ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 6
*** ಉತ್ತರಕುಮಾರನ ಪ್ರಸಂಗ: ನೋಟ – 6 ***
(ಸಡಿಲ ಬಿಡೆ ವಾಘೆಯನು, ಒಡನೊಡನೆ ವೇಗಾಯ್ಲ ತೇಜಿಗಳು ಚಿಮ್ಮಿದವು. ಒಡೆದುದು ಇಳೆಯೆನೆ ಗಜರು ಮಿಗೆ ಗರ್ಜಿಸಿದವು. ಅಳ್ಳಿರಿದು ಕುಡಿ ನೊರೆಯ ಕಟವಾಯ ಲೋಳೆಯೊಳು ಒಡಲ ಸಂಚದ ನುಡಿಯ ಘುಡುಘುಡು ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು.)
ಉತ್ತರ ಕುಮಾರ: ಅಲ್ಲಿ ಆರು ಕೌರವನು…ಭೀಷ್ಮನು ಅದಾರು…ಕೃಪನು ಆವವನು…ದ್ರೋಣನು ಅದಾರು…ಅಶ್ವತ್ಥಾಮನು ಎಂಬವನು ಆವನು…ಕರ್ಣನು ಅದಾರು…ಬಳದೊಳಗೆ ನಾ ಕಂಡರಿಯೆನು. ವೀರ, ಇಲ್ಲಿ ಎನಗೆ ತಿಳುಹು.
(ಎನಲು ವೈರಿದಲ್ಲಣ ಪಾರ್ಥ ನಗುತ ಉತ್ತರನೊಳು ಇಂತು ಎಂದ.)
ಅರ್ಜುನ: ಉದಯದ ಅರುಣನ ಕರುವ ಹಿಡಿದ ಅಂದದಲಿ ವರ್ಣಚ್ಛವಿಯಲು ಒಪ್ಪುವ ಕುದುರೆಗಳ…ತಳತಳಸಿ ಬೆಳಗುವ ಕೊಡನ ಹಳವಿಗೆಯ ಗದಗದಿಪ ಮಣಿಮಯದ ತೇರಿನ… ಕದನ ಕೋಳಾಹಲನು ಗರುಡಿಯ ಸದನ ಸರ್ವಜ್ಞನನು ನೋಡೈ… ಅವನು ದ್ರೋಣನು; ನವರತುನ ಕೇವಣದ ರಥ… ಅತಿಜವದ ತೇಜಿಯ ತೆಕ್ಕೆಗಳ… ರೌರವದ ರೌದ್ರಾಯುಧದ ಗಡಣದ… ಹರಿಯ ಹಳವಿಗೆಯ ಬವರ ಭೈರವನಾತನು… ಅತಿ ಬಲ ಶಿವನ ನೊಸಲ ಅಂದದಲಿ ಮೆರೆವವನು ನೋಡು… ಇವನು ಜಿತಸಂಗ್ರಾಮನು ಅಶ್ವತ್ಥಾಮ; ಖುರದಲಿ ಅವನಿಯ ಹೊಯ್ದು ಲಹರಿಯಲಿ ಉರಿ ಮಸಗಲು ಉಬ್ಬೆದ್ದ ತೇಜಿಯ ಮೆರೆವ… ಮುಕ್ತಾವಳಿಯ ತೇರಿನ… ನವವಿಳಾಸದಲಿ ಸರಳ ತಿರುಹುತ ನಿಂದು ಧನುವನು ನಿರುತವನು ನೆರೆ ನೋಡಿ ತಾ ಝೇಂಕರಿಸುವವನು ನೋಡು… ಅತಿಬಲ ಕೃಪಾಚಾರಿಯನು; ಲಲಿತ ರತ್ನಪ್ರಭೆಯ ತೇರಿನಲಿ ಉಲಿವ ಹುವಿಧ ವಾದ್ಯ ರಭಸದ ಕಳಕಳದ ಕಡುದರ್ಪದಿಂದ ಅಳ್ಳಿರಿವ ತೇಜಿಗಳ… ಲಳಿಯ ಲಹರಿಯ ಲಗ್ಗೆಗಳ ಮೋಹಳಿಸಿ… ಬಿಲು ಝೇಂಕಾರ ರವದಿಂದ ಉಲಿವವನು… ಅತುಳ ಪರಾಕ್ರಮಾನಲನು ಕಲಿಕರ್ಣನು; ಬಹಳ ಬಲದ ಒತ್ತೊತ್ತೆಯಲಿ ಹೂಡಿದ ಬಿಳಿಯ ತೇಜಿಗಳ… ತೆತ್ತಿಸಿದ ಹೊಂದಾಳ ಸಿಂಧದ ಸತ್ತಿಗೆಯ ಸಾಲಿನಲಿ… ರಿಪುಕುಲ ಮೃತ್ಯುವಾತನು ನೋಡು… ಅತ್ತಲೈದನೆ…ನಮ್ಮ ಉಭಯ ರಾಯರ ಮುತ್ತಯನು ತಾನು ಎನಿಸಿ ವೀರ ಗಂಗಾಸುತನು; ಅಗಿವ ಹಾವಿನ ಹಳವಿಗೆಯ… ಮಿಗೆ ನೆಗಹಿ ಮುಸುಕಿದ ಝಲ್ಲರಿಯ ಜೋಡಿಗಳ… ತುಡುಕುವ ತಂಬಟಂಗಳ… ಮೊರೆವ ಚಂಬಕದ… ನೆಗಹಿ ನಿಗುರುವ ಟಕ್ಕೆಯದ… ಮದವೊಗುವ ಕರಿಗಳ ಮಧ್ಯದಲಿ ಜೂಜಿನ ಜಾಣನು ಅವನು… ತಾನು ಅಗಡು ದುರಿಯೋಧನನು; ಅವನ ಬಲವಂಕದಲಿ ನಿಂದವನು… ಅವನು ಭೂರಿಶ್ರವನು; ಮತ್ತೆ ಆ ಭುವನಪತಿಯ ಎಡವಂಕದಲಿ ನಿಂದವ… ಜಯದ್ರಥನು; ತವತವಗೆ ಬಲುಗೈಗಳು ಎನಿಸುವ ಶಿವನ ನೊಸಲ ಅಂದದಲಿ ಮೆರೆವವರು ನೋಡು… ಅವನಿಪಾಲಕನ ಅನುಜರನು; ಹೊಗಳಲು ಅನುಪಮ ಈ ಸೈನ್ಯವು ಇಂತು ಇದು ಅಂಧಾಸುರನ ಸೇನೆಗೆ ದ್ವಿಗುಣವು… ರಾವಣನ ಮೋಹರಕೆ ಇದು ತ್ರಿಗುಣವು.
(ಎನುತ ಫಲುಗುಣನು ಹಗೆಯ ಭುಜದ ಅಗ್ಗಳಿಕೆಯನು ಹೊಗಳಲು ನಾಲಗೆ ದಣಿಯೆ ಕೈವಾರಿಸುತ, ಗಾಂಡಿವವ ಝೇವಡೆದು ಮಿಗೆ ನಿಗುರಿಚಿದನು. ಉತ್ತರನು “ಅರರೆ, ಪೂತುರೆ ಹಯ” ಎನುತೆ ಚಪ್ಪರಿಸಲೊಡೆ ನಿಗುರಿದವು… ಖುರಪುಟದಲಿ ಆಕಾಶ ಭಿತ್ತಿಯ ಬರೆವವೋಲ್… ಸೂರಿಯನ ತುರಗವ ಕರೆವವೋಲ್ ಕೈಗಟ್ಟಿ ಆಹವಕೆ ದುವ್ವಾಳಿಸುವಡೆ… ಕೆಂದೂಳು ಇರದೆ ನಭಕೆ ಉಪ್ಪರಿಸಿ ರವಿ ಮಂಡಲವನು ಅಂಡಲೆಯೆ, ತುರಗ ಗರ್ಜನೆ… ರಥದ ಚೀತ್ಕøತಿ… ವರ ಧನುಷ್ಟಂಕಾರ… ಕಪಿಯ ಅಬ್ಬರಣೆ… ಪಾರ್ಥನ ಬೊಬ್ಬೆ… ನಿಷ್ಠುರ ದೇವದತ್ತ ರವ… . ಅರರೆ, ಹೊದರೆದ್ದವು. ಗಿರಿವ್ರಜ ಬಿರಿಯೆ… ಜಲನಿಧಿ ಜರಿಯೆ… ತಾರಕಿ ಸುರಿಯೆ… ಸುರಕುಲ ಸರಿಯೆ… ಭೀತಿಯಲಿ ಅಹಿತ ಬಲ ಹರಿಯೆ… ಶಿರವ ಸಿಡಿಲು ಎರಗಿದವೊಲು ಉತ್ತರ ಮೂರ್ಛೆಯಲಿ ತಿರುಗಿ ಬಿದ್ದನು. ಹೊಡೆ ಮರಳಿದವು… ಕಣ್ಣಾಲಿ ಅರುಣ ವಾರಿಗಳ ಕಾರಿದವು… ಹೊರಳುತ ಇರಲು… )
ಅರ್ಜುನ:ಎಲೆ ಪಾಪಿ ಸೈರಿಸಲು ಅರಿಯನು… ಇನ್ನೇನು…
(ಎನುತ ಫಲುಗುಣ ರಥದೊಳಗೆ ಕುಳ್ಳಿರಿಸಿದನು… ಸೆರಗಿನಲಿ ಬೀಸಿದನು.)
ಏನು ಮತ್ಸ್ಯಕುಮಾರ, ಬವಣಿ ಇದೇನು ನಿನಗೆ?
ಉತ್ತರ ಕುಮಾರ:ಜಗದ ಅವಸಾನದ ಅಂದದಿ ಸಿಡಿಲು ಸುಳಿದುದು. ಎನ್ನ ಒಡಲು ಬಿರಿದುದು. ನಿನ್ನ ಬಹಳ ಧ್ವಾನವನು
ಆನಲಾಪನೆ. ಸಾಕು ಎನ್ನ ಕಳುಹು. ಮಹಾ ನಿನಾದವ ಮಾಣು ಮಾಣು.
ಅರ್ಜುನ:ಖೇಡನಾಗದಿರು. ಅದುಭುತ ಧ್ವನಿ ಮಾಡೆನು. ಅಂಜದಿರು. ಧೃತಿ ಮಾಡಿಕೊಂಡು ಈ ರಥವ ಜೋಡಿಸು.
(ಎಂದು ಸಮಾಧಾನ ಮಾಡಿ, ಉತ್ತರ ಕುಮಾರನ ಮನದಲ್ಲಿ ಧೈರ್ಯವನ್ನು ತುಂಬಿ, ಅವನನ್ನು ಸಾರಥಿಯನ್ನಾಗಿ ಮಾಡಿಕೊಂಡು ರಣರಂಗಕ್ಕೆ ತೆರಳಿದ ಅರ್ಜುನನು ಕಾಳೆಗದ ಕಣದಲ್ಲಿ ಹೋರಾಡಿ ದುರ್ಯೋಧನನ ಸೇನೆಯು ಸೆರೆ ಹಿಡಿದಿಟ್ಟುಕೊಂಡಿದ್ದ ಗೋವುಗಳನ್ನು ಬಿಡಿಸಿ, ವಿರಾಟ ನಗರಿಯತ್ತ ಗೋವುಗಳನ್ನು ಸುರಕ್ಷಿತವಾಗಿ ಅಟ್ಟಿ, ನಂತರ ಮತ್ತೆ ಕಾಳೆಗವನ್ನು ಮುಂದುವರಿಸಿ ಕೌರವ ಸೇನೆಯಲ್ಲಿದ್ದ ಎಲ್ಲಾ ವೀರರನ್ನು ಸದೆಬಡಿದು ವಿಜಯಶಾಲಿಯಾಗುತ್ತಾನೆ. ಕಾಳೆಗದ ಕಣದಲ್ಲಿ ನಡೆದ ದುರ್ಯೋಧನನ ಚತುರಂಗ ಬಲ ಮತ್ತು ಅರ್ಜುನನ ನಡುವೆ ನಡೆದ ಹೋರಾಟವನ್ನು ವಿರಾಟಪರ್ವದ ಏಳನೆಯ ಸಂಧಿಯ 52 ಪದ್ಯಗಳಲ್ಲಿ ಮತ್ತು ಎಂಟನೆಯ ಸಂದಿಯ 93 ಪದ್ಯಗಳಲ್ಲಿ ವಿವರಿಸಲಾಗಿದೆ…
ಅಖಿಳ ಕೌರವಜಾಲ ದುಗುಡದಲಿ ಗಜಪುರಕೆ ನಡೆತಂದು ಭಂಗದಲಿ ತಿರುಗಿತು. ಅಖಿಲ ನೃಪರು ಮೇಲು ಮುಸುಕಿನ ಮೊಗದ, ವಾದ್ಯದ ಮೇಳ ಮೋನದಲಿ, ಹೊತ್ತ ದುಗುಡದಲಿ ನಿಜಾಲಯಂಗಳ ಬಂದು ಹೊಕ್ಕರು. ಬಳಿಕ ಫಲುಗುಣನು ಅತ್ತಲಾ ಮರದೊಳಗೆ ಕೈದುವನಿರಿಸಿ, ಮುನ್ನಿನ ಹುಲುರಥವ ಮೇಳೈಸಿ ಸಾರಥಿತನವನು ಅಳವಡಿಸೆ, ಕಪಿ ಕುಲಲಲಾಮನು ಇಳಿದು ಪಾರ್ಥನ ಮೈದಡವಿ ವನಕೆ ಹಾಯ್ದನು. ಫಲುಗುಣನು ಹೊಳಲ ಹೊರೆಯಲಿ ನಿಂದು ನಗುತ ಉತ್ತರನೊಳು ಇಂತು ಎಂದ.)
ಪಾರ್ಥ:ಕರೆದು ದೂತರಿಗೆ ಅರುಹು. ನೀನೇ ಧುರವ ಜಯಿಸಿದೆನು ಎನ್ನು. ನಾವು ಇದ್ದ ಇರವನು ಅರುಹದಿರು. ಇಂದು ನಿನ್ನ ವಿಕ್ರಮವ ಪಸರಿಸು. ಅರಸ ನಿನ್ನನೆ ಮನ್ನಿಸಲಿ. ಪುರ ಪರಿಜನಂಗಳು ನಿನ್ನ ವಿಜಯದ ಹರುಷದಲಿ ಹೆಚ್ಚಿರಲಿ. ನೇಮಿಸಿದಂತೆ ಮಾಡು. (ಎನಲು…)
ಉತ್ತರ ಕುಮಾರ:ಕರ ಲೇಸು. ನೀನೇ ಬಲ್ಲೆ.
(ಎನುತ ದೂತರ ಕರೆದು)
ಜನಕನಲ್ಲಿಗೆ ಪೋಗಿ “ಮತ್ಸ್ಯ ತನಯ ಕೌರವ ಬಲವ ಜಯಿಸಿದನು” ಎಂದು ಪೇಳುವುದು.
(ಎಂದು ಆತನು ನಿಯಾಮಿಸುತಿರ್ದನು)
ಪದ ವಿಂಗಡಣೆ ಮತ್ತು ತಿರುಳು
ವಾಘೆ=ಲಗಾಮು; ಒಡನೆ+ಒಡನೆ; ಒಡನೊಡನೆ=ಕೂಡಲೇ/ಜತೆಜತೆಯಲ್ಲಿಯೇ; ವೇಗಾಯ್ಲ=ಅತಿವೇಗದ; ತೇಜಿ-ಕುದುರೆ; ಚಿಮ್ಮು=ನೆಗೆ/ಹಾರು;
ಸಡಿಲ ಬಿಡೆ ವಾಘೆಯನು, ಒಡನೊಡನೆ ವೇಗಾಯ್ಲ ತೇಜಿಗಳು ಚಿಮ್ಮಿದವು=ತೇರಿನ ಸಾರತಿಯಾಗಿದ್ದ ಉತ್ತರಕುಮಾರನು ಬಿಗಿಯಾಗಿ ಹಿಡಿದುಕೊಂಡಿದ್ದ ಕುದುರೆಗಳ ಲಗಾಮಿನ ಹಗ್ಗವನ್ನು ಸಡಿಲುಸುತ್ತಿದ್ದಂತೆಯೇ ಅತಿವೇಗದಿಂದ ಓಡಬಲ್ಲ ಕುದುರೆಗಳು ಮುನ್ನುಗ್ಗಿದವು; ಒಡೆ=ಸೀಳು/ಬಿರಿ; ಇಳೆ+ಎನೆ; ಇಳೆ=ಬೂಮಿ; ಎನೆ=ಎನ್ನುವಂತೆ; ಗಜರು=ಗದ್ದಲ/ಅಬ್ಬರ; ಮಿಗೆ=ಹೆಚ್ಚಾಗಲು; ಗರ್ಜಿಸು=ದೊಡ್ಡದನಿಯಲ್ಲಿ ಕೂಗುವುದು;
ಒಡೆದುದು ಇಳೆಯೆನೆ ಗಜರು ಮಿಗೆ ಗರ್ಜಿಸಿದವು=ಬೂಮಂಡಲವೇ ಸಿಡಿಯಿತೇನೋ ಎನ್ನುವಂತೆ ದೊಡ್ಡದನಿಯಲ್ಲಿ ಕೆನೆದವು; ಅಳ್ಳಿರಿ=ಅಬ್ಬರಿಸು/ದೊಡ್ಡದಾಗಿ ದನಿಮಾಡು; ಕುಡಿ=ತುದಿ/ಕೊನೆ; ನೊರೆ=ನೀರಿನ ಬೆಳ್ಳನೆಯ ಕಣಗಳು; ಕಟವಾಯಿ=ಬಾಯಿಯ ಕೊನೆ; ಲೋಳೆ=ಜೊಲ್ಲು;
ಅಳ್ಳಿರಿದು ಕುಡಿ ನೊರೆಯ ಕಟವಾಯ ಲೋಳೆಯೊಳು=ಅಬ್ಬರದ ದನಿಯೊಡನೆ ಕೆನೆಯುತ್ತ ಮುನ್ನುಗ್ಗುತ್ತಿರುವ ಕುದುರೆಗಳ ಕಟಬಾಯಿಂದ ಬೆಳ್ಳನೆಯ ನೊರೆಯ ಜೊಲ್ಲು ಸುರಿಯುತ್ತಿರಲು; ಒಡಲು=ದೇಹ; ಸಂಚ=ಕೂಟ/ಸಂಪರ್ಕ; ನುಡಿ=ದನಿ; ಘುಡುಘುಡು=ಅಬ್ಬರವನ್ನು ಸೂಚಿಸುವ ಅನುಕರಣ ಪದ; ಘುಡಿಪ=ದೊಡ್ಡ ದನಿಯ; ನಾಸಾಪುಟ=ಮೂಗಿನ ಹೊಳ್ಳೆ; ಹುಂಕೃತಿ=ಹುಂಕಾರ; ಮಸಗು=ಹೊರಹೊಮ್ಮು; ಮುಂಚು=ಮುನ್ನುಗ್ಗು;
ಒಡಲ ಸಂಚದ ನುಡಿಯ ಘುಡುಘುಡು ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು=ದೊಡ್ಡ ದನಿಯೊಡನೆ ಕೆನೆಯುತ್ತ ಮುನ್ನುಗ್ಗುತ್ತಿರುವ ಕುದುರೆಗಳ ಮೂಗಿನ ಹೊಳ್ಳೆಗಳಿಂದ ಉಸಿರಿನ ಹುಂಕಾರವು ಹೊರಹೊಮ್ಮುತ್ತಿತ್ತು;
ಅಲ್ಲಿ ಆರು ಕೌರವನು=ತನ್ನ ಎದುರು ಹೋರಾಡಲು ಸಜ್ಜಾಗಿ ನಿಂತಿರುವ ದುರ್‍ಯೋದನನ ಸೇನೆಯನ್ನು ನೋಡಿ ಸಾರತಿಯಾದ ಉತ್ತರಕುಮಾರನು ಅರ್‍ಜುನನ್ನು ಕೇಳುತ್ತಾನೆ. ಅಲ್ಲಿರುವವರಲ್ಲಿ ದುರ್‍ಯೋದನನು ಯಾರು;
ಅದು+ಆರು;
ಭೀಷ್ಮನು ಅದಾರು=ಬೀಶ್ಮನು ಯಾರು;
ಆವ+ಅವನು;
ಕೃಪನು ಆವವನು=ಕ್ರುಪನೆಂಬುವನು ಯಾರು;
ದ್ರೋಣನು ಅದಾರು=ದ್ರೋಣನು ಯಾರು;
ಅಶ್ವತ್ಥಾಮನು ಎಂಬವನು ಆವನು=ಅಶ್ವತ್ತಾಮನೆಂಬುವನು ಯಾರು;
ಕರ್ಣನು ಅದಾರು=ಕರ್‍ಣನು ಯಾರು;
ಬಳದ+ಒಳಗೆ; ಬಳ=ಸೇನೆ/ಪಡೆ; ಕಂಡು+ಅರಿಯೆನು;
ಬಳದೊಳಗೆ ನಾ ಕಂಡರಿಯೆನು=ದುರ್‍ಯೋದನನ ಸೇನೆಯಲ್ಲಿರುವವರ ಬಗ್ಗೆ ನನಗೇನು ಗೊತ್ತಿಲ್ಲ;
ವೀರ, ಇಲ್ಲಿ ಎನಗೆ ತಿಳುಹು ಎನಲು=ವೀರನಾದ ಅರ್‍ಜುನನೆ, ಈಗ ಅವರೆಲ್ಲರ ಬಗ್ಗೆ ನನಗೆ ವಿವರವಾಗಿ ಹೇಳು ಎಂದು ಉತ್ತರಕುಮಾರನು ಕೇಳಿಕೊಳ್ಳಲು;
ವೈರಿ+ತಲ್ಲಣ; ವೈರಿ=ಹಗೆ; ತಲ್ಲಣ=ಅಂಜಿಕೆ/ಸಂಕಟ; ವೈರಿದಲ್ಲಣ=ಹಗೆಗಳನ್ನು ಅಂಜಿಸುವವನು/ಸಂಕಟಕ್ಕೆ ಗುರಿಮಾಡುವವನು. ಅರ್‍ಜುನನ ವೀರತನವನ್ನು ಸೂಚಿಸುವ ಒಂದು ಬಿರುದು;
ವೈರಿದಲ್ಲಣ ಪಾರ್ಥ ನಗುತ ಉತ್ತರನೊಳು ಇಂತು ಎಂದ=ಹಗೆಗಳ ಎದೆ ನಡುಗಿಸುವ ಅರ್‍ಜುನನು ನಗುತ್ತ ಉತ್ತರಕುಮಾರನಿಗೆ ಈ ರೀತಿ ವಿವರಿಸಿದ;
ಉದಯ=ಹುಟ್ಟು; ಅರುಣ=ಕೆಂಪು ಬಣ್ಣ/ಕಿರಣ/ಸೂರ್‍ಯ; ಕರು=ಪಡಿಯಚ್ಚು; ಅಂದ=ರೀತಿ; ವರ್ಣ+ಛವಿ; ವರ್ಣ=ಬಣ್ಣ; ಛವಿ=ಕಾಂತಿ; ಒಪ್ಪುವ=ಕಂಗೊಳಿಸುವ;
ಉದಯದ ಅರುಣನ ಕರುವ ಹಿಡಿದ ಅಂದದಲಿ ವರ್ಣಚ್ಛವಿಯಲು ಒಪ್ಪುವ ಕುದುರೆಗಳ=ಮೂಡಲದಿಕ್ಕಿನಲ್ಲಿ ಮೂಡಿಬರುತ್ತಿರುವ ಎಳೆಯ ಸೂರ್‍ಯನ ಬಿಂಬವನ್ನೇ ಎರಕ ಹೊಯ್ದಿರುವ ರೀತಿಯಲ್ಲಿ ಬಣ್ಣಬಣ್ಣದ ಕಾಂತಿಯಿಂದ ಕಂಗೊಳಿಸುತ್ತಿರುವ ಕುದುರೆಗಳ;
ತಳತಳಿಸು=ಪ್ರಕಾಶಿಸು/ಹೆಚ್ಚಾಗಿ ಹೊಳೆ; ಹಳವಿಗೆ=ಬಾವುಟ; ಕೊಡ=ಕುಂಬ/ಗಡಿಗೆ; ಹಳವಿಗೆ=ಬಾವುಟ;
ಕೊಡನ ಹಳವಿಗೆ=ದ್ರೋಣಾಚಾರ್‍ಯನ ತೇರಿನ ಮೇಲೆ ಕಟ್ಟಿದ್ದ ಬಾವುಟದಲ್ಲಿ ಕೊಡದ ಚಿತ್ರವಿದೆ. ದ್ರೋಣಾಚಾರ್‍ಯನಿಗೆ ‘ಕುಂಬದ್ವಜ’ ಎಂಬ ಹೆಸರಿದೆ;
ಗದಗದಿಸು=ಅಲ್ಲಾಡು/ಕಂಪಿಸು; ಮಣಿ=ರತ್ನ; ಮಯ=ತುಂಬಿದ/ಕೂಡಿದ;
ತಳತಳಸಿ ಬೆಳಗುವ ಕೊಡನ ಹಳವಿಗೆಯ ಗದಗದಿಪ ಮಣಿಮಯದ ತೇರಿನ=ಪ್ರಕಾಶಮಾನವಾಗಿ ಬೆಳಗುತ್ತ ಹಾರಾಡುತ್ತಿರುವ ಕೊಡದ ಲಾಂಚನವುಳ್ಳ ಬಾವುಟದಿಂದ ಕೂಡಿದ ರತ್ನಮಯವಾದ ತೇರಿನ; ಕದನ=ಯುದ್ದ; ಕೋಳಾಹಲ=ಗಲಾಟೆ/ಬೊಬ್ಬೆ; ಕದನ ಕೋಳಾಹಲ=ಇದು ಒಂದು ನುಡಿಗಟ್ಟು. ಯುದ್ದದಲ್ಲಿ ಹಗೆಗಳನ್ನು ಸದೆಬಡಿಯುವ ವೀರ ಎಂಬ ತಿರುಳಿನ ಒಂದು ಬಿರುದು; ಗರುಡಿ=ಮಲ್ಲಶಾಲೆ; ಸದನ=ಮನೆ; ಸರ್ವಜ್ಞ=ಎಲ್ಲವನ್ನು ಬಲ್ಲವನು; ನೋಡೈ=ನೋಡುವಂತಹವನಾಗು;
ಕದನ ಕೋಳಾಹಲನು ಗರುಡಿಯ ಸದನ ಸರ್ವಜ್ಞನನು ನೋಡೈ… ಅವನು ದ್ರೋಣನು=ಮಹಾಶೂರನೂ ಗರುಡಿಯ ಮನೆಯ ಗುರುವನ್ನು ನೋಡಲ್ಲಿ…ಅವನೇ ದ್ರೋಣಾಚಾರ್‍ಯ;
ನವರತುನ=ವಜ್ರ-ವೈಡೂರ್‍ಯ-ಗೋಮೇದಕ-ಪುಶ್ಯರಾಗ-ನೀಲ-ಮರಕತ-ಮಾಣಿಕ್ಯ-ಹವಳ-ಮುತ್ತು ಎಂಬ ಒಂಬತ್ತು ಬಗೆಯ ರತ್ನಗಳು; ಕೇವಣ=ಚಿನ್ನದಲ್ಲಿ ನವರತ್ನಗಳನ್ನು ಜೋಡಿಸುವುದು;
ನವರತುನ ಕೇವಣದ ರಥ=ಚಿನ್ನದ ಅಚ್ಚಿನಲ್ಲಿ ನವರತ್ನಗಳನ್ನು ಜೋಡಿಸಿರುವ ತೇರು; ಅತಿ=ಹೆಚ್ಚು; ಜವ=ವೇಗ; ತೇಜಿ=ಕುದುರೆ; ತೆಕ್ಕೆ=ದಂಡು/ಪಡೆ;
ಅತಿಜವದ ತೇಜಿಯ ತೆಕ್ಕೆಗಳ=ವೇಗವಾಗಿ ಓಡುವ ಕುದುರೆಗಳ ದಂಡಿನ; ರೌರವ=ಬಯಂಕರವಾದ;
ರೌದ್ರ+ಆಯುಧ; ರೌದ್ರ=ಬೀಕರವಾದ; ಗಡಣ=ಪಡೆ/ದಂಡು;
ರೌರವದ ರೌದ್ರಾಯುಧದ ಗಡಣದ=ಬಯಂಕರವಾದ ಆಯುದಗಳಿಂದ ಸಜ್ಜಾಗಿರುವ ಸೇನೆಯ; ಹರಿ=ಸಿಂಹ; ಹಳವಿಗೆ=ಬಾವುಟ; ಹರಿಯ ಹಳವಿಗೆ=ಸಿಂಹದ ಲಾಂಚನವುಳ್ಳ ಬಾವುಟ; ಬವರ=ಕಾಳೆಗ/ಯುದ್ದ; ಭೈರವ=ಶಿವನ ಮತ್ತೊಂದು ಹೆಸರು; ಬವರ ಭೈರವ=ವೀರತನವನ್ನು ಸೂಚಿಸುವ ನುಡಿಗಟ್ಟು.
ಹರಿಯ ಹಳವಿಗೆಯ ಬವರ ಭೈರವನು ಆತನು=ಸಿಂಹದ ಲಾಂಚನವುಳ್ಳ ಬಾವುಟದ ತೇರಿನಲ್ಲಿರುವ ಬವರ ಭೈರವನಾಗಿರುವ ಅವನು; ಅತಿಬಲ=ಹೆಚ್ಚಿನ ಕಸುವು; ನೊಸಲು=ಹಣೆ; ಅಂದ=ರೀತಿ;
ಅತಿಬಲ ಶಿವನ ನೊಸಲ ಅಂದದಲಿ ಮೆರೆವವನು ನೋಡು=ದೊಡ್ಡ ಕಸುವುಳ್ಳ ಶಿವನ ಹಣೆಗಣ್ಣಿನ ರೀತಿಯಲ್ಲಿ ಮೆರೆಯುತ್ತಿರುವವನನ್ನು ನೋಡು; ಜಿತ=ಗೆದ್ದಿರುವುದು/ಜಯಿಸಿರುವುದು; ಸಂಗ್ರಾಮ=ಕಾಳೆಗ; ಜಿತಸಂಗ್ರಾಮ=ವೀರತನವನ್ನು ಸೂಚಿಸುವ ನುಡಿಗಟ್ಟು. ಕಾಳೆಗದ ಕಣದಲ್ಲಿ ಹಗೆಗಳನ್ನು ಸದೆಬಡಿದು ಜಯವನ್ನು ಪಡೆದವನು;
ಇವನು ಜಿತಸಂಗ್ರಾಮನು ಅಶ್ವತ್ಥಾಮ=ಇವನು ಜಿತಸಂಗ್ರಾಮನಾದ ಅಶ್ವತ್ತಾಮ;
ಖುರ=ಕುದುರೆಯ ಕಾಲುಗಳ ಗೊರಸು/ಪಾದ; ಅವನಿ=ಬೂಮಿ; ಹೊಯ್=ಬಡಿ; ಲಹರಿ=ಅಲೆ/ತರಂಗ; ಉರಿ=ಬೆಂಕಿ; ಮಸಗು=ಹೊರಹೊಮ್ಮು/ಹೆಚ್ಚಾಗು; ಉರಿ ಮಸಗಲು=ಬೆಂಕಿಯ ಕಣಗಳಂತೆ ಕೆಂಪನೆಯ ದೂಳಿನ ಕಣಗಳು ಹೊರಹೊಮ್ಮುತ್ತಿರಲು; ಉಬ್ಬು+ಎದ್ದ; ಉಬ್ಬು=ಉಂಟಾಗು; ಉಬ್ಬೇಳು=ತಲೆದೋರು/ನೆಗೆದು ಮೇಲಕ್ಕೆ ಏಳು; ತೇಜಿ=ಕುದುರೆ; ಮೆರೆ=ಕಂಗೊಳಿಸು;
ಖುರದಲಿ ಅವನಿಯ ಹೊಯ್ದು ಲಹರಿಯಲಿ ಉರಿ ಮಸಗಲು ಉಬ್ಬೆದ್ದ ತೇಜಿಯ ಮೆರೆವ=ರಣರಂಗದಲ್ಲಿ ಮುನ್ನುಗ್ಗುತ್ತಿರುವ ಕುದುರೆಗಳ ಕಾಲ್ತುಳಿತದಿಂದ ಮೇಲೆದ್ದ ಕೆಂಪನೆಯ ದೂಳಿನ ಕಣಗಳಿಂದ ಕಂಗೊಳಿಸುತ್ತಿರುವ ಕುದುರೆಗಳ; ಮುಕ್ತಾವಳಿ=ಮುತ್ತಿನ ಸರ/ದಂಡೆ;
ಮುಕ್ತಾವಳಿಯ ತೇರಿನ=ಮುತ್ತಿನ ಸರಗಳಿಂದ ಸಿಂಗಾರಗೊಂಡಿರುವ ತೇರಿನ; ನವ=ಹೊಸ; ವಿಳಾಸ=ಒಯ್ಯಾರ/ಉಲ್ಲಾಸ; ಸರಳು=ಬಾಣ;
ನವವಿಳಾಸದಲಿ ಸರಳ ತಿರುಹುತ ನಿಂದು=ಹೊಸಬಗೆಯ ಉಲ್ಲಾಸದಿಂದ ಬಾಣವನ್ನು ತಿರುಗಿಸುತ್ತ ನಿಂತುಕೊಂಡಿರುವ; ಧನು=ಬಿಲ್ಲು; ನಿರುತ=ನಿಶ್ಚಯ; ನೆರೆ=ಚೆನ್ನಾಗಿ; ತಾ=ತಾನು; ಝೇಂಕರಿಸು=ಮೊರೆ/ದೊಡ್ಡದಾಗಿ ದನಿಯನ್ನು ಮಾಡುವುದು; ಅತಿಬಲ=ಮಹಾಶಕ್ತ;
ಧನುವನು ನಿರುತವನು ನೆರೆ ನೋಡಿ ತಾ ಝೇಂಕರಿಸುವವನು ನೋಡು… ಅತಿಬಲ ಕೃಪಾಚಾರಿಯನು=ತನ್ನ ಕಯ್ಯಲ್ಲಿರುವ ಬಿಲ್ಲನ್ನು ನಿಶ್ಚಯದ ಮನದಿಂದ ಅಂದರೆ ಹಗೆಗಳನ್ನು ಸದೆಬಡಿಯಬಲ್ಲೆನೆಂಬ ಆತ್ಮವಿಶ್ವಾಸದಿಂದ ನೋಡುತ್ತ ಅಬ್ಬರಿಸುತ್ತಿರುವ ವ್ಯಕ್ತಿಯನ್ನು ನೋಡು…ಅವನೇ ಕ್ರುಪಾಚಾರಿ;
ಲಲಿತ=ಮನೋಹರವಾದ; ಪ್ರಭೆ=ಕಿರಣ/ಪ್ರಕಾಶ; ಉಲಿ=ಶಬ್ದ/ದನಿ; ರಭಸ=ಬೊಬ್ಬೆ/ದೊಡ್ಡ ಶಬ್ದ;
ಲಲಿತ ರತ್ನಪ್ರಭೆಯ ತೇರಿನಲಿ ಉಲಿವ ಬಹುವಿಧ ವಾದ್ಯ ರಭಸದ=ಮನೋಹರವಾದ ರತ್ನಕಾಂತಿಯಿಂದ ಬೆಳಗುತ್ತಿರುವ ತೇರಿನಲ್ಲಿ ನುಡಿಸುತ್ತಿರುವ ಬಹುಬಗೆಯ ರಣ ವಾದ್ಯಗಳಿಂದ ಹೊರಹೊಮ್ಮುತ್ತಿರುವ ಬೊಬ್ಬೆಯ; ಕಳಕಳ=ಗಜಬಜಿಸು/ಬಹುಬಗೆಯ ದನಿಗಳು ಒಟ್ಟಾಗಿ ಕೇಳಿಬರುವುದು; ಕಡು=ಹೆಚ್ಚಿನ; ದರ್ಪ=ಸೊಕ್ಕು; ಅಳ್ಳಿರಿ=ಗರ್‍ಜಿಸು/ಕೆನೆಯುವುದು; ತೇಜಿ=ಕುದುರೆ;
ಕಳಕಳದ ಕಡುದರ್ಪದಿಂದ ಅಳ್ಳಿರಿವ ತೇಜಿಗಳ=ಕಲಕಲ ನಾದವನ್ನು ಮಾಡುತ್ತ ಕಡುಸೊಕ್ಕಿನಿಂದ ಕೆನೆಯುತ್ತಿರುವ ಕುದುರೆಗಳ; ಲಳಿ=ಕಾಂತಿ/ಪ್ರಕಾಶ; ಲಹರಿ=ಅಲೆ/ತರಂಗ; ಲಗ್ಗೆ=ಮುತ್ತಿಗೆ; ಮೋಹಳಿಸು=ಕಾಳೆಗಕ್ಕೆ ಸಜ್ಜಾಗು/ಅಣಿಯಾಗು;
ಲಳಿಯ ಲಹರಿಯ ಲಗ್ಗೆಗಳ ಮೋಹಳಿಸಿ=ಆಯುದಗಳ ಕಾಂತಿಯ ತರಂಗಗಳೇ ಮುತ್ತಿಗೆಯನ್ನು ಹಾಕುತ್ತಿರುವಂತೆ ಸೇನೆಯನ್ನು ಸಜ್ಜುಗೊಳಿಸಿ; ಬಿಲು=ಬಿಲ್ಲು; ಝೇಂಕಾರ=ಮೊರೆತ; ರವ=ಶಬ್ದ/ದನಿ; ಉಲಿ=ದನಿ; ಅತುಳ=ಎಣೆಯಿಲ್ಲದ/ಅಸಮಾನವಾದ; ಪರಾಕ್ರಮ+ಅನಲ; ಅನಲ=ಬೆಂಕಿ; ಪರಾಕ್ರಮಾನಲ=ವೀರತನವನ್ನು ಸೂಚಿಸುವ ಒಂದು ನುಡಿಗಟ್ಟು. ಪರಾಕ್ರಮವೆಂಬ ಬೆಂಕಿಯಿಂದ ಹಗೆಗಳನ್ನು ಸುಟ್ಟುನಾಶಮಾಡುವವನು ಎಂಬ ತಿರುಳನ್ನು ಒಳಗೊಂಡಿದೆ;
ಬಿಲು ಝೇಂಕಾರ ರವದಿಂದ ಉಲಿವವನು…ಅತುಳ ಪರಾಕ್ರಮಾನಲನು…ಕಲಿಕರ್ಣನು=ಬಿಲ್ಲಿನ ಹೆದೆಯನ್ನು ಮೀಂಟುತ್ತ ಜೇಂಕಾರನಾದವನ್ನು ಮಾಡುತ್ತಿರುವವನೇ…ಮಹಾ ಪರಾಕ್ರಮಿಯಾದ ಕಲಿಕರ್‍ಣ;
ಬಲ=ಶಕ್ತಿ; ಒತ್ತೊತ್ತೆ=ಒಂದರ ಪಕ್ಕ ಮತ್ತೊಂದು; ಹೂಡು=ಕುದುರೆಗಳನ್ನು ತೇರಿಗೆ ಕಟ್ಟುವುದು; ತೇಜಿ=ಕುದುರೆ;
ಹಳ ಬಲದ ಒತ್ತೊತ್ತೆಯಲಿ ಹೂಡಿದ ಬಿಳಿಯ ತೇಜಿಗಳ=ಒಂದರ ಪಕ್ಕದಲ್ಲಿ ಮತ್ತೊಂದನ್ನು ಜೋಡಿಸಿ ಕಟ್ಟಿರುವ ಹೆಚ್ಚಿನ ಕಸುವುಳ್ಳ ಬಿಳಿಯ ಕುದುರೆಗಳ; ತೆತ್ತಿಸು=ಜೋಡಿಸು/ಹೊಂದಿಸು; ಹೊನ್+ತಾಳ; ಹೊನ್=ಚಿನ್ನ; ತಾಳ=ಬುಡ; ಹೊಂದಾಳ=ಚಿನ್ನದ ಬುಡ ಅಂದರೆ ಚಿನ್ನದ ಹಿಡಿ; ಸಿಂಧ=ಬಾವುಟ; ಸತ್ತಿಗೆ=ಕೊಡೆ;
ತೆತ್ತಿಸಿದ ಹೊಂದಾಳ ಸಿಂಧದ ಸತ್ತಿಗೆಯ ಸಾಲಿನಲಿ=ಚಿನ್ನದ ಹಿಡಿಯನ್ನು ಹೊಂದಿರುವ ಬಾವುಟ ಮತ್ತು ಬೆಳ್ಗೊಡೆಯ ಸಾಲಿನಲ್ಲಿ; ರಿಪು=ಹಗೆ; ಕುಲ=ಗುಂಪು;
ರಿಪುಕುಲ ಮೃತ್ಯುವಾತನು ನೋಡು=ಹಗೆಗಳ ಪಡೆಗೆ ಸಾವನ್ನು ಉಂಟುಮಾಡುವವನನ್ನು ನೋಡು; ಅತ್ತಲು+ಐದನೆ;
ಅತ್ತಲೈದನೆ=ಅಲ್ಲಿರುವವನೇ;
ಉಭಯ=ಎರಡು; ರಾಯ=ರಾಜ; ಮುತ್ತಯ=ಅಜ್ಜ; ಗಂಗಾಸುತ=ಗಂಗಾದೇವಿ ಮತ್ತು ಶಂತನು ರಾಜನ ಮಗನಾದ ಬೀಶ್ಮ;
ನಮ್ಮ ಉಭಯ ರಾಯರ ಮುತ್ತಯನು ತಾನು ಎನಿಸಿ ವೀರ ಗಂಗಾಸುತನು=ನಮ್ಮ ಎರಡು ಕಡೆಯ ರಾಜರಿಗೆ ಅಂದರೆ ಪಾಂಡವರಾದ ನಮಗೆ ಮತ್ತು ದುರ್‍ಯೋದನನ ಕಡೆಯವರಿಗೆ ಅಜ್ಜನಾಗಿದ್ದು, ಮಹಾವೀರನೆಂದು ಕೀರ್ತಿವಂತನಾಗಿರುವ ಬೀಶ್ಮ;
ಅಗಿ=ತೊನೆದಾಡು/ಅತ್ತಿತ್ತ ಆಡುತ್ತಿರುವ ; ಹಳವಿಗೆ=ಬಾವುಟ; ಹಾವಿನ ಹಳವಿಗೆ=ಹಾವಿನ ಚಿತ್ರವು ದುರ್‍ಯೋದನನ ಬಾವುಟದ ಲಾಂಚನವಾಗಿತ್ತು;
ಅಗಿವ ಹಾವಿನ ಹಳವಿಗೆಯ=ತೊನೆದಾಡುತ್ತಿರುವ ಹಾವಿನ ಬಾವುಟದ; ಮಿಗೆ=ಹೆಚ್ಚಾಗಿ/ಚೆನ್ನಾಗಿ; ನೆಗಹು=ಮೇಲಕ್ಕೆ ಎತ್ತಿ ಹಿಡಿ; ಮುಸುಕು=ಆವರಿಸಿದ/ಹರಡಿಕೊಂಡಿರುವ; ಝಲ್ಲರಿ=ಕೊಡೆ/ಬೆಳ್ಗೊಡೆ/ವೀರರ ಲಾಂಚನವಾಗಿ ಕೊಡೆಗಳನ್ನು ಬಳಸಲಾಗುತ್ತಿತ್ತು; ಜೋಡಿ=ಗುಂಪು;
ಮಿಗೆ ನೆಗಹಿ ಮುಸುಕಿದ ಝಲ್ಲರಿಯ ಜೋಡಿಗಳ=ಬಹಳ ಚೆನ್ನಾಗಿ ಎಲ್ಲೆಡೆ ಎದ್ದುಕಾಣುತ್ತ ಹರಡಿಕೊಂಡಿರುವ ಬೆಳ್ಗೊಡೆಗಳ ಗುಂಪಿನ; ತುಡುಕು=ಕೆಲಸದಲ್ಲಿ ತೊಡಗು; ತಂಬಟ=ತಮಟೆ/ಹಲಗೆ/ಒಂದು ಬಗೆಯ ಚರ್‍ಮವಾದ್ಯ;
ತುಡುಕುವ ತಂಬಟಂಗಳ=ಬಡಿಯುತ್ತಿರುವ ತಮಟೆಗಳ; ಮೊರೆ=ದೊಡ್ಡದಾಗಿ ದನಿಮಾಡುವುದು; ಚಂಬಕ=ಒಂದು ಬಗೆಯ ಚರ್‍ಮವಾದ್ಯ;
ಮೊರೆವ ಚಂಬಕದ=ಮೊರೆಯುತ್ತಿರುವ ಚಂಬಕದ; ನಿಗುರು=ನೆಟ್ಟಗೆ ನಿಲ್ಲು; ಟಕ್ಕೆಯ=ಬಾವುಟ;
ನೆಗಹಿ ನಿಗುರುವ ಟಕ್ಕೆಯದ=ಮೇಲಕ್ಕೆ ಎತ್ತಿಹಿಡಿದು ಎದ್ದು ಕಾಣುತ್ತಿರುವ ಬಾವುಟದ; ಮದ+ಪೊಗುವ; ಮದ=ಬೆದೆಬಂದ ಆನೆಯ ಗಂಡಸ್ತಳದಿಂದ ಸುರಿಯುವ ದ್ರವ; ಪೊಗು=ಮೇಲೆ ಬೀಳು; ಕರಿ=ಆನೆ;
ಮದವೊಗುವ ಕರಿಗಳ=ಮದವೇರಿದ ಆನೆಗಳ; ಜೂಜಿನ ಜಾಣ=ಜೂಜಿನ ಪಂದ್ಯದಲ್ಲಿ ಶಕುನಿಯ ಜತೆಗೂಡಿ ಕಪಟತನದಿಂದ ದರ್‍ಮರಾಯನನ್ನು ಸೋಲಿಸಿದ್ದ ದುರ್‍ಯೋದನ;
ಮಧ್ಯದಲಿ ಜೂಜಿನ ಜಾಣನು ಅವನು=ಇವುಗಳ ನಡುವೆ ಕಂಡುಬರುತ್ತಿರುವ ಜೂಜಿನ ಜಾಣನಾದ ಅವನೇ; ಅಗಡು=ನೀಚ;
ತಾನು ಅಗಡು ದುರಿಯೋಧನನು=ನೀಚನಾದ ದುರ್‍ಯೋದನ;
ಬಲವಂಕ=ಬಲಗಡೆ/ಬಲಬದಿ;
ಅವನ ಬಲವಂಕದಲಿ ನಿಂದವನು… ಅವನು ಭೂರಿಶ್ರವನು=ದುರ್‍ಯೋದನನ ಬಲಗಡೆ ನಿಂತಿರುವವನೇ ಬೂರಿಶ್ರವ; ಭುವನ=ಜಗತ್ತು; ಪತಿ=ಒಡೆಯ; ಭುವನಪತಿ=ರಾಜ; ಎಡವಂಕ=ಎಡಗಡೆ/ಎಡಬದಿ;
ಮತ್ತೆ ಆ ಭುವನಪತಿಯ ಎಡವಂಕದಲಿ ನಿಂದವ… ಜಯದ್ರಥನು=ಅದೋ ನೋಡು…ಆ ದುರ್‍ಯೋದನನ ಎಡಬದಿಯಲ್ಲಿ ನಿಂತಿರುವವನೇ ಜಯದ್ರತ; ತವತವಗೆ=ತಮ್ಮಲ್ಲಿಯೇ/ಪ್ರತಿಯೊಬ್ಬರೂ; ಬಲುಗೈ=ಶಕ್ತಿಯಿಂದ ಕೂಡಿದ ಕಯ್ಗಳನ್ನು ಉಳ್ಳವನು/ಶೂರ; ಎನಿಸುವ=ಎನ್ನಿಸುವ;
ತವತವಗೆ ಬಲುಗೈಗಳು ಎನಿಸುವ=ತಮ್ಮತಮ್ಮಲ್ಲಿಯೇ ಪ್ರತಿಯೊಬ್ಬರೂ ಶೂರರೆಂದು ಹೆಸರು ಪಡೆದಿರುವ; ನೊಸಲು=ಹಣೆ; ಅಂದ=ರೀತಿ; ಮೆರೆ=ಕಂಗೊಳಿಸು; ಅವನಿ=ಬೂಮಿ; ಅವನಿಪಾಲಕ=ರಾಜ; ಅನುಜ=ತಮ್ಮ;
ಶಿವನ ನೊಸಲ ಅಂದದಲಿ ಮೆರೆವವರು ನೋಡು… ಅವನಿಪಾಲಕನ ಅನುಜರನು=ಶಿವನ ಹಣೆಯಲ್ಲಿರುವ ಕಣ್ಣಿನಂತೆ ಮೆರೆಯುತ್ತಿರುವವರನ್ನು ನೋಡು…ಅವರೇ ದುರ್‍ಯೋದನನ ನೂರುಮಂದಿ ತಮ್ಮಂದಿರು; ಅನುಪಮ=ಹೋಲಿಕೆಗೆ ಮೀರಿದ; ಇಂತು=ಈ ರೀತಿ; ಅಂಧಾಸುರ=ಒಬ್ಬ ರಕ್ಕಸನ ಹೆಸರು;
ಹೊಗಳಲು ಅನುಪಮ ಈ ಸೈನ್ಯವು… ಇಂತು ಇದು ಅಂಧಾಸುರನ ಸೇನೆಗೆ ದ್ವಿಗುಣವು=ದುರ್‍ಯೋದನನ ಸೇನೆಗೆ ಸಮಾನವಾದ ಸೇನೆಯೇ ಜಗತ್ತಿನಲ್ಲಿ ಇಲ್ಲ. ದುರ್‍ಯೋದನನ ಸೇನೆಯು ಅಂದಾಸುರನ ಸೇನೆಗಿಂತಲೂ ಎರಡು ಪಟ್ಟು ದೊಡ್ಡದು; ಮೋಹರ=ಸೇನೆ; ಅಗ್ಗಳಿಕೆ=ಕಸುವು/ಶಕ್ತಿ; ನಾಲಗೆ ದಣಿಯುವುದು=ಇದು ಒಂದು ನುಡಿಗಟ್ಟು. ಮಾತನ್ನು ಹೆಚ್ಚಿನ ಪ್ರಮಾಣದಲ್ಲಿ ಆಡುವುದು; ಕೈವಾರ=ಹೊಗಳಿಕೆ/ಕೊಂಡಾಟ;
ರಾವಣನ ಮೋಹರಕೆ ಇದು ತ್ರಿಗುಣವು ಎನುತ ಫಲುಗುಣನು ಹಗೆಯ ಭುಜದ ಅಗ್ಗಳಿಕೆಯನು ನಾಲಗೆ ದಣಿಯೆ ಕೈವಾರಿಸುತ=ರಾವಣನ ಸೇನೆಗಿಂತಲೂ ಮೂರು ಪಟ್ಟು ದೊಡ್ಡದು ಎಂದು ಅರ್‍ಜುನನು ಹಗೆಯಾದ ದುರ್‍ಯೋದನನ ಸೇನಾಬಲವನ್ನು ನಾಲಗೆ ದಣಿಯುವಂತೆ ಕೊಂಡಾಡುತ್ತ;
ಗಾಂಡೀವ=ಅರ್‍ಜುನನ ಬಿಲ್ಲಿನ ಹೆಸರು; ಝೇವಡೆ=ಬಿಲ್ಲಿನ ಹೆದೆಯನ್ನು ಮೀಟಿ ದನಿಯನ್ನು ಮಾಡುವುದು; ಮಿಗೆ=ಅತಿಶಯವಾಗಿ; ನಿಗುರಿಸು=ನೆಟ್ಟಗೆ ನಿಲ್ಲಿಸು;
ಗಾಂಡೀವವ ಝೇವಡೆದು ಮಿಗೆ ನಿಗುರಿಚಿದನು=ಅರ್‍ಜುನನು ತನ್ನ ಬಿಲ್ಲನ್ನು ಜೇವಡೆದು ಕಾಳೆಗಕ್ಕೆ ಸನ್ನದ್ದನಾಗಿ ಬಿಲ್ಲನ್ನು ಎತ್ತಿಹಿಡಿದನು;
ಅರರೆ=ಮೆಚ್ಚುಗೆಯನ್ನು ಇಲ್ಲವೇ ಅಚ್ಚರಿಯನ್ನು ಸೂಚಿಸುವ ಪದ; ಪೂತು= “ಬಲೇ… ಬೇಶ್ ” ಎಂದು ಹೊಗಳುತ್ತ ಉತ್ತೇಜನವನ್ನು ನೀಡುವ ಪದ; ಹಯ=ಕುದುರೆ; ಚಪ್ಪರಿಸು=ದೇಹವನ್ನು ನೇವರಿಸು/ಸವರು; ನಿಗುರು=ಮುನ್ನುಗ್ಗು/ಮುಂದಕ್ಕೆ ಚಲಿಸು;
ಉತ್ತರನು “ಅರರೆ, ಪೂತುರೆ ಹಯ” ಎನುತೆ ಚಪ್ಪರಿಸಲೊಡೆ ನಿಗುರಿದವು=ಸಾರತಿಯಾಗಿರುವ ಉತ್ತರಕುಮಾರನು “ಅರರೆ… ಪೂತುರೆ… ಹಯ” ಎನ್ನುತ್ತ ತೇರಿಗೆ ಹೂಡಿದ್ದ ಕುದುರೆಗಳ ಮಯ್ ಮುಟ್ಟುತ್ತಿದ್ದಂತೆಯೇ ಕಾಳೆಗದ ಕಣದತ್ತ ಮುನ್ನುಗ್ಗಿದವು; ಖುರಪುಟ=ಕಾಲಿನ ಗೊರಸು; ಭಿತ್ತಿ=ಗೋಡೆ;
ಖುರಪುಟದಲಿ ಆಕಾಶ ಭಿತ್ತಿಯ ಬರೆವವೋಲ್=ಕುದುರೆಗಳ ಕಾಲ್ತುಳಿತದಿಂದ ಮೇಲೆದ್ದ ಕೆಂಪನೆಯ ದೂಳಿನಿಂದಲೇ ಆಕಾಶದ ಗೋಡೆಯನ್ನು ಚಿತ್ರಿಸುವಂತೆ;
ಸೂರಿಯನ ತುರಗವ ಕರೆವವೋಲ್=ಸೂರ್‍ಯನ ಕುದುರೆಗಳನ್ನು ತಮ್ಮ ವೇಗಕ್ಕೆ ಸರಿಸಾಟಿಯಾಗುವಂತೆ ಕರೆಯುವ ರೀತಿಯಲ್ಲಿ;
ಕೈಗಟ್ಟು=ಆರಂಬಗೊಂಡು; ಆಹವ=ಕಾಳೆಗ/ಯುದ್ದ; ದುವ್ವಾಳಿಸು=ವೇಗವಾಗಿ ಸಾಗು;
ಕೈಗಟ್ಟಿ ಆಹವಕೆ ದುವ್ವಾಳಿಸುವಡೆ=ಹೊರಡಲು ತೊಡಗಿ ಕಾಳೆಗದ ಕಣದತ್ತ ಕುದುರೆಗಳು ವೇಗವಾಗಿ ಸಾಗುತ್ತಿರಲು;
ನಭ=ಗಗನ/ಆಕಾಶ; ಉಪ್ಪರಿಸು=ಮೇಲೇಳು; ಅಂಡಲೆ=ವ್ಯಾಪಿಸು/ಕವಿ;
ಕೆಂದೂಳು ಇರದೆ ನಭಕೆ ಉಪ್ಪರಿಸಿ ರವಿ ಮಂಡಲವನು ಅಂಡಲೆಯೆ=ಕುದುರೆಗಳ ಗೊರಸಿನ ತುಳಿತದಿಂದ ಚಿಮ್ಮಿದ ಕೆಂದೂಳು ಆಕಾಶದ ಉದ್ದಗಲದಲ್ಲಿ ಹರಡಿಕೊಂಡುದಲ್ಲದೆ ಸೂರ್‍ಯ ಮಂಡಲಕ್ಕೂ ಕವಿಯತೊಡಗಿತು;
ತುರಗ ಗರ್ಜನೆ=ಕುದುರೆಗಳ ಕೆನೆತ;
ರಥದ ಚೀತ್ಕøತಿ=ತೇರಿನ ಚಕ್ರಗಳ ಉರುಳುವಿಕೆಯಿಂದ ಹೊರಹೊಮ್ಮುತ್ತಿರುವ ಶಬ್ದ;
ವರ ಧನುಷ್ಟಂಕಾರ=ಉತ್ತಮವಾದ ಬಿಲ್ಲುಗಳ ಹಗ್ಗವನ್ನು ಮೀಂಟಿದಾಗ ಹೊರಹೊಮ್ಮುತ್ತಿರುವ ನಾದ;
ಕಪಿಯ ಅಬ್ಬರಣೆ=ಅರ್‍ಜುನನ ತೇರಿನ ಮೇಲೆ ಕುಳಿತಿರುವ ಹನುಮಂತನ ಅಬ್ಬರದ ದನಿ;
ಪಾರ್ಥನ ಬೊಬ್ಬೆ=ಅರ್‍ಜುನನ ವೀರಾವೇಶದ ಕೂಗಾಟ; ನಿಷ್ಠುರ=ಬಿರುಸಾದ/ಗಟ್ಟಿಯಾದ; ದೇವದತ್ತ=ಅರ್‍ಜುನನ ಶಂಕದ ಹೆಸರು; ರವ=ದನಿ/ಶಬ್ದ;
ದೇವದತ್ತ ರವ=ಅರ್‍ಜುನನು ದೇವದತ್ತ ಶಂಕವನ್ನು ಊದುತ್ತಿರುವಾಗ ಹೊರಹೊಮ್ಮುತ್ತಿರುವ ನಾದ; ಅರರೆ=ಅಬ್ಬಬ್ಬಾ ಎಂಬ ಅಚ್ಚರಿಯ ಉದ್ಗಾರದ ಪದ; ಹೊದರೇಳು=ಗುಂಪುಗೂಡು/ದಟ್ಟವಾಗು;
ಅರರೆ, ಹೊದರೆದ್ದವು=ಅಬ್ಬಬ್ಬಾ, ಒಮ್ಮೆಲೆ ಎಲ್ಲವೂ ಗುಂಪುಗೂಡಿದವು; ಗಿರಿ=ಬೆಟ್ಟ; ವ್ರಜ=ಗುಂಪು/ಸಮೂಹ; ಬಿರಿ=ಒಡೆ/ಸೀಳು;
ಗಿರಿವ್ರಜ ಬಿರಿಯೆ=ಬೆಟ್ಟಗುಡ್ಡಪರ್‍ವತಗಳೆಲ್ಲವೂ ಬಿರುಕುಬಿಟ್ಟು ಕುಸಿಯಲು; ಜಲನಿಧಿ=ಸಮುದ್ರ/ಕಡಲು; ಜರಿ=ಹಿಂದಕ್ಕೆ ಚಲಿಸು;
ಜಲನಿಧಿ ಜರಿಯೆ=ಕಡಲು ಹಿಮ್ಮುಕನಾಗಿ ಸರಿಯಲು; ತಾರಕಿ=ಚುಕ್ಕಿ/ನಕ್ಶತ್ರ; ಸುರಿ=ಮೇಲಿನಿಂದ ಬೀಳು;
ತಾರಕಿ ಸುರಿಯೆ=ಚುಕ್ಕಿಗಳು ಗಗನದಿಂದ ಕಳಚಿ ಬೀಳಲು; ಸುರ=ದೇವತೆ; ಕುಲ=ಗುಂಪು; ಸರಿ=ಓಡಿಹೋಗು/ಪಲಾಯನ ಮಾಡು;
ಸುರಕುಲ ಸರಿಯೆ=ದೇವತೆಗಳು ಪಲಾಯನಮಾಡಲು; ಅಹಿತ=ಶತ್ರು/ಹಗೆ; ಹರಿ=ಹಿಮ್ಮೆಟ್ಟು;
ಭೀತಿಯಲಿ ಅಹಿತ ಬಲ ಹರಿಯೆ=ಹೆದರಿಕೆಯಿಂದ ಹಗೆಯ ಸೇನೆಯು ಹಿಮ್ಮೆಟ್ಟಲು; ಶಿರ=ತಲೆ; ಎರಗು=ಬಡಿ; ವೊಲು=ಅಂತೆ/ಹಾಗೆ;
ಶಿರವ ಸಿಡಿಲು ಎರಗಿದವೊಲು=ತಲೆಗೆ ಸಿಡಿಲು ಬಡಿದಂತಾಗಿ;
ಉತ್ತರ ಮೂರ್ಛೆಯಲಿ ತಿರುಗಿ ಬಿದ್ದನು=ರಣವಾದ್ಯಗಳ ದನಿ ಕೇಳುತ್ತಿದ್ದಂತೆಯೇ ಮತ್ತು ಅರ್‍ಜುನನ ಯುದ್ದ ಸಿದ್ದತೆಯ ಅಬ್ಬರವನ್ನು ನೋಡುತ್ತಿದ್ದಂತೆಯೇ ಅಂಜಿಕೆಯಿಂದ ತತ್ತರಿಸಿಹೋದ ಉತ್ತರಕುಮಾರನು ಮೂರ್‍ಚಿತನಾಗಿ ತೇರಿನಲ್ಲಿಯೇ ಉರುಳಿಬಿದ್ದನು; ಹೊಡೆಮರಳು=ಹಿಂತಿರುಗಿ ಬರು/ಮರಳಿಬರು;
ಹೊಡೆಮರಳಿದವು=ಕೆಲವೇ ಗಳಿಗೆಗಳಲ್ಲಿ ಉತ್ತರಕುಮಾರನಿಗೆ ಮತ್ತೆ ಅರಿವುಬಂದು ಎಚ್ಚರಗೊಳ್ಳುತ್ತಾನೆ; ಕಣ್ಣು+ಆಲಿ; ಆಲಿ=ಕಣ್ಣುಗುಡ್ಡೆ; ಅರುಣ=ಕೆಂಪುಬಣ್ಣ; ವಾರಿ=ನೀರು; ಕಾರು=ಹೊರಹಾಕು; ಕಣ್ಣಾಲಿ ಅರುಣ ವಾರಿಗಳ ಕಾರಿದವು=ಅಂಜಿಕೆಯಿಂದ ಕೆಂಪಾಗಿರುವ ಕಣ್ಣುಗಳಿಂದ ನೀರು ಸುರಿಯತೊಡಗಿತು;
ಹೊರಳುತ ಇರಲು=ಸಾರತಿಯು ಕುಳಿತುಕೊಳ್ಳಲು ಇರುವ ಜಾಗದಲ್ಲಿಯೇ ಉತ್ತರಕುಮಾರನು ಅತ್ತಿತ್ತ ಉರುಳಾಡುತ್ತಿರಲು; ಸೈರಿಸು=ತಾಳು/ಸಹಿಸು;
ಎಲೆ ಪಾಪಿ ಸೈರಿಸಲು ಅರಿಯನು… ಇನ್ನೇನು… ಎನುತ ಫಲುಗುಣ ರಥದೊಳಗೆ ಕುಳ್ಳಿರಿಸಿದನು=ಆಗ ಅರ್‍ಜುನನು “ಅಯ್ಯೋ… ಈ ಪಾಪಿಗೆ ಕಾಳೆಗದ ತೀವ್ರತೆಯನ್ನು ನೋಡಿ ಸಹಿಸಿಕೊಳ್ಳುವ ಕಸುವಿಲ್ಲ” ಎಂದು ನುಡಿಯುತ್ತ, ತೇರಿನ ಮುಂಬಾಗದ ಸಾರತಿಯ ಜಾಗದಿಂದ ಉತ್ತರಕುಮಾರನನ್ನು ಮೇಲೆತ್ತಿ ತೇರಿನ ಒಳಕ್ಕೆ ಕುಳ್ಳಿರಿಸಿದನು;
ಸೆರಗಿನಲಿ ಬೀಸಿದನು=ಅರ್‍ಜುನನು ತನ್ನ ಮಯ್ ಮೇಲೆ ಹೊದ್ದದ್ದ ಶಲ್ಯದ ಅಂಚಿನಿಂದ ಗಾಳಿಯನ್ನು ಬೀಸಿ ಜೀವಬಯದಿಂದ ಕಂಗಾಲಾಗಿದ್ದ ಉತ್ತರಕುಮಾರನನ್ನು ಉಪಚರಿಸಿದನು;
ಮತ್ಸ್ಯಕುಮಾರ=ಮತ್ಸ್ಯರಾಜ್ಯದ ಅರಸನಾದ ವಿರಾಟರಾಯನ ಮಗ ಉತ್ತರಕುಮಾರ; ಬವಣಿ=ತಲೆ ಸುತ್ತುವಿಕೆ/ತೊಂದರೆ;
ಏನು ಮತ್ಸ್ಯಕುಮಾರ, ಬವಣಿ ಇದೇನು ನಿನಗೆ=ರಾಜಪುತ್ರ… ಇದೇಕೆ ಹೀಗೆ ತಲೆಸುತ್ತಿಬಂದು ಕೆಳಕ್ಕೆ ಉರುಳಿದೆ; ಅವಸಾನ=ಕೊನೆ/ಅಂತ್ಯ; ಅಂದ=ರೀತಿ/ಹಾಗೆ;
ಜಗದ ಅವಸಾನದ ಅಂದದಿ ಸಿಡಿಲು
ಸುಳಿದುದು=ಪ್ರಳಯಕಾಲದಲ್ಲಿ ಇಡೀ ಜಗತ್ತೇ ನಾಶಗೊಳ್ಳುವ ರೀತಿಯಲ್ಲಿ ಸಿಡಿಲು ಬಂದು ಬಡಿಯಿತು; ಒಡಲು=ದೇಹ; ಬಿರಿ=ಸೀಳು;
ಎನ್ನ ಒಡಲು ಬಿರಿದುದು=ನನ್ನ ಮಯ್ ಸೀಳಿದಂತಾಯಿತು/ನನ್ನ ಎದೆ ಒಡೆದಂತಾಯಿತು; ಧ್ವಾನ=ದನಿ/ಶಬ್ದ; ಆನು=ಹೊಂದು/ಎದುರಿಸು; ಆಪನೆ=ಶಕ್ತನೇ;
ನಿನ್ನ ಬಹಳ ಧ್ವಾನವನು ಆನಲು ಆಪನೆ=ಕಾಳೆಗದ ಕಣದಲ್ಲಿ ನಿನ್ನ ವೀರಾವೇಶದ ಅಬ್ಬರದ ದನಿಯನ್ನು ಕೇಳಿ ತಡೆದುಕೊಳ್ಳುವ ಶಕ್ತಿ ನನ್ನಲ್ಲಿದೆಯೇ; ಸಾಕು ಎನ್ನ ಕಳುಹು=ಕಾಳೆಗವನ್ನು ಮಾಡುವುದು ಬೇಡ. ಇಲ್ಲಿಗೆ ನಿಲ್ಲಿಸು. ನನ್ನನ್ನು ವಿರಾಟನಗರಿಗೆ ಕಳುಹಿಸು; ನಿನಾದ=ದನಿ/ಶಬ್ದ; ಮಾಣು=ಬಿಡು;
ಮಹಾ ನಿನಾದವ ಮಾಣು ಮಾಣು=ನಿನ್ನ ರಣಾವೇಶದ ಅಬ್ಬರದ ದನಿಯನ್ನು ಬಿಡು; ಖೇಡನ್+ಆಗದಿರು; ಖೇಡ=ಹೆದರಿದವನು/ಅಂಜಿದವನು;
ಖೇಡನಾಗದಿರು. ಅದುಭುತ ಧ್ವನಿ ಮಾಡೆನು. ಅಂಜದಿರು=ಹೆದರಿಕೆಯಿಂದ ತತ್ತರಿಸಬೇಡ. ಮತ್ತೆ ಮತ್ತೆ ಅಬ್ಬರದ ದನಿಯನ್ನು ಮಾಡುವುದಿಲ್ಲ. ಹೆದರಬೇಡ; ಧೃತಿ=ಕೆಚ್ಚು/ಶೂರತನ; ಜೋಡಿಸು=ಅಣಿಮಾಡು/ಸಜ್ಜುಗೊಳಿಸು;
ಧೃತಿ ಮಾಡಿಕೊಂಡು ಈ ರಥವ ಜೋಡಿಸು=ಮನಸ್ಸಿಗೆ ಕೆಚ್ಚನ್ನು ತಂದುಕೊಂಡು, ಈ ತೇರನ್ನು ಸಜ್ಜುಗೊಳಿಸಿ, ಕಾಳೆಗದ ಕಣದಲ್ಲಿ ಮುನ್ನಡೆಸಲು ಅಣಿಯಾಗು;
(ಎಂದು ಸಮಾದಾನ ಮಾಡಿ, ಉತ್ತರ ಕುಮಾರನ ಮನದಲ್ಲಿ ಕೆಚ್ಚನ್ನು ತುಂಬಿ, ಅವನನ್ನು ಸಾರತಿಯನ್ನಾಗಿ ಮಾಡಿಕೊಂಡು ರಣರಂಗಕ್ಕೆ ತೆರಳಿದ ಅರ್ಜುನನು ಕಾಳೆಗದ ಕಣದಲ್ಲಿ ಹೋರಾಡಿ ದುರ್‍ಯೋದನನ ಸೇನೆಯು ಸೆರೆ ಹಿಡಿದಿಟ್ಟುಕೊಂಡಿದ್ದ ಗೋವುಗಳನ್ನು ಬಿಡಿಸಿ, ವಿರಾಟ ನಗರಿಯತ್ತ ಗೋವುಗಳನ್ನು ಸುರಕ್ಶಿತವಾಗಿ ಅಟ್ಟಿ, ನಂತರ ಮತ್ತೆ ಕಾಳೆಗವನ್ನು ಮುಂದುವರಿಸಿ ಕೌರವ ಸೇನೆಯಲ್ಲಿದ್ದ ಎಲ್ಲಾ ವೀರರನ್ನು ಸದೆಬಡಿದು ವಿಜಯಶಾಲಿಯಾಗುತ್ತಾನೆ. ಕಾಳೆಗದ ಕಣದಲ್ಲಿ ನಡೆದ ದುರ್‍ಯೋದನನ ಚತುರಂಗ ಬಲ ಮತ್ತು ಅರ್ಜುನನ ನಡುವೆ ನಡೆದ ಹೋರಾಟವನ್ನು ವಿರಾಟಪರ್ವದ ಏಳನೆಯ ಸಂದಿಯ 52 ಪದ್ಯಗಳಲ್ಲಿ ಮತ್ತು ಎಂಟನೆಯ ಸಂದಿಯ 93 ಪದ್ಯಗಳಲ್ಲಿ ವಿವರಿಸಲಾಗಿದೆ…
ಅಖಿಲ=ಸಮಸ್ತ/ಎಲ್ಲ; ಜಾಲ=ಗುಂಪು; ಕೌರವಜಾಲ=ದುರ್‍ಯೋದನನ ಸೇನೆ; ಭಂಗ=ಸೋಲು/ಪರಾಜಯ/ಅಪಮಾನ; ದುಗುಡ=ಸಂಕಟ/ಉಮ್ಮಳ ; ಗಜಪುರ=ಹಸ್ತಿನಾವತಿ; ನಡೆತಂದು=ಆಗಮಿಸಿ;
ದುಗುಡದಲಿ ಗಜಪುರಕೆ ನಡೆತಂದು=ಸೋಲಿನ ಸಂಕಟದಿಂದ ನೊಂದು ಹಸ್ತಿನಾಪುರಕ್ಕೆ ಹಿಂದಿರುಗಿ;
ಅಖಿಳ ಕೌರವಜಾಲ ಭಂಗದಲಿ ದುಗುಡದಲಿ ಗಜಪುರಕೆ ನಡೆತಂದು ತಿರುಗಿತು=ದುರ್‍ಯೋದನನ ಸಮಸ್ತ ಸೇನೆಯು ಸೋತು ದುಗುಡದಲ್ಲಿ ನೊಂದು ಹಸ್ತಿನಾಪುರಕ್ಕೆ ಹಿಂತಿರುಗಿತು;
ಅಖಿಲ ನೃಪರು=ದುರ್‍ಯೋದನನ ಚತುರಂಗಬಲದೊಡನೆ ತೆರಳಿದ್ದ ಎಲ್ಲಾ ರಾಜರು;
ಮುಸುಕು=ಮೊಗವನ್ನು ಮರೆಮಾಡಿಕೊಳ್ಳಲು ಹಾಕಿಕೊಳ್ಳುವ ಬಟ್ಟೆ;
ಮೇಲು ಮುಸುಕಿನ ಮೊಗದ=ಮೊಗದ ಮೇಲೆ ಬಟ್ಟೆಯನ್ನು ಹಾಕಿಕೊಂಡಿರುವುದು; ಸೋಲಿನ ಸಂಕಟ ಮತ್ತು ಅಪಮಾನದಿಂದ ನೊಂದಿರುವ ದುರ್‍ಯೋದನನ ಕಡೆಯ ರಾಜರು ತಮ್ಮ ಮೊಗವನ್ನು ಹಸ್ತಿನಾವತಿಯ ಪ್ರಜೆಗಳಿಗೆ ತೋರಿಸಲು ಹಿಂಜರಿದಿರುವುದನ್ನು ಇದು ಸೂಚಿಸುತ್ತಿದೆ; ಮೇಳ=ಗೋಶ್ಟಿ/ಅನೇಕರಿಂದ ಕೂಡಿರುವ ಸಬೆ; ಮೋನ=ನಿಶ್ಶಬ್ದ/ದನಿಯಿಲ್ಲದಿರುವುದು;
ವಾದ್ಯದ ಮೇಳ ಮೋನದಲಿ=ವಾದ್ಯಗಾರರು ಯಾವೊಂದು ವಾದ್ಯವನ್ನು ನುಡಿಸದೆ ನಿಶ್ಶಬ್ದದಿಂದ ಹಜ್ಜೆಯಿಡುತ್ತ; ನಿಜ+ಆಲಯಂಗಳ; ನಿಜ=ತನ್ನ/ತಮ್ಮ; ಆಲಯ=ಮನೆ; ಹೊಕ್ಕರು=ಪ್ರವೇಶಿಸಿದರು;
ಹೊತ್ತ ದುಗುಡದಲಿ ನಿಜಾಲಯಂಗಳ ಬಂದು ಹೊಕ್ಕರು=ಅಪಾರವಾದ ಸಂಕಟದಿಂದ ರಾಜರು ತಮ್ಮ ಮನೆಗಳನ್ನು ಹೊಕ್ಕರು; ಕೈದುವನ್+ಇರಿಸಿ; ಕೈದು=ಆಯುದ;
ಳಿಕ ಫಲುಗುಣನು ಅತ್ತಲಾ ಮರದೊಳಗೆ ಕೈದುವನಿರಿಸಿ=ಅತ್ತ ಕಾಳೆಗದ ಕಣದಲ್ಲಿದ್ದ ಅರ್‍ಜುನನು ಶಮಿ ಮರದ ಬಳಿಗೆ ಬಂದು ಮೊದಲಿನಂತೆ ಆಯುದಗಳನ್ನು ಮರದ ಕೊಂಬೆಗೆ ಬಿಗಿದು ಕಟ್ಟಿ; ಮುನ್ನಿನ=ಮೊದಲಿನ; ಹುಲು=ಸಾಮಾನ್ಯವಾದ; ಮುನ್ನಿನ ಹುಲುರಥ=ವಿರಾಟನಗರದಿಂದ ಉತ್ತರಕುಮಾರನೊಡನೆ ಬಂದಿದ್ದ ಸಾಮಾನ್ಯವಾದ ತೇರು; ಮೇಳೈಸು=ಸಿದ್ದಪಡಿಸಿ/ಅಣಿಗೊಳಿಸಿ; ಅಳವಡಿಸು=ಹೊಂದಿಸು;
ಮುನ್ನಿನ ಹುಲುರಥವ ಮೇಳೈಸಿ ಸಾರಥಿತನವನು ಅಳವಡಿಸೆ=ಕಾಳೆಗಕ್ಕೆ ತನ್ನದೇ ಆದ ತೇರಿನಲ್ಲಿ ಹೋಗಿದ್ದ ಅರ್‍ಜುನನು ಈಗ ಅದನ್ನು ಬಿಟ್ಟು, ಈ ಮೊದಲು ವಿರಾಟನಗರಿಯಿಂದ ತಂದಿದ್ದ ಸಾಮಾನ್ಯವಾದ ತೇರನ್ನು ಅಣಿಗೊಳಿಸಿ, ಅದರಲ್ಲಿ ಮೊದಲಿನಂತೆ ತಾನೇ ಸಾರತಿಯಾಗಿ ಕುಳಿತುಕೊಂಡನು; ಕುಲ=ಗುಂಪು/ಸಮೂಹ; ಲಲಾಮ=ತಿಲಕ;
ಕಪಿಕುಲಲಲಾಮ=ಕಪಿಗಳ ಸಮೂಹಕ್ಕೆ ತಿಲಕಪ್ರಾಯನಾದ ಹನುಮಂತ; ಮೈದಡವು=ಒಲವಿನ ಸಂಕೇತವಾಗಿ ಮಯ್ಯನ್ನು ನೇವರಿಸಿ; ವನ=ಕಾಡು;
ಕಪಿ ಕುಲಲಲಾಮನು ಇಳಿದು ಪಾರ್ಥನ ಮೈದಡವಿ ವನಕೆ ಹಾಯ್ದನು=ಕಾಳೆಗದ ಕಣದಲ್ಲಿ ಅರ್‍ಜುನನು ಹೋರಾಟಮಾಡುತ್ತಿದ್ದ ತೇರಿನ ಮೇಲೆ ಕುಳಿತಿದ್ದ ಹನುಮಂತನು ಈಗ ಕೆಳಕ್ಕೆ ಇಳಿದು ಬಂದು, ಒಲವಿನಿಂದ ಅರ್‍ಜುನನ ಮಯ್ಯನ್ನು ನೇವರಿಸಿ ಕಾಡನತ್ತ ನಡೆದನು; ಹೊಳಲು=ನಗರ; ಹೊರೆ=ಹತ್ತಿರ/ಸಮೀಪ;
ಫಲುಗುಣನು ಹೊಳಲ ಹೊರೆಯಲಿ ನಿಂದು ನಗುತ ಉತ್ತರನೊಳು ಇಂತು ಎಂದ=ತೇರು ವಿರಾಟನಗರ ಹತ್ತಿರಕ್ಕೆ ಬರುತ್ತಿದ್ದಂತೆಯೇ, ತೇರನ್ನು ನಿಲ್ಲಿಸಿ ಉತ್ತರಕುಮಾರನನ್ನು ಕುರಿತು ಅರ್‍ಜುನನು ಮುಗುಳುನಗುತ್ತ ಈ ರೀತಿ ಹೇಳಿದನು; ದೂತ=ಸುದ್ದಿ ಇಲ್ಲವೇ ಸಂದೇಶವನ್ನು ಒಯ್ಯುವವನು/ಸೇವಕ; ಅರುಹು=ತಿಳಿಸು;
ದೂತರಿಗೆ ಕರೆದು ಅರುಹು=ವಿರಾಟರಾಯನಿಗೆ ಕಾಳೆಗದ ಸುದ್ದಿಯನ್ನು ತಿಳಿಸುವುದಕ್ಕಾಗಿ ದೂತರನ್ನು ಕರೆದು ಅವರಿಗೆ ಹೇಳು; ಧುರ=ಕಾಳೆಗ;
ನೀನೇ ಧುರವ ಜಯಿಸಿದೆನು ಎನ್ನು=ನೀನೇ ಕಾಳೆಗವನ್ನು ಗೆದ್ದೆನೆಂದು ತಿಳಿಸು;
ನಾವು ಇದ್ದ ಇರವನು ಅರುಹದಿರು=ಹಗೆಗಳ ಎದುರು ಹೋರಾಡಿ ಗೆದ್ದವನು ನಾನು ಎಂಬುದನ್ನು ಹೇಳಬೇಡ; ಇಂದು=ಈ ದಿನ/ಕಾಳೆಗವನ್ನು ಗೆದ್ದು ಬಂದಿರುವ ಈ ದಿನ; ವಿಕ್ರಮ=ಪರಾಕ್ರಮ; ಪಸರಿಸು=ಹಬ್ಬಿಸು;
ಇಂದು ನಿನ್ನ ವಿಕ್ರಮವ ಪಸರಿಸು=ಇಂದಿನ ಕಾಳೆಗದಲ್ಲಿ ಜಯಪಡೆದ ನಿನ್ನ ಪರಾಕ್ರಮವನ್ನು ಎಲ್ಲೆಡೆ ತಿಳಿಯುವಂತೆ ಮಾಡು; ಮನ್ನಿಸು=ಮರ್‍ಯಾದೆ ಮಾಡು;
ಅರಸ ನಿನ್ನನೆ ಮನ್ನಿಸಲಿ=ಅರಸನು ನಿನ್ನನ್ನೇ ಹೆಚ್ಚು ಮನ್ನಿಸಲಿ; ಪುರ=ನಗರ/ಪಟ್ಟಣ; ಪರಿಜನ=ಸುತ್ತಲಿನ ಜನ/ಪರಿವಾರ;
ಪುರ ಪರಿಜನಂಗಳು ನಿನ್ನ ವಿಜಯದ ಹರುಷದಲಿ ಹೆಚ್ಚಿರಲಿ=ವಿರಾಟನಗರದಲ್ಲಿರುವ ನಿನ್ನ ಪರಿವಾರದವರು ಮತ್ತು ಪ್ರಜೆಗಳೆಲ್ಲರೂ ನಿನ್ನ ವಿಜಯದ ಆನಂದದಿಂದ ಹಿಗ್ಗುವಂತಾಗಲಿ; ನೇಮಿಸು=ಅಪ್ಪಣೆಮಾಡು;
ನೇಮಿಸಿದಂತೆ ಮಾಡು=ನಾನು ಹೇಳಿದಂತೆ ಮಾಡು; ಕರ=ಹೆಚ್ಚಾಗಿ; ಲೇಸು=ಒಳ್ಳೆಯದು;
ಕರ ಲೇಸು. ನೀನೇ ಬಲ್ಲೆ ಎನುತ=ಹೆಚ್ಚಾಗಿ ಯಾವುದು ಒಳ್ಳೆಯದು ಎಂಬುದನ್ನು ನೀನೇ ತಿಳಿದಿರುವೆ ಎಂದು ಉತ್ತರಕುಮಾರನು ಅರ್‍ಜುನನ್ನು ಹೊಗಳುತ್ತ, ಅವನ ಮಾತಿನಂತೆ ನಡೆಯಲು ಒಪ್ಪಿಕೊಂಡು;
ದೂತರ ಕರೆದು=ನಗರದ ಹೊರವಲಯದಲ್ಲಿದ್ದ ದೂತರನ್ನು ಕರೆದು; ಜನಕ=ತಂದೆ;
ಜನಕನಲ್ಲಿಗೆ ಪೋಗಿ=ನಮ್ಮ ತಂದೆಯವರ ಬಳಿಗೆ ಹೋಗಿ; ಮತ್ಸ್ಯತನಯ=ಉತ್ತರಕುಮಾರ; ನಿಯಾಮಿಸು=ಅಪ್ಪಣೆಮಾಡು;
ಮತ್ಸ್ಯ ತನಯ ಕೌರವ ಬಲವ ಜಯಿಸಿದನು ಎಂದು ಪೇಳುವುದು ಎಂದು ಆತನು ನಿಯಾಮಿಸುತ ಇರ್ದನು= “ಉತ್ತರಕುಮಾರನು ದುರ್‍ಯೋದನನ ಚತುರಂಗಸೇನೆಯನ್ನು ಸೋಲಿಸಿ ಜಯವನ್ನು ಪಡೆದನು ಎಂಬ ಸುದ್ದಿಯನ್ನು ವಿರಾಟರಾಜನಿಗೆ ತಿಳಿಸುವುದು” ಎಂದು ದೂತರಿಗೆ ಅಪ್ಪಣೆಮಾಡಿದನು;
(ಚಿತ್ರ ಸೆಲೆ: quoracdn.net)
ಇತ್ತೀಚಿನ ಅನಿಸಿಕೆಗಳು