ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 8
ಉತ್ತರಕುಮಾರನ ಪ್ರಸಂಗ: ನೋಟ – 8
ಇತ್ತ ಪುರದಲಿ ಉತ್ತರನ ನೋಡುವ ನೆರವಿಯು ನೂಕು ನೂಕಾಯಿತ್ತು. ಮಂತ್ರಿಗಳು ಇದಿರು ಬಂದರು. ಉದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ ವರ ಸುದತಿಯರು ಸೇಸೆಯನು ಸೂಸಿದರು. ವರಕೋವಿದರು ಕೂಡೆ ತಮ್ಮೊಳಗೆ ಗುಜುಗುಜಿಸಿ ಆಡುತಿರ್ದರು.
ಕೋವಿದರು-1: ವದನವಿದೆ ಕಳೆಗುಂದಿ… ಜಯದ ಅಭ್ಯುದಯ ತಾನೆಂತು! .
ಕೋವಿದರು-2: ಉತ್ತರನು ಎಂದಿನವನು. ಗಂಗಾನಂದನನು ಈ ಹೂಹೆ ಗೆಲಿದನು. ಸಂದ ಸುಭಟ ದ್ರೋಣ ಕರ್ಣಾದಿಗಳನು ಓಡಿಸಿದ.
ಕೋವಿದರು-3 : ಇವ ಗೆಲಿದ ಅಂದವಾಗಿರದು… ಈ ಬೃಹನ್ನಳೆಯಿಂದ ಸಂಭಾವಿಸುವುದು.
(ಎಂದುದು ಮಂದಿ ತಮತಮಗೆ. ಪುರಜನ ಜಾಲ “ಜೀಯ” ಎನಲು, ಇದಿರು ಬಂದ ನಿವಾಳಿಗಳ ಉತ್ತರನು ನೂಕಿದನು. ಲೀಲೆ ಮಿಗಿಲು ಕೈವಾರಿಗಳ ಕೋಪಿಸುತ, ಆಲಿಯು ಅವನಿಯ ಬರೆಯೆ, ಮುಸುಕಿನ ಮೇಲು ದುಗುಡದ ಭಾರದಲಿ ರಾಜಾಲಯಕೆ ಬರಲು, ವಿರಾಟರಾಯ ಇದಿರು ಬಂದು ನಂದನನ ಅಪ್ಪಿದನು.)
ವಿರಾಟ ರಾಯ: ಬಾ ಮಗನೆ, ವಸುಕುಲದ ನೃಪ ಚಿಂತಾಮಣಿಯೆ… ಕುರುರಾಯ ಮೋಹರ ಧೂಮಕೇತುವೆ…ಕಂದ ಬಾ.
( ಎಂದು ಅಪ್ಪಿ ಕುಳ್ಳಿರಿಸೆ, ಕಾಮಿನಿಯರ ಉಪ್ಪಾರತಿಗಳ ಅಭಿರಾಮ ವಸ್ತ್ರ ನಿವಾಳಿ ರತ್ನಸ್ತೋಮ ಣ್ಣದ ಸೊಡರು ಹರುಷದ ಒಗ್ಗಿನಲಿ ಸುಳಿದವು.)
ಉತ್ತರ ಕುಮಾರ: ಬೊಪ್ಪ ಸಾಕು, ಈ ಬಯಲ ಡೊಂಬು ಎನಗೆ ಒಪ್ಪುವುದೆ. ವೀರೋಪಚಾರವು ಇದು ಒಪ್ಪುವರಿಗೆ ಒಪ್ಪುವುದು. ತೆಗೆಸು.
(ಎನಲು, ಅರಸ ನಸುನಗತ…)
ವಿರಾಟ ರಾಯ: ದರ್ಪವುಳ್ಳಂಗೆ ಈಸು ಮಂಗಳವು ಒಪ್ಪದೇನೈ. ಜಗದೊಳು ಆವಂಗೆ ಅಪ್ಪುದು ಈ ಬಲವು ಈ ನಿಗರ್ವತೆ . ಮಗನೆ, ಕರ್ಣ ದ್ರೋಣ ಭೀಷ್ಮಾದಿಗಳನು ಒಬ್ಬನೆ ಗೆಲಿದೆ. ಈ ಕಾಳಗದ ಕಡುಗಲಿತನಗಳು ಪೂರ್ವ ಪುರುಷರಲಿ ಉಂಟೇ. ಎನ್ನಾಣೆ ದುಗುಡವೇಕೆ. ಹೆತ್ತರ ಮೊಗಕೆ ಹರುಷವ ತಂದೆಲಾ… ನೀ ಹಂಗಿಗನೆ… ತಲೆಗುತ್ತಲೇಕೆ.
(ಎಂದು ಮುಖವ ಎತ್ತಿದನು.)
ಉತ್ತರ ಕುಮಾರ: ನಿ ಮ್ಮಡಿ ಆದರಿಸಲು ಕಾದಿ ಗೆಲಿದವ ಬೇರೆ… ಸಾರಥಿಯಾದ ತನಗೆ ಈಸೇಕೆ… ಒಡೆಮುರಿಚ ಬಲ್ಲೆನೆ… ನಾಚಿಸದಿರಿ.
ವಿರಾಟ ರಾಯ: ಕಾದಿದಾತನು ನೀನು. ಸಾರಥಿಯಾದವನು ತಂಗಿಯ ಬೃಹನ್ನಳೆ. ವಾದ ಬೇಡಲೆ ಮಗನೆ. ನಿನ್ನ ವಿಕ್ರಮವ ಬಲ್ಲೆನು.
ಉತ್ತರ ಕುಮಾರ: ಅದಟುತನವು ಎನಗುಂಟೆ. ಬೆಂದುದ ಬೆದಕಿ ನೋಯಿಸಬೇಡ. ಬೊಪ್ಪ ನುಡಿಯದಿರು. ಹಗಲಿನ ಕದನವನು ಗೆಲಿದಾತ ಬೇರೆ ಇಹ. ಉದಯದಲಿ ಗೆಲಿದಾತನನು ನಿಮ್ಮ ಇದಿರಿನಲಿ ತೋರುವೆನು. ಸದನಕೆ ಬೀಳ್ಕೊಡಿ.
(ಎಂದು ಕುಮಾರ ಅರಮನೆಗೆ ಕಳುಹಿಸಿಕೊಂಡನು.)
ಪದ ವಿಂಗಡಣೆ ಮತ್ತು ತಿರುಳು
ನೆರವಿ=ಗುಂಪು; ನೂಕುನಾಕಾಯಿತ್ತು=ನಿಲ್ಲಲು ಜಾಗವಿಲ್ಲದೆ ಒಬ್ಬರ ಮೇಲೆ ಮತ್ತೊಬ್ಬರು ಬೀಳುವಂತಾಗುವುದು;
ಇತ್ತ ಪುರದಲಿ ಉತ್ತರನ ನೋಡುವ ನೆರವಿಯು ನೂಕು ನೂಕಾಯಿತ್ತು=ಇತ್ತ ವಿರಾಟನಗರಿಯಲ್ಲಿ ಉತ್ತರಕುಮಾರನು ದುರ್‍ಯೋದನನ ಸೇನೆಯ ಮೇಲೆ ಜಯವನ್ನು ಪಡೆದ ಸುದ್ದಿಯು ಹಬ್ಬುತ್ತಿದ್ದಂತೆಯೇ, ಅವನನ್ನು ನೋಡಲು ಪುರಜನರು ಗುಂಪು ಗುಂಪಾಗಿ ಬರತೊಡಗಲು ಅರಮನೆಯ ಬಳಿ ಜನಸಂದಣಿಯು ನೂಕುನೂಕಾಯಿತು;
ಮಂತ್ರಿಗಳು ಇದಿರು ಬಂದರು=ಮಂತ್ರಿಗಳು ಉತ್ತರಕುಮಾರನನ್ನು ಸ್ವಾಗತಿಸಲು ಬಂದರು;
ಉದಿತ=ಹುಟ್ಟಿದ/ಹೊರಹೊಮ್ಮುತ್ತಿರುವ; ಘೋಷ=ಕೂಗಿ ಹೇಳುವಿಕೆ/ದೊಡ್ಡ ದನಿಯಲ್ಲಿ ಸಾರುವಿಕೆ; ವಿತಾನ=ಗುಂಪು; ರಭಸ=ಜೋರು/ಅಬ್ಬರ/ಬೊಬ್ಬೆ;
ಉದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ=ಮಂಗಳವಾದ್ಯಗಳಿಂದ ಹೊರಹೊಮ್ಮುತ್ತಿರುವ ದನಿಯು ಜೋರಾಗಿ ಕೇಳಿಬರುತ್ತಿರಲು;
ವರ=ಉತ್ತಮ; ಸುದತಿ=ಸುಂದರವಾದ ಹಲ್ಲುಗಳನ್ನುಳ್ಳವಳು/ಹೆಂಗಸು; ಸೇಸೆ=ಅರಿಸಿನ/ಕುಂಕುಮ/ ಗಂದ ಬೆರೆತ ಅಕ್ಕಿಯ ಕಾಳುಗಳು; ಸೂಸು=ಎಸೆ/ಚೆಲ್ಲು;
ವರ ಸುದತಿಯರು ಸೇಸೆಯನು ಸೂಸಿದರು=ಸುಂದರಿಯರು ಅಕ್ಶತೆಯ ಕಾಳುಗಳನ್ನು ಉತ್ತರಕುಮಾರನ ಮಯ್ ಮೇಲೆ ಎಸೆದರು;
ಕೋವಿದ=ಪಂಡಿತ/ಜ್ನಾನಿ/ವಿದ್ವಾಂಸ; ಗುಜುಗುಜು=ಪಿಸುಮಾತು;
ವರಕೋವಿದರು ಕೂ ಡೆ ತಮ್ಮೊಳಗೆ ಗುಜುಗುಜಿಸಿ ಆಡುತಿರ್ದರು=ಪುರಜನರ ಗುಂಪಿನಲ್ಲಿದ್ದ ಕೆಲವು ಪಂಡಿತರು ತಮ್ಮತಮ್ಮಲ್ಲಿಯೇ ಮೆಲ್ಲನೆಯ ದನಿಯಲ್ಲಿ ಪರಸ್ಪರ ಮಾತನಾಡಿಕೊಳ್ಳತೊಡಗಿದರು;
ವದನ+ಇದೆ; ವದನ=ಮೊಗ/ಮುಕ; ಕಳೆ+ಕುಂದಿ; ಕಳೆ=ಕಾಂತಿ/ತೇಜಸ್ಸು; ಕುಂದು=ಕುಗ್ಗು; ಅಭ್ಯುದಯ=ಏಳಿಗೆ/ಶ್ರೇಯಸ್ಸು; ತಾನ್+ಎಂತು; ಎಂತು=ಹೇಗೆ;
ವದನವಿದೆ ಕಳೆಗುಂದಿ… ಜಯದ ಅಭ್ಯುದಯ ತಾ ನೆಂತು=ಉತ್ತರಕುಮಾರನ ಮೊಗದಲ್ಲಿ ತುಸುವಾದರೂ ಗೆಲುವಿಲ್ಲ. ಸಪ್ಪಗಿದ್ದಾನೆ. ಹಾಗಾದರೆ ಈತನಿಗೆ ಜಯದ ಶ್ರೇಯಸ್ಸಾದರೂ ಹೇಗೆ ಬಂದಿತು; ಕಾಳೆಗದಲ್ಲಿ ಈತ ಜಯಶಾಲಿಯಾಗಿದ್ದರೆ ಈತನ ಮೊಗದಲ್ಲಿ ತೇಜಸ್ಸು ಕಂಗೊಳಿಸಬೇಕಾಗಿತ್ತು ಎಂಬುದು ಅವರ ಲೆಕ್ಕಾಚಾರ;
ಎಂದಿನವನು=ಮೊದಲಿನಂತೆಯೇ ಇದ್ದಾನೆ. ಯಾವೊಂದು ಬದಲಾವಣೆ ಕಾಣುತ್ತಿಲ್ಲ;
ಉತ್ತರನು ಎಂದಿನವನು=ಉತ್ತರಕುಮಾರನ ಹಾವಬಾವಗಳಲ್ಲಿ ಯಾವ ಬದಲಾವಣೆಯೂ ಕಂಡುಬರುತ್ತಿಲ್ಲ;
ಗಂಗಾನಂದನ=ಗಂಗಾದೇವಿಯ ಮಗನಾದ ಬೀಶ್ಮ; ಹೂಹೆ=ಮಗು/ಹಸುಳೆ;
ಈ ಹೂಹೆ ಗೆಲಿದನು=ಈ ನುಡಿಗಳು ವ್ಯಂಗ್ಯದ ನುಡಿಯಾಗಿ ಬಳಕೆಗೊಂಡಿವೆ. ಬೀಶ್ಮನ ಪರಾಕ್ರಮದ ಮುಂದೆ ಉತ್ತರಕುಮಾರನ ಪರಾಕ್ರಮ ಏನೇನು ಅಲ್ಲ. ಬೀಶ್ಮನ ಮುಂದೆ ಉತ್ತರಕುಮಾರನು ಒಂದು ಹಸುಳೆಯಿದ್ದಂತೆ ಎಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತಿವೆ;
ಸಂದ=ಹೆಸರಾಂತ; ಸುಭಟ=ಒಳ್ಳೆಯ ಕಾದಾಳು;
ಗಂಗಾನಂದನನು ಈ ಹೂಹೆ ಗೆಲಿದನು. ಸಂದ ಸುಭಟ ದ್ರೋಣ ಕರ್ಣಾದಿಗಳನು ಓಡಿಸಿದ=ಕಾಳೆಗದ ಕಣದಲ್ಲಿ ಗಾಂಗೇಯರನ್ನು ಈ ಹಸುಳೆ ಗೆದ್ದನು. ಹೆಸರಾಂತ ಕಾದಾಳುಗಳಾದ ದ್ರೋಣಕರ್‍ಣ ಮುಂತಾದ ಕಲಿಗಳನ್ನು ಓಡಿಸಿದನು ಎಂಬ ಸುದ್ದಿ ನಿಜವೇ; ನಂಬುವುದಕ್ಕೆ ಆಗುತ್ತಿಲ್ಲ. ಏಕೆಂದರೆ ಉತ್ತರಕುಮಾರನ ತೋಳ್ಬಲದ ಪರಾಕ್ರಮ ಎಂತಹುದೆಂಬುದು ನಮಗೆ ಚಿಕ್ಕಂದಿನಿಂದಲೂ ಗೊತ್ತಿದೆ ಎಂದು ಕೆಲವರು ಉತ್ತರಕುಮಾರನ ಗೆಲುವಿನ ವಾರ್‍ತೆಯನ್ನೇ ಅನುಮಾನಿಸಿದರು;
ಅಂದ=ರೀತಿ;
ಇವ ಗೆಲಿದ ಅಂದವಾಗಿರದು=ಉತ್ಸಾಹವಿಲ್ಲದೆ ಕಳೆಗುಂದಿರುವ ಉತ್ತರಕುಮಾರನನ್ನು ಗಮನಿಸಿದರೆ, ಕಾಳೆಗದಲ್ಲಿ ಗೆದ್ದವನಂತೆ ಇವನು ಕಾಣಿಸುತ್ತಿಲ್ಲ; ಸಂಭಾವಿಸು=ಉಂಟಾಗು;
ಈ ಬೃಹನ್ನಳೆಯಿಂದ ಸಂಭಾವಿಸುವುದು ಎಂದುದು ಮಂದಿ ತಮತಮಗೆ=“ಇವನ ಸಾರತಿಯಾಗಿ ಕಾಳೆಗಕ್ಕೆ ಹೋಗಿದ್ದ ಬೃಹನ್ನಳೆಯಿಂದ ಜಯ ದೊರೆತಿರಬೇಕು” ಎಂದು ಕೋವಿದರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರು;
ಜಾಲ=ಗುಂಪು; ಜೀಯ=ಸ್ವಾಮಿ/ಒಡೆಯ;
ಪುರಜನ ಜಾಲ “ಜೀಯ“ ಎನಲು=ಉತ್ತರಕುಮಾರನನ್ನು ಕಂಡ ಕೂಡಲೇ ಹೆಮ್ಮೆಯಿಂದ ಪಟ್ಟಣಿಗರ ಗುಂಪು “ಒಡೆಯ” ಎಂದು ಆನಂದಿಂದ ಒಕ್ಕೊರಳಿನಿಂದ ಕೂಗಲು;
ನಿವಾಳಿಸು=ಇದೊಂದು ಆಚರಣೆ. ಯಾವುದೇ ಒಂದು ಕೆಲಸದಲ್ಲಿ ಯಶಸ್ಸನ್ನು ಪಡೆದಿರುವ ವ್ಯಕ್ತಿಗೆ ಜನರ ಕೆಟ್ಟಕಣ್ಣು ಬಿದ್ದರೆ ಕೇಡಾಗುತ್ತದೆ. ಆದ್ದರಿಂದ ಜನರ ಕೆಟ್ಟಕಣ್ಣಿನ ದಿಟ್ಟಿಯಿಂದಾಗುವ ಕೇಡನ್ನು ತಡೆಗಟ್ಟಲೆಂದು ಮಾಡುವ ಆಚರಣೆ.ಇದನ್ನು ‘ಇಳಿ ತೆಗೆಯುವುದು’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ಆಚರಣೆಯಲ್ಲಿ ಅರಿಸಿನ ಕುಂಕುಮ ಕಲೆಸಿದ ನೀರಿನ ತಟ್ಟೆಯಿಂದ ಆರತಿಯನ್ನೆತ್ತಿ, ಅನಂತರ ಆ ನೀರನ್ನು ಹೊರಚೆಲ್ಲುತ್ತಾರೆ. ಇನ್ನು ಅನೇಕ ಬಗೆಯ ಆಚರಣೆಗಳ ಮೂಲಕ ಕೆಟ್ಟಕಣ್ಣಿನ ಕೇಡನ್ನು ಹೋಗಲಾಡಿಸುತ್ತಾರೆ; ನಿವಾಳಿಗಳು=ಕೆಟ್ಟಕಣ್ಣಿನ ಕೇಡನ್ನು ತೆಗೆಯಲು ಬಂದವರು; ‘ಕೆಟ್ಟಕಣ್ಣು’ ಎಂಬುದು ಒಂದು ನುಡಿಗಟ್ಟು. ಕೆಲವರ ನೋಟದಿಂದಲೇ ವಸ್ತುಗಳಿಗೆ ಮತ್ತು ವ್ಯಕ್ತಿಗಳಿಗೆ ಕೇಡು ತಟ್ಟುತ್ತದೆ ಎಂಬ ಭಾವನೆಯು ಜನಮನದಲ್ಲಿ ಬಹುಕಾಲದಿಂದಲೂ ಬೇರೂರಿದೆ. ಇದೊಂದು ನಂಬಿಕೆಯೇ ಹೊರತು ವಾಸ್ತವವಲ್ಲ;
ಇದಿರು ಬಂದ ನಿ ವಾಳಿಗಳ ಉತ್ತರನು ನೂಕಿದನು=ಉತ್ತರಕುಮಾರನು ತನಗೆ ಆರತಿಯನ್ನೆತ್ತಿ ಕೆಟ್ಟಕಣ್ಣಿನ ಕೇಡನ್ನು ನಿವಾರಿಸಲೆಂದು ಬಂದ ಹೆಂಗಸರನ್ನು ದೂರತಳ್ಳಿದನು
ಲೀಲೆ=ಆಟ/ಆಚರಣೆ;
ಲೀಲೆ ಮಿಗಿಲು ಕೈವಾರಿಗಳ ಕೋಪಿಸುತ=ಆರತಿಯನ್ನು ಬೆಳಗಿ ಇಳಿತೆಗೆಯಲೆಂದು ತನ್ನತ್ತ ಉತ್ಸಾಹದಿಂದ ಬರುತ್ತಿರುವ ಹೆಂಗಸರನ್ನು ತಡೆಗಟ್ಟುವಂತೆ ಕೋಪದಿಂದ ನೋಡುತ್ತ;
ಆಲಿ=ಕಣ್ಣು; ಅವನಿ=ನೆಲ; ಬರೆಯೆ=ಬರೆಯುತ್ತಿರಲು;
ಆಲಿಯು ಅವನಿಯ ಬರೆ ಯುವುದು =ಇದೊಂದು ರೂಪಕದ ನುಡಿಗಟ್ಟು. ವ್ಯಕ್ತಿಯು ಲಜ್ಜೆ/ಹೆದರಿಕೆ/ಹಿಂಜರಿಕೆಯ ಒಳಮಿಡಿತಗಳಿಗೆ ಒಳಗಾದ ಸನ್ನಿವೇಶದಲ್ಲಿ ಏನನ್ನೂ ಮಾಡಲು ತೋಚದೆ, ತನ್ನ ಸುತ್ತಮುತ್ತಲಿದ್ದವರನ್ನು ಕಣ್ಣೆತ್ತಿ ನೋಡಲಾಗದೆ, ತಲೆತಗ್ಗಿಸಿಕೊಂಡು ನೆಲವನ್ನೇ ನೋಡುತ್ತಿರುವುದು;
ಆಲಿಯು ಅವನಿಯ ಬರೆಯೆ=ಉತ್ತರಕುಮಾರನು ತಲೆತಗ್ಗಿಸಿಕೊಂಡು ನೆಲವನ್ನೇ ನೋಡುತ್ತ;
ಮುಸುಕು=ತುಂಬಿರು/ಆವರಿಸಿರು; ದುಗುಡ=ಚಿಂತೆ/ಕಳವಳ; ರಾಜ+ಆಲಯ; ರಾಜಾಲಯ=ಅರಮನೆ;
ಮುಸುಕಿನ ಮೇಲು ದುಗುಡದ ಭಾರದಲಿ ರಾಜಾಲಯಕೆ ಬರಲು=ತನ್ನ ಮಯ್ ಮನವನ್ನು ಕವಿದಿರುವ ಚಿಂತೆಯ ಹೊರೆಯಲ್ಲಿ ಕುಗ್ಗಿಹೋಗಿರುವ ಉತ್ತರಕುಮಾರನು ಅರಮನೆಗೆ ಬರಲು;
ವಿರಾಟರಾಯ ಇದಿರು ಬಂದು ನಂದನನ ಅಪ್ಪಿದನು=ವಿರಾಟರಾಯನು ಎದುರುಬಂದು ಉತ್ತರಕುಮಾರನನ್ನು ಅಪ್ಪಿಕೊಂಡನು;
ವಸುಕುಲ=ವಸುವಂಶ; ನೃಪ=ರಾಜ; ಚಿಂತಾಮಣಿ=ರತ್ನ;
ವಸುಕುಲದ ನೃಪ ಚಿಂತಾಮಣಿ=ಇದೊಂದು ಬಿರುದು. ವಸುವಂಶದ ರಾಜರಲ್ಲಿ ರತ್ನದಂತೆ ಕಂಗೊಳಿಸುವವನು;
ಕುರುರಾಯ=ದುರ್‍ಯೋದನ; ಮೋಹರ=ಸೇನೆ; ಧೂಮಕೇತು=ಗಗನದಲ್ಲಿ ಕಾಣಿಸಿಕೊಳ್ಳುವ ಒಂದು ಬಗೆಯ ಆಕಾಶಕಾಯ. ಇದು ಗೋಚರಿಸಿದರೆ ರಾಜನಿಗೆ ಇಲ್ಲವೇ ನಾಡಿಗೆ ಕೇಡು ತಟ್ಟುತ್ತದೆ ಎಂಬ ನಂಬಿಕೆ ಜನಮನದಲ್ಲಿದೆ;
ಕುರುರಾಯ ಮೋಹರ ಧೂಮಕೇತು=ಇದೊಂದು ಬಿರುದು; ಕುರುರಾಯನ ಸೇನೆಯ ಪತನಕ್ಕೆ ಕಾರಣನಾದ ಮಹಾಪರಾಕ್ರಮಿ;
ಬಾ ಮಗನೆ, ವಸುಕುಲದ ನೃಪ ಚಿಂತಾಮಣಿಯೆ… ಕುರುರಾಯ ಮೋಹರ ಧೂಮಕೇತುವೆ… ಕಂದ ಬಾ. ಎಂದು ಅಪ್ಪಿ ಕುಳ್ಳಿರಿಸೆ=ಬಾ ಮಗನೆ, ವಸುಕುಲದ ರಾಜರ ಚಿಂತಾಮಣಿಯೇ… ಕುರುರಾಯನ ಸೇನೆಯ ದೂಮಕೇತುವೆ… ಕಂದ ಬಾ ಎನ್ನುತ್ತ, ಮಗನನ್ನು ಅಪ್ಪಿಕೊಂಡು, ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡನು;
ಕಾಮಿನಿ=ಹೆಂಗಸು; ಉಪ್ಪಾರತಿ=ಕೆಟ್ಟಕಣ್ಣಿನ ಕೇಡಿನ ಪರಿಹಾರಕ್ಕಾಗಿ ಎತ್ತುವ ಉಪ್ಪಿನ ಆರತಿ/ಉಪ್ಪನ್ನು ನಿವಾಳಿಸಿ ಇಳಿ ತೆಗೆಯುವುದು;
ಕಾಮಿನಿಯರ ಉಪ್ಪಾರತಿಗಳ=ಕಾಮಿನಿಯರು ಉಪ್ಪಾರತಿಗಳನ್ನು ಎತ್ತಿದರು;
ಅಭಿರಾಮ=ಸುಂದರವಾದ/ಮನೋಹರವಾದ;
ಅಭಿರಾಮ ವಸ್ತ್ರ ನಿವಾಳಿ=ಸುಂದರವಾದ ಬಟ್ಟೆಗಳಿಂದ ಇಳಿತೆಗೆದರು;
ಸ್ತೋಮ=ಗುಂಪು; ಸೊಡರು=ದೀಪ; ಒಗ್ಗು=ಒಟ್ಟುಗೂಡು; ಸುಳಿ=ಕಾಣಿಸಿಕೊಳ್ಳು/ಗೋಚರವಾಗು;
ರತ್ನಸ್ತೋಮ ಬಣ್ಣದ ಸೊಡರು ಹರುಷದ ಒಗ್ಗಿನಲಿ ಸುಳಿದವು=ನವರತ್ನಗಳ ಕಾಂತಿಯಿಂದ ಮತ್ತು ಬಣ್ಣಬಣ್ಣದ ದೀಪಗಳಿಂದ ಒಟ್ಟುಕೂಡಿ ಕಂಗೊಳಿಸುತ್ತಿರುವ ರಾಣಿವಾಸದವರಿಂದ ಉತ್ತರಕುಮಾರನನ್ನು ಅರಮನೆಗೆ ಸ್ವಾಗತಿಸಲಾಯಿತು;
ಬೊಪ್ಪ=ತಂದೆ/ಅಪ್ಪ;ಬಯಲು=ಉಪಯುಕ್ತವಲ್ಲದ/ಪ್ರಯೋಜವಿಲ್ಲದ; ಡೊಂಬು=ಸೋಗು/ಬೂಟಾಟಿಕೆ; ಬಯಲ ಡೊಂಬು=ಇದೊಂದು ನುಡಿಗಟ್ಟು. ಮೇಲು ನೋಟಕ್ಕೆ ದೊಡ್ಡದಾಗಿ ಕಾಣಿಸುತ್ತಿದ್ದರೂ ಒಳಗಡೆ ಟೊಳ್ಳಾಗಿರುವುದು;
ಬೊಪ್ಪ ಸಾಕು, ಈ ಬಯಲ ಡೊಂಬು ಎನಗೆ ಒಪ್ಪುವುದೆ=ಅಪ್ಪ ಸಾಕು ನಿಲ್ಲಿಸಿ. ಈ ರೀತಿ ಸಡಗರ ಉತ್ಸಾಹ ಆಡಂಬರಗಳಿಂದ ನೀವು ಮಾಡುತ್ತಿರುವ ಸ್ವಾಗತದ ಉತ್ಸವವು ಮೇಲು ನೋಟಕ್ಕೆ ನಿಮ್ಮೆಲ್ಲರಿಗೂ ಚೆನ್ನಾಗಿ ಕಂಡರೂ ನನಗೆ ಇದು ಬೂಟಾಟಿಕೆಯ ಉತ್ಸವವಾಗಿದೆ. ಇಂತಹ ಸ್ವಾಗತವು ನನಗೆ ಒಪ್ಪುವುದೆ. ಅಂದರೆ ಇಂತಹ ಸ್ವಾಗತಕ್ಕೆ ನಾನು ಯೋಗ್ಯನಲ್ಲ;
ವೀರ+ಉಪಚಾರವು; ಉಪಚಾರ=ಸತ್ಕಾರ; ಒಪ್ಪು=ಯೋಗ್ಯವಾದುದು/ಹಿರಿಮೆ/ಅಗ್ಗಳಿಕೆ;
ವೀರೋಪಚಾರವು ಇದು ಒಪ್ಪುವರಿಗೆ ಒಪ್ಪುವುದು. ತೆಗೆಸು ಎನಲು=ಇಂತಹ ವೀರೋಪಚಾರವು ಯೋಗ್ಯರಾದವರಿಗೆ ಒಪ್ಪುತ್ತದೆ. ಹಿರಿಮೆಯುಳ್ಳ ವೀರರಿಗೆ ಮಾಡಿದಾಗ ಇಂತಹ ಸತ್ಕಾರಕ್ಕೆ ಬೆಲೆಬರುತ್ತದೆ ಎಂದು ಉತ್ತರಕುಮಾರನು ನುಡಿಯಲು;
ಅರಸ ನಸುನಗುತ=ವಿರಾಟರಾಯನು ಮುಗುಳು ನಗುತ್ತ;
ದರ್ಪ+ಉಳ್ಳಂಗೆ; ದರ್ಪ=ಹೆಮ್ಮೆ/ಅಗ್ಗಳಿಕೆ/ಕಸುವು; ಉಳ್ಳಂಗೆ=ಇರುವವನಿಗೆ; ಈಸು=ಇಶ್ಟು/ಈ ಪ್ರಮಾಣ; ಮಂಗಳ=ಉತ್ಸವ; ಒಪ್ಪುದೇನೈ=ಶೋಬಿಸುವುದಿಲ್ಲವೇ;
ದರ್ಪವುಳ್ಳಂಗೆ ಈಸು ಮಂಗಳವು ಒಪ್ಪದೇನೈ=ಅಗ್ಗಳಿಕೆಯುಳ್ಳವನಿಗೆ ವೀರೋಚಿತವಾದ ಇಶ್ಟು ದೊಡ್ಡ ಪ್ರಮಾಣದ ಸ್ವಾಗತದ ಉತ್ಸವವು ಶೋಬಿಸುವುದಿಲ್ಲವೇ;
ಆವಂಗೆ=ಆವನಿಗೆ/ಯಾರಿಗೆ; ಅಪ್ಪುದು=ಒದಗು/ಉಂಟಾಗು; ನಿಗರ್ವತೆ=ವಿನಯ;
ಜಗದೊಳು ಆವಂಗೆ ಅಪ್ಪುದು ಈ ಬಲವು ಈ ನಿಗರ್ವತೆ=ಜಗತ್ತಿನಲ್ಲಿ ಯಾರಿಗೆ ತಾನೆ ನಿನ್ನಲ್ಲಿರುವ ಇಂತಹ ಬಲ ಮತ್ತು ವಿನಯವಿದೆ;
ಮಗನೆ, ಕರ್ಣ ದ್ರೋಣ ಭೀಷ್ಮಾದಿಗಳನು ಒಬ್ಬನೆ ಗೆಲಿದೆ=ಇಂದಿನ ಕಾಳೆಗದಲ್ಲಿ ಕರ್‍ಣ, ದ್ರೋಣ, ಬೀಶ್ಮ ಮೊದಲಾದ ಮಹಾವೀರರೊಡನೆ ನೀನೊಬ್ಬನೇ ಹೋರಾಡಿ ಗೆಲುವನ್ನು ಪಡೆದಿರುವೆ;
ಕಡು+ಕಲಿತನ; ಕಡು=ಹೆಚ್ಚಾಗಿ/ಬಹಳವಾಗಿ; ಕಲಿತನ=ಪರಾಕ್ರಮ; ಪೂರ್ವಪುರುಷ=ಹಿಂದಿನ ಕಾಲದಲ್ಲಿದ್ದ ವ್ಯಕ್ತಿ;
ಈ ಕಾಳಗದ ಕಡುಗಲಿತನಗಳು ಪೂರ್ವ ಪುರುಷರಲಿ ಉಂಟೇ=ಇಂದು ನಡೆದ ಕಾಳೆಗದಲ್ಲಿ ನೀನು ತೋರಿಸಿದ ಕೆಚ್ಚು ಮತ್ತು ತೋಳ್ಬಲದ ಪರಾಕ್ರಮ ಹಿಂದಿನ ಯಾವ ವ್ಯಕ್ತಿಗಳಲ್ಲಾದರೂ ಇತ್ತೇ; ನಿನ್ನಂತಹ ಶೂರನನ್ನು ನಾವು ಕಂಡಿಲ್ಲ; ಕೇಳಿಲ್ಲ;
ಎನ್ನ+ಆಣೆ; ದುಗುಡ+ಏಕೆ;
ಎನ್ನಾಣೆ ದುಗುಡವೇಕೆ=ನನ್ನ ಮೇಲೆ ಆಣೆಯಿಟ್ಟು ಹೇಳು. ಅಂದರೆ ನಿಜವಾಗಿ ನಿನಗೆ ಏನಾಗುತ್ತಿದೆ ಎಂಬುದನ್ನು ತಿಳಿಸು. ಏತಕ್ಕೆ ಈ ರೀತಿ ಸಂಕಟಕ್ಕೆ ಗುರಿಯಾಗಿರುವೆ;
ಹೆತ್ತರ ಮೊಗಕೆ ಹರುಷವ ತಂದೆಲಾ=ಇಂದು ನೀನು ಹೆತ್ತ ತಂದೆತಾಯಿಯ ಮೊಗಕ್ಕೆ ಆನಂದವನ್ನು ತಂದಿರುವೆ. ನಿನ್ನ ಸಾಹಸದ ಗೆಲುವಿನಿಂದ ನಮ್ಮ ಮಯ್ ಮನ ಮುದಗೊಂಡಿದೆ; ಹಂಗಿಗ=ಇತರರ ಅದೀನಕ್ಕೆ ಒಳಗಾದವನು/ಆಶ್ರಯದಲ್ಲಿರುವವನು;
ತಲೆ+ಕುತ್ತಲ್+ಏಕೆ; ಕುತ್ತು=ಬಾಗು/ಕುಸಿ/ತಗ್ಗಿಸು; ತಲೆಗುತ್ತು=ತಲೆಯನ್ನು ಬಗ್ಗಿಸು/ತಲೆಬಾಗು;
ನೀ ಹಂಗಿಗನೆ… ತಲೆಗುತ್ತಲೇಕೆ ಎಂದು ಮುಖವ ಎತ್ತಿದನು=ನೀನು ಮತ್ತೊಬ್ಬರ ರುಣದಲ್ಲಿರುವೆಯಾ… ಈ ರೀತಿ ತಲೆತಗ್ಗಿಸಲು ಕಾರಣವೇನು ಎಂದು ಉತ್ತರಕುಮಾರನ ಬಗ್ಗಿದ ಮೊಗವನ್ನು ಮೇಲೆತ್ತಿದನು;
ನಿಮ್ಮ+ಅಡಿ; ಅಡಿ=ಹತ್ತಿರ/ಸಮೀಪ/ಸನ್ನಿದಿ; ಆದರಿಸು=ಸತ್ಕರಿಸು;
ನಿಮ್ಮಡಿ ಆದರಿಸಲು=ನಿಮ್ಮ ಸನ್ನಿದಿಯಲ್ಲಿ ಸತ್ಕಾರವನ್ನು ಪಡೆಯಲು;
ಕಾದಿ=ಹೋರಾಟವನ್ನು ಮಾಡಿ;
ಕಾದಿ ಗೆಲಿದವ ಬೇರೆ=ಇಂದಿನ ಕಾಳೆಗದ ಕಣದಲ್ಲಿ ಹಗೆಗಳ ಎದುರು ಹೋರಾಟವನ್ನು ಮಾಡಿ ಗೆಲುವನ್ನು ತಂದವನು ಬೇರೊಬ್ಬನಿದ್ದಾನೆ;
ಈಸು+ಏಕೆ; ಈಸು=ಇಶ್ಟು;
ಸಾರಥಿಯಾದ ತನಗೆ ಈಸೇಕೆ=ಸಾರತಿಯಾಗಿದ್ದ ನನಗೆ ಇಶ್ಟೊಂದು ದೊಡ್ಡಮಟ್ಟದ ಸತ್ಕಾರವೇಕೆ;
ಒಡೆ=ಬಿಡಿಸು; ಮುರಿಚು=ತಿರುಗಿಸು; ಒಡೆಮುರಿಚು=ಸೆರೆಯಾಗಿದ್ದುದನ್ನು ಬಿಡಿಸಿ ಕರೆತರುವುದು;
ಒಡೆಮುರಿಚ ಬಲ್ಲನೆ=ದುರ್‍ಯೋದನನ ಸೇನೆಯಿಂದ ಅಪಹರಣಗೊಂಡಿದ್ದ ದನಗಳನ್ನು ಬಿಡಿಸಿಕೊಂಡು ಬರುವಂತಹ ಶಕ್ತಿಯಾಗಲಿ ಇಲ್ಲವೇ ಕೆಚ್ಚಾಗಲಿ ನನ್ನಲ್ಲಿದೆಯೆ;
ನಾಚಿಸದಿರಿ=ಅಂತಹ ವೀರನೆಂದು ಹೊಗಳಿ ನನ್ನನ್ನು ನಾಚಿಸಬೇಡಿ;
ವಿಕ್ರಮ=ಶೂರತನ/ಪರಾಕ್ರಮ;
ಕಾದಿದಾತನು ನೀನು. ಸಾರಥಿಯಾದವನು ತಂಗಿಯ ಬೃಹನ್ನಳೆ. ವಾದ ಬೇಡಲೆ ಮಗನೆ. ನಿನ್ನ ವಿಕ್ರಮವ ಬಲ್ಲೆನು=ಇಂದಿನ ಕಾಳೆಗದ ಕಣದಲ್ಲಿ ಹೋರಾಡಿದವನು ನೀನು; ಸಾರತಿಯಾಗಿದ್ದವನು ನಿನ್ನ ತಂಗಿ ಉತ್ತರೆಯ ನಾಟ್ಯಗುರುವಾದ ಬೃಹನ್ನಳೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಮಗನೇ, ನನ್ನೊಡನೆ ವಾದವನ್ನು ಮಾಡಬೇಡ. ನಿನ್ನ ಪರಾಕ್ರಮವನ್ನು ನಾನು ಅರಿತಿದ್ದೇನೆ;
ಅದಟು=ಪರಾಕ್ರಮ; ಎನಗೆ+ಉಂಟೆ;
ಅದಟುತನವು ಎನಗುಂಟೆ=ಪರಾಕ್ರಮದ ಗುಣವು ನನ್ನಲ್ಲಿದೆಯೇ; ಬೆಂದುದ=ಬೆಂದು ಕರಿಕಲಾಗುತ್ತಿರುವುದನ್ನು/ಸುಟ್ಟು ಬೂದಿಯಾಗುತ್ತಿರುವುದನ್ನು;
ಬೆದಕು=ಕೆದಕು/ಕೆದರು;
ಬೆಂದುದ ಬೆದಕು=ಇದೊಂದು ನುಡಿಗಟ್ಟು. ಉರಿದು ಬೂದಿಯಾಗುತ್ತಲಿರುವ ಕಸಕಡ್ಡಿಯ ಗುಡ್ಡೆಯನ್ನು ಕೆದಕಿದರೆ, ಮತ್ತೆ ಅಳಿದುಳಿದ ವಸ್ತುಗಳನ್ನು ಸುಡುವಂತೆ ಬೆಂಕಿಯು ಮತ್ತೆ ಹತ್ತಿ ಉರಿಯತೊಡಗುತ್ತದೆ.ಅಂತೆಯೇ ಸಂಕಟದಲ್ಲಿದ್ದವರನ್ನು ಮತ್ತೆ ಪ್ರಶ್ನಿಸತೊಡಗಿದರೆ ಇಲ್ಲವೇ ಅವರ ಮುಂದೆ ಮಾತನಾಡತೊಡಗಿದರೆ ಅವರ ನೋವು ಇನ್ನೂ ಹೆಚ್ಚಾಗುತ್ತದೆ ಎಂಬ ತಿರುಳಿನಲ್ಲಿ ಈ ನುಡಿಗಟ್ಟು ಬಳಕೆಯಾಗಿದೆ;
ಬೆಂದುದ ಬೆದಕಿ ನೋಯಿಸಬೇಡ=ಅಪ್ಪ… ಕಾಳೆಗದ ಕಣಕ್ಕೆ ಹೋಗುವ ಮುನ್ನ ಮತ್ತು ಹೋದ ನಂತರ ನಡೆದ ಸಂಗತಿಗಳಿಂದ ಬಹಳವಾಗಿ ನೊಂದಿದ್ದೇನೆ. ಮತ್ತೆ ಮತ್ತೆ ನನ್ನನ್ನು ಪರಾಕ್ರಮಿಯೆಂದು ಹೊಗಳಿ ಹೊಗಳಿ ನೋಯಿಸಬೇಡ; ಕದನ=ಯುದ್ದ/ಕಾಳೆಗ;
ಬೊಪ್ಪ ನುಡಿಯದಿರು=ಅಪ್ಪ… ಮತ್ತೆ ಮಾತನ್ನು ಮುಂದುವರಿಸಬೇಡ;
ಗೆಲಿದಾತ=ಗೆದ್ದವನು; ಇಹ=ಇರುವನು;
ಹಗಲಿನ ಕದನವನು ಗೆಲಿದಾತ ಬೇರೆ ಇಹ=ಇಂದು ಹಗಲಿನಲ್ಲಿ ನಡೆದ ಕದನದಲ್ಲಿ ಗೆದ್ದವನು ಬೇರೊಬ್ಬನಿದ್ದಾನೆ;
ಉದಯ=ಹುಟ್ಟು;
ಉದಯದಲಿ ಗೆಲಿದಾತನನು ನಿಮ್ಮ ಇದಿರಿನಲಿ ತೋರುವೆನು=ನಾಳೆ ಬೆಳಗ್ಗೆ ದುರ್‍ಯೋದನನ ಚತುರಂಗ ಬಲವನ್ನು ಸೋಲಿಸಿ ಯುದ್ದದಲ್ಲಿ ಗೆದ್ದವನನ್ನು ಕರೆತಂದು ನಿಮ್ಮ ಎದುರಿನಲ್ಲಿ ತೋರಿಸುವೆನು;
ಸದನ=ಮನೆ/ನಿವಾಸ;
ಸದನಕೆ ಬೀಳ್ಕೊಡಿ ಎಂದು ಕುಮಾರ ಅರಮನೆಗೆ ಕಳುಹಿಸಿಕೊಂಡನು=ಈಗ ನನ್ನನ್ನು ಕಳುಹಿಸಿಕೊಡಿ ಎಂದು ತಂದೆಯಾದ ವಿರಾಟರಾಯನನ್ನು ಕೇಳಿಕೊಂಡು ಅರಮನೆಯ ತನ್ನ ಕೊಟಡಿಯತ್ತ ನಡೆದನು;
(ಚಿತ್ರ ಸೆಲೆ: quoracdn.net)
ಇತ್ತೀಚಿನ ಅನಿಸಿಕೆಗಳು