ಪಂಪ ಕವಿಯ ‘ಆದಿಪುರಾಣ’ ಕಾವ್ಯದಲ್ಲಿನ ಪದ್ಯಗಳ ಓದು

– ಸಿ.ಪಿ.ನಾಗರಾಜ.

(ಕ್ರಿ. ಶ. 942 ರಲ್ಲಿ ರಚನೆಗೊಂಡ ಪಂಪ ಕವಿಯ ‘ಆದಿ ಪುರಾಣ’ ಕಾವ್ಯದ ಮೊದಲನೆಯ ಆಶ್ವಾಸದ 9ನೆಯ ಪದ್ಯ. ಈ ಪದ್ಯದಲ್ಲಿ ಸರಸ್ವತಿಯ ಸ್ವರೂಪವನ್ನು ಕುರಿತು ಹೇಳಲಾಗಿದೆ.)

*** ಪದ್ಯ ***

ಪರಮಜಿನೇಂದ್ರವಾಣಿಯೆ ಸರಸ್ವತಿ ಬೇರದು ಪೆಣ್ಣರೂಪಮಂ
ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ
ದರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯಮನೀವುದಾನದ
ರ್ಕೆರೆದಪೆನಾ ಸರಸ್ವತಿಯೆ ಮಾಳ್ಕೆಮಗಿಲ್ಲಿಯೆ ವಾಗ್ವಿಳಾಸಮಂ.

ಅನ್ವಯಾನುಸಾರ ಓದು

ಪರಮ ಜಿನೇಂದ್ರ ವಾಣಿಯೆ ಸರಸ್ವತಿ;
ಬೇರೆ ಅದು ಪೆಣ್ಣರೂಪಮನ್ ಧರಿಯಿಸಿ ನಿಂದುದಲ್ತು;
ಅದುವೆ ಭಾವಿಸಿ ಓದುವ ಕೇಳ್ವ ಪೂಜಿಪ ಆದರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯಮನ್ ಈವುದು;
ಆನ್ ಅದರ್ಕೆ ಎರೆದಪೆನ್;
ಆ ಸರಸ್ವತಿಯೆ ಎಮಗೆ ಇಲ್ಲಿಯೆ ವಾಗ್ವಿಳಾಸಮಮ್ ಮಾಳ್ಕೆ.

ಪದ ವಿಂಗಡಣೆ ಮತ್ತು ತಿರುಳು

ಪರಮ=ಅತ್ತ್ಯುತ್ತಮವಾದ/ಬಹಳ ಒಳ್ಳೆಯ ; ಜಿನ+ಇಂದ್ರ=ಜಿನೇಂದ್ರ; ಜಿನ=ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವವನು/ತೀರ್‍ತಂಕರ. ಜಿನ ಮತದಲ್ಲಿ 24 ಮಂದಿ ತೀರ್‍ತಂಕರರಿದ್ದಾರೆ. ಮೊದಲನೆಯವನು ಪುರುದೇವ. ಇಪ್ಪತ್ನಾಲ್ಕನೆಯವನು ವರ್‍ದಮಾನ ಮಹಾವೀರ; ವಾಣಿ=ಮಾತು;

ಜಿನೇಂದ್ರ ವಾಣಿ=24 ಮಂದಿ ತೀರ್‍ತಂಕರರು ಜನಸಮುದಾಯದ ಒಲವು ನಲಿವು ನೆಮ್ಮದಿಯ ಬದುಕಿಗೆ ಬೇಕಾದ ಅಯ್ದು ಸಂಗತಿಗಳನ್ನು ಹೇಳಿದ್ದಾರೆ. 1. ಅಹಿಂಸೆ. 2.ಸತ್ಯ. 3. ಕದಿಯದಿರುವುದು 4. ಸಂಪತ್ತನ್ನು ದೊಡ್ಡ ಪ್ರಮಾಣದಲ್ಲಿ ಕೂಡಿಡದಿರುವುದು. 5.ಮಯ್ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಬಾಳುವುದು;

ಸರಸ್ವತಿ=ವಿದ್ಯಾ ದೇವತೆ/ಅರಿವಿನ ದೇವತೆ. ಮಾನವ ಸಮುದಾಯದ ಜೀವನದಲ್ಲಿ “ಯಾವುದು ಸರಿ/ಯಾವುದು ತಪ್ಪು; ಲೋಕ ಜೀವನದಲ್ಲಿ ಯಾವುದು ವಾಸ್ತವ/ಯಾವುದು ಕಲ್ಪಿತ; ಯಾವುದನ್ನು ಮಾಡಬೇಕು/ಯಾವುದನ್ನು ಮಾಡಬಾರದು; ತನ್ನ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರ ಒಳಿತಿಗಾಗಿಯೂ ಶ್ರಮಿಸಬೇಕು” ಎಂಬ ಅರಿವು ಮತ್ತು ಎಚ್ಚರವನ್ನು ತಿಳಿಸುವ ನುಡಿಗಳನ್ನು ವಿದ್ಯೆ ಎಂದು ಕರೆಯುತ್ತಾರೆ;

ಪರಮ ಜಿನೇಂದ್ರವಾಣಿಯೆ ಸರಸ್ವತಿ=ಮಾನವ ಸಮುದಾಯದ ಒಳ್ಳೆಯ ಜೀವನಕ್ಕೆ ಬೇಕಾದ ಸಂಗತಿಗಳನ್ನು ಹೇಳಿರುವ ಜಿನೇಂದ್ರವಾಣಿಯೇ ಸರಸ್ವತಿ;

ಬೇರೆ=ಇತರ/ಅನ್ಯ; ಅದು=ವಿದ್ಯೆ/ಅರಿವು ಎನ್ನುವುದು. ಪೆಣ್ಣರೂಪಮ್+ಅನ್; ಪೆಣ್ಣರೂಪ=ಹೆಣ್ಣಿನ ಆಕಾರ; ಅನ್=ಅನ್ನು; ಧರಿಯಿಸು=ತೊಡುವುದು; ನಿಂದುದು+ಅಲ್ತು; ನಿಂದುದು=ಇರುವುದು; ಅಲ್ತು=ಅಲ್ಲ;

ಬೇರೆ ಅದು ಪೆಣ್ಣರೂಪಮನ್ ಧರಿಯಿಸಿ ನಿಂದುದಲ್ತು=ವಿದ್ಯೆ ಎಂಬುದು ಹೆಣ್ಣಿನ ರೂಪವನ್ನು ತಳೆದು ಬಂದಿಲ್ಲ;

ಅದುವೆ=ತೀರ್‍ತಂಕರರು ಹೇಳಿರುವ ಅಯ್ದು ಸಂಗತಿಗಳೆ; ಭಾವಿಸು=ಆಲೋಚಿಸು/ಚಿಂತಿಸು; ಪೂಜಿಸು=ಸೇವೆಯನ್ನು ಮಾಡು; ಆದರಿಸು=ಪ್ರೀತಿಯಿಂದ ಉಪಚರಿಸು; ಭವ್ಯ=ಉನ್ನತವಾದ/ಚೆನ್ನಾಗಿರುವ; ಕೋಟಿ=ಒಂದು ನೂರು ಲಕ್ಶ; ಭವ್ಯಕೋಟಿ=ಇದೊಂದು ನುಡಿಗಟ್ಟು. ಒಳಿತಿನ ನಡೆನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕೆಂದು ಬಯಸುತ್ತಿರುವ ದೊಡ್ಡ ಜನಸಮುದಾಯ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ; ನಿರಂತರ=ಸದಾಕಾಲ/ಯಾವಾಗಲೂ ; ಸೌಖ್ಯಮ್+ಅನ್; ಸೌಖ್ಯ=ಸುಕ/ನೆಮ್ಮದಿ/ಆನಂದ ; ಈ=ಕೊಡು ; ಈವುದು=ಕೊಡುವುದು;

ಅದುವೆ ಭಾವಿಸಿ ಓದುವ ಕೇಳ್ವ ಪೂಜಿಪ ಆದರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯಮನ್ ಈವುದು=ಇಪ್ಪತ್ನಾಲ್ಕು ಮಂದಿ ತೀರ್‍ತಂಕರರು ಹೇಳಿರುವ ಸಂಗತಿಗಳನ್ನು ಚೆನ್ನಾಗಿ ಓದಿ, ಕೇಳಿ, ಮನನ ಮಾಡಿಕೊಂಡು ತಮ್ಮ ನಿತ್ಯಜೀವನದಲ್ಲಿ ಅವನ್ನು ಅಳವಡಿಸಿಕೊಂಡು ಆಚರಣೆಗೆ ತರಬೇಕೆಂದು ಪ್ರಯತ್ನಿಸುತ್ತಿರುವ ಜನಸಮೂಹಕ್ಕೆ ಜೀವನದ ಉದ್ದಕ್ಕೂ ಒಲವು ನಲಿವು ನೆಮ್ಮದಿಯನ್ನು ನೀಡುತ್ತದೆ;

ಆನ್=ನಾನು; ಅದರ್ಕೆ=ಜಿನೇಂದ್ರವಾಣಿಗೆ; ಎರೆ=ಬೇಡು/ಯಾಚಿಸು/ಕೇಳಿಕೊಳ್ಳು; ಎರೆದಪೆನ್=ಬೇಡಿಕೊಳ್ಳುತ್ತೇನೆ;

ಆನ್ ಅದರ್ಕೆ ಎರೆದಪೆನ್=ಅಂತಹ ಜಿನೇಂದ್ರವಾಣಿಯು ಮಾನವ ಸಮುದಾಯದ ಬದುಕಿನ ನಡೆನುಡಿಯಲ್ಲಿ ಆಚರಣೆಗೆ ಬರಲೆಂದು ನಾನು ಬೇಡಿಕೊಳ್ಳುತ್ತೇನೆ; ಎಮಗೆ=ನಮಗೆ; ಇಲ್ಲಿಯೆ=ಈ ಜಗತ್ತಿನಲ್ಲಿಯೇ/ಈ ನಮ್ಮ ಬದುಕಿನಲ್ಲಿಯೇ;

ವಾಕ್+ವಿಳಾಸಮ್+ಅಮ್; ವಾಕ್=ನುಡಿ/ಮಾತು; ವಿಳಾಸ/ವಿಲಾಸ=ಉಲ್ಲಾಸ/ಉತ್ಸಾಹ/ಮಯ್ ಮನಸ್ಸನ್ನು ಕ್ರಿಯಾಶೀಲಗೊಳಿಸುವಿಕೆ;

ವಾಗ್ವಿವಿಳಾಸ=ಮಾನವ ಸಮುದಾಯದ ಪ್ರತಿಬೆ, ಪಾಂಡಿತ್ಯ ಮತ್ತು ಪರಿಶ್ರಮದಿಂದ ಮಾತಿನ ದನಿರೂಪದಲ್ಲಿ ಮತ್ತು ಅಕ್ಕರದ ಲಿಪಿರೂಪದಲ್ಲಿ ಹೊರಹೊಮ್ಮುವ ನುಡಿಗಳು ವಿಜ್ನಾನ-ಕಲೆ-ಸಂಗೀತ-ಸಾಹಿತ್ಯ-ಇತಿಹಾಸ-ದರ‍್ಮ-ಸಮಾಜ-ಸಂಸ್ಕ್ರುತಿ-ತತ್ವಜ್ನಾನದ ಬಗ್ಗೆ ಅರಿವನ್ನು ಮೂಡಿಸಿ, ಮಾನವ ಸಮುದಾಯದ ಬದುಕಿಗೆ ಆನಂದ, ಚೇತನ ಮತ್ತು ಉತ್ಸಾಹವನ್ನು ನೀಡಿ ಕ್ರಿಯಾಶೀಲರನ್ನಾಗಿಸಿ ಮಯ್ ಮನಕ್ಕೆ ಮುದವನ್ನು ನೀಡುತ್ತವೆ;

ಅಮ್=ಅನ್ನು; ಮಾಳ್ಕೆ=ಮಾಡಲಿ;

ಆ ಸರಸ್ವತಿಯೆ ಎಮಗೆ ಇಲ್ಲಿಯೆ ವಾಗ್ವಿಳಾಸಮಮ್ ಮಾಳ್ಕೆ=ಆ ಸರಸ್ವತಿಯೆ ನಮಗೆ ನುಡಿಯ ಮೂಲಕ ಜೀವನಕ್ಕೆ ಅಗತ್ಯವಾದ ತಿಳುವಳಿಕೆ ಮತ್ತು ಕ್ರಿಯಾಶೀಲತೆಯಿಂದ ಕೂಡಿದ ಉತ್ಸಾಹದ ಬದುಕನ್ನು ನಡೆಸುವಂತಹ ಕಸುವನ್ನು ನೀಡಲಿ;

ಪ್ರಾಚೀನ ಕಾಲದ ಮಾನವ ಸಮುದಾಯವು ತಮ್ಮ ಕಣ್ಣಮುಂದಿನ ನಿಸರ‍್ಗದಲ್ಲಿ ಕಂಡುಬರುತ್ತಿರುವ ಬೆಳಗುವ ಸೂರ‍್ಯ ಮತ್ತು ಚಂದ್ರ, ಬೀಸುವ ಗಾಳಿ, ಸುರಿಯುವ ಮಳೆ, ಉರಿಯುವ ಬೆಂಕಿ ಮುಂತಾದುವೆಲ್ಲಕ್ಕೂ ಒಬ್ಬೊಬ್ಬ ದೇವತೆಯು ಕಾರಣರೆಂದು ಬಾವಿಸಿಕೊಂಡು, ಆ ದೇವತೆಗಳಿಗೆ ಒಂದೊಂದು ಹೆಸರನ್ನು ನೀಡಿ ಪೂಜಿಸುತ್ತಿದ್ದರು. ಆದ್ದರಿಂದಲೇ ಸೂರ‍್ಯದೇವ-ಚಂದ್ರದೇವ-ವಾಯುದೇವ-ವರುಣದೇವ-ಅಗ್ನಿದೇವ ಎಂಬ ಕಲ್ಪಿತ ಗಂಡು ದೇವತೆಗಳು ಬಹುಬಗೆಯ ಆಕಾರವುಳ್ಳ ಮೂರ‍್ತರೂಪದಲ್ಲಿ ಚಿತ್ರಣಗೊಂಡರು. ಅಂತೆಯೇ ಸಂಪತ್ತಿನ ದೇವತೆಯಾಗಿ ಲಕ್ಶ್ಮಿ, ಹರಿಯುವ ನೀರಿನ ನದಿತೊರೆಗಳ ದೇವತೆಯಾಗಿ ಗಂಗೆ ಮತ್ತು ವಿದ್ಯೆಯ ದೇವತೆಯಾಗಿ ಸರಸ್ವತಿ-ಜನಮನದಲ್ಲಿ ಹೆಣ್ಣುರೂಪದಲ್ಲಿ ಮಯ್ ತಳೆದರು.

ವೈದಿಕ ಮತದಲ್ಲಿ ಸರಸ್ವತಿ ದೇವತೆಯ ಬಗ್ಗೆ ಜನಪ್ರಿಯವಾದ ಕಲ್ಪನೆಯ ಚಿತ್ರವೊಂದು ಕಂಡುಬರುತ್ತದೆ. ನದಿಯ ದಂಡೆಯಲ್ಲಿರುವ ಬಂಡೆಯೊಂದರ ಮೇಲೆ ಕುಳಿತು, ತೊಡೆಯ ಮೇಲೆ ವೀಣೆಯನ್ನಿಟ್ಟುಕೊಂಡು, ಕಯ್ ಬೆರಳುಗಳಿಂದ ವೀಣೆಯ ತಂತಿಗಳನ್ನು ಮೀಟುತ್ತಿರುವ ಹೆಣ್ಣಿನ ರೂಪದಲ್ಲಿ ಸರಸ್ವತಿಯು ಚಿತ್ರಣಗೊಂಡಿದ್ದಾಳೆ.

ಜಿನಮತದಲ್ಲಿ ನಿಸರ‍್ಗದ ವಸ್ತು ಮತ್ತು ಕ್ರಿಯೆಗಳಿಗೆ ದೇವತೆಗಳು ಕಾರಣರೆಂದು ಬಾವಿಸಿಲ್ಲ. ಆದ್ದರಿಂದ ಜಿನಮತದವನಾದ ಪಂಪನು ಜಗತ್ತಿನ ಜನಸಮುದಾಯದ ಒಳ್ಳೆಯ ಬದುಕಿಗೆ ಅಗತ್ಯವಾದ ಅರಿವು ಮತ್ತು ಆಚರಣೆಗೆ ಪ್ರೇರಣೆಯನ್ನು ನೀಡುವ ಜಿನೇಂದ್ರವಾಣಿಯನ್ನೇ ಸರಸ್ವತಿಯೆಂದು ಹೆಸರಿಸಿದ್ದಾನೆ;

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *