ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 7

ಸಿ. ಪಿ. ನಾಗರಾಜ.

ಉತ್ತರಕುಮಾರನ ಪ್ರಸಂಗ: ನೋಟ-7

ಅತ್ತಲು ಜನಪ ಕುಂತೀಸುತನ ಸಹಿತ ಅರಮನೆಗೆ ಐತಂದನು. ಅರಮನೆಯ ಹೊಕ್ಕು ಅವನಿಪತಿಯು ಉತ್ತರನ ಕಾಣದೆ..)

ವಿರಾಟ ರಾಯ: ಕಂದನು ಎತ್ತಲು ಸರಿದನು…

(ಎನೆ ರಾಣಿಯರು ಭೂಪತಿಗೆ ಬಿನ್ನವಿಸಿದರು.)

ರಾಣಿ: ಉತ್ತರೆಯ ಗುರು ಸಾರಥಿತನವನು ಅಂಗೈಸೆ, ಕುರ ಬಲವನು ಅನುಕರಿಸಿದನು. ಕೆಲಬಲನ ಹಾರದೆ ಮಿಗೆ ಕದನಕೆ ಐದಿದನು.

(ಎಂದರೆ ಒಡಲೊಳು ಕೂರಲಗು ಮುರಿದ ಅಂದದಲಿ ಕಳವಳಿಸಿದನು. ಮನ ನೊಂದನು.)

ವಿರಾಟ ರಾಯ: ಅಕಟ, ಕುಮಾರನು ಎತ್ತಲು… ರಾಯದಳವು ಎತ್ತ. ಬಂದವರು ಭೀಷ್ಮಾದಿಗಳು. ತಾನು ಇಂದು ತರಹರಿಸುವೊಡೆ ತಾನೇನು ಇಂದುಧರನೇ. ಮರುಳಲಾ ಮಗನು.

(ಎನುತ ಚಿಂತಿಸಿದ. ಮಗಗೆ ಪಡಿಬಲವಾಗಿ ಬಲು ಮಂತ್ರಿಗಳನು ಅವನಿಪ ಬೀಳುಗೊಟ್ಟನು. ದುಗುಡದಿಂದ

ಇರೆ, ಹೊಳಲ ಕೈಸೂರೆಗಳ ಕಳಕಳದ ಮೊಗದ ಹರುಷದಲಿ ಅಖಿಲ ದೂತಾಳಿಗಳು ಬಂದುದು… )

ದೂತರು: ಜೀಯ ಬಿನ್ನಹ, ನಗರಿಯಲಿ ಗುಡಿಯ ಕಟ್ಟಿಸು. ಕುಮಾರಕನನು ಇದಿರುಗೊಳಿಸು ಕಳುಹು. ರಾಯ ಕುವರ ಪಿತಾಮಹನು… ರಿಪುರಾಯ ಕುವರ ಕುಠಾರ… ಕೌರವ ರಾಯ ಥಟ್ಟು ವಿಭಾಡ… ಕುರುಕುಲ ಗಜಕೆ ಪಂಚಾಸ್ಯ… ಕರ್ಣ ಗುರು ಗಾಂಗೇಯ ಮೊದಲಾದ ಅಖಿಳ ಕೌರವರಾಯ ದಳವನು ಗೆಲಿದನು. ಉತ್ತರ ತುರುವ ಮರಳಿಚಿದ.

(ಕೇಳಿ ಮಿಗೆ ಹಿಗ್ಗಿದನು. ತನು ಪುಳಕಾಳಿ ತಳಿತುದು. ಬಹಳ ಹರುಷದ ದಾಳಿಯಲಿ ಮನ ಮುಂದುಗೆಟ್ಟುದು. ಕಂಗಳು ಅರಳಿದವು. ಲಾಲಿಸುತ ಸರ್ವಾಂಗ ಹರುಷದೊಳಾಳೆ ಜನಪ ದೂತಾಳಿಗೆ ಪಸಾಯಿತವ ಇತ್ತನು. ಅವದಿರು ರಾಯನ ಓಲಗವ ಸುಲಿದರು.

“ಇದಿರುಗೊಳ ಹೇಳು” ಎನಲು ಸರ್ವಾಂಗದಲಿ ಮಣಿ ಮೌಕ್ತಿಕದ ಸಿಂಗಾರದ, ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ ಸುದತಿಯರು ಹೊರವಂಟರು. ಒಗ್ಗಿನ ಮೃದು ಮೃದಂಗದ ಕಹಳೆಗಳು ಸಂಪದದ ಸೊಂಪಿನಲಿ ಎಸೆಯೆ ರಾಜಾಂಗನೆಯರ ಅನುವಾಯ್ತು.)

ವಿರಾಟ ರಾಯ: ಕಂಕ, ಕವಿದು ನೂಕುವ ಹರುಷವನು ಸಂತವಿಸಲು ವಿರಾಟರಾಯ ಅರಿಯೆನು. ನಿನ್ನೊಡನೆ ಎವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತು.ಕಂಕ: ಅವನಿಪತಿ ಕೇಳ್, ಜೂಜಿನಲಿ ಪಾಂಡವರು ಸಿಲುಕಿದರು. ಅವರ ವಿಧಿಯನು ಭುವನದಲಿ ಬಲ್ಲವರು ಅದಾರು.ವಿರಾಟ ರಾಯ: ಅವರು ರಾಜ್ಯವನೊಡ್ಡಿ ಸೋತವೊಲು ಎವಗೆ ಪಣ ಬೇರಿಲ್ಲ. ಕುಮಾರ ಅಭ್ಯುದಯ ವಿಜಯ ಶ್ರವಣ ಸುಖ ಮಿಗಲು ಹರ್ಷೋತ್ಸವ… ಎವಗೆ ಮನವಾಯ್ತು. ಒಡ್ಡು ಸಾರಿಯ ನಿವಹವನು ಹೂಡು.

(ಎನಲು ಹೂಡಿದನು ಅವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು. ಕೇಳಿ ಸಮತಳಿಸಿತ್ತು.)

ವಿರಾಟ ರಾಯ: ಕಂಕ, ನೋಡೈ ರಾಯ ಥಟ್ಟಿನಲಿ ಕಾಳಗವನು ಉತ್ತರನು ಗೆಲಿದನು. ಶೂಲಪಾಣಿಗೆ ಸೆಡೆಯದ ಅಹಿತ ಭಟಾಳಿ ಸೋತುದು. ಏನ ಹೇಳು, ದಿವಿಜ ನರರೊಳು ಕುಮಾರನನು ಹೋಲುವವರು ಉಂಟೇ.ಕಂಕ: ಅರಿ ಸೇನೆ ಸೋತುದು ಉಂಟು. ಸುರಭಿವ್ರಾತ ಮರಳಿದುದು ಉಂಟು. ಗೆಲವು ಇದು ಕೌತುಕವಲೇ. ಎಮ್ಮ ಚಿತ್ತದಲಿ ಗೆಯಲು ಅದ್ಭುತವು. ಮಾತು ಹೋಲುವೆ ಅಹುದು, ತಪ್ಪೇನು. ಜಗದ ವಿಖ್ಯಾತ ಸಾರಥಿಯಿರೆ ಬಳಿಕ ಕುಮಾರಗೆ ಭೀತಿ ಎಲ್ಲಿಯದು. ವಿರಾಟ ರಾಯ: ಎಲೆ ಮರುಳೆ ಸನ್ಯಾಸಿ, ನಿನ್ನದು ಮತ್ಸರದೊಳಗೆ ಮುಳುಗಿದ ಚಿತ್ತ. ಹೇಳು, ಆವುದು ಅದ್ಭುತವು. ಸಂದೇಹವೇ ಗೆಲವಿನಲಿ. ಸುಕುಮಾರ ಅಳುಕವನೆ. ಸಾರಥಿ ಬಲುಹನು ಉಳ್ಳವನೇ.

(ಎಂದು ವಿರಾಟ ಖತಿಗೊಂಡ)

ನಾರಿಯರ ಮೈಗುರುಹು, ಪುರುಷರ ಚಾರು ಚಿಹ್ನವ ಕೂಡಿಕೊಂಡಿಹ ಸಾರಥಿಯ ದೆಸೆಯಿಂದ ಕುವರನು ಗೆಲಿದನು ಎಂಬುದನು ನಾನು ಇನ್ನವ ಸೈರಿಸಿದೆ. ಮತ್ತಾರೊಡನೆ ಮಾತಾಡದಿರು. ಕಂಕ, ನೀ ನಿಸ್ಸಾರ ಹೃದಯನು. ನಪುಂಸಕನಲಿ ನಿರಂತರ ಪಕ್ಷ. ದುಷ್ಟಾತ್ಮ ಹೋಗು.ಕಂಕ: ಅರಸ, ಖತಿಯ ಹಿಡಿಯದಿರು. ದಿಟ, ನೀನು ಅತಿಶಯವ ಬಯಸುವರೆ ಜನ ಸಮ್ಮತವು. ಸಾರಥಿ ಗೆಲಿದನು ಎಂದೇ ಡಂಗುರವ ಹೊಯಿಸು. . ಸುತನು ಸಾರಥಿಯೆಂದು ಸಾರಿಸು. ಇದು ವಿತಥವಲ್ಲ. ತನಗೆ ಕವಲು ನಾಲಗೆಯಿಲ್ಲ. ಪಕ್ಷಪಾತ ಸ್ಥಿತಿಯನು ಆಡೆವು. ನಿನ್ನ ಮೋಹದ ಕಂಗಳಿಗೆ ಮಗನು ಉನ್ನತೋನ್ನತ ಸತ್ವನೆಂದೇ ಮುನ್ನ ತೋರಿತು. ಸಂಸಾರಕ ಭ್ರಮೆಗೆ ಹೊಲ್ಲೆಹವೆ. ಆ ಬೃಹನ್ನಳೆ ಗೆಲಿದವನು. ಇನ್ನು ಭೀಷ್ಮನು ಕರ್ಣ ಕೃಪ ಗುರು ಗುರುತನೂಭವರು ನಿನ್ನ ಮಗಗೆ ಅಳುಕವರೆ.

(ಎನಲು ಖತಿ ಬಿಗುಹೇರಿ, ಹಲು ಹಲುದಿನುತೆ, ಕಂಗಳಲಿ ಉರಿಯನು ಉಗುಳುತ, ಬಿಗಿದು ಔಡೊತ್ತಿ ಕನಲಿ ಕನಕದ ಸಾರಿಯನು ನೆಗಹಿ ಜನಪತಿಯ ಹಣೆ ಒಡೆಯಲಿಡೆ… ಭೋಂಕೆನಲು ಜಾಜಿನ ಗಿರಿಯ ನಿರ್ಜರದವೊಲು ಶಿರದ ಸೆಲೆಯೊಡೆದು ರುಧಿರದ ಧಾರೆ ಸಿಡಿದುದು. ಅತಿಧೀರನು ಕೈಯೊಡ್ಡಿ ರಕುತದ ಧಾರೆಯನು ಕೈತುಂಬ ಹಿಡಿದು ಸೈರಿಸುತ, ಓರೆಯ ನೋಟದಲಿ ಸೈರಂಧ್ರಿಯನು ಕರೆಯೆ, ನಾರಿ ಹರಿತಂದು…

ಸೈರಂಧ್ರಿ: ಅಕಟ, ನೊಂದನು ಕಾರುಣಿಕ ಸನ್ಯಾಸಿ.

(ಎನುತ ವಿಕಾರಿಸದೆ ಬಹಳ ಶೋಣಿತವ ಸೆರಗಿನಲಿ ತೋದಳು. ಮಡದಿ ಕರಪಲ್ಲವದಲಿ ಒರೆಸಿದಳು. ಅಡಿಗಡಿಗೆ ಹಣೆಯನು ಕಪೋಲವ ತೊಡೆದು ಮುಖವನು ತೊಳೆದಳು. ಅದನು ಅವ ಕಂಡು ಬೆರಗಾಗಿ… )

ವಿರಾಟ ರಾಯ: ಏಕೆ ಕಾಮಿನಿ, ರಕುತವನು ಹಿಡಿದೆ. ನಿಧಾನವನು ನುಡಿ. ಇವರು ನೊಂದರೆ ಮಿಡುಕಲೇತಕೆ ನೀನು?

(ಎನುತ ದುರುಪದಿಯ ಬೆಸಗೊಂಡ.)

ಸೈರಂಧ್ರಿ: ಅರಸ ಕೇಳು, ಬದುಕಿದೆ. ಈ ಮುನಿಯ ನೆತ್ತರು ಧರೆಯೊಳು ಒಕ್ಕೊಡೆ, ಒಂದು ಕಣೆಯಕೆ ಆ ಪ್ರದೇಶವನು ಒರೆಸಿ ಕಳೆವುದು ದಿಟ. ನಿನ್ನ ರಾಜ್ಯದ ಸಿರಿಯು ಉರಿದು ಹೋಹುದು. ಬೃಹನ್ನಳೆಗೆ ಏರಿಸಿದ ಬಿರುದು. ಕೈಯಲಿ ತುಂಬಿ ಶೋಣಿತವ ಪರಮ ಯತಿ ಕಾಯಿದನು.

ವಿರಾಟ ರಾಯ: (ತನ್ನಲ್ಲಿಯೇ) ಈಕೆ ಯಾರು. ಇವರಾರು. ನಾಟ್ಯ ವ್ಯಾಕರಣ ಪಂಡಿತ ಬೃಹನ್ನಳೆಯು ಈಕೆಗೆ ಏನ್ ಅಹನು. ಕಾಳು ಕೀಲುಗಳ ಅರಿಯಬಾರದು. ನನಗೆ ಏಕೆ ಅದರ ಅರಿತ.

(ಎಂದು ಅವಿವೇಕಿಯಿರೆ… )

ಪದ ವಿಂಗಡಣೆ ಮತ್ತು ತಿರುಳು

ಅತ್ತಲು=ಆ ಕಡೆ; ಜನಪ=ರಾಜ/ವಿರಾಟರಾಯ; ಕುಂತೀಸುತ=ದರ್ಮರಾಯ/ಕಂಕಬಟ್ಟ;

ಅತ್ತಲು ಜನಪ ಕುಂತೀಸುತನ ಸಹಿತ ಅರಮನೆಗೆ ಐತಂದನು=ಅತ್ತ ವಿರಾಟನಗರದಲ್ಲಿ ವಿರಾಟರಾಜನು ತನ್ನ ಆಪ್ತಸಹಾಯಕನಾದ ಕಂಕಬಟ್ಟನ ಜೊತೆಗೂಡಿ ಅರಮನೆಗೆ ಬಂದನು;

ಅವನಿ=ಬೂಮಿ; ಪತಿ=ಒಡೆಯ; ಅವನಿಪತಿ=ರಾಜ;

ಅರಮನೆಯ ಹೊಕ್ಕು ಅವನಿಪತಿಯು ಉತ್ತರನ ಕಾಣದೆ=ಅರಮನೆಯೊಳಕ್ಕೆ ಬಂದ ವಿರಾಟರಾಜನು ತನ್ನ ಮಗ ಉತ್ತರಕುಮಾರನನ್ನು ಕಾಣದೆ;

ಕಂದನು ಎತ್ತಲು ಸರಿದನು ಎನೆ=ಮಗನು ಎಲ್ಲಿಗೆ ಹೋದನು ಎಂದು ರಾಣಿ ಸುದೇಶ್ಣೆಯನ್ನು ಕೇಳಿದನು;

ಭೂಪತಿ=ರಾಜ; ಬಿನ್ನವಿಸು=ಅರಿಕೆಮಾಡಿಕೊಳ್ಳುವುದು;

ರಾಣಿಯರು ಭೂಪತಿಗೆ ಬಿನ್ನವಿಸಿದರು=ಸುದೇಶ್ಣೆಯು ರಾಜನಿಗೆ ನಡೆದ ಸಂಗತಿಯನ್ನು ಹೇಳಿದಳು;

ಉತ್ತರೆಯ ಗುರು=ಬ್ರಹನ್ನಳೆ; ಅಂಗೈಸು=ಒಪ್ಪು/ಸ್ವೀಕರಿಸು; ಕುರುಬಲ=ದುರ್‍ಯೋದನನ ಸೇನೆ; ಅನುಕರಿಸು=ಅಣಿಯಾಗು/ಸಿದ್ದಪಡಿಸು;

ಉತ್ತರೆಯ ಗುರು ಸಾರಥಿತನವನು ಅಂಗೈಸೆ, ಕುರು ಬಲವನು ಅನುಕರಿಸಿದನು ಎಂದರೆ=ಕಾಳೆಗದ ಕಣದಲ್ಲಿ ತೇರನ್ನು ಮುನ್ನಡೆಸಲು ಬೃಹನ್ನಳೆಯು ಒಪ್ಪಿಕೊಂಡಿದ್ದರಿಂದ, ನಮ್ಮ ಮಗನು ದುರ್‍ಯೋದನನ ಸೇನಾಬಲವನ್ನು ಎದುರಿಸಲು ರಣರಂಗಕ್ಕೆ ತೆರಳಿದನು ಎಂದು ಹೇಳಲು

ಹಾರು=ನೋಡು/ಕಾಯು; ಮಿಗೆ=ಅತಿಶಯತೆ/ಹೆಚ್ಚಾಗಿ;

ಕೆಲಬಲನ ಹಾರದೆ ಮಿಗೆ ಕದನಕೆ ಐದಿದನು=ಮುಂದೆ ಏನಾಗುತ್ತದೆ ಎಂಬುದನ್ನು ಲೆಕ್ಕಿಸದೆ ಹೆಚ್ಚಿನ ಸಡಗರದಿಂದ ಕಾಳೆಗಕ್ಕೆ ಹೋದನು;

ಒಡಲು=ದೇಹ; ಕೂರ್+ಅಲಗು; ಕೂರ್=ಹರಿತವಾದ; ಅಲಗು=ಕತ್ತಿ; ಅಂದ=ರೀತಿ;

ಒಡಲೊಳು ಕೂರಲಗು ಮುರಿದ ಅಂದದಲಿ ಕಳವಳಿಸಿದನು=ದೇಹದೊಳಕ್ಕೆ ಹರಿತವಾದ ಕತ್ತಿಯ ತುಂಡು ನಾಟಿಕೊಂಡಂತೆ ವಿರಾಟರಾಯನು ಸಂಕಟಕ್ಕೆ ಒಳಗಾದನು. ದುರ್‍ಯೋದನನ ಚತುರಂಗ ಸೇನೆಯ ಎದುರು ಹೋರಾಡಲು ಮಗನಾದ ಉತ್ತರಕುಮಾರನು ತೆರಳಿರುವ ಸಂಗತಿಯು ತಂದೆಯಾದ ವಿರಾಟರಾಯನ ಮನದಲ್ಲಿ ಅತಿ ಹೆಚ್ಚಿನ ಕಳವಳವನ್ನುಂಟುಮಾಡಿತು;

ಮನ ನೊಂದನು=ಮನದಲ್ಲಿ ಬಹಳವಾಗಿ ನೊಂದನು;

ಅಕಟ=ಅಯ್ಯೋ; ಎತ್ತ=ಯಾವ ಕಡೆ; ರಾಯದಳ=ದುರ್‍ಯೋದನನನ ಚತುರಂಗ ಸೇನೆ;

ಅಕಟ, ಕುಮಾರನು ಎತ್ತಲು… ರಾಯದಳವು ಎತ್ತ=ಅಯ್ಯೋ… ನನ್ನ ಮಗನ ಶಕ್ತಿಯೇನು… ದುರ್‍ಯೋದನನ ಚತುರಂಗಬಲದ ಶಕ್ತಿಯೇನು. ಅಂದರೆ ಯಾವ ರೀತಿಯಿಂದಲೂ ನನ್ನ ಮಗನು ಅಂತಹ ದೊಡ್ಡಸೇನೆಯನ್ನು ಎದುರಿಸಿ ಗೆಲ್ಲಲಾರ;

ಭೀಷ್ಮ+ಆದಿಗಳು; ಆದಿಗಳು=ಮೊದಲಾದವರು;

ಬಂದವರು ಭೀಷ್ಮಾದಿಗಳು=ದುರ್‍ಯೋದನನ ಸೇನೆಯೊಡನೆ ಬಂದಿರುವವರು ಸಾಮಾನ್ಯರಲ್ಲ. ಮಹಾವೀರರಾದ ಬೀಶ್ಮ, ದ್ರೋಣ, ಕರ್‍ಣ, ಅಶ್ವತ್ತಾಮ ಮುಂತಾದವರು;

ತರಹರ=ಕೆಚ್ಚು/ಸಾಹಸ/ಶಕ್ತಿ; ಇಂದು=ಚಂದ್ರ; ಧರ=ತೊಟ್ಟಿರುವವನು; ಇಂದುಧರ=ಶಿವ;

ತಾನು ಇಂದು ತರಹರಿಸುವೊಡೆ ತಾನೇನು ಇಂದುಧರನೇ=ದುರ್‍ಯೋದನನ ಮಹಾಸೇನೆಯೊಡನೆ ತನ್ನ ಸಾಹಸವನ್ನು ಮೆರೆಯಲು ಇವನೇನು ಶಿವನೇ; ಮರುಳ=ತಿಳಿಗೇಡಿ;

ಮರುಳಲಾ ಮಗನು ಎನುತ ಚಿಂತಿಸಿದ=ನನ್ನ ಮಗನು ತಿಳಿಗೇಡಿಯಾದನು ಎನ್ನುತ್ತ ವಿರಾಟರಾಯನು ಕಾಳೆಗದ ಕಣದಲ್ಲಿ ತನ್ನ ಮಗನಿಗೆ ಏನಾಗುವುದೋ ಎಂಬ ಚಿಂತೆಗೊಳಗಾದನು;

ಪಡಿಬಲ=ಸಹಾಯಕವಾಗಿ ಬರುವ ದೊಡ್ಡಸೇನೆ; ಬಲು=ಶಕ್ತಿಯುತರಾದ; ಅವನಿಪ=ರಾಜ;

ಮಗಗೆ ಪಡಿಬಲವಾಗಿ ಬಲು ಮಂತ್ರಿಗಳನು ಅವನಿಪ ಬೀಳುಗೊಟ್ಟನು=ಮಗನಿಗೆ ನೆರವಾಗಿ ಹೋರಾಡಲೆಂದು ಶಕ್ತಿಯುತರಾದ ಮಂತ್ರಿಗಳಿಂದ ಕೂಡಿದ ಸೇನಾಬಲವನ್ನು ಕಾಳೆಗದ ರಂಗಕ್ಕೆ ಕಳುಹಿಸಿದನು;

ದುಗುಡದಿಂದ ಇರೆ=ವಿರಾಟರಾಯನು ಕಾಳೆಗದ ಕಣದಲ್ಲಿ ಮಗನಿಗೆ ಏನಾಗುವುದೋ ಎಂಬ ಆತಂಕದಿಂದ ಕಂಗಾಲಾಗಿರಲು;

ಹೊಳಲು=ನಗರ/ಪಟ್ಟಣ; ಕೈಸೂರೆ=ಲೂಟಿ; ಹೊಳಲ ಕೈಸೂರೆ=ಇಲ್ಲಿ ಇದೊಂದು ನುಡಿಗಟ್ಟಾಗಿ ಬಳಕೆಗೊಂಡಿದೆ. ಗೆದ್ದ ರಾಜನ ಪಡೆಯು ಸೋತ ರಾಜನ ಪಟ್ಟಣದ ಒಳಹೊಕ್ಕು ಕಯ್ಗೆ ಸಿಕ್ಕಿದ ಬೆಲೆಬಾಳುವ ವಸ್ತುಗಳನ್ನು ದೋಚುವಿಕೆಯನ್ನು ‘ಹೊಳಲ ಕೈಸೂರೆ’ ಎನ್ನುತ್ತಾರೆ. ಅಂತೆಯೇ ಕೆಲವೊಮ್ಮೆ ಗೆದ್ದ ರಾಜನ ಪಡೆಯು ತಮ್ಮ ರಾಜನ ಪಟ್ಟಣದಲ್ಲಿಯೂ ಗೆಲುವಿನ ಉತ್ಸಾಹದಲ್ಲಿ ಬೆಲೆಬಾಳುವ ವಸ್ತುಗಳನ್ನು ತಮ್ಮ ಜನರಿಂದಲೇ ದೋಚುತ್ತಾರೆ; ಕಳಕಳ=ಗಜಬಜೆ/ಗಲಾಟೆ; ಮೊಗ=ಮುಕ; ಅಖಿಲ=ಸಮಸ್ತ/ಎಲ್ಲ; ದೂತ+ಆಳಿಗಳು; ದೂತ=ಸುದ್ದಿವಾಹಕ; ಆಳಿ=ಗುಂಪು/ಸಮೂಹ;

ಹೊಳಲ ಕೈಸೂರೆಗಳ ಕಳಕಳದ ಮೊಗದ ಹರುಷದಲಿ ಅಖಿಲ ದೂತಾಳಿಗಳು ಬಂದುದು=ಜಯದ ಉತ್ಸಾಹ ಮತ್ತು ಉನ್ಮಾದದಲ್ಲಿ ಗದ್ದಲ ಮಾಡುತ್ತ ನಗೆಮೊಗದ ದೂತರ ಗುಂಪು ವಿರಾಟರಾಯನ ಬಳಿಗೆ ಬಂದಿತು;

ಗುಡಿ=ಬಾವುಟ;

ಜೀಯ=ಒಡೆಯ; ಬಿನ್ನಹ=ಅರಿಕೆ;

ನಗರಿಯಲಿ ಗುಡಿಯ ಕಟ್ಟಿಸು=ಜಯದ ಸಂಬ್ರಮದ ಆಚರಣೆಯ ಸಂಕೇತವಾಗಿ ಬಾವುಟವನ್ನು ನಗರದೆಲ್ಲೆಡೆ ಕಟ್ಟಿಸು; ಇದಿರುಗೊಳಿಸು=ಸ್ವಾಗತಿಸಲು/ಬರಮಾಡಿಕೊಳ್ಳಲು;

ಕುಮಾರಕನನು ಇದಿರುಗೊಳಿಸು ಕಳುಹು=ಕಾಳೆಗದ ಕಣದಲ್ಲಿ ಗೆಲುವನ್ನು ಪಡೆದು ವಿರಾಟನಗರಕ್ಕೆ ಬರುತ್ತಿರುವ ಉತ್ತರಕುಮಾರನನ್ನು ಸ್ವಾಗತಿಸಲು ಜನರನ್ನು ಕಳುಹಿಸು;

ಪಿತಾಮಹ=ಬ್ರಹ್ಮ/ತಾತ; ರಾಯಕುವರ ಪಿತಾಮಹ=ಮಹಾಬಲನಾದ ರಾಜಕುವರ; ರಿಪು=ಹಗೆ/ಶತ್ರು; ರಾಯ=ರಾಜ; ಕುಠಾರ=ಕೊಡಲಿ;

ರಿಪುರಾಯ ಕುವರ ಕುಠಾರ=ಇದು ಒಂದು ಬಿರುದಿನ ನುಡಿಗಟ್ಟು. ಶತ್ರುರಾಜರ ತಲೆಯನ್ನು ಕಡಿಯುವ ಕೊಡಲಿಯಂತಿರುವವನು; ಥಟ್ಟು=ಸೇನೆ; ವಿಭಾಡ=ನಾಶಮಾಡುವವನು/ಬಡಿದುಹಾಕುವವನು;

ಕೌರವ ರಾಯ ಥಟ್ಟು ವಿಭಾಡ=ದುರ್‍ಯೋದನನ ಸೇನೆಯನ್ನು ನಾಶಮಾಡುವವನು; ಗಜ=ಆನೆ; ಪಂಚಾಸ್ಯ=ಸಿಂಹ;

ಕುರುಕುಲ ಗಜಕೆ ಪಂಚಾಸ್ಯ=ಕುರುಕುಲವೆಂಬ ಆನೆಗೆ ಸಿಂಹದಂತಿರುವವನು;

ಗುರು=ದ್ರೋಣ; ಅಖಿಳ=ಸಮಸ್ತ;

ಕರ್ಣ ಗುರು ಗಾಂಗೇಯ ಮೊದಲಾದ ಅಖಿಳ ಕೌರವರಾಯ ದಳವನು ಗೆಲಿದನು. ಉತ್ತರ ತುರುವ ಮರಳಿಚಿದ=ಉತ್ತರಕುಮಾರನು ಕರ್‍ಣ, ಗುರು ದ್ರೋಣ, ಗಾಂಗೇಯ ಮೊದಲಾದವರಿಂದ ಕೂಡಿದ್ದ ದುರ್‍ಯೋದನನ ಸೇನೆಯನ್ನೆಲ್ಲಾ ಸದೆಬಡಿದು ಗೆಲುವನ್ನು ಪಡೆದು, ಗೋವುಗಳನ್ನು ವಿರಾಟನಗರಿಗೆ ಹಿಂತಿರುಗಿಸಿದ;

ಕೇಳಿ ಮಿಗೆ ಹಿಗ್ಗಿದನು=ಮಗನ ಗೆಲುವಿನ ವಾರ್‍ತೆಯನ್ನು ದೂತರಿಂದ ಕೇಳಿ ವಿರಾಟರಾಯನ ಆನಂದದಿಂದ ಹಿಗ್ಗಿದನು; ತನು=ದೇಹ; ಪುಳಕ+ಆಳಿ; ಪುಳಕ=ಮಯ್ ನವಿರೇಳುವಿಕೆ/ರೋಮಾಂಚನ; ಆಳಿ=ಸಾಲು/ಸಮೂಹ; ಪುಳಕಾಳಿ=ಹೆಚ್ಚಿನ ರೋಮಾಂಚನ; ತಳಿತು=ಅರಳು/ವಿಕಸಿಸು; ತಳಿತುದು=ಉಂಟಾಯಿತು;

ತನು ಪುಳಕಾಳಿ ತಳಿತುದು=ವಿರಾಟರಾಯನ ದೇಹವೆಲ್ಲವೂ ರೋಮಾಂಚನಗೊಂಡಿತು;

ಮುಂದುಗೆಡು=ಹೆಚ್ಚಿನ ಬಾವೋದ್ರೇಕದಿಂದ ಏನು ಮಾಡಬೇಕು ಎಂಬುದನ್ನು ತಿಳಿಯದಂತಾಗುವುದು/ವಿವೇಚನೆಯನ್ನು ಕಳೆದುಕೊಳ್ಳುವುದು;

ಬಹಳ ಹರುಷದ ದಾಳಿಯಲಿ ಮನ ಮುಂದುಗೆಟ್ಟುದು=ಅಪಾರವಾದ ಆನಂದದ ಒತ್ತಡದಲ್ಲಿ ವಿರಾಟರಾಯನ ಮನಸ್ಸಿಗೆ ಮುಂದೆ ಏನು ಮಾಡಬೇಕೆಂಬುದೇ ತೋಚದಾಯಿತು;

ಕಂಗಳು ಅರಳಿದವು=ಕಣ್ಣುಗಳು ಅರಳಿದವು; ಲಾಲಿಸು=ಕೇಳು/ಆಲಿಸು; ಸರ್ವಾಂಗ=ಇಡೀ ದೇಹ/ಮಯ್ ತುಂಬಾ; ಹರುಷದೊಳು+ಆಳೆ; ಆಳ್=ಮಗ್ನವಾಗು/ಮುಳುಗು;

ಲಾಲಿಸುತ ಸರ್ವಾಂಗ ಹರುಷದೊಳಾಳೆ=ಮಗನು ದುರ್‍ಯೋದನನ ಸೇನಾಬಲದ ಮೇಲೆ ಜಯವನ್ನು ಪಡೆದ ವಾರ್‍ತೆಯನ್ನು ಕೇಳಿ ತಂದೆಯಾದ ವಿರಾಟರಾಯನ ದೇಹದ ಕಣಕಣವೆಲ್ಲವೂ ಆನಂದದಿಂದ ತುಂಬಿತುಳುಕಾಡಲು; ಜನಪ=ರಾಜ; ಪಸಾಯಿತ=ಉಡುಗೊರೆ/ಬಹುಮಾನ; ದೂತ+ಆಳಿ; ಆಳಿ=ಗುಂಪು;

ಜನಪ ದೂತಾಳಿಗೆ ಪಸಾಯಿತವ ಇತ್ತನು=ವಿರಾಟರಾಜನು ದೂತರೆಲ್ಲರಿಗೂ ಉಡುಗೊರೆಯನ್ನು ನೀಡಿದನು; ಅವದಿರು=ಆ ದೂತರು; ಓಲಗ=ರಾಜನ ಸಬೆ; ಸುಲಿ=ವಸೂಲಿ ಮಾಡು;

ಅವದಿರು ರಾಯನ ಓಲಗವ ಸುಲಿದರು=ವಿಜಯದ ವಾರ್‍ತೆಯನ್ನು ತಂದಿದ್ದ ದೂತರು ರಾಜಸಬೆಯಲ್ಲಿದ್ದವರಿಂದಲೂ ಉಡುಗೊರೆಗಳನ್ನು ವಸೂಲಿ ಮಾಡಿದರು;

ಇದಿರುಗೊಳ ಹೇಳು ಎನಲು=ಉತ್ತರಕುಮಾರನನ್ನು ವೀರೋಚಿತವಾಗಿ ಸ್ವಾಗತಿಸಲು ಹೇಳಿರಿ ಎಂದು ವಿರಾಟರಾಜನು ಅಪ್ಪಣೆಮಾಡಲು;

ಸರ್ವಾಂಗ=ಮಯ್ ತುಂಬಾ; ಮಣಿ=ಮುತ್ತು/ರತ್ನ/ವಜ್ರ ಮುಂತಾದ ಬೆಲೆಬಾಳುವ ಹರಳುಗಳು; ಮೌಕ್ತಿಕ=ನವರತ್ನಗಳಲ್ಲಿ ಒಂದು ಬಗೆಯ ಹರಳು/ಮುತ್ತು; ಸಿಂಗಾರ=ಅಲಂಕಾರ;

ಸರ್ವಾಂಗದಲಿ ಮಣಿ ಮೌಕ್ತಿಕದ ಸಿಂಗಾರದ=ಮಯ್ ತುಂಬಾ ಮುತ್ತು, ರತ್ನ, ವಜ್ರ ಮುಂತಾದ ಹರಳುಗಳಿಂದ ಮಾಡಿರುವ ಒಡವೆಗಳನ್ನು ಅಲಂಕರಿಸಿಕೊಂಡಿರುವ;

ಸುರೇಖೆ=ಸುಂದರವಾದ ಗೆರೆ; ಲಲಿತ=ಚೆಲುವು/ಮನೋಹರವಾದುದು; ಚಿತ್ರಾವಳಿ=ನಾನಾ ಬಗೆಯ ಬಣ್ಣದ ಚಿತ್ರಗಳಿಂದ ಕೂಡಿರುವ ಚಿತ್ರ; ಮುಸುಕು=ಮೊಗವನ್ನು ಮರೆಮಾಡಿಕೊಳ್ಳಲು ತೊಡುವ ಬಟ್ಟೆ; ಸುದತಿ=ಚೆಲುವೆ;

ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ ಸುದತಿಯರು ಹೊರವಂಟರು=ಸುಂದರವಾದ ಗೆರೆಗಳಿಂದ ಕೂಡಿ ಮನೋಹರವಾದ ಚಿತ್ರಗಳ ಕಸೂತಿಕಲೆಯಿಂದ ಸಿದ್ದಗೊಂಡಿರುವ ಮುಸುಕನ್ನು ತಮ್ಮ ಮೊಗದ ಮೇಲೆ ಹಾಕಿಕೊಂಡಿರುವ ಚೆಲುವೆಯರು ಉತ್ತರಕುಮಾರನನ್ನು ಸ್ವಾಗತಿಸಲು ಅರಮನೆಯಿಂದ ವಿರಾಟನಗರದ ಹೆಬ್ಬಾಗಿಲತ್ತ ನಡೆದರು;

ಒಗ್ಗು=ಒಟ್ಟುಗೂಡು/ಗುಂಪಾಗಿ ಸೇರು; ಮೃದು=ಕೋಮಲವಾದ; ಮೃದಂಗ=ಒಂದು ಬಗೆಯ ಚರ್‍ಮವಾದ್ಯ; ಕಹಳೆ=ಕೊಂಬಿನಂತೆ ಬಾಗಿರುವ ತುತ್ತೂರಿ; ಸಂಪದ=ಹೆಚ್ಚಳ; ಸೊಂಪು=ಇಂಪು/ಇನಿದು; ಎಸೆ=ಶೋಬಿಸು/ಒಪ್ಪು;

ಒಗ್ಗಿನ ಮೃದು ಮೃದಂಗದ ಕಹಳೆಗಳು ಸಂಪದದ ಸೊಂಪಿನಲಿ ಎಸೆಯೆ=ಸ್ವಾಗತಕಾರಿಣಿಯರ ಮುಂದೆ ಒಗ್ಗೂಡಿದ ವಾದ್ಯದ ತಂಡದವರ ಮ್ರುದಂಗದಿಂದ ಮತ್ತು ಕಹಳೆಗಳಿಂದ ಹೊರಹೊಮ್ಮುತ್ತಿರುವ ಕೋಮಲವಾದ, ಇಂಪಾದ ಮಂಗಲಕರವಾದ ದನಿಯು ಕೇಳಿಬರುತ್ತಿರಲು;

ರಾಜ+ಅಂಗನೆ; ಅಂಗನೆ=ಹೆಂಗಸು; ರಾಜಾಂಗನೆ=ರಾಣಿವಾಸದ ಹೆಂಗಸರು; ಅನು+ಆಯ್ತು; ಅನು=ಅಣಿ/ಸಿದ್ದತೆ/ಸಜ್ಜು;

ರಾಜಾಂಗನೆಯರ ಅನುವಾಯ್ತು=ರಾಣಿವಾಸದ ಹೆಂಗಸರು ಉತ್ತರಕುಮಾರನನ್ನು ಸ್ವಾಗತಿಸಲು ಸಜ್ಜುಗೊಂಡರು; ಕಂಕ=ಅಜ್ನಾತವಾಸದಲ್ಲಿರುವ ದರ್‍ಮರಾಯನ ಹೆಸರು;

ಕವಿ=ಮುತ್ತು/ಎರಗು/ದಟ್ಟವಾಗು; ನೂಕು=ಮಿಡಿ/ಮೀಟು; ಸಂತವಿಸು=ಶಾಂತವಾಗು;

ಕಂಕ, ಕವಿದು ನೂಕುವ ಹರುಷವನು ಸಂತವಿಸಲು ಅರಿಯನು=ಕಂಕಬಟ್ಟನೇ, ಉತ್ತರಕುಮಾರನ ಜಯದ ವಾರ್‍ತೆಯನ್ನು ಕೇಳಿದ ಗಳಿಗೆಯಿಂದ ನನ್ನ ಮಯ್ ಮನದಲ್ಲಿ ದಟ್ಟವಾಗಿ ಮಿಡಿಯುತ್ತಿರುವ ಆನಂದದ ಒಳಮಿಡಿತಗಳನ್ನು ಹೇಗೆ ಹತ್ತಿಕ್ಕಿಕೊಳ್ಳಬೇಕೆಂಬುದು ನನಗೆ ತಿಳಿಯುತ್ತಿಲ್ಲ;

ಎವಗೆ=ನಮಗೆ; ವಿಮಳ=ಉತ್ತಮವಾದ/ಪವಿತ್ರವಾದ; ದ್ಯೂತ=ಪಗಡೆಯಾಟ/ಜೂಜು; ಕೇಳಿ=ಆಟ; ಚಿತ್ತ+ಆಯ್ತು; ಚಿತ್ತ=ಮನಸ್ಸು;

ನಿನ್ನೊಡನೆ ಎವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತು=ಕಂಕ… ನಿನ್ನೊಡನೆ ಉತ್ತಮವಾದ ಪಗಡೆಯಾಟವನ್ನು ಆಡಬೇಕೆಂಬ ಮನಸ್ಸಾಗಿದೆ;

ಅವನಿ=ಬೂಮಿ; ಪತಿ=ಒಡೆಯ; ಅವನಿಪತಿ=ರಾಜ; ಸಿಲುಕು=ವಶವಾಗು/ಈಡಾಗು; ವಿಧಿ=ಗತಿ/ಅವಸ್ತೆ; ಭುವನ=ಲೋಕ/ಜಗತ್ತು; ಅದು+ಆರು;

ಅವನಿಪತಿ ಕೇಳ್, ಜೂಜಿನಲಿ ಪಾಂಡವರು ಸಿಲುಕಿದರು. ಅವರ ವಿಧಿಯನು ಭುವನದಲಿ ಬಲ್ಲವರು ಅದಾರು=ರಾಜನೇ ಕೇಳು, ಪಗಡೆಯಾಟದ ಜೂಜಿನಿಂದಾಗಿ ಪಾಂಡವರು ಅಪಾರವಾದ ಸಂಕಟಕ್ಕೆ ಈಡಾದರು. ಈಗ ಅವರ ಅವಸ್ತೆಯು ಏನಾಗಿದೆ ಎಂಬುದನ್ನು ಲೋಕದಲ್ಲಿ ಯಾರು ತಾನೇ ತಿಳಿದಿದ್ದಾರೆ; ರಾಜ್ಯವನು+ಒಡ್ಡಿ; ಒಡ್ಡು=ಇಡು/ಜೂಜಾಟದಲ್ಲಿ ಇಡುವ ಸಂಪತ್ತು;

ಅವರು ರಾಜ್ಯವನೊಡ್ಡಿ ಸೋತವೊಲು ಎವಗೆ ಪಣ ಬೇರಿಲ್ಲ=ಪಾಂಡವರು ಜೂಜಾಟದಲ್ಲಿ ತಮ್ಮ ರಾಜ್ಯದ ಸಕಲ ಸಂಪತ್ತನ್ನು ಒಡ್ಡಿ ಸೋತ ರೀತಿಯಲ್ಲಿ ನಮ್ಮಿಬ್ಬರ ನಡುವಣ ಜೂಜಿನಲ್ಲಿ ಹಣ ಇರುವುದಿಲ್ಲ; ಅಭ್ಯುದಯ=ಏಳಿಗೆ/ಉನ್ನತಿ/ಶ್ರೇಯಸ್ಸು; ಶ್ರವಣ=ಕೇಳುವಿಕೆ; ಮಿಗು=ಹೆಚ್ಚಾಗು; ಹರ್ಷ+ಉತ್ಸವ;

ಕುಮಾರ ಅಭ್ಯುದಯ ವಿಜಯ ಶ್ರವಣ ಸುಖ ಮಿಗಲು ಹರ್ಷೋತ್ಸವ ಎವಗೆ ಮನವಾಯ್ತು=ನನ್ನ ಮಗನ ಉನ್ನತಿಗೆ ಕಾರಣವಾದ ಕಾಳೆಗದ ಗೆಲುವಿನ ವಾರ್‍ತೆಯನ್ನು ಕೇಳಿದಾಗಿನಿಂದ ಹೆಚ್ಚಾಗುತ್ತಿರುವ ಆನಂದವನ್ನು ಆಚರಿಸುವುದಕ್ಕಾಗಿ ನಿನ್ನೊಡನೆ ಪಗಡೆಯಾಟವನ್ನಾಡಬೇಕೆಂಬ ಮನಸ್ಸಾಗಿದೆ; ಸಾರಿ=ಪಗಡೆಯಾಟದಲ್ಲಿ ಬಳಸುವ ಕಾಯಿ/ಪಗಡೆ; ನಿವಹ=ಗುಂಪು/ಸಮೂಹ; ಹೂಡು=ಅಣಿಗೊಳಿಸು/ಸಿದ್ದಗೊಳಿಸು;

ಒಡ್ಡು ಸಾರಿಯ ನಿವಹವನು ಹೂಡು ಎನಲು=ಪಗಡೆಯಾಟಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಅಣಿಗೊಳಿಸು ಎಂದು ವಿರಾಟರಾಯನು ಹೇಳಲು;

ಅವನಿಪತಿ=ದರ್‍ಮರಾಯ/ಕಂಕ;

ಅವನಿಪತಿ ನಸುನಗುತ ಹೂಡಿದನು=ಕಂಕಬಟ್ಟನು ವಿರಾಟರಾಯನ ಉತ್ಸುಕತೆಯನ್ನು ಕಂಡು ಮುಗುಳು ನಗುತ್ತ ಪಗಡೆಯಾಟದ ಹಾಸನ್ನು ಬಿಚ್ಚಿ ಹರಡಿದನು; ಹಾಸಂಗಿ=ಪಗಡೆಯಾಟದ ದಾಳ; ಹಾಯ್ಕು=ಬೀಳಿಸು/ಉರುಳಿಸು;

ಹಾಸಂಗಿಯನು ಹಾಯ್ಕಿದನು=ದಾಳಗಳನ್ನು ಉರುಳಿಸಿದನು; ಸಮತಳಿಸು=ಸರಿಸಮಾನವಾಗಿರು;

ಕೇಳಿ ಸಮತಳಿಸಿತ್ತು=ಪಗಡೆಯಾಟದಲ್ಲಿ ಇಬ್ಬರು ಸಮಗಯ್ ಆಗಿ ಆಡತೊಡಗಿದರು; ಥಟ್ಟು=ಸೇನೆ; ರಾಯ ಥಟ್ಟು=ರಾಜರ ಸೇನೆಗಳು;

ಕಂಕ, ನೋಡೈ ರಾಯ ಥಟ್ಟಿನಲಿ ಕಾಳಗವನು ಉತ್ತರನು ಗೆಲಿದನು=ಪಗಡೆಯಾಟದ ಜತೆಜತೆಗೆ ವಿರಾಟರಾಯನ ತನ್ನ ಮನದ ಆನಂದವನ್ನು ಕಂಕನೊಡನೆ ತೋಡಿಕೊಳ್ಳುತ್ತ, ನೋಡು ಕಂಕ… ಉತ್ತರಕುಮಾರನು ರಾಜರ ನಡುವೆ ನಡೆದ ಕಾಳೆಗದಲ್ಲಿ ಜಯಪಡೆದನು; ಶೂಲಪಾಣಿ=ಶಿವ; ಸೆಡೆ=ಹೆದರು/ಕುಗ್ಗು; ಅಹಿತ=ಶತ್ರು/ಹಗೆ; ಭಟಾಳಿ=ಕಾದಾಳುಗಳ ಗುಂಪು;

ಶೂಲಪಾಣಿಗೆ ಸೆಡೆಯದ ಅಹಿತ ಭಟಾಳಿ ಸೋತುದು=ಶೂಲಪಾಣಿಯಾದ ಶಿವನಿಗೆ ಹೆದರದ ದುರ್‍ಯೋದನನ ಸೇನಾಬಲವು ನನ್ನ ಮಗನ ಮುಂದೆ ಸೋಲನ್ನಪ್ಪಿತು;

ಏನ ಹೇಳು=ಈಗ ನೀನೇ ಹೇಳು; ದಿವಿಜ=ದೇವತೆ; ನರ=ಮಾನವ;

ದಿವಿಜ ನರರೊಳು ಕುಮಾರನನು ಹೋಲುವವರು ಉಂಟೇ=ದೇವತೆಗಳಲ್ಲಾಗಲಿ ಮಾನವರಲ್ಲಾಗಲಿ ನನ್ನ ಮಗ ಉತ್ತರಕುಮಾರ ಪರಾಕ್ರಮಕ್ಕೆ ಹೋಲುವವರು ಯಾರಾದರೂ ಇದ್ದಾರೆಯೇ;

ಅರಿ ಸೇನೆ ಸೋತುದು ಉಂಟು=ಒಡೆಯನೇ… ನೀನು ತಿಳಿದಿರುವಂತೆ ಶತ್ರು ದುರ್‍ಯೋದನನ ಮಹಾಸೇನೆ ಕಾಳೆಗದಲ್ಲಿ ಸೋತಿದೆ; ಸುರಭಿ=ಹಸು/ಗೋವು; ವ್ರಾತ=ಸಮೂಹ/ಗುಂಪು;

ಸುರಭಿವ್ರಾತ ಮರಳಿದುದು ಉಂಟು=ಸೆರೆಯಾಗಿದ್ದ ಹಸುಗಳು ಹಿಂತಿರುಗಿ ಬಂದುದು ನಿಜ;

ಗೆಲವು ಇದು ಕೌತುಕವಲೇ=ಈ ರೀತಿಯ ಗೆಲುವು ನಿಜಕ್ಕೂ ಬಹಳ ಅಚ್ಚರಿಯನ್ನುಂಟುಮಾಡುವ ಸಂಗತಿಯಾಗಿದೆ; ಬಗೆ=ಚಿಂತಿಸು/ಆಲೋಚಿಸು; ಚಿತ್ತ=ಮನಸ್ಸು; ಅದ್ಭುತ=ವಿಸ್ಮಯವನ್ನುಂಟುಮಾಡುವ ಸಂಗತಿ;

ಎಮ್ಮ ಚಿತ್ತದಲಿ ಬಗೆಯಲು ಅದ್ಭುತವು=ನನ್ನ ಮನಸ್ಸಿನಲ್ಲಿಯೂ ಕೂಡ ಉತ್ತರಕುಮಾರನ ಜಯ ವಿಸ್ಮಯವನ್ನುಂಟುಮಾಡುತ್ತಿದೆ;

ಮಾತು ಹೋಲುವೆ ಅಹುದು ತಪ್ಪೇನು=ಉತ್ತರಕುಮಾರನ ಪರಾಕ್ರಮಕ್ಕೆ ಸರಿಸಾಟಿಯಾದವರು ದೇವತೆಗಳಲ್ಲ್ಲಿ ಮತ್ತು ಮಾನವರಲ್ಲಿ ಯಾರೂ ಇಲ್ಲವೆಂಬ ನಿನ್ನ ಮಾತಿನಲ್ಲಿ ತಪ್ಪೇನಿಲ್ಲ;

ಜಗದ ವಿಖ್ಯಾತ ಸಾರಥಿಯಿರೆ ಬಳಿಕ ಕುಮಾರಗೆ ಭೀತಿ ಎಲ್ಲಿಯದು=ಜಗತ್ತಿನಲ್ಲಿಯೇ ಹೆಸರಾಂತ ಸಾರತಿಯಾದ ಬ್ರಹನ್ನಳೆಯು ಉತ್ತರಕುಮಾರನಿಗೆ ದೊರೆತಿರುವಾಗ, ರಣರಂಗದಲ್ಲಿ ಹೆದರಿಕೆ ಎಲ್ಲಿಯದು; ಮರುಳ=ತಿಳಿಗೇಡಿ/ಹುಚ್ಚ;

ಎಲೆ ಮರುಳೆ ಸನ್ಯಾಸಿ, ನಿನ್ನದು ಮತ್ಸರದೊಳಗೆ ಮುಳುಗಿದ ಚಿತ್ತ=ಎಲೆ ತಿಳಿಗೇಡಿ ಸನ್ಯಾಸಿ, ನಿನ್ನದು ಹೊಟ್ಟೆಕಿಚ್ಚಿನಲ್ಲಿ ಮುಳುಗಿರುವ ಮನಸ್ಸು.ಅಂದರೆ ನನ್ನ ಮಗನ ಗೆಲುವನ್ನು ಕೇಳಿ ಅಸೂಯೆಪಡುತ್ತಿದ್ದೀಯೆ;

ಹೇಳು, ಆವುದು ಅದ್ಭುತವು=ಹೇಳು, ಯಾವ ಸಂಗತಿಯು ನಿನಗೆ ಅಚ್ಚರಿಯನ್ನುಂಟು ಮಾಡಿದೆ;

ಸಂದೇಹವೇ ಗೆಲವಿನಲಿ=ನನ್ನ ಮಗ ಉತ್ತರಕುಮಾರನು ಕಾಳೆಗದಲ್ಲಿ ಜಯಶಾಲಿಯಾಗಿದ್ದಾನೆ ಎಂಬ ವಾರ್‍ತೆಯಲ್ಲಿ ನಿನಗೆ ಸಂದೇಹವೇ; ಅಳುಕು=ನಡುಗು/ಹೆದರು;

ಸುಕುಮಾರ ಅಳುಕವನೆ=ನನ್ನ ಮಗ ಉತ್ತರಕುಮಾರನು ಕಾಳೆಗದ ಕಣದಲ್ಲಿ ಹಗೆಗಳೊಡನೆ ಹೋರಾಡಲು ಹೆದರುತ್ತಾನೆಯೇ; ಬಲುಹು=ಕಸುವು/ಶಕ್ತಿ; ಖತಿ=ಕೋಪ;

ಸಾರಥಿ ಬಲುಹನು ಉಳ್ಳವನೇ ಎಂದು ವಿರಾಟ ಖತಿಗೊಂಡ=ನೀನು ಹೇಳುವಂತೆ ಸಾರತಿಯು ಕಾಳೆಗದಲ್ಲಿ ಜಯವನ್ನು ತಂದುಕೊಡುವಂತಹ ಶಕ್ತಿಯುಳ್ಳವನೇ ಎಂದು ವಿರಾಟರಾಯನು ಕೋಪಗೊಂಡನು;

ನಾರಿ=ಹೆಂಗಸು; ಮೈ+ಕುರುಹು; ಕುರುಹು=ಗುರುತು; ಚಾರು=ಉತ್ತಮವಾದ/ಚೆಲುವಾದ; ಇನ್ನೆವರ=ಇದುವರೆಗೂ; ಸೈರಿಸು=ತಾಳು/ಸಹಿಸು;

ನಾರಿಯರ ಮೈಗುರುಹು, ಪುರುಷರ ಚಾರು ಚಿಹ್ನವ ಕೂಡಿಕೊಂಡಿಹ ಸಾರಥಿಯ ದೆಸೆಯಿಂದ ಕುವರನು ಗೆಲಿದನು ಎಂಬುದನು ನಾನು ಇನ್ನವರ ಸೈರಿಸಿದೆ=ಹೆಣ್ಣಿನ ದೇಹದ ಹಾವಬಾವ ಮತ್ತು ಗಂಡಿನ ದೇಹದ ಕಸುವನ್ನು ಒಳಗೊಂಡಿರುವ ನಪುಂಸಕನಾದ ಸಾರತಿಯ ಕಾರಣದಿಂದ ನನ್ನ ಮಗನು ಕಾಳೆಗದಲ್ಲಿ ಗೆದ್ದನೆಂಬ ನಿನ್ನ ಮಾತನ್ನು ಇದುವರೆಗೂ ಹೇಗೋ ಸಹಿಸಿಕೊಂಡಿದ್ದೇನೆ;

ಮತ್ತಾರೊಡನೆ ಮಾತಾಡದಿರು=ಬೇರೆಯವರ ಮುಂದೆ ಈ ರೀತಿ ಮಾತಾಡಬೇಡ; ನಿಸ್ಸಾರ=ಸಾರವಿಲ್ಲದ/ಸತ್ವವಿಲ್ಲದ;

ಕಂಕ, ನೀ ನಿಸ್ಸಾರ ಹೃದಯನು=ಕಂಕ, ನಿನ್ನ ಮನದಲ್ಲಿ ಇತರರ ಬಗ್ಗೆ ಪ್ರೀತಿ, ಕರುಣೆ, ಉದಾರತೆಯಾಗಲಿ ಇಲ್ಲವೇ ಇತರರ ಒಳಿತನ್ನು ಕಂಡು ಮೆಚ್ಚುವ ಗುಣವಿಲ್ಲ;

ನಪುಂಸಕನಲಿ ನಿರಂತರ ಪಕ್ಷ=ನಪುಂಸಕನಾದ ಬ್ರಹನ್ನಳೆಯ ಕಡೆಗೆ ಯಾವಾಗಲೂ ನೀನು ಒಲವನ್ನು ಹೊಂದಿರುವೆ; ದುಷ್ಟ+ಆತ್ಮ; ದುಷ್ಟಾತ್ಮ=ನೀಚ ವ್ಯಕ್ತಿ;

ದುಷ್ಟಾತ್ಮ ಹೋಗು=ನೀಚನೇ ಇಲ್ಲಿಂದ ತೊಲಗು;

ಅರಸ, ಖತಿಯ ಹಿಡಿಯದಿರು=ಅರಸನೇ, ಕೋಪಗೊಳ್ಳಬೇಡ;

ಅತಿಶಯ=ಅಸಾದಾರಣವಾದ ಮಹಿಮೆ/ಬಹಳ ಹೆಚ್ಚಿನದು;

ದಿಟ, ನೀನು ಅತಿಶಯವ ಬಯಸುವರೆ=ನಿಜವಾಗಿಯೂ ನೀನು ಕಾಳೆಗದ ಕಣದಲ್ಲಿ ನಡೆದಿರುವ ಅಚ್ಚರಿಯ ಸಂಗತಿಯನ್ನು ತಿಳಿಯುವುದಾದರೆ;

ಸಮ್ಮತ=ಒಪ್ಪಿಗೆಯಾದುದು/ವಿಚಾರ; ಜನ ಸಮ್ಮತವು=ಪ್ರಜೆಗಳೆಲ್ಲರಿಗೂ ವಿಚಾರ ತಿಳಿಯುವಂತೆ;

ಸಾರಥಿ ಗೆಲಿದನು ಎಂದೇ ಡಂಗುರವ ಹೊಯಿಸು=ದುರ್‍ಯೋದನನ ಸೇನಾಬಲವನ್ನು ಸಾರತಿಯು ಸದೆಬಡಿದು ಗೆಲುವನ್ನು ತಂದನು ಎಂದೇ ಡಂಗುರವನ್ನು ಹೊಡೆಸು;

ಸುತನು ಸಾರಥಿಯೆಂದು ಸಾರಿಸು=ಉತ್ತರಕುಮಾರನು ಸಾರತಿಯಾಗಿದ್ದನೆಂಬ ಸಂಗತಿಯನ್ನು ಸಾರಿಸು; ವಿತಥ=ಸುಳ್ಳು;

ಇದು ವಿತಥವಲ್ಲ=ಕಾಳೆಗದ ಕಣದಲ್ಲಿ ಯುದ್ದವನ್ನು ಮಾಡಿ ಗೆಲುವನ್ನು ತಂದವನು ಬ್ರಹನ್ನಳೆ ಮತ್ತು ತೇರನ್ನು ನಡೆಸಿದ ಸಾರತಿಯು ಉತ್ತರಕುಮಾರ ಎಂದು ನಾನು ಹೇಳುತ್ತಿರುವ ಸಂಗತಿಯು ಸುಳ್ಳಲ್ಲ;

ಕವಲು ನಾಲಗೆ=ಇದೊಂದು ನುಡಿಗಟ್ಟು. ಸಮಯಕ್ಕೆ ತಕ್ಕಂತೆ ಸುಳ್ಳನ್ನು ನಿಜವೆಂದು, ನಿಜವನ್ನು ಸುಳ್ಳೆಂದು ಹೇಳುವುದು;

ತನಗೆ ಕವಲು ನಾಲಗೆಯಿಲ್ಲ=ನಾನು ಸಮಯಕ್ಕೆ ತಕ್ಕಂತೆ ಕಪಟದ ನುಡಿಯನ್ನಾಡುವವನಲ್ಲ;

ಪಕ್ಷಪಾತ=ಒಬ್ಬರಲ್ಲಿ ಹೆಚ್ಚು ಪ್ರೀತಿಯನ್ನು ತೋರಿಸುವುದು;

ಪಕ್ಷಪಾತ ಸ್ಥಿತಿಯನು ಆಡೆವು=ನಾನು ಯಾರನ್ನೂ ವಹಿಸಿಕೊಂಡು ಮಾತನಾಡುವುದಿಲ್ಲ;

ಕಣ್+ಗಳು; ಮೋಹದ ಕಂಗಳು=ಇದೊಂದು ನುಡಿಗಟ್ಟು. ಮಮತೆಯಿಂದ ಕಾಣುವ ನೋಟ. ಯಾವುದೇ ವ್ಯಕ್ತಿಯನ್ನು ವ್ಯಕ್ತಿಗತ ನಂಟು ಇಲ್ಲವೇ ಒಲವಿನ ಕಾರಣಕ್ಕಾಗಿ ಮೆಚ್ಚಿಕೊಳ್ಳುವುದು; ಉನ್ನತ+ಉನ್ನತ; ಉನ್ನತ=ಉತ್ತಮ; ಸತ್ವ=ಬಲ/ಶಕ್ತಿ; ಉನ್ನತೋನ್ನತ ಸತ್ವನು=ಮಹಾ ಬಲಶಾಲಿ;

ನಿನ್ನ ಮೋಹದ ಕಂಗಳಿಗೆ ಮಗನು ಉನ್ನತೋನ್ನತ ಸತ್ವನೆಂದೇ ಮುನ್ನ ತೋರಿತು=ತಂದೆಯಾದ ನಿನ್ನ ಮೋಹದ ನೋಟದಿಂದಾಗಿ ನಿನ್ನ ಮಗನನ್ನು ಮಹಾಬಲನೆಂದೇ ನೀನು ತಿಳಿದಿರುವೆ. ವಾಸ್ತವದ ಅರಿವಿಗಿಂತ ಮೋಹವೇ ಮೊದಲಾಗಿದೆ;

ಸಂಸಾರಕ=ಹೆಂಡತಿ ಮಕ್ಕಳು ನೆಂಟರಿಂದ ಕೂಡಿದ ಪರಿವಾರ; ಭ್ರಮೆ=ಇಲ್ಲದ್ದನ್ನು ಇದೆಯೆಂದು—ಇರುವುದನ್ನು ಇಲ್ಲವೆಂದು ನಂಬುವುದು; ಹೊಲ್ಲೆಹ=ತಪ್ಪು/ದೋಶ/ಅಪರಾದ;

ಸಂಸಾರಕ ಭ್ರಮೆಗೆ ಹೊಲ್ಲೆಹವೆ=ಮಡದಿ ಮಕ್ಕಳ ಮೇಲಣ ವ್ಯಾಮೋಹದಿಂದ ಇಂತಹ ತಪ್ಪು ಬಾವನೆಗಳು ವ್ಯಕ್ತಿಗಳಲ್ಲಿ ಮೂಡುತ್ತವೆ;

ಆ ಬೃಹನ್ನಳೆ ಗೆಲಿದವನು=ಇಂದಿನ ಕಾಳೆಗದಲ್ಲಿ ಗೆದ್ದವನು ಬ್ರಹನ್ನಳೆ; ತನೂಭವ=ಮಗ; ಗುರುತನೂಭವ=ಗುರು ದ್ರೋಣರ ಮಗ ಅಶ್ವತ್ತಾಮ;

ಇನ್ನು ಭೀಷ್ಮನು ಕರ್ಣ ಕೃಪ ಗುರು ಗುರುತನೂಭವರು ನಿನ್ನ ಮಗಗೆ ಅಳುಕವರೆ ಎನಲು=ಇನ್ನು ಆ ಬೀಶ್ಮ, ಕರ್‍ಣ, ಕ್ರುಪ, ಗುರುದ್ರೋಣ, ಅಶ್ವತ್ತಾಮ ಮೊದಲಾದ ವೀರರು ನಿನ್ನ ಮಗನಿಗೆ ಹೆದರುತ್ತಾರೆಯೇ ಎಂದು ಕಂಕಬಟ್ಟನು ನುಡಿಯಲು;

ಬಿಗುಹು+ಏರಿ; ಬಿಗುಹು=ಬಿರುಸುತನ; ಏರಿ=ಹೆಚ್ಚಾಗಿ;

ಖತಿ ಬಿಗುಹೇರಿ=ಕೋಪದ ತೀವ್ರತೆಯಿಂದ ಮಯ್ಯೆಲ್ಲ ಉರಿಯುತ್ತ; ಹಲು=ಹಲ್ಲು; ಹಲುದಿನು=ತೀವ್ರವಾದ ಕೋಪಬಂದಾಗ ಎರಡು ದವಡೆಯ ಹಲ್ಲುಗಳನ್ನು ಕಡಿಯುವುದು;

ಹಲು ಹಲುದಿನುತೆ=ಕೋಪೋದ್ರೇಕದಿಂದ ವಿರಾಟರಾಯನು ದವಡೆಯ ಹಲ್ಲುಗಳನ್ನು ಕರಕರನೆ ಕಡಿಯುತ್ತ; ಕಂಗಳು=ಕಣ್ಣುಗಳು; ಉರಿ=ಬೆಂಕಿ;

ಕಂಗಳಲಿ ಉರಿಯನು ಉಗುಳುತ=ಕಣ್ಣುಗಳಲ್ಲಿ ಬೆಂಕಿಯನ್ನು ಕಾರುತ್ತ. ಅಂದರೆ ಕೋಪದ ತೀವ್ರತೆಯಿಂದಾಗಿ ವಿರಾಟರಾಯನ ಕಣ್ಣುಗಳು ಕೆಂಪಾಗಿ;

ಔಡು+ಒತ್ತಿ; ಔಡು=ಕೆಳತುಟಿ; ಒತ್ತು=ಅದುಮು/ಅಮುಕು;ಬಿಗಿದು=ಕೂಡು/ಸೇರಿಸು;ಕನಲು=ಸಿಟ್ಟಿಗೇಳು/ಕೋಪಗೊಳ್ಳು;

ಔಡೊತ್ತಿ ಬಿಗಿದು ಕನಲಿ=ತುಟಿಕಚ್ಚಿ ಬಿಗಿಹಿಡಿದು ಸಿಟ್ಟಿಗೆದ್ದು;

ಕನಕ=ಚಿನ್ನ; ಸಾರಿ=ಪಗಡೆಕಾಯಿ/ಪಗಡೆಯಾಟದಲ್ಲಿ ಬಳಸುವ ದಾಳ; ನೆಗಹು=ಎತ್ತಿಕೊಳ್ಳು; ಜನಪತಿ=ರಾಜ/ದರ್‍ಮರಾಯ; ಒಡೆಯಲ್+ಇಡೆ; ಒಡೆ=ಸೀಳು/ಬಿರಿ; ಇಡು=ಎಸೆ;

ಪಗಡೆಯಾಟದ ಚಿನ್ನದ ದಾಳವೊಂದನ್ನು ಎತ್ತಿಕೊಂಡು ಕಂಕಬಟ್ಟನ ಹಣೆ ಒಡೆಯುವಂತೆ ಎಸೆಯಲು;

ಭೋಂಕನೆ=ತಟ್ಟನೆ/ಕೂಡಲೇ; ಜಾಜು=ಕೆಂಪು ಬಣ್ಣದ ಶಿಲೆ; ಗಿರಿ=ಬೆಟ್ಟ; ಜಾಜಿನ ಗಿರಿ=ಕೆಂಪುಕಲ್ಲುಗಳಿಂದ ಕೂಡಿರುವ ಬೆಟ್ಟ; ನಿರ್ಜರ=ಜಲಪಾತ; ವೊಲು=ಅಂತೆ; ಶಿರ=ತಲೆ; ಸೆಲೆ+ಒಡೆದು; ಸೆಲೆ=ನರ/ರಕ್ತ ನಾಳ; ಒಡೆ=ಸೀಳು/ಬಿರಿ; ರುಧಿರ=ರಕ್ತ/ನೆತ್ತರು; ಧಾರೆ=ಪ್ರವಾಹ/ಒಂದೇ ಸಮನೆ ಸುರಿಯುವುದು; ಸಿಡಿ=ಚಿಮ್ಮು/ಎಲ್ಲ ಕಡೆಗೂ ಹಾರು;

ಭೋಂಕೆನಲು ಜಾಜಿನ ಗಿರಿಯ ನಿರ್ಜರದವೊಲು ಶಿರದ ಸೆಲೆಯೊಡೆದು ರುಧಿರದ ಧಾರೆ ಸಿಡಿದುದು=ವಿರಾಟರಾಯನ ಕೋಪೋದ್ರೇಕದಿಂದ ಎಸೆದ ದಾಳವು ಬಂದು ಕಂಕಬಟ್ಟನ ಹಣೆಗೆ ಬಡಿಯುತ್ತಿದ್ದಂತೆಯೇ ತಟ್ಟನೆ ಕೆಂಪನೆಯ ಶಿಲೆಯಿಂದ ಕೂಡಿದ ಬೆಟ್ಟದಿಂದ ದುಮ್ಮಿಕ್ಕುವ ಕೆಂಬಣ್ಣದ ಜಲಪಾತದಂತೆ ಕಂಕಬಟ್ಟನ ತಲೆಯ ನರಸೀಳಿ ನೆತ್ತರು ಚಿಮ್ಮಿ ಹರಿಯತೊಡಗಿತು;

ಅತಿಧೀರನು ಕೈಯೊಡ್ಡಿ ರಕುತದ ಧಾರೆಯನು ಕೈತುಂಬ ಹಿಡಿದು ಸೈರಿಸುತ=ಮಹಾವೀರನಾದ ಕಂಕಬಟ್ಟನು ಚಿಮ್ಮಿ ತೊಟ್ಟಿಕ್ಕತೊಡಗಿದ ರಕ್ತದ ಕೋಡಿಗೆ ತನ್ನ ಕಯ್ಯನ್ನು ಒಡ್ಡಿ, ರಕ್ತವನ್ನು ನೆಲಕ್ಕೆ ಬೀಳದಂತೆ ತಡೆಹಿಡಿದುಕೊಂಡು, ಉಂಟಾದ ನೋವು ಮತ್ತು ಅಪಮಾನವನ್ನು ಸಹಿಸಿಕೊಂಡು;

ಓರೆಯ ನೋಟದಲಿ ಸೈರಂಧ್ರಿಯನು ಕರೆಯೆ=ಕಡೆಗಣ್ಣಿನ ನೋಟದಿಂದ ಸೂಚ್ಯವಾಗಿ ಸೈರಂದ್ರಿಯನ್ನು ತನ್ನತ್ತ ಕರೆಯಲು;

ನಾರಿ ಹರಿತಂದು=ಸೈರಂದ್ರಿಯು ಓಡೋಡಿ ಬಂದು;

ಕಾರುಣಿಕ=ಕರುಣೆಯುಳ್ಳವನು;

ಅಕಟ, ಕಾರುಣಿಕ ಸನ್ಯಾಸಿ ನೊಂದನು ಎನುತ ವಿಕಾರಿಸದೆ=ಅಯ್ಯೋ… ಕರುಣಾಮಯಿಯಾದ ಸನ್ಯಾಸಿಯು ನೊಂದನು ಎನ್ನುತ್ತ;

ವಿಕಾರಿಸಿದೆ=ತಡಮಾಡದೆ; ಶೋಣಿತ=ನೆತ್ತರು; ತೋದು=ನೆನೆಯಿಸು/ಒದ್ದೆಮಾಡು; ;

ವಿಕಾರಿಸದೆ ಬಹಳ ಶೋಣಿತವ ಸೆರಗಿನಲಿ ತೋದಳು=ತಡಮಾಡದೆ ಕಂಕಬಟ್ಟನ ಹಣೆಯಿಂದ ಸುರಿಯುತ್ತಿದ್ದ ರಕ್ತವನ್ನು ಕೆಳಕ್ಕೆ ಬೀಳದಂತೆ ತನ್ನ ಸೀರೆಯ ಸೆರಗಿನಿಂದ ಒತ್ತಿಹಿಡಿದಳು; ಮಡದಿ=ದ್ರೌಪದಿ; ಕರ=ಹಸ್ತ; ಪಲ್ಲವ=ಚಿಗುರು; ಕರಪಲ್ಲವ=ಕೋಮಲವಾದ ಕಯ್;

ಮಡದಿ ಕರಪಲ್ಲವದಲಿ ಒರೆಸಿದಳು=ಕಂಕಬಟ್ಟನ ಹಣೆಯ ಮೇಲಿನ ನೆತ್ತರ ಬಿಂದುಗಳನ್ನು ತನ್ನ ಕೋಮಲವಾದ ಹಸ್ತದಿಂದ ಒರೆಸಿದಳು; ಅಡಿಗಡಿಗೆ=ಪದೇಪದೇ/ಮತ್ತೆಮತ್ತೆ; ಕಪೋಲ=ಕೆನ್ನೆ/ಗಲ್ಲ; ತೊಡೆ=ಸವರು;

ಅಡಿಗಡಿಗೆ ಹಣೆಯನು ಕಪೋಲವ ತೊಡೆದು ಮುಖವನು ತೊಳೆದಳು=ಮತ್ತೆ ಮತ್ತೆ ಕಂಕಬಟ್ಟನ ಹಣೆಯನ್ನು ಮತ್ತು ಕೆನ್ನೆಯನ್ನು ಸವರುತ್ತ… ನೆತ್ತರ ಹನಿಯನ್ನು ಒರೆಸುತ್ತ, ನೆತ್ತರ ಕಲೆಗಳು ಕಾಣದಂತೆ ಅವನ ಮೊಗವನ್ನು ಶುಚಿಮಾಡಿದಳು;

ಅದನು ಅವ ಕಂಡು ಬೆರಗಾಗಿ=ಸೈರಂದ್ರಿಯು ಕಂಕಬಟ್ಟನಿಗೆ ಮಾಡುತ್ತಿರುವ ಉಪಚಾರವನ್ನು ಕಂಡ ವಿರಾಟರಾಯನು ಅಚ್ಚರಿಗೊಂಡು;

ಕಾಮಿನಿ=ಹೆಂಗಸು;

ಏಕೆ ಕಾಮಿನಿ, ರಕುತವನು ಹಿಡಿದೆ=ಏಕೆ ಸೈರಂದ್ರಿ, ಕಂಕಬಟ್ಟನ ಹಣೆಯಿಂದ ಸುರಿಯುತ್ತಿದ್ದ ನೆತ್ತರನ್ನು ಕೆಳಕ್ಕೆ ಬೀಳದಂತೆ ಹಿಡಿದುಕೊಂಡೆ; ನಿಧಾನ=ನಿಶ್ಚಯ/ನಿಜ/ಸತ್ಯ;

ನಿಧಾನವನು ನುಡಿ=ಈ ರೀತಿ ನೀನು ಮಾಡಲು ಕಾರಣವೇನೆಂಬುದನ್ನು ಹೇಳು;

ಮಿಡುಕಲು+ಏತಕೆ; ಮಿಡುಕು=ಕನಿಕರ/ಅನುಕಂಪ; ಬೆಸಗೊಳ್=ವಿಚಾರಿಸು/ಪ್ರಶ್ನಿಸು;

ಇವರು ನೊಂದರೆ ಮಿಡುಕಲೇತಕೆ ನೀನು ಎನುತ ದುರುಪದಿಯ ಬೆಸಗೊಂಡ=ಕಂಕಬಟ್ಟನು ನೊಂದರೆ ನೀನು ಕನಿಕರಗೊಂಡು ಉಪಚರಿಸುತ್ತಿರುವೆಲ್ಲಾ… ಏನು ಕಾರಣ ಎಂದು ಸೈರಂದ್ರಿಯನ್ನು ವಿರಾಟರಾಯನು ಪ್ರಶ್ನಿಸಿದ;

ಅರಸ ಕೇಳು, ಬದುಕಿದೆ=ಅರಸನೇ ಕೇಳು… ದೊಡ್ಡ ಆಪತ್ತಿನಿಂದ ನೀನು ಪಾರಾಗಿ ಉಳಿದುಕೊಂಡಿರುವೆ; ನೆತ್ತರು=ರಕ್ತ; ಧರೆ=ಬೂಮಿ/ನೆಲ; ಒಕ್ಕು=ಹರಿ/ಪ್ರವಹಿಸು; ಕಣೆಯ=ಸಲ/ಸರತಿ; ಒರೆಸು=ಅಳಿಸು/ನಾಶಮಾಡು; ಕಳೆ=ತೆಗೆದುಹಾಕು;

ಈ ಮುನಿಯ ನೆತ್ತರು ಧರೆಯೊಳು ಒಕ್ಕೊಡೆ ಒಂದು ಕಣೆಯಕೆ ಆ ಪ್ರದೇಶವನು ಒರೆಸಿ ಕಳೆವುದು ದಿಟ=ಈ ಕಂಕಬಟ್ಟನ ನೆತ್ತರು ನೆಲದ ಮೇಲೆ ಬಿದ್ದರೆ ಒಂದೇ ಸಲಕ್ಕೆ ಆ ಪ್ರದೇಶವನ್ನೆಲ್ಲಾ ಅಳಿಸಿ ನಾಶಮಾಡುವುದು;

ನಿನ್ನ ರಾಜ್ಯದ ಸಿರಿಯು ಉರಿದು ಹೋಹುದು=ಕಂಕಬಟ್ಟನ ತಲೆಯಿಂದ ಸುರಿದ ನೆತ್ತರಿನಲ್ಲಿ ಒಂದು ತೊಟ್ಟು ನೆಲವನ್ನು ಸೋಂಕಿದ್ದರೆ, ನಿನ್ನ ರಾಜ್ಯದ ಸಕಲ ಸಂಪತ್ತು ಉರಿದು ಹೋಗುತ್ತಿತ್ತು;

ಏರಿಸು=ಪಡೆ/ಹೊಂದು ; ಬಿರುದು=ಸವಾಲು;

ಬೃಹನ್ನಳೆಗೆ ಏರಿಸಿದ ಬಿರುದು=ಇದು ಬ್ರಹನ್ನಳೆಯು ಮಾಡಿರುವ ಶಪತ;

ಯತಿ=ಯೋಗಿ;

ಕೈಯಲಿ ತುಂಬಿ ಶೋಣಿತವ ಪರಮ ಯತಿ ಕಾಯಿದನು=ಉತ್ತಮ ಯತಿಯಾದ ಕಂಕಬಟ್ಟನು ತನ್ನ ತಲೆಯಿಂದ ಸುರಿಯುತ್ತಿದ್ದ ರಕ್ತವನ್ನು ಕಯ್ಯಲ್ಲಿ ತುಂಬಿಕೊಂಡು ನಿನ್ನನ್ನು ಮತ್ತು ನಿನ್ನ ಸಕಲ ರಾಜ್ಯವನ್ನು ಕಾಪಾಡಿದನು;

ನಾಟ್ಯ ವ್ಯಾಕರಣ ಪಂಡಿತ=ಕುಣಿತ ಮತ್ತು ಅಬಿನಯ ಕಲೆಯಲ್ಲಿ ಪಾರಂಗತನಾದ ವ್ಯಕ್ತಿ;

ಈಕೆ ಯಾರು. ಇವರಾರು. ನಾಟ್ಯ ವ್ಯಾಕರಣ ಪಂಡಿತ ಬೃಹನ್ನಳೆಯು ಈಕೆಗೆ ಏನ್ ಅಹನು=ನಮ್ಮ ರಾಣಿವಾಸದಲ್ಲಿರುವ ಈ ಸೈರಂದ್ರಿ ಯಾರು… ಈ ಕಂಕಬಟ್ಟ… ಈ ಬ್ರಹನ್ನಳೆ ಯಾರು… ನಾಟ್ಯಕಲೆಯಲ್ಲಿ ಪರಿಣತನಾದ ಬ್ರಹನ್ನಳೆಯು ಈ ಸೈರಂದ್ರಿಗೆ ಏನಾಗಬೇಕು;

ಕಾಳು ಕೀಲುಗಳ ಅರಿಯಬಾರದು=ಈ ನುಡಿಗಳು ಒಂದು ನುಡಿಗಟ್ಟಿನ ತಿರುಳಿನಲ್ಲಿ ಬಳಕೆಗೊಂಡಿವೆ. ಯಾವುದೇ ಒಂದು ಸಂಗತಿಯ ಮೂಲವನ್ನಾಗಲಿ ಇಲ್ಲವೇ ಕಾರ್‍ಯಕಾರಣದ ಸಂಬಂದವನ್ನಾಗಲಿ ಅರಿತುಕೊಳ್ಳಲು ಆಗದಿರುವುದು;ಅಂದರೆ ತುಂಬಾ ಜಟಿಲವಾದ ಸಂಗತಿ;

ಅರಿತ=ತಿಳುವಳಿಕೆ; ಅವಿವೇಕಿ=ವಿವೇಕವಿಲ್ಲದವನು; ಇರೆ=ಇರಲು;

ನನಗೆ ಏಕೆ ಅದರ ಅರಿತ ಎಂದು ಅವಿವೇಕಿಯಿರೆ=ನನಗೇಕೆ ಬೇಕು ಅದರ ವಿವರ ಎಂದುಕೊಂಡು ವಿರಾಟರಾಯನು ಕಂಕಬಟ್ಟ, ಬ್ರಹನ್ನಳೆ ಮತ್ತು ಸೈರಂದ್ರಿಯ ನಂಟಿನ ಬಗ್ಗೆ ಹೆಚ್ಚು ಚಿಂತಿಸದೆ ಸುಮ್ಮನಾದನು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: