಾಳೆಯೊ;

ಮೃತ್ಯು=ಸಾವು; ತಾಳಿಗೆ=ಅಂಗುಳು;

ಮೃತ್ಯುವಿನ ಗಂಟಲ ತಾಳಿಗೆಯೊ=ಸಾವಿನ ಗಂಟಲಲ್ಲಿರುವ ಅಂಗುಳೊ; ಅಂದರೆ ಸಾವು ಬಹುಸಮೀಪದಲ್ಲಿಯೇ ಇದೆಯೋ;

ಭೈರವ=ಶಿವ. ಕೆಟ್ಟದ್ದನ್ನು ನಾಶಮಾಡುವಾಗ ಶಿವನು ತಳೆಯುವ ಉಗ್ರವಾದ ರೂಪ; ಥಟ್ಟು=ಗುಂಪು;

ಭೈರವನ ಥಟ್ಟೋ=ಎಲ್ಲವನ್ನೂ ನಾಶಪಡಿಸಬಲ್ಲ ಶಕ್ತಿಯಿರುವ ಬೈರವನ ಗುಂಪೋ; ಜವ=ಯಮ; ಜಂಗುಳಿ=ಗುಂಪು;

ಜವನ ಜಂಗುಳಿಯೊ=ಜೀವಿಗಳ ಪ್ರಾಣವನ್ನು ಕೊಂಡೊಯ್ಯುವ ಯಮದೂತರ ಗುಂಪೊ;

ಕಾಲರುದ್ರ=ಶಿವ. ಪ್ರಳಯಕಾಲದಲ್ಲಿ ಶಿವನು ತಳೆಯುವ ಉಗ್ರವಾದ ರೂಪ; ನೊಸಲು=ಹಣೆ; ವಹ್ನಿ=ಬೆಂಕಿ; ಜ್ವಾಲೆ=ದಗದಗಿಸಿ ಉರಿಯುವ ಬೆಂಕಿಯ ಕೆನ್ನಾಲಿಗೆ;

ಕಾಲರುದ್ರನ ನೊಸಲ ವಹ್ನಿಜ್ವಾಲೆಯೋ=ಕಾಲರುದ್ರನ ಹಣೆಯಿಂದ ಹೊರಹೊಮ್ಮುವ ಬೆಂಕಿಯ ಜ್ವಾಲೆಯೋ; ಶಿವನಿಗೆ ಮೂರು ಕಣ್ಣುಗಳಿವೆ ಎಂಬ ನಂಬಿಕೆಯು ಜನಮನದಲ್ಲಿದೆ; ಜಾಲ=ಗುಂಪು;

ಕೌರವನ ಸೇನಾಜಾಲವೋ… ಶಿವ ಎನುತ ಸುಕುಮಾರ ಅಂದು ಹೆದರಿದನು= ಉತ್ತರಕುಮಾರನು ಸೇನೆಯನ್ನು ನೋಡನೋಡುತ್ತಿದ್ದಂತೆಯೇ “ಶಿವ… ಶಿವ…ದುರ್‍ಯೋದನನ ಸೇನಾಬಲವು ಎಶ್ಟು ಬಯಂಕರವಾಗಿದೆ” ಎನ್ನುತ್ತ ಹೆದರಿದನು;

ಕಣ್+ಗಳು; ಕಡೆ=ಪಕ್ಕ/ಕೊನೆ; ಹಾಯ್=ತಿರುಗಿಸು;

ಕಂಗಳು ಕಡೆಗೆ ಹಾಯವು=ಉತ್ತರಕುಮಾರನ ಕಣ್ಣುಗಳು ಸೇನೆಯ ಕಡೆಗೆ ತಿರುಗುತ್ತಿಲ್ಲ; ಸೇನೆಯತ್ತ ನೋಡಲು ಹೆದರುತ್ತಿದ್ದಾನೆ;

ಬಲ+ಕಡಲು=ಶಕ್ತಿಯ ಸಾಗರ;

ಮನವು ಈ ಬಲಗಡಲ ಈಸಾಡಲಾರದು=ಉತ್ತರಕುಮಾರನ ಮನಸ್ಸು ಈ ಶಕ್ತಿಸಾಗರದಲ್ಲಿ ಈಜಾಡಲಾರದು. ಇದೊಂದು ರೂಪಕ. ದುರ್‍ಯೋದನನ ಚತುರಂಗಸೇನೆಯ ದೊಡ್ಡಬಲವನ್ನು ಎದುರಿಸಿ ಗೆಲ್ಲುವ ಶಕ್ತಿಯಾಗಲಿ ಇಲ್ಲವೇ ಪರಾಕ್ರಮವಾಗಲಿ ಉತ್ತರಕುಮಾರನಲ್ಲಿಲ್ಲ;

ಒಡಲು+ಪಿಡಿದು+ಇರಲು; ಒಡಲು=ದೇಹ/ಶರೀರ; ಪಿಡಿ=ಹಿಡಿ/ಸಲಹು/ಕಾಪಾಡು; ಒಡಲುವಿಡಿದಿರಲು=ಜೀವವನ್ನು ಉಳಿಸಿಕೊಂಡು ದೇಹವನ್ನು ಕಾಪಾಡಿಕೊಂಡಿರಲು; ಅದ್ಭುತ=ಅಚ್ಚರಿಯನ್ನುಂಟುಮಾಡುವ ದೊಡ್ಡ ಸಂಗತಿ; ಏನ=ಯಾವದನ್ನಾದರೂ; ಬಾರದು=ಬರದೇ ಇರುವುದು/ಬಂದೇ ಬರುತ್ತದೆ; ಏನ ಕಾಣಲುಬಾರದು=ಏನನ್ನು ಬೇಕಾದರೂ ನೋಡಬಹುದು;

ಒಡಲುವಿಡಿದಿರಲು ಅದ್ಭುತವ ಏನ ಕಾಣಲುಬಾರದು=ಪ್ರಾಣ ಒಂದಿದ್ದರೆ ಜೀವನದಲ್ಲಿ ಮಹತ್ತರವಾದುದನ್ನು ಎಂದಾದರೊಂದು ದಿನ ಪಡೆಯಬಹುದು/ಒಳ್ಳೆಯದನ್ನು ಕಾಣಬಹುದು. ಆದ್ದರಿಂದ ಮೊದಲು ಜೀವವನ್ನು ಉಳಿಸಿಕೊಂಡು ದೇಹವನ್ನು ಕಾಪಾಡಿಕೊಳ್ಳಬೇಕು;

ಪೊಡವಿ=ಬೂಮಿ; ಈಯ್=ಮರಿಹಾಕು/ಹೆರುವುದು; ಮೋಹರ=ಸೇನೆ/ಪಡೆ;

ಪೊಡವಿ ಈದುದೊ ಮೋಹರವನು=ಬೂಮಿಯೇ ಸೇನೆಯನ್ನು ಹೆತ್ತಿತೊ ಎನ್ನುವಂತೆ ಬೂಮಿಯ ಉದ್ದಗಲಕ್ಕೂ ಸೇನೆ ಹರಡಿಕೊಂಡಿದೆ; ಕಾದು=ಯುದ್ದ ಮಾಡು; ಆವನು=ಯಾರು; ಮೃಡ=ಶಿವ;

ಇದರೊಡನೆ ಕಾದುವನು ಆವನು ಆತನೆ ಮೃಡನು=ದುರ್‍ಯೋದನ ಮಹಾಸೇನೆಯೊಡನೆ ಯಾರು ಯುದ್ದಮಾಡುತ್ತಾನೆಯೋ ನಿಜಕ್ಕೂ ಆತನೇ ದೇವರಾದ ಶಿವನಾಗುತ್ತಾನೆ; ಶಿವ ಶಿವ=ಆತಂಕ ಇಲ್ಲವೇ ಸಂಕಟಕ್ಕೆ ಒಳಗಾಗಿ ಅಸಹಾಯಕ ಸನ್ನಿವೇಶದಲ್ಲಿ ವ್ಯಕ್ತಿಯ ಬಾಯಿಂದ ಬರುವ ದೇವರ ಹೆಸರಿನ ಉಚ್ಚಾರಣೆ;

ಶಿವ ಶಿವ ಕಾದಿ ಗೆಲಿದೆವು=ಶಿವ ಶಿವ…ಇಂತಹ ಮಹಾಸೇನೆಯನ್ನು ನಾವು ಜಯಿಸಿದಂತೆಯೇ ಸರಿ. ಅಂದರೆ ಹುಲುಮಾನವರಾದ ನಮ್ಮಿಂದ ಗೆಲುವು ಸಾದ್ಯವೇ ಇಲ್ಲ;

ಬಲಕೆ ನಮೊ ಎಂದ=ದುರ್‍ಯೋದನ ಮಹಾಸೇನೆಗೆ ಒಂದು ದೊಡ್ಡ ನಮಸ್ಕಾರ ಎಂದನು;

ಮಂದೆ=ಗುಂಪು; ನುಸುಳು=ಒಳಸೇರು;

ಬೃಹನ್ನಳೆ, ಹಸಿದ ಮಾರಿಯ ಮಂದೆಯಲಿ ಕುರಿ ನುಸುಳಿದಂತಾದೆನು=ಬೃಹನ್ನಳೆಯೇ… ಈಗ ನನ್ನ ಸ್ತಿತಿಯು ಹೇಗಿದೆಯೆಂದರೆ ಹಸಿವಿನಿಂದ ಕಂಗಾಲಾಗಿರುವ ಮಾರಿಯ ಮಂದೆಯೊಳಕ್ಕೆ ಕುರಿಯು ತಾನಾಗಿಯೇ ಒಳನುಗ್ಗಿ ಬಂದಂತಾಗಿದೆ; ಅಂದರೆ ಮಹಾಸೇನೆಯೊಡನೆ ಹೋರಾಡಲು ನಾನು ಹೋದರೆ ನನಗೆ ಸಾವು ನಿಶ್ಚಿತ; ತೇಜಿ=ಕುದುರೆ; ಎಸಗು=ತೇರನ್ನು ನಡೆಸು; ತಡೆ=ನಿಲ್ಲಿಸು;

ತೇಜಿಗಳ ಎಸಗದಿರು ತಡೆ=ತೇರಿಗೆ ಕಟ್ಟಿರುವ ಕುದುರೆಗಳನ್ನು ಮುನ್ನಡೆಸಬೇಡ. ತೇರನ್ನು ನಿಲ್ಲಿಸು; ಚಮ್ಮಟಿಗೆ=ಚಾವಟಿ/ಬಾರುಕೋಲು;

ಚಮ್ಮಟಿಗೆಯನು ಬಿಸುಡು=ಚಾವಟಿಯನ್ನು ಬಿಸಾಡು;

ಮಿಸುಕು=ನಡೆ/ಚಲಿಸು;

ಮಿಸುಕಬಾರದು=ತೇರನ್ನು ಇನ್ನು ಮುಂದಕ್ಕೆ ಬಿಡಬೇಡ; ಕಾಲ=ಯಮ; ಮುಸುಕು=ಹೊದಿಕೆ; ಉಗಿವವನು+ಆರು; ಉಗಿ=ಸೆಳೆ/ಕಳಚು; ಆರು=ಯಾರು;

ಪ್ರಳಯ ಕಾಲನ ಮುಸುಕನು ಉಗಿವವನಾರು=ಎಲ್ಲ ಜೀವಿಗಳನ್ನು ಸಾವಿನ ಮನೆಗೆ ಕೊಂಡೊಯ್ಯುವ ಯಮನ ಮಯ್ ಮೇಲಣ ಹೊದಿಕೆಯನ್ನು ಕಿತ್ತು ಎಸೆಯುವವನು ಯಾರು; ಅಂದರೆ ಯಮನ ಸಹವಾಸಕ್ಕೆ ಹೋದರೆ ಹೇಗೆ ಸಾವು ನಿಶ್ಚಿತವೋ ಅಂತೆಯೇ ಯಮರೂಪದಂತಿರುವ ಸೇನೆಯನ್ನು ಕೆಣಕಿದರೆ ನನ್ನ ಸಾವು ಉಂಟಾಗುತ್ತದೆ; ಅಸಮ=ಸರಿಸಾಟಿಯಿಲ್ಲದ/ಸಮಾನವಿಲ್ಲದ;

ಕೌರವನು ಅಸಮ ಬಲನೈ=ದುರ್‍ಯೋದನನ ಯಾರಿಗೂ ಸರಿಸಾಟಿಯಿಲ್ಲದ ಬಲವನ್ನು ಹೊಂದಿದ್ದಾನೆ. ಅವನಿಗೆ ಸಮಾನರಾದ ಬಲಶಾಲಿಗಳೇ ಯಾರೂ ಇಲ್ಲ;

ಮರಳಿಚು=ಹಿಂತಿರುಗಿಸು; ಜಾಳಿಸು=ಹೋಗು;

ರಥವ ಮರಳಿಚು ಜಾಳಿಸುವೆನು=ತೇರನ್ನು ಹಿಂತಿರುಗಿಸು. ನಾನು ಇಲ್ಲಿಂದ ವಿರಾಟನಗರಿಯತ್ತ ಹೋಗುತ್ತೇನೆ;

ಎಲೆ=ಮತ್ತೊಬ್ಬ ವ್ಯಕ್ತಿಯ ಜತೆ ಮಾತನ್ನಾಡುವಾಗ ಬಳಸುವ ಪದ; ಚುಂಬನ=ಒಲವು ನಲಿವಿನಿಂದ ಮತ್ತೊಬ್ಬರ ದೇಹವನ್ನು ತಬ್ಬಿಕೊಂಡು ತುಟಿಗಳ ಮೂಲಕ ಮುತ್ತನ್ನು ಇಡುವುದು; ಹಲು=ಹಲ್ಲು;

ಮೊದಲ ಚುಂಬನದೊಳಗೆ ಹಲು ಬಿದ್ದಂತೆ=ಗಂಡು ಹೆಣ್ಣು ಕಾಮದಿಂದಲೋ ಪ್ರೇಮದಿಂದಲೋ ಪರಸ್ಪರ ತಬ್ಬಿಕೊಂಡು ರಮಿಸುವಾಗ ಮೊದಲ ಮುತ್ತನ್ನು ಇಡುವಾಗಲೇ ಹಲ್ಲು ಕಳಚಿ ಬಿದ್ದರೆ, ಪ್ರೇಮಿಗಳು ಹತಾಶರಾಗುವಂತೆ;

ಬೆರೆ=ಕೂಡು/ಸೇರು; ಮುನ್ನ=ಮೊದಲೇ; ಸಮರ=ಯುದ್ದ/ಕಾಳೆಗ; ಭೀತಿ=ಹೆದರಿಕೆ/ಪುಕ್ಕಲುತನ; ಭೀತಿ ಹಿಡಿದೈ=ಹೆದರಿಕೆಗೆ ಒಳಗಾದೆಯಲ್ಲಾ;

ಎಲೆ ಕುಮಾರಕ, ಮೊದಲ ಚುಂಬನದೊಳಗೆ ಹಲು ಬಿದ್ದಂತೆ ಕಾಳಗದೊಳಗೆ ಬೆರೆಯದ ಮುನ್ನ ಸಮರ ಭೀತಿಯನು ಹಿಡಿದೈ=ಎಲೆ ಉತ್ತರಕುಮಾರನೇ… ಮೊದಲ ಚುಂಬನದಲ್ಲಿಯೇ ಹಲ್ಲು ಕಳಚಿಬಿದ್ದಂತೆ ರಣರಂಗದಲ್ಲಿ ಹಗೆಯೊಡನೆ ಹೋರಾಡುವ ಮುನ್ನವೇ ಕಾಳೆಗದಲ್ಲಿ ಏನಾಗುವುದೋ ಎಂಬ ಪುಕ್ಕಲುತನದಿಂದ ಕಂಗಾಲಾಗಿರುವೆಲ್ಲಾ;

ಅಳುಕು=ಅಂಜಿಕೆ/ಹೆದರಿಕೆ;

ಅಳುಕಲಾಗದು=ರಾಜಕುವರನಾದ ನೀನು ಈ ರೀತಿ ಹೆದರಬಾರದು; ಕುಲ=ವಂಶ/ಮನೆತನ; ಕುಂದು=ಕಳಂಕ/ಕೆಟ್ಟ ಹೆಸರು;

ನಿಮ್ಮ ತಂದೆಯ ಕುಲಕೆ ಕುಂದನು ತಾರದಿರು=ರಣರಂಗದಲ್ಲಿ ಕಾದುವ ಮುನ್ನವೇ ಹೇಡಿಯಾಗಿ ಓಡಿಹೋದನೆಂಬ ಕಳಂಕವನ್ನು ನಿಮ್ಮ ತಂದೆಯಾದ ವಿರಾಟರಾಯನ ರಾಜಮನೆತನಕ್ಕೆ ತರಬೇಡ; ಮನ=ಮನಸ್ಸು; ಗೆಲವು=ಆನಂದ/ಉತ್ಸಾಹ/ಹುಮ್ಮಸ್ಸು/ಜಯಿಸುವುದು; ಕಾದು=ಹೋರಾಡು; ಮನಗೆಲುವು=ಇದೊಂದು ನುಡಿಗಟ್ಟು. ಮನದಲ್ಲಿ ಕೆಚ್ಚು, ಉತ್ಸಾಹ ಮತ್ತು ಆತ್ಮವಿಶ್ವಾಸದ ಒಳಮಿಡಿತಗಳನ್ನು ಹೊಂದಿರುವುದು;

ಮನ ಗೆಲವಿನಲಿ ಕಾದು ಎನುತ ರಥವನು ಬೇಗ ಹರಿಸಿದನು=ಮನಸ್ಸಿನಲ್ಲಿ ಕೆಚ್ಚು ಮತ್ತು ಉತ್ಸಾಹದಿಂದ ಕೂಡಿ ಹಗೆಗಳನ್ನು ಸದೆಬಡಿದು ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸದಿಂದ ಹೋರಾಡಲು ಅಣಿಯಾಗು ಎಂದು ಹೇಳುತ್ತ, ಅರ್ಜುನನು ತೇರನ್ನು ವೇಗವಾಗಿ ರಣರಂಗದತ್ತ ಮುನ್ನಡೆಸಿದನು;

ಸಾರು=ಸಮೀಪಿಸು/ಹತ್ತಿರಕ್ಕೆ ಬರು; ತನು=ಮಯ್; ಮಿಗೆ=ಅತಿಶಯವಾಗಿ/ಹೆಚ್ಚಾಗಿ; ಭಾರಿಸು=ಜಡವಾಗು/ಮರಗಟ್ಟು;

ಸಾರಿ ಬರಬರಲು ಅವನ ತನು ಮಿಗೆ ಭಾರಿಸಿತು=ತೇರು ರಣರಂಗಕ್ಕೆ ಹತ್ತಿರವಾದಂತೆಲ್ಲಾ ಉತ್ತರಕುಮಾರನ ಮಯ್ ಹೆದರಿಕೆಯಿಂದ ಶಕ್ತಿಯುಡುಗಿ ಜಡವಾಗತೊಡಗಿತು;

ಮೈಮುರಿ=ಹೆದರಿಕೆಯು ಹೆಚ್ಚಾದಾಗ ಕಯ್ ಕಾಲುಗಳು ಶಕ್ತಿಗುಂದಿ ಸೆಟೆದುಕೊಳ್ಳುವುದು; ರೋಮ=ಮಯ್ ಮೇಲಣ ಕೂದಲು; ವಿಕಾರ=ವ್ಯತ್ಯಾಸ; ಘನ=ದೊಡ್ಡದು; ಕಾಹು+ಏರಿತು; ಕಾಹು=ಬಿಸಿ; ಏರಿತು=ಹೆಚ್ಚಾಯಿತು;

ಮೈಮುರಿದು ರೋಮ ವಿಕಾರ ಘನ ಕಾಹೇರಿತು=ಜೀವಬಯದಿಂದ ತತ್ತರಿಸುತ್ತಿರುವ ಉತ್ತರಕುಮಾರನ ಕಯ್ ಕಾಲುಗಳು ಶಕ್ತಿಯುಡುಗಿ ಸೆಟೆದುಕೊಂಡವು; ಹೆದರಿಕೆಯಿಂದ ಮಯ್ ನವಿರೆದ್ದು ದೇಹದ ಬಿಸಿಯು ಹೆಚ್ಚಾಯಿತು;

ಅವಯವ=ಅಂಗ/ದೇಹ; ಡೆಂಡಣಿಸು=ಕಂಪಿಸು; ಭೂರಿ=ಹೆಚ್ಚು; ತಾಪ=ಬಿಸಿ; ತಾಳಿಗೆ=ಅಂಗುಳು;

ಅವಯವ ನಡುಗಿ ಡೆಂಡಣಿಸಿ ಭೂರಿಭಯ ತಾಪದಲಿ ತಾಳಿಗೆ ನೀರು ತೆಗೆದುದು=ದೇಹವೆಲ್ಲವೂ ನಡನಡುಗಿ ಕಂಪಿಸುತ್ತ, ಅತಿಹೆಚ್ಚಿನ ಅಂಜಿಕೆಯ ತಾಪದಿಂದಾಗಿ ಅಂಗುಳಿನಲ್ಲಿ ನೀರಿಲ್ಲದಂತಾಯಿತು;

ಸುಕುಮಾರ=ಕೋಮಲವಾದ ಶರೀರವುಳ್ಳವನು; ಕಣ್+ಎವೆ; ಎವೆ=ರೆಪ್ಪೆ; ಸೀಯು=ಹೆಚ್ಚಾಗಿ ಸುಡು/ಅತಿಯಾದ ಬಿಸಿಯಿಂದ ಕಾಯು; ಕರ=ಕಯ್/ಹಸ್ತ;

ತುಟಿ ಒಣಗಿ, ಸುಕುಮಾರ ಕಣ್ಣೆವೆ ಸೀಯೆ ಕರದಲಿ ಮುಖವ ಮುಚ್ಚಿದನು=ಪ್ರಾಣಬಯದಿಂದ ಹೆದರಿ ಹೆಪ್ಪಳಿಸಿಹೋಗಿರುವ ಉತ್ತರಕುಮಾರನ ದೇಹದಲ್ಲಿ ಅನೇಕ ಬಗೆಯ ಪರಿಣಾಮಗಳು ಕಂಡುಬರುತ್ತಿವೆ. ತುಟಿಗಳು ಒಣಗಿ, ಕಣ್ಣಿನ ರೆಪ್ಪೆಗಳು ಸುಡುವಂತಾದುದರಿಂದ ಸೇನೆಯನ್ನಾಗಲಿ ಇಲ್ಲವೇ ಬೃಹನ್ನಳೆಯನ್ನಾಗಲಿ ನೋಡಲಾಗದೆ ತನ್ನ ಕಯ್ಗಳಿಂದ ಮೊಗವನ್ನು ಮುಚ್ಚಿಕೊಂಡನು;

 ಏಕೆ ಸಾರಥಿ, ರಥವ ಮುಂದಕೆ ನೂಕಿ ಗಂಟಲ ಕೊಯ್ವೆ=ಏಕೆ ಸಾರತಿ, ತೇರನ್ನು ರಣರಂಗದತ್ತ ಮುನ್ನಡೆಸುತ್ತ ನನ್ನ ಗಂಟಲನ್ನು ಕುಯ್ಯುತ್ತೀಯೆ; ಸುಡುಸುಡು=ಇದು ಒಂದು ನುಡಿಗಟ್ಟು. ವ್ಯಕ್ತಿಯ ನಡೆನುಡಿಗಳನ್ನು ತಿರಸ್ಕರಿಸುವಾಗ “ ನಿನ್ನ ಮಾತಿಗಶ್ಟು ಬೆಂಕಿ ಹಾಕ/ನಿನ್ನ ಕೆಲಸಕ್ಕಶ್ಟು ಬೆಂಕಿ ಹಾಕ ” ಎಂಬ ತಿರುಳಿನಲ್ಲಿ ಈ ನುಡಿಗಟ್ಟು ಬಳಕೆಗೊಂಡಿದೆ; ಕಾಕು=ವ್ಯಂಗ್ಯ/ಕೊಂಕುನುಡಿ; ಒಡೆ=ಸೀಳು/ಬಿರಿ;

 ಸುಡು ಸುಡು ಕಾಕಲಾ, ಕಣ್ಣು ಒಡೆದವೇ=ತೇರನ್ನು ಹಗೆಯ ಮುಂದಕ್ಕೆ ತಳ್ಳುತ್ತಿರುವ ನಿನ್ನ ಕೆಲಸಕ್ಕೆ ಬೆಂಕಿಹಾಕ. ಯುದ್ದವೆಂದರೆ ನಗೆಚಾಟಿಕೆಯೆಂದು ತಿಳಿದಿರುವೆಯಾ. ನಿನ್ನ ಕಣ್ಣು ಗುಡ್ಡೆಗಳು ಒಡೆದುಹೋಗಿವೆಯೇ;

ಆ ಮಹಾಬಲವ ಕಾಣು=ಆ ದೊಡ್ಡ ಸೇನೆಯನ್ನು ನೋಡು; ನಾಕ=ಸ್ವರ್ಗ; ನಿಲಯ=ಮನೆ; ನಾಕನಿಲಯರು=ದೇವತೆಗಳು; ಅರಿದು=ಸಾದ್ಯವಿಲ್ಲ/ಆಗುವುದಿಲ್ಲ;

ನಾಕನಿಲಯರಿಗೆ ಅರಿದು=ದೇವತೆಗಳಿಂದಲೂ ದುರ್‍ಯೋದನನ ಚತುರಂಗಬಲವನ್ನು ಗೆಲ್ಲಲು ಆಗುವುದಿಲ್ಲ; ವಿವೇಕ=ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು ಎಂಬ ತಿಳುವಳಿಕೆ; ಎಳ್+ಅನಿತು; ಎಳ್=ಜಿಡ್ಡಿನ ಅಂಶವನ್ನು ಒಳಗೊಂಡ ದಾನ್ಯದ ಸಣ್ಣ ಕಾಳು; ಅನಿತು=ಅಶ್ಟು;

 ಎಳ್ಳನಿತು=ಇದೊಂದು ನುಡಿಗಟ್ಟು. ತುಸುವಾದರೂ/ಸ್ವಲ್ಪವಾದರೂ ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ;

ನಿನಗೆ ವಿವೇಕವು ಎಳ್ಳನಿತಿಲ್ಲ=ನಿನಗೆ ವಿವೇಕವೆಂಬುದು ಕಿಂಚಿತ್ತಾದರೂ ಇಲ್ಲ;

ತೆಗೆ ತೆಗೆ ಸಾಕು=ತೇರನ್ನು ಮುನ್ನಡೆಸಬೇಡ. ಸಾಕು…ನಿಲ್ಲಿಸು;

ವಾಘೆ=ಕುದುರೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಅದರ ಬಾಯಲ್ಲಿ ಸಿಕ್ಕಿಸುವ ಕಬ್ಬಿಣದ ತುಂಡು ಮತ್ತು ಅದಕ್ಕೆ ಕಟ್ಟುವ ತೊಗಲಿನ ಪಟ್ಟಿ/ಲಗಾಮು; ಮರಳು=ಹಿಂತಿರುಗು; ತೇಜಿ=ಕುದುರೆ;

ವಾಘೆಯ ಮರಳಿ ಹಿಡಿ ತೇಜಿಗಳ ತಿರುಹು=ಲಗಾಮನ್ನು ಹಿಂದಕ್ಕೆ ಎಳೆದು ಹಿಡಿದುಕೊ…ಕುದುರೆಗಳನ್ನು ಹಿಂದಕ್ಕೆ ತಿರುಗಿಸು; ಬಿಲ್+ಅಂಬುಗಳು; ಅಂಬು=ಬಾಣ;

ನುಡಿಯ ಕೇಳದೆ ಅರ್ಜುನ ರಥವ ಹತ್ತೆಂಟು ಅಡಿಯನು ಮುಂದೆ ಹರಿಸಲು, ಹಿಡಿದ ಬಿಲ್ಲಂಬುಗಳು ಬಿದ್ದವು=ಉತ್ತರಕುಮಾರನ ಮಾತುಗಳಿಗೆ ಬೆಲೆಕೊಡದೆ ಅರ್‍ಜುನನು ತೇರನ್ನು ಹತ್ತೆಂಟು ಅಡಿಗಳಶ್ಟು ಮುಂದೆ ನಡೆಸುತ್ತಿದ್ದಂತೆಯೇ, ಉತ್ತರಕುಮಾರನು ತನ್ನ ಕಯ್ಯಲ್ಲಿದ್ದ ಬಿಲ್ಲು ಬಾಣಗಳನ್ನು ಕೆಳಕ್ಕೆ ಎಸೆದನು;

ಕೈಯನು ಅರೆತೆಗೆದು=ಕಯ್ಯನ್ನು ಸ್ವಲ್ಪ ಅಗಲಿಸಿ ಬೃಹನ್ನಳೆಯ ಮೊಗದತ್ತ ಕಯ್ಯನ್ನು ತೋರಿಸುತ್ತಾ;

ಇರಿ=ಕೊಲ್ಲು/ಸಂಹರಿಸು; ಇರಿಗಾರ=ಕೊಲೆಗಾರ; ಹಯ=ಕುದುರೆ;

ಇರಿಗಾರ ಸಾರಥಿ ಹಯವನು ಹಿಡಿ=ಕೊಲೆಗಾರ ಸಾರತಿಯೇ…ಕುದುರೆಗಳನ್ನು ಮುನ್ನಡೆಸಬೇಡ. ಹಿಡಿದು ನಿಲ್ಲಿಸು;

ನುಡಿವವರು ನಾವ್ ಹಗೆಗಳೇ=ನಿನ್ನೊಡನೆ ಮಾತನಾಡುತ್ತಿರುವ ನಾವು ನಿನಗೆ ಹಗೆಗಳೇ;

ಒಡೆಯ=ಯಜಮಾನ/ಸ್ವಾಮಿ;

ನಿನ್ನ ಒಡೆಯರಲ್ಲಾ=ನಿನಗೆ ಆಶ್ರಯವನ್ನು ಕೊಟ್ಟು ಸಲಹುತ್ತಿರುವ ಯಜಮಾನವರಲ್ಲವೇ;

ಸ್ವಾಮಿ=ಒಡೆಯ/ಯಜಮಾನ; ದುರುಹಿಕೆ=ದ್ರೋಹ/ಮೋಸ; ಲೇಸು=ಒಳ್ಳೆಯದು; ಲೇಸುಲೇಸು=ಇದು ಒಂದು ನುಡಿಗಟ್ಟು. ಬಹಳ ಬಹಳ ಒಳ್ಳೆಯದನ್ನು ಮಾಡುತ್ತಿರುವೆ ಅಂದರೆ ಒಳಿತಿನ ನೆಪದಲ್ಲಿ ಕೇಡನ್ನು ಬಗೆಯುತ್ತಿರುವೆ ಎಂಬ ವ್ಯಂಗ್ಯದ ತಿರುಳಿನಲ್ಲಿ ಬಳಕೆಯಾಗಿದೆ;

ಸ್ವಾಮಿ ದುರುಹಿಕೆ ಲೇಸು ಲೇಸು ಎಂದ=ಈ ಬಗೆಯ ಸ್ವಾಮಿದ್ರೋಹ…ತುಂಬಾ ಒಳ್ಳೆಯದು ಎಂದು ಉತ್ತರಕುಮಾರನು ಅಣಕದ ನುಡಿಗಳ ಮೂಲಕ ಬೃಹನ್ನಳೆಯನ್ನು ನಿಂದಿಸಿದ;

ಎಂದೊಡೆ=ಎಂದು ಉತ್ತರಕುಮಾರನ್ನು ತನ್ನನ್ನು ನಿಂದಿಸಲು;

ಅರ್ಜುನ ನಗುತ ರಥವನು ಮುಂದೆ ನಾಲ್ಕೆಂಟು ಅಡಿಯ ನೂಕಲು=ಅರ್ಜುನನು ಅವನ ಮಾತುಗಳನ್ನು ಕೇಳಿ ನಗುತ್ತ ತೇರನ್ನು ಮತ್ತೆ ನಾಲ್ಕೆಂಟು ಅಡಿಗಳಶ್ಟು ಮುನ್ನಡೆಸಲು; ಮುಂದಿನ+ಸೆರಗು; ಸೆರಗು=ಎದೆಯ ಮೇಲೆ ಹೊದೆಯುವ ಬಟ್ಟೆಯ ತುಂಡು; ಸಂವರಿಸಿ=ಸರಿಹೊಂದಿಸಿಕೊಂಡು/ಸರಿಪಡಿಸಿಕೊಂಡು;

ಈ ಸಾರಥಿ ಕೊಂದನು ಎನುತ ಮುಂಜೆರಗ ಸಂವರಿಸಿ=ಈ ಸಾರತಿಯು ನನ್ನನ್ನು ಕೊಂದನು ಎನ್ನುತ್ತ, ಮಯ್ ಮೇಲೆ ಹಾಕಿದ್ದ ಸೆರಗನ್ನು ಜಾರಿಬೀಳದಂತೆ ಬಿಗಿಯಾಗಿ ಕಟ್ಟಿಕೊಂಡು; ದುಮ್ಮಿಕ್ಕು=ಕೆಳಕ್ಕೆ ಹಾರು/ನೆಗೆ;

ಮೆಲ್ಲನೆ ರಥದ ಹಿಂದಕೆ ಬಂದು ನಿಂದು, ದುಮ್ಮಿಕ್ಕಿದನು=ಮೆಲ್ಲನೆ ತೇರಿನ ಹಿಂದಕ್ಕೆ ಬಂದು, ಅರೆಗಳಿಗೆ ನಿಂತಿದ್ದು, ಒಮ್ಮೆಲೆ ತೇರಿನಿಂದ ಕೆಳಕ್ಕೆ ನೆಗೆದನು; ಬಿಟ್ಟಮಂಡೆ=ಕೂದಲು ಕೆದರಿದ ತಲೆ/ಉತ್ತರಕುಮಾರನು ತೇರಿನಿಂದ ಕೆಳಕ್ಕೆ ಹಾರಿದ ಸಮಯದಲ್ಲಿ ಅವನು ತಲೆಯಲ್ಲಿ ತೊಟ್ಟಿದ ಅಂಗಕವಚವು ಕಳಚಿಬಿದ್ದಿದೆ; ನಿಡಿದಾದ+ಓಟ; ನಿಡಿದು=ಉದ್ದವಾದುದು; ನಿಟ್ಟೋಟ=ಅತಿವೇಗದ ಓಟ; ಹಾಯ್=ದಾಟಿಹೋಗು;

ಬದುಕಿದೆನು ಎಂದು ಬಿಟ್ಟಮಂಡೆಯಲಿ ನಿಟ್ಟೋಟದಲಿ ಹಾಯ್ದನು=ಹೇಗೋ ಜೀವವನ್ನು ಉಳಿಸಿಕೊಂಡೆನು ಎಂದುಕೊಂಡು ಕೆದರಿದ ತಲೆಯಲ್ಲಿ ಅತಿವೇಗದಿಂದಿ ಬಿದ್ದಂಬೀಳ ವಿರಾಟನಗರದತ್ತ ಉತ್ತರಕುಮಾರನು ಪಲಾಯನಮಾಡುತ್ತಿದ್ದಾನೆ;

ಕಲಿಪಾರ್ಥನು ನೋಡಿದನು=ಶೂರನಾದ ಅರ್‍ಜುನನು ರಣರಂಗಕ್ಕೆ ಬೆನ್ನನ್ನು ತೋರಿಸಿ ಹಿಮ್ಮುಕನಾಗಿ ಪಲಾಯನಮಾಡುತ್ತಿರುವ ಉತ್ತರಕುಮಾರನನ್ನು ನೋಡಿದನು; ಕೇಡಾಡಿ=ಕೇಡಿಗ/ಕೆಟ್ಟದ್ದನ್ನು ಮಾಡುವವನು; ಕೆದರು=ಹರಡು/ಗೋಜಲುಗೋಜಲಾಗು; ಕೇಶ=ಕೂದಲು/ತಲೆಗೂದಲು; ಕೆಟ್ಟು+ಓಡುತಿರಲು; ಕೆಟ್ಟು=ಅಳಿ/ನಾಶವಾಗು/ಹಾಳಾಗು;

ಈ ಕೇಡಾಡಿ ಕೆದರಿದ ಕೇಶದಲಿ ಕೆಟ್ಟೋಡುತಿರಲು=ಈ ಕೆಡುಕನು ಕೆದರಿದ ತಲೆಯಲ್ಲಿ ಜೀವಗಳ್ಳನಾಗಿ ಓಡುತ್ತಿರಲು; ಕೂಡೆ=ಕೂಡಲೇ/ಮರುಗಳಿಗೆಯಲ್ಲಿಯೇ; ಸೂಟಿ+ಒಳು; ಸೂಟಿ=ರಭಸ/ವೇಗ; ಅಟ್ಟು=ಬೆನ್ನುಹತ್ತಿಹೋಗು/ಹಿಂಬಾಲಿಸು;

 ಎಲೆಲೆ… ಪಾಪಿ ಹಾಯ್ದನು ಹಿಡಿಯಬೇಕು ಎನುತ ಕೂಡೆ ಸೂಟಿಯೊಳು ಅಟ್ಟಲು=ಎಲೆ…ಪಾಪಿಯು ಓಡುತ್ತಿದ್ದಾನೆ…ಅವನನ್ನು ಹಿಡಿಯಬೇಕು ಎಂದುಕೊಂಡು ಕೂಡಲೇ ಅರ್‍ಜುನನು ತೇರಿನಿಂದ ನೆಗೆದು ವೇಗವಾಗಿ ಉತ್ತರಕುಮಾರನನ್ನು ಬೆಂಬತ್ತಿಬಂದನು;

ಇಳೆ=ಬೂಮಿ;

ಇಳೆಯು ಅಲ್ಲಾಡಲು=ಬೂಮಿಯು ಕಂಪಿಸುತ್ತಿರಲು; ಅಹಿ=ಹಾವು; ಪತಿ=ಒಡೆಯ; ಅಹಿಪತಿ=ಹಾವುಗಳ ಒಡೆಯನಾದ ಆದಿಶೇಶ; ಆದಿಶೇಶನು ಬೂಮಿಯನ್ನು ತನ್ನ ಹೆಡೆಯ ಮೇಲೆ ಹೊತ್ತಿದ್ದಾನೆ ಎಂಬ ಕಲ್ಪನೆಯು ಜನಮನದಲ್ಲಿದೆ;

ಅಹಿಪತಿ ಹೆದರಲು=ಆದಿಶೇಶನು ಬೂಮಂಡಲಕ್ಕೆ ಏನಾಗುವುದೋ ಎಂದು ಹೆದರಿಕೊಳ್ಳಲು;

ಇಳೆಯು ಅಲ್ಲಾಡಲು…ಅಹಿಪತಿ ಹೆದರಲು=ಬೂಮಿಯು ಕಂಪಿಸಲು…ಆದಿಶೇಶನು ಹೆದರಲು…ಈ ನುಡಿಗಳು ಅತಿಶಯೋಕ್ತಿಯಾಗಿ ಬಳಕೆಗೊಂಡಿವೆ. ಯಾವುದೇ ಒಂದು ಸಂಗತಿಯನ್ನು ವಾಸ್ತವವಲ್ಲದ ಬಗೆಯಲ್ಲಿ ಬಣ್ಣಿಸುವುದಕ್ಕೆ ಅತಿಶಯೋಕ್ತಿ ಎನ್ನುತ್ತಾರೆ; ಹೇಡಿ ಉತ್ತರಕುಮಾರನನ್ನು ಬೃಹನ್ನಳೆಯು ಬೆನ್ನಟ್ಟಿಬರುತ್ತಿರುವುದು ಒಂದು ಮಹತ್ತರವಾದ ಸಂಗತಿ ಎಂಬುದನ್ನು ಸೂಚಿಸಲು ಈ ರೀತಿ ಬಣ್ಣಿಸಲಾಗಿದೆ; ಇತ್ತಲು=ಈ ಕಡೆ; ಕಡಲು=ಸಾಗರ; ಕೆಡೆ=ಬೀಳು; ನಗೆಯ ಕಡಲು=ಇದೊಂದು ನುಡಿಗಟ್ಟು. ಗಹಗಹಿಸಿ ನಗುತ್ತಿರುವುದು ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;

ಇತ್ತಲು ಕೌರವ ಸೇನೆ ನೋಡಿ, ನಗೆಯ ಕಡಲೊಳಗೆ ಕೆಡೆದುದು=ಈ ಕಡೆ ಜಮಾವಣೆಗೊಂಡಿದ್ದ ದುರ್‍ಯೋದನನ ಸೇನೆಯ ಕಾದಾಳುಗಳು ತಮ್ಮ ಎದುರಾಗಿ ಬರುತ್ತಿದ್ದ ತೇರು ಇದ್ದಕ್ಕಿದ್ದಂತೆಯೇ ನಿಂತಿದ್ದನ್ನು, ತೇರಿನಿಂದ ಒಬ್ಬ ವ್ಯಕ್ತಿಯು ಪಲಾಯನ ಮಾಡುತ್ತಿರುವುದನ್ನು, ಅವನನ್ನು ಬೆನ್ನಟ್ಟಿಕೊಂಡು ಇನ್ನೊಬ್ಬ ವ್ಯಕ್ತಿ ಹೋಗುತ್ತಿರುವುದನ್ನು ನೋಡಿ, ಎದ್ದು ಬಿದ್ದು ಗಹಗಹಿಸಿ ನಗಲಾರಂಬಿಸಿದರು; ಎಲೆಲೆ=ಅಚ್ಚರಿಯನ್ನು ಸೂಚಿಸಲು ಬಳಸುವ ಪದ; ಬಲುಹು=ಶಕ್ತಿ/ಪರಾಕ್ರಮ;

ಎಲೆಲೆ… ಕಾದಲು ಬಂದ ವೀರನ ಬಲುಹ ನೋಡಾ=ಎಲೆಲೆ…ರಣರಂಗದಲ್ಲಿ ನಮ್ಮೆದುರು ಹೋರಾಡಲೆಂದು ಬಂದಿದ್ದ ವೀರನ ಪರಾಕ್ರಮವನ್ನು ನೋಡಿರೋ; ಶಿವ ಶಿವಾ=ರಣರಂಗದತ್ತ ಮುನ್ನುಗ್ಗಿಬಾರದೆ, ಹಿಮ್ಮುಕನಾಗಿ ಓಡುತ್ತಿರುವುದನ್ನು ಕಂಡು ಅಚ್ಚರಿಯಿಂದ ದೇವರಾದ ಶಿವನ ಹೆಸರನ್ನು ಉಚ್ಚರಿಸುತ್ತಿರುವುದು; ಬೆಂಬಳಿ=ಹಿಂಬದಿ/ಬೆನ್ನ ಹಿಂದೆಯೇ ಬರುವುದು; ಅಟ್ಟು=ಬೆಂಬತ್ತು; ಆವನೊ=ಯಾರೊ; ಸುಭಟನ್+ಅಹನು; ಸುಭಟ=ಪರಾಕ್ರಮಿ; ಅಹನು=ಆಗಿದ್ದಾನೆ;

ಶಿವ ಶಿವಾ ಬೆಂಬಳಿಯಲಿ ಅಟ್ಟುವ ವೀರನು ಆವನೊ ಸುಭಟನಹನು=ಶಿವ ಶಿವಾ ಪಲಾಯನಮಾಡುತ್ತಿರುವವನನ್ನು ಬೆನ್ನಟ್ಟಿಕೊಂಡು ಹೋಗುತ್ತಿರುವ ವೀರನು ಯಾರೊ…ನಿಜಕ್ಕೂ ಆತ ಒಬ್ಬ ಪರಾಕ್ರಮಿಯಾಗಿದ್ದಾನೆ;

 ಅವನು ತಿಳಿಯಲು ಅರಿದು=ಅವನು ಯಾರೆಂಬುದನ್ನು ತಿಳಿಯಲಾಗುತ್ತಿಲ್ಲ; ಇವನ್+ಆವನೋ; ವೆಗ್ಗಳೆಯನ್+ಅಹನು; ವೆಗ್ಗಳೆಯ=ಕಲಿ/ಶೂರ; ಅಹನು=ಆಗಿರುವನು;

ಇವನಾವನೋ ವೆಗ್ಗಳೆಯನಹನು=ಬೆನ್ನಟ್ಟಿ ಹೋಗುತ್ತಿರುವ ಇವನಾರೋ ಶೂರನೇ ಆಗಿರುವನು; ಆಕಾರ=ರೂಪ; ನೆರೆ=ಪೂರ್‍ಣವಾಗು/ಹೆಚ್ಚಾಗು; ಫಲುಗುಣ=ಅರ್‍ಜುನ; ಅರಿ=ಹಗೆ/ಶತ್ರು; ಗಜಬಜಿಸು=ಗದ್ದಲಮಾಡು;

ಆಕಾರದಲಿ ನೆರೆ ಫಲುಗುಣನ ಹೋಲುವನು ಎನುತ ಅರಿಸೇನೆ ಗಜಬಜಿಸಿತು=ರೂಪಿನಲ್ಲಿ ಸಂಪೂರ್‍ಣವಾಗಿ ಅರ್‍ಜುನನ್ನೇ ಹೋಲುವಂತಿದ್ದಾನೆ ಎಂದು ಹೇಳಿಕೊಳ್ಳುತ್ತ ದುರ್‍ಯೋದನನ ಸೇನೆಯ ಕಾದಾಳುಗಳು ದೊಡ್ಡದನಿಯಲ್ಲಿ ಪರಸ್ಪರ ಮಾತನಾಡಿಕೊಂಡರು; ಅಳವು=ಶಕ್ತಿ/ಕಸುವು; ಮಿಗುವ+ಆತನು; ಮಿಗು=ಹಾಯು/ದಾಟು;

ಸಾರಥಿ ಅಳವಿಯಲಿ ಮಿಗುವಾತನು ಈತ ಉತ್ತರ=ಸಾರತಿಯ ಕಯ್ಗೆ ಸಿಗದಂತೆ ಪಲಾಯನಮಾಡುತ್ತಿರುವವನು…ಈತ ವಿರಾಟರಾಯನ ಮಗ ಉತ್ತರಕುಮಾರ; ಸೂತತನ=ತೇರನ್ನು ನಡೆಸುವ ಕಸುಬು;

 ಅರ್ಜುನಂಗೆ ಈ ಸೂತತನವು ಎತ್ತಲು=ನೀವು ಹೇಳುತ್ತಿರುವಂತೆ ಬೆನ್ನಟ್ಟುತ್ತಿರುವವನು ಅರ್‍ಜುನನಾದರೆ, ಅರ್‍ಜುನನಿಗೆ ಸಾರತಿಯಾಗುವ ಸನ್ನಿವೇಶ ಹೇಗೆ ಬಂತು; ವೀಕ್ಷಿಸು=ನೋಡು; ನಪುಂಸಕ=ಇತ್ತ ಗಂಡೂ ಅಲ್ಲದ, ಅತ್ತ ಹೆಣ್ಣೂ ಅಲ್ಲದ ಮಾನವಜೀವಿ;

ವೀಕ್ಷಿಸಲು ನಪುಂಸಕ ವೇಷ=ನೋಡಿದರೆ ನಪುಂಸಕನ ಉಡುಗೆತೊಡುಗೆಯಲ್ಲಿದ್ದಾನೆ; ಪುರುಹೂತ=ದೇವೇಂದ್ರ; ರಾಮ=ರಾಮಾಯಣ ಕಾಲದಲ್ಲಿದ್ದ ಅಯೋದ್ಯೆಯ ರಾಜನಾದ ರಾಮ; ಆತಡೆ=ಎದುರಿಸಿದರೆ/ರಣರಂಗದಲ್ಲಿ ಎದುರಾದರೆ; ಇರಿ=ಕೊಲ್ಲು; ಖಾತಿ=ಕೋಪ/ಸಿಟ್ಟು;

ಈತ ಅರ್ಜುನನಾಗಲಿ… ಆ ಪುರುಹೂತನಾಗಲಿ… ರಾಮನಾಗಲಿ ಬರಲಿ. ಆತಡೆ ಇರಿವೆನು ಎಂದನು ಕರ್ಣ ಖಾತಿಯಲಿ= ಬೆನ್ನಟ್ಟಿಹೋಗುತ್ತಿರುವ ವ್ಯಕ್ತಿಯು ಅರ್‍ಜುನನಾಗಿರಲಿ…ಆ ದೇವೇಂದ್ರನೇ ಆಗಿರಲಿ…ತ್ರೇತಾಯುಗದ ರಾಮನೇ ಆಗಿರಲಿ…ಅವನೇನಾದರೂ ದುರ್‍ಯೋದನನ ಸೇನೆಗೆ ಎದುರಾಗಿ ಬಂದರೆ ಅವನನ್ನು ಕೊಲ್ಲುತ್ತೇನೆ ಎಂದು ಕರ್‍ಣನು ಆಕ್ರೋಶದಿಂದ ನುಡಿದನು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks