ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 4

ಸಿ. ಪಿ. ನಾಗರಾಜ.

*** ಉತ್ತರಕುಮಾರನ ಪ್ರಸಂಗ: ನೋಟ – 4 ***

ಇತ್ತಲು ಅರ್ಜುನನು ಉತ್ತರನ ಬೆಂಬತ್ತಿ ಬಂದನು.

ಬೃಹನ್ನಳೆ: ಹೋದೆಯಾದರೆ ನಿನ್ನ ತಲೆಯನು ಕಿತ್ತು ಬಿಸುಡುವೆ. ನಿಲ್ಲು…ನಿಲ್ಲು.

ಉತ್ತರ ಕುಮಾರ: ಮೃತ್ಯುವೋ…ಸಾರಥಿಯೊ. ಪಾಪಿಯನು ಎತ್ತಣಿಂದವೆ ಮಾಡಿಕೊಂಡೆನು.

(ಎನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ. ನರ ನೂರು ಹಜ್ಜೆಯೊಳು ಇಟ್ಟಣಿಸಿ ಅಟ್ಟಿ ಹಿಡಿದನು.)

ಬೃಹನ್ನಳೆ: ಇದೇನ ಮಾಡಿದೆ. ಹಾದರಕೆ ಹುಟ್ಟಿದೆಯೊ. ನೀನು ಕ್ಷತ್ರಿಯ ಬೀಜವೋ. ಹೆಂಗಳ ಇದಿರಲಿ ದಿಟ್ಟತನ ಮಿಗೆ ಹೊಟ್ಟುಗುಟ್ಟಿದೆ. ಹಗೆಗಳ ಇದಿರಲಿ ಬಿಟ್ಟುಕೊಂಡೆ. ದುರಾತ್ಮ, ವಿರಾಟನ ಅನ್ವಯವ ಮುರಿದೆ.

ಉತ್ತರ ಕುಮಾರ: (ಹಲುಗಿರಿದು ಬಾಯೊಳಗೆ ಬೆರಳಿಟ್ಟು ಅಳುಕಿ ತಲೆವಾಗಿದನು.)

ಸಾರಥಿ, ಕಳುಹಿ ಕಳೆಯೈ. ನಿನ್ನ ಬಸುರಲಿ ಮರಳಿ ಬಂದವನು. ಕೊಳುಗುಳದೊಳು ಈ ಒಡ್ಡ ಮುರಿವ ಅಗ್ಗಳೆಯರು ಉಂಟೇ. ಲೋಗರಿಂದವೆ ಕೊಲಿಸದಿರು. ನೀ ಕುತ್ತಿ ಕೆಡಹು. ಕಠಾರಿಯಿದೆ.

(ಎಂದ. ಅರ್ಜುನನು ಮನದಲಿ ಒಡಲು ಒಡೆವಂತೆ ನಗುತ ಗಜರಿದನು.)

ಬೃಹನ್ನಳೆ: ಎಲವೊ…ಸಭೆಯಲಿ ವನಜಮುಖಿಯರ ಮುಂದೆ ಬಾಯ್ಗೆ ಬಂದಂತೆ ಸೊರಹಿದೆ. ಅನುವರದೊಳು ಏನಾಯ್ತು. ರಿಪುವಾಹಿನಿಯನು ಇರಿಯದೆ ನಾಡ ನರಿಯವೊಲು ಎನಗೆ ನೀ ಹಲುಗಿರಿಯೆ ಬಿಡುವೆನೆ ಕಾದು ನಡೆ. ಹೇವ ಬೇಡಾ. ವೀರರು ಈ ಪರಿ ಜೀವಗಳ್ಳರ ಪಥವ ಹಿಡಿವರೆ. ಎಮ್ಮ ನೋಡು… ನಪುಂಸಕರು…ಸಾವಿಗೆ ಅಂಜಿದೆವೇ,.

ಉತ್ತರ ಕುಮಾರ: ನೀವು ವೀರರು. ಆವು ನೆರೆ ನಪುಂಸಕರು. ಸಾವವರಲ್ಲ. ಲೋಕದ ಜೀವಗಳ್ಳರಿಗೆ ಆವು ಗುರುಗಳು. ಬಿಟ್ಟು ಕಳುಹು.

ಬೃಹನ್ನಳೆ: ಎಲವೊ ನೀನು ಹರುಕನೇ. ನಿಮ್ಮಯ್ಯ ರಾಯರೊಳು ಉರುವ ನೃಪ. ಇಂದು ನೀನು ಇರಿದು ಮೆರೆವ ಅವಸರವಲಾ. ಜವ್ವನದ ಧುರಭರವ ರವಿ ಶಶಿ ಮುರಿದು ಬೀಳ್ವನ್ನಬರ ಅಪಕೀರ್ತಿ ಸರಿಗಳೆಯದೆ. ಎಲೆ ನರಗುರಿಯೆ ಕಾಳಗಕೆ ನಡೆ…

(ಎನುತ ಉತ್ತರನ ಹಿಡಿದೆಳೆದನು.)

ಕೊಳುಗುಳದೊಳು ಓಡಿದೊಡೆ ಹಜ್ಜೆಗೆ ಮಹಾಪಾತಕವು ಫಲ. ಮುಂದಣಿಗೆ ಒಲಿದು ಹಜ್ಜೆಯನಿಡಲು ಹಜ್ಜೆಯೊಳು ಅಶ್ವಮೇಧ ಫಲ. ಅಳಿದನಾದೊಡೆ ದೇವಲೋಕದ ಲಲನೆಯರು ತೊತ್ತಿರು. ಸುರೇಂದ್ರನು ನೆಲನನು ಉಗ್ಗಡಿಸುವನು. ವೀರಸ್ವರ್ಗವಹುದು.

ಉತ್ತರ ಕುಮಾರ: ಧುರದೊಳು ಓಡಿದ ಪಾತಕವ ಭೂಸುರರು ಕಳೆದಪರು. ಅಶ್ವಮೇಧವ ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದು. ಎಮಗೆ ಸುರರ ಸತಿಯರನು ಒಲ್ಲೆವು. ಎಮಗೆ ಎಮ್ಮ ಅರಮನೆಯ ನಾರಿಯರೆ ಸಾಕು. ಎಮ್ಮ ಅರಸುತನವೆ ಎಮಗೆ ಇಂದ್ರ ಪದವಿಯು. ಬಿಟ್ಟು ಕಳುಹು.

ಬೃಹನ್ನಳೆ: ಆಳೊಳು ಒಡ್ಡುಳ್ಳವನು. ಭಾರಿಯ ತೋಳುಗಳ ಹೊತ್ತವನು. ಮನೆಯಲಿ ಸೂಳೆಯರ ಮುಂದೆ ಒದರಿ ಬಾಷ್ಕಳಗೆಡೆದು ಬಂದು, ಈಗ ಕೋಲನಿಕ್ಕದೆ ಗಾಯವಡೆಯದೆ, ಕಾಲು ವೇಗವ ತೋರಿದಡೆ, ಅಕಟ…ನಿನ್ನ ಓಲಗದೊಳು ಎಂತು ನಾಚದೆ ಕುಳ್ಳಿತಿಹೆ.

ಉತ್ತರ ದೇವ: “ಕೆತ್ತುಕೊಂಡ ಆ ನಾಚಿಕೆಗೆ ನೆರೆಕುತ್ತಿಕೊಳಬೇಕು” ಎಂಬ ಗಾದೆಯನು ಇತ್ತ ಹೊದ್ದಿಸಬೇಡ. ನಾವು ಕಾಳಗಕೆ ಅಂಜುವೆವು. ತೆತ್ತಿಗನು ನೀನು. ಅಹಿತನಂತಿರೆ ಮಿತ್ತು ಅಹರೇ. ನಿನಗೆ ಬೇಡಿದನಿತ್ತು ಸಲಹುವೆನು. ಎನ್ನ ಕೊಲ್ಲದೆ ಬಿಟ್ಟು ಕಳುಹು. ರಾಜಭವನದಲಿ ವಳಿತವನು ವಾರುವವ ಮುಕ್ತಾವಳಿಯ ಅಲಂಕಾರವನು ರಥವನು ಲಲನೆಯರ ನಾನು ಈಸಿ ಕೊಡುವೆನು. ಎಲೆ ಬೃಹನ್ನಳೆ, ನಮ್ಮ ಬೊಪ್ಪನು ಸಲಹಿದಕೆ ಕೈಯೊಡನೆ ತೋರಿದೆ. ನಿನ್ನದು ಕಲುಮನವಲಾ.

(ಎಂದಡೆ ಪಾರ್ಥನು ಇಂತೆಂದ.)

ಬೃಹನ್ನಳೆ: ಪೊಡವಿಪತಿಗಳ ಬಸುರ ಬಂದು ಈ ಒಡಲ ಕಕ್ಕುಲಿತೆಯನು ಕಾಳಗದೆಡೆಗೆ ಭೂತ ಭವಿಷ್ಯಮಾನದಲಿ ಮಾಡಿದರಿಲ್ಲ. ಬಂಜೆವಾತನು ನುಡಿಯಬಹುದೇ. ಎಲವೋ ರಾಜಬಾಹಿರ ಸುಡು ಸುಡು, ವರೂಥದ ಹೊರೆಗೆ ನಡೆ. ಕಾದಲು ಬೇಡ…ಬಾ. ನೀನು ಎನ್ನಯ ರಥವ ಐದಿಸು. ಮನದಲಿ ಭೇದತನವನು ಬಿಟ್ಟು ಸಾರಥಿಯಾಗು ಸಾಕು. ಮಾರೊಡ್ಡಿನಲಿ ಕಾದುವೆನು.

ಉತ್ತರ ಕುಮಾರ: ಆದಿಯಲಿ ನೀನಾವ ರಾಯರ ಕಾದಿ ಗೆಲಿದೈ. ಹುಲು ಬೃಹನ್ನಳೆಯಾದ ನಿನಗೆ ಈ ಕದನ ನಾಟಕವಿದ್ಯವಲ್ಲ. ಇನ್ನು ಎನ್ನವಂದಿಗ ರಾಜ ಪುತ್ರರಿಗೆ ಮೊಗಸಲು ಬಾರದಿದೆ. ನೀನು ಎನ್ನ ಸಾರಥಿ ಮಾಡಿಕೊಂಡು ಈ ಬಲವ ಜಯಿಸುವೆಯ. ಅನ್ಯರನು ಮನಗಾಂಬರಲ್ಲದೆ ತನ್ನ ತಾ ಮನಗಾಂಬರೇ. ಈ ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹು.

ಬೃಹನ್ನಳೆ: ಎಲವೊ…ಸಾರಥಿಯಾಗು ನಡೆ. ನೀ ಗಳಹಿದೊಡೆ ಕಟವಾಯ ಕೊಯ್ವೆನು. ಈ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ ಕೊಲುವೆನು. ಬಳಿಕ ನೀ ನಗು, ನಡೆ.

( ಎನುತ ರಿಪುಬಲಭಯಂಕರನು ಉತ್ತರನ ಹೆಡತಲೆಯ ಹಗರಿನೊಳು ಔಂಕಿ ತಂದನು. ರಥವನು ಏರಿಸಿದ.)

ಬೃಹನ್ನಳೆ: ಎಲವೊ, ಖೇಡತನ ಬೇಡ. ರಣದೊಳಗೆ ಅಹಿತರನು ಓಡಿಸುವೆನು. ಥಟ್ಟ ನಡೆಹೊಯ್ದು ಅಂತಕನ ನಗರಿಗೆ ಹರಣವ ಹೂಡಿಸುವೆನು. ಕೋಡದಿರು…ಕೊಂಕದಿರು. ಧೈರ್ಯವ ಮಾಡಿ ಸಾರಥಿಯಾಗು.

(ಎನುತ ಕಲಿ ಮಾಡಿ ಸಮೀಪದ ಶಮಿಯ ಹೊರೆಗಾಗಿ ಕೊಂಡೊಯ್ದನು.)

ಪದ ವಿಂಗಡಣೆ ಮತ್ತು ತಿರುಳು

ಇತ್ತಲು=ಈ ಕಡೆ; ಬೆಂಬತ್ತಿ=ಬೆನ್ನಟ್ಟಿಕೊಂಡು ;

ಇತ್ತಲು ಅರ್ಜುನನು ಉತ್ತರನ ಬೆಂಬತ್ತಿ ಬಂದನು=ತೇರಿನಿಂದ ದುಮ್ಮಿಕ್ಕಿ ಪಲಾಯನ ಮಾಡುತ್ತಿರುವ ದಿಕ್ಕಿನತ್ತ ಅರ‍್ಜುನನು ಉತ್ತರಕುಮಾರನನ್ನು ಬೆನ್ನಟ್ಟಿಕೊಂಡು ಬಂದನು;

ಹೋದೆಯಾದರೆ ನಿನ್ನ ತಲೆಯನು ಕಿತ್ತು ಬಿಸುಡುವೆ.ನಿಲ್ಲು…ನಿಲ್ಲು=ಹೀಗೆ ನೀನು ಪಲಾಯನ ಮಾಡುತ್ತಿದ್ದರೆ ನಿನ್ನ ತಲೆಯನ್ನು ಕತ್ತರಿಸಿ ಎಸೆಯುತ್ತಾನೆ. ನಿಲ್ಲು…ನಿಲ್ಲು ಎಂದು ಜೋರಾಗಿ ಕೂಗುತ್ತ ಅರ‍್ಜುನನು ಉತ್ತರಕುಮಾರನಿಗೆ ಎಚ್ಚರಿಕೆಯನ್ನು ನೀಡಿದನು;

ಮೃತ್ಯುವೋ…ಸಾರಥಿಯೊ = ಕತ್ತನ್ನೇ ಕತ್ತರಿಸಿ ಬಿಸುಡುತ್ತೇನೆ ಎಂದು ಕೂಗಿ ಹೇಳುತ್ತಿರುವ ಇವನೇನು ನನ್ನ ಪಾಲಿನ ಸಾವಿನ ಕುಣಿಕೆಯೋ ಇಲ್ಲವೇ ಸಾರತಿಯೋ ಎಂದು ಉತ್ತರಕುಮಾರನು ಕಂಗಾಲಾಗಿ ನುಡಿಯುತ್ತ;

ಎತ್ತಣಿಂದ=ಯಾವ ಕಡೆಯಿಂದ; ಪಾಪಿಯನು

ಎತ್ತಣಿಂದವೆ ಮಾಡಿಕೊಂಡೆನು ಎನುತ್ತ=ಇಂತಹ ಪಾಪಿಯನ್ನು ಸಾರತಿಯನ್ನಾಗಿ ಯಾಕಾದರೂ ಮಾಡಿಕೊಂಡೆನೊ ಎನ್ನುತ್ತ;

ಮರಳಿದು ನೋಡಿ=ಹಿಂತಿರುಗಿ ನೋಡಿ; ಮತ್ತೆ=ಪುನಹ; ಸೈವರಿ=ನೇರವಾಗಿ ಸಾಗು/ಮುಂದಕ್ಕೆ ಹೋಗು;

ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ=ಓಡಓಡುತ್ತಲೇ ಒಮ್ಮೆ ಹಿಂತಿರುಗಿ ನೋಡಿ, ನಿಲ್ಲದೆ ಮತ್ತೆ ಇನ್ನಶ್ಟು ವೇಗವಾಗಿ ಓಡತೊಡಗಿದ;

ಇಟ್ಟಣಿಸು=ದಾಟು/ಮೀರು; ನರ=ಅರ‍್ಜುನ; ಅಟ್ಟಿಹಿಡಿ=ಬೆನ್ನಟ್ಟಿಕೊಂಡು ಹೋಗಿ ಹಿಡಿಯುವುದು;

ನರ ನೂರು ಹಜ್ಜೆಯೊಳು ಇಟ್ಟಣಿಸಿ ಅಟ್ಟಿ ಹಿಡಿದನು=ಅರ‍್ಜುನನು ವೇಗವಾಗಿ ಬೆನ್ನಟ್ಟಿಹೋಗಿ ನೂರು ಹೆಜ್ಜೆಗಳೊಳಗೆ ಉತ್ತರಕುಮಾರನನ್ನು ಹಿಡಿದನು;

ಇದೇನ ಮಾಡಿದೆ=ಇದೇನು ಮಾಡುತ್ತಿರುವೆ. ವೀರನಾಗಿ ರಣರಂಗದಲ್ಲಿ ಹೋರಾಡಬೇಕಾದ ನೀನು, ಹೇಡಿಯಾಗಿ ರಣರಂಗದಿಂದ ಪಲಾಯನ ಮಾಡುತ್ತಿರುವೆಯಲ್ಲ:

ಹಾದರ=ಸಮಾಜ ಒಪ್ಪಿತವಲ್ಲದ ಹೆಣ್ಣುಗಂಡಿನ ಕಾಮದ ನಂಟು;

ಹಾದರಕೆ ಹುಟ್ಟಿದೆಯೊ=ನೀನು ವಿರಾಟರಾಜನಿಗೆ ಹುಟ್ಟಲಿಲ್ಲವೇನೋ;

ಕ್ಷತ್ರಿಯ=ನಾಡನ್ನಾಳುವ ಮತ್ತು ಕಾಪಾಡುವ ಹೊಣೆಯನ್ನು ಹೊತ್ತಿರುವ ವರ‍್ಣದವನು; ಪ್ರಾಚೀನ ಇಂಡಿಯಾದ ಸಾಮಾಜಿಕ ವ್ಯವಸ್ತೆಯಲ್ಲಿ ಬ್ರಾಹ್ಮಣ/ಕ್ಶತ್ರಿಯ/ವೈಶ್ಯ/ಶೂದ್ರ ಎಂಬ ನಾಲ್ಕು ವರ‍್ಣಗಳಿದ್ದವು; ಬೀಜ=ಸಂತತಿ/ವೀರ‍್ಯ;

ನೀನು ಕ್ಷತ್ರಿಯ ಬೀಜವೋ =ನೀನು ಕ್ಶತ್ರಿಯ ಬೀಜಕ್ಕೆ ಹುಟ್ಟಿರುವೇನೋ;

ದಿಟ್ಟತನ=ಪರಾಕ್ರಮ/ಶೂರತನ; ಮಿಗೆ=ಬಹಳವಾಗಿ/ಅತಿಯಾಗಿ; ಹೊಟ್ಟುಗುಟ್ಟು=ಇದೊಂದು ನುಡಿಗಟ್ಟು.ಕೆಲಸಕ್ಕೆ ಬಾರದ ಪೊಳ್ಳುಮಾತುಗಳನ್ನಾಡುವುದು ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;

ಹೆಂಗಳ ಇದಿರಲಿ ದಿಟ್ಟತನ ಮಿಗೆ ಹೊಟ್ಟುಗುಟ್ಟಿದೆ=ಅಲ್ಲಿ ರಾಣಿವಾಸದ ಹೆಂಗಸರ ಮುಂದೆ ಮಹಾಪರಾಕ್ರಮದ ಮಾತುಗಳನ್ನು ಬಾಯಿಗೆ ಬಂದಂತೆಲ್ಲಾ ಆಡಿದೆ;

ಹಗೆ=ಶತ್ರು; ಹಗೆಗಳ ಇದಿರಲಿ ಬಿಟ್ಟುಕೊಂಡೆ=ಈಗ ಹಗೆಗಳ ಎದುರಿನಲ್ಲಿ ನಿಲ್ಲಲಾಗದೆ ಕಳಚಿಕೊಂಡು ಪಲಾಯನಮಾಡುತ್ತಿರುವೆ;

ದುರಾತ್ಮ=ನೀಚ; ಅನ್ವಯ=ವಂಶ; ಮುರಿ=ನಾಶಮಾಡು;

ದುರಾತ್ಮ, ವಿರಾಟನ ಅನ್ವಯವ ಮುರಿದೆ=ನೀಚನಾದ ನೀನು ವಿರಾಟರಾಜನ ರಾಜವಂಶಕ್ಕೆ ಕಳಂಕವನ್ನು ತಂದಿರುವೆ;

ಅಳುಕು=ಹೆದರು; ಹಲುಗಿರಿ=ವ್ಯಕ್ತಿಯು ತನ್ನೆರಡು ಹಲ್ಲುಗಳ ಸಾಲು ಹೊರಕಾಣುವಂತೆ ಬಿಡುವುದು. ವ್ಯಕ್ತಿಯು ಯಾವುದೇ ಒಂದು ಸನ್ನಿವೇಶದಲ್ಲಿ ತಪ್ಪನ್ನು ಮಾಡಿ ಸಿಕ್ಕಿಬಿದ್ದಾಗ ಇಲ್ಲವೇ ಬೇಜವಾಬ್ದಾರಿತನದಿಂದ ತನ್ನ ಪಾಲಿನ ಕೆಲಸವನ್ನು ಮಾಡಲಾಗದಿದ್ದಾಗ ಇತರರ ಮುಂದೆ ಈ ರೀತಿ ಹಲ್ಲುಗಳನ್ನು ಬಿಡುತ್ತಾನೆ;

ಅಳುಕಿ ಹಲುಗಿರಿದು ಬಾಯೊಳಗೆ ಬೆರಳಿಟ್ಟು ತಲೆವಾಗಿದನು=ಹೆದರಿಕೆಯಿಂದ ತತ್ತರಿಸುತ್ತ…ಹಲ್ಲುಗಿರಿಯುತ್ತ…ಬಾಯೊಳಕ್ಕೆ ಬೆರಳನ್ನಿಟ್ಟುಕೊಂಡು ತಲೆಬಗ್ಗಿಸಿದನು; ದೇಹದ ಈ ಹಾವಬಾವಗಳು ವ್ಯಕ್ತಿಯ ಅಸಹಾಯಕತೆ/ಹೇಡಿತನ/ಬಲಹೀನತೆಗೆ ಸಂಕೇತಗಳಾಗಿವೆ;

ಕಳೆ=ಬಿಡು; ಸಾರಥಿ, ಕಳುಹಿ ಕಳೆಯೈ= ಸಾರತಿಯೇ…ನನ್ನನ್ನು ಕಳುಹಿಸಿಬಿಡು;

ಬಸುರು=ಹೊಟ್ಟೆ; ಮರಳಿ=ಪುನಹ;

ನಿನ್ನ ಬಸುರಲಿ ಮರಳಿ ಬಂದವನು=ನಿನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿಬಂದಿದ್ದೇನೆ ಎಂದು ತಿಳಿಯುತ್ತೇನೆ. ನಿನ್ನಿಂದ ನಾನು ಮರುಹುಟ್ಟು ಪಡೆದಂತಾಗುತ್ತದೆ;

ಕೊಳುಗುಳ=ಕಾಳೆಗ/ರಣರಂಗ; ಒಡ್ಡು=ಸೇನೆ/ಪಡೆ; ಮುರಿ=ಸೋಲು/ನಾಶಮಾಡು; ಅಗ್ಗಳೆಯ=ಶೂರ;

ಕೊಳುಗುಳದೊಳು ಈ ಒಡ್ಡ ಮುರಿವ ಅಗ್ಗಳೆಯರು ಉಂಟೇ=ರಣರಂಗದಲ್ಲಿ ದುರ‍್ಯೋದನನ ಈ ಸೇನೆಯನ್ನು ಸೋಲಿಸುವ ಶೂರರು ಇದ್ದಾರೆಯೇ;

ಲೋಗರು=ಸಾಮಾನ್ಯ ಜನರು/ಬೇರೆಯವರು;  ಲೋಗರಿಂದವೆ ಕೊಲಿಸದಿರು=ರಣರಂಗದಲ್ಲಿ ಬೇರೆಯವರಿಂದ ನನ್ನನ್ನು ಕೊಲ್ಲಿಸಬೇಡ;

ಕಠಾರಿ=ಚಿಕ್ಕ ಕತ್ತಿ/ಚೂರಿ; ಕುತ್ತು=ಹೊಡೆ/ಬಡಿ/ಇರಿ; ಕೆಡಹು=ಕೆಳಕ್ಕೆ ಬೀಳಿಸು/ಉರುಳಿಸು;

ಕಠಾರಿಯಿದೆ. ನೀ ಕುತ್ತಿ ಕೆಡಹು ಎಂದ=ಇದೋ ನೋಡು…ನನ್ನ ಬಳಿಯಿರುವ ಈ ಕಿರುಗತ್ತಿಯಿಂದ ನನ್ನನ್ನು ಇರಿದು ಬೀಳಿಸಿ ಕೊಲ್ಲು ಎಂದು ಉತ್ತರಕುಮಾರನು ಬ್ರುಹನ್ನಳೆಯಲ್ಲಿ ಬೇಡಿಕೊಂಡ;

ಒಡಲು=ಹೊಟ್ಟೆ; ಒಡೆ=ಸೀಳು/ಬಿರಿ; ಒಡಲು ಒಡೆವಂತೆ ನಗುವುದು=ಅತಿ ಹೆಚ್ಚಾಗಿ ನಗುವುದು; ಗಜರು=ಗದರಿಸು/ಬೆದರಿಸು;

ಅರ್ಜುನನು ಮನದಲಿ ಒಡಲು ಒಡೆವಂತೆ ನಗುತ ಗಜರಿದನು=ಉತ್ತರಕುಮಾರನ ಮಾತು ಮತ್ತು ಅವನ ಹಾವಬಾವಗಳನ್ನು ಕಂಡು ಅರ‍್ಜುನನು ಜೋರಾಗಿ ನಗುತ್ತ, ಗದರಿಸಿದನು;

ವನಜ=ತಾವರೆ/ಕಮಲ; ವನಜಮುಕಿ=ತಾವರೆಯ ಮೊಗದವಳು/ಸುಂದರಿ; ಸೊರಹು=ಜಂಬ ಕೊಚ್ಚಿಕೊಳ್ಳುವುದು;

ಎಲವೊ…ಸಭೆಯಲಿ ವನಜಮುಖಿಯರ ಮುಂದೆ ಬಾಯ್ಗೆ ಬಂದಂತೆ ಸೊರಹಿದೆ=ಎಲವೊ…ರಾಣಿವಾಸದ ಸುಂದರಿಯರ ಮುಂದೆ ನೀನೊಬ್ಬ ಮಹಾಶೂರನೆಂದು ಇಲ್ಲಸಲ್ಲದ್ದನ್ನು ಬಾಯಿಗೆ ಬಂದಂತೆ ಹೇಳಿಕೊಂಡು ಜಂಬದಿಂದ ಬೀಗುತ್ತ ಮೆರೆದೆ;

ಅನುವರ=ಕಾಳೆಗ/ರಣರಂಗ; ಅನುವರದೊಳು ಏನಾಯ್ತು=ಈಗ ರಣರಂಗದಲ್ಲಿ ನಿನಗೆ ಏನಾಯಿತು/ನಿನ್ನ ಪರಾಕ್ರಮ ಎಲ್ಲಿ ಹೋಯಿತು;

ರಿಪು=ಹಗೆ/ಶತ್ರು; ವಾಹಿನಿ=ದಳ/ಪಡೆ; ಇರಿ=ಹೋರಾಡು/ಕಾಳೆಗ ಮಾಡು; ನಾಡು=ರಾಜ್ಯ/ದೇಶ/ಪ್ರಾಂತ್ಯ; ನರಿಯ+ವೊಲು; ನರಿ=ಕಾಡಿನಲ್ಲಿರುವ ಒಂದು ಪ್ರಾಣಿ. ಇದು ಬಹಳ ಬುದ್ದಿವಂತಿಕೆಯಿಂದ ಎಲ್ಲರನ್ನೂ ವಂಚಿಸಿ ತನ್ನ ಹೊಟ್ಟೆಹೊರೆದುಕೊಳ್ಳುತ್ತದೆ ಎಂಬ ಬಾವನೆ ಜನಮನದಲ್ಲಿದೆ. ಆದ್ದರಿಂದ ನಯವಂಚನೆಯ ನಡೆನುಡಿಗೆ ಒಂದು ಸಂಕೇತವಾಗಿ ಈ ಪ್ರಾಣಿಯ ಹೆಸರನ್ನು ಬಳಸುತ್ತಾರೆ; ವೊಲು=ಅಂತೆ/ಹಾಗೆ; ನಾಡನರಿ=ನಾಡಿನಲ್ಲಿರುವ ನಯವಂಚಕ;

ರಿಪುವಾಹಿನಿಯನು ಇರಿಯದೆ ನಾಡ ನರಿಯವೊಲು ಎನಗೆ ನೀ ಹಲುಗಿರಿಯೆ ಬಿಡುವೆನೆ=ಹಗೆಯ ಸೇನೆಯೊಡನೆ ಹೋರಾಡದೆ ನಯವಂಚಕತನದ ನರಿಯಂತೆ ನನ್ನ ಮುಂದೆ ದೀನತೆಯಿಂದ ನುಡಿದು ಹಲ್ಲುಗಳನ್ನು ಬಿಡುತ್ತಿದ್ದರೆ, ನಿನ್ನನ್ನು ಹೋಗಲು ಬಿಟ್ಟುಬಿಡುತ್ತೇನೆಯೇ;

ಕಾದು ನಡೆ=ಈಗ ಹಗೆಯೊಡನೆ ಕಾದಾಡಲು ಹೊರಡು;

ಹೇವ=ಜುಗುಪ್ಸೆ/ಸಂಕಟ; ಹೇವ ಬೇಡಾ=ಸಂಕಟಪಡಬೇಡ; ಪರಿ=ರೀತಿ; ಜೀವ+ಕಳ್ಳ; ಜೀವಗಳ್ಳ=ಜೀವವನ್ನು ಉಳಿಸುಕೊಳ್ಳುವುದಕ್ಕಾಗಿ ಮಾನ ಮರ‍್ಯಾದೆಯನ್ನು ಬಿಟ್ಟು ಬಾಳುವವನು; ಪಥ=ದಾರಿ/ಮಾರ‍್ಗ;

ವೀರರು ಈ ಪರಿ ಜೀವಗಳ್ಳರ ಪಥ ಹಿಡಿವರೆ=ವೀರರಾದವರು ಈ ರೀತಿ ಜೀವಗಳ್ಳರ ದಾರಿಯನ್ನು ಹಿಡಿಯುತ್ತಾರೆಯೇ. ಮಾನಮರ‍್ಯಾದೆಯನ್ನು ಉಳಿಸಿಕೊಳ್ಳುವಂತೆ ಬಾಳಬೇಕು ಎನ್ನುವುದಕ್ಕಿಂತ ಜೀವವೊಂದು ಉಳಿದರೆ ಸಾಕು ಎನ್ನುತ್ತಾರೆಯೇ;

ನಪುಂಸಕ=ಇತ್ತ ಗಂಡೂ ಅಲ್ಲದ ಅತ್ತ ಹೆಣ್ಣೂ ಅಲ್ಲದ ಮಾನವ ಜೀವಿ;

ಎಮ್ಮ ನೋಡು… ನಪುಂಸಕರು…ಸಾವಿಗೆ ಅಂಜಿದೆವೇ=ನಮ್ಮನ್ನು ನೋಡು…ನಾವು ನಪುಂಸಕರು…ಸಾವಿಗೆ ಹೆದರಿಕೊಂಡಿದ್ದೇವೆಯೇ;

ಆವು=ನಾವು; ನೆರೆ=ಸಂಪೂರ‍್ಣವಾಗಿ; ನೀವು ವೀರರು. ಆವು ನೆರೆ ನಪುಂಸಕರು ಸಾವವರಲ್ಲ=ನೀವು ವೀರರು. ನಾವು ದಿಟವಾಗಿ ನಪುಂಸಕರಾಗಿದ್ದೇವೆ. ನಾವು ಸಾಯುವುದಕ್ಕೆ ಬಯಸುವುದಿಲ್ಲ; ನಮಗೆ ಮಾನಕ್ಕಿಂತ ಪ್ರಾಣವೇ ದೊಡ್ಡದು;

ಲೋಕದ ಜೀವಗಳ್ಳರಿಗೆ ಆವು ಗುರುಗಳು…ಬಿಟ್ಟು ಕಳುಹು=ಜಗತ್ತಿನಲ್ಲಿರುವ ಜೀವಗಳ್ಳರಿಗೆ ನಾವೇ ಗುರುಗಳು. ನಮ್ಮ ಹೇಡಿತನವನ್ನು ನಾನು ಒಪ್ಪಿಕೊಂಡಿದ್ದೇನೆ. ಕಾಳಗ ರಂಗದಿಂದ ನನ್ನನ್ನು ಬಿಟ್ಟು ಕಳುಹಿಸು;

ಹರುಕ=ಕೀಳು ವ್ಯಕ್ತಿ; ಎಲವೊ ನೀನು ಹರುಕನೇ=ಎಲವೊ…ಈ ರೀತಿ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಹೆಣಗುತ್ತಿರುವೆಯಲ್ಲಾ…ನೀನು ಕೀಳು ವ್ಯಕ್ತಿಯೇ;

ನಿಮ್ಮ+ಅಯ್ಯ; ಅಯ್ಯ=ಅಪ್ಪ/ತಂದೆ; ರಾಯ=ರಾಜ; ಉರುವ=ಉತ್ತಮನಾದ; ನೃಪ=ರಾಜ;

ನಿಮ್ಮಯ್ಯ ರಾಯರೊಳು ಉರುವ ನೃಪ=ನಿಮ್ಮ ತಂದೆಯಾದ ವಿರಾಟರಾಯನು ರಾಜರುಗಳ ಸಮೂಹದಲ್ಲಿಯೇ ಉತ್ತಮನಾದ ರಾಜನಾಗಿದ್ದಾನೆ;

ಇರಿದು=ಹೋರಾಡಿ; ಮೆರೆ=ಕೀರ‍್ತಿಯನ್ನು ಹೊಂದು/ಹೆಸರನ್ನು ಪಡೆ; ಅವಸರ=ಸಮಯ/ಕಾಲ;

ಇಂದು ನೀನು ಇರಿದು ಮೆರೆವ ಅವಸರವಲಾ=ಮತ್ಸ್ಯದೇಶಕ್ಕೆ ಮತ್ತು ವಿರಾಟರಾಯನಿಗೆ ಆಪತ್ತು ಬಂದಿರುವಾಗ ಹಗೆಗಳ ಸೇನೆಯೊಡನೆ ನೀನು ಇಂದು ವೀರಾವೇಶದಿಂದ ಹೋರಾಡುವ ಸಮಯವಿದು;

ಜವ್ವನ=ಪ್ರಾಯ/ತಾರುಣ್ಯ; ಧುರಭರ=ಕದನದ ತೀವ್ರತೆ/ಯುದ್ದದ ವೇಗ; ಜವ್ವನದ ಧುರಭರ=ಪ್ರಾಯವಿದ್ದಾಗ ರಣರಂಗದಲ್ಲಿ ಹೋರಾಡುವ ಉತ್ಸಾಹ. ಕೆಚ್ಚು ಮತ್ತು ಕಸುವು; ರವಿ=ಸೂರ‍್ಯ; ಶಶಿ=ಚಂದ್ರ; ಬೀಳ್ವ+ಅನ್ನಬರ; ಅನ್ನಬರ; ರವಿ ಶಶಿ ಮುರಿದುಬೀಳ್ವ ಅನ್ನಬರ=ಈ ಬ್ರಹ್ಮಾಂಡದಲ್ಲಿ ಸೂರ‍್ಯ ಚಂದ್ರ ಪತನಗೊಳ್ಳುವವರೆಗೂ; ಅಪಕೀರ್ತಿ=ಕೆಟ್ಟಹೆಸರು; ಸರಿಗಳೆಯದೆ=ಸಂಪೂರ‍್ಣವಾಗಿ ಅಳಿದುಹೋಗುವುದೇ;

ಜವ್ವನದ ದುರಬರವ ರವಿ ಶಶಿ ಮುರಿದು ಬೀಳ್ವನ್ನಬರ ಅಪಕೀರ್ತಿ ಸರಿಗಳೆಯದೆ=ಪ್ರಾಯದ ಈ ವಯಸ್ಸಿನಲ್ಲಿ ರಣರಂಗದಲ್ಲಿ ನೀನು ಹೋರಾಡದೆ ಹೇಡಿಯಾಗಿ ಪಲಾಯನ ಮಾಡಿದರೆ, ಈ ಬ್ರಹ್ಮಾಂಡದಲ್ಲಿ ಸೂರ‍್ಯ ಚಂದ್ರರು ಪತನಗೊಳ್ಳುವವರೆಗೂ ನಿನಗೆ ಮತ್ತು ವಿರಾಟರಾಜನ ವಂಶಕ್ಕೆ ತಟ್ಟಿದ ಕಳಂಕ ಅಳಿದುಹೋಗುವುದಿಲ್ಲ;

ನರ+ಕುರಿ; ನರಗುರಿ=ಇದೊಂದು ಬಯ್ಗುಳದ ನುಡಿಗಟ್ಟು. ದೇಹದಲ್ಲಿ ಶಕ್ತಿಯಾಗಲಿ ಮನದಲ್ಲಿ ಕೆಚ್ಚಾಗಲಿ ಇಲ್ಲದ ಕೀಳು ವ್ಯಕ್ತಿ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;

ಎಲೆ ನರಗುರಿಯೆ ಕಾಳಗಕೆ ನಡೆ..ಎನುತ ಉತ್ತರನ ಹಿಡಿದೆಳೆದನು=ಎಲೆ…ನರಗುರಿಯೇ ಕಾಳಗದತ್ತ ನಡೆ ಎನ್ನುತ್ತ ಅರ‍್ಜುನನು ಉತ್ತರಕುಮಾರನನ್ನು ಹಿಡಿದು ಎಳೆದನು;

ಹಜ್ಜೆ=ನೆಲದ ಮೇಲೆ ಪಾದವನ್ನು ಊರಿದ ಗುರುತು; ಪಾತಕ=ಕೆಟ್ಟ ಕೆಲಸ; ಫಲ=ಪ್ರಯೋಜನ/ಪರಿಣಾಮ;

ಕೊಳುಗುಳದೊಳು ಓಡಿದೊಡೆ ಹಜ್ಜೆಗೆ ಮಹಾಪಾತಕವು ಫಲ=ರಣರಂಗದಲ್ಲಿ ಜೀವಗಳ್ಳನಾಗಿ ಪಲಾಯನ ಮಾಡಿದರೆ ಹಿಮ್ಮುಕನಾಗಿ ಇಡುವ ಒಂದೊಂದು ಹೆಜ್ಜೆಗೂ ದೊಡ್ಡಪಾಪದಿಂದ ಉಂಟಾಗುವ ಕೇಡು ತಟ್ಟುತ್ತದೆ;

ಮುಂದಣಿಗೆ=ಮುಂದು ಮುಂದಕ್ಕೆ; ಒಲಿ=ಬಯಸು/ಒಪ್ಪು; ಹಜ್ಜೆಯನು+ಇಡಲು; ಅಶ್ವ=ಕುದುರೆ; ಮೇಧ=ಯಾಗ; ಅಶ್ವಮೇಧ=ರಾಜನು ತನ್ನ ರಾಜ್ಯದ ಪ್ರಾಂತ್ಯವನ್ನು ವಿಸ್ತರಿಸುವುದಕ್ಕಾಗಿ ಮಾಡುತ್ತಿದ್ದ ಒಂದು ಆಚರಣೆ; ರಾಜನಾದ ತನಗೆ ಶರಣಾಗತರಾದವರು ಕಪ್ಪಕಾಣಿಕೆಯನ್ನು ಕೊಡಬೇಕೆಂದು ಇಲ್ಲವೇ ಕುದುರೆಯನ್ನು ಹಿಡಿದುಕಟ್ಟುವವರು ತನ್ನೊಡನೆ ಹೋರಾಡಬೇಕೆಂದು ಬರೆಸಿದ ಹಣೆಪಟ್ಟಿಯನ್ನು ಕುದುರೆಯ ತಲೆಗೆ ಕಟ್ಟಿ, ಅದನ್ನು ತನ್ನ ಸೇನೆಯೊಡನೆ ಹಿಂಬಾಲಿಸಿ ಒಂದು ವರುಶದ ಕಾಲ ಕುದುರೆಯು ಸಂಚರಿಸಿದ ಪ್ರಾಂತ್ಯಗಳನ್ನು ಶರಣಾಗತಿ ಇಲ್ಲವೇ ಹೋರಾಟದಿಂದ ವಶಪಡಿಸಿಕೊಂಡು, ವರುಶದ ನಂತರ ತನ್ನ ರಾಜದಾನಿಯಲ್ಲಿ ಆ ಕುದುರೆಯನ್ನು ಬಲಿಕೊಟ್ಟು ಮಾಡುತ್ತಿದ್ದ ಯಾಗ;

ಮುಂದಣಿಗೆ ಒಲಿದು ಹಜ್ಜೆಯನಿಡಲು ಹಜ್ಜೆಯೊಳು ಅಶ್ವಮೇಧ ಫಲ=ರಣರಂಗದಲ್ಲಿ ತಾನಾಗಿಯೇ ವೀರಾವೇಶದಿಂದ ಮುನ್ನುಗ್ಗಿ ಹಗೆಗಳನ್ನು ಸದೆಬಡಿಯಲು ಇಡುವ ಒಂದೊಂದು ಹೆಜ್ಜೆಗೂ ಅಶ್ವಮೇದದ ಪಲವು ದೊರೆಯುತ್ತದೆ;

ಅಳಿದನ್+ಆದೊಡೆ; ಅಳಿ=ಸಾವು/ಮರಣ; ಆದೊಡೆ=ಆದರೆ; ಲಲನೆ=ಹೆಂಗಸು; ತೊತ್ತು=ಸೇವಕ/ಸೇವಕಿ; ತೊತ್ತಿರು=ಸೇವಕಿಯರು/ದಾಸಿಯರು;

ಅಳಿದನಾದೊಡೆ ದೇವಲೋಕದ ಲಲನೆಯರು ತೊತ್ತಿರು=ಕಾಳೆಗದ ಕಣದಲ್ಲಿ ಹೋರಾಡುತ್ತ ಸಾವನ್ನಪ್ಪಿದರೆ ಅಂತಹ ವೀರನಿಗೆ ದೇವಲೋಕದಲ್ಲಿರುವ ಹೆಂಗಸರು ದಾಸಿಯರಾಗುತ್ತಾರೆ;

ನೆಲ=ಕಾಳೆಗದ ಕಣ; ಉಗ್ಗಡಿಸು=ಹೊಗಳು/ಕೊಂಡಾಡು;

ಸುರೇಂದ್ರನು ನೆಲನನು ಉಗ್ಗಡಿಸುವನು=ದೇವೇಂದ್ರನು ಕಾಳೆಗದ ಕಣದಲ್ಲಿ ಹೋರಾಡಿ ಮಡಿದವರನ್ನು ಹೊಗಳುವನು;

ಸ್ವರ್ಗ=ದೇವಲೋಕದಲ್ಲಿರುವ ಸುಕದ ನೆಲೆ. ಈ ಜಗತ್ತಿನಲ್ಲಿ ಒಳ್ಳೆಯದನ್ನು ಮಾಡಿ ಸತ್ತವರು ಸುಕದ ನೆಲೆಯಾದ ಸ್ವರ‍್ಗಕ್ಕೂ, ಕೆಟ್ಟದ್ದನ್ನು ಮಾಡಿ ಸತ್ತವರು ಸಂಕಟದ ನೆಲೆಯಾದ ನರಕಕ್ಕೂ ಹೋಗುತ್ತಾರೆ ಎಂಬ ಕಲ್ಪನೆಯು ಜನಮನದಲ್ಲಿದೆ;

ವೀರಸ್ವರ್ಗವಹುದು=ರಣರಂಗದಲ್ಲಿ ಹಗೆಗಳ ಎದುರು ಹೋರಾಡುತ್ತ ಮಡಿದ ವೀರರು ಸ್ವರ‍್ಗವನ್ನು ಸೇರುತ್ತಾರೆ;

ಧುರ=ಕಾಳೆಗ/ಯುದ್ದ; ಪಾತಕ=ಪಾಪ/ಕೆಟ್ಟ ಕೆಲಸ; ಭೂಸುರ=ಬ್ರಾಹ್ಮಣನನ್ನು ಬೂಮಿಯಲ್ಲಿರುವ ದೇವತೆಯೆಂದು ನಮ್ಮ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಚಿತ್ರಿಸಲಾಗಿದೆ; ಕಳೆ=ನಿವಾರಿಸು/ಪರಿಹರಿಸು;

ಧುರದೊಳು ಓಡಿದ ಪಾತಕವ ಭೂಸುರರು ಕಳೆದಪರು=ಕಾಳೆಗದ ಕಣದಿಂದ ಪಲಾಯನಮಾಡಿದ್ದರಿಂದ ಬಂದ ಪಾಪವನ್ನು ಬ್ರಾಹ್ಮಣರು ಬಹುಬಗೆಯ ಪೂಜೆಯ ಆಚರಣೆಗಳಿಂದ ಪರಿಹರಿಸುತ್ತಾರೆ;

ಧರಣಿ=ಬೂಮಂಡಲ; ಪ್ರತ್ಯಕ್ಷ=ನೇರವಾಗಿ;

ಅಶ್ವಮೇಧವ ಧರಣಿಯಲಿ ಪ್ರತ್ಯಕ್ಶವಾಗಿಯೆ ಮಾಡಬಹುದು=ಅಶ್ವಮೇದವನ್ನು ಬೂಮಂಡಲದಲ್ಲಿ ನಾನೇ ನೇರವಾಗಿ ಆಚರಿಸಬಹುದು;

ಎಮಗೆ=ನಮಗೆ; ಸುರ=ದೇವತೆ; ಸತಿ=ಹೆಂಗಸು;

ಎಮಗೆ ಸುರರ ಸತಿಯರನು ಒಲ್ಲೆವು=ನಮಗೆ ದೇವಲೋಕದ ಹೆಂಗಸರು ಬೇಕಾಗಿಲ್ಲ;

ಎಮಗೆ ಎಮ್ಮ ಅರಮನೆಯ ನಾರಿಯರೆ ಸಾಕು=ನಮಗೆ ನಮ್ಮ ಅರಮನೆಯ ರಾಣಿವಾಸದಲ್ಲಿರುವ ಹೆಂಗಸರೇ ಸಾಕು;

ಎಮ್ಮ ಅರಸುತನವೆ ಎಮಗೆ ಇಂದ್ರ ಪದವಿಯು=ಮತ್ಸ್ಯದೇಶದ ಅರಸುತನವೇ ನಮಗೆ ಇಂದ್ರಪದವಿಗೆ ಸಮಾನವಾದುದು;

ಬಿಟ್ಟು ಕಳುಹು=ನಿನ್ನ ಮುಶ್ಟಿಯಿಂದ ಹಿಡಿದುಕೊಂಡಿರುವ ನನ್ನನ್ನು ಬಿಟ್ಟು ವಿರಾಟನಗರಿಯತ್ತ ಹೋಗಲು ನನಗೆ ಅವಕಾಶವನ್ನು ನೀಡು;

ಆಳ್+ಒಳು; ಆಳ್=ಗಂಡಸು/ಯೋದ; ಒಳು=ಅಲ್ಲಿ; ಒಡ್ಡು+ಉಳ್ಳವನು; ಒಡ್ಡು=ಸೇನೆ;

ಆಳೊಳು ಒಡ್ಡುಳ್ಳವನು=ಚತುರಂಗಬಲದ ಸೇನೆಯುಳ್ಳವನು; ಭಾರಿಯ ತೋಳುಗಳ ಹೊತ್ತವನು=ದೊಡ್ಡ ತೋಳ್ಬಲವುಳ್ಳವನು;

ಒದರು=ಅಬ್ಬರಿಸಿ/ಜಂಬವನ್ನು ಕೊಚ್ಚಿಕೊಂಡು; ಬಾಷ್ಕಳ+ಕೆಡೆದು; ಬಾಷ್ಕಳ=ಸುಳ್ಳು/ನಡತೆಯಲ್ಲಿ ಮತ್ತು ಮಾತಿನಲ್ಲಿ ಹಿಡಿತವಿಲ್ಲದಿರುವುದು; ಬಾಶ್ಕಳಗೆಡೆದು=ಬಾಯಿಗೆ ಬಂದಂತೆ ಮಾತನಾಡಿ;

ಮನೆಯಲಿ ಸೂಳೆಯರ ಮುಂದೆ ಒದರಿ ಬಾಷ್ಕಳಗೆಡೆದು ಬಂದು=ಅಲ್ಲಿ ರಾಣಿವಾಸದ ಹೆಂಗಸರ ಮುಂದೆ ಬಾಯಿಗೆ ಬಂದಂತೆ ಇಲ್ಲಸಲ್ಲದ ನಿನ್ನ ಪರಾಕ್ರಮವನ್ನು ಹೊಗಳಿಕೊಂಡು ರಣರಂಗಕ್ಕೆ ಬಂದು;

ಕೋಲನ್+ಇಕ್ಕದೆ; ಕೋಲು=ಬಾಣ; ಇಕ್ಕು=ಪ್ರಯೋಗಿಸು; ಗಾಯ+ಪಡೆಯದೆ;

ಈಗ ಕೋಲನಿಕ್ಕದೆ ಗಾಯವಡೆಯದೆ=ಈಗ ರಣರಂಗದಲ್ಲಿ ಹಗೆಗಳ ಎದುರು ಬಾಣವನ್ನು ಬಿಡದೆ, ಹೋರಾಟದಲ್ಲಿ ಗಾಯವನ್ನು ಹೊಂದದೆ/ಸಾವುನೋವಿಗೆ ಅಂಜದೆ/ ಮುನ್ನುಗ್ಗಿ ಹೋರಾಡದೆ;

ಕಾಲು ವೇಗವ ತೋರಿದಡೆ=ಅತಿವೇಗದಲ್ಲಿ ಬಿದ್ದಂಬೀಳ ಪಲಾಯನಮಾಡುತ್ತಿರುವೆಯಲ್ಲಾ;

ಓಲಗ=ರಾಜಸಬೆ; ಎಂತು=ಯಾವ ರೀತಿ; ಅಕಟ=ಅಯ್ಯೋ; ನಾಚು=ಲಜ್ಜೆ; ಕುಳ್ಳಿತು+ಇಹೆ; ಇಹೆ=ಇರುವೆ;

ಅಕಟ…ನಿನ್ನ ಓಲಗದೊಳು ಎಂತು ನಾಚದೆ ಕುಳ್ಳಿತಿಹೆ=ಕಾಳೆಗದ ಕಣದಿಂದ ಹೇಡಿಯಾಗಿ ಪಲಾಯನ ಮಾಡುತ್ತಿರುವ ನೀನು, ನಾಳೆಯ ದಿನ ರಾಜಸಬೆಯಲ್ಲಿ ಯಾವ ರೀತಿ ನಾಚಿಕೊಳ್ಳದೆ ಕುಳಿತುಕೊಳ್ಳುವೆ.ನಾಡನ್ನು ಮತ್ತು ಪ್ರಜೆಗಳನ್ನು ಕಾಪಾಡುವ ಕೆಚ್ಚು ಮತ್ತು ಪರಾಕ್ರಮವಿಲ್ಲದ ಹೇಡಿಯಾದ ನೀನು ರಾಜಪದವಿಯನ್ನು ಹೇಗೆ ಅಲಂಕರಿಸುವೆ;

ಕೆತ್ತು=ಆವರಿಸು/ಮುಸುಕು; ಕೆತ್ತುಕೊಳ್=ಆವರಿಸಿಕೊಂಡಿರು/ಕವಿದುಕೊಂಡಿರು; ನೆರೆ=ಪೂರ‍್ಣವಾಗಿ; ಕುತ್ತು=ಚುಚ್ಚು/ಇರಿ/ತಿವಿ; ಹೊದ್ದು=ಹೊಂದಿಕೊಳ್ಳು/ಜೋಡಿಯಾಗು;

“ಕೆತ್ತುಕೊಂಡ ಆ ನಾಚಿಕೆಗೆ ನೆರೆಕುತ್ತಿಕೊಳಬೇಕು ” ಎಂಬ ಗಾದೆಯನು ಇತ್ತ ಹೊದ್ದಿಸಬೇಡ=“ ವ್ಯಕ್ತಿಯು ನಾಚಿಕೆಗೆಟ್ಟು ತಾನು ಮಾಡಿದ ಕೆಲಸಕ್ಕೆ ತನ್ನನ್ನು ತಾನೇ ಇರಿದುಕೊಂಡು ಸಾಯಬೇಕು ” ಎಂಬ ಗಾದೆ ಮಾತನ್ನು ನನಗೆ ಅನ್ವಯಿಸಬೇಡ;

ನಾವು ಕಾಳಗಕೆ ಅಂಜುವೆವು=ನಾವು ಕಾಳೆಗವನ್ನು ಮಾಡಲು ಹೆದರುತ್ತೇವೆ;

ತೆತ್ತಿಗ=ಸೇವಕ/ದಾಸ; ಅಹಿತನ್+ಅಂತೆ+ಇರೆ; ಅಹಿತ=ಹಗೆ/ಶತ್ರು ; ಇರೆ=ಇರಲು; ಮಿತ್ತು=ಸಾವು/ಮರಣ; ಅಹರೇ=ಆಗುವರೇ;

ತೆತ್ತಿಗನು ನೀನು. ಅಹಿತನಂತಿರೆ ಮಿತ್ತು ಅಹರೇ=ನಮ್ಮ ಸೇವಕನಾದ ನೀನು ನಮ್ಮನ್ನು ಕಾಪಾಡದೆ ಹಗೆಯಂತೆ ನಮ್ಮನ್ನು ಸಾವಿನತ್ತ ತಳ್ಳುತ್ತಿರುವುದು ಸರಿಯೇ;

ಬೇಡಿದನ್+ಇತ್ತು; ಬೇಡು=ಕೇಳು/ಯಾಚಿಸು/ಬಯಸು; ಇತ್ತು=ನೀಡಿ; ಸಲಹು=ಕಾಪಾಡು/ಸಾಕು;

ನಿನಗೆ ಬೇಡಿದನಿತ್ತು ಸಲಹುವೆನು=ನೀನು ಕೇಳಿದ್ದೆಲ್ಲವನ್ನೂ ಕೊಟ್ಟು ಸಾಕುತ್ತೇನೆ;

ಎನ್ನ ಕೊಲ್ಲದೆ ಬಿಟ್ಟು ಕಳುಹು=ನನ್ನನ್ನು ಸಾವಿಗೆ ಗುರಿಮಾಡದೆ ಕಾಳೆಗದ ಕಣದಿಂದ ಪಾರಾಗಲು ಅವಕಾಶವನ್ನು ನೀಡು;

ವಳಿತ=ಬೂಮಿ; ವಾರುವ=ಕುದುರೆ; ಮುಕ್ತಾವಳಿ=ಮುತ್ತಿನ ಸರ; ಅಲಂಕಾರ=ಒಡವೆ/ಆಬರಣ; ರಥ=ತೇರು; ಲಲನೆ=ಹೆಂಗಸು; ಈಸಿಕೊಡು=ಕೊಡಿಸು/ತೆಗೆದುಕೊಡು;

ರಾಜಭವನದಲಿ ವಳಿತವನು ವಾರುವವ ಮುಕ್ತಾವಳಿಯ ಅಲಂಕಾರವನು ರಥವನು ಲಲನೆಯರ ನಾನು ಈಸಿ ಕೊಡುವೆನು=ಅರಮನೆಯಲ್ಲಿ ರಾಜನಿಂದ ನಿನಗೆ ಬೂಮಿ, ಕುದುರೆ, ತೇರು, ಮುತ್ತಿನ ಹಾರ, ಒಡವೆವಸ್ತ್ರಗಳು ಮತ್ತು ಲಲನೆಯರನ್ನು ಕೊಡಿಸುತ್ತೇನೆ. ಮತ್ಸ್ಯದೇಶದಲ್ಲಿ ಒಂದು ಪ್ರಾಂತ್ಯವನ್ನು ಕೊಟ್ಟು ನಿನ್ನನ್ನು ಮಂಡಲಾದಿಪತಿಯನ್ನಾಗಿ ಮಾಡುತ್ತೇನೆ;

ಬೊಪ್ಪ=ತಂದೆ; ಕೈಯೊಡನೆ ತೋರು=ಇದೊಂದು ನುಡಿಗಟ್ಟು ಇರಬಹುದು. ಉಪಕಾರವನ್ನು ಪಡೆದು ಅಪಕಾರವನ್ನು ಮಾಡುವುದು ಎಂಬ ತಿರುಳಿನಲ್ಲಿ ಬಳಕೆಯಾಗಿದೆ;

ಎಲೆ ಬೃಹನ್ನಳೆ, ನಮ್ಮ ಬೊಪ್ಪನು ಸಲಹಿದಕೆ ಕೈಯೊಡನೆ ತೋರಿದೆ=ಎಲೆ ಬ್ರುಹನ್ನಳೆ…ರಾಜನಾದ ನನ್ನ ತಂದೆಯು ನಿನ್ನನ್ನು ಸಾಕಿ ಕಾಪಾಡಿದ ಉಪಕಾರಕ್ಕೆ ಬದಲಾಗಿ ನೀನು ರಾಜಪುತ್ರನಾದ ನನ್ನನ್ನೇ ಸಾವಿನತ್ತ ದೂಡುತ್ತಿರುವೆ;

ಕಲುಮನ=ಕಲ್ಲಿನಂತಹ ಮನಸ್ಸು. ಪ್ರೀತಿಯಾಗಲಿ ಕರುಣೆಯಾಗಲಿ ಇಲ್ಲದ ಮನಸ್ಸು;

ನಿನ್ನದು ಕಲುಮನವಲಾ ಎಂದಡೆ=ನಿನ್ನದು ಕಲ್ಲುಮನಸ್ಸು ಎಂದು ಉತ್ತರಕುಮಾರನು ಬಡಬಡಿಸಲು;

ಪಾರ್ಥನು ಇಂತೆಂದ=ಬ್ರುಹನ್ನಳೆಯ ವೇಶದಲ್ಲಿರುವ ಅರ‍್ಜುನನು ಈ ರೀತಿ ನುಡಿಯತೊಡಗಿದನು;

ಪೊಡವಿ=ಬೂಮಿ; ಪತಿ=ಒಡೆಯ; ಪೊಡವಿಪತಿ=ರಾಜ; ಬಸುರು=ಹೊಟ್ಟೆ; ಒಡಲು=ದೇಹ; ಕಕ್ಕುಲಿತೆ=ಚಿಂತೆ/ಕಳವಳ; ಕಾಳಗದ+ಎಡೆಗೆ; ಎಡೆ=ಜಾಗ/ನೆಲೆ; ಭೂತ=ಹಿಂದೆ ಆದುದು; ಭವಿಶ್ಯ=ಮುಂದೆ ಬರುವುದು; ಮಾನ=ಎಣಿಕೆ/ಗಣನೆ/ಕಾಲದ ಅಳತೆ;
ಪೊಡವಿಪತಿಗಳ ಬಸುರ ಬಂದು ಈ ಒಡಲ ಕಕ್ಕುಲಿತೆಯನು ಕಾಳಗದೆಡೆಗೆ ಭೂತ ಭವಿಶ್ಯಮಾನದಲಿ ಮಾಡಿದರಿಲ್ಲ=ಬೂಮಂಡಲವನ್ನಾಳುವ ರಾಜಮನೆತನದಲ್ಲಿ ಹುಟ್ಟಿಬಂದು ಈ ರೀತಿ ನಿನ್ನ ಹಾಗೆ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಕಳವಳದಿಂದ ಕಂಗಾಲಾದವರು ಈ ಹಿಂದೆಯೂ ಇರಲಿಲ್ಲ ಮುಂದೆಯೂ ಯಾರೂ ಇರುವುದಿಲ್ಲ;

ಬಂಜೆ+ಮಾತು; ಬಂಜೆ=ಗೊಡ್ಡು/ಪಲವಿಲ್ಲದ್ದು/ಹಾಳು; ಬಂಜೆವಾತು=ಇದೊಂದು ನುಡಿಗಟ್ಟು. ಕೆಲಸಕ್ಕೆ ಬಾರದ ಮಾತು/ಪ್ರಯೋಜನವಿಲ್ಲದ ಮಾತು;

ಬಂಜೆವಾತನು ನುಡಿಯಬಹುದೇ=ಕೆಲಸಕ್ಕೆ ಬಾರದ ಮಾತುಗಳನ್ನು ಆಡಬಹುದೇ;

ಬಾಹಿರ=ಅಯೋಗ್ಯ/ಹೀನ; ರಾಜಬಾಹಿರ=ರಾಜತನಕ್ಕೆ ಅಯೋಗ್ಯನಾದವನು/ಕ್ಶತ್ರಿಯ ಕುಲದಲ್ಲಿ ಹುಟ್ಟಿ ವೀರನಂತೆ ಕೆಚ್ಚೆದೆಯಿಂದ ಬಾಳದೆ ಹೇಡಿಯಾಗಿರುವವನು; ಸುಡು ಸುಡು=ಕೋಪ ಮತ್ತು ತಿರಸ್ಕಾರದಿಂದ ವ್ಯಕ್ತಿಯನ್ನು ನಿಂದಿಸುವಾಗ ಬಳಸುವ ನುಡಿಗಟ್ಟು. ನಿನ್ನ ಮೊಕಕ್ಕೆ ಬೆಂಕಿ ಹಾಕ/ನಿನ್ನ ಬಾಳಿಗೆ ಬೆಂಕಿ ಹಾಕ/ನಿನ್ನಂತಹವನು ಇದ್ದರೂ ಒಂದೆ ಸತ್ತರೂ ಒಂದೆ ಎಂಬ ತಿರುಳಿನಲ್ಲಿ ಬಳಕೆಗೊಳ್ಳುವ ನುಡಿಗಟ್ಟು;

ಎಲವೋ ರಾಜಬಾಹಿರ ಸುಡು ಸುಡು=ಎಲವೋ…ರಾಜಮನೆತನದಲ್ಲಿ ಹುಟ್ಟಿ ಹೇಡಿಯಂತೆ ನಡೆದುಕೊಳ್ಳುತ್ತಿರುವ ನಿನ್ನ ಬದುಕನ್ನು ಬೆಂಕಿ ಹಾಕಿ ಸುಡಲಿ;

ವರೂಥ=ತೇರು; ಹೊರೆ=ಹತ್ತಿರ/ಬಳಿ;

ವರೂಥದ ಹೊರೆಗೆ ನಡೆ=ತೇರಿನ ಹತ್ತಿರಕ್ಕೆ ನಡೆ; ಕಾದಲು ಬೇಡ…ಬಾ. ನೀನು ಎನ್ನಯ ರಥವ ಐದಿಸು=ರಣರಂಗದಲ್ಲಿ ನೀನು ಯುದ್ದವನ್ನು ಮಾಡಬೇಡ. ಬಾ…ನನ್ನೊಡನೆ ಬಂದು ತೇರನ್ನೇರಿ ಸಾರತಿಯಾಗಿ ಮುನ್ನಡೆಸು. ನಾನು ಹಗೆಗಳೊಡನೆ ಕಾದಾಡುತ್ತೇನೆ;

ಭೇದತನ=ಕುಗ್ಗುವಿಕೆ/ಬಿರುಕು; ಮನದಲಿ ಬೇದತನವನು ಬಿಟ್ಟು ಸಾರಥಿಯಾಗು ಸಾಕು=ನಿನ್ನ ಮನದಲ್ಲಿ ಕಾಡುತ್ತಿರುವ ಸಾವಿನ ಅಂಜಿಕೆಯನ್ನು ಬಿಟ್ಟು, ನನಗೆ ಸಾರಥಿಯಾಗು ಸಾಕು;

ಮಾರೊಡ್ಡು=ಶತ್ರುಸೇನೆ; ಮಾರೊಡ್ಡಿನಲಿ ಕಾದುವೆನು=ಶತ್ರುಸೇನೆಯೊಡನೆ ನಾನು ಹೋರಾಡುತ್ತೇನೆ;

ಆದಿ=ಮೊದಲು; ನೀನ್+ಆವ; ಆವ=ಯಾವ; ಆದಿಯಲಿ ನೀನಾವ ರಾಯರ ಕಾದಿ ಗೆಲಿದೈ=ಈ ಮೊದಲು ನೀನು ಯಾವ ರಾಜನ ಮೇಲೆ ಹೋರಾಡಿ ಜಯಗಳಿಸಿರುವೆ;

ಹುಲು=ಅಲ್ಪವಾದುದು/ಕೀಳಾದುದು/ಸಾಮಾನ್ಯವಾದುದು; ಕದನ=ಕಾಳೆಗ/ಯುದ್ದ; ನಾಟಕವಿದ್ಯೆ=ನಟನೆ, ಕುಣಿತ, ಹಾಡುಗಾರಿಕೆ ಮತ್ತು ಮಾತಿನ ಪರಿಣತಿಯ ವಿದ್ಯೆ;

ಹುಲು ಬೃಹನ್ನಳೆಯಾದ ನಿನಗೆ ಈ ಕದನ ನಾಟಕವಿದ್ಯವಲ್ಲ=ಯಾವುದೇ ಶಕ್ತಿಯಾಗಲೀ ಯುಕ್ತಿಯಾಗಲೀ ಇಲ್ಲದ ಅತಿಸಾಮಾನ್ಯಳಾಗಿರುವ ನಿನಗೆ ಈ ಕಾಳೆಗವೆಂಬುದು ನಾಟಕದ ವಿದ್ಯೆಯಂತೆ ಸುಲಬವಾದುದಲ್ಲ;

ಇನ್ನು=ಹಾಗೆ ನೋಡಿದರೆ; ಎನ್ನವಂದಿಗ=ನನ್ನಂತಹ; ಮೊಗಸು=ಹೋರಾಡು; ಮೊಗಸಲು ಬಾರದು=ಹೋರಾಡಲಾಗದು;

ಇನ್ನು ಎನ್ನವಂದಿಗ ರಾಜ ಪುತ್ರರಿಗೆ ಮೊಗಸಲು ಬಾರದಿದೆ=ಹಾಗೆ ನೋಡಿದರೆ ನನ್ನಂತಹ ರಾಜಪುತ್ರರಿಗೆ ಇಂತಹ ಹಗೆಗಳೊಡನೆ ಹೋರಾಡಲಾಗುತ್ತಿಲ್ಲ;

ನೀನು ಎನ್ನ ಸಾರಥಿ ಮಾಡಿಕೊಂಡು ಈ ಬಲವ ಜಯಿಸುವೆಯ=ಕಾಳೆಗದ ಕಣದಲ್ಲಿ ನೀನು ನನ್ನನ್ನು ಸಾರತಿಯನ್ನಾಗಿ ಮಾಡಿಕೊಂಡು ಇಂತಹ ದೊಡ್ಡ ಸೇನೆಯನ್ನು ಸದೆಬಡಿದು ಜಯಿಸುತ್ತೀಯ;

ಅನ್ಯರು=ಇತರರು; ಮನ+ಕಾಂಬರ್+ಅಲ್ಲದೆ; ಕಾಂಬರ್=ಕಾಣ್ಬರ್=ಕಾಣುವರು/ತಿಳಿಯುವರು; ಮನಗಾಂಬರ್=ತಿಳಿದುಕೊಳ್ಳುವರು;

ಅನ್ಯರನು ಮನಗಾಂಬರಲ್ಲದೆ ತನ್ನ ತಾ ಮನಗಾಂಬರೇ=ಬೇರೆಯವರ ಶಕ್ತಿ ಸಾಹಸ ಪರಾಕ್ರಮವನ್ನು ಇಲ್ಲವೇ ಗುಣಾವಗುಣವನ್ನು ಜನರು ತಿಳಿಯಬಲ್ಲರೇ ಹೊರತು ತಮ್ಮ ಶಕ್ತಿಯ ಇತಿಮಿತಿಗಳನ್ನು ಇಲ್ಲವೇ ಗುಣಾವಗುಣವನ್ನು ತಿಳಿಯಲಾರರು. ಅಂತೆಯೇ ನೀನು ನಿನ್ನ ಶಕ್ತಿ ಏನೆಂಬುದನ್ನು ತಿಳಿದಿಲ್ಲ;

ಗನ್ನಗತಕ=ಮೋಸ/ನಟನೆ/ಸೋಗು;

ಈ ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹು=ಮಹಾವೀರನಂತೆ ನೀನು ಸೋಗುಹಾಕುತ್ತಿರುವುದನ್ನು ನಾನು ತಿಳಿದಿದ್ದೇನೆ. ಮೊದಲು ಇಲ್ಲಿಂದ ನನ್ನನ್ನು ಬಿಟ್ಟು ಕಳುಹಿಸು;

ಎಲವೊ…ಸಾರಥಿಯಾಗು ನಡೆ=ಎಲವೊ…ಈಗ ನೀನು ಸಾರತಿಯಾಗಿ ತೇರಿನತ್ತ ನಡೆ;

ಗಳಹು=ಹರಟು/ಬಾಯಿಗೆ ಬಂದಂತೆ ಮಾತನಾಡು; ಕಟವಾಯಿ=ಬಾಯಿಯ ಅಂಚು;

ನೀ ಗಳಹಿದೊಡೆ ಕಟವಾಯ ಕೊಯ್ವೆನು=ನೀನು ಹರಟುತ್ತ ನಿಂತರೆ, ನಿನ್ನ ಕಟವಾಯನ್ನು ಸೀಳುತ್ತೇನೆ;

ಪ್ರತಿಭಟ=ಶತ್ರುಸೇನೆಯ ಕಾದಾಳು; ನಿಕಾಯ=ಪಡೆ/ಗುಂಪು; ಸಾಕ್ಷಿ=ಮುಂದುಗಡೆ;

ಈ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ ಕೊಲುವೆನು=ಕಾಳೆಗದ ಕಣದಲ್ಲಿರುವ ದುರ‍್ಯೋದನನ ಸೇನಾಪಡೆಯನ್ನು ನಿನ್ನ ಕಣ್ಣಮುಂದೆಯೇ ಕೊಲ್ಲುತ್ತೇನೆ;

ರಿಪು=ಶತ್ರು; ಬಳಿಕ ನೀ ನಗು, ನಡೆ ಎನುತ=ಕಾಳೆಗದಲ್ಲಿ ನನ್ನ ಸಾಹಸವನ್ನು ನೋಡಿ ನೀನು ಆನಂದವನ್ನು ಪಡೆಯುವಂತೆ…ಈಗ ಮೊದಲು ಇಲ್ಲಿಂದ ತೇರಿನತ್ತ ನಡೆ ಎನ್ನುತ್ತ;

ರಿಪುಬಲಬಯಂಕರ=ಶತ್ರುಗಳ ಬಲವನ್ನು ಅಡಗಿಸುವಂತಹ ಶಕ್ತಿಯುಳ್ಳ ಮಹಾವೀರ ಎಂಬ ತಿರುಳಿನ ನುಡಿಗಟ್ಟು; ಹೆಡತಲೆ=ತಲೆಯ ಹಿಂಬಾಗ; ಹಗರು=ಕವೆಗೋಲಿನಂತೆ ಕಯ್ಯನ್ನು ಅಗಲಿಸಿ, ಹೆಕ್ಕತ್ತನ್ನು ಬಿಗಿಯಾಗಿ ಹಿಡಿದುಕೊಳ್ಳುವುದು; ಔಂಕು=ಅದುಮು/ಒತ್ತಿಹಿಡಿದು;

ರಿಪುಬಲಬಯಂಕರನು ಉತ್ತರನ ಹೆಡತಲೆಯ ಹಗರಿನೊಳು ಔಂಕಿ ತಂದನು=ಮಹಾವೀರನಾದ ಅರ‍್ಜುನನು ಉತ್ತರನ ಹೆಡತಲೆಯನ್ನು ತನ್ನ ಕಯ್ಯಿಂದ ಅದುಮಿ ಹಿಡಿದುಕೊಂಡು ತೇರಿನ ಬಳಿಗೆ ದೂಡಿಕೊಂಡು ಬಂದನು;

ರಥವನು ಏರಿಸಿದ=ತೇರಿನಲ್ಲಿ ಸಾರತಿಯ ಜಾಗದಲ್ಲಿ ಕುಳ್ಳಿರಿಸಿದನು;

ಖೇಡತನ=ಹೆದರಿಕೆ/ಅಂಜಿಕೆ; ಅಹಿತರು=ಶತ್ರುಗಳು/ಹಗೆಗಳು; ಎಲವೊ, ಖೇಡತನ ಬೇಡ. ರಣದೊಳಗೆ ಅಹಿತರನು ಓಡಿಸುವೆನು=ಎಲವೊ…ಹೆದರಬೇಡ. ಕಾಳೆಗದ ಕಣದಲ್ಲಿ ಶತ್ರುಗಳನ್ನು ಓಡಿಸುತ್ತೇನೆ;

ಅಂತಕ=ಯಮ/ಸಾವಿನ ದೇವತೆ; ತಟ್ಟು=ಸೇನೆ/ಪಡೆ; ನಡೆ=ಚೆನ್ನಾಗಿ/ಅತಿಶಯವಾಗಿ; ಹೊಯ್=ಹೊಡೆತ/ಬಡಿತ; ನಡೆಹೊಯ್ದು=ಸಂಪೂರ‍್ಣವಾಗಿ ಸದೆಬಡಿದು; ಹರಣ=ಜೀವ/ಪ್ರಾಣ; ಹೂಡಿಸು=ಸಾಗಿಸು/ರವಾನಿಸು;

ತಟ್ಟ ನಡೆಹೊಯ್ದು ಅಂತಕನ ನಗರಿಗೆ ಹರಣವ ಹೂಡಿಸುವೆನು=ಶತ್ರುಸೇನಾಬಲವನ್ನು ಸದೆಬಡಿದು ಯಮನ ಪಟ್ಟಣಕ್ಕೆ ಕಾದಾಳುಗಳ ಜೀವವನ್ನು ರವಾನಿಸುತ್ತೇನೆ;

ಕೋಡು=ಬೆದರು/ಕುಗ್ಗು; ಕೊಂಕು=ಹಿಂದೆಗೆ/ಹಿಂಜರಿ;;

ಕೋಡದಿರು…ಕೊಂಕದಿರು. ಧೈರ್ಯವ ಮಾಡಿ ಸಾರಥಿಯಾಗು ಎನುತ=ಬೆದರಿ ಬೆಚ್ಚಬೇಡ…ಹಿಂದೆಗೆದು ಕುಗ್ಗಬೇಡ…ಕೆಚ್ಚೆದೆಯಿಂದ ಸಾರತಿಯಾಗಿ ತೇರನ್ನು ಮುನ್ನಡೆಸು ಎನ್ನುತ್ತ;

ಕಲಿ ಮಾಡು=ಶೂರನನ್ನಾಗಿ ಮಾಡು; ಶಮಿ=ಬನ್ನಿಯ ಮರ; ಹೊರೆ=ಹತ್ತಿರ;

ಕಲಿ ಮಾಡಿ ಸಮೀಪದ ಶಮಿಯ ಹೊರೆಗಾಗಿ ಕೊಂಡೊಯ್ದನು=ಅರ‍್ಜುನನು ಹೇಡಿಯಾಗಿದ್ದ ಉತ್ತರಕುಮಾರನನ್ನು ಕಲಿಯನ್ನಾಗಿ ಮಾಡಿ ಹತ್ತಿರದಲ್ಲೇ ಇದ್ದ ಬನ್ನಿಯ ಮರದ ಬಳಿಗೆ ಕರೆದುಕೊಂಡು ಬಂದನು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks