ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 5

ಸಿ. ಪಿ. ನಾಗರಾಜ.

*** ಉತ್ತರಕುಮಾರನ ಪ್ರಸಂಗ: ನೋಟ – 5 ***

ಬೃಹನ್ನಳೆ: ಮರನನು ಏರು. ಇದರೊಳಗೆ ಪಾಂಡವರು ಮಿಗೆ ಹರಣ ಭರಣ ಕ್ಷಮೆಗಳಲಿ ಕೈದುಗಳ ಇರಿಸಿ ಹೋದರು. ನೀನು ಎನಗೆ ನೀಡು.

ಉತ್ತರ ಕುಮಾರ: ವರ ಬೃಹನ್ನಳೆ ಇದೇನೈ, ಮರದ ಮೇಲಣ ಹೆಣನ ಅರಸು ಮಕ್ಕಳು ಮುಟ್ಟಲು ಅನುಚಿತ. ತನಗೆ ಮತ್ತೆ ಕೆಲಸವ ಹೇಳು.

ಬೃಹನ್ನಳೆ: ಹೆಣನಲ್ಲ, ತೆಗೆ. ಪಾಂಡು ನಂದನರು ಕೆಲ ಬಲನು ಅರಿಯದ ಅಂದದಿ ಹೊರಗೆ ತೊಗಲಲಿ ಬಿಗಿದು ಉರುವ ಕೈದುವ ಕಟ್ಟಿದರು.

(ಎನಲು ಭೀತಿಯ ತೊರೆದು, ಸೆರಗನು ಅಳವಡಿಸಿ ಇಕ್ಕಿ, ತುದಿಗೇರಿದನು. ನೇಣ್ಗಳ ಹರಿದು, ಕೈದುವ ಬಿಟ್ಟು, ಕಂಡು ಅಂಜಿದನು. ಭಯ ಹೊಡೆದು…)

ಉತ್ತರ ಕುಮಾರ: ಕಾಲ ಭುಜಗನ ನಾಲಗೆಯೊ…ಶರ ಜಾಲವೋ..ಕಲ್ಪಾಂತ ವಹ್ನಿಜ್ವಾಲೆಯೋ…ಕೈದುಗಳೊ…ಕಾಲಾಂತಕನ ದಾಡೆಗಳೊ. ಎಂತು ತೋಳು ಧರಿಸುವವು. ನೋಡಿದಡೆ ಆಲಿ ಉರೆ ಬೆಂದವು. ಬೃಹನ್ನಳೆ, ಕಾಳು ಮಾಡಿದೆ. ಕೊಂದೆ.

(ಎನುತ ಓರಂತೆ ಹಲುಬಿದನು. ಹೊಗರ ಹೊರಳಿಯ ಹೊಳೆಯ ಬಾಯ್ದಾರೆಗಳ ತಳಪದ ಕಾಂತಿ ಹೊನ್ನಾಯುಗದ ಬಹಳ ಪ್ರಭೆ ಶರ ಓಘ ಅನಲನ ಗಹಗಹಿಸಿ ಝಗಝಗಿಸಿ ಕಣ್ಮುಚ್ಚಿ ಕೈಗಳ ಮುಗಿದು ಸಾರಥಿಗೆ…)

ಉತ್ತರಕುಮಾರ: ತಂದೆ ಎನ್ನನು ತೆಗೆದುಕೊಳ್ಳೈ. ಅಸ್ತ್ರ ಸೀಮೆಯಲಿ ಸಿಲುಕಿದೆನು. ಹಾವಿನ ಕೊಡನ ದೋಷಿ ತುಡುಕಬಹುದೇ. ಇವು ನಿನಗೆ ಕೈದುಗಳೆ. ಬರಸಿಡಿಲ ದಾವಣಿಯಾಗುತಿವೆ. ಕೈಯಿಕ್ಕಲು ಅಂಜುವೆನು. ಸಾರಥಿ ಎನ್ನನು ಬಿಡಿಸು.

ಬೃಹನ್ನಳೆ: ಫಡ, ನಡುಗದಿರು. ಫಲುಗುಣನ ನೆನೆ. ತೆಗೆ ಸಾಕು. ಕೈವಶ ಅಹವು, ಕೈದುಡುಕು.

(ಎಂದನು ಆ ಪಾರ್ಥ. ಉಲಿದು ಸತ್ವದೊಳು ಔಕಿ, ಕಾಯವ ಬಲಿದು, ತೆಕ್ಕೆಯೊಳು ಒತ್ತಿ, ಬೆವರಿದು ಬಳಲಿ ಅರ್ಜುನನ ಕರತಳಕೆ ಗಾಂಡಿವವ ನೀಡಿದನು. ಬಲುಹಿನಿಂದ ಅವಡೊತ್ತಿ ತೆಗೆ ತೆಗೆದು ಉಳಿದ ಬಿಲುಗಳ ನೀಡಿ, ಮರನನು ಮಲಗಿ ಢಗೆಯಿಂದ ಅಳ್ಳೆವೊಯ್ದು…ಕುಮಾರನು ಇಂತು ಎಂದ…)

ಉತ್ತರ ಕುಮಾರ: ಗಿರಿಯನು ಎತ್ತಲುಬಹುದು. ಬಿಲುಗಳ ತೆರಳಿಚುವಡೆ ಆರೆನು. ಬೃಹನ್ನಳೆ, ನೀ ಸಮರ್ಥನು ಧರಿಸಲಾಪೈ. ನಿನಗೆ ಶರಣು…

(ಎನುತ ಸರಳ ಹೊದೆಗಳ, ದೇವದತ್ತವ, ಪರಶು ತೋಮರ ಕುಂತವಸಿ ಮುದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು.)

ಹೇಳು ಸಾರಥಿ, ಬಿಲ್ಲು ಇದು ಆವನ ತೋಳಿಗೆ ಅಳವಡುವುದು. ಮಹಾಶರ ಜಾಲ ಬೆಸಗೈದಪವು. ಇದು ಆರಿಗೆ ಮಿಕ್ಕ ಬಿಲ್ಲುಗಳು. ಕಾಳಗದೊಳು ಇವನು ಆರು ತೆಗೆವರು. ಮೇಲು ಕೈದುಗಳು ಆರಿಗೆ ಇವು ಕೈಮೇಳವಿಸುವವು. ಮನದ ಸಂಶಯ ಹಿಂಗೆ ಹೇಳು.

ಬೃಹನ್ನಳೆ: ಇದು ಕಣಾ, ಗಾಂಡೀವವು ಎಂದು ಎಂಬುದು. ಮಹಾಧನು ಪಾರ್ಥನದು. ಬಳಿಕ ಇದು ಯುಧಿಷ್ಠಿರ ಚಾಪವು. ಈ ಧನು ಭೀಮಸೇನನದು. ಇದು ನಕುಲ ಕೋದಂಡ. ಬಿಲು ತಾನು ಇದುವೆ ಸಹದೇವನದು. ಭಾರಿಯ ಗದೆಯಿದು ಅನಿಲಜನದು. ಕಿರೀಟಿಯ ಬಾಣವು ಇವು.

(ಎಂದ. ಅವರವರ ಬತ್ತಳಿಕೆ ಚಾಪವನು, ಅವರ ಶರವನು ಕಂಬು ಖಡುಗವ ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ ವಿವಿಧ ಶಸ್ತ್ರಾಸ್ತ್ರವನು ಫಲುಗುಣ ವಿವರಿಸಲು ಬೆರಗಾಗಿ, ಸಾರಥಿಯಿವನು ತಾನಾರು ಎಂದು ಮತ್ಸ್ಯನ ಸೂನು ಬೆಸಗೊಂಡ…)

ಉತ್ತರ ಕುಮಾರ: ಆರು ನೀನು. ಅರ್ಜುನನೊ…ನಕುಲನೊ…ಮಾರುತನ ಸುತನೋ…ಯುಧಿಷ್ಠಿರ ವೀರನೋ…ಸಹದೇವನೋ…ಮೇಣ್ ಅವರ ಬಾಂಧವನೊ. ಧೀರ ಹೇಳೈ ಬೇಡಿಕೊಂಬೆನು. ಕಾರಣವ ವಿಸ್ತರಿಸು. ಪಾಂಡು ಕುಮಾರರ ಆಯುಧ ತತಿಯ ನೀನು ಎಂತು ಅರಿವೆ.

ಬೃಹನ್ನಳೆ: ಆನು ಅರ್ಜುನನು. ಎಮಗೆ ರಾಣಿವಾಸವು. ಬಾಣಸಿಯಾದ ವಲಲನು ಭೀಮ. ವರ ಯತಿಯಾದ ಕಂಕನು ಧರ್ಮಪುತ್ರನು. ನಿಮ್ಮ ಗೋಕುಲವ ಕಾದವನು ಸಹದೇವ. ರಾವುತನಾದವನು ನಕುಲನು. ವಿಳಾಸಿನಿಯಾದವಳು ಸೈರಂಧ್ರಿ.

ಉತ್ತರ ಕುಮಾರ: ಉಳಿದವರಿಗೆ ಈ ಮಹಿಮೆ ತಾನು ಎಲ್ಲಿಯದು ಕಾಣಲು ಬಹುದಲಾ. ಅಹುದು ಬಳಿಕೇನು. ಮಹಾದೇವ ಗಹನ ಮಾಡದೆ ಅತಿಶಯವನು ಜೀವಿಸಿದರು. ನುಡಿದ ತಪ್ಪಿನ ಬಹುಳತೆಯ ಭಾವಿಸದೆ ತನ್ನನು ಕುಹಕಿ ಎನ್ನದೆ ಕಾಯಬೇಕು.

(ಎಂದು ಪದಕೆ ಎರಗಿದನು. ಅರ್ಜುನನು ಮೌಳಿಯನು ನೆಗಹಿದನು.)

ಅರ್ಜುನ: ನಿನ್ನಯ ಮೇಲೆ ತಪ್ಪಿಲ್ಲ.

(ಎನುತ ಫಲುಗುಣ ಬೋಳವಿಸೆ, ಉತ್ತರನು ನಿಂದಿರ್ದು ಕೈಮುಗಿದು ನಗುತ…)

ಉತ್ತರ ಕುಮಾರ: ಬಾಲಕನ ಬಿನ್ನಪವನು ಒಂದನು ಕೇಳಬೇಹುದು. ನಿಮ್ಮ ದಶ ನಾಮಾವಳಿಯನು ಪೇಳ್ದು ಅಲ್ಪಮತಿಯನು ತಿಳುಹಬೇಕು,

( ಎನಲು ನಸು ನಗುತ ಅರ್ಜುನನು…}

ಅರ್ಜುನ: ಫಲುಗುಣ…ಧನಂಜಯ…ಜಿಷ್ಣು…ಸಿತವಾಹನ…ವಿಜಯ…ಬೀಭತ್ಸು…ಪಾರ್ಥ…ಕಿರೀಟಿ ಮೊದಲಾದ ವಿನುತ ಕೃಷ್ಣನು..ಸವ್ಯಸಾಚಿಗಳು…

(ಎನಿಪ ಪೆಸರನು ತಿಳುಹಿ, ಪುನರಪಿ ತನಗೆ ಬಂದ ಅಂದವನು ವಿಸ್ತರವಾಗಿ ವಿರಚಿಸಿದ.)

ಉತ್ತರ ಕುಮಾರ: ಪಾರ್ಥ, ಲೇಸಾಗಿ ನಂಬಿದೆನು. ನಿಶ್ಚಯವು ಇಂಬುಗೊಂಡುದು. ನಿನಗೆ ಹುಲು ಬೃಹನ್ನಳೆತನದ ಬಹು ರೂಪು. ಈ ಡೊಂಬು ಇದೇಕೈ… ನೀನು ಅಂಬುಜಾಕ್ಷನ ಸಾಹಸ ಪ್ರತಿಬಿಂಬವಲ್ಲಾ. ನಿನ್ನ ವಿಡಂಬಿಸಿದ ರೂಹಿಂಗೆ ಕಾರಣವೇನು ಹೇಳು.

ಅರ್ಜುನ: ಇದು ಕಣಾ, ಧರ್ಮಜನ ಸತ್ಯಾಭ್ಯುದಯಕೋಸುಗ ಊರ್ವಶಿಯ ಶಾಪದಲಿ ಬಂದುದು. ಒಂದು ವತ್ಸರವ ನಿರ್ವಿಘ್ನದಲಿ ಹೊತ್ತು ನೂಕಿದೆನು. ಅವಧಿಯನು ನೂಕಿದೆವು. ಇದಕೆ ನಿಜ್ಜೋಡು ಆಯ್ತು. ತನ್ನ ಅದಟುತನವನು ನೀನು ಭೀತಿಗೊಳ್ಳದೆ ನೋಡು.

(ಕೌರವ ಬಲದ ಗಂಟಲ ಬಳೆಯ ಮುರಿವವೊಲು ಬಳೆಯ ನೆಗ್ಗೊತ್ತಿದನು. ಅಲಘು ಸಾಹಸಿ ಮಲ್ಲಗಂಟಿನಲಿ ಪಳಿಯನು ಉಟ್ಟನು. ತಲೆ ನವಿರ ಹಿಣಿಲಿರಿದು , ತಿಲಕವ ಗೆಲಿದು, ಕಿಗ್ಗಟ್ಟಿನ ಕಠಾರಿಯ ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ. ತೇರ ತೆಗೆದನು. ತನ್ನ ಮುನ್ನಿನ ವಾರುವಂಗಳ ಹೂಡಿದನು. ಕಪಿವೀರ ನೆನೆಯಲು ಬಂದು ಧ್ವಜಾಗ್ರದಲಿ ಮಂಡಿಸಿದನು. ಚಾರು ಸೀಸಕ ಜೋಡು ಕುಲಿಶದ ಸಾರ ಕವಚವ ಬಿಗಿದು, ಬೊಬ್ಬೆಯ ಭಾರವಣೆ ಮಿಗೆ ತಿರುವನೇರಿಸಿದ ಧನುವ ಕೊಂಡನು. ರಾಯ ಧರ್ಮಜ ಬಾಳುಗೆ ಎನುತ, ನಿಜಾಯುಧದ ಗುರುವಿಂಗೆ ಎರಗಿ, ಸುರರಾಯ ನಂದನನು ಒಲವಿನಲಿ ಗಾಂಡಿವವ ಜೇವಡಿಸಿ…)

ಅರ್ಜುನ: ರಾಯ ಕುವರನ ಸೂತತನದ ವಿಡಾಯಿಯ ಅರಿಯಲು ಬಹುದು

(ಎನುತ ಸಮರಾಯತಾಸ್ತ್ರನು ಪಾರ್ಥ ಪರಬಲಕೆ ಮೈದೋರಿದನು.)

ಪದ ವಿಂಗಡಣೆ ಮತ್ತು ತಿರುಳು

ಮರನನು ಏರು=ಈ ಬನ್ನಿಮರದ ಮೇಲೆ ಹತ್ತು; ಮಿಗೆ=ಅತಿಶಯತೆ/ಹೆಚ್ಚಾಗಿ; ಹರಣ=ಜೀವವನ್ನು ತೆಗೆಯುವುದು; ಭರಣ=ಜೀವವನ್ನು ಕಾಪಾಡುವುದು; ಕ್ಷಮೆ=ಇತರರ ತಪ್ಪನ್ನು ಮನ್ನಿಸಿವುದು; ಕೈದು=ಆಯುದ/ಹತಾರ;

ಇದರೊಳಗೆ ಪಾಂಡವರು ಮಿಗೆ ಹರಣ ಭರಣ ಕ್ಷಮೆಗಳಲಿ ಕೈದುಗಳ ಇರಿಸಿ ಹೋದರು=ಪಾಂಡವರು ಈ ಮರದೊಳಗೆ ಜೀವವನ್ನು ತೆಗೆಯುವ, ಜೀವವನ್ನು ಉಳಿಸುವ ಮತ್ತು ತಪ್ಪನ್ನು ಮಾಡಿದವರ ಸೊಕ್ಕನ್ನು ಅಡಗಿಸಿ ಅವರಿಗೆ ಜೀವದಾನ ಮಾಡುವ ಕಸುವುಳ್ಳ ಅತಿಶಯವಾದ ಆಯುದಗಳನ್ನು ಇಟ್ಟುಹೋಗಿದ್ದಾರೆ;

ನೀನು ಎನಗೆ ನೀಡು=ಆ ಆಯುದಗಳನ್ನು ನೀನು ನನಗೆ ಮರದಿಂದ ಇಳಿಸಿ ನನಗೆ ಕೊಡು; ವರ=ಉತ್ತಮ; ಇದೇನೈ=ಇದೇನಿದು; ಅನುಚಿತ=ಯೋಗ್ಯವಲ್ಲ; ಮತ್ತೆ=ಬೇರೆ/ಇನ್ನೊಂದು;

ವರ ಬೃಹನ್ನಳೆ ಇದೇನೈ, ಮರದ ಮೇಲಣ ಹೆಣನ ಅರಸು ಮಕ್ಕಳು ಮುಟ್ಟಲು ಅನುಚಿತ. ತನಗೆ ಮತ್ತೆ ಕೆಲಸವ ಹೇಳು=ಎಲೆ ಬ್ರಹನ್ನಳೆ ಇದೇನು ಹೇಳುತ್ತಿರುವೆ. ಮರದ ಮೇಲೆ ಇರುವ ಮಾನವನ ಹೆಣವನ್ನು ರಾಜರ ಮಕ್ಕಳು ಮುಟ್ಟುವುದು ಯೋಗ್ಯವಲ್ಲ. ನನಗೆ ಈ ಕೆಲಸವನ್ನು ಹೇಳಬೇಡ. ಮತ್ತೇನಾದರೂ ಇದ್ದರೆ ಹೇಳು. ಬ್ರಹನ್ನಳೆಯ ಮಾತಿನಂತೆ ಆಯುದಗಳನ್ನು ಮರದಿಂದ ಇಳಿಸುವ ಮುನ್ನ ಮರದ ಕೊಂಬೆಗಳತ್ತ ತಲೆಯೆತ್ತಿ ನೋಡಿದ ಉತ್ತರಕುಮಾರನಿಗೆ ಪಾಂಡವರ ಆಯುದಗಳನ್ನು ಕಟ್ಟಿಟ್ಟಿದ್ದ ಕಂತೆಯು ಮಾನವನ ಹೆಣದಂತೆ ಕಂಡುಬಂದಿತು;

ನಂದನ=ಮಗ; ಕೆಲಬಲನು=ಅಕ್ಕಪಕ್ಕದವರು/ಇತರರು; ಅರಿ=ತಿಳಿ; ಅಂದ=ರೀತಿ; ತೊಗಲು=ಚರ್‍ಮ; ಉರು=ಉತ್ತಮವಾದ;

ಹೆಣನಲ್ಲ, ತೆಗೆ. ಪಾಂಡು ನಂದನರು ಕೆಲಬಲನು ಅರಿಯದ ಅಂದದಿ ಹೊರಗೆ ತೊಗಲಲಿ ಬಿಗಿದು ಉರುವ ಕೈದುವ ಕಟ್ಟಿದರು ಎನಲು=ಅದು ಹೆಣವಲ್ಲ. ತೆಗೆದುಕೊಡು. ಪಾಂಡುಪುತ್ರರು ಬೇರೆಯವರಿಗೆ ಗೊತ್ತಾಗಬಾರದೆಂಬ ಉದ್ದೇಶದಿಂದ ಈ ರೀತಿ ಅಯುದಗಳ ಕಟ್ಟನ್ನು ಹೆಣದ ಆಕಾರದಲ್ಲಿ ಪ್ರಾಣಿಯ ತೊಗಲಿನಿಂದ ಬಿಗಿದು ಕಟ್ಟಿ, ಮರದ ಮೇಲೆ ಇರಿಸಿದ್ದಾರೆ ಎಂದು ಬ್ರಹನ್ನಳೆಯು ಉತ್ತರಕುಮಾರನಿಗೆ ಹೇಳಲು;

ಭೀತಿಯ ತೊರೆದು=ಹೆದರಿಕೆಯನ್ನು ಬಿಟ್ಟು; ಅಳವಡಿಸು=ಹೊಂದಿಸು;

ಸೆರಗನು ಅಳವಡಿಸಿ ಇಕ್ಕಿ ತುದಿಗೇರಿದನು=ಮಯ್ ಮೇಲಿನ ಉದ್ದನೆಯ ಶಲ್ಯವನ್ನು ಸೊಂಟಕ್ಕೆ ಬಿಗಿದು ಕಟ್ಟಿಕೊಂಡು ಮರದ ಮೇಲಕ್ಕೆ ಹತ್ತಿದನು; ನೇಣ್=ಹಗ್ಗ/ಹುರಿ;

ನೇಣ್ಗಳ ಹರಿದು=ಆಯುದಗಳ ಹೊರೆಯ ಸುತ್ತಲೂ ಬಿಗಿದಿದ್ದ ಹಗ್ಗವನ್ನು ಕಿತ್ತುಹಾಕಿ;

ಕೈದು=ಆಯುದ/ಹತಾರ;

ಕೈದುವ ಬಿಟ್ಟು ಕಂಡು ಅಂಜಿದನು=ಆಯುದಗಳನ್ನು ಇಳಿಸುವಾಗ, ಅವನ್ನು ಕಂಡು ಹೆದರಿದನು;

ಭಯ ಹೊಡೆದು=ಹೆದರಿಕೆಯಿಂದ ತತ್ತರಿಸುತ್ತಾ; ಕಾಲ=ಬಯಂಕರವಾದ/ಉಗ್ರವಾದ; ಭುಜಗ=ಹಾವು;

ಕಾಲ ಭುಜಗನ ನಾಲಿಗೆಯೊ=ಬಯಂಕರವಾದ ನಂಜನ್ನು ಕಾರುವ ಹಾವಿನ ನಾಲಿಗೆಯೊ; ಶರ=ಬಾಣ; ಜಾಲ=ಬಲೆ;

ಶರ ಜಾಲವೋ=ಬಾಣಗಳ ಬಲೆಯೋ;

ಕಲ್ಪಾಂತ=ಪ್ರಳಯ ಕಾಲ; ವಹ್ನಿ=ಬೆಂಕಿ; ಜ್ವಾಲೆ=ದಗದಗನೆ ಉರಿಯುತ್ತಿರುವ ಬೆಂಕಿ ನಾಲಗೆ;

ಕಲ್ಪಾಂತ ವಹ್ನಿಜ್ವಾಲೆಯೋ= ಪ್ರಳಯ ಕಾಲದಲ್ಲಿ ಇಡೀ ಜಗತ್ತನ್ನು ಸುಟ್ಟು ಕರಿಕಲುಮಾಡುವ ಬೆಂಕಿಯ ಜ್ವಾಲೆಯೋ;

ಕಾಲಾಂತಕ=ಯಮ; ದಾಡೆ=ಕೋರೆಹಲ್ಲು;

ಕೈದುಗಳೊ…ಕಾಲಾಂತಕನ ದಾಡೆಗಳೊ=ಇವೇನು ಹತಾರಗಳೊ ಇಲ್ಲವೇ ಸಾವಿನ ದೇವತೆಯಾದ ಯಮನ ಕೋರೆಹಲ್ಲುಗಳೊ; ಧರಿಸು=ಹಿಡಿ/ಹೊರು/ತಾಳು;

ಎಂತು ತೋಳು ಧರಿಸುವವು=ಈ ಬಯಂಕರವಾದ ಈ ಆಯುದಗಳನ್ನು ಹೇಗೆ ಹಿಡಿಯುವುದು/ಇವನ್ನು ಹಿಡಿದು ಹೋರಾಡಲು ತೋಳ್ಬಲ ಎಶ್ಟಿದ್ದರೂ ಸಾಕಾಗುವುದಿಲ್ಲ; ಆಲಿ=ಕಣ್ಣು ಗುಡ್ಡೆ; ಉರೆ=ಬಹಳವಾಗಿ/ಹೆಚ್ಚಾಗಿ;

ನೋಡಿದಡೆ ಆಲಿ ಉರೆ ಬೆಂದವು=ಇವನ್ನು ನೋಡುತ್ತಿದ್ದರೆ ಕಣ್ಣು ಗುಡ್ಡೆಗಳು ಸಂಪೂರ‍್ಣವಾಗಿ ಬೆಂದುಹೋಗುತ್ತಿವೆ; ಕಾಳುಮಾಡು=ಇದೊಂದು ನುಡಿಗಟ್ಟು. ಕೇಡು ಮಾಡು ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ಓರಂತೆ=ಒಂದೇ ಸಮನೆ;ಹಲುಬು=ರೋದಿಸು/ಗೋಳಾಡು;

 ಬೃಹನ್ನಳೆ, ಕಾಳು ಮಾಡಿದೆ. ಕೊಂದೆ ಎನುತ ಓರಂತೆ ಹಲುಬಿದನು=ಬ್ರಹನ್ನಳೆ…ನೀನು ನನಗೆ ಕೇಡನ್ನು ಬಗೆದು ನನ್ನನ್ನು ಕೊಲ್ಲುತ್ತಿರುವೆ ಎಂದು ಹೇಳುತ್ತ ಒಂದೇ ಸಮನೆ ಗೋಳಾಡತೊಡಗಿದನು;

ಹೊಗರು=ಹೊಳೆಹೊಳೆಯುವ/ಕಾಂತಿಯನ್ನು ಸೂಸುವ; ಹೊರಳಿ=ಗುಂಪು; ಬಾಯ್ದಾರೆ=ಕತ್ತಿಯ ಹರಿತವಾದ ಅಂಚು/ಅಲಗು;

ಹೊಗರ ಹೊರಳಿಯ ಹೊಳೆವ ಬಾಯ್ದಾರೆಗಳ=ಹೊಳೆಹೊಳೆಯುತ್ತಿರುವ ಅಂಚಿನಿಂದ ಕೂಡಿದ ಕತ್ತಿಗಳ ; ತಳಪ=ಹೊಳಪು/ಕಾಂತಿ/ಪ್ರಕಾಶ; ಹೊನ್ನಾಯುಗ=ಕತ್ತಿಯ ಚಿನ್ನದ ಹಿಡಿಕೆ; ತಳಪದ ಕಾಂತಿ ಹೊನ್ನಾಯುಗದ=ಹೊಳೆಯುತ್ತಿರುವ ಚಿನ್ನದ ಹಿಡಿಕೆಯುಳ್ಳ ಕತ್ತಿಗಳ; ಬಹಳ=ಅತಿ ಹೆಚ್ಚಿನ; ಪ್ರಭೆ=ಕಿರಣ/ರಶ್ಮಿ; ಶರ=ಬಾಣ; ಓಘ=ಸಮೂಹ/ಗುಂಪು; ಅನಲ=ಬೆಂಕಿ; ಗಹಗಹಿಸಿ=ಹೊಳೆಹೊಳೆಯುವುದು; ಝಗಝಗಿಸಿ=ಪ್ರಕಾಶಮಾನವಾಗಿ ಬೆಳಗುತ್ತಿರುವುದು;

ಬಹಳ ಪ್ರಭೆ ಶರ ಓಘ=ಅಪಾರವಾದ ಕಿರಣಗಳ ಕಾಂತಿಯ ಸಮೂಹದಿಂದ ಬೆಳಗುತ್ತಿರುವ ಬಾಣಗಳ;

ಅನಲನ ಗಹಗಹಿಸಿ ಝಗಝಗಿಸಿ ಕಣ್ಮುಚ್ಚಿ ಕೈಗಳ ಮುಗಿದು ಸಾರಥಿಗೆ=ಆಯುದಗಳ ಕಾಂತಿಯು ಉತ್ತರಕುಮಾರನ ಕಣ್ಣಿಗೆ ಬೆಂಕಿಯಂತೆ ಪ್ರಜ್ವಲಿಸುತ್ತಿರಲು ನೋಡಲಾಗದೆ ಕಣ್ಣುಗಳನ್ನು ಮುಚ್ಚಿ, ಕಯ್ಗಳನ್ನು ಮುಗಿಯುತ್ತ ಬ್ರಹನ್ನಳೆಯಲ್ಲಿ ಈ ರೀತಿ ಬೇಡಿಕೊಳ್ಳುತ್ತಾನೆ;

ತಂದೆ ಎನ್ನನು ತೆಗೆದುಕೊಳ್ಳೆಂದು=ತಂದೆಯೇ ನನ್ನನ್ನು ಹಿಡಿದುಕೊ/ನನ್ನನ್ನು ಕಾಪಾಡು;

ಅಸ್ತ್ರ=ಆಯುದ/ಹತಾರ; ಸೀಮೆ=ವಲಯ/ಜಾಗ; ಸಿಲುಕು=ಈಡಾಗು/ಗುರಿಯಾಗು;

ಅಸ್ತ್ರ ಸೀಮೆಯಲಿ ಸಿಲುಕಿದೆನು=ಆಯುದಗಳ ಎಡೆಯಲ್ಲಿ ಸಿಕ್ಕಿಬಿದ್ದಿದ್ದೇನೆ; ಕೊಡ=ಮಣ್ಣಿನ ಮಡಕೆ/ಗಡಿಗೆ; ದೋಷಿ=ತಪ್ಪನ್ನು ಮಾಡಿರುವ ವ್ಯಕ್ತಿ/ಅಪರಾದಿ; ತುಡುಕು=ಮುಟ್ಟು/ತಾಗು/ಹಿಡಿ;

ಹಾವಿನ ಕೊಡನ ದೋಷಿ ತುಡುಕಬಹುದೇ=ತಪ್ಪನ್ನು ಮಾಡಿರುವ ವ್ಯಕ್ತಿಯು ಹಾವನ್ನುಳ್ಳ ಕೊಡದೊಳಕ್ಕೆ ಕಯ್ಯನ್ನು ಹಾಕಬಹುದೇ; ಪ್ರಾಚೀನಕಾಲದಲ್ಲಿದ್ದ ನ್ಯಾಯ ನಿರ‍್ಣಯ ವ್ಯವಸ್ತೆಯ ಒಂದು ಆಚರಣೆ; ಆರೋಪಕ್ಕೆ ಗುರಿಯಾಗಿರುವ ವ್ಯಕ್ತಿಯು ತಾನು ನಿರಪರಾದಿ ಎಂಬುದನ್ನು ಸಾಬೀತು ಮಾಡಲು ಹಾವಿನ ಕೊಡದೊಳಕ್ಕೆ ಪಂಚಾಯಿತಿದಾರರ ಮುಂದೆ ಹಾವಿನ ಕೊಡದೊಳಕ್ಕೆ ಕಯ್ಯನ್ನು ಕೆಲವು ಗಳಿಗೆಗಳ ಕಾಲ ಹಾಕಬೇಕು. ಆ ಸಮಯದಲ್ಲಿ ಹಾವು ಕಚ್ಚಿ ನಂಜೇರಿ ಆತ/ಆಕೆ ಸತ್ತರೆ, ಅವರನ್ನು ಅಪರಾದಿಯೆಂದು ನರ‍್ಣಯಿಸಲಾಗುತ್ತಿತ್ತು. ಒಂದು ವೇಳೆ ಹಾವು ಕಚ್ಚದೆ ಉಳಿದುಕೊಂಡರೆ ಆರೋಪಕ್ಕೆ ಗುರಿಯಾದ ವ್ಯಕ್ತಿಯನ್ನು ನಿರಪರಾದಿಯೆಂದು ತೀರ‍್ಮಾನಿಸಲಾಗುತ್ತಿತ್ತು;

ಇವು ನಿನಗೆ ಕೈದುಗಳೆ=ಇವು ನಿನಗೆ ಆಯುದಗಳೆ; ಬರಸಿಡಿಲು=ಮೋಡಗಳ ತಿಕ್ಕಾಟದಿಂದ ಹೊರಹೊಮ್ಮಿ ಇದ್ದಕ್ಕಿದ್ದಂತೆ ಬಂದು ಬೂಮಿಗೆ ಬಂದು ಬಡಿಯುವ ಸಿಡಿಲು; ದಾವಣಿ=ಸಾಲು/ಗುಂಪು;

 ಬರಸಿಡಿಲ ದಾವಣಿಯಾಗುತಿವೆ=ನಿನ್ನ ಆಯುದಗಳು ನನ್ನ ಪಾಲಿಗೆ ಎಡೆಬಿಡದೆ ಬಡಿಯುವ ಬರಸಿಡಿಲಾಗಿವೆ;

 ಕೈಯಿಕ್ಕಲು ಅಂಜುವೆನು=ಅವನ್ನು ಮುಟ್ಟಲು ಹೆದರುವೆನು;

 ಸಾರಥಿ ಎನ್ನನು ಬಿಡಿಸು=ಸಾರತಿ, ನನ್ನನ್ನು ಮರದಿಂದ ಕೆಳಗಿಳಿಸಿಕೊ; ಫಡ=ತಿರಸ್ಕಾರ ಇಲ್ಲವೇ ಕೋಪವನ್ನು ಸೂಚಿಸುವಾಗ ಬಳಸುವ ಉದ್ಗಾರದ ನುಡಿ;

 ಫಡ, £Àಡುಗದಿರು=ಪಡ…ಜೀವಬಯದಿಂದ ನಡುಗಬೇಡ; ಫಲುಗುಣ=ಅರ್‍ಜುನನಿಗೆ ಮತ್ತೊಂದು ಹೆಸರು;

ಫಲುಗುಣನ ನೆನೆ=ಅರ್‍ಜುನನ ಹೆಸರನ್ನು ಉಚ್ಚರಿಸು; ಕೈ+ತುಡುಕು; ಕೈದುಡುಕು=ಕಯ್ಯನ್ನು ಹಾಕು; ಅಹವು=ಆಗುವುವು;

 ತೆಗೆ ಸಾಕು. ಕೈದುಡುಕು ಕೈವಶ ಅಹವು ಎಂದನು ಆ ಪರ‍್ಥ=ನಿನ್ನ ಅಂಜಿಕೆಯನ್ನು ಬಿಟ್ಟು ಕಯ್ಯನ್ನು ಹಾಕು. ಆಯುದಗಳು ನಿನ್ನ ಕಯ್ಗೆ ಸಿಗುತ್ತವೆ ಎಂದು ಅರ್‍ಜುನನು ಉತ್ತರಕುಮಾರನಿಗೆ ಹೇಳಿದ; ಉಲಿ=ದನಿಮಾಡು/ಕೂಗು; ಸತ್ವ=ಬಲ/ಶಕ್ತಿ; ಔಕು=ಅದುಮು;

 ಉಲಿದು ಸತ್ವದೊಳು ಔಕಿ=ದೊಡ್ಡ ದನಿಯಲ್ಲಿ ಅರ್‍ಜುನನ ಹೆಸರನ್ನು ಉಚ್ಚರಿಸುತ್ತ, ಆಯುದದ ಕಟ್ಟು ಕೆಳಕ್ಕೆ ಬೀಳದಂತೆ ಬಿಗಿಯಾಗಿ ಒತ್ತಿಹಿಡಿದು; ಕಾಯ=ದೇಹ/ಮಯ್; ಬಲಿದು=ಬಿಗಿಗೊಳಿಸು; ಕಾಯವ ಬಲಿದು=ಮಯ್ಯ ಬಲವನ್ನೆಲ್ಲಾ ಒಗ್ಗೂಡಿಸಿ; ತೆಕ್ಕೆ=ಎರಡು ತೋಳುಗಳ ಹಿಡಿತ;

ತೆಕ್ಕೆಯೊಳು ಒತ್ತಿ=ಎರಡು ತೋಳುಗಳಲ್ಲಿಯೂ ಆಯುದದ ಕಟ್ಟನ್ನು ಬಿಗಿಯಾಗಿ ಹಿಡಿದುಕೊಂಡು; ಕರತಳ=ಅಂಗಯ್/ಹಸ್ತ; ಗಾಂಡೀವ=ಅರ್‍ಜುನನ ಬಿಲ್ಲು;

ಬೆವರಿದು ಬಳಲಿ ಅರ್‍ಜುನನ ಕರತಳಕೆ ಗಾಂಡೀವವ ನೀಡಿದನು =ಬೆವರು ಹರಿಯುತ್ತಿರಲು ಹೆಚ್ಚಿನ ಪರಿಶ್ರಮದಿಂದ ಆಯಾಸಗೊಂಡ ಉತ್ತರಕುಮಾರನು ಅರ್‍ಜುನನ ಹಸ್ತಕ್ಕೆ ಗಾಂಡೀವವನ್ನು ನೀಡಿದನು;

ಬಲುಹು=ಬಲ/ಕಸುವು; ಅವಡು+ಒತ್ತಿ; ಅವಡು=ದವಡೆ;

ಬಲುಹಿನಿಂದ ಅವಡೊತ್ತಿ ತೆಗೆ ತೆಗೆದು ಉಳಿದ ಬಿಲುಗಳ ನೀಡಿ=ತನ್ನೆಲ್ಲ ಬಲವನ್ನು ಒಗ್ಗೂಡಿಸಿಕೊಂಡು ಮರದ ಕೊಂಬೆಯಲ್ಲಿ ಕಟ್ಟಿದ್ದ ಆಯುದಗಳ ಹೊರೆಯಿಂದ ಉಳಿದ ಬಿಲ್ಲುಗಳನ್ನು ನೀಡಿ;

ಮರನನು ಮಲಗಿ=ಮರದ ಕಾಂಡವನ್ನು ಆಸರೆಯಾಗಿ ತಬ್ಬಿಕೊಂಡು; ಢಗೆ+ಇಂದ; ಢಗೆ=ತಳಮಳ; ಅಳ್ಳೆ+ಪೊಯ್ದು; ಅಳ್ಳೆ=ಹೊಟ್ಟೆಯ ಪಕ್ಕೆ; ಅಳ್ಳೆವೊಯ್ದು=ಏದುಸಿರನ್ನು ಬಿಡುವಾಗ ಪಕ್ಕೆಗಳು ಉಬ್ಬಿತಗ್ಗತೊಡಗುತ್ತವೆ;

ಮರನನು ಮಲಗಿ ಢಗೆಯಿಂದ ಅಳ್ಳೆವೊಯ್ದು=ಮರದ ದೊಡ್ಡ ಕಾಂಡವನ್ನು ಆಸರೆಯಾಗಿ ತಬ್ಬಿಹಿಡಿದು, ತೀವ್ರವಾದ ಆಯಾಸದಿಂದ ಬಳಲಿ ಏದುಸಿರನ್ನು ಬಿಡುತ್ತ;

ಕುಮಾರನು ಇಂತು ಎಂದ=ಉತ್ತರಕುಮಾರನು ಈ ರೀತಿ ನುಡಿದ;

ಗಿರಿ=ಬೆಟ್ಟ; ತೆರಳಿಚು=ಅಲುಗಾಡಿಸು; ಆರ್=ಶಕ್ತನಾಗು;

ಗಿರಿಯನು ಎತ್ತಲುಬಹುದು. ಬಿಲುಗಳ ತೆರಳಿಚುವಡೆ ಆರೆನು=ಬೆಟ್ಟವನ್ನು ಬೇಕಾದರೆ ಎತ್ತಲುಬಹುದು. ಆದರೆ ಇಲ್ಲಿರುವ ಬಿಲ್ಲುಗಳನ್ನು ಅಲುಗಿಸಲಾರೆನು; ಸರ‍್ಥ=ಶಕ್ತಿಶಾಲಿ/ಬಲವುಳ್ಳವನು; ಧರಿಸು=ತೊಡು/ಹಿಡಿ; ಶರಣು=ತಲೆಬಾಗುತ್ತೇನೆ;

ಬೃಹನ್ನಳೆ, ನೀ ಸರ‍್ಥನು ಧರಿಸಲಾಪೈ. ನಿನಗೆ ಶರಣು ಎನುತ=ಬ್ರಹನ್ನಳೆ…ನೀನು ಶಕ್ತಿಶಾಲಿಯಾಗಿರುವುದರಿಂದ ಇವನ್ನು ಹಿಡಿಯಬಲ್ಲೆ. ನಿನಗೆ ಶರಣಾಗಿದ್ದೇನೆ ಎಂದು ಉತ್ತರಕುಮಾರನು ಬ್ರಹನ್ನಳೆಯನ್ನು ಹೊಗಳುತ್ತ;

ಸರಳು=ಬಾಣ; ಹೊದೆ=ಬತ್ತಳಿಕೆ/ಬಾಣಗಳನ್ನಿಡುವ ಕೋಶ; ದೇವದತ್ತ=ಶಂಕ; ಪರಶು=ಕೊಡಲಿ; ತೋಮರ=ತುದಿಯಲ್ಲಿ ಅರ‍್ದ ಚಂದ್ರಾಕಾರದಲ್ಲಿರುವ ಬಾಣ; ಕುಂತ=ಈಟಿ; ಅಸಿ=ಕತ್ತಿ; ಮುದ್ಗರ=ಸುತ್ತಿಗೆ/ಒಂದು ಬಗೆಯ ಆಯುದ; ದಂಡ=ದಡಿ; ಆದಿ=ಮೊದಲಾದ;

ಸರಳ ಹೊದೆಗಳ, ದೇವದತ್ತವ, ಪರಶು ತೋಮರ ಕುಂತ ಅಸಿ ಮುದ್ಗರ ಗದಾ ದಂಡಾದಿ ಶಸ್ತçವ ತೆಗೆದು ನೀಡಿದನು=ಬಾಣಗಳಿಂದ ತುಂಬಿದ ಬತ್ತಳಿಕೆ, ಶಂಕ, ಕೊಡಲಿ, ಅರ‍್ದ ಚಂದ್ರಾಕಾರದ ಬಾಣ, ಈಟಿ, ಕತ್ತಿ, ಸುತ್ತಿಗೆ, ಗದಾದಂಡ ಮೊದಲಾದ ಆಯುದಗಳೆಲ್ಲವನ್ನೂ ಮರದ ಮೇಲಣ ಕಟ್ಟಿನಿಂದ ಉತ್ತರಕುಮಾರನು ಒಂದೊಂದಾಗಿ ತೆಗೆತೆಗೆದು ಬ್ರಹನ್ನಳೆಯ ಕಯ್ಗೆ ಕೊಟ್ಟು , ಮರದಿಂದ ಕೆಳಗಿಳಿದು ಬಂದು ಬ್ರಹನ್ನಳೆಯನ್ನು ಪ್ರಶ್ನಿಸತೊಡಗಿದನು;

ಹೇಳು ಸಾರಥಿ, ಬಿಲ್ಲು ಇದು ಆವನ ತೋಳಿಗೆ ಅಳವಡುವುದು= ಹೇಳು ಸಾರತಿ, ಈ ಬಿಲ್ಲು ಯಾವನ ತೋಲ್ಬಲಕ್ಕೆ ಹೊಂದುವುದು. ಅಂದರೆ ಇದನ್ನು ಹಿಡಿದು ಬಾಣವನ್ನು ಪ್ರಯೋಗಿಸಬಲ್ಲ ಶಕ್ತನು ಯಾರು;

ಜಾಲ=ಗುಂಪು; ಬೆಸಗೈ=ಹೇಳಿದ ಕಾರ‍್ಯವನ್ನು ಮಾಡು;

 ಮಹಾಶರ ಜಾಲ ಬೆಸಗೈದಪವು=ದೊಡ್ಡ ಬಾಣಗಳೆಲ್ಲವೂ ಯಾರ ಅಪ್ಪಣೆಯನ್ನು ಪಾಲಿಸುತ್ತವೆ. ಅಂದರೆ ಗುರಿಯತ್ತ ಸಾಗುತ್ತವೆ;

ಮಿಕ್ಕ ಬಿಲ್ಲುಗಳು ಇದು ಆರಿಗೆ=ಇನ್ನುಳಿದ ಬಿಲ್ಲುಗಳೆಲ್ಲವೂ ಯಾರಿಗೆ ಸೇರಿದ್ದು;

 ಕಾಳಗದೊಳು ಇವನು ಆರು ತೆಗೆವರು=ಕಾಳೆಗದಲ್ಲಿ ಇವನ್ನು ಯಾರು ಬಳಸುತ್ತಾರೆ; ಮೇಲು ಕೈದುಗಳು=ಉತ್ತಮವಾದ ಆಯುದಗಳು; ಕೈಮೇಳವಿಸು=ಒಪ್ಪು/ಉಂಟಾಗು/ಸೇರು;

ಮೇಲು ಕೈದುಗಳು ಆರಿಗೆ ಇವು ಕೈಮೇಳವಿಸುವವು=ಉತ್ತಮವಾದ ಈ ಆಯುದಗಳೆಲ್ಲವೂ ಯಾರಿಗೆ ಒಪ್ಪುತ್ತವೆ. ಅಂದರೆ ಇಂತಹ ಆಯುದಗಳನ್ನು ಬಳಸುವ ಆ ವೀರರು ಯಾರು; ಹಿಂಗು=ಪರಿಹಾರವಾಗು/ನಿವಾರಣೆಯಾಗು;

 ಮನದ ಸಂಶಯ ಹಿಂಗೆ ಹೇಳು=ನನ್ನ ಮನವನ್ನು ಕಾಡುತ್ತಿರುವ ಈ ಅನುಮಾನಗಳೆಲ್ಲವನ್ನೂ ಪರಿಹರಿಸುವಂತೆ ಎಲ್ಲವನ್ನೂ ಹೇಳು; ಕಣಾ=ಕಂಡೆಯಾ/ನೋಡು; ಗಾಂಡಿವ=ಅರ್‍ಜುನನು ಬಳಸುತ್ತಿದ್ದ ಬಿಲ್ಲಿನ ಹೆಸರು;

ಇದು ಕಣಾ, ಗಾಂಡಿವವು ಎಂದು ಎಂಬುದು. ಮಹಾಧನು ಪರ‍್ಥನದು=ಇದು ನೋಡು…ಈ ಬಿಲ್ಲಿನ ಹೆಸರು ಗಾಂಡೀವ. ಇದುಅರ್‍ಜುನನದು; ಚಾಪ=ಬಿಲ್ಲು;

ಬಳಿಕ ಇದು ಯುಧಿಷ್ಠರ ಚಾಪವು= ಅದರ ಪಕ್ಕದಲ್ಲಿರುವ ಈ ಬಿಲ್ಲು ದರ‍್ಮರಾಯನದು; ಧನು=ಬಿಲ್ಲು;

 ಈ ಧನು ಭೀಮಸೇನನದು=ಈ ಬಿಲ್ಲು ಬೀಮಸೇನನದು; ಕೋದಂಡ=ಬಿಲ್ಲು;

 ಇದು ನಕುಲ ಕೋದಂಡ=ಇದು ನಕುಲನ ಬಿಲ್ಲು;

 ಬಿಲು ತಾನು ಇದುವೆ ಸಹದೇವನದು.=ಇಲ್ಲಿ ಕಾಣುತ್ತಿರುವ ಈ ಬಿಲ್ಲೇ ಸಹದೇವನದು; ಅನಿಲಜ=ವಾಯುಪುತ್ರ/ಬೀಮನಿಗೆ ಇದ್ದ ಮತ್ತೊಂದು ಹೆಸರು;

 ಭಾರಿಯ ಗದೆಯಿದು ಅನಿಲಜನದು=ದೊಡ್ಡದಾಗಿರುವ ಈ ಗದೆ ಬೀಮನದು; ಕಿರೀಟಿ=ಅರ್‍ಜುನನಿಗೆ ಇದ್ದ ಮತ್ತೊಂದು ಹೆಸರು;

 ಇವು ಕಿರೀಟಿಯ ಬಾಣವು= ಇವು ಅರ್‍ಜುನನ ಬಾಣಗಳು;

ಬತ್ತಳಿಕೆ=ಬಾಣಗಳನ್ನು ಇಡುವ ಕೋಶ. ಬತ್ತಳಿಕೆಯನ್ನು ಬಿಲ್ಲುಗಾರನು ತನ್ನ ಬೆನ್ನಿಗೆ ಕಟ್ಟಿಕೊಂಡಿರುತ್ತಾನೆ; ಕಂಬು=ಶಂಕ; ಸೀಸಕ=ತಲೆಗೆ ತೊಡುವ ಲೋಹದ ಟೊಪ್ಪಿಗೆ; ಜೋಡು=ಕವಚ; ಬಿರುದು=ಕರ‍್ತಿ/ಪ್ರಸಿದ್ದಿ; ಟೆಕ್ಕೆಯ=ಬಾವುಟ; ಶಸ್ತ್ರ+ಅಸ್ತ್ರವನು; ಶಸ್ತ್ರ=ಆಯುದ; ಅಸ್ತ್ರ=ಬಾಣ; ಬೆರಗು=ಅಚ್ಚರಿ;

ಅವರವರ ಬತ್ತಳಿಕೆ ಚಾಪವನು, ಅವರ ಶರವನು ಕಂಬು ಖಡುಗವ ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ ವಿವಿಧ ಶಸ್ತ್ರಾಸ್ತ್ರವನು ಫಲುಗುಣನು ವಿವರಿಸಲು ಬೆರಗಾಗಿ=ಅಯ್ವರು ಪಾಂಡವರು ಬಳಸುತ್ತಿದ್ದ ಬಿಲ್ಲುಬಾಣಗಳನ್ನು. ಶಂಕ, ಕತ್ತಿ, ದೇಹ ಮತ್ತು ತಲೆಗೆ ತೊಡುತ್ತಿದ್ದ ಬಹುಬಗೆಯ ಕವಚಗಳನ್ನು, ಪಾಂಡವರ ಕರ‍್ತಿಯನ್ನು ಎತ್ತಿಹಿಡಿಯುವ ಬಾವುಟಗಳನ್ನು, ಅನೇಕ ಬಗೆಯ ಶಸ್ತ್ರಾಸ್ತ್ರಗಳನ್ನು ಅರ್‍ಜುನನು ಉತ್ತರಕುಮಾರನಿಗೆ ವಿವರಿಸಿ ಹೇಳಲು, ಎಲ್ಲವನ್ನೂ ಕೇಳಿ ಉತ್ತರಕುಮಾರನು ಅಚ್ಚರಿಗೊಂಡು;

ಸಾರಥಿ+ಇವನು; ತಾನು+ಆರು; ಮತ್ಸ್ಯ=ವಿರಾಟರಾಜನು ಆಳುತ್ತಿದ್ದ ರಾಜ್ಯದ ಹೆಸರು; ಸೂನು=ಮಗ; ಮತ್ಸ್ಯನ ಸೂನು=ವಿರಾಟರಾಜನ ಮಗನಾದ ಉತ್ತರಕುಮಾರ; ಬೆಸಗೊಳ್=ವಿಚಾರಿಸು/ಕೇಳು;

ಸಾರಥಿಯಿವನು ತಾನಾರು ಎಂದು ಮತ್ಸ್ಯನ ಸೂನು ಬೆಸಗೊಂಡ=ಪಾಂಡವರು ಅಯ್ವರಲ್ಲಿ ಈಗ ನನಗೆ ಸಾರತಿಯಾಗಿ ಬಂದಿರುವವನು ಯಾರು ಎಂದು ಉತ್ತರಕುಮಾರನು ಬ್ರಹನ್ನಳೆಯನ್ನು ಕೇಳಿದನು; ಮಾರುತ=ವಾಯುದೇವ; ಸುತ=ಮಗ; ಮಾರುತನ ಸುತ=ಬೀಮ; ಮೇಣ್=ಇಲ್ಲವೇ; ಬಾಂಧವ=ನೆಂಟ; ಧೀರ=ಶೂರ/ಪರಾಕ್ರಮಿ;

ಆರು ನೀನು. ಅರ್‍ಜುನನೊ…ನಕುಲನೊ…ಮಾರುತನ ಸುತನೋ…ಯುಧಿಷ್ಟಿರ ವೀರನೋ…ಸಹದೇವನೋ…ಮೇಣ್ ಅವರ ಬಾಂಧವನೊ. ಧೀರ ಹೇಳೈ ಬೇಡಿಕೊಂಬೆನು=ಪಾಂಡವರು ಅಯ್ವರಲ್ಲಿ ನೀನು ಯಾರು. ಅರ್‍ಜುನನೊ… ನಕುಲನೊ… ಬೀಮನೊ…ದರ‍್ಮರಾಯನೊ…ಸಹದೇವನೋ ಇಲ್ಲವೇ ಪಾಂಡವರ ನೆಂಟನೊ ಎಂಬುದನ್ನು ಶೂರನಾಗಿರುವ ನೀನು ಹೇಳಬೇಕೆಂದು ಬೇಡಿಕೊಳ್ಳುತ್ತಿದ್ದೇನೆ;

ಕಾರಣವ ವಿಸ್ತರಿಸು=ಪಾಂಡವರ ಆಯುದಗಳನ್ನು ಈ ಮರದಲ್ಲಿಡಲು ಕಾರಣವೇನು ಎಂಬುದೆಲ್ಲವನ್ನು ವಿವರಿಸಿ ಹೇಳು; ತತಿ=ಸಮೂಹ;

 ಪಾಂಡು ಕುಮಾರರ ಆಯುಧ ತತಿಯ ನೀನು ಎಂತು ಅರಿವೆ=ಈ ಆಯುದಗಳೆಲ್ಲವೂ ಪಾಂಡುಕುಮಾರರದು ಎಂಬುದನ್ನು ನೀನು ಹೇಗೆ ಬಲ್ಲೆ;

ಆನು ಅರ್‍ಜುನನು ಎಮಗೆ ರಾಣಿವಾಸವು=ನಾನು ಅರ‍್ಜುನ. ನಾನು ರಾಣಿವಾಸದಲ್ಲಿದ್ದೇನೆ; ಬಾಣಸಿ=ಅಡುಗೆಯವನು;

 ಬಾಣಸಿಯಾದ ವಲಲನು ಭೀಮ=ಅಡುಗೆಯ ಕಾಯಕವನ್ನು ಮಾಡುವ ವಲಲನೇ ಬೀಮ; ವರ=ಉತ್ತಮ; ಯತಿ=ಯೋಗಿ;

 ವರ ಯತಿಯಾದ ಕಂಕನು ಧರ‍್ಮಪುತ್ರನು=ಉತ್ತಮ ಯೋಗಿಯಾಗಿ ನಿಮ್ಮ ತಂದೆಯ ಜತೆಯಲ್ಲಿರುವ ಕಂಕನೇ ದರ‍್ಮರಾಯ;

 ನಿಮ್ಮ ಗೋಕುಲವ ಕಾದವನು ಸಹದೇವ=ವಿರಾಟನಗರಿಯ ಗೋವುಗಳನ್ನು ಕಾಯುತ್ತಿರುವವನು ಸಹದೇವ; ರಾವುತ=ಕುದುರೆ ಸವಾರ;

 ರಾವುತನಾದವನು ನಕುಲನು=ಅರಸನ ಕುದುರೆಗಳನ್ನು ನೋಡಿಕೊಳ್ಳುತ್ತಿರುವವನೇ ನಕುಲ; ವಿಳಾಸಿನಿ+ಆದವಳು; ವಿಳಾಸಿನಿ=ದಾಸಿ;

 ವಿಳಾಸಿನಿಯಾದವಳು ಸೈರಂಧ್ರಿ=ರಾಣಿವಾಸದಲ್ಲಿ ನಿಮ್ಮ ತಾಯಿಗೆ ದಾಸಿಯಾಗಿರುವ ಸೈರಂದ್ರಿಯೇ ದ್ರೌಪದಿ; ಮಹಿಮೆ=ಉನ್ನತಿ/ಹಿರಿಮೆ;

 ಉಳಿದವರಿಗೆ ಈ ಮಹಿಮೆ ತಾನು ಎಲ್ಲಿಯದು ಕಾಣಲು ಬಹುದಲಾ=ಬೇರೆಯವರಿಗೆ ನಿಮ್ಮ ಹಿರಿಮೆಯು ಹೇಗೆ ತಾನೆ ಕಾಣಲಾಗುತ್ತದೆ. ಅಂದರೆ ಮಾರುವೇಶದಲ್ಲಿರುವ ನಿಮ್ಮನ್ನು ಪಾಂಡವರೆಂದು ಯಾರೂ ತಿಳಿಯಲಾರರು;

ಮಹಾದೇವ=ಶಿವನ ಹೆಸರು; ಮನದಲ್ಲಿ ಉಂಟಾಗುವ ಆತಂಕ , ಅಚ್ಚರಿ ಮತ್ತು ಅಸಹಾಯಕತೆಯನ್ನು ಸೂಚಿಸುವಾಗ ಈ ರೀತಿ ದೇವರ ಹೆಸರನ್ನು ಹೇಳಲಾಗುತ್ತದೆ; ಗಹನ=ದೊಡ್ಡದು; ಅತಿಶಯ=ಅಸಾದಾರಣವಾದುದು;

 ಅಹುದು ಬಳಿಕೇನು ಮಹಾದೇವ ಗಹನ ಮಾಡದೆ ಅತಿಶಯವನು ಜೀವಿಸಿದರು= ಮೋಸದ ಜೂಜಾಟದಲ್ಲಿ ದುರ‍್ಯೋದನ ಮತ್ತು ಶಕುನಿಯಿಂದ ಸೋತ ಪಾಂಡವರಿಗೆ ಬೇರೆ ದಾರಿಯೇ ಇರಲಿಲ್ಲ. ಮಹಾದೇವ…ತಮಗೆ ಬಂದ ಆಪತ್ತನ್ನು ದೊಡ್ಡದೆಂದು ಕುಸಿದುಬೀಳದೆ, ಅಸಾದಾರಣವಾದ ರೀತಿಯಲ್ಲಿ ವನವಾಸ ಮತ್ತು ಅಜ್ನಾತವಾಸದಲ್ಲಿ ಜೀವಿಸಿದರು ಎಂದು ಉತ್ತರಕುಮಾರನು ಪಾಂಡವರ ಗುಣಗಾನ ಮಾಡುತ್ತಾನೆ;

ಬಹುಳತೆ=ಹೆಚ್ಚಳ;

 ನುಡಿದ ತಪ್ಪಿನ ಬಹುಳತೆಯ ಭಾವಿಸದೆ=ನಿನ್ನನ್ನು ನಿಂದಿಸಿ ನುಡಿದ ನನ್ನ ತಪ್ಪನ್ನು ದೊಡ್ಡದೆಂದು ಮನಸ್ಸಿಗೆ ತೆಗೆದುಕೊಳ್ಳದೆ; ಕುಹಕಿ=ಕಪಟಿ/ಇಬ್ಬಗೆಯ ನಡೆನುಡಿಯವನು; ಪದ=ಪಾದ; ಎರಗು=ನಮಿಸು;

 ತನ್ನನು ಕುಹಕಿ ಎನ್ನದೆ ಕಾಯಬೇಕು ಎಂದು ಪದಕೆ ಎರಗಿದನು=ಅಲ್ಲಿ ರಾಣಿವಾಸದಲ್ಲಿ ವೀರನಂತೆ, ಇಲ್ಲಿ ರಣರಂಗದ ಮುಂಚೂಣಿಯಲ್ಲಿ ಹೇಡಿಯಂತೆ ನಡೆದುಕೊಂಡ ನನ್ನನ್ನು ಕಡೆಗಣಿಸದೆ ಕಾಪಾಡಬೇಕು ಎಂದು ನುಡಿಯುತ್ತ ಉತ್ತರಕುಮಾರನು ಅರ್‍ಜುನನ ಪಾದಗಳನ್ನು ಹಿಡಿದುಕೊಂಡನು; ಮಾಳಿ=ತಲೆ; ನೆಗಹು=ಮೇಲಕ್ಕೆ ಎತ್ತು;

ಮೌಳಿಯನು ನೆಗಹಿದನು=ಉತ್ತರಕುಮಾರನ ತಲೆಯನ್ನು ಅರ್‍ಜುನನು ಮೇಲಕ್ಕೆ ಎತ್ತಿದನು; ಬೋಳವಿಸು=ಸಮಾದಾನ ಮಾಡು/ಸಂತಯಿಸು;

 ನಿನ್ನಯ ಮೇಲೆ ತಪ್ಪಿಲ್ಲ ಎನುತ ಫಲುಗುಣ ಬೋಳವಿಸೆ=ನಿನ್ನಿಂದ ಯಾವ ತಪ್ಪು ಆಗಿಲ್ಲ ಎಂದು ಅರ್‍ಜುನನು ಉತ್ತರಕುಮಾರನನ್ನು ಸಮಾದಾನಪಡಿಸಲು;

ಬಿನ್ನಪ=ಕೋರಿಕೆ; ಕೇಳಬೇಹುದು=ಕೇಳಬೇಕು;

ಉತ್ತರನು ನಿಂದರ‍್ದು ಕೈಮುಗಿದು ನಗುತ ಬಾಲಕನ ಬಿನ್ನಪವನು ಒಂದನು ಕೇಳಬೇಹುದು=ಉತ್ತರಕುಮಾರನು ಅರ್‍ಜುನನ ಮುಂದೆ ನಿಂತುಕೊಂಡು ಕಯ್ ಮುಗಿಯುತ್ತ ತನ್ನದೊಂದು ಕೋರಿಕೆಯನ್ನು ಕೇಳಬೇಕು ಎಂದು ನುಡಿದನು;

ದಶ=ಹತ್ತು; ನಾಮಾವಳಿ=ಹೆಸರುಗಳು; ಪೇಳ್ದು=ಹೇಳಿ; ಅಲ್ಪಮತಿ=ತಿಳುವಳಿಕೆಯಿಲ್ಲದಿರುವವನು;

ನಿಮ್ಮ ದಶ ನಾಮಾವಳಿಯನು ಪೇಳ್ದು ಅಲ್ಪಮತಿಯನು ತಿಳುಹಬೇಕು ಎನಲು=  ನಿಮಗಿರುವ ಹತ್ತು ತೆರನ ಹೆಸರುಗಳನ್ನು ತಿಳಿಯದಿರುವ ನನಗೆ ಅವನ್ನು ತಿಳಸಬೇಕೆಂದು ಕೋರಿಕೊಳ್ಳಲು; ಪುನರಪಿ=ಮತ್ತೊಮ್ಮೆ; ಅಂದ=ರೀತಿ; ವಿಸ್ತರ=ವಿವರಣೆ; ವಿರಚಿಸು=ಬಣ್ಣಿಸು/ವಿವರಿಸು;

 ನಸು ನಗುತ ಅರ್‍ಜುನನು ಫಲುಗುಣ…ಧನಂಜಯ…ಜಿಷ್ಣು…ಸಿತವಾಹನ…ವಿಜಯ…ಬೀಭತ್ಸು…ಪರ‍್ಥ…ಕಿರೀಟಿ ಮೊದಲಾದ ವಿನುತ ಕೃಷ್ಣನು..ಸವ್ಯಸಾಚಿಗಳು ಎನಿಪ ಪೆಸರನು ತಿಳುಹಿ ಪುನರಪಿ ತನಗೆ ಬಂದ ಅಂದವನು ವಿಸ್ತರವಾಗಿ ವಿರಚಿಸಿದ=ಆಗ ಅರ್‍ಜುನನು ನಗುತ್ತ ತನಗೆ ಇದ್ದ “ಪಲುಗುಣ—ಧನಂಜಯ—ಜಿಶ್ಣು—ಸಿತವಾಹನ—ವಿಜಯ—ಬೀಬತ್ಸು—ಪರ‍್ತ—ಕಿರೀಟಿ—ವಿನುತ ಕ್ರುಶ್ಣ—ಸವ್ಯಸಾಚಿ” ಎಂಬ ಹತ್ತು ಬಗೆಯ ಹೆಸರುಗಳನ್ನು ಹೇಳಿ, ಮತ್ತೊಮ್ಮೆ ಆ ಹೆಸರುಗಳು ತನಗೆ ಬಂದ ಬಗೆಯನ್ನು ವಿವರವಾಗಿ ಬಣ್ಣಿಸಿದನು; ಲೇಸು=ಒಳ್ಳೆಯದು;

  ಪರ‍್ಥ, ಲೇಸಾಗಿ ನಂಬಿದೆನು=ಅರ‍್ಜುನ, ನಿನ್ನ ಮಾತುಗಳಿಂದ ನನಗೆ ನೀವೇ ಪಾಂಡವರು ಎಂಬ ನಂಬಿಕೆಯುಂಟಾಗಿದೆ;

ನಿಶ್ಚಯ=ವಾಸ್ತವ/ದಿಟ; ಇಂಬು=ಆಶ್ರಯ/ಎಡೆ;

ನಿಶ್ಚಯವು ಇಂಬುಗೊAಡುದು=ನೀವು ಯಾರೆಂಬ ವಾಸ್ತವ ಸಂಗತಿಯು ಮನದಟ್ಟಾಯಿತು;

ಹುಲು=ಅತಿ ಸಾಮಾನ್ಯವಾದ; ಬಹುರೂಪ=ಅನೇಕ ರೂಪ/ಬೇರೆ ಬೇರೆ ರೂಪ; ಡೊಂಬು=ಬೂಟಾಟಿಕೆ/ಸೋಗು;

ನಿನಗೆ ಹುಲು ಬೃಹನ್ನಳೆತನದ ಬಹು ರೂಪು. ಈ ಡೊಂಬು ಇದೇಕೈ=ನೀನು ಅತಿಸಾಮಾನ್ಯವಾದ ಬ್ರಹನ್ನಳೆತನದ ರೂಪವನ್ನು ತಳೆದಿರುವೆ. ನಿನಗೆ ಈ ಸೋಗಿನ ವೇಶವೇಕೆ;

ಅಂಬುಜಾಕ್ಷ=ವಿಶ್ಣು; ಸಾಹಸ=ಪರಾಕ್ರಮ; ಪ್ರತಿಬಿಂಬ=ಪ್ರತಿರೂಪ;

 ನೀನು ಅಂಬುಜಾಕ್ಷನ ಸಾಹಸ ಪ್ರತಿಬಿಂಬವಲ್ಲಾ=ನೀನು ವಿಶ್ಣು ಪರಮಾತ್ಮನ ಪರಾಕ್ರಮದ ಪ್ರತಿರೂಪವಲ್ಲವೇ;

ವಿಡಂಬಿಸು=ಅಣಕಮಾಡು;

ನಿನ್ನ ವಿಡಂಬಿಸಿದ ರೂಹಿಂಗೆ ಕಾರಣವೇನು ಹೇಳು=ಇತ್ತ ಗಂಡೂ ಅಲ್ಲದ ಅತ್ತ ಹೆಣ್ಣೂ ಅಲ್ಲದ ನಿನ್ನ ಇಂತಹ ರೂಪಿಗೆ ಕಾರಣವೇನೆಂಬುದನ್ನು ಹೇಳು;

ಕಣಾ=ಕಂಡೆಯಾ/ತಿಳಿದಿರುವೆಯಾ;

ಇದು ಕಣಾ=ಈ ಬಗೆಯ ರೂಪವನ್ನು ನಾನೇಕೆ ತಳೆದಿರುವೆ ಎಂಬುದನ್ನು ಹೇಳುತ್ತೇನೆ ಕೇಳು;

ಧರ‍್ಮಜ=ದರ‍್ಮರಾಯ; ಸತ್ಯ+ಅಭ್ಯುದಯಕೆ+ಓಸುಗ; ಅಭ್ಯುದಯ=ಉತ್ತಮವಾಗಿ ಮುನ್ನಡೆಸುವುದು; ಓಸುಗ=ಸಲುವಾಗಿ/ಕಾರಣಕ್ಕಾಗಿ; ಊರ‍್ವಶಿ=ದೇವೇಂದ್ರನ ಅಮರಾವತಿ ಪಟ್ಟಣದಲ್ಲಿರುವ ದೇವತೆ; ಶಾಪ=ಕೇಡಾಗಲೆಂದು ಹೇಳುವ ನುಡಿಯುವುದು;

ಊರ‍್ವಶಿಯ ಶಾಪ=ಇದೊಂದು ಕಾವ್ಯ ಪ್ರಸಂಗ. “ಕಾವ್ಯ ಪ್ರಸಂಗ” ಎಂದರೆ ಕವಿಕಲ್ಪಿತವಾದ ಕಾವ್ಯಲೋಕದಲ್ಲಿ ನಡೆಯುವ ಪ್ರಸಂಗ. ಒಮ್ಮೆ ದೇವಲೋಕದಲ್ಲಿರುವ ದೇವೇಂದ್ರನ ಅಮರಾವತಿ ಪಟ್ಟಣಕ್ಕೆ ಅರ್‍ಜುನನು ಹೋಗಿದ್ದಾಗ, ಅರ್‍ಜುನನು ದೇವಲೋಕದ ಸುರಸುಂದರಿಯಾದ ಊರ‍್ವಶಿಯ ದೇಹದೊಡನೆ ಕಾಮದ ನಂಟನ್ನು ಪಡೆದು ಆನಂದಿಸಲೆಂಬ ಉದ್ದೇಶದಿಂದ ದೇವೇಂದ್ರನು ಅರ್‍ಜುನನ ಬಳಿಗೆ ಊರ‍್ವಶಿಯನ್ನು ಕಳುಹಿಸುತ್ತಾನೆ. ಆದರೆ ಅರ್‍ಜುನನು ದೇವೇಂದ್ರನಿಗೆ ಪ್ರೇಯಸಿಯಾಗಿರುವ ಊರ‍್ವಶಿಯು ತನಗೆ ತಾಯಿಯ ಸಮಾನಳೆಂದು ಹೇಳಿ, ಆಕೆಯೊಡನೆ ಕಾಮದ ನಂಟನ್ನು ನಿರಾಕರಿಸುತ್ತಾನೆ. ಇದರಿಂದ ಹತಾಶಳಾದ ಊರ‍್ವಶಿಯು ಅರ್‍ಜುನನಿಗೆ “ನೀನು ಒಂದು ವರುಶದ ಕಾಲ ನಂಪುಸಕನಾಗು” ಎಂದು ಶಾಪವನ್ನು ನೀಡುತ್ತಾಳೆ. ಆಗ ಊರ‍್ವಶಿಯು ನೀಡಿದ ಶಾಪವು ಈಗ ವಿರಾಟನಗರಿಯಲ್ಲಿ ಪಾಂಡವರು ಅಜ್ನಾತವಾಸಕ್ಕೆ ಬಂದಾಗ ಅರ್‍ಜುನನ ಪಾಲಿಗೆ ವರವಾಗಿ ಪರಿಣಮಿಸಿದೆ;

 ಧರ‍್ಮಜನ ಸತ್ಯಾಭ್ಯುದಯಕೋಸುಗ ಊರ‍್ವಶಿಯ ಶಾಪದಲಿ ಬಂದುದು=ನಮ್ಮ ಅಣ್ಣ ದರ‍್ಮರಾಯನ ಸತ್ಯದ ನಡೆನುಡಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ನೆರವಾಗುವಂತೆ ಊರ‍್ವಶಿಯ ಶಾಪವೇ ನನಗೆ ವರವಾಗಿ ಬಂತು; ವತ್ಸರ=ವರುಶ; ನರ‍್ವಿಘ್ನ=ಯಾವ ಅಡೆತಡೆಯಿಲ್ಲದಿರುವುದು; ಹೊತ್ತು=ಕಾಲ/ಸಮಯ;

 ಒಂದು ವತ್ಸರವ ನರ‍್ವಿಘ್ನದಲಿ ಹೊತ್ತು ನೂಕಿದೆನು=ಹಗೆಗಳಾದ ದರ‍್ಯೋದನಾದಿಗಳ ಕಣ್ಣಿಗೆ ಬೀಳದೆ ವಿರಾಟನಗರಿಯಲ್ಲಿ ಒಂದು ವರುಶದ ಅಜ್ನಾತವಾಸವನ್ನು ಯಾವ ಅಡೆತಡೆಯಿಲ್ಲದೆ ಕಳೆದೆನು;

ಅವಧಿಯನು ನೂಕಿದೆವು=ಇಂದಿಗೆ ಒಂದು ವರುಶದ ಅಜ್ನಾತವಾಸವನ್ನು ಪೂರಯಿಸಿದೆವು; ನಿಜ್ಜೋಡು=ಸರಿಯಾಗಿ ಹೊಂದಿಕೊಳ್ಳುವಿಕೆ;

ಇದಕೆ ನಿಜ್ಜೋಡು ಆಯ್ತು=ನನಗೆ ಬಂದ ಶಾಪಕ್ಕೂ ನನಗೆ ಬಂದ ಅಜ್ನಾತವಾಸಕ್ಕೂ ಸರಿಯಾದ ಹೊಂದಾಣಿಕೆಯಾಯಿತು; ಅದಟು=ಪರಾಕ್ರಮ;

ತನ್ನ ಅದಟುತನವನು ನೀನು ಭೀತಿಗೊಳ್ಳದೆ ನೋಡು=ಕಾಳೆಗದ ಕಣದಲ್ಲಿ ನನ್ನ ಪರಾಕ್ರಮದ ಕಸುವು ಮತ್ತು ಕುಶಲತೆಯನ್ನು ನೀನು ಹೆದರಿಕೊಳ್ಳದೆ ನೋಡು; ಗಂಟಲ ಬಳೆ=ಕುತ್ತಿಗೆಯ ಎಡೆಯಲ್ಲಿ ಬಳೆಯಂತೆ ಬಾಗಿರುವ ಮೂಳೆಯ ರಚನೆ; ಮುರಿ= ತುಂಡುಮಾಡು; ವೊಲು=ಅಂತೆ/ಹಾಗೆ; ಬಳೆ=ಕಯ್ಯಲ್ಲಿ ತೊಟ್ಟಿದ್ದ ಬಳೆ; ನೆಗ್ಗೊತ್ತು=ಪುಡಿಪುಡಿಮಾಡು;

ಕೌರವ ಬಲದ ಗಂಟಲ ಬಳೆಯ ಮುರಿವವೊಲು ಬಳೆಯ ನೆಗ್ಗೊತ್ತಿದನು=ದರ‍್ಯೋದನನ ಸೇನೆಯ ಗಂಟಲಬಳೆಯನ್ನು ಅಂದರೆ ಸಮಸ್ತ ಶಕ್ತಿಯನ್ನು ಸದೆಬಡೆಯುವಂತೆ ಬ್ರಹನ್ನಳೆಯ ಉಡುಗೆತೊಡುಗೆಯಲ್ಲಿದ್ದ ಅರ್‍ಜುನನು ತನ್ನ ಕಯ್ ಬಳೆಗಳನ್ನು ಒತ್ತಿ ಪುಡಿಪುಡಿಮಾಡಿದನು; ಅಲಘು=ಮಹತ್ತರವಾದುದು/ದೊಡ್ಡದಾದುದು; ಅಲಘು ಸಾಹಸಿ=ಮಹಾ ವೀರ; ಮಲ್ಲಗಂಟು=ಕುಸ್ತಿಪಟುಗಳು ಮತ್ತು ಕಾಳೆಗದ ರಣರಂಗಕ್ಕೆ ಹೋಗುವ ಕಾದಾಳುಗಳು ಸೊಂಟಕ್ಕೆ ಬಿಗಿದು ಕಟ್ಟುವ ಬಟ್ಟೆಯ ಗಂಟು; ಪಳಿ=ಬಟ್ಟೆ;

ಅಲಘು ಸಾಹಸಿ ಮಲ್ಲಗಂಟಿನಲಿ ಪಳಿಯನು ಉಟ್ಟನು=ಮಹಾಪರಾಕ್ರಮಿಯಾದ ಅರ್‍ಜುನನು ಮಲ್ಲಗಂಟನ್ನು ಹಾಕಿ ಬಟ್ಟೆಯನ್ನು ಉಟ್ಟುಕೊಂಡನು; ನವಿರು=ಕೂದಲು; ಹಿಣಿಲು=ಜಡೆ/ಹೆರಳು;

ತಲೆ ನವಿರ ಹಿಣಿಲಿರಿದು=ತಲೆಗೂದಲನ್ನು ಹೆಣೆದು ಜಡೆಹಾಕಿ ಎತ್ತಿಕಟ್ಟಿ; ತಿಲಕ=ಹಣೆಯಲ್ಲಿ ಇಡುವ ಕುಂಕುಮ/ಗಂದದ ಬೊಟ್ಟು; ಗೆಲ್=ಲೇಪಿಸು/ಬಳಿ;

ತಿಲಕವ ಗೆಲಿದು=ಹಣೆಗೆ ಬೊಟ್ಟನ್ನು ಇಟ್ಟುಕೊಂಡು;ಕಿಗ್ಗಟ್ಟು=ಕೆಳಗಿನ ಕಟ್ಟು/ಸೊಂಟದ ಎಡೆಯಲ್ಲಿ ಬಿಗಿದುಕಟ್ಟಿರುವ ಕಟ್ಟು; ಕಠಾರಿ=ಕಿರುಗತ್ತಿ/ಚೂರಿ/ಬಾಕು; ಗೊಂಡೆಯ=ಒಂದು ಬಗೆಯ ಒಡವೆ; ಮೆರೆ=ಅಲಂಕರಿಸು/ಎದ್ದುತೋರು; ಗಂಡು+ಅಂದವನು; ಅಂದ=ರೀತಿ; ಗಂಡಂದ=ಗಂಡಸಿನ ಉಡುಗೆತೊಡುಗೆಯನ್ನು; ಕೈಕೊಂಡ=ಹಾಕಿಕೊಂಡನು;

ಕಿಗ್ಗಟ್ಟಿನ ಕಠಾರಿಯ ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ=ಸೊಂಟದ ಕಟ್ಟಿನಲ್ಲಿ ಕಿರುಗತ್ತಿಯನ್ನು ಇಟ್ಟುಕೊಂಡು, ಹೊಳೆಯುತ್ತಿರುವ ಒಡವೆಯನ್ನಿಟ್ಟುಕೊಂಡು ಕಂಗೊಳಿಸುತ್ತ ಬ್ರಹನ್ನಳೆಯಾಗಿದ್ದ ಅರ್‍ಜುನನು ಈಗ ಗಂಡಸಿನ ಉಡುಗೆತೊಡುಗೆಗಳನ್ನು ತೊಟ್ಟುಕೊಂಡು ಕಾಳೆಗದ ಕಣಕ್ಕೆ ಅಡಿಯಿಡಲು ಅಣಿಯಾದನು;

ತೇರ ತೆಗೆದನು=ಅರ್‍ಜುನನು ತನ್ನ ಮೊದಲಿನ ತೇರನ್ನು ಅಣಿಗೊಳಿಸಿದನು; ಮುನ್ನಿನ=ಮೊದಲಿನ; ವಾರುವ=ಕುದುರೆ; ಹೂಡು=ಕಟ್ಟು;

ತನ್ನ ಮುನ್ನಿನ ವಾರುವಂಗಳ ಹೂಡಿದನು=ಅರ್‍ಜುನನು ತಾನು ಮೊದಲು ಆಯ್ಕೆ ಮಾಡಿದ್ದ ಕುದುರೆಗಳನ್ನು ತೇರಿಗೆ ಕಟ್ಟಿದನು; ಕಪಿವೀರ=ಆಂಜನೇಯ; ಧ್ವಜ+ಅಗ್ರದಲಿ; ಧ್ವಜ=ಬಾವುಟ; ಅಗ್ರ=ತುದಿ/ಮೇಲುಗಡೆ; ಮಂಡಿಸು=ಕುಳಿತುಕೊಳ್ಳು;

 ಕಪಿವೀರ ನೆನೆಯಲು ಬಂದು ಧ್ವಜಾಗ್ರದಲಿ ಮಂಡಿಸಿದನು=ಆಂಜನೇಯನನ್ನು ನೆನೆಪಿಸಿಕೊಂಡ ಕೂಡಲೇ ಬಂದು ಅರ್‍ಜುನನ ತೇರಿನ ಬಾವುಟದ ನೆಲೆಯಲ್ಲಿ ಕುಳಿತನು; ಚಾರು=ಉತ್ತಮವಾದ; ಸೀಸಕ=ತಲೆಗೆ ತೊಡುವ ಲೋಹದ ಕವಚ; ಜೋಡು=ಜೊತೆ/ಎರಡು; ಕುಲಿಶ=ವಜ್ರ; ಸಾರ=ಶಕ್ತಿಯುತವಾದ;

ಚಾರು ಸೀಸಕ ಜೋಡು ಕುಲಿಶದ ಸಾರ ಕವಚವ ಬಿಗಿದು=ತಲೆಗೆ ಉತ್ತಮವಾದ ಲೋಹದ ಟೊಪ್ಪಿಗೆಯನ್ನು ಇಟ್ಟುಕೊಂಡು ಮತ್ತು ಎದೆಯ ಬಾಗಕ್ಕೆ ವಜ್ರದಂತೆ ಗಟ್ಟಿಯಾದ ಎರಡು ಕವಚಗಳನ್ನು ಬಿಗಿದುಕೊಂಡು; ಬೊಬ್ಬೆ=ಅಬ್ಬರದ ದನಿ; ಭಾರವಣೆ=ಆಟಾಟೋಪ; ಮಿಗೆ=ಹೆಚ್ಚಾಗಲು;

ಬೊಬ್ಬೆಯ ಭಾರವಣೆ ಮಿಗೆ=ದೊಡ್ಡದನಿಯಲ್ಲಿ ಅಬ್ಬರಿಸುತ್ತ; ತಿರುವನು+ಏರಿಸಿದ; ತಿರು=ಬಿಲ್ಲಿನ ಹಗ್ಗ; ಧನು=ಬಿಲ್ಲು;

ತಿರುವನೇರಿಸಿದ ಧನುವ ಕೊಂಡನು=ಹಗ್ಗವನ್ನು ಬಿಗಿದುಕಟ್ಟಿ ಸಿದ್ದಗೊಂಡಿರುವ ಬಿಲ್ಲನ್ನು ಕಯ್ಗೆ ತೆಗೆದುಕೊಂಡನು;

ರಾಯ ಧರ‍್ಮಜ ಬಾಳುಗೆ ಎನುತ=ರಾಜ ದರ‍್ಮರಾಯನು ಬಾಳಲಿ ಎನ್ನುತ್ತ;

ನಿಜ+ಆಯುಧದ; ನಿಜ=ತನ್ನ;

ಆಯುಧದ ಗುರುವಿಂಗೆ=ಆಯುದಗಳನ್ನು ಬಳಸಿ ಕಾಳೆಗದ ಕಣದಲ್ಲಿ ಹೋರಾಡುವ ವಿದ್ಯೆಯನ್ನು ಕಲಿಸಿದ ಗುರುವಾದ ದ್ರೋಣಾಚರ‍್ಯರಿಗೆ;

ಎರಗು=ನಮಿಸು;

ನಿಜಾಯುಧದ ಗುರುವಿಂಗೆ ಎರಗಿ=ಗುರು ದ್ರೋಣಾಚರ‍್ಯರಿಗೆ ಮನದಲ್ಲಿಯೇ ನಮಸ್ಕರಿಸಿ;

ಸುರರಾಯ=ದೇವತೆಗಳ ಒಡೆಯನಾದ ದೇವೇಂದ್ರ; ನಂದನ=ಮಗ; ಸುರರಾಯ ನಂದನ=ದೇವೇಂದ್ರನ ಮಗನಾದ ಅರ‍್ಜುನ; ಒಲವು=ಪ್ರೀತಿ/ಉತ್ಸಾಹ; ಗಾಂಡಿವ=ಅರ್‍ಜುನನ ಬಿಲ್ಲಿನ ಹೆಸರು; ಜೇವಡೆ=ಬಿಲ್ಲಿನ ಹೆದೆಯನ್ನು ಎಳೆದು ಜೇಂಕಾರದ ದನಿಯನ್ನು ಮಾಡುವುದು;

ಸುರರಾಯ ನಂದನನು ಒಲವಿನಲಿ ಗಾಂಡಿವವ ಜೇವಡಿಸಿ=ಅರ್‍ಜುನನು ಅತ್ಯಂತ ಉತ್ಸಾಹದಿಂದ ಗಾಂಡೀವದ ಹೆದೆಯನ್ನು ಎಳೆದು ಜೇಂಕಾರದ ದನಿಯನ್ನು ಮಾಡುತ್ತ;

ರಾಯ=ರಾಜ; ಕುವರ=ಮಗ; ರಾಯಕುವರ=ವಿರಾಟರಾಯನ ಮಗನಾದ ಉತ್ತರಕುಮಾರ; ಸೂತತನ=ಸಾರತಿಯಾಗಿ ತೇರನ್ನು ಮುನ್ನಡೆಸುವ ಕಸುವು; ವಿಡಾಯಿ=ಶಕ್ತಿ/ಉನ್ನತಿ/ಹಿರಿಮೆ; ಅರಿ=ತಿಳಿ;

ರಾಯ ಕುವರನ ಸೂತತನದ ವಿಡಾಯಿಯ ಅರಿಯಲು ಬಹುದು ಎನುತ=ಉತ್ತರಕುಮಾರನ ಸಾರತ್ಯದ ಕಸುವು ಮತ್ತು ಕುಶಲತೆಯನ್ನು ಈಗ ಕಾಳೆಗದ ರಂಗದಲ್ಲಿ ತಿಳಿಯಬಹುದು ಎಂದು ಉತ್ತರಕುಮಾರನನ್ನು ಉತ್ತೇಜಿಸುತ್ತ;

ಸಮರ+ಆಯತ+ಅಸ್ತ್ರನು; ಸಮರ=ಕಾಳೆಗ; ಆಯತ=ಸನ್ನದ್ದ/ಸಿದ್ದ/ಸಜ್ಜು; ಸಮರಾಯತಾಸ್ತ್ರನು=ಕಾಳೆಗದಲ್ಲಿ ಹೋರಾಡಲೆಂದು ಆಯುದಗಳಿಂದ ಸಜ್ಜುಗೊಂಡಿರುವ ವ್ಯಕ್ತಿ; ಪರಬಲ=ಹಗೆಯ ಸೇನಾಪಡೆ; ಮೈದೋರು=ಕಾಣಿಸಿಕೊ;

ಸಮರಾಯತಾಸ್ತ್ರನು ಪರ‍್ಥ ಪರಬಲಕೆ ಮೈದೋರಿದನು=ಕಾಳೆಗದ ಕಣದಲ್ಲಿ ಹೋರಾಡಲು ಆಯುದವನ್ನು ಹಿಡಿದು ಸಜ್ಜಾಗಿರುವ ಅರ್‍ಜುನನು ಹಗೆಯ ಸೇನೆಯ ಮುಂದೆ ಕಾಣಿಸಿಕೊಂಡನು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks