ನಾ ನೋಡಿದ ಸಿನೆಮಾ: ಬಗೀರ
ಕನ್ನಡದಲ್ಲಿ ಬಂದ ಸೂಪರ್ ಹೀರೋ ಸಿನೆಮಾಗಳು ತುಂಬಾ ಕಡಿಮೆ. 1988 ರಲ್ಲಿ ಬಿಡುಗಡೆಯಾದ ಟೈಗರ್ ಪ್ರಬಾಕರ್ ಅಬಿನಯದ ಕಿರಾತಕ ಮತ್ತು 1989 ರಲ್ಲಿ ಬಿಡುಗಡೆಯಾದ ರೆಬೆಲ್ ಸ್ಟಾರ್ ಅಂಬರೀಶ್ ಅಬಿನಯದ ಜೈ ಕರ್‍ನಾಟಕ ಚಿತ್ರವನ್ನು ಬಿಟ್ಟರೆ ಕನ್ನಡದಲ್ಲಿ ಸುಮಾರು 30 ವರುಶಗಳಲ್ಲಿ ಸೂಪರ್ ಹೀರೋ ಸಿನೆಮಾಗಳೇ ಬಂದಿರಲಿಲ್ಲ. ಆದರೆ ಈಗ ಆ ಸ್ತಾನ ತುಂಬಲು ಶ್ರೀ ಮುರಳಿಯವರ ಬಗೀರ ಸಿನೆಮಾ ತೆರೆಗೆ ಬಂದಿದೆ.
ಉಗ್ರಂ ಸಿನೆಮಾದಿಂದ ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಬಿಸಿದ ಶ್ರೀ ಮುರಳಿಯವರು, ಈ ಬಾರಿ ಒಂದು ಸೂಪರ್ ಹೀರೋ ಸಿನೆಮಾ ಮೂಲಕ ಕನ್ನಡಿಗರ ಮುಂದೆ ಬಂದಿದ್ದಾರೆ. ಒಬ್ಬ ಪ್ರಾಮಾಣಿಕ ಪೊಲೀಸ್ ಅದಿಕಾರಿ ವ್ಯವಸ್ತೆಯ ಬಲೆಗೆ ಸಿಕ್ಕಿ ಹೇಗೆ ಕೈಕಟ್ಟಿ ಕೂರಬೇಕಾಗುತ್ತದೆ, ಮುಂದೆ ಆತ ಯಾವ ದಾರಿ ತುಳಿಯುತ್ತಾನೆ ಎಂಬುದೇ ಸಿನೆಮಾದ ಕತೆ.
ಸಿನೆಮಾಗಾಗಿ ಶ್ರೀ ಮುರಳಿ ಅವರು ಮೈ ಹುರಿಗೊಳಿಸಿ, ತಯಾರಾಗಿರುವುದು ಎದ್ದು ಕಾಣುತ್ತದೆ. ಪೋಲೀಸ್ ಪಾತ್ರದಲ್ಲಿ ಮಿಂಚುತ್ತಾರೆ ಶ್ರೀ ಮುರಳಿ, ಮುಂದೆ ಬಗೀರನಾಗಿ ನಾಯಕ ಏನು ಮಾಡುತ್ತಾನೆ ಎಂದು ತೆರೆಯಮೇಲೆ ನೋಡಬೇಕು. ಇವರಿಗೆ ಜೋಡಿಯಾಗಿದ್ದಾರೆ ರುಕ್ಮಿಣಿ ವಸಂತ್. ಇನ್ನುಳಿದಂತೆ ಅಚ್ಯುತ್ ರಾವ್, ರಂಗಾಯಣ ರಗು, ಪ್ರಕಾಶ್ ರಾಜ್, ರಾಮಚಂದ್ರ ರಾಜು (ಗರುಡ ರಾಮ್) ಹಾಗೂ ಇನ್ನಿತರರು ನಟಿಸಿದ್ದಾರೆ.
ಈ ಹಿಂದೆ ಲಕ್ಕಿ, ಕ್ವಾಟ್ಲೆ ಸತೀಶ ಸಿನೆಮಾ ನಿರ್‍ದೇಶಿಸಿದ್ದ ಸೂರಿ ಅವರು ಈ ಸಿನೆಮಾವನ್ನು ನಿರ್‍ದೇಶಿಸಿದ್ದು, ಪ್ರಶಾಂತ್ ನೀಲ್ ಅವರ ಕತೆ ಇದೆ. ಎ. ಜೆ. ಶೆಟ್ಟಿ ಅವರ ಸಿನೆಮಾಟೋಗ್ರಪಿ, ಅಜನೀಶ್ ಲೋಕನಾತ್ ಅವರ ಸಂಗೀತ ಹಾಗೂ ಪ್ರಣವ್ ಶ್ರೀ ಪ್ರಸಾದ್ ಅವರ ಎಡಿಟಿಂಗ್ ಇದ್ದು, ಹೊಂಬಾಳೆ ಪಿಲಂಸ್ ಅವರು ಈ ಸಿನೆಮಾವನ್ನು ನಿರ್‍ಮಿಸಿದ್ದಾರೆ. ಕಳೆದ ಅಕ್ಟೋಬರ್ 31 ರಂದು ಬಿಡುಗಡೆಯಾದ ಈ ಸಿನೆಮಾ ಎಲ್ಲೆಡೆ ಪ್ರದರ್‍ಶನ ಕಾಣುತ್ತಿದೆ. ಪ್ರತೀ ವರುಶ ದೀಪಾವಳಿಗೆ ಕನ್ನಡ ಸಿನೆಮಾಗಳಿಲ್ಲ ಎನ್ನುವ ಮಾತಿಗೆ ಉತ್ತರದಂತೆ ಈ ಸಿನೆಮಾ ದೀಪಾವಳಿಯಂದೇ ತೆರೆಗೆ ಬಂದಿದ್ದು, ಕುಟುಂಬ ಸಮೇತ ಕೂತು ಆನಂದಿಸಬಹುದಾದ ಸಿನೆಮಾವಾಗಿದೆ.
(ಚಿತ್ರಸೆಲೆ: mtwikiblog.com )
ಇತ್ತೀಚಿನ ಅನಿಸಿಕೆಗಳು