ಪಂಪ ಕವಿಯ ‘ಆದಿಪುರಾಣ’ ಕಾವ್ಯದಲ್ಲಿನ ಪದ್ಯಗಳ ಓದು – ಕಂತು-3
– ಸಿ.ಪಿ.ನಾಗರಾಜ.
(ಕ್ರಿ.ಶ. 942 ರಲ್ಲಿ ರಚನೆಗೊಂಡ ಪಂಪ ಕವಿಯ ‘ಆದಿ ಪುರಾಣ’ ಕಾವ್ಯದ ಮೊದಲನೆಯ ಆಶ್ವಾಸದ 27 ನೆಯ ಪದ್ಯ.)
*** ಪದ್ಯ ***
ಇದು ನಿಚ್ಚಂ ಪೊಸತರ್ಣವಂಬೊಲತಿಗಂಭೀರಂ ಕವಿತ್ವಂ ಜಗ
ಕ್ಕದರಿಂದಂ ಕವಿತಾಗುಣಾರ್ಣವನಿಳಾಲೋಕೈಕ ವಿಖ್ಯಾತನ
ಭ್ಯುದಯಪ್ರಾಪ್ತಿನಿಮಿತ್ತಮುತ್ತಮಯಶಂ ಸಂಸಾರದೊಳ್ಸಾರಮ
ಪ್ಪುದರಿಂ ಧರ್ಮಮದಂ ನಿಮಿರ್ಚುವುದರಿಂ ಸಂಸಾರಸಾರೋದಯಂ.
ಅನ್ವಯಾನುಸಾರ ಓದು
ಇದು ಕವಿತ್ವಮ್ ಜಗಕ್ಕೆ ನಿಚ್ಚಮ್ ಪೊಸತು;
ಅರ್ಣವಮ್ ಪೋಲ್ ಅತಿ ಗಂಭೀರಮ್;
ಅದರಿಂದಮ್ ಕವಿತಾಗುಣಾರ್ಣವನ್ ಇಳಾಲೋಕೈಕ ವಿಖ್ಯಾತನ್;
ಅಭ್ಯುದಯಪ್ರಾಪ್ತಿ ನಿಮಿತ್ತಮ್ ಉತ್ತಮಯಶನ್;
ಸಂಸಾರದೊಳ್ ಧರ್ಮಮ್ ಸಾರಮಪ್ಪುದರಿಮ್;
ಅದಮ್ ನಿಮಿರ್ಚುವುದರಿಮ್;
ತಾನ್ ಸಂಸಾರಸಾರೋದಯನ್.
ಪದ ವಿಂಗಡಣೆ ಮತ್ತು ತಿರುಳು
ಈ ಪದ್ಯದಲ್ಲಿ ಪಂಪನು ಜಿನ ದರ್‍ಮದ ತತ್ವಗಳನ್ನು ಒಳಗೊಂಡ ಆದಿಪುರಾಣ ಕಾವ್ಯದ ಮಹತ್ತ್ವವನ್ನು ಮತ್ತು ತನ್ನ ಕಾವ್ಯರಚನೆಯ ಕುಶಲತೆಯನ್ನು ಹೇಳಿದ್ದಾನೆ.
ಕವಿತ್ವ=ಕಾವ್ಯ; ಇದು ಕವಿತ್ವಂ=ಆದಿಪುರಾಣವೆಂಬ ಈ ಕಾವ್ಯ; ಜಗ=ಲೋಕ/ಪ್ರಪಂಚ; ನಿಚ್ಚಂ=ಪ್ರತಿನಿತ್ಯವೂ ; ಪೊಸತು=ಹೊಸತು/ನೂತನವಾದದು/ನವೀನವಾದುದು;
ಇದುಕವಿತ್ವಂ ಜಗಕ್ಕೆ ನಿಚ್ಚಮ್ ಪೊಸತು=ನಾನು ಈಗ ರಚಿಸುತ್ತಿರುವ ಆದಿಪುರಾಣವೆಂಬ ಈ ಕಾವ್ಯವು ಜಗತ್ತಿಗೆ ಪ್ರತಿನಿತ್ಯವೂ ಹೊಚ್ಚಹೊಸದಾಗಿರುತ್ತದೆ. ಅಂದರೆ ಕಾವ್ಯದಲ್ಲಿ ಕಲಾತ್ಮಕವಾಗಿ ಚಿತ್ರಣಗೊಳ್ಳುವ ಸನ್ನಿವೇಶಗಳೆಲ್ಲವೂ ಓದುಗರಿಗೆ ಮತ್ತು ಕೇಳುಗರಿಗೆ ನಿತ್ಯನೂತನವಾದ ಸಂಗತಿಗಳನ್ನು ನಿರಂತರವಾಗಿ ತಿಳಿಸುತ್ತಿರುತ್ತವೆ;
ಅರ್ಣವ=ಸಮುದ್ರ/ಕಡಲು; ಪೋಲ್=ಎಣೆಯಾಗು/ಸಾಟಿಯಾಗು; ಅತಿ=ಹೆಚ್ಚು/ಅತಿಶಯ; ಗಂಭೀರ=ಆಳವಾದ/ಗಹನವಾದ;
ಅರ್ಣವಮ್ ಪೋಲ್ ಅತಿ ಗಂಭೀರಮ್=ಅನಂತವಾದ ಮತ್ತು ಆಳವಾದ ಜಲರಾಶಿಯಿಂದ ತುಂಬಿರುವ ಸಮುದ್ರಕ್ಕೆ ಸರಿಸಾಟಿಯಾಗುವಂತೆ ಈ ಆದಿಪುರಾಣದಲ್ಲಿ ಜಿನ ದರ್‍ಮದ ಸಂಗತಿಗಳು ದೊಡ್ಡ ಪ್ರಮಾಣದಲ್ಲಿ ನೆಲೆಗೊಂಡಿವೆ;
ಕವಿತಾ+ಗುಣ+ಅರ್ಣವನ್; ಕವಿತಾ=ಕಾವ್ಯ ರಚನೆ; ಗುಣ=ಸತ್ತ್ವ / ಕಸುವು; ಕವಿತಾಗುಣ=ಕಾವ್ಯರಚಿಸಲು ಅಗತ್ಯವಾದ ಪ್ರತಿಬೆ, ಪಾಂಡಿತ್ಯ ಮತ್ತು ಕಲಾ ಕುಶಲತೆ; ಅರ್ಣವನ್=ಇದೊಂದು ರೂಪಕದ ನುಡಿಗಟ್ಟು. ಸಾಗರದಂತಿರುವವನು. ಅಂದರೆ ದೊಡ್ಡ ವ್ಯಕ್ತಿತ್ವವುಳ್ಳವನು;
ಕವಿತಾಗುಣಾರ್ಣವನ್=ಪಂಪನಿಗೆ ಇದ್ದ ಒಂದು ಬಿರುದು. ಸಮುದ್ರದ ಅನಂತವಾದ ವಿಸ್ತಾರ ಮತ್ತು ಆಳದಂತೆ ಕಾವ್ಯರಚನೆಯಲ್ಲಿ ಅಪಾರವಾದ ಪ್ರತಿಬೆ, ಪಾಂಡಿತ್ಯ ಮತ್ತು ಕಲಾ ಕುಶಲತೆಯನ್ನು ಹೊಂದಿರುವ ಕವಿಯಾದ ಪಂಪನಿಗೆ ‘ಕವಿತಾಗುಣಾರ್ಣವ’ ಎಂಬ ಬಿರುದು ದೊರಕಿತ್ತು;
ಇಳಾ=ಬೂಮಿ; ಲೋಕ+ಏಕ; ಲೋಕೈಕ=ಲೋಕದಲ್ಲೇ ಇವನಂತಹ ವ್ಯಕ್ತಿ ಮತ್ತೊಬ್ಬನಿಲ್ಲ; ವಿಖ್ಯಾತ=ಹೆಸರುವಾಸಿಯಾದ/ಪ್ರಸಿದ್ದನಾದ;
ಅದರಿಂದಮ್ ಕವಿತಾಗುಣಾರ್ಣವನ್ ಇಳಾಲೋಕೈಕ ವಿಖ್ಯಾತನ್=ಆದ್ದರಿಂದ ಕವಿತಾಗುಣಾರ್ಣವನಾದ ನಾನು ಜಗತ್ತಿನಲ್ಲಿಯೇ “ಇಂತಹ ಕವಿಯು ಮತ್ತೊಬ್ಬನಿಲ್ಲ” ಎನ್ನುವಂತೆ ಹೆಸರುವಾಸಿಯಾಗಿದ್ದೇನೆ;
ಅಭ್ಯುದಯ=ಏಳಿಗೆ/ಶ್ರೇಯಸ್ಸು; ಪ್ರಾಪ್ತಿ=ಪಡೆಯುವಿಕೆ/ಹೊಂದುವಿಕೆ; ನಿಮಿತ್ತ=ಕಾರಣ; ಯಶ=ಗೆಲುವು/ವಿಜಯ;
ಅಭ್ಯುದಯಪ್ರಾಪ್ತಿ ನಿಮಿತ್ತಮ್ ಉತ್ತಮಯಶನ್=ಕಾವ್ಯರಚನೆಯಲ್ಲಿ ಶ್ರೇಯಸ್ಸನ್ನು ಪಡೆದ ಕಾರಣದಿಂದಾಗಿ ಜೀವನದಲ್ಲಿಯೂ ಉತ್ತಮವಾದ ಯಶಸ್ಸನ್ನು ಪಡೆದಿದ್ದೇನೆ;
ಸಂಸಾರದ+ಒಳ್; ಸಂಸಾರ=ತಂದೆ ತಾಯಿ, ಮಡದಿ ಮಕ್ಕಳು ಮತ್ತು ನೆಂಟರಿಂದ ಕೂಡಿರುವ ಪರಿವಾರ/ಲೋಕದ ಜೀವನ; ಒಳ್=ಅಲ್ಲಿ; ಧರ್ಮ=ಒಳ್ಳೆಯ ನಡೆನುಡಿ; ಸಾರಮ್+ಅಪ್ಪುದರ್+ಇಮ್; ಸಾರ=ತಿರುಳು / ಸತ್ತ್ವ; ಅಪ್ಪುದರಿಮ್=ಆಗಿರುವುದರಿಂದ;
ಸಂಸಾರದೊಳ್ ಧರ್ಮಮ್ ಸಾರಮ್ ಅಪ್ಪುದರಿಮ್=ಅಹಿಂಸೆ, ಸತ್ಯ, ಕದಿಯದಿರುವುದು, ಸಂಪತ್ತನ್ನು ದೊಡ್ಡ ಪ್ರಮಾಣದಲ್ಲಿ ಕೂಡಿಡದಿರುವುದು ಮತ್ತು ಮಯ್ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸಂಸಾರದಲ್ಲಿ ಬಾಳುವುದೇ ಜಿನ ದರ್‍ಮದ ತಿರುಳಾಗಿರುವುದರಿಂದ;
ಅದಮ್=ಅದನ್ನು; ನಿಮಿರ್ಚು=ಹರಡು/ವಿಸ್ತರಿಸು;
ಅದಮ್ ನಿಮಿರ್ಚುವುದರಿಮ್=ಅಂತಹ ಜಿನ ದರ್‍ಮದ ನಡೆನುಡಿಗಳನ್ನು ಕಲಾತ್ಮಕವಾದ ಸನ್ನಿವೇಶಗಳ ಚಿತ್ರಣದಿಂದ ಆದಿಪುರಾಣದ ಮೂಲಕ ಜನಮನದಲ್ಲಿ ಹರಡುತ್ತಿರುವುದರಿಂದ;
ತಾನ್=ನಾನು; ಸಂಸಾರ+ಸಾರ+ಉದಯನ್; ಉದಯ=ಹುಟ್ಟು/ಮೂಡುವಿಕೆ; ಉದಯನ್=ಮೂಡಿಸುವವನು;
ತಾನ್ ಸಂಸಾರಸಾರೋದಯನ್= ಆದಿಪುರಾಣ ಕಾವ್ಯದಲ್ಲಿ ಕಲಾತ್ಮಕವಾದ ಸನ್ನಿವೇಶಗಳ ಮೂಲಕ ಲೋಕದಲ್ಲಿ ಮಾನವರು ಪರಸ್ಪರ ಪ್ರೀತಿ, ಕರುಣೆ, ತಾಳ್ಮೆ ಮತ್ತು ಜವಾಬ್ದಾರಿಯಿಂದ ಬಾಳುವುದಕ್ಕೆ ಅಗತ್ಯವಾದ ಅರಿವು ಮತ್ತು ಎಚ್ಚರವನ್ನು ಜನಮನದಲ್ಲಿ ಹರಡುತ್ತಿರುವುದರಿಂದ ನಾನು ಸಂಸಾರಸಾರೋದಯನಾಗಿದ್ದೇನೆ. ಪಂಪನಿಗೆ ‘ಸಂಸಾರಸಾರೋದಯ’ ಎಂಬ ಬಿರುದು ಇತ್ತು.
(ಚಿತ್ರ ಸೆಲೆ: kannadadeevige.blogspot.com)
ಇತ್ತೀಚಿನ ಅನಿಸಿಕೆಗಳು