ರಕ್ಶಾಬಂದನ: ಬಾಂದವ್ಯಗಳ ಬೆಸುಗೆ
ಸಹೋದರ ಸಹೋದರಿಯರ ನಡುವೆ ಇರುವ ನಿಶ್ಕಲ್ಮಶ ಪ್ರೀತಿ ವಾತ್ಸಲ್ಯದ ಬಂದವನ್ನು ಗಟ್ಟಿಗೊಳಿಸಲು ಇರುವ ಅಮೂಲ್ಯವಾದ ಆಚರಣೆ ರಕ್ಶಾಬಂದನ ಅತವಾ ರಾಕಿ ಹಬ್ಬ. ಪ್ರತಿ ವರ‍್ಶ ಶ್ರಾವಣ ಮಾಸದಲ್ಲಿ ಬರುವ ಈ ಆಚರಣೆ ಉತ್ತರ ಬಾರತದಲ್ಲಿ ಆಚರಿಸುವ ಜನಪ್ರಿಯ ಹಬ್ಬಗಳಲ್ಲಿ ಒಂದು. ದಕ್ಶಿಣ ಬಾರತದಲ್ಲಿ ಈ ಆಚರಣೆ ಅಶ್ಟು ರೂಡಿಯಲ್ಲಿರಲಿಲ್ಲವಾದರೂ ಇತ್ತೀಚೆಗೆ ಈ ಹಬ್ಬದ ಸಂಬ್ರಮವನ್ನು ಕಾಣುತ್ತಿದ್ದೇವೆ. ಆದರೆ ಈ ಆಚರಣೆಗೂ ಮುನ್ನ ಬ್ರಾತ್ರುತ್ವ ಬಂದವನ್ನು ಬಿಗಿಯಾಗಿಸುವ ಮತ್ತೊಂದು ಹಬ್ಬ ನಾಗರಪಂಚಮಿ ಹಬ್ಬ. ಇದು ನಮ್ಮ ನಾಡಿನಲ್ಲಿ ಅನಾದಿ ಕಾಲದಿಂದಲೂ ಆಚರಣೆಯಲ್ಲಿದೆ.
ನಾಗರಪಂಚಮಿಯು ವಿಬಿನ್ನ ಆಚರಣೆಯಲ್ಲಿ ನಡೆಯುತ್ತದೆಯಾದರೂ ಹಳೇ ಮೈಸೂರು ಕಡೆ ಮತ್ತು ಕರ‍್ನಾಟಕದ ಇನ್ನಿತರ ಬಾಗಗಳಲ್ಲಿ ಇದು ಅಣ್ಣ-ತಂಗಿ ಹಬ್ಬ ಎಂದೇ ಕರೆಸಿಕೊಳ್ಳುತ್ತದೆ. ಸಹೋದರ ಸಹೋದರಿಯರ ಪಾಲಿನ ವಿಶೇಶವಾದ ಈ ಹಬ್ಬದಲ್ಲಿ ಅಣ್ಣ ಅತವಾ ತಮ್ಮ ಆದವನಿಗೆ ಸಹೋದರಿಯರು ಬೆನ್ನು ಹೊಟ್ಟೆಗೆ ಹಾಲು ಹಚ್ಚಿ ನಿನ್ನ ಜೀವನದಲ್ಲಿ ಯಾವ ಕಶ್ಟಗಳು ಬರದೆ ಬದುಕು ಸದಾ ಸುಕಕರವಾಗಿರಲೆಂದು ಹಾರೈಸುವ ಪದ್ದತಿ. ಆ ಸಂಜೆ ಸಹೋದರನಿಗೆ ಆರತಿ ಮಾಡಿ ರಕ್ಶೆಯನ್ನು ಕಟ್ಟಿ ಸಿಹಿ ತಿನ್ನಿಸಿ ಸಂತೋಶಿಸುವ ಆಚರಣೆಯೇ ಇದರ ವೈಶಿಶ್ಟ್ಯ. ಇನ್ನೂ ಕೆಲವರು ನಾಗಪ್ಪನಿಗೆ ತನಿಯನೆರೆಯುವುದು ಒಂದು ವಿಶೇಶ. ಕೆಲವು ಕಡೆ ಹೊಸ್ತಿಲು ಮೇಲೆ ಬಂಡಾರ ಇಟ್ಟು ಸಹೋದರನ ಮೊಣಕೈಯಿಂದ ಒಡೆಸುವ ಕ್ರಮ. ಒಟ್ಟಾರೆ ಸಹೋದರ ಗಟ್ಟಿಯಾಗಿ ಬದುಕಿನ ಕೊನೆಯವರೆಗೂ ಸಹೋದರಿಯರ ಜವಾಬ್ದಾರಿಯನ್ನು ಕಾಳಜಿಯಿಂದ ನಿರ‍್ವಹಿಸಲಿ ಎಂಬ ಅರ‍್ತ ಇರಬಹುದು .ಇದೇ ರೀತಿ ರಕ್ಶಾಬಂದನದ ದಿನ ಹೆಣ್ಣುಮಕ್ಕಳು ತಮ್ಮ ಸಹೋದರರ ಮುಂಗೈಗೆ ರಾಕಿ ಕಟ್ಟಿ ಆರತಿ ಮಾಡಿ ಸಿಹಿ ತಿನ್ನಿಸುವ ಆಚರಣೆ ಹಿಂದಿನಿಂದ ನಡೆದು ಬಂದಿದ್ದರೂ, ನಮ್ಮಲ್ಲಿ ಈ ಆಚರಣೆ ಅತೀ ವಿರಳ. ಆದರೆ ಈಗೀಗ ಇದು ಎಲ್ಲೆಡೆ ಆಚರಣೆಗೆ ಬಂದಿರುವುದು ಕುಶಿಯ ವಿಚಾರ.
ಪೌರಾಣಿಕ ಹಿನ್ನೆಲೆ
ರಾಕಿ ಹಬ್ಬ ಅಂದರೆ ಮಕ್ಕಳಿಗೂ ಒಂದು ಸಂಬ್ರಮ. ಈ ಸಂಬ್ರಮಕ್ಕೆ ಪೂರಕವಾದ ಪೌರಾಣಿಕ ಕತೆಯಿರುವುದೇ ಸೋಜಿಗ. ದ್ವಾಪರ ಯುಗದಲ್ಲಿ ದರ‍್ಮರಾಯನು ಯಾಗವೊಂದನ್ನು ಮುಗಿಸಿ ಪಿತಾಮಹ ಬೀಶ್ಮನ ಆಣತಿಯಂತೆ ಬಗವಾನ್ ಶ್ರೀ ಕ್ರಿಶ್ಣನ ಆಶೀರ‍್ವಾದವನ್ನು ಬೇಡಲು ಮುಂದಾಗುತ್ತಾನೆ. ಈ ವೇಳೆ ಕ್ರಿಶ್ಣನನ್ನು ಸದಾ ವೈರಿಯಂತೆ ನೋಡುತ್ತಿದ್ದ ಆತನ ಸೋದರ ಸಂಬಂದಿ ಶಿಶುಪಾಲನು ಶ್ರೀ ಕ್ರಿಶ್ಣ ಪರಮಾತ್ಮನನ್ನು ಹಾಗೂ ಯಾದವ ಕುಲವನ್ನು ಕಟುವಾಗಿ ಮನಸೋಯಿಚ್ಚೆ ನಿಂದಿಸುತ್ತಾನೆ. ಶಿಶುಪಾಲನ ದುರ‍್ವರ‍್ತನೆಯಿಂದ ಕುಪಿತಗೊಂಡ ಕ್ರಿಶ್ಣನು ಆತನನ್ನು ಸಂಹರಿಸಲು ತನ್ನ ಅಸ್ತ್ರವಾದ ಸುದರ‍್ಶನ ಚಕ್ರವನ್ನು ಬಿಟ್ಟು, ಅದು ಹಿಂದಿರುಗಿದ ಮೇಲೆ ಆತನ ಬೆರಳಿನಲ್ಲಿ ಗಾಡವಾಗಿ ರಕ್ತ ಸೋರುತ್ತದೆ. ಕೂಡಲೇ ಅಲ್ಲಿದ್ದ ದ್ರೌಪದಿಯು ದಾವಿಸಿ ತನ್ನ ಸೀರೆಯಂಚನ್ನು ಹರಿದು ಕ್ರಿಶ್ಣನ ಬೆರಳಿಗೆ ಕಟ್ಟುತ್ತಾಳೆ. ಇದರಿಂದ ಪ್ರಸನ್ನನಾದ ಬಗವಾನ್ ಶ್ರೀ ಕ್ರಿಶ್ಣನು ಆಕೆಯ ಕಶ್ಟದ ಸಮಯದಲ್ಲಿ ತನ್ನನ್ನು ನೆನೆದರೆ ತಾನು ಬಂದು ನೆರವಾಗುವುದಾಗಿ ವಚನವಿಟ್ಟು ಸಹೋದರ ವಾತ್ಸಲ್ಯವನ್ನು ತೋರುತ್ತಾನೆ. ಜೊತೆಗೆ ಅಂದಿನಿಂದ ಬೂಲೋಕದಲ್ಲಿ ಸಹೋದರನು ಇದೇ ದಿನ ತಮ್ಮ ಸಹೋದರಿಯಿಂದ ಒಂದು ನೂಲೆಳೆಯನ್ನಾದರೂ ಕಟ್ಟಿಸಿಕೊಂಡು ಅವರಿಗೆ ರಕ್ಶೆ ನೀಡುತ್ತಾರೋ ಅಂತಹವರನ್ನು ತಾನು ರಕ್ಶಿಸುವುದಾಗಿ ವರವನ್ನು ದಯಪಾಲಿಸುತ್ತಾನೆ. ತಾನು ಕೊಟ್ಟ ಮಾತಿನಂತೆ ಬಗವಾನ್ ಶ್ರೀ ಕ್ರಿಶ್ಣನು ದುಶ್ಟ ದುಶ್ಯಾಸನನಿಂದ ದ್ರೌಪದಿಯ ವಸ್ತ್ರ ಹರಣವಾಗುತ್ತಿದ್ದಾಗ ದಾವಿಸಿದ. ಆಕೆ ಪಾಂಡವರೊಡನೆ ವನವಾಸದಲ್ಲಿದ್ದಾಗ ಹಸಿವಿನಿಂದ ಇರಬಾರದೆಂದು ಅಕ್ಶಯ ಪಾತ್ರೆಯನ್ನು ನೀಡಿದ. ಕ್ರಿಶ್ಣನು ಸ್ವಂತ ಅಣ್ಣನಲ್ಲದಿದ್ದರೂ ಬ್ರಾತ್ರುತ್ವ ಬಾವದ ಬಾವನಾತ್ಮಕ ಸಂಬಂದಕ್ಕೆ ಇದೊಂದು ಉತ್ತಮ ನಿದರ‍್ಶನ. ಅಂದಿನಿಂದ ರಾಕಿ ಕಟ್ಟುವ ಸಂಪ್ರದಾಯ ಹುಟ್ಟಿ ಕೊಂಡಿತು ಎಂಬ ಅಬಿಪ್ರಾಯವಿದೆ.
ಇತಿಹಾಸದ ಪುಟಗಳಲ್ಲಿಯೂ ರಕ್ಶಾಬಂದನಕ್ಕೆ ಹಲವಾರು ನಿದರ‍್ಶನಗಳಿವೆ. ಮೊಗಲ್ ಚಕ್ರವರ‍್ತಿ ಅಕ್ಬರನ ತಂದೆ ಹುಮಾಯೂನ್ ಗೆ ರಾಣಿ ಕರ‍್ಣಾವತಿಯು ರಾಕಿ ಕಳುಹಿಸಿ ಬಹಾದ್ದೂರ್ ಶಾ ನಿಂದ ಆಗುತ್ತಿದ್ದ ತೊಂದರೆಯಿಂದ ತಪ್ಪಿಸುವಂತೆ ಕೇಳಿಕೊಂಡಳು. ಕೂಡಲೇ ಹುಮಾಯೂನ್ ದಾವಿಸಿ ಆತನನ್ನು ಯುದ್ದದಲ್ಲಿ ಮಣಿಸಿ ಕರ‍್ಣಾವತಿಯನ್ನು ರಕ್ಶಿಸಿದ್ದನೆಂಬ ಪುರಾವೆಯಿದೆ.
ರಕ್ಶಾಬಂದನದ ವೇಳೆ ಬಣ್ಣ ಬಣ್ಣದ ತರಾವರಿ ರಾಕಿಗಳು ನೋಡಲು ಸುಂದರವಾಗಿರುತ್ತದೆ ಹಾಗೂ ಸಹೋದರಿಯರು ಕ್ರಿಶ್ಣನ ರೂಪದಲ್ಲಿರುವ ತಮ್ಮ ಸಹೋದರರ ಮುಂಗೈಗೆ ರಾಕಿ ಕಟ್ಟುವ ಮೂಲಕ ಸಂಬ್ರಮಕ್ಕೆ ಪುಶ್ಟಿ ನೀಡುತ್ತಾ ಬಂದಿದ್ದಾರೆ. ಈ ಆಚರಣೆ ಹಿಂದೂ ದರ‍್ಮದಲ್ಲಿ ಅಣ್ಣ ತಂಗಿಯರ, ಅಕ್ಕ ತಮ್ಮಂದಿರ ಬಾವನಾತ್ಮಕ ಸಂಬಂದಗಳಿಗೆ ಮೆರುಗು ನೀಡುವಲ್ಲಿ ಯಶಸ್ವಿಯಾಗಿದೆ.
( ಚಿತ್ರ ಸೆಲೆ: coloringkids.org )
ಇತ್ತೀಚಿನ ಅನಿಸಿಕೆಗಳು