ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 7 ನೆಯ ಕಂತು – ವಿಶ್ವಾಮಿತ್ರ ಮುನಿಯ ಮಾಯಾ ವರಾಹದ ಬೇಟೆ
– ಸಿ.ಪಿ.ನಾಗರಾಜ.
*** ವಿಶ್ವಾಮಿತ್ರ ಮುನಿಯ ಮಾಯಾ ವರಾಹದ ಬೇಟೆ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ ವಿಶ್ವಾಮಿತ್ರಾಶ್ರಮ ಪ್ರವೇಶ ’ ಎಂಬ ನಾಲ್ಕನೆಯ ಅಧ್ಯಾಯದ 1 ರಿಂದ 10 ರ ವರೆಗಿನ ಹತ್ತು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು:
ಹರಿಶ್ಚಂದ್ರ: ಅಯೋಧ್ಯೆಯ ರಾಜ.
ಬೇಡ ಪಡೆಯವರು.
ವಿಶ್ವಾಮಿತ್ರ ಮುನಿಯು ನಿರ್ಮಿಸಿ ಕಳುಹಿಸಿರುವ ಒಂದು ವರಾಹ (ಹಂದಿ)
*** ವಿಶ್ವಾಮಿತ್ರ ಮುನಿಯ ಮಾಯಾ ವರಾಹದ ಬೇಟೆ ***
ಭೂಪಾಲ ಮಕರಧ್ವಜನ್ ಗುರುವಸಿಷ್ಠಂಗೆ ಎರಗಿ ನೇಮವಮ್ ಪಡೆದು, ಅಖಿಳ ಗುರು ವಿರೂಪಾಕ್ಷಲಿಂಗವನು ಬೀಳ್ಕೊಂಡು, ಭಾಸುರ ವರೂಥವನೇರಿ ತಡೆವೇಂಟೆಗೆ ನಡೆಯೆ,
ಪರಿಕರದ ಪರಿವಾರ ಅನುವಾಗಿ ವಿಪಿನದೊಳು ಅತ್ತಲ್ ಹರೆದು ನಡೆಯಲ್ಕೆ , ಇತ್ತ ಕೌಶಿಕ ಮುನೀಶ್ವರನ್ ಒಂದು ಮಾಯಾ ವರಾಹನಮ್ ಮಾಡಿ ಭೂರಮಣನೆಡೆಗೆ ಕಳುಹಿದನು.
ಬೇಡಪಡೆ: ಎಲೆಲೆಲೆಲೆಲೇ… ಹಂದಿ ಅನುವಾದುದು… ಉಬುಬುಬು…
(ಎಂದು ಉಲಿದು ನಾಯ್ಗಳ್ ಬೆರಸಿ ಮುಕ್ಕುರಿಕ್ಕಲು… ಕಾಡೊಳ್ ಅಂದು ರಕ್ಕಸ ಮಿಗಮ್ ಮೆಲ್ಲನೆ ಒಲೆದು ಉಬ್ಬಿ ಪುಟನೆಗೆದು ಗಜರಿ ಗರ್ಜಿಸಿ ಪುಳಿಂದರ ಮೇಲೆ ಬವರಿ ತಿರುಗಿ ಬಲವಂದು ಹೊಯ್ದ ಬೇಗಕ್ಕೆ… ನಾಳಲ ಹೊರೆಗಳಮ್ ಕೊಚ್ಚಿದಂತೆ ಬಿರುಮಂದಿ ಎಲ್ಲರ ಒಡಲ ಕಳವಳಿ ಗೆಯ್ದು ಬೀದಿವರಿದು ಒಕ್ಕಲಿಕ್ಕಿತ್ತು.
ಒರ್ವನ್ ಬಿಟ್ಟ ತಲೆ… ಗಿಡು ಹಿಡಿದು ಕಳೆದ ಉಡುಗೆ… ಕಾಡ ಮುಳು ನಟ್ಟು ಕುಂಟುವ ಪದಮ್… ಬೆನ್ನ ಬಿಗು ಹಳಿದು ಎಳಲ್ವ ಮೊಟ್ಟೆಗೂಳ್… ಎಡಹಿ ಕೆಡೆದು ಒಡೆದ ಮೊಳಕಾಲ್… ತೇಕುವ ಅಳ್ಳೆಗಳ್ ಬೆರಸು ಒರಲುತ ಕೆಟ್ಟೋಡುತಿರಲ್ … ಅವನ ಕಂಡು… ಇದಿರು ಅಡ್ಡಗಟ್ಟಿ ಕೇಳಲು…)
ಬೇಡ-1: ಹುಹುಹು… ಹುಲಿಯಲ್ಲ… ಹಂದಿ… ಅರೆಯಟ್ಟಿ ಬರುತಿರ್ದುದು.
ಬೇಡಪಡೆ: ಎಲ್ಲಿ… ತೋರು.
ಬೇಡ-1: ನೀವೇ ಅರಸಿಕೊಂಬುದು.
(ಎಂದ ಹೆದರೆದೆಯ ಬೇಡನನ್ ಬೋಳೈಸಿ, ನೃಪರೂಪ ಮದನನಲ್ಲಿಗೆ ತಂದು ನುಡಿಸಿ ಕೇಳಲು…)
ಬೇಡ-1: ಅರಸ, ಪೇಳ್ವ ಕುದಿಹವೇಕೆ… ಅದು ಇದು ಎನ್ನದೆ ಎಲ್ಲಾ ಕಿರಾತ ಸಂಕುಲದ ಗುರಿ ನೆರೆದುದು. ಇಂದು ಬೇಗದೊಳು ಹದುಳದಿಂದೆ ಮನ್ನೆಯ ಗಂಡನಾಗು.
ಹರಿಶ್ಚಂದ್ರ: ಏನ್ ಕಾರಣಮ್ ಪೇಳ್.
ಬೇಡ-1: ಪೇಳ್ವುದಕೆ ತೆಱಹಿಲ್ಲ ಹೋಗು.
(ಎಂದಡೆ… ಅವನೀಶನ್ ಅವನನ್ ಜರೆದು ಬೆಸಗೊಂಡನು.)
ಬೇಡ-1: ಅರಸ, ಚಿತ್ತೈಸು… ಕಡುಗಲಿ ಹಿರಣ್ಯಾಕ್ಷನೆಂಬ ರಕ್ಕಸನ ಬೆನ್ನ ಅಡಗನ್ ಉಗಿದ ಅಂದಿನ ವರಾಹನೋ… ಪುರಹರನ್ ಪೊಡೆಯೆ ತೋಳ್ ಪರಿದ ಭೀಕರ ಗಜಾಸುರನೊ…
ಜಗದ ಅಳಲನ್ ಆರಿಸುವೆನೆಂದು ಕಡುಕೈದು ದುರ್ಗಿ ನಿರ್ಘಾತನಮ್ ಗೆಯ್ಯೆ ಕೋಡು ಉಡಿದ ಮಹಿಷಾಸುರನೊ ಎಂದೆಂಬ ಸಂದೇಹಕೆ ಎಡೆಯಾದ ಸೊಕ್ಕಿದ
ಎಕ್ಕಲನನ್ ಒಂದನ್ ಕಂಡೆನ್.
ಹರಿಶ್ಚಂದ್ರ: ಅಬ್ಬರಿಸಿ ನುಡಿವೆ, ಕಾಡೊಳ್ ಕೊಬ್ಬಿ ಬೆಳೆದ ವರಾಹನ್ ಇರಲಾಗದೇ… ಅದರಿಮ್ ಬೇಡವಡೆಗೆ ಬಪ್ಪ ಉಬ್ಬಸವದೇನೊ… ಎಲವೋ, ನೀನು ಓಡಿಹೋಹುದಕೆ ಕಾರಣವಾವುದು.
ಬೇಡ-1: ನಾನೇಕೆ… ಉಬ್ಬಿ ಮುಂಗುಡಿವರಿದು ಕಡುಕೈದ ಶಬರರೊಳಗೆ ಒಬ್ಬರುಳಿಯದ ತೆರದಿ ಕೊಂದಿಕ್ಕಿ… ನಾಯ್ಗಳಮ್ ಗಬ್ಬವಿಕ್ಕಿಸಿದ ರಕ್ಕಸ ಹಂದಿ ತಾನೆ ಹೇಳಿತ್ತು.
ಹರಿಶ್ಚಂದ್ರ: ಪಡೆ ಎಯ್ದೆ ಮಡಿಯಿತ್ತೆ?
ಬೇಡ-1: ಮಡಿಯಿತ್ತು.
ಹರಿಶ್ಚಂದ್ರ: ನಾಯ್ ಕೂಡೆ ಕೆಡೆದವೇ?
ಬೇಡ-1: ಕೆಡೆದವು.
ಹರಿಶ್ಚಂದ್ರ: ಹಂದಿ ಇರ್ದಪುದೆ?
ಬೇಡ-1: ಅದೆ.
ಹರಿಶ್ಚಂದ್ರ: ಎಡೆ ಎನಿತು.
ಬೇಡ: ಸಾರೆ.
ಹರಿಶ್ಚಂದ್ರ: ತೋರಿಸಿದಪಾ?
ಬೇಡ-1: ತೋರಿದಪೆನ್.
ಹರಿಶ್ಚಂದ್ರ: ಏಳ್ವೆವೇ?
ಬೇಡ-1: ನಡೆಯಿಮ್.
(ಎನಲು ಕಡುಮುಳಿದು ರಥವನ್ ಉರವಣಿಸಿ ನೂಂಕುವ ಭೂಮಿಯೊಡೆಯಂಗೆ ನಾನಾ ಬೇಡವಡೆ ಒಡೆಯರ್ ಎಯ್ದೆ ಭಾಷೆಯಮ್ ಕೊಟ್ಟು, ರೊಪ್ಪಮಮ್ ಮಲಗಿ ದಾಡೆಗಡಿವ ಎಕ್ಕಲನನು ಕಂಡು, ಮಸೆದ ದಾಡೆಯ ಕುಡಿಗಳಿಂದ ಕಿಡಿ ಸುರಿಯೆ… ಘೂರ್ಮಿಸುವ ಮೂಗಿನಿಂದ ಕರ್ಬೊಗೆ ನೆಗೆಯೆ… ಮುನಿದು ದಿಟ್ಟಿಸುವ ಕೆಂಗಣ್ಣ ಕಡೆಯಿಂದ ದಳ್ಳುರಿ ಸೂಸೆ… ಬಲಿದ ಕೊರಳ್… ಒಲೆದ ಮುಸುಡು… ಕುಸಿದ ತಲೆ… ನೆಗೆದ ಬೆನ್… ನಟ್ಟ ರೋಮಾಳಿ… ಮಿಳ್ಳಿಸುವ ಬಾಲಮ್… ರೌದ್ರ ಕೋಪಮಮ್ ಬೀರಿ ಗರ್ಜಿಸಿ ಬೀದಿವರಿದು ಲುಬ್ಧಕರನು ತೊತ್ತಳದುಳಿದು ಕೊಂದು ಕೂಗಿಡಿಸಿತ್ತು. ಇದ್ದ ಬೇಟರನ್ ಎಯ್ದೆ ಕೆಡಹಿದಡೆ, ರಥದ ಮೇಲಿದ್ದು, ಕೋಪಾಟೋಪದಿಂದ ಕರತಳವ ಮಾರುದ್ದಿ, ಕೋದಂಡಮಮ್ಸೆ ಳೆದು ಶರಮೂಡಿಗೆಯ ಮಡಲಿರಿದು, ಕೈಹೊಡೆಯನು ತಿದ್ದಿ, ನಾರಿಯ ನೀವಿ ಮಿಡಿದು, ಬಾಗಿದ ಕೊಪ್ಪಿನ ಇದ್ದೆಸೆಯನ್ ಆರಯ್ದು…)
ಹರಿಶ್ಚಂದ್ರ: ಮೃತ್ಯುದೇವತೆಗೆ ನೆರೆ ಬಿದ್ದನ್ ಇಕ್ಕುವೆನ್.
(ಎಂದು ಭೂವಲ್ಲಭನ್ ನುಡಿಯೆ, ದಿಗುಪಾಲರ್ ಅಳವಳಿದರು. ಗರಳ ಕೊರಳವನ್ ಅರಳ ಸರಳಂಗೆ ಮುನಿವಂತೆ… ಇರುಳ ತಿರುಳಿನ ಹೊರಳಿಗೆ ಆ ತರಣಿ ಕೆರಳ್ವಂತೆ… ಸರಳ ತೆರಳಿಕೆಗೆ ಕರುಳ ಸುರುಳಿಯೊಳು ಹೊರಳುತ್ತ ಬೀಳುತ್ತಲು ಮರಳಿತು … ಸರಳ್ ಉರ್ಚೆ… ಹುರುಳ್ ಅಳಿದುದು… ಉರವೊಡೆದು … ನರಳುತ್ತ ನರಳುತ್ತ ತೊರಳೆ ಅಡಸಲು ಮೂಗನ್ ಅರಳಿಸಿ ಎಚ್ಚ ಅಂಬ ಹೊತ್ತು… ಉರುಳ್ವ ಕಂಬನಿಯಿಂದ ತರಳ ಚಿತ್ತದ ಹಂದಿ ಮರಳಿ ಕಾನನಕೆ ಎಯ್ದಿತು.)
ತಿರುಳು: ವಿಶ್ವಾಮಿತ್ರ ಮುನಿಯ ಮಾಯಾ ವರಾಹದ ಬೇಟೆ
ಮಕರ=ಮೊಸಳೆ; ಮಕರಧ್ವಜನ್=ಹರಿಶ್ಚಂದ್ರನ ರಾಜ ಲಾಂಚನದ ಬಾವುಟದಲ್ಲಿ ಮೊಸಳೆಯ ಚಿತ್ರವಿತ್ತು;
ಭೂಪಾಲ ಮಕರಧ್ವಜನ್ ಗುರುವಸಿಷ್ಠಂಗೆ ಎರಗಿ ನೇಮವಮ್ ಪಡೆದು=ರಾಜ ಹರಿಶ್ಚಂದ್ರನು ಗುರು ವಸಿಷ್ಟನಿಗೆ ನಮಿಸಿ, ಅವರ ಆಶ್ರಮದಿಂದ ತೆರಳಲು ಅನುಮತಿಯನ್ನು ಪಡೆದುಕೊಂಡು;
ಅಖಿಳ ಗುರು ವಿರೂಪಾಕ್ಷಲಿಂಗವನು ಬೀಳ್ಕೊಂಡು=ಜಗತ್ತಿನ ಗುರುವಾದ ವಿರೂಪಾಕ್ಶಲಿಂಗವಿದ್ದ ಪಂಪಾಕ್ಶೇತ್ರದಿಂದ ಹೊರಟು;
ಭಾಸುರ ವರೂಥವನೇರಿ ತಡೆವೇಂಟೆಗೆ ನಡೆಯೆ=ಅಂದವಾಗಿ ಸಿದ್ದಗೊಂಡಿದ್ದ ತೇರನ್ನೇರಿ, ಜನರಿಗೆ ಹಾನಿಯನ್ನುಂಟುಮಾಡುತ್ತಿದ್ದ ಕಾಡುಪ್ರಾಣಿಗಳನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಬೇಟೆಯಾಡಲೆಂದು ಕಾಡಿನತ್ತ ನಡೆಯಲು;
ಪರಿಕರದ ಪರಿವಾರ ಅನುವಾಗಿ ವಿಪಿನದೊಳು ಅತ್ತಲ್ ಹರೆದು ನಡೆಯಲ್ಕೆ=ರಾಜನ ಸುತ್ತಮುತ್ತ ನೆರೆದಿದ್ದ ಬೇಡ ಪಡೆಯವರು ಸಿದ್ದರಾಗಿ ರಾಜನ ಜತೆಜತೆಯಲ್ಲಿಯೇ ಕಾಡಿನತ್ತ ಸಾಗುತ್ತಿರಲು; ವರಾಹ=ಹಂದಿ;
ಮಾಯಾ ವರಾಹ=ವಿಶ್ವಾಮಿತ್ರನು ಹರಿಶ್ಚಂದ್ರನಿಗೆ ಕಾಟವನ್ನು ಕೊಟ್ಟು, ಅವನನ್ನು ಸತ್ಯದ ನಡೆನುಡಿಯಿಂದ ತಪ್ಪಿ ನಡೆಯುವಂತೆ ಮಾಡಬೇಕೆಂಬ ಕೆಟ್ಟ ಉದ್ದೇಶದಿಂದ ರೂಪುಗೊಂಡಿರುವ ಹಂದಿ;
ಇತ್ತ ಕೌಶಿಕ ಮುನೀಶ್ವರನ್ ಒಂದು ಮಾಯಾ ವರಾಹನಮ್ ಮಾಡಿ ಭೂರಮಣನೆಡೆಗೆ ಕಳುಹಿದನು=ಈ ಕಡೆ ವಿಶ್ವಾಮಿತ್ರ ಮುನಿಯು ತನ್ನ ಮಂತ್ರಬಲದಿಂದ ಒಂದು ಹಂದಿಯನ್ನು ರೂಪಿಸಿ ರಾಜನು ಬೇಟೆಯಾಡುತ್ತ ಬರುತ್ತಿರುವ ಕಾಡಿನತ್ತ ಕಳುಹಿಸಿದನು;
ಎಲೆಲೆಲೆಲೆಲೇ… ಹಂದಿ ಅನುವಾದುದು… ಉಬುಬುಬು… ಎಂದು ಉಲಿದು=ಎಲೆಲೆಲೆಲೆಲೇ… .ಹಂದಿ ಮೇಲೆ ಬಿದ್ದು ತಿವಿಯಲು ಬರಲಿದೆ… ಅದನ್ನು ಕೊಲ್ಲಲು ಸಿದ್ದರಾಗಿ ಎಂದು ಬೇಡ ಪಡೆಯವರು ಅರಚುತ್ತಾ;
ನಾಯ್ಗಳ್ ಬೆರಸಿ ಮುಕ್ಕುರಿಕ್ಕಲು=ಬೇಡರು ಬೇಟೆ ನಾಯಿಗಳೊಡನೆ ಹಂದಿಯನ್ನು ಸುತ್ತುವರಿಯಲು;
ಕಾಡೊಳ್ ಅಂದು ರಕ್ಕಸ ಮಿಗಮ್=ಕಾಡಿನಲ್ಲಿ ಆಗ ದೊಡ್ಡ ಗಾತ್ರದ ಮತ್ತು ಶಕ್ತಿಯುಳ್ಳ ಆ ಮಾಯಾ ಹಂದಿಯು;
ಮೆಲ್ಲನೆ ಒಲೆದು=ಮೆಲ್ಲಗೆ ತೂಗಾಡುತ್ತ; ಅಂದರೆ ಮಯ್ಯನ್ನು ಅತ್ತಿತ್ತ ಓಲಾಡಿಸುತ್ತ;
ಉಬ್ಬಿ ಪುಟನೆಗೆದು=ಮೇಲೆದ್ದು ಜಿಗಿದು;
ಗಜರಿ ಗರ್ಜಿಸಿ=ಬೆದರಿಸುವಂತೆ ದೊಡ್ಡ ದನಿಯಲ್ಲಿ ಗರ್ಜಿಸುತ್ತ;
ಪುಳಿಂದರ ಮೇಲೆ ಬವರಿ ತಿರುಗಿ ಬಲವಂದು ಹೊಯ್ದ ಬೇಗಕ್ಕೆ=ಬೇಡರ ಮೇಲೆ ನುಗ್ಗಿಬಂದು, ಒಮ್ಮೆ ಅವರ ಸುತ್ತ ಬಳಸಿ ಬಂದು ತಿವಿದ ರಬಸಕ್ಕೆ;
ನಾಳಲ=ತಾವರೆ ಹೂವಿನ ಗಿಡದ ಟೊಳ್ಳಾಗಿರುವ ಕಾಂಡದ ದಂಟು;
ನಾಳಲ ಹೊರೆಗಳಮ್ ಕೊಚ್ಚಿದಂತೆ=ಟೊಳ್ಳಾದ ದಂಟುಗಳ ಕಂತೆಯನ್ನೇ ಕತ್ತರಿಸಿ ತುಂಡುತುಂಡು ಮಾಡುವಂತೆ;
ಕಳವಳಿ=ರಣಬಲಿ; ಕಳವಳಿ ಗೆಯ್=ಯುದ್ಧ ನಡೆಯಲಿರುವ ಬೂಮಿಗೆ ಪ್ರಾಣಿಗಳನ್ನು ಬಲಿಕೊಡುವ ಆಚರಣೆ;
ಬಿರುಮಂದಿ ಎಲ್ಲರ ಒಡಲ ಕಳವಳಿ ಗೆಯ್ದು=ಗಟ್ಟಿಮುಟ್ಟಾಗಿದ್ದ ದೇಹವನ್ನುಳ್ಳ ಬೇಡ ಪಡೆಯವರೆಲ್ಲರನ್ನೂ ರಣಬಲಿಕೊಟ್ಟಂತೆ ಕೊಚ್ಚಿಹಾಕಿ;
ಬೀದಿವರಿದು ಒಕ್ಕಲಿಕ್ಕಿತ್ತು=ತನಗೆ ಇಚ್ಚೆಬಂದ ಕಡೆಯಲ್ಲೆಲ್ಲಾ ಅಡ್ಡಾಡಿ ಬೇಡಪಡೆಯನ್ನು ಒಕ್ಕಲಿಕ್ಕಿತು. ಅಂದರೆ ತೆನೆಯನ್ನು ಬಡಿದು ಕಾಳುಗಳನ್ನು ಬೇರ್ಪಡಿಸುವಂತೆ ಬೇಡಪಡೆಯನ್ನು ಸಾವುನೋವಿಗೆ ಗುರಿಮಾಡಿ ಚಲ್ಲಾಪಿಲ್ಲಿಯಾಗಿ ಚದುರುವಂತೆ ಮಾಡಿತು;
ಒರ್ವನ್=ಮಾಯಾ ಹಂದಿಯ ಹೊಡೆತಕ್ಕೆ ಸಿಲುಕಿ ಬದುಕಿ ಉಳಿದಿರುವ ಒಬ್ಬನು;
ಬಿಟ್ಟ ತಲೆ=ಕೆದರಿದ ತಲೆಗೂದಲು;
ಗಿಡು ಹಿಡಿದು ಕಳೆದ ಉಡುಗೆ=ಬಿದ್ದಂಬೀಳ ಓಡಿ ಬರುವಾಗ ಗಿಡಗಂಟೆಪೊದರಿನ ರೊಂಬೆ ಕೊಂಬೆ ಮುಳ್ಳುಗಳಿಗೆ ಸಿಕ್ಕಿ ಹರಿದಿರುವ ಬಟ್ಟೆ;
ಕಾಡ ಮುಳು ನಟ್ಟು ಕುಂಟುವ ಪದಮ್=ಕಾಡಿನ ಮರಗಿಡಪೊದೆಯ ಮುಳ್ಳುಗಳು ಕಾಲಿಗೆ ಚುಚ್ಚಿಕೊಂಡು ಕುಂಟುತ್ತಿರುವ ಪಾದ;
ಮೊಟ್ಟೆ+ಕೂಳ್; ಮೊಟ್ಟೆ=ಬುತ್ತಿ; ಕೂಳ್=ಅನ್ನ/ಆಹಾರ; ಮೊಟ್ಟೆಗೂಳ್=ಉಣಿಸುತಿನಸನ್ನು ಕಟ್ಟಿತಂದಿರುವ ಗಂಟು/ಬುತ್ತಿ;
ಬೆನ್ನ ಬಿಗು ಹಳಿದು ಎಳಲ್ವ ಮೊಟ್ಟೆಗೂಳ್=ಬೆನ್ನಿಗೆ ಬಿಗಿಯಾಗಿ ಕಟ್ಟಿಕೊಂಡಿದ್ದ ಕುಣಿಕೆಯು ಸಡಿಲಗೊಂಡು ನೇತಾಡುತ್ತಿರುವ ಬುತ್ತಿಯ ಗಂಟು;
ಎಡಹಿ ಕೆಡೆದು ಒಡೆದ ಮೊಳಕಾಲ್=ಓಡುತ್ತಿರುವಾಗ ಎಡವಿ ಬಿದ್ದು ಗಾಯಗೊಂಡಿರುವ ಮೊಳಕಾಲು;
ತೇಕುವ ಅಳ್ಳೆಗಳ್ ಬೆರಸು=ಏದುಸಿರು ಬಿಡುತ್ತಿರುವುದರಿಂದ ಅದುರುತ್ತಿರುವ ಪಕ್ಕೆಗಳಿಂದ ಕೂಡಿದವನಾಗಿ;
ಒರಲುತ ಕೆಟ್ಟೋಡುತಿರಲ್ ಅವನ ಕಂಡು=ಪ್ರಾಣಬೀತಿಯಿಂದ ಕಿರುಚುತ್ತ ಓಡುತ್ತಿರುವ ಆ ಬೇಡನನ್ನು ಕಂಡು;
ಇದಿರು ಅಡ್ಡಗಟ್ಟಿ ಕೇಳಲು= ಇದಿರು ಬಂದ ಅವನನ್ನು ತಡೆದು ನಿಲ್ಲಿಸಿ ಈ ಕಡೆಯಿಂದ ಹೋಗುತ್ತಿದ್ದ ಬೇಡಪಡೆಯವರು ಅವನನ್ನು ಕೇಳಲು;
ಹುಹುಹು… ಹುಲಿಯಲ್ಲ… ಹಂದಿ… ಅರೆಯಟ್ಟಿ ಬರುತಿರ್ದುದು=ಹೆದರಿಕೆಯಿಂದ ಕಂಪಿಸುತ್ತಿರುವ ಆ ಬೇಡನು “ಬರುತ್ತಿರುವುದು ಹುಲಿಯಲ್ಲ… ಹಂದಿಯೊಂದು ಬೇಡರ ಪಡೆಯನ್ನು ಬೆನ್ನಟ್ಟಿಬರುತ್ತಿರುವುದು.”;
ಎಲ್ಲಿ… ತೋರು=ಅದು ಎಲ್ಲಿದೆ… ನಮಗೆ ತೋರು;
ನೀವೇ ಅರಸಿಕೊಂಬುದು ಎಂದ ಹೆದರೆದೆಯ ಬೇಡನನ್ ಬೋಳೈಸಿ=ನೀವೇ ಹುಡುಕಿಕೊಳ್ಳುವುದು ಎಂದು ಹೇಳಿ ಹೆದರಿಕೆಯಿಂದ ಕಂಪಿಸುತ್ತಿದ್ದ ಬೇಡನನ್ನು ಸಂತಯಿಸಿ;
ನೃಪರೂಪ ಮದನನಲ್ಲಿಗೆ ತಂದು ನುಡಿಸಿ ಕೇಳಲು=ಕಾಮದೇವನಂತೆ ರೂಪವಂತನಾದ ರಾಜ ಹರಿಶ್ಚಂದ್ರನ ಬಳಿಗೆ ಅವನನ್ನು ಕರೆತಂದು, ರಾಜನ ಮುಂದೆ ಮತ್ತೆ ಆ ಹಂದಿಯ ಬಗ್ಗೆ ವಿಚಾರಿಸಲು;
ಅರಸ, ಪೇಳ್ವ ಕುದಿಹವೇಕೆ=ಅರಸ, ಆ ಸಂಕಟವನ್ನು ಏನೆಂದು ತಾನೆ ಹೇಳಲಿ;
ಅದು ಇದು ಎನ್ನದೆ ಎಲ್ಲಾ ಕಿರಾತ ಸಂಕುಲದ ಗುರಿ ನೆರೆದುದು=ಆ ಹಂದಿಯು ಬೇಡಪಡೆಯ ಯಾರನ್ನೂ ಲೆಕ್ಕಿಸದೆ, ಇಡೀ ಕಿರಾತ ಸಮೂಹವನ್ನೇ ಬಲಿತೆಗೆದುಕೊಳ್ಳುವ ಗುರಿಯನ್ನಿಟ್ಟುಕೊಂಡು ಬೆನ್ನಟ್ಟಿಬರುತ್ತಿದೆ;
ಇಂದು ಬೇಗದೊಳು ಹದುಳದಿಂದೆ ಮನ್ನೆಯ ಗಂಡನಾಗು=ಈ ಗಳಿಗೆಯಿಂದಲೇ ಹುರುಪುನಿಂದ ಕೂಡಿ ನಾಯಕನಾದ ನೀನು ವೀರನಾಗು;
ಏನ್ ಕಾರಣಮ್ ಪೇಳ್=ನಿನ್ನ ಹೆದರಿಕೆಗೆ ಕಾರಣವೇನೆಂಬುದನ್ನು ಹೇಳು;
ಪೇಳ್ವುದಕೆ ತೆರಹಿಲ್ಲ ಹೋಗು ಎಂದಡೆ= “ಅದನ್ನೆಲ್ಲಾ ಹೇಳುವುದಕ್ಕೆ ಇದು ಸಮಯವಲ್ಲ. ಮೊದಲು ಹೋಗಿ ಬೇಡರನ್ನು ಕಾಪಾಡು” ಎಂದು ಬೇಡನು ಹೇಳಿದಾಗ; ಅಂದರೆ ಮರುಗಳಿಗೆಯಲ್ಲೇ ಬೇಡ ಪಡೆಗೆ ಗಂಡಾಂತರವಿದೆ. ನಾನು ಹೇಳುವುದನ್ನು ನೀನು ಕೇಳುವುಶ್ಟರಲ್ಲಿ ಏನು ಬೇಕಾದರೂ ಆಗಬಹುದು;
ಅವನೀಶನ್ ಅವನನ್ ಜರೆದು ಬೆಸಗೊಂಡನು=ರಾಜ ಹರಿಶ್ಚಂದ್ರನು ಅವನನ್ನು ಗದರಿಸಿ, ಅದೇನೆಂಬುದನ್ನು ಹೇಳು ಎಂದು ಪ್ರಶ್ನಿಸಿದನು;
ಅರಸ, ಚಿತ್ತೈಸು=ರಾಜನೇ ಹೇಳುತ್ತೇನೆ ಕೇಳು;
ಕಡುಗಲಿ ಹಿರಣ್ಯಾಕ್ಷನೆಂಬ ರಕ್ಕಸನ ಬೆನ್ನ ಅಡಗನ್ ಉಗಿದ ಅಂದಿನ ವರಾಹನೋ=ಮಹಾವೀರ ಹಿರಣ್ಯಾಕ್ಶನೆಂಬ ರಕ್ಕಸನ ಬೆನ್ನಿನ ಮಾಂಸವನ್ನು ಹೊರಕ್ಕೆ ತೆಗೆದ ವಿಶ್ಣುವಿನ ಅವತಾರಿಯಾದ ಹಂದಿಯೋ;
ಪುರಹರನ್ ಪೊಡೆಯೆ ತೋಳ್ ಪರಿದ ಭೀಕರ ಗಜಾಸುರನೊ=ಶಿವನು ಹೊಡೆದಾಗ ಸೊಂಡಿಲು ತುಂಡಾದ ಬಯಂಕರ ಆಕಾರನಾದ ಗಜನೆಂಬ ರಕ್ಕಸನೋ;
ಜಗದ ಅಳಲನ್ ಆರಿಸುವೆನೆಂದು ಕಡುಕೈದು ದುರ್ಗಿ ನಿರ್ಘಾತನಮ್ ಗೆಯ್ಯೆ ಕೋಡು ಉಡಿದ ಮಹಿಷಾಸುರನೊ=ಜಗತ್ತಿನ ಸಂಕಟವನ್ನು ಪರಿಹರಿಸುವೆನೆಂದು ಶಕ್ತಿಯನ್ನು ಒಗ್ಗೂಡಿಸಿಕೊಂಡು ದುರ್ಗಿಯು ಕತ್ತಿಯಿಂದ ಜೋರಾಗಿ ಹೊಡೆಯಲು ಕೊಂಬು ತುಂಡಾದ ಮಹಿಷನೆಂಬ ರಕ್ಕಸನೋ;
ಎಂದೆಂಬ ಸಂದೇಹಕೆ ಎಡೆಯಾದ=ಎಂದೆನ್ನುವ ಸಂದೇಹ ಮೂಡುವಂತೆ; ಅಂದರೆ ಇದು ಯಾವುದೋ ಒಂದು ಕಾಡುಹಂದಿಯಲ್ಲ. ಅಸಾಮಾನ್ಯವಾದ ಮಹಿಮೆ ಮತ್ತು ಶಕ್ತಿಯನ್ನುಳ್ಳ ಹಂದಿಯಾಗಿರಬಹುದು ಎಂಬ ಅನುಮಾನವನ್ನು ಹುಟ್ಟಿಸುವಂತೆ;
ಎಕ್ಕಲ=ಹಂದಿ;
ಸೊಕ್ಕಿದ ಎಕ್ಕಲನನ್ ಒಂದನ್ ಕಂಡೆನ್=ಮದಿಸಿದ ಹಂದಿಯೊಂದನ್ನು ಕಂಡೆನು;
ಅಬ್ಬರಿಸಿ ನುಡಿವೆ=ಸಾಮಾನ್ಯವಾದ ಸಂಗತಿಯೊಂದನ್ನೇ ಅತಿಶಯಮಾಡಿ ಹೇಳುತ್ತಿರುವೆ;
ಕಾಡೊಳ್ ಕೊಬ್ಬಿ ಬೆಳೆದ ವರಾಹನ್ ಇರಲಾಗದೇ=ಕಾಡಿನಲ್ಲಿ ಕೊಬ್ಬಿ ಬೆಳೆದಿರುವ ಹಂದಿಗಳು ಇರುವುದು ಸಹಜವಲ್ಲವೇ;
ಅದರಿಮ್ ಬೇಡವಡೆಗೆ ಬಪ್ಪ ಉಬ್ಬಸವದೇನೊ=ಕೊಬ್ಬಿ ಬೆಳೆದಿರುವ ಹಂದಿಯೊಂದರಿಂದ ಬೇಡಪಡೆಗೆ ಬರುವ ಆಪತ್ತು ಅದಾವ ಬಗೆಯದು;
ಎಲವೋ, ನೀನು ಓಡಿಹೋಹುದಕೆ ಕಾರಣವಾವುದು=ಎಲವೋ… ಈ ರೀತಿ ನೀನು ಹೆದರಿಕೆಯಿಂದ ನಡುಗುತ್ತ ಓಡಿಹೋಗುತ್ತಿದ್ದುದಕ್ಕೆ ನಿಜವಾದ ಕಾರಣವೇನೆಂಬುದನ್ನು ತಿಳಿಸು;
ನಾನೇಕೆ=ನಾನೇಕೆ ಆ ಹಂದಿಯಿಂದ ಬೇಡ ಪಡೆಗೆ ಎಂತಹ ಆಪತ್ತು ಉಂಟಾಗಿದೆ ಎಂಬುದನ್ನು ಹೇಳಬೇಕು. ಹಂದಿಯ ಆಕ್ರಮಣವೇ ಅದನ್ನು ಹೇಳುತ್ತಿದೆ;
ಉಬ್ಬಿ ಮುಂಗುಡಿವರಿದು ಕಡುಕೈದ ಶಬರರೊಳಗೆ ಒಬ್ಬರುಳಿಯದ ತೆರದಿ ಕೊಂದಿಕ್ಕಿ=ಅತಿ ವೇಗದಿಂದ ಮುನ್ನುಗ್ಗಿ ಶಕ್ತಿಯುತರಾದ ಬೇಡರಲ್ಲಿ ಒಬ್ಬರನ್ನು ಉಳಿಯಗೊಡದಂತೆ ಕೊಂದು ಉರುಳಿಸಿ;
ನಾಯ್ಗಳಮ್ ಗಬ್ಬವಿಕ್ಕಿಸಿದ ರಕ್ಕಸ ಹಂದಿ ತಾನೆ ಹೇಳಿತ್ತು=ಬೇಟೆ ನಾಯಿಗಳ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದ ರಕ್ಕಸ ಹಂದಿಯ ಆಕ್ರಮಣವೇ ಅದು ಎಶ್ಟು ದೊಡ್ಡದು ಮತ್ತು ಎಂತಹ ಶಕ್ತಿಯನ್ನು ಪಡೆದಿದೆ ಎಂಬುದನ್ನು ಹೇಳುತ್ತಿದೆ;
ಪಡೆ ಎಯ್ದೆ ಮಡಿಯಿತ್ತೆ=ಅಲ್ಲಿದ್ದ ಬೇಡ ಪಡೆಯು ಇನ್ನಿಲ್ಲದಂತೆ ಸಾವನ್ನಪ್ಪಿತೆ;
ಮಡಿಯಿತ್ತು=ಸಾವನ್ನಪ್ಪಿತು;
ನಾಯ್ ಕೂಡೆ ಕೆಡೆದವೇ=ನಾಯಿಗಳು ಕೂಡ ಕೆಳಕ್ಕೆ ಉರುಳಿದವೆ; ಕೆಡೆದವು=ಉರುಳಿದವು;
ಹಂದಿ ಇರ್ದಪುದೆ=ನೀನು ಓಡಿಬಂದ ಕಾಡಿನ ಎಡೆಯಲ್ಲಿಯೇ ಆ ಹಂದಿ ಈಗ ಇರುವುದೇ;
ಅದೆ=ಅಲ್ಲಿಯೇ ಇದೆ;
ಎಡೆ ಎನಿತು=ಇಲ್ಲಿಂದ ಎಶ್ಟು ದೂರ;
ಸಾರೆ=ಹತ್ತಿರದಲ್ಲಿಯೇ ಇದೆ;
ತೋರಿಸಿದಪಾ=ನನಗೆ ಅದು ಇರುವ ಎಡೆಯನ್ನು ತೋರಿಸುವೆಯಾ;
ತೋರಿದಪೆನ್=ತೋರಿಸುತ್ತೇನೆ;
ಏಳ್ವೆವೇ=ಬೇಟೆಗೆ ಹೊರಡೋಣವೇ;
ನಡೆಯಿಮ್ ಎನಲು=ನಡೆಯಿರಿ ಎಂದು ಆ ಬೇಡನು ರಾಜ ಹರಿಶ್ಚಂದ್ರನಿಗೆ ಹೇಳಲು;
ಕಡುಮುಳಿದು ರಥವನ್ ಉರವಣಿಸಿ ನೂಂಕುವ ಭೂಮಿಯೊಡೆಯಂಗೆ=ಹಂದಿಯಿಂದ ಬೇಡಪಡೆಗೆ ಆದ ಸಾವುನೋವನ್ನು ಕೇಳಿ ಕಡುಕೋಪಗೊಂಡು ತೇರನ್ನು ವೇಗವಾಗಿ ನಡೆಸಲು ಅಣಿಯಾದ ರಾಜ ಹರಿಶ್ಚಂದ್ರನಿಗೆ;
ನಾನಾ ಬೇಡವಡೆ ಒಡೆಯರ್ ಎಯ್ದೆ ಭಾಷೆಯಮ್ ಕೊಟ್ಟು=ಕಾಡಿನ ವಾಸಿಗಳಾದ ಬೇಡಪಡೆಯ ಬೇರೆ ಬೇರೆ ಗುಂಪಿನವರು ತಾವು ರಾಜನ ಜತೆಯಲ್ಲಿಯೇ ಬೇಟೆಗೆ ಬಂದು ಸಾಹಸದಿಂದ ಮುನ್ನುಗ್ಗುತ್ತೇವೆ ಎಂದು ಮಾತುಕೊಟ್ಟು; ರೊಪ್ಪ=ಪ್ರಾಣಿಗಳನ್ನು ಕೂಡಿಹಾಕುವ ನೆಲೆ/ದೊಡ್ಡಿ/ಪ್ರಾಣಿಗಳ ಅಡಗುತಾಣ;
ರೊಪ್ಪಮಮ್ ಮಲಗಿ ದಾಡೆಗಡಿವ ಎಕ್ಕಲನನು ಕಂಡು=ಗವಿಯಂತಿರುವ ಬಿಲದೊಳಗೆ ಮಲಗಿಕೊಂಡು ಕೋರೆಹಲ್ಲುಗಳನ್ನು ಮಸೆಯುತ್ತಿರುವ ಹಂದಿಯನ್ನು ಕಂಡರು; ಮಸೆದ ದಾಡೆಯ ಕುಡಿಗಳಿಂದ ಕಿಡಿ ಸುರಿಯೆ=ಮಸೆಯುತ್ತಿರುವ ದಾಡೆಯ ಅಂಚಿನಿಂದ ಬೆಂಕಿಯ ಕಣಗಳಂತಹ ಕಿಡಿ ಹೊರಹೊಮ್ಮುತ್ತಿರಲು;
ಘೂರ್ಮಿಸುವ ಮೂಗಿನಿಂದ ಕರ್ಬೊಗೆ ನೆಗೆಯೆ=ಗೊರಗೊರಗುಟ್ಟುತ್ತಿರುವ ಮೂಗಿನಿಂದ ಕಪ್ಪನೆಯ ಹೊಗೆಯು ಹಬ್ಬುತ್ತಿರಲು;
ಮುನಿದು ದಿಟ್ಟಿಸುವ ಕೆಂಗಣ್ಣ ಕಡೆಯಿಂದ ದಳ್ಳುರಿ ಸೂಸೆ=ಹಂದಿಯು ತನ್ನತ್ತ ಬರುತ್ತಿರುವ ಬೇಡಪಡೆಯನ್ನು ಕಂಡು ಆಕ್ರೋಶಗೊಂಡು ನೆಟ್ಟನೆಯ ನೋಟದಿಂದ ನೋಡಲು ತೊಡಗಿದಾಗ, ಹಂದಿಯ ಕೆಂಪಾದ ಕಣ್ಣುಗಳಿಂದ ದಗದಗನೆ ಉರಿಯುತ್ತಿರುವ ಬೆಂಕಿಯ ಜ್ವಾಲೆಯು ಹಬ್ಬುತ್ತಿರಲು; ಹಂದಿಯ ಕೋರೆಹಲ್ಲುಗಳಿಂದ ಬೆಂಕಿಯ ಕಿಡಿ ಹೊರಹೊಮ್ಮುತ್ತಿರುವುದು; ಮೂಗಿನಿಂದ ಕಪ್ಪನೆಯ ಹೊಗೆ ಹರಡುತ್ತಿರುವುದು; ಕಣ್ಣುಗಳಿಂದ ದಗದಗನೆ ಹತ್ತಿ ಉರಿಯುತ್ತಿರುವ ಬೆಂಕಿಯ ಜ್ವಾಲೆಯು ರೂಪಕದ ತಿರುಳಿನಲ್ಲಿ ಮಾಯಾ ವರಾಹದ ಆಕ್ರೋಶ ಮತ್ತು ಶಕ್ತಿಯನ್ನು ಸೂಚಿಸುತ್ತವೆ;
ಬಲಿದ ಕೊರಳ್=ಬಲವುಳ್ಳ ದೊಡ್ಡ ಕೊರಳು;
ಒಲೆದ ಮುಸುಡು=ಅತ್ತಿತ್ತ ತೂಗಾಡುತ್ತಿರುವ ಉದ್ದನೆಯ ಮೂತಿ;
ಕುಸಿದ ತಲೆ=ಮುನ್ನುಗ್ಗಲು ಹೊಂಚುಹಾಕುತ್ತ ಬಗ್ಗಿರುವ ತಲೆ;
ನೆಗೆದ ಬೆನ್=ಎತ್ತರಿಸಿದ ಬೆನ್ನು;
ನಟ್ಟ ರೋಮಾಳಿ=ಮಯ್ ಮೇಲೆ ನೆಟ್ಟಗೆ ನಿಂತಿರುವ ಉದ್ದನೆಯ ರೋಮಗಳು; ಮಿಳ್ಳಿಸುವ ಬಾಲಮ್=ಅತ್ತಿತ್ತ ಅಲ್ಲಾಡುತ್ತಿರುವ ಬಾಲ;
ರೌದ್ರ ಕೋಪಮಮ್ ಬೀರಿ ಗರ್ಜಿಸಿ=ಬಯಂಕರವಾದ ಕೋಪವನ್ನು ಕಾರಿ ಅಬ್ಬರಿಸುತ್ತ;
ಬೀದಿವರಿದು ಲುಬ್ಧಕರನು ತೊತ್ತಳದುಳಿದು ಕೊಂದು ಕೂಗಿಡಿಸಿತ್ತು=ಅತ್ತಿತ್ತ ರಬಸದಿಂದ ಅಡ್ಡಾಡಿ ಬೇಡರನ್ನು ನುಗ್ಗುನುರಿಯಾಗುವಂತೆ ತಿವಿದು ತುಳಿದು ಕೊಂದು ಹಾಕಿತು;
ಇದ್ದ ಬೇಟರನ್ ಎಯ್ದೆ ಕೆಡಹಿದಡೆ=ಅಲ್ಲಿದ್ದ ಬೇಟೆಗಾರರನ್ನು ಸಂಪೂರ್ಣವಾಗಿ ಕೆಳಕ್ಕೆ ಉರುಳಿಸಿದಾಗ;
ರಥದ ಮೇಲಿದ್ದು, ಕೋಪಾಟೋಪದಿಂದ ಕರತಳವ ಮಾರುದ್ದಿ=ತೇರಿನಲ್ಲಿ ಕುಳಿತಿದ್ದ ರಾಜ ಹರಿಶ್ಚಂದ್ರನು ತನ್ನ ಕಣ್ಣ ಮುಂದೆಯೇ ಹಂದಿಯ ಆಕ್ರಮಣದಿಂದ ಬೇಡೆ ಪಡೆ ನಾಶವಾಗುತ್ತಿರುವುದನ್ನು ಕಂಡು, ತೀವ್ರವಾದ ಕೋಪೋದ್ರೇಕದಿಂದ ತನ್ನ ಅಂಗಯ್ ಗಳನ್ನು ಪರಸ್ಪರ ಉಜ್ಜಿಕೊಂಡು;
ಕೋದಂಡಮಮ್ ಸೆಳೆದು=ಬಿಲ್ಲನ್ನು ಜಗ್ಗಿಸುತ್ತ;
ಶರಮೂಡಿಗೆಯ ಮಡಲಿರಿದು=ಬತ್ತಳಿಕೆಯಲ್ಲಿರುವ ಬಾಣಗಳನ್ನು ಒಗ್ಗೂಡಿಸಿಕೊಂಡು;
ಕೈಹೊಡೆಯನು ತಿದ್ದಿ=ಬಿಲ್ಲುಗಾರನು ಕಯ್ಗಳಿಗೆ ಹಾಕಿಕೊಳ್ಳುವ ತೊಗಲಿನ ಪಟ್ಟಿಯನ್ನು ಸರಿಪಡಿಸಿಕೊಂಡು; ನಾರಿ=ಬಿಲ್ಲಿಗೆ ಕಟ್ಟಿರುವ ಹುರಿ;
ನಾರಿಯ ನೀವಿ ಮಿಡಿದು=ಬಿಲ್ಲಿಗೆ ಕಟ್ಟಿರುವ ಹುರಿಯನ್ನು ಕಯ್ ಬೆರಳಿನಿಂದ ಒಮ್ಮೆ ಮೆಲ್ಲನೆ ಸವರಿ, ಉಗುರ ಮೊನೆಯಿಂದ ಮೀಟಿ;
ಬಾಗಿದ ಕೊಪ್ಪಿನ ಇದ್ದೆಸೆಯನ್ ಆರಯ್ದು=ಬಾಗಿರುವ ಬಿಲ್ಲಿನ ಎರಡು ತುದಿಗಳಲ್ಲಿ ಕಟ್ಟಿರುವ ಹುರಿಯನ್ನು ಮತ್ತೊಮ್ಮೆ ನೋಡಿಕೊಂಡು;
ಮೃತ್ಯುದೇವತೆಗೆ ನೆರೆ ಬಿದ್ದನ್ ಇಕ್ಕುವೆನ್ ಎಂದು ಭೂವಲ್ಲಭನ್ ನುಡಿಯೆ=ಸಾವಿನ ದೇವತೆಯು ತಣಿಯುವಂತೆ ದೊಡ್ಡ ಊಟವನ್ನು ಬಡಿಸುತ್ತೇನೆ ಎಂದು ರಾಜ ಹರಿಶ್ಚಂದ್ರನು ನುಡಿಯಲು;
ದಿಗುಪಾಲರ್ ಅಳವಳಿದರು=ದಿಕ್ಕುಗಳನ್ನು ಕಾಯುವ ದೇವತೆಗಳು ಮುಂದೆ ಏನಾಗುವುದೋ ಎಂಬ ಅಂಜಿಕೆಯಿಂದ ಶಕ್ತಿಗುಂದಿದರು; ಗರಳ ಕೊರಳವನ್=ಶಿವ; ಅರಳ ಸರಳವನ್=ಮನ್ಮತ;
ಗರಳ ಕೊರಳವನ್ ಅರಳ ಸರಳಂಗೆ ಮುನಿವಂತೆ=ಶಿವನು ಮನ್ಮತನಿಗೆ ಕೋಪಗೊಳ್ಳುವಂತೆ;
ಇರುಳ ತಿರುಳಿನ ಹೊರಳಿಗೆ ಆ ತರಣಿ ಕೆರಳ್ವಂತೆ=ರಾತ್ರಿ ದಟ್ಟವಾದ ಕತ್ತಲ ರಾಶಿಗೆ ಆ ಸೂರ್ಯನು ಕೆರಳುವಂತೆ;
ಸರಳ ತೆರಳಿಕೆಗೆ ಕರುಳ ಸುರುಳಿಯೊಳು ಹೊರಳುತ್ತ ಬೀಳುತ್ತಲು ಮರಳಿತು=ಹರಿಶ್ಚಂದ್ರನು ಒಂದೇ ಸಮನೆ ಬಿಟ್ಟ ಬಾಣಗಳ ಪೆಟ್ಟಿಗೆ ಸಿಲುಕಿ, ಹೊರಬಂದ ಒಂದಕ್ಕೊಂದು ಸುತ್ತಿಕೊಂಡಿರುವ ಕರುಳ ಗಂಟಿನೊಡನೆ ಹೊರಳುತ್ತ ಬೀಳುತ್ತ ಹಂದಿಯು ಹಿಮ್ಮೆಟ್ಟತೊಡಗಿತು;
ಸರಳ್ ಉರ್ಚೆ… ಹುರುಳ್ ಅಳಿದುದು=ಬಾಣಗಳು ಮಯ್ ತುಂಬಾ ನಾಟಿಕೊಳ್ಳುತ್ತಿದ್ದಂತೆಯೇ ಮಾಯಾ ವರಾಹನ ಶಕ್ತಿ ಉಡುಗಿತು;
ಉರವೊಡೆದು… ನರಳುತ್ತ ನರಳುತ್ತ=ಎದೆಯೊಡೆದು ನರಳುತ್ತ ನರಳುತ್ತ;
ತೊರಳೆ ಅಡಸಲು=ಮಯ್ ಒಳಗಿನ ತೊಳ್ಳೆ ಬಿಗಿಯಾಗಿ ಒತ್ತಿ ಹಾನಿಗೊಳ್ಳಲು;
ಮೂಗನ್ ಅರಳಿಸಿ=ಏದುಸಿರಿನ ಕಾರಣದಿಂದ ಮೂಗಿನ ಹೊಳ್ಳೆಗಳನ್ನು ಅಗಲಿಸುತ್ತ;
ಎಚ್ಚ ಅಂಬ ಹೊತ್ತು=ಮಯ್ ಮೇಲಿ ನಾಟಿಕೊಂಡಿರುವ ಬಾಣಗಳನ್ನು ಹೊತ್ತುಕೊಂಡು;
ಉರುಳ್ವ ಕಂಬನಿಯಿಂದ=ಕಣ್ಣೀರನ್ನು ಹಾಕುತ್ತ;
ತರಳ ಚಿತ್ತದ ಹಂದಿ ಮರಳಿ ಕಾನನಕೆ ಎಯ್ದಿತು=ಜೀವಬಯದಿಂದ ನಡುಗುತ್ತಿರುವ ಮಾಯಾ ಹಂದಿಯು ತನ್ನನ್ನು ರೂಪಿಸಿ ಕಳುಹಿಸಿದ್ದ ವಿಶ್ವಾಮಿತ್ರ ಮುನಿಯು ಇದ್ದ ಕಾಡಿಗೆ ಮರಳಿತು.
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು